ಮಕ್ಕಳು ಕುಟುಂಬದ- ಸಮಾಜದ ಆಶಾಕಿರಣಗಳು. ಅವರು ವಿದ್ಯಾವಂತರಾಗಲಿ, ಬುದ್ಧಿವಂತರಾಗಲಿ, ಪ್ರತಿಭಾವಂತರಾಗಲಿ, ಶ್ರೀಮಂತರಾಗಲಿ, ಚೆನ್ನಾಗಿ ಬದುಕಿ ಬಾಳಲಿ, ಕೀರ್ತಿ ತರಲಿ, ಎಂದು ಎಲ್ಲಾ ತಂದೆ ತಾಯಿಗಳು ಬಯಸುತ್ತಾರೆ.
ಎಲ್ಲ ಮಕ್ಕಳ ವಿಕಾಸ ಒಂದೇ ಮಟ್ಟದಲ್ಲಿರುವುದಿಲ್ಲ. ಕೆಲವರು ಶಾಲಾ ಕಾಲೇಜಿನಲ್ಲಿ ಟಾಪರ್ ಗಳಾದರೆ ಕೆಲವರು ಕೆಲವರು ಫೇಲ್ ಆಗುತ್ತಾರೆ, ಕೆಲವರು ವ್ಯವಹಾರಿಕ ಜಾಣರಾದರೆ, ಕೆಲವರು ದಡ್ಡರಾಗಿರುತ್ತಾರೆ. ಕೆಲವರು ನೀತಿವಂತ ರಾದರೆ, ಕೆಲವರು ಅಡ್ಡ ಮಾರ್ಗಗಳಾಗಿ ದುಶ್ಚಟಗಳಿಗೆ ದಾಸರಾಗುತ್ತಾರೆ. ಕೆಲವರು ಸಮಾಜಮುಖಿಗಳಾದರೆ, ಕೆಲವರು ಸಮಾಜ ವಿರೋಧಿಗಳಾಗುತ್ತಾರೆ. ಏಕೆ ಹೀಗೆ?
ಮಕ್ಕಳ ಬೆಳವಣಿಗೆ ನಿಯಂತ್ರಿಸುವ ಅಂಶಗಳು:
ಮಕ್ಕಳದು ಪಂಚಮುಖಿ ಬೆಳವಣಿಗೆ. ಶಾರೀರಿಕ, ಮಾನಸಿಕ, ಬೌದ್ಧಿಕ, ಸಾಮಾಜಿಕ ಮತ್ತು ನೈತಿಕ ಬೆಳವಣಿಗೆ. ಈ ಬೆಳವಣಿಗೆಯನ್ನು ನಿರ್ದೇಶಿಸಿ ನಿಯಂತ್ರಿಸುವ ಅಂಶಗಳು ಹಲವಾರು ಇವೆ.
ಬುದ್ಧಿವಂತಿಕೆ:
ಶಾಲಾ ಪಠ್ಯ ಪುಸ್ತಕಗಳಲ್ಲಿರುವ ಮಾಹಿತಿಯನ್ನು ಗ್ರಹಿಸಿಕೊಂಡು ಪರೀಕ್ಷೆಗಳಲ್ಲಿ ಚೆನ್ನಾಗಿ ಬರೆದು, ಅತಿಹೆಚ್ಚು ಅಂಕಗಳನ್ನು ಪಡೆಯುವುದೇ ಬುದ್ಧಿವಂತಿಕೆ ಎಂದು ತಿಳಿಯುವ ಪಾಲಕರಿದ್ದಾರೆ ಶಿಕ್ಷಕರಿದ್ದಾರೆ. ಟಾಪರ್ ನನ್ನು ಬುದ್ಧಿವಂತನೆಂದೂ, ಫೇಲಾದವನನ್ನು ದಡ್ಡ ನೆಂದು ಕರೆಯುವ ಜನರಿದ್ದಾರೆ. ಹೆಚ್ಚು ಅಂಕ ಗಳಿಸುವುದೇ ಬುದ್ಧಿವಂತಿಕೆ ಖಂಡಿತ ಅಲ್ಲ.
* ಉತ್ತಮ ಸಂವಹನ ಸಾಮರ್ಥ್ಯ: ಮಾತೃಭಾಷೆ ಅಥವಾ ಯಾವುದಾದರೊಂದು ಭಾಷೆಯಲ್ಲಿ ಚೆನ್ನಾಗಿ ಮಾತನಾಡುವ ಬರೆಯುವ ಸಾಮರ್ಥ್ಯ. ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಸ್ಪಷ್ಟವಾಗಿ ಸ್ಫುಟವಾಗಿ ವ್ಯಕ್ತಪಡಿಸುವ ಕೌಶಲ.
* ಉತ್ತಮ ಆಲೋಚನೆ -ವಿಚಾರ ಮಾಡುವ ಶಕ್ತಿ: ನೋಡಿದ್ದನ್ನು, ಓದಿದ್ದನ್ನು, ಕೇಳಿದ್ದನ್ನು, ಅನುಭವಿಸಿದ್ದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು ಅರ್ಥಮಾಡಿಕೊಂಡು ನಿಜವೇ/ ಸುಳ್ಳೇ, ಸರಿಯೇ/ ತಪ್ಪೇ, ಸಾಧ್ಯವೇ/ ಅಸಾಧ್ಯವೇ, ಅನುಕೂಲವೇ/ ಅನಾನುಕುಲವೇ ಎಂದು ವಿಚಾರ ಮಾಡಬೇಕು, ವಾಸ್ತವಿಕತೆಯೇ/ ಕಲ್ಪನೆಯೇ ತಿಳಿಯಬೇಕು. ಬೇಕು/ ಬೇಡಗಳನ್ನು ಸರಿಯಾಗಿ ನಿರ್ಧರಿಸಬೇಕು.
* ಸೃಜನಶೀಲತೆ: ಹೊಸರೀತಿಯಲ್ಲಿ ಹಳೆಯ ಜಾಡನ್ನು ಬಿಟ್ಟು, ಸಾಮಾನ್ಯರಿಗಿಂತ ಭಿನ್ನವಾಗಿ ಚಿಂತನೆ ಮಾಡಿ ಹೊಸತನ್ನು ಸೃಷ್ಟಿಸುವುದು, ಸಮಸ್ಯೆಗಳಿಗೆ ನವ-ನವೀನ ಪರಿಹಾರಗಳನ್ನು ಹುಡುಕುವುದು. ವಿಷಯಗಳ, ವಸ್ತುಗಳ ಆವಿಷ್ಕಾರ ಮಾಡುವುದು.
* ವೇಗದ ಕಲಿಕೆ, ಉತ್ತಮ ನೆನಪು.
* ಲೆಕ್ಕಾಚಾರ, ಉತ್ತಮ ವ್ಯವಹಾರಿಕ ಜ್ಞಾನ
* ಮಾಹಿತಿಗಳ ಚಿಂತನ - ಮಂಥನ ಮಾಡಿ, ತನ್ನ ಅರಿವು, ಜ್ಞಾನವನ್ನು ವಿಸ್ತರಿಸುವುದು.
* ಕಾರ್ಯ-ಕಾರಣ ಸಂಬಂಧಗಳನ್ನು ಅರಿಯುವುದು.
* ಕ್ಷೇತ್ರ ಜ್ಞಾನ -ದಿಕ್ಕು -ದಾರಿಗಳನ್ನು ತಿಳಿಯುವುದು.
ಭಾವನಾತ್ಮಕ ಬೆಳವಣಿಗೆ:
ಆಂತರಿಕ ಮತ್ತು ಹೊರಗಿನ ಪ್ರಚೋದನೆಗಳಿಗೆ ಸಹಜವಾಗಿ ಸೃಷ್ಟಿಯಾಗುವ ಭಾವನೆಗಳನ್ನು ಹಿತಮಿತವಾಗಿ ತನಗೆ ಮತ್ತು ಇತರರಿಗೆ ತೊಂದರೆ ಆಗದ ರೀತಿಯಲ್ಲಿ ಪ್ರಕಟಿಸುವ ಕೌಶಲವನ್ನು ಮಕ್ಕಳು ಕಲಿಯಬೇಕು. ಅವು ಸಂತೋಷ- ದುಃಖ ವಾಗಬಹುದು, ಪ್ರೀತಿ- ದ್ವೇಷ ವಾಗಬಹುದು, ಭಯ- ಕೋಪ ವಾಗಬಹುದು, ಮತ್ಸರ- ನಾಚಿಕೆಯಾಗಬಹುದು, ಸಮಯ- ಸಂದರ್ಭ- ಸನ್ನಿವೇಶಕ್ಕೆ ಸೂಕ್ತರೀತಿಯಲ್ಲಿ ಭಾವ ಪ್ರಕಟಣೆ ಮಾಡುವುದನ್ನು ತಂದೆತಾಯಿಗಳು, ಇತರರು ಮಕ್ಕಳಿಗೆ ಕಲಿಸಬೇಕು. ಯಾವುದೇ ರೀತಿಯ ಭಾವೋದ್ವೇಗವನ್ನು ಪ್ರಕಟಿಸದಂತೆ ತರಪೇತಿ ನೀಡಬೇಕು. ಮಕ್ಕಳಲ್ಲೂ ಈಗ ಕೋಪ ರೋಷ ವೇಷಗಳು, ಹಿಂಸಾಚಾರ ಕಂಡುಬರುತ್ತಿದೆ. ಅನಗತ್ಯ ಭಯದಿಂದ ಅವರ ನಿರ್ವಹಣಾ ಸಾಮರ್ಥ್ಯ (ಉದಾಹರಣೆಗೆ ಪರೀಕ್ಷಾ ಸಮಯದಲ್ಲಿ/ ಸ್ಪರ್ಧೆ ಮಾಡುವಾಗ) ಕಡಿಮೆಯಾಗಬಹುದು ದುಃಖದಿಂದ - ಹತಾಶೆಯಿಂದ ಮಕ್ಕಳು ಆತ್ಮಹತ್ಯೆಗೆ ಮುಂದಾಗುತ್ತಿದ್ದಾರೆ. ಇದನ್ನು ತಪ್ಪಿಸುವ ಕೆಲಸವಾಗಬೇಕು.
ಇದನ್ನೂ ಓದಿ: ಜ್ಞಾಪಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಹೇಗೆ
ಸಾಮಾಜಿಕ ಬೆಳವಣಿಗೆ:
ಬೆಳೆಯುವ ಮಕ್ಕಳು ಮನೆಯೊಳಗೆ - ಹೊರಗೆ ಶಾಲೆಯೊಳಗೆ, ಮುಂದೆ ಸಮಾಜದಲ್ಲಿ ಇತರರೊಡನೆ ಸಹಕರಿಸಿ ಹೊಂದಿಕೊಂಡು ಬದುಕುವುದನ್ನು ಕಲಿಯಬೇಕು. ಕುಟುಂಬದಲ್ಲಿ, ಸಮಾಜದಲ್ಲಿ ತನ್ನ ಹಕ್ಕು ಬಾದ್ಯತೆಗಳೇನೆಂದು ತಿಳಿಯಬೇಕು. ಆಹಾರವಾಗಲಿ ವಸ್ತ್ರ - ವಸ್ತುಗಳನ್ನಾಗಲೀ, ಅನುಕೂಲತೆಗಳನ್ನಾಗಲೀ, ಭಾವನೆಗಳನ್ನಾಗಲೀ, ಇತರರೊಡನೆ ಹಂಚಿಕೊಳ್ಳಬೇಕು, ಸ್ವಾರ್ಥದ ಜೊತೆಜೊತೆಗೆ ಪರ ಹಿತವನ್ನು ಬಿಡಬಾರದು, ಕಷ್ಟ-ನಷ್ಟಗಳಿಗೆ ತುತ್ತಾದವರಿಗೆ ಸಹಾಯ ಸಹಾನುಭೂತಿ ತೋರಿಸಬೇಕು. ಸಮಾಜಮುಖಿಯಾಗಿ ಬದುಕಲು ಕಲಿಯಬೇಕು.
ನೈತಿಕ ಬೆಳವಣಿಗೆ:
ನೀತಿ-ನಿಯಮಗಳು ಯಾವುದೇ ಸಭ್ಯ ಸಮಾಜದ ಅಂಗಗಳು. ನೀತಿ-ನಿಯಮಗಳ ಪಾಲನೆಯಿಂದ ವ್ಯಕ್ತಿಗೂ ಕ್ಷೇಮ ಮತ್ತು ಸಮಾಜಕ್ಕೂ ಕ್ಷೇಮ. ಬಲಾಢ್ಯರು, ಬುದ್ಧಿವಂತರು, ಹೆಚ್ಚು ಸಂಪನ್ಮೂಲ ಉಳ್ಳವರು ಇತರರನ್ನು, ಮುಖ್ಯವಾಗಿ ದುರ್ಬಲರನ್ನು, ವ್ಯವಹಾರಜ್ಞಾನ ತಿಳುವಳಿಕೆ ಇಲ್ಲದವರನ್ನ, ಬಡವರನ್ನು ಶೋಷಿಸಬಾರದು. ಸುಳ್ಳು, ಕಪಟ, ಮೋಸ ವಂಚನೆಗಳನ್ನು ಮಾಡಬಾರದು. ಇನ್ನೊಬ್ಬರ ವಸ್ತು, ಹಣವನ್ನು ಅಪಹರಿಸ ಬಾರದು. ಪ್ರಮಾಣಿಕತೆ, ಪರಹಿತ, ಸೇವೆ, ಸಹಕಾರ, ಇತ್ಯಾದಿ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಯಾವುದೇ ಬಗೆಯ ಅಪರಾಧ ಮಾಡಬಾರದು. ಅಪರಾಧ ಮಾಡಲು ಪ್ರೋತ್ಸಾಹ ನೀಡಬಾರದು. ಮಕ್ಕಳ ವಿಕಾಸ ಈ ಐದುವಿಭಾಗದಲ್ಲಿ ಆಗುವಂತೆ ನೋಡಿಕೊಳ್ಳಬೇಕು.
ಡಾ. ಸಿ.ಆರ್. ಚಂದ್ರಶೇಖರ್, ಮನೋವೈದ್ಯ
drcrchandrashekhar@gmail.com
+919845605615
Advertisement