ಆರ್ಥಿಕತೆ ಸಹಜ ಸ್ಥಿತಿಗೆ ಮರಳಿತೆ? ಒಂದು ವಿಶ್ಲೇಷಣೆ!

ಹಣಕ್ಲಾಸು-267-ರಂಗಸ್ವಾಮಿ ಮೂಕನಹಳ್ಳಿ
ಆರ್ಥಿಕತೆ
ಆರ್ಥಿಕತೆ

ಲಾಕ್ ಡೌನ್ ಸಡಿಲ ಆಗುತ್ತಿದ್ದಂತೆ ಸಮಾಜದಲ್ಲಿ ಮತ್ತೆ ವಾಣಿಜ್ಯ ಚಟುವಟಿಕೆಗಳು ಬಹಳಷ್ಟು ಹೆಚ್ಚಾಗಿವೆ ಎನ್ನುವ ವರದಿಯನ್ನ ನಾವು ಕೇಳುತ್ತಿದ್ದೇವೆ. ನಮ್ಮದು ಅತ್ಯಂತ ಜನ ನಿಭಿಡ ದೇಶ. ನಾವು ಹೆಚ್ಚು ಕಾಲ ನಮ್ಮ ಪರಿಸ್ಥಿತಿಯನ್ನ ಹಳಿಯುತ್ತಾ ಕೂರುವ ಸ್ಥಿತಿಯಲಿಲ್ಲ. 

ಕೊರೋನದಿಂದ ಜೀವಭಯ ಎಷ್ಟಿದೆಯೋ ಅದರಷ್ಟೇ ಅಥವಾ ಒಂದಷ್ಟು ಹೆಚ್ಚು ಅಂಶ ಬದುಕನ್ನ ಕಟ್ಟಿಕೊಳ್ಳದಿದ್ದರೆ ಮುಂದೇನು? ಎನ್ನುವ ಭಯ ಕೂಡ ಕಾಡುತ್ತಿದೆ. ಬಹಳಷ್ಟು ಜನರಿಗೆ ಕೊರೋನದಿಂದ ಸಾಯದಿದ್ದರೆ ಆರ್ಥಿಕ ಕಾರಣಗಳಿಂದ ಸಾಯುವುದು ಖಂಡಿತ ಎನ್ನುವಂತಾಗಿದೆ. ಇಂದಿನ ಕಾಲಘಟ್ಟದಲ್ಲಿ ಕೇವಲ ಊಟ, ಬಟ್ಟೆ ಇದ್ದರೆ ಅಲ್ಲಿಗೆ ಸಾಕು ಎನ್ನುವಂತಿಲ್ಲ. ಹಿಂದಿನ ದಿನಗಳಲ್ಲಿ ಯಾವುದನ್ನ ಐಷಾರಾಮಿ ಎಂದು ಕರೆಯಲಾಗುತ್ತಿತ್ತು ಅವುಗಳು ಇಂದಿನ ದಿನದಲ್ಲಿ ಅಗತ್ಯ ವಸ್ತು ಎನ್ನಿಸಿಕೊಂಡಿವೆ. ಹೀಗಾಗಿ ಬೇಕೋ ಬೇಡವೋ ಲಾಕ್ ಡೌನ್ ಮುಗಿಯುತ್ತಿದ್ದಂತೆ ಎಲ್ಲಾ ರೀತಿಯ ವಾಣಿಜ್ಯ ಚಟುವಟಿಕೆಗಳು ಹೊಸ ಹುರುಪಿನಿಂದ ಶುರವಾಗಿರುವುದು ಸತ್ಯ. ಅದಕ್ಕೆ ಪೂರಕವಾಗುವಂತಹ ಹಲವಾರು ನಿದರ್ಶನಗಳನ್ನ ನಾವು ನೋಡಬಹುದು.

  1. ಎಫ್ಎಂಸಿಜಿ ಎಂದರೆ, ಫಾಸ್ಟ್ ಮೂವಿಂಗ್ ಕನ್ಸೂಮರ್ ಗೂಡ್ಸ್ ಎಂದರ್ಥ. ನಿತ್ಯ ಬಳಕೆಯ ಎಲ್ಲಾ ವಸ್ತುಗಳನ್ನ ನಾವು ಇದರಡಿಯಲ್ಲಿ ಸೇರಿಸಬಹುದು. ಮೂರನೇ ತ್ರೈಮಾಸಿಕದ ಆರಂಭದಲ್ಲಿ ಇಂತಹ ಪದಾರ್ಥಗಳ ಮಾರಾಟದಲ್ಲಿ 17 ಪ್ರತಿಶತ ಏರಿಕೆ ಕಂಡಿದೆ ಎನ್ನುವುದು ನಮ್ಮ ಸಮಾಜ ಎರಡನೇ ಲಾಕ್ ಡೌನ್ ನಂತರ ಮತ್ತೆ ಚೇತರಿಕೆಯ ಹಾದಿಯಲ್ಲಿದೆ ಎನ್ನುವುದನ್ನ ಸ್ಪಷ್ಟ ಪಡಿಸುತ್ತಿದೆ.
  2. ಹೈವೇ ಗಳಲ್ಲಿ ಹೆಚ್ಚಾದ ವಾಹನ ಸಂದಣಿ: ಗಮನಿಸಿ ಲಾಕ್ ಡೌನ್ ನಂತರ ಹೈವೇ ಗಳಲ್ಲಿ ಪ್ರಯಾಣಿಸುವ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಹೈವೇ ಗಳಲ್ಲಿ ಟೋಲ್ ಸಂಗ್ರಹಣೆ ಮಾಡಲು ಒಟ್ಟು 780 ಟೋಲ್ ಬೂತ್ಗಳಿವೆ. ನ್ಯಾಷನಲ್ ಹೈವೇ ಅಥಾರಿಟಿ ಆಫ್ ಇಂಡಿಯಾ ನೀಡುವ ಅಂಕಿ-ಅಂಶಗಳ ಪ್ರಕಾರ ಪಾಂಡೆಮಿಕ್ ಬರುವುದಕ್ಕೆ ಮುಂಚೆ ದೇಶದಲ್ಲಿ ಅತಿ ಹೆಚ್ಚು ಒಂದು ದಿನದ ಟೋಲ್ ಸಂಗ್ರಹಣೆ 107 ಕೋಟಿ ರೂಪಾಯಿಯಾಗಿತ್ತು. ಜೂನ್ 2021ರಲ್ಲಿ ಇದು 97 ಕೋಟಿಯಿದ್ದು , ಜುಲೈ 1, 2021 ರಂದು ಇದು 103 ಕೋಟಿ ರೂಪಾಯಿಯನ್ನ ಸಂಗ್ರಹಣೆ ಮಾಡುವಲ್ಲಿ ಯಶಸ್ವಿಯಾಗಿತ್ತು. ಅಂದರೆ ಗಮನಿಸಿ ನಮ್ಮ ದಿನದ ಟೋಲ್ ಸಂಗ್ರಹಣೆ ಸಾಮಾನ್ಯ ದಿನಗಳ ಸಂಗ್ರಹಣೆಯ ಮಟ್ಟಕ್ಕೆ ಬಂದಿದೆ. ವಾಣಿಜ್ಯ ವಾಹನಗಳ ಜೊತೆ ಜೊತೆಗೆ ಪ್ರವಾಸಿ, ಮತ್ತು ಸಾಮಾನ್ಯ ವಾಹನಗಳ ದಟ್ಟಣೆ ಮತ್ತೆ ಶುರುವಾಗಿರುವುದು ಸಮಾಜ ಮರಳಿ ಹಳಿಗೆ ಬರುತ್ತಿದ್ದೆ ಎನ್ನುವುದರ ಸಂಕೇತ. ಜೂನ್ ನಲ್ಲಿ ಒಟ್ಟು ಎರಡೂವರೆ ಸಾವಿರ ಕೋಟಿ ರೂಪಾಯಿ ಇಲ್ಲಿ ಸಂಗ್ರಹವಾಗಿದ್ದು, ಮೇ ತಿಂಗಳಿಗೆ ಹೋಲಿಸಿದರೆ ಇದರಲ್ಲಿ 21 ಪ್ರತಿಶತ ಏರಿಕೆಯಾಗಿದೆ. ಇದು ಜುಲೈ ತಿಂಗಳಲ್ಲಿ ಇನ್ನಷ್ಟು ಹೆಚ್ಚಾಗುವ ಎಲ್ಲಾ ಲಕ್ಷಣಗಳು ಇವೆ.
  3. ವಾಣಿಜ್ಯ ಸಾಗಾಣಿಕೆಯಲ್ಲಿ ಹೆಚ್ಚಳ: ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ವಸ್ತುಗಳ ಸಾಗಾಣಿಕೆ ಮಾಡಲು ಈ-ವೇ ಬಿಲ್ಗಳ ಅವಶ್ಯಕತೆ ಇರುತ್ತದೆ. ಲಾಕ್ ಡೌನ್ ಸಮಯದಲ್ಲಿ ಅತ್ಯವಶ್ಯಕ ವಸ್ತುಗಳನ್ನ ಬಿಟ್ಟು ಬೇರೆ ವಸ್ತುಗಳನ್ನ ಸಾಗಾಣಿಕೆ ಮಾಡಲು ನಿರ್ಬಂಧವನ್ನ ಹೇರಲಾಗಿತ್ತು. ಲಾಕ್ ಡೌನ್ ನಂತರ ಈ ರೀತಿಯ ಸಾಗಾಣಿಕೆಯಲ್ಲಿ ಗಣನೀಯವಾಗಿ ಏರಿಕೆ ಕಂಡಿದೆ. ಸಾಮಾನ್ಯ ದಿನಗಳ 67 ಪ್ರತಿಶತ ಸಾಗಾಣಿಕೆಯನ್ನ ಜುಲೈ ತಿಂಗಳ ಮೊದಲ ವಾರದಲ್ಲಿ ನಾವು ದಾಖಲಿಸುತ್ತಿದ್ದೇವೆ.
  4.  ವಾಹನ ನೋಂದಾವಣೆ ಕೂಡ ಸಹಜ ಸ್ಥಿತಿಯತ್ತ: ಜುಲೈ ತಿಂಗಳ ಎರಡು ದಿನದಲ್ಲಿ ವಾಹನ ನೊಂದಾವಣೆ ಸಾಮಾನ್ಯ ಸ್ಥಿತಿಯಲ್ಲಿನ 33 ಪ್ರತಿಶತವಾಗಿದೆ ಎಂದರೆ ಆಟೋಮೊಬೈಲ್ ಕ್ಷೇತ್ರದಲ್ಲಿ ಯಾವ ರೀತಿಯಲ್ಲಿ ವ್ಯಾಪಾರ ಸಾಗುತ್ತಿರಬಹುದು ಎನ್ನುವುದನ್ನ ಸೂಚಿಸುತ್ತದೆ. ಸಮಾಜದಲ್ಲಿ ವಾಹನ ಕೊಳ್ಳುವವರ ಸಂಖ್ಯೆ ಕೂಡ ಪಾಂಡೆಮಿಕ್ ಮುಂಚಿನ ಸಹಜತೆಯತ್ತ ದಾಪುಗಾಲಿಡುತ್ತಿದೆ.
  5. ಎಲೆಕ್ಟ್ರಿಸಿಟಿ ಜೊತೆಗೆ ಇತರ ಎನರ್ಜಿ ಡಿಮ್ಯಾಂಡ್ ನಲ್ಲಿ ಕೂಡ ಕುಸಿತ ಕಂಡಿತ್ತು. ಹತ್ತಿರತ್ತಿರ 22 ಪ್ರತಿಶತ ಕುಸಿತ ಕಂಡಿದ್ದ ಈ ಕ್ಷೇತ್ರ ಇದೀಗ ಅಂದರೆ ಮೇ ತಿಂಗಳಿಂದ ಈಚೆಗೆ ತೀವ್ರ ಗತಿಯಲ್ಲಿ ಏರಿಕೆಯನ್ನ ಕಂಡಿದ್ದು ಮೊದಲಿನ ಸ್ಥಿತಿಗಿಂತ ಕೇವಲ 1 ಪ್ರತಿಶತ ಗ್ಯಾಪ್ ಉಳಿದುಕೊಂಡಿಗೆ ಎನ್ನುತ್ತವೆ ಅಂಕಿ-ಅಂಶ. ಮುಂಬರುವ ದಿನಗಳಲ್ಲಿ ವ್ಯಾಕ್ಸಿನೇಷನ್ ಡ್ರೈವ್ ಇಷ್ಟೇ ವೇಗವಾಗಿ ನಡೆದು ಇನ್ನೊಂದು ಲಾಕ್ ಡೌನ್ ಆಗದಿದ್ದರೆ, ಖಂಡಿತ ಎನರ್ಜಿ ಡಿಮ್ಯಾಂಡ್ ಮೊದಲಿಗಿಂತ ಹೆಚ್ಚಾಗುತ್ತದೆ.
  6. ಕೃಷಿ ಕ್ಷೇತ್ರದಲ್ಲೂ ಗರಿಗೆದರಿದ ಉತ್ಸಾಹ: NREGA ಅಡಿಯಲ್ಲಿ ಮೂರವರೆ ಕೋಟಿ ಜನರಿಗೆ ಕೆಲಸವನ್ನ ಕಲ್ಪಿಸಲಾಗಿದೆ. ರಸಗೊಬ್ಬರಗಳ ಪೂರೈಕೆ ಮತ್ತು ಮಾರಾಟ ಮೇ ತಿಂಗಳಲ್ಲಿ ಆಕಾಶವನ್ನ ಮುಟ್ಟಿದೆ. ಅಕ್ಕಿ ಮತ್ತು ಗೋಧಿಯ ಬೆಳೆಗಳು ಸಾಮಾನ್ಯ ಸ್ಥಿತಿಯನ್ನ ತಲುಪಿದೆ. ಹೀಗಾಗಿ ಇವುಗಳ ಬೆಲೆಯಲ್ಲಿ ಯಾವುದೇ ಹೆಚ್ಚಾಗಿಲ್ಲ.

ಹೀಗೆ ಇನ್ನೂ ಹತ್ತಾರು ವಲಯಗಳಲ್ಲಿ ಕೂಡ ಒಂದಷ್ಟು ಆಶಾಭಾವವನ್ನ ನಾವು ಕಾಣಬಹುದು. ಆದರೆ ಈ ಬೇಡಿಕೆಯ ಸ್ಥಿತಿ ಎಷ್ಟು ದಿನ ಇರುತ್ತದೆ ಎನ್ನುವುದು ಇಂದು ನಮ್ಮ ಮುಂದಿರುವ ದೊಡ್ಡ ಪ್ರಶ್ನೆ. ಇದಕ್ಕೆ ಪ್ರಮುಖ ಕಾರಣಗಳನ್ನ ನಾವು ಹೀಗೆ ಪಟ್ಟಿ ಮಾಡಬಹುದು.

  1. ಆದಾಯದಲ್ಲಿ ಕುಸಿತ: ಸಾಮಾನ್ಯ ಜನರ ಆದಾಯದಲ್ಲಿ ಕುಸಿತ ಉಂಟಾಗಿರುವುದು ಸತ್ಯ. ಹೀಗಾಗಿ ಮೇಲಿನ ಎಲ್ಲಾ ರೀತಿಯ ಬೇಡಿಕೆ ಅಥವಾ ಚೇತರಿಕೆ ತಾತ್ಕಾಲಿಕ. ಇದನ್ನ ನಾವು ಪೂರ್ಣ ಪ್ರಮಾಣದ ಚೇತರಿಕೆ ಎಂದು ಕರೆಯಲಾಗುವುದಿಲ್ಲ ಎನ್ನುವುದು ಒಂದು ವರ್ಗದ ಕೂಗು. ಇದನ್ನ ಪೂರ್ಣವಾಗಿ ತಳ್ಳಿ ಹಾಕಲು ಕೂಡ ಸಾಧ್ಯವಿಲ್ಲ.
  2. ಅಪಾಯಕ್ಕೆ ಹೆದರುವ ಮನಸ್ಥಿತಿ: ಇಂದಿಗೂ ನಮ್ಮ ಸಮಾಜದ ಒಂದು ವರ್ಗ, ಅದು ಖರ್ಚು ಮಾಡುವ ವರ್ಗ, ಹೊರಗೆ ಬರಲು ಹೆದರುತ್ತಿದೆ. ನಾವಿದ್ದರೆ ಜೀವನ, ನಾವೇ ಇಲ್ಲದಿದ್ದರೆ? ಎನ್ನುವ ಲಾಜಿಕ್ ಅವರನ್ನ ಆವರಿಸಿಕೊಂಡಿದೆ. ಹೀಗಾಗಿ ಈ ಖರ್ಚು ಮಾಡುವ ವರ್ಗ ಪೂರ್ಣವಾಗಿ ಮಾರುಕಟ್ಟೆಗೆ ಬರುವವರೆಗೆ ನಾವು ಪೂರ್ಣ ಚೇತರಿಕೆಯನ್ನ ನಿರೀಕ್ಷಿಸುವಂತಿಲ್ಲ.
  3. ಸಮಾಜದಲ್ಲಿ ಮನೆ ಮಾಡಿರುವ ಅಸ್ಥಿರತೆ, ಉರಿಯುವ ಅಗ್ನಿಗೆ ತುಪ್ಪ ಸುರಿದಾಂತಾಗಿದೆ: ಮೂರನೆ ಅಲೆ ಇನ್ನೇನು ಬಂದೆ ಬಿಟ್ಟಿತು ಎನ್ನುವ ಮಾಧ್ಯಮ ಮನೆಗಳ ಅಬ್ಬರ ಜನರ, ಸಮಾಜದ ಮನದಲ್ಲಿ ಅಸ್ಥಿರತೆಯನ್ನ ತುಂಬಿದೆ. ಹೀಗಾಗಿ ಯಾವುದೇ ಹೊಸ ವ್ಯಾಪಾರ, ಉದ್ದಿಮೆಗಳಿಗೆ ಹೂಡಿಕೆ ಮಾಡಲು ಜನರು ಹಿಂಜರಿಯುತ್ತಿದ್ದಾರೆ. ಕಾದು ನೋಡುವ ತಂತ್ರಕ್ಕೆ ಇವರು ಮೊರೆ ಹೋಗುತ್ತಿದ್ದಾರೆ. ಹೀಗಾಗಿ ಸದ್ಯದ ರಿಕವರಿಯನ್ನ ನಾವು ಶಾಶ್ವತ ರಿಕವರಿ ಎನ್ನಲು ಬರುವುದಿಲ್ಲ.
  4. ಕೆಲಸಗಾರರ ಕೊರತೆ: ನುರಿತ, ಅರೆ ನುರಿತ ಮತ್ತು ಯಾವುದೇ ನೈಪುಣ್ಯತೆ ಇಲ್ಲದ, ಎಲ್ಲಾ ವರ್ಗದ ಕೆಲಸಗಾರರ ಕೊರತೆಯನ್ನ ಇಂಡಸ್ಟ್ರಿ ಎದುರಿಸಲಿದೆ. ಹೀಗಾಗಿ ಎಲ್ಲಾ ಕಾರ್ಯ ಕ್ಷೇತ್ರಗಳಲ್ಲಿ ಅಂದುಕೊಂಡ ಮಟ್ಟದ ಪ್ರೊಡಕ್ಷನ್ ಆಗುವುದಿಲ್ಲ. ಇದು ಡಿಮ್ಯಾಂಡ್ ಮತ್ತು ಸಪ್ಲೈ ನಡುವಿನ ಅಂತರವನ್ನ ಹಿಗ್ಗಿಸುವ ಸಾಧ್ಯತೆಯನ್ನ ಕೂಡ ಅಲ್ಲಗಳೆಯಲು ಸಾಧ್ಯವಿಲ್ಲ . ಹೀಗಾಗಿ ಇದು ಬೆಲೆಯುಬ್ಬರಕ್ಕೆ ಕೂಡ ಕಾರಣವಾಗಬಹುದು.
  5. ಕುಸಿದ ಜಿಎಸ್ಟಿ ಸಂಗ್ರಹಣೆ: ಏಪ್ರಿಲ್ 2021ಕ್ಕೆ ಹೋಲಿಸಿದರೆ ಮೇ ತಿಂಗಳ ಜಿಎಸ್ಟಿ ಸಂಗ್ರಹಣೆಯಲ್ಲಿ 27.6 ಪ್ರತಿಶತ ಕುಸಿತ ಕಂಡಿದೆ. ನಾವು ಸಮಾಜದ ಹಲವು ವಲಯಗಳಲ್ಲಿ ಹೆಚ್ಚಿದ ವ್ಯಪಾರವನ್ನ ನೋಡಿ, ನಾವು ಪಾಂಡೆಮಿಕ್ ಗೆ ಮುಂಚಿನ ದಿನಗಳ ವ್ಯಾಪಾರದ ಮಟ್ಟಕ್ಕೆ ಬಂದೆವು ಎಂದು ಕುಣಿಯುತ್ತಿದ್ದೇವೆ. ಆದರೆ ನಾವು ಅಂದುಕೊಂಡಂತೆ ಅದು ಪೂರ್ಣ ಪ್ರಮಾಣದ ಚೇತರಿಕೆಯಲ್ಲ ಎನ್ನುವುದಕ್ಕೆ ಬಹುದೊಡ್ಡ ಕಾರಣ ಜಿಎಸ್ಟಿ ಸಂಗ್ರಹಣೆಯಲ್ಲಿ ಆಗಿರುವ ಕುಸಿತ. ಏಪ್ರಿಲ್ ನಲ್ಲಿ 1 ಲಕ್ಷ 41 ಸಾವಿರ ಕೋಟಿಯಷ್ಟಿದ್ದ ಜಿಎಸ್ಟಿ ಸಂಗ್ರಹಣೆ ಮೊತ್ತ ಮೇ ತಿಂಗಳಲ್ಲಿ 1 ಲಕ್ಷ 3 ಸಾವಿರ ಕೋಟಿಗೆ ಕುಸಿತ ಕಂಡಿರುವುದು, ಜೂನ್ ತಿಂಗಳಲ್ಲಿ 8 ತಿಂಗಳಲ್ಲೇ ಅತ್ಯಂತ ಕಡಿಮೆ (92 ಸಾವಿರ ಕೋಟಿ ರೂಪಾಯಿ) ಜಿಎಸ್ ಟಿ ಸಂಗ್ರವಾಗಿರುವುದು ಸಮಾಜದಲ್ಲಿ ಇರುವ ಏರಿಳಿತವನ್ನ ತೋರಿಸುತ್ತಿದೆ.
  6. ಆರ್ಬಿಐ ಕನ್ಸ್ಯೂಮರ್ ಕಾನ್ಫಿಡೆನ್ಸ್ ಇಂಡೆಕ್ಸ್ ನಲ್ಲಿ ಕುಸಿತ: ಭಾರತದ ಸೆಂಟ್ರಲ್ ಬ್ಯಾಂಕ್ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊರಡಿಸುವ ಕನ್ಸ್ಯೂಮರ್ ಕಾನ್ಫಿಡೆನ್ಸ್ ಇಂಡೆಕ್ಸ್ ಈ ವರ್ಷದ ಮೇ ತಿಂಗಳಲ್ಲಿ ಅಂದರೆ 2021ರ ಮೇ ತಿಂಗಳಲ್ಲಿ ಅತ್ಯಂತ ತಳಮಟ್ಟವನ್ನ ಮುಟ್ಟಿದೆ. ಮಾರ್ಚ್ ನಲ್ಲಿ 53.1 ಪ್ರತಿಶತವಿದ್ದ ನಂಬಿಕೆಯ ಪ್ರಮಾಣ ಮೇ ತಿಂಗಳಲ್ಲಿ 48.5 ಪ್ರತಿಶತಕ್ಕೆ ಕುಸಿತವನ್ನ ಕಂಡಿದೆ. ಇದು ಈ ವರ್ಷದ ಅತ್ಯಂತ ಕಡಿಮೆ ನಂಬಿಕೆಯ ಪ್ರಮಾಣವಾಗಿದೆ. ಇವುಗಳಲ್ಲಿ ಏರಿಳಿತ ಸಹಜ. ಆದರೆ ಇದು ನಾವು ಅಂದುಕೊಂಡದಂತೆ ಸಮಾಜದಲ್ಲಿ ಸದ್ಯಕ್ಕೆ ಆಗುತ್ತಿರುವ ಅಭಿವೃದ್ಧಿ ಸಂಖ್ಯೆಗಳು ಇಷ್ಟು ದಿನ ಬೇಡಿಕೆಯಿಲ್ಲದೆ ಇದ್ದುದ್ದರ ಪರಿಣಾಮವೇ ಹೊರತು, ಸಹಜ ಬೇಡಿಕೆಯಲ್ಲ ಎನ್ನುವುದನ್ನ ಸೂಚಿಸುತ್ತಿದೆ.

ಇವುಗಳ ಜೊತೆಗೆ ನಮ್ಮ ಸಮಾಜದಲ್ಲಿ ಅರ್ಧ ಭಾಗವನ್ನ ಆವರಿಸಿಕೊಂಡಿರುವ ಸೇವಾ ಕ್ಷೇತ್ರಗಳು ಇನ್ನೂ ಪೂರ್ಣವಾಗಿ ಮಾರುಕಟ್ಟೆಗೆ ತೆರೆದು ಕೊಳ್ಳಬೇಕಿದೆ. ಹೋಟೆಲ್ ಇಂಡಸ್ಟ್ರಿ ಗ್ರಾಹಕರಿಗೆ ತೆರೆದುಕೊಂಡಿದೆ. ಆದರೆ ತನ್ನ ಹಿಂದಿನ ಹೊಳಪನ್ನ ಕಂಡುಕೊಳ್ಳಲು ಬಹಳಷ್ಟು ಸಮಯವನ್ನ ತೆಗೆದುಕೊಳ್ಳುತ್ತದೆ.  ಇನ್ನು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸಾಕಷ್ಟು ಬೆವರು ಹರಿಸುವುದು ಬಾಕಿಯಿದೆ. ರಾಷ್ಟೀಯ ಪ್ರವಾಸ ಹಾಗೂ ಹೀಗೂ ಒಂದಷ್ಟು ಬಿರುಸು ಪಡೆದುಕೊಳ್ಳಬಹುದು, ಆದರೆ ಸದ್ಯದ ಮಟ್ಟಿಗೆ ಅಂತರರಾಷ್ಟ್ರೀಯ ಪ್ರಯಾಣಗಳಿಗೆ ಸಾಕಷ್ಟು ಅಡೆತಡೆಯಿದೆ. ಲಸಿಕೆ, ಪಾಸ್ಪೋರ್ಟ್ ವಿತರಣೆಯಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಒಮ್ಮತ, ಸಹಮತದ ಕೊರತೆಯನ್ನ ನಾವು ಕಾಣಬಹುದು. ಹೀಗಾಗಿ ಮೇಲ್ನೋಟಕ್ಕೆ ಒಂದಷ್ಟು ಕಾರ್ಯಕ್ಷೇತ್ರಗಳು ಬೇಡಿಕೆಯನ್ನ ಮರಳಿ ಪಡೆದಂತೆ ಕಂಡರೂ, ಎಲ್ಲವೂ ಸಹಜ ಸ್ಥಿತಿಗೆ ಮರಳು ಇನ್ನಷ್ಟು ಸಮಯ ಬೇಡುತ್ತದೆ.

ಕೊನೆಮಾತು: ನಮ್ಮ ಸಮಾಜ ಹಿಂದೆಂದಿಗಿಂತಲೂ ಇಂದು ಅತ್ಯಂತ ನಿಖರವಾಗಿ ಇಬ್ಭಾಗವಾಗಿದೆ. ಸಮಾಜದ ಒಂದು ವರ್ಗದ ಜನ ವ್ಯವಸ್ಥೆಯಲ್ಲಿ ಪೂರ್ಣ ಕುಸಿತ ಉಂಟಾಗಿದೆ ಎನ್ನುವ ಕೂಗನ್ನ ಹರಿಯಬಿಡುತ್ತಿದ್ದರೆ, ಉಳಿದರ್ಧ ಜನ ಎಲ್ಲವೂ ಸಹಜ ಸ್ಥಿತಿಗೆ ಬಂದಿದೆ ಎನ್ನುವಂತೆ ಕೂಗಾಡುತ್ತಿದ್ದಾರೆ. ನಾವು ಯಾವುದನ್ನೇ ಆಗಲಿ ಕೇವಲ ಅಂಕಿ-ಸಂಖ್ಯೆಯನ್ನ ನೋಡಿ, ಇದು ಸರಿ ಅಥವಾ ಇದು ತಪ್ಪು ಎಂದು ಹೇಳಲು ಆಗುವುದಿಲ್ಲ. ಉದಾಹರಣೆಗೆ ಎಫ್ಎಂಸಿಜಿ ಯಲ್ಲಿ ಬೇಡಿಕೆ ಹೆಚ್ಚಾಗಿರುವುದು ಸುಳ್ಳಲ್ಲ. ಅಂಕಿ-ಅಂಶ ನೋಡಿ ಹೌದು ಆರ್ಥಿಕತೆ ಸರಿದಾರಿಗೆ ಬರುತ್ತಿದೆ ಎನ್ನಬಹುದು. ಆದರೆ ಅದು ಪೂರ್ಣ ಪ್ರಮಾಣದ ಚೇತರಿಕೆಯೇ ಅಲ್ಲವೇ ಎನ್ನುವುದನ್ನ ವಿಶ್ಲೇಷಣೆ ಮಾತ್ರ ತಿಳಿಸಬಲ್ಲದು. ಹಾಗೆಯೇ ಎಲ್ಲವೂ ಕುಸಿದಿದೆ ಎನ್ನುವರಿಗೆ, ಇಂತಹ ದುರಿತ ಕಾಲದಲ್ಲಿ ಕೂಡ ಭಾರತದ ಕಾಣುತ್ತಿರುವ ಅಭಿವೃದ್ಧಿ ವೇಗ, ಲಸಿಕೆ ನೀಡುತ್ತಿರುವ ಪ್ರಮಾಣ ತಿಳಿಸಿ ಹೇಳಬೇಕಿದೆ. ಭಾರತದಂತಹ ಅತಿ ದೊಡ್ಡ ದೇಶವನ್ನ ಸರಿದೂಗಿಸಿಕೊಂಡು ಹೋಗುವುದು ಸುಲಭದ ಕೆಲವಲ್ಲ. ಇಬ್ಭಾಗವಾದ ಸಮಾಜದ ಎರಡೂ ಬದಿಯ ತರ್ಕ, ವಾದ ವಿವಾದಗಳ ನಡುವಿನಲ್ಲಿ ಸತ್ಯ, ಅಥವಾ ಫ್ಯಾಕ್ಟ್ ಕೇಳುವರಿಲ್ಲದೆ ಅನಾಥವಾಗಿರುತ್ತದೆ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com