ಷೇರುಮಾರುಕಟ್ಟೆ ಪ್ರವೇಶಿಸದೆ ಉಳಿದರೂ ಅಪಾಯ ತಪ್ಪಿದ್ದಲ್ಲ! (ಹಣಕ್ಲಾಸು)

ಹಣಕ್ಲಾಸು-282-ರಂಗಸ್ವಾಮಿ ಮೂಕನಹಳ್ಳಿ 
ಷೇರು ಮಾರುಕಟ್ಟೆ
ಷೇರು ಮಾರುಕಟ್ಟೆ

ಹಿಂದೊಂದು ಕಾಲವಿತ್ತು, ಆಗ ಜನರು ತಾವು ಉಳಿಸಿದ ಹಣವನ್ನ ಬ್ಯಾಂಕಿನ ನಿಗದಿತ ಠೇವಣಿಯಲ್ಲಿ ಇಟ್ಟು ಸುಖವಾಗಿ ಮತ್ತು ನೆಮ್ಮದಿಯಾಗಿ ಮಲಗುತ್ತಿದ್ದರು. ಭಾರತ ಅಂತರರಾಷ್ಟ್ರೀಯ ಮಟ್ಟದಲ್ಲಿ ಯಾವ ಸ್ಥಿತಿಯಲ್ಲಿತ್ತು ಎನ್ನುವುದು ಅಂದಿಗೂ ಜನ ಸಾಮಾನ್ಯನಿಗೆ ಗೊತ್ತಿರಲಿಲ್ಲ , ಇಂದಿಗೂ ಗೊತ್ತಿಲ್ಲ. ಆದರೆ ಕಳೆದ ಹತ್ತು ವರ್ಷದಲ್ಲಿ ಭಾರತದ ನೆಲದಲ್ಲಿ ಬಹಳ ನೀರು ಹರಿದು ಹೋಗಿದೆ. ರಾಷ್ಟ್ರೀಯ ಭದ್ರತೆಯ ವಿಷಯದಲ್ಲಿ, ಅಂತರರಾಷ್ಟ್ರೀಯ ನಿಲುವುಗಳ ವಿಷಯದಲ್ಲಿ ಭಾರತ ಹೊಸ ಎತ್ತರಕ್ಕೆ ಏರಿದೆ ಎನ್ನುವುದನ್ನ ಯಾವುದೇ ಸಂಕೋಚವಿಲ್ಲದೆ ಹೌದೆಂದು ಹೇಳಬಹುದು. ಸಾಮಾನ್ಯ ಮನುಷ್ಯನ ಖರ್ಚಿನ ವಿಷಯ ಬಂದಾಗ ಮಾತ್ರ ಕಳೆದ ಹತ್ತು ವರ್ಷಕ್ಕೆ ಹೋಲಿಸಿದರೆ ಅವನ ಖರ್ಚು ದುಪಟ್ಟಾಗಿದೆ ಆದರೆ ಅವನ ಆದಾಯ? ದುಡಿಯುತ್ತಿರುವ ಜನರ ಆದಾಯ ಹೆಚ್ಚಾಗಿರಬಹುದು ಆದರೆ ತಮ್ಮ ಜೀವಮಾನ ಪೂರ್ತಿ ದುಡಿದು ನಿವೃತ್ತಿಯ ಅಂಚಿನಲ್ಲಿ ಸಿಕ್ಕ ಸ್ವಲ್ಪ ಹಣವನ್ನ ಬ್ಯಾಂಕಿನಲ್ಲಿ ಠೇವಣಿ ಇಟ್ಟು ಅದನ್ನ ನಂಬಿ ಬದುಕನ್ನ ಸಾಗಿಸುವ ಹಂಬಲವನ್ನ ಇಟ್ಟುಕೊಂಡವರ ಕಥೆಯೇನು ಅವರ ಜೊತೆಗೆ ಇತರೆ ಜನರ ಹಣವನ್ನ ಕೂಡ ಅವರ ಅನುಮತಿಯಿಲ್ಲದೆ ಅರ್ಧ ಬ್ಯಾಂಕುಗಳು ಪಡೆದುಕೊಂಡಿವೆ. ಹೇಗೆ ಎನ್ನುವುದನ್ನ ಒಂದು ಉದಾಹರಣೆಯ ಮೂಲಕ ನೋಡೋಣ.

ರಾಮ ಎನ್ನುವ ಹಿರಿಯ ನಾಗರೀಕರು 2010 ರ ಸಮಯದಲ್ಲಿ ಆಗತಾನೆ ನಿವೃತ್ತಿ ಹೊಂದುತ್ತಾರೆ, ಈ ವೇಳೆಯಲ್ಲಿ ಅವರ ಉಳಿಕೆ ಹಣ 25 ಲಕ್ಷ ರುಪಾಯಿ. ಅದನ್ನ ಬ್ಯಾಂಕಿನಲ್ಲಿ ಠೇವಣಿ ಇಡುತ್ತಾರೆ. ಅಂದಿನ ಬ್ಯಾಂಕಿನ ಬಡ್ಡಿದರ 10.5 ಪ್ರತಿಶತ ವಾರ್ಷಿಕ. ಹೀಗಾಗಿ ಮಾಸಿಕ ಅವರಿಗೆ 21 ಸಾವಿರಕ್ಕೂ ಸ್ವಲ್ಪ ಹೆಚ್ಚು ಹಣ ಬಡ್ಡಿಯ ರೂಪದಲ್ಲಿ ಸಿಗುತ್ತಿತ್ತು. ಹತ್ತು ವರ್ಷದಲ್ಲಿ ಭಾರತವೇನೋ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರಿ ಸದ್ದು ಮಾಡುತ್ತಿದೆ. ಆದರೆ ರಾಮ ಅವರ 25 ಲಕ್ಷಕ್ಕೆ ಈಗ ಮಾಸಿಕ 11 ಸಾವಿರ ಚಿಲ್ಲರೆ ಹಣ ಸಿಗುತ್ತಿದೆ. ಹತ್ತು ವರ್ಷದ ಹಿಂದೆ ಇದ್ದ ಬೆಲೆಗಳು ಮುಕ್ಕಾಲು ಪಾಲು ಎಲ್ಲವೂ ದುಪಟ್ಟಾಗಿದೆ. ಅಂದರೆ ಅಂದು ಮಾಸಿಕ ಖರ್ಚು 10 ಸಾವಿರ ಇದ್ದರೆ, ಇಂದಿಗೆ ಅದು 20 ಸಾವಿರವಾಗಿದೆ. ಬಡ್ಡಿ ಬಿಟ್ಟು ಬೇರೆ ಆದಾಯದ ಮೂಲವಿಲ್ಲದ ಜನರ ಆದಾಯದಲ್ಲಿ ಅರ್ಧ ಕುಸಿತ ಕಂಡಿದೆ. ಹಣವೇನೂ 25 ಲಕ್ಷ ನಿಮ್ಮ ಹೆಸರಲ್ಲಿದೆ ಆದರೆ ನಿಮಗೆ ಸಿಗುತ್ತಿದ್ದ ಬಡ್ಡಿಯಲ್ಲಿ ಕಡಿತವಾಗಿದೆ. ಇದರರ್ಥ ನಿಮ್ಮ ಅರ್ಧ ಹಣವನ್ನ ನೀವು ಬ್ಯಾಂಕಿಗೆ ಪುಕ್ಕಟೆ ಒತ್ತೆ ಇಟ್ಟಂತಾಯ್ತು.

ತೈಲಬೆಲೆ ಹೆಚ್ಚಳ, ಇತರ ಪದಾರ್ಥಗಳ ಬೆಲೆ ಹೆಚ್ಚಳ ವಿಷಯ ಬಂದಾಗ ಅದನ್ನ ಅಂತರರಾಷ್ಟ್ರೀಯ ಮಟ್ಟದಲ್ಲಿ ಆಗುತ್ತಿರುವ ಬದಲಾವಣೆ ಇದು ಕೇವಲ ನಮ್ಮ ದೇಶದಲ್ಲಿ ಮಾತ್ರವಲ್ಲ ಎನ್ನುವ ಮಾತು ಕೇಳಿಬರುತ್ತದೆ. ಸರಿ ಒಪ್ಪೋಣ ಹಾಗಿದ್ದ ಮೇಲೆ ಬೆಲೆಗಳು ಹೆಚ್ಚಳವಾದವು ಎನ್ನುವುದನ್ನ ಎಲ್ಲರೂ ಒಪ್ಪುತ್ತೀರಿ ಎಂದಾಯ್ತು ಅಲ್ಲವೇ? ಹಣದುಬ್ಬರ ಹೆಚ್ಚಾಗುತ್ತಿರುವ ಸಮಯದಲ್ಲಿ ಬ್ಯಾಂಕಿನ ಬಡ್ಡಿ ದರ ಕಡಿಮೆಯಾಗಲು ಹೇಗೆ ಸಾಧ್ಯ? ಇದು ಸಾಮಾನ್ಯ ಪ್ರಶ್ನೆ. ಇದಕ್ಕೆ ನಾವೇನು ಹೆಚ್ಚಿನ ತಿಳುವಳಿಕೆ ಹೊಂದಿರಬೇಕಾದ ಅವಶ್ಯಕತೆಯಿಲ್ಲ. ಹೀಗಾಗಿ ಇಂದಿನ ಜನ ಸಾಮಾನ್ಯ ಅದರಲ್ಲೂ ಬೇರೆ ಆದಾಯದ ಮೂಲವಿಲ್ಲದ ಹಿರಿಯ ನಾಗರೀಕರ ಬದುಕು ದುಸ್ತರವಾಗಿದೆ. ಹಿರಿಯ ನಾಗರಿಕರಿಗೆ ಬಹಳಷ್ಟು ಬೇರೆ ಸ್ಕೀಮ್ಗಳಿವೆ, ಅಲ್ಲಿ ಹೂಡಿಕೆ ಮಾಡಬಹುದು ಅಲ್ಲಿ ಏಳೂವರೆ ಪ್ರತಿಶತದ ವರೆಗೆ ಬಡ್ಡಿ ದರವಿದೆ ಎನ್ನುವ ಸಮಜಾಯಿಷಿಗಳು ಕೂಡ ಬಹಳಷ್ಟು ಬರುತ್ತವೆ.

ಯಾವಾಗ ಮುಖ್ಯವಾಹಿನಿ ಬ್ಯಾಂಕುಗಳಲ್ಲಿ ಬಡ್ಡಿ ದರ ಇಷ್ಟೊಂದು ಕಡಿಮೆಯಾಗುತ್ತದೆ ಆಗೆಲ್ಲಾ ಜನ ಇತರೆ ಹಣಕಾಸು ಸಂಸ್ಥೆಗಳತ್ತ ಮುಖ ಮಾಡುವುದು ಸಹಜ. ಒಂದೆರೆಡು ಪ್ರತಿಶತ ಹೆಚ್ಚಿನ ಬಡ್ಡಿಯ ಆಸೆಗೆ ಮೂಲ ಧನವನ್ನ ಕಳೆದುಕೊಳ್ಳುವ ರಿಸ್ಕ್ ನಲ್ಲಿ ಇವರು ಬೀಳುತ್ತಾರೆ. ಇಂದಿನ ದಿನಗಳಲ್ಲಿ ಜನರ ಜೀವಿತಾವಧಿ ಹೆಚ್ಚಳ ಕಂಡಿದೆ, ಬಹಳಷ್ಟು ಹಿರಿಯ ನಾಗರೀಕರು ಆರೋಗ್ಯವನ್ನ ಕಾಪಾಡಿಕೊಳ್ಳುವುದರಲ್ಲಿ ಯಶಸ್ಸು ಕೂಡ ಗಳಿಸಿದ್ದಾರೆ. ಹೀಗೆ ಆರೋಗ್ಯ ಚೆನ್ನಾಗಿದ್ದು ಒಂದಷ್ಟು ಹೊಸತನ್ನ ಕಲಿಯುವ ಮನಸುಳ್ಳವರು ಷೇರು ಮಾರುಕಟ್ಟೆಯನ್ನ ಪ್ರವೇಶಿಸಬಹುದು. ಇಲ್ಲಿ ನಿಯಮಿತವಾಗಿ ಹೂಡಿಕೆ ಮಾಡುವುದರಿಂದ ಒಂದಷ್ಟು ಹಣವನ್ನ ಗಳಿಸಬಹುದು. ತಮ್ಮ ಉಳಿಕೆಯ ಹಣದ 25 ಪ್ರತಿಶತ ಹಣವನ್ನ ಭದ್ರತೆಯ ಹೂಡಿಕೆಯಲ್ಲಿ ತೊಡಗಿಸಿ ಉಳಿದ 25 ಪ್ರತಿಶತ ಹಣವನ್ನ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಜಾಣತನ. ಇಲ್ಲಿ ಇನ್ನೊಂದು ಅನುಕೂಲ ಕೂಡ ಇದೆ. ಹಿರಿಯ ನಾಗರಿಕರ ಬಳಿ ಸಮಯವಿರುವ ಕಾರಣ, ತಾವು ಹೂಡಿಕೆ ಮಾಡಲು ಇಚ್ಛಿಸಿದ ಸಂಸ್ಥೆಯ ಬಗ್ಗೆ ಕೂಲಂಕುಷವಾಗಿ ತಪಾಸಣೆ ಮಾಡಬಹುದು. ಇದರ ಜೊತೆಗೆ ಪರಿಣಿತರ ಒಂದಷ್ಟು ಸಲಹೆ ಅಳವಡಿಸಿಕೊಡರೆ ಆಗ ಬಹಳಷ್ಟು ಚಮತ್ಕಾರ ಸೃಷ್ಟಿಸಲು ಸಾಧ್ಯವಿದೆ.

ಎಲ್ಲಕ್ಕೂ ಮುಖ್ಯವಾಗಿ ಕೆಲವೊಂದು ಷೇರು ಮಾರುಕಟ್ಟೆ ಮೂಲಭೂತ ಸೂತ್ರಗಳನ್ನ ನೆನಪಿನಲ್ಲಿ ಇಟ್ಟುಕೊಳ್ಳಬೇಕು ಮತ್ತು ಅವುಗಳನ್ನ ಪಾಲಿಸಬೇಕು. ಇಲ್ಲಿ ಹೇಳುತ್ತಿರುವ ಸೂತ್ರಗಳು ಕೆಲವೇ ಕೆಲವು, ನೂರಾರು ಸೂತ್ರಗಳಿವೆ. ಆದರೆ ಇವುಗಳು ಬೇಸಿಕ್, ಹೀಗಾಗಿ ಇವುಗಳಲ್ಲಿ ಎಡವುವಂತಿಲ್ಲ.

ಸೂತ್ರ 1 - ಷೇರು ಮಾರುಕಟ್ಟೆಯಲ್ಲಿ ಎಂದೂ ಹಣ ಕಳೆದು ಕೊಳ್ಳಬಾರದು. ಇದೇನಿದು ಹೀಗೆ ಇಷ್ಟೊಂದು ಕಡ್ಡಿತುಂಡಾದಂತೆ ಹೇಗೆ ಹೇಳುವುದು? ಇದು ಸಾಧ್ಯವೇ ಎನ್ನುವ ಪ್ರಶ್ನೆ ನಿಮ್ಮಲ್ಲಿ ಬಂದಿರುತ್ತದೆ. ಗಮನಿಸಿ ನೀವು ಹೂಡಿಕೆ ಮಾಡುವ ಪ್ರತಿ ಸಂಸ್ಥೆಯೂ ನಿಮ್ಮದೇ ಒಂದು ಸಣ್ಣ ವ್ಯಾಪಾರ ಶುರು ಮಾಡಿದಂತೆ, ಯಾರಾದರೂ ಬಂಡವಾಳ ಕಳೆದುಕೊಳ್ಳುವ ಇರಾದೆಯಿಂದ ವ್ಯಾಪಾರ ಶುರು ಮಾಡುತ್ತಾರೆಯೇ? ಇಲ್ಲವಷ್ಟೆ, ಹೀಗಾಗಿ ಷೇರು ಮಾರುಕಟ್ಟೆಯ ನಿಮ್ಮ ಹೂಡಿಕೆಯಲ್ಲಿ ಒಂದು ನಯಾಪೈಸೆ ಕಳೆದುಕೊಳ್ಳುವುದಿಲ್ಲ ಎನ್ನುವ ಮನಸ್ಥಿತಿಯಿಂದ ಪ್ರವೇಶ ಮಾಡಬೇಕು. ಇದು ಬಾಲಿಶ ಎನ್ನಿಸಬಹುದು ಆದರೆ ಗಮನಿಸಿ, ಷೇರು ಮಾರುಕಟ್ಟೆವಲ್ಲಿ ಯಾವುದೂ ಹೇಳುವುದಕ್ಕೆ ಬರುವುದಿಲ್ಲ ಎನ್ನುವ ದ್ವಂದ್ವ ಮನಸ್ಥಿತಿಯಲ್ಲಿ ಮಾತ್ರ ಷೇರು ಮಾರುಕಟ್ಟೆ ಪ್ರವೇಶಿಸುವುದು ಬೇಡ ಎನ್ನವುದು ಇದರ ಗೂಢಾರ್ಥ.

ಸೂತ್ರ-2: ಹುಚ್ಚ ಕೂಡ ನಡೆಸಬಹುದಾದ ಸಂಸ್ಥೆಯಲ್ಲಿ ಹೂಡಿಕೆ ಮಾಡಬೇಕು. ಏಕೆಂದರೆ ಒಂದಲ್ಲ ಒಂದು ದಿನ ಸಂಸ್ಥೆಯನ್ನ ನಡೆಸುವವನು ಹುಚ್ಚನೇ ಆಗಿರುತ್ತಾನೆ! ಹುಚ್ಚ ನೆಂದರೆ ತನ್ನ ಕೆಲಸದಲ್ಲಿ ಇನ್ನಿಲ್ಲದ ನಂಬಿಕೆ ಇಟ್ಟವನು ಎಂದರ್ಥ. ಸಂಸ್ಥೆಯ ಮೂಲ ರೂವಾರಿಗಳು ಯಾರು? ಸಂಸ್ಥೆಯ ಮೂಲ ಉದ್ದೇಶವೇನು? ಸಂಸ್ಥೆಯ ಕಾರ್ಯಕ್ಷೇತ್ರ ಇಂದಿಗೆ ಮತ್ತು ಭವಿಷ್ಯದಲ್ಲಿ ಎಷ್ಟು ಪ್ರಾಮುಖ್ಯತೆ ಪಡೆಯಲಿದೆ ಎನ್ನುವ ವಿಷಯಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನ ಪಡೆದುಕೊಳ್ಳಬೇಕು. ಸಂಸ್ಥೆಯ ಮೂಲ ಉದ್ದೇಶಕ್ಕೆ ಬದ್ಧತೆಯನ್ನ ತೋರುವ ನಾಯಕತ್ವ ಇದ್ದಾಗ ಅಂತಹ ಸಂಸ್ಥೆಗಳಲ್ಲಿ ಹೂಡಿಕೆಯನ್ನ ಮಾಡಬಹುದು.

ಸೂತ್ರ 3- ಟೈಮಿಂಗ್ ಇಸ್ ಎವೆರಿಥಿಂಗ್, ಲಾಭವೋ ಅಥವಾ ನಷ್ಟವೋ ನಿರ್ಧಾರ ಸರಿಯಾದ ಸಮಯದಲ್ಲಿ ತೆಗೆದುಕೊಳ್ಳಬೇಕು. ಡಿಸಿಷನ್ ಡಿಲೇ ಮಾಡಿದರೆ ಅದೇ ನಷ್ಟ. ಷೇರು ಮಾರುಕಟ್ಟೆಯಲ್ಲಿ ಕೆಲವೊಮ್ಮೆ ನಿರ್ಧಾರಗಳು ಗೆಲುವು ಅಥವಾ ಸೋಲನ್ನ ವ್ಯಾಖ್ಯಾನ ಮಾಡುತ್ತವೆ. ಸರಿಯಾದ ಸಮಯದಲ್ಲಿ ನಿರ್ಧಾರಗಳನ್ನ ತೆಗೆದುಕೊಳ್ಳುವುದು ತುಂಬಾ ಮುಖ್ಯವಾಗುತ್ತದೆ. ನಿರ್ಧಾರಗಳಲ್ಲಿ ಸರಿಯಾದ ನಿರ್ಧಾರ ಅಥವಾ ತಪ್ಪು ನಿರ್ಧಾರ ಎನ್ನುವುದಿಲ್ಲ. ತೆಗೆದುಕೊಂಡ ನಿರ್ಧಾರ ಲಾಭದಾಯಕವಾಗಿದ್ದರೆ ಅದನ್ನ ಸರಿಯಾದ ನಿರ್ಧಾರ ಎನ್ನುತ್ತೇವೆ, ಅದೇ ನಿರ್ಧಾರ ನಷ್ಟ ಉಂಟುಮಾಡಿದರೆ ಆಗ ಅದನ್ನ ತಪ್ಪು ಅಥವಾ ಕೆಟ್ಟ ನಿರ್ಧಾರ ಎನ್ನುತ್ತೇವೆ. ಹೀಗಾಗಿ ನಿರ್ಧಾರದ ಸಮಯದಲ್ಲಿ ಸರಿ ಅಥವಾ ತಪ್ಪು ಎಂದು ನಿರ್ಧರಿಸಲು ಆಗುವುದಿಲ್ಲ. ನಿರ್ಧಾರ ನಿಧಾನಿಸದೆ ತೆಗೆದುಕೊಳ್ಳುವುದು ಮಾತ್ರ ಆ ಸಮಯಕ್ಕೆ ಸರಿಯಾದ ನಿರ್ಧಾರ.

ಸೂತ್ರ 4- ಯಾವುದೂ ನಿರಂತರ, ಸ್ಥಿರವಲ್ಲ. ಗೂಳಿ ಓಟ ಕರಡಿಯ ಹಿಡಿತವಾಗಲು ಕ್ಷಣ ಸಾಕು. ಕರಡಿಯನ್ನ ಗೂಳಿ ಒದ್ದೋಡಿಸಲು ಕೂಡ ಹೆಚ್ಚು ಸಮಯ ಬೇಡ. ಸ್ಥಿರವಾಗಿರಬೇಕಾಗಿರುವುದು ನಮ್ಮ ಮನಸ್ಸು! ಇದು ಇನ್ನೊಂದು ಮಹತ್ವದ ಸೂತ್ರ. ಗೆಲುವೆಲ್ಲಾ ಗೆಲುವಲ್ಲ, ಸೂಲೆಲ್ಲ  ಸೋಲಲ್ಲ ಎನ್ನುವ ತತ್ವ ಇಲ್ಲೂ ಅಡಗಿದೆ. ಉದಾಹರಣೆ ನೋಡೋಣ. ನೀವು ಹತ್ತು ರುಪಾಯಿಗೆ ಕೊಂಡ ಷೇರು ಐದು ರೂಪಾಯಿ ಆಗಿದೆ ಎಂದುಕೊಳ್ಳಿ ನೀವು ಪ್ಯಾನಿಕ್ ನಲ್ಲಿ ಅದನ್ನ ಮಾರಿದರೆ ಮಾತ್ರ ಆಗ ನಿಮಗೆ ಅದು ನಷ್ಟ ಎನ್ನಿಸಿಕೊಳ್ಳುತ್ತದೆ. ಇಲ್ಲದಿದ್ದರೆ ಅದನ್ನ ನೋಷನಲ್ ಲಾಸ್ ಎನ್ನಬಹುದು. ಅದೇ ಷೇರು ಒಂದೆರಡು ದಿನದಲ್ಲಿ ಹದಿನೈದು ಅಥವಾ ಇಪ್ಪತ್ತು ರೂಪಾಯಿ ಕೂಡ ಆಗಬಹುದು. ಆಗಲೂ ಅಷ್ಟೇ ಮಾರಿದರೆ ಮಾತ್ರ ಲಾಭ. ಇಲ್ಲದಿದ್ದರೆ ಅದನ್ನ ನೋಷನಲ್ ಪ್ರಾಫಿಟ್ ಎನ್ನಬಹುದು. ಈ ರೀತಿಯ ಏರಿಳಿತಗಳು ಷೇರು ಮಾರುಕಟ್ಟೆಯಲ್ಲಿ ಸಾಮಾನ್ಯ , ನಮ್ಮ ಮನಸ್ಥಿತಿ ಸ್ಥಿರವಾಗಿದ್ದರೆ ಹೆಚ್ಚು ಲಾಭವನ್ನ ಗಳಿಸಬಹುದು.

ಸೂತ್ರ 5- ಸಂಶಯದಲ್ಲಿ ಮಾರುವುದು ಮತ್ತು ಕೊಳ್ಳುವುದು ಎರಡೂ ಸಲ್ಲದು. ಇಂತಹ ಸ್ಥಿತಿಯಲ್ಲಿ ಸಮ ಸ್ಥಿತಿ ಕಾಯ್ದು ಕೊಳ್ಳುವುದು ಉತ್ತಮ ಮಾರ್ಗ. ಷೇರು ಮಾರುಕಟ್ಟೆಯಲ್ಲಿ ನಿತ್ಯವೂ ಒಂದಲ್ಲ, ನೂರು ಅಂತೆಕಂತೆಗಳು ಹರಿದಾಡುತ್ತವೆ. ಹೀಗೆ ಅವರಿವರ ಮಾತುಗಳನ್ನ, ಗಾಸಿಪ್ ಗಳನ್ನ ನಂಬಿ ಸಂಶಯದಿಂದ ಕೊಳ್ಳುವುದು ಅಥವಾ ಮಾರುವುದು ಮಾಡಿದರೆ ನಷ್ಟ ಕಟ್ಟಿಟ್ಟ ಬುತ್ತಿ. ಇಂತಹ ಅತಂತ್ರ ಸ್ಥಿತಿಯಲ್ಲಿ ಸ್ವಲ್ಪ ಕಾದು ನೋಡುವ ತಂತ್ರ ಅನುಸರಿಸುವುದು ಉತ್ತಮ.

ಕೊನೆಮಾತು: ಇಂದಿನ ದಿನದಲ್ಲಿ ಷೇರು ಮಾರುಕಟ್ಟೆಯಿಂದ ದೂರ ಉಳಿದು ಬದುಕುತ್ತೇವೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು ಎನ್ನುವ ಸ್ಥಿತಿಗೆ ತಲುಪುತ್ತಿದ್ದೇವೆ. ನಮ್ಮ ವಯಸ್ಸು , ಆರ್ಥಿಕತೆ , ಅಧ್ಯಯನ ಯಾವ ಹಂತದಲ್ಲಿದೆ ಎನ್ನುವುದನ್ನ ಮೀರಿ ಎಲ್ಲರೂ ಇಲ್ಲಿ ಇಂದು ಹೂಡಿಕೆ ಮಾಡಬೇಕಾದ ಪರಿಸ್ಥಿತಿ ಬಂದಿದೆ. ದಿನದಿಂದ ದಿನಕ್ಕೆ ಬ್ಯಾಂಕಿನ ಬಡ್ಡಿ ದರಗಳು ದಕ್ಷಿಣದ ಕಡೆಗೆ ಮುಖ ಮಾಡಿವೆ. ಹೀಗಾಗಿ ಎಲ್ಲರೂ ಒಂದಷ್ಟು ಷೇರು ಮಾರುಕಟ್ಟೆ ಜ್ಞಾನ ಹೊಂದುವುದು ಅಗತ್ಯವಾಗಿದೆ. ಮೇಲೆ ಹೇಳಿರುವ ಸೂತ್ರಗಳ ಜೊತೆಗೆ ಇನ್ನೂ ನೂರಾರು ಸೂತ್ರಗಳಿವೆ, ಈ ಸೂತ್ರಗಳು ಬಹುತೇಕ ಬಾರಿ ಒಂದಕ್ಕೊಂದು ವಿರುದ್ಧ ಹೇಳಿಕೆಗಳನ್ನ ಕೂಡ ನೀಡುತ್ತವೆ. ಇದನ್ನ ಆಯಾ ಸಮಯಕ್ಕೆ, ಸನ್ನಿವೇಶಕ್ಕೆ ತಕ್ಕಂತೆ ಅರ್ಥೈಸಿಕೊಳ್ಳುವ ಜಾಣ್ಮೆ ಕೂಡ ಹೂಡಿಕೆದಾರನಿಗೆ ಇರಬೇಕಾಗುತ್ತದೆ. ಷೇರು ಮಾರುಕಟ್ಟೆ ಅಪಾಯ ಎಂದು ಅದನ್ನ ಪ್ರವೇಶಿಸದೆ ಇರುವುದು ಕೂಡ ಕಡಿಮೆ ಅಪಾಯವೇನಲ್ಲ. ಹೀಗಾಗಿ ಜಾಣ್ಮೆಯ , ಕಲಿಕೆಯ ನಡಿಗೆ ನಮ್ಮದಾಗಿರಬೇಕು.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com