ವರ್ಕ್ ಫ್ರಮ್ ಹೋಮ್ ಗೆ ಸೈ ಎಂದ ಟಿಸಿಎಸ್! ಯಸ್ ಎಂದ ಇನ್ಫೋಸಿಸ್! (ಹಣಕ್ಲಾಸು)

ಹಣಕ್ಲಾಸು-ರಂಗಸ್ವಾಮಿ ಮೂಕನಹಳ್ಳಿ 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನಿಮಗೆಲ್ಲ ಟಾಟಾ ಸಮೂಹ ಸಂಸ್ಥೆಗಳ ಬಗ್ಗೆ ತಿಳಿದಿರುತ್ತದೆ. ಟಾಟಾ ಅವರು ವ್ಯಾಪಾರಸ್ಥರಲ್ಲ, ಅವರು ಕೈಗಾರಿಕೋದ್ಯಮಿಗಳು. ಉದ್ಯಮಿ ಅಥವಾ ವ್ಯಾಪಾರಸ್ಥರ ಪ್ರಮುಖ ಉದ್ದೇಶ ಹಣ ಅಥವಾ ಲಾಭ ಗಳಿಕೆ. ಟಾಟಾ ಸಂಸ್ಥೆ ಅಂತಲ್ಲ ಯಾವುದೇ ಸಂಸ್ಥೆ ಲಾಭವಿಲ್ಲದೆ ಬಹಳ ವರ್ಷಗಳ ಕಾಲ ಭದ್ರವಾಗಿ ನೆಲೆ ನಿಲ್ಲಲು ಸಾಧ್ಯವಿಲ್ಲ. ಹೀಗಾಗಿ ಇಲ್ಲಿಯೂ ಲಾಭ ಮುಖ್ಯವಾಗುತ್ತದೆ, ಆದರೆ ಗಮನಿಸಿ ಅದನ್ನ ಪ್ರಮುಖ ಅಥವಾ ಮೊದಲ ಆದ್ಯತೆಯನ್ನಾಗಿಸಿಕೊಳ್ಳುವುದಿಲ್ಲ. ಇಂತಹ ಅತಿ ಸಣ್ಣ ವ್ಯತ್ಯಾಸಗಳು ಸಮಾಜದ ಮೇಲೆ , ಸಂಸ್ಥೆಯ ಮೇಲೆ ಅತಿ ದೊಡ್ಡ ಪರಿಣಾಮವನ್ನ ಬೀರುತ್ತವೆ. ಒಮ್ಮೆ ರತನ್ ಟಾಟಾ ಅವರನ್ನ ಜರ್ನಲಿಸ್ಟ್ ಒಬ್ಬರು ನೀವೇಕೆ ರಿಲಯನ್ಸ್ ಅಂಬಾನಿಯನ್ನ ಮೀರಿಸಿ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಆಗಲು ಸಾಧ್ಯವಿಲ್ಲ ಎನ್ನುವ ಮಾತನ್ನ ಕೇಳುತ್ತಾರೆ. ಅದಕ್ಕೆ ರತನ್ ಟಾಟಾ ನೀಡುವ ಉತ್ತರ ಮೇಲಿನದಾಗಿರುತ್ತದೆ. ಅವರೇ ಹೇಳುವ ಪ್ರಮುಖ ಅವರು ಬಿಸಿನೆಸ್ ಮ್ಯಾನ್ ಅಲ್ಲವೇ ಅಲ್ಲ. ಟಾಟಾ ಸಂಸ್ಥೆಗಳಲ್ಲಿ ಇತರ ಐಟಿ ಸಂಸ್ಥೆಗಳಲ್ಲಿ ನೀಡುವಷ್ಟು ವೇತನವನ್ನ ನೀಡದೆ ಹೋಗಬಹುದು ಆದರೆ ತನ್ನ ಕೆಲಸಗಾರರ ಕೆಲಸದ ಭದ್ರತೆಯ ಬಗ್ಗೆ ಮಾತ್ರ ಅದು ವಹಿಸುವ ಕಾಳಜಿ ಇನ್ನ್ಯಾವ ಸಂಸ್ಥೆಯೂ ವಹಿಸುವುದಿಲ್ಲ.

ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಟಾಟಾ ಸಮೂಹ ಸಂಸ್ಥೆಯ ಒಂದು ಪ್ರಮುಖ ಸಂಸ್ಥೆ. ಇದು ಟಿಸಿಎಸ್ ಎಂದು ವಿಶ್ವ ಪ್ರಸಿದ್ದಿ ಪಡೆದಿದೆ. ಇಂದಿಗೆ ಸರಿಸುಮಾರು ಐದು ಲಕ್ಷ ಕೆಲಸಗಾರರನ್ನ ಈ ಸಂಸ್ಥೆ ಹೊಂದಿದೆ. ಇದರಲ್ಲಿ ಭಾರತದ ಸಂಖ್ಯೆ ಎಷ್ಟು ? ಬೇರೆ ದೇಶದ ಕೆಲಸಗಾರರ ಸಂಖ್ಯೆ ಎಷ್ಟು ಎನ್ನುವುದು ಟಿಸಿಎಸ್ ಬಿಟ್ಟು ಕೊಟ್ಟಿಲ್ಲ. ಭಾರತದಲ್ಲಿನ ಕೆಲಸಗಾರರ ಸಂಖ್ಯೆ ಸಿಂಹಪಾಲು ಎನ್ನುವುದನ್ನ ಅಂಕಿ ಅಂಶದ ಸಹಾಯವಿಲ್ಲದೆ ಹೇಳಬಹುದು. ಇಂತಹ ಟಿಸಿಎಸ್ ಕೋವಿಡ್ ಲಾಕ್ ಡೌನ್ ಗೆ ನಲವತ್ತು ವರ್ಷಗಳ ಹಿಂದಿನಿಂದ ಇಂದಿಗೂ ತನ್ನ ನೌಕರರನ್ನ ಮನೆಯಿಂದ ಕೆಲಸ ಮಾಡಿಸಿಕೊಂಡ ಉದಾಹರಣೆ ಇರಲಿಲ್ಲ. ಯಾವಾಗ ೨೦೨೦ ರ ಮಾರ್ಚ್ ನಲ್ಲಿ ಲಾಕ್ ಡೌನ್ ಘೋಷಣೆಯಾಗುತ್ತದೆ , ಆಗ ಬೇರೆ ದಾರಿಯಿಲ್ಲದೆ ' ವರ್ಕ್ ಫ್ರಮ್ ಹೋಮ್ ' ಎನ್ನುವ ಹೊಸ ಭಾಷ್ಯಕ್ಕೆ ಅಣಿಯಾಗುತ್ತದೆ. ನಿಮಗೆಲ್ಲಾ ನೆನಪಿರಲಿ ಟಿಸಿಎಸ್ ಬಳಿ  ಡೆಚ್ ಬ್ಯಾಂಕ್ , ಸ್ಯಾಪ್ , ವರ್ಜಿನ್ ಅಟ್ಲಾಂಟಿಕ ದಂತಹ ದೈತ್ಯ ವಿದೇಶಿ ಗ್ರಾಹಕ ಸಂಸ್ಥೆಗಳಿವೆ. ಅವರ ಒಪ್ಪಿಗೆಯನ್ನ ಪಡೆಯದೇ ಇವರು ವರ್ಕ್ ಫ್ರಮ್ ಹೋಮ್ ನೀಡುವಂತಿಲ್ಲ. ಗ್ರಾಹಕರ ಕೆಲಸದ ಗೌಪ್ಯತೆಯನ್ನ ಪ್ರತಿಯೊಬ್ಬ ನೌಕರನೂ ಉಳಿಸಕೊಳ್ಳಬೇಕು. ಇದರ ಜೊತೆಗೆ ಸೈಬರ್ ಭದ್ರತೆ ಕೂಡ ಇನ್ನೊಂದು ದೊಡ್ಡ ಸವಾಲು. ಇವೆರಡನ್ನೂ ಹೇಗೋ ನಿಭಾಯಿಸುತ್ತೇನೆ ಎಂದರೆ , ಅದು ಗ್ರಾಹಕ ಸಂಸ್ಥೆಗೆ ಒಪ್ಪಿಗೆಯಾಗಬೇಕು , ಆಗಷ್ಟೇ ಇಂತಹ ಒಂದು ಬದಲಾವಣೆಗೆ ಅಂಕಿತ ಸಿಕ್ಕಲು ಸಾಧ್ಯ. ಗಮನಿಸಿ ಕೋವಿಡ್ ಲಾಕ್ ಡೌನ್ ಘೋಷಣೆಯಾದ ಕೇವಲ ಮೂರು ವಾರದಲ್ಲಿ ಟಿಸಿಎಸ್ ನ  ೯೬ ಪ್ರತಿಶತ ಕೆಲಸಗಾರರು ವರ್ಕ್ ಫ್ರಮ್ ಹೋಮ್ ನಲ್ಲಿದ್ದರು. ಸರಕಾರದ ಅನುಮತಿ ಪಡೆದು ಟಿಸಿಎಸ್ ತನ್ನ ನೌಕರರ ಮನೆಗೆ ಬೇಕಾದ ಕಂಪ್ಯೂಟರ್ ಸಹಿತ ಎಲ್ಲಾ ಸೌಕರ್ಯಗಳನ್ನ ಮಾಡಿಕೊಟ್ಟಿತ್ತು. ಕೋವಿಡ್ ನಿಯಮಾವಳಿಗಳನ್ನ ಪಾಲಿಸಿಕೊಂಡು ಇಂತಹ ಒಂದು ದೊಡ್ಡ ಸವಾಲನ್ನ ಟಿಸಿಎಸ್ ಸುಲಭ ಎನ್ನುವ ಮಟ್ಟಿಗೆ ಸಾಧಿಸಿ ಬಿಟ್ಟಿತು.

ಕೋವಿಡ್ ಗೆ ಮೊದಲು ಯಾವ ಟಿಸಿಎಸ್ ನಾಲ್ಕು ದಶಕಗಳ ಕಾಲ ತನ್ನ ನೌಕರರನ್ನ ಮನೆಯಿಂದ ಕೆಲಸ ಮಾಡಿಸಿಕೊಳ್ಳಲು ಸುತರಾಂ ಒಪ್ಪಿರಲಿಲ್ಲ ಅದೇ ಟಿಸಿಎಸ್ ಇದೀಗ ಹೇಳುತ್ತಿದೆ. ವರ್ಕ್ ಫ್ರಮ್ ಹೋಮ್ ಮಾಡೆಲ್ ಬಹಳಷ್ಟು ಚನ್ನಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ನಾವು ಇದರಲ್ಲಿ ಯಾವುದೇ ಬದಲಾವಣೆ ಮಾಡಲು ಬಯಸುವುದಿಲ್ಲ ಎನ್ನುವ ಹೇಳಿಕೆಯನ್ನ ನೀಡಿದೆ. ಕಳೆದ ವರ್ಷದ ಇದೆ ತ್ರೈಮಾಸಿಕದ ಲಾಭಕ್ಕೆ ಹೋಲಿಸಿದರೆ ಈ ವರ್ಷ ೩೨ ಪ್ರತಿಶತ ಹೆಚ್ಚಳ ಕಂಡಿದೆ. ಪಾಂಡೆಮಿಕ್ ನಿಂದ ಬಹಳ ಸಂಸ್ಥೆಗಳು ಕೆಲಸಗಾರನ್ನ ಕಡಿತ ಮಾಡಿದರೆ ಟಿಸಿಎಸ್ ಹೊಸದಾಗಿ ೪೫ ಸಾವಿರ ಕೆಲಸಗಾರನ್ನ ನೇಮಿಸಿಕೊಂಡಿದೆ. ೬೦ ಹೊಸ ಗ್ರಾಹಕರನ್ನ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

ಟಿಸಿಎಸ್ ನಂತರದ ಅತಿ ದೊಡ್ಡ ಐಟಿ ಸಂಸ್ಥೆ ಇನ್ಫೋಸಿಸ್ ಕೂಡ ಇದೆ ಹೈಬ್ರಿಡ್ ಮಾಡಲ್ ತನ್ನದಾಗಿಸಿಕೊಳ್ಳುವುದಾಗಿ ಹೇಳಿಕೆ ನೀಡಿದೆ. ಭಾರತದ ಎರಡು ಅತಿ ದೊಡ್ಡ ಐಟಿ ಸಂಸ್ಥೆಗಳು ತೆಗೆದುಕೊಂಡಿರುವ ಈ ನಿರ್ಧಾರ ಕೇವಲ ಐಟಿ ಕ್ಷೇತ್ರ ಮಾತ್ರವಲ್ಲ ಭಾರತದ ಎಕಾನಮಿ ಮೇಲೂ ಒಂದಷ್ಟು ಪರಿಣಾಮವನ್ನ ಬೀರುತ್ತದೆ. ಅಲ್ಲಿ ಕೆಲಸ ಮಾಡುವ ಜನರನ್ನ ಹೊರತು ಪಡಿಸಿ ಕೂಡ ಬಹಳಷ್ಟು ಜನರ ಬದುಕಿನಲ್ಲಿ ಬದಲಾವಣೆಯಾಗಲಿದೆ. ಇವುಗಳ ಬಗ್ಗೆ ಒಂದಷ್ಟು ತಿಳಿದಿಕೊಳ್ಳುವ ಪ್ರಯತ್ನವನ್ನ ಮಾಡೋಣ .

  1. ಉತ್ಪಾದಕತೆಯಲ್ಲಿ ಹೆಚ್ಚಳ : ಟಿಸಿಎಸ್ ಹೇಳುವ ಪ್ರಕಾರ ೨೫ ಪ್ರತಿಶತದ ತನಕ ಉತ್ಪಾದಕತೆಯಲ್ಲಿ ಹೆಚ್ಚಳ ಮಾಡ ಬಹುದು. ತನ್ನ ಗ್ರಾಹಕರಿಗೆ ನೀಡಿದ್ದ ಎಲ್ಲಾ ವಾಗ್ದಾನವನ್ನು ನಾವು ಪಾಂಡೆಮಿಕ್ ಸಮಯದಲ್ಲಿ ಮಾಡಿ ಮುಗಿಸಿದ್ದೇವೆ, ಅದೂ ಹೇಳಿದ ಸಮಯಕ್ಕೆ ಮುಂಚೆ ಎನ್ನುತ್ತಾರೆ ಟಿಸಿಎಸ್ ಸಂಸ್ಥೆಯ ಚೀಫ್ ಆಪರೇಟಿಂಗ್ ಆಫೀಸರ್ ಸುಬ್ರಮಣ್ಯಮ್. ತಮ್ಮ ಮನೆಯ ವಾತಾವರಣದಲ್ಲಿ , ಮೇಲ್ವಿಚಾರಕರ ಮಾತಿಲ್ಲದೆ, ಕಡಿಮೆ ಒತ್ತಡದಲ್ಲಿ ಕೆಲಸ ಮಾಡುವುದರಿಂದ ಇದು ಸಾಧ್ಯವಾಗಿದೆ. ಈ ಹಿಂದೆ ಭಾರತೀಯ ಉದ್ಯಮಪತಿಗಳು ತಮ್ಮ ನೌಕರ ಮನೆಯಿಂದ ಕೆಲಸ ಮಾಡುವುದರಲ್ಲಿ ಮೈಗಳ್ಳತನ ತೋರುತ್ತಾರೆ ಎನ್ನುವ ಮನೋಭಾವವನ್ನ ಹೊಂದಿದ್ದರು. ಬದಲಾದ ಜಗತ್ತು ಅದು ಸುಳ್ಳು ಎನ್ನುವುದನ್ನ ಸಾಬೀತು ಮಾಡುತ್ತಿದೆ.
  2. ಒಳ್ಳೆಯ ಕೆಲಸ ಮತ್ತು ಬದುಕಿನ ಸಮತೋಲನ ಸಾಧಿಸಲು ಸಾಧ್ಯವಾಗಿದೆ : ಮುಂಬೈ ಮತ್ತು ಬೆಂಗಳೂರಿನಂತಹ ದೊಡ್ಡ ನಗರಗಳಲ್ಲಿ ಐಟಿ ಕಾರ್ಮಿಕರು ಸರಿ ಸುಮಾರು ೧೧ ರಿಂದ ೧೩ ದಿನ ವಾರ್ಷಿಕ ಟ್ರಾಫಿಕ್ ನಲ್ಲಿ ಕಳೆದಿರುತ್ತಾರೆ ಎನ್ನುತ್ತದೆ ಅಂಕಿಅಂಶ. ಇಂತಹ ಸಮಯ ಅವರಿಗೆ ಉಳಿತಾಯವಾಗುತ್ತದೆ. ಜೊತೆಗೆ ಜಗತ್ತಿನ ಅತಿ ಹೆಚ್ಚು ಕುಲಷಿತ ನಗರಗಳಲ್ಲಿ ಭಾರತದ್ದೆ ಹೆಚ್ಚು ಕಾರುಬಾರು. ಹೀಗಾಗಿ ಇದು ಎರಡು ರೀತಿಯಲ್ಲಿ ಉಪಯೋಗವಾಗಿದೆ. ನೌಕರರ ಸಮಯ ಉಳಿತಾಯ ಜೊತೆಗೆ ನಗರದ ವಾಯು ಮಾಲಿನ್ಯ ತಡೆಗೂ ಒಂದಷ್ಟು ಕಾಣಿಕೆ.
  3. ಸಣ್ಣ ಪುಟ್ಟ ನಗರಗಳ ಬೆಳವಣಿಗೆ ಸಾಕಾರವಾಗುತ್ತದೆ : ಬೆಂಗಳೂರು ಅಥವಾ ಮುಂಬೈ , ದೆಹಲಿಯಂತಹ ದೊಡ್ಡ ನಗರಗಳಿಗೆ ಸಣ್ಣ ಪುಟ್ಟ ನಗರಗಳಿಂದ ಜನ ವಲಸೆ ಬರಲು ಪ್ರಮುಖ ಕಾರಣ , ಕೆಲಸದ ಲಭ್ಯತೆ , ಅವಕಾಶಗಳು. ಇದೀಗ ನೀವು ನಿಮ್ಮ ಮನೆಯಲ್ಲಿ ಕುಳಿತು ಕೆಲಸ ಮಾಡಿ ಎಂದರೆ ಅದು ಹೀಗೆ ಸಣ್ಣ ಪುಟ್ಟ ಊರಿನಿಂದ ವಲಸೆ ಬಂದವರಿಗೆ ವರದಾನ. ಹೀಗಾಗಿ ಅವರು ತಮ್ಮ ಊರುಗಳಲ್ಲಿ ಕುಳಿತು ಕೆಲಸ ಮಾಡುವುದರಿಂದ ಅವರ ಊರಿನ ಆರ್ಥಿಕತೆಗೆ ಹೆಚ್ಚು ಒಳಿತಾಗುತ್ತದೆ. ನಗರ ಪ್ರದೇಶದ ಮೇಲಿರುವ ಒತ್ತಡ ಕೂಡ ಒಂದಷ್ಟು ಕಡಿಮೆಯಾಗುತ್ತದೆ.
  4. ಆಫೀಸ್ ಎಕಾನಾಮಿಯಲ್ಲಿ ಕುಸಿತ : ಟಿಸಿಎಸ್ ಮತ್ತು ಇನ್ಫೋಸಿಸ್ ನಂತಹ ದೈತ್ಯರು ಇಂತಹ ನಿರ್ಧಾರವನ್ನ ತೆಗೆದುಕೊಂಡ ಮೇಲೆ , ಇತರ ಸಣ್ಣ ಪುಟ್ಟ ಐಟಿ ಕಂಪನಿಗಳು ಕೂಡ ಇದನ್ನೇ ಅನುಸರಿಸುತ್ತಾರೆ , ಇದರಲ್ಲಿ ಸಂಶಯವಿಲ್ಲ. ಹೀಗಾಗಿ ನಗರ ಪ್ರದೇಶದಲ್ಲಿ ತಲೆಯಿತ್ತಿದ್ದ ಆಫೀಸ್ ಜಾಗಗಳು ಖಾಲಿಯಾಗುವ ಸಾಧ್ಯತೆಗಳು ಇನ್ನಷ್ಟು ದಟ್ಟವಾಗಿದೆ. ಬದಲಾದ ಸನ್ನಿವೇಶಕ್ಕೆ ತಕ್ಕಂತೆ ಇಂತಹ ಕಟ್ಟಡದ ಮಾಲೀಕರೂ ಬದಲಾವಣೆಗೆ ಒಗ್ಗಿಕೊಳ್ಳಬೇಕಿದೆ.
  5. ಟ್ರಾವೆಲ್ , ಹೋಟೆಲ್ ಉದ್ಯಮಗಳಿಗೂ ಬೀಳಲಿದೆ ಕತ್ತರಿ : ಗಮನಿಸಿ , ಟಿಸಿಎಸ್ , ಇನ್ಫೋಸಿಸ್ ಒಳಗೊಂಡು ಅನೇಕ ಸಂಸ್ಥೆಗಳನ್ನ ನಂಬಿಕೊಂಡು ಸಾವಿರಾರು ಜನರು ಬದುಕನ್ನ ಕಟ್ಟಿಕೊಂಡಿದ್ದಾರೆ. ಈ ಸಂಸ್ಥೆಗಳ ನೌಕರರನ್ನ ಸಮಯಕ್ಕೆ ಸರಿಯಾಗಿ ಕೆಲಸದ ಜಾಗಕ್ಕೆ ಸೇರಿಸುವ ಕ್ಯಾಬ್ ಡ್ರೈವರ್ಗಳು , ಬೆಳಗಿನ ಉಪಹಾರದಿಂದ , ರಾತ್ರಿ ಊಟದ ವರೆಗೆ ಇವರ ಎಲ್ಲಾ ಬೇಕು ಬೇಡಗಳ ಹೊಣೆ ಹೊತ್ತಿದ್ದ ಕಾರ್ಪೊರೇಟ್ ಕೇಟರಿಂಗ್ ಸಂಸ್ಥೆಗಳು , ಇಂತಹ ಕೇಟರಿಂಗ್ ಸಂಸ್ಥೆಗಳಿಗೆ ಹಾಲು , ನೀರು , ತರಕಾರಿ ಸರಬರಾಜು ಮಾಡುವರ ಇನ್ನೊಂದು ಗುಂಪು ! ಹೀಗೆ ಸಾವಿರಾರು ಜನರ ಬದುಕು ಅತಂತ್ರವಾಗಲಿದೆ.

ಇದು ಕೇವಲ ಭಾರತದ ಕಥೆಯಲ್ಲ , ಅಮೇರಿಕಾ ಮತ್ತು ಯೂರೋಪುಗಳಲ್ಲಿ ಕೂಡ ಮನೆಯಿಂದ ಕೆಲಸ ಮಾಡುವುದು ಹೊಸ ಕೆಲಸದ ರೀತಿಯಾಗಿ ಬದಲಾವಣೆ ಕಾಣಲಿದೆ. ಅಮೆರಿಕಾದಲ್ಲಿನ ಗೂಗೆಲ್ ಸಮೇತ ಅನೇಕ ಸಂಸ್ಥೆಗಳು ವರ್ಕ್ ಫ್ರಮ್ ಹೋಮ್ ಕೆಲಸದ ರೀತಿಗೆ ಜೈ ಎಂದಿವೆ. ಗಮನಿಸಿ ನೋಡಿ ಯಾವಾಗ ದೈತ್ಯ ಸಂಸ್ಥೆಗಳು ಈ ರೀತಿಯ ದೊಡ್ಡ ನಿರ್ಧಾರವನ್ನ ತೆಗೆದುಕೊಳ್ಳುತ್ತವೆ ಆಗೆಲ್ಲಾ ಒತ್ತಡಕ್ಕೆ ಸಿಲುಕಿ ಇತರ ಸ್ಪರ್ಧಿ ಸಂಸ್ಥೆಗಳು , ಚಿಕ್ಕ ಪುಟ್ಟ ಸಂಸ್ಥೆಗಳು ಕೂಡ ಇದೆ ಮಾದರಿಯನ್ನ ಅನುಕರಿಸಬೇಕಾಗುತ್ತದೆ. ಮಾರುಕಟ್ಟೆಯಲ್ಲಿ ಉತ್ತಮ ಟ್ಯಾಲೆಂಟ್ ಇರುವ ನೌಕರರನ್ನ ಉಳಿಸಿಕೊಳ್ಳಲು ದೊಡ್ಡ ಸಂಸ್ಥೆಗಳು ಮಾಡಿದ ಎಲ್ಲಾ ಕಾರ್ಯವನ್ನ ಸಣ್ಣ ಪುಟ್ಟ ಕಂಪನಿಗಳು ಮಾಡಬೇಕಾಗುತ್ತದೆ. ಹೀಗಾಗಿ ಸಣ್ಣ ವೈರಸ್ ಜಾಗತಿಕ ಮಟ್ಟದಲ್ಲಿ ದೊಡ್ಡ ಬದಲಾವಣೆಯ ಪರ್ವಕ್ಕೆ ನಾಂದಿ ಹಾಡಿದೆ.

ಕೊನೆ ಮಾತು : ಒಂದು ನಾಣ್ಯಕ್ಕೆ ಎರಡು ಮುಖವಿರುತ್ತದೆ ಹಾಗೆಯೇ ವಿಷಯ ಯಾವುದೇ ಇರಲಿ ಅದಕ್ಕೆ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಸಾಧ್ಯತೆಗಳಿರುತ್ತವೆ. ಪ್ರಸ್ತುತ ವಿಷಯದಲ್ಲಿ ಕೂಡ ಈ  ಮಾತು ಸತ್ಯವಾಗಿದೆ. ಸಮಾಜದ ಒಂದು ವರ್ಗ ಇಂತಹ ಬದಲಾವಣೆಯಿಂದ ಬಹಳ ಖುಷಿಯಾಗಿದ್ದಾರೆ . ವಯಸ್ಸಾದ ತಂದೆ ತಾಯಿಯನ್ನ , ಹುಟ್ಟಿ ಬೆಳೆದ ಊರನ್ನ ಬಿಟ್ಟು ಬೆಂಗಳೂರು ಅಥವಾ ಮುಂಬೈ ನಂತಹ ಇಕ್ಕಟ್ಟು ಪ್ರದೇಶಗಳಲ್ಲಿ ವಿಧಿಯಿಲ್ಲದೇ ಬದುಕುತ್ತಿದ್ದ ಸಾವಿರಾರು ಜನರ ಮುಖದಲ್ಲಿ ಖುಷಿಯ ಛಾಯೆ ಆವರಿಸಿದೆ. ಸಣ್ಣ ಪುಟ್ಟ ನಗರಗಳಲ್ಲಿ ಜೀವನ ಶೈಲಿ , ಜೀವನ ಮಟ್ಟ ಬಹಳ ಉತ್ತಮವಾಗಿತ್ತದೆ. ಇದೆ ಸಮಯದಲ್ಲಿ ಸಾಲ ಮಾಡಿ ಕಾರು ಕೊಂಡ ಕ್ಯಾಬ್ ಸರ್ವಿಸ್ ನೀಡುತ್ತಿದ್ದ ಸಣ್ಣ ಪುಟ್ಟ ಸಂಸ್ಥೆಗಳು , ವ್ಯಕ್ತಿಗಳು ಬೀದಿಗೆ ಬೀಳುತ್ತಾರೆ. ಅವರ ಮುಖದಲ್ಲಿ ದುಃಖದ ಛಾಯೆ ತುಂಬಿದೆ. ಬದಲಾದ ಕಾಲಕ್ಕೆ ತಕ್ಕಂತೆ ಅವರು ಹೊಸ ಬದುಕನ್ನ ಕಟ್ಟಿಕೊಳ್ಳುವ ಸವಾಲು ಅವರ ಮುಂದಿದೆ. ಸಣ್ಣಪುಟ್ಟ ನಗರದ ಆರ್ಥಿಕತೆ ಚೇತರಿಕೆ ಕಂಡರೆ , ಮಹಾನಗರದ ಯಾವುದೋ ಒಂದು ಬಡಾವಣೆಯಲ್ಲಿ ವ್ಯಾಪಾರ ಕುಸಿತ ಕಾಣುತ್ತದೆ.

ಒಟ್ಟಿನಲ್ಲಿ ಸಮಾಜದ ಒಂದು ವರ್ಗ ಸಂಭ್ರಮಿಸುತ್ತಿದರೆ , ಇನ್ನೊಂದು ವರ್ಗ ಶೋಕದಲ್ಲಿ ತೊಡಗಿರುತ್ತದೆ. ಬದಲಾವಣೆ ಎನ್ನುವುದು ಜೀವನದ ತಪ್ಪಿಸಲಾಗದ ಒಂದು ಕ್ರಿಯೆ. ಬದಲಾವಣೆಗೆ ಒಗ್ಗಿಕೊಂಡರಷ್ಟೇ ಇಲ್ಲಿ ಬದುಕಲು , ಬೆಳೆಯಲು , ಮುಂದಿನ ದಾರಿಯಲ್ಲಿ ನಾಯಕರಾಗಲು ಸಾಧ್ಯ. ಅಯ್ಯೋ ಎಂದು ಕೊರಗುತ್ತಾ ಕುಳಿತವರನ್ನ ಸಮಾಜ ಸ್ವೀಕರಿಸುವುದಿಲ್ಲ. ನಾಲ್ಕು ದಶಕಗಳಿಂದ ತನ್ನ ನೌಕರರನ್ನ ಮನೆಯಲ್ಲಿ ದುಡಿಸಲು ಇಚ್ಛಿಸದ ಟಿಸಿಎಸ್ ಕೇವಲ ಮೂರು ವಾರದಲ್ಲಿ ಬದಲಾವಣೆಗೆ ಒಗ್ಗಿಕೊಂಡಿತು ಮಾತ್ರವಲ್ಲ ಅದರಲ್ಲಿ ಯಶಸ್ಸನ್ನ ಕೂಡ ಕಂಡಿದೆ. ಇಂದು ಕೇವಲ ಬಲಿಷ್ಠವಾದವುಗಳ ಉಳಿವಿನ ಸಮಯವಲ್ಲ , ವೇಗವಾಗಿ ಪರಿಸ್ಥಿತಿಗೆ ಹೊಂದಿಕೊಳ್ಳುವವರ ಉಳಿವು. ಮುಂದಿನ ದಿನಗಳು ಫ್ಲೆಕ್ಸಿಬಿಲಿಟಿ ಮತ್ತು ಅಡಾಪ್ಟಬಿಲಿಟಿ ಮೂಲಮಂತ್ರವನ್ನಾಗಿ ಮಾಡಿ ಕೊಂಡವರದ್ದು ಎನ್ನುವುದು ನಿರ್ವಿವಾದ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com