ಎಲ್ಲರ ಗಮನ ಸೆಳೆಯುವ ಹಾವಭಾವ ಪ್ರಕಟ; ಇದು ಹಿಸ್ತ್ರಿಯಾನಿಕ್ ಎಂಬ ವ್ಯಕ್ತಿತ್ವ ದೋಷ! (ಚಿತ್ತ ಮಂದಿರ)
ಡಾ. ಸಿ.ಆರ್. ಚಂದ್ರಶೇಖರ್, ಮನೋವೈದ್ಯ
ರಮ್ಯಾಳಗೆ ಹಿಸ್ತ್ರಿಯಾನಿಕ್ ವ್ಯಕ್ತಿತ್ವ ಸಮಸ್ಯೆ ಎಂಬುದು ಸ್ಪಷ್ಟವಾಗಿತ್ತು. ಇದು ಭಾವೋನ್ಮಾದದ ನಾಟಕೀಯವಾಗಿ ತನ್ನ ಬೇಕು ಬೇಡಗಳನ್ನು ಪ್ರಕಟಿಸುವ, ಪ್ರೌಢತೆ ಇಲ್ಲದೆ, ಬೇಜವಾಬ್ದಾರಿಯಿಂದ ಪ್ರತಿಕ್ರಿಯಿಸುವ ವ್ಯಕ್ತಿತ್ವ ದೋಷ.
Published: 03rd September 2021 07:00 AM | Last Updated: 15th October 2021 12:54 PM | A+A A-

ಹಿಸ್ತ್ರಿಯಾನಿಕ್ (ಸಾಂಕೇತಿಕ ಚಿತ್ರ)
“ನೋಡಲು ಬೆಳ್ಳಗೆ ಸುಂದರವಾಗಿದ್ದಾಳೆ. ಒಳ್ಳೆಯ ಮನೆತನ. ಒಬ್ಬಳೇ ಮಗಳು” ಎಂದು ರಮ್ಯಾಳನ್ನು ನಮ್ಮ ಮನೆಯ ಸೊಸೆಯನ್ನಾಗಿ ತಂದುಕೊಂಡೆವು.
ಹೊರಗೆ ಥಳುಕು ಒಳಗೆ ಹುಳುಕು ಎಂದು ನಮಗೀಗ ಅರ್ಥವಾಗಿದೆ. ಅವಳು ನಕ್ಕರೆ ನಾಲ್ಕು ಮನೆಗೆ ಕೇಳಿಸುತ್ತೆ. ಅತ್ತರೆ ಹತ್ತು ಮನೆಗೆ ಕೇಳಿಸುತ್ತೆ. ಮಕ್ಕಳ ಹಾಗೆ ಹಠ ಮಾಡುತ್ತಾಳೆ. ಹೆಚ್ಚು ಹೊತ್ತನ್ನ ತನ್ನ ಅಲಂಕಾರದೆಲ್ಲೆ ಕಳೆಯುತ್ತಾಳೆ. ತುಟಿಗೆ ಬಣ್ಣ, ಕೆನ್ನೆಗೆ ರೋಸು, ಕಣ್ಣಿಗೆ ಕಾಡಿಗೆ, ಏನೆಲ್ಲ ಹೇಳಿ. ನಿಮ್ಮ ಸೊಸೆ ಸಿನೇಮಾ ನಟಿಯಂತಿದ್ದಾಳೆ ಎಂದು ನೆಂಟರಿಷ್ಟರು ಹೇಳುತ್ತಾರೆ.
ಶುದ್ಧ ಸೋಮಾರಿ ಬೆಳಗ್ಗೆ ಏಳುವುದು ಏಳೂವರೆ ಎಂಟಕ್ಕೆ. ಚಿಕ್ಕಂದಿನಿಂದಲೂ ಇದೇ ಅಭ್ಯಾಸ "ಅತ್ತೆ, ಬೇಗ ಎಳು ಎಂದು ಹೇಳಬೇಡಿ ಪ್ಲೀಸ್" ಎನ್ನುತ್ತಾಳೆ. ಯಾವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುವುದಿಲ್ಲ, ಆದರೆ ಮಾತನಾಡುವುದು, ಹೊರಗೆ ಸುತ್ತಾಡುವುದು, ಶಾಪಿಂಗ್ ಮಾಡುವುದು, ಸಭೆ ಸಮಾರಂಭದಲ್ಲಿ ಭಾಗಿಯಾಗುವುದೆಂದರೆ ಬಲು ಇಷ್ಟ, ಮನೆಗೆ ಬಂದವರೊಡನೆ ಮಾತಿಗೆ ಕುಳಿತರೆ ಮುಗಿಯಿತು.
ಇದನ್ನೂ ಓದಿ: ವೈಜ್ಞಾನಿಕ ಮನೋಭಾವ ದಿನ: ಸರಿ ನಂಬಿಕೆಗಳನ್ನು ಪಾಲಿಸಿ, ಹುಸಿ ನಂಬಿಕೆಗಳನ್ನು ಕೈಬಿಡುವುದು ಹೇಗೆ?
ಬಂದವರಿಗೆ ನೀರು ಬೇಕೇ ಕಾಫಿ ಬೇಕೆ ಎಂದು ವಿಚಾರಿಸುವುದಿಲ್ಲ ಆ ಕೆಲಸ ನಾನೇ ಮಾಡಬೇಕು ನನ್ನ ಮಗನಿಗೆ ಕಂಪನಿಯಲ್ಲಿ ಕೆಲಸ ಬೆಳಗ್ಗೆ ಏಳಕ್ಕೆ ಮನೆ ಬಿಟ್ಟರೆ ರಾತ್ರಿ ಎಂಟಕ್ಕೋ ಒಂಬತ್ತಕ್ಕೋ ಮನೆಗೆ ಬರುತ್ತಾನೆ. ಶನಿವಾರ- ಭಾನುವಾರ ಬಂತೆಂದರೆ ಹೊರಗಡೆ ಕರೆದುಕೊಂಡು ಹೋಗಿ ಎಂದು ಅವನ ಬೆನ್ನು ಹತ್ತುತ್ತಾಳೆ. ಹೋಟೆಲ್ ಸಿನೇಮ ಮಾಲ್ ಗಳನ್ನು ಸುತ್ತು ಹಾಕುತ್ತಾಳೆ.
ಬೇಕಾದ್ದು ಬೇಡವಾದದ್ದನ್ನು ಕೊಂಡು ತರುತ್ತಾಳೆ, ಅವಳು ಬಂದಮೇಲೆ ನಮ್ಮ ಮನೆ ಡಿಪಾರ್ಟ್ಮೆಂಟಲ್ ಸ್ಟೋರ್, ಫ್ಯಾನ್ಸಿ ಸ್ಟೋರ್ ನಂತಿದೆ ಎಂದು ನನ್ನ ಎರಡನೇ ಮಗ ತಮಾಷೆ ಮಾಡುತ್ತಾನೆ .ಯಾವುದೇ ಸಮಾರಂಭಕ್ಕೆ ಹೋಗಬೇಕಾದರೆ ಬ್ಯೂಟಿ ಪಾರ್ಲರ್ಗೆ ಹೋಗಿ ಮೇಕಪ್ ಮಾಡಿಸಿಕೊಳ್ಳುತ್ತಾಳೆ. ಸಮಾರಂಭದಲ್ಲಿ ಅವಳೇ ಕೇಂದ್ರಬಿಂದುವಾಗುತ್ತಾಳೆ.
ಅನಗತ್ಯವಾಗಿ ನಗುವುದು, ಜೋರಾಗಿ ಮಾತನಾಡುವುದು ಮಾಡುತ್ತಾಳೆ. ಕೆಲವು ಸಲ ನನ್ನ ಮಗನಿಗೆ ಇದರಿಂದ ಮುಜುಗರವಾಗುತ್ತದೆ. ಎಗ್ಗಿಲ್ಲದೆ ಗಂಡಸರ ಕೈ ಕುಲುಕುತ್ತಾಳೆ. ಮೈ ಮುಟ್ಟುತ್ತಾಳೆ. ಏನಾದರೂ ಕಷ್ಟದ ಕೆಲಸ ಹೇಳಿದರೆ ಹೋಗಿ ರೂಮಿನಲ್ಲಿ ಮಲಗಿ ಬಿಡುತ್ತಾಳೆ. ವಿಪರೀತ ತಲೆನೋವು ಹೊಟ್ಟೆನೋವೆಂದು ನರಳುತ್ತಾಳೆ, ಡಾಕ್ಟರನ್ನು ಕರೆಸಿದರೆ ಅವರು ನೋಡಿ ಏನು ತೊಂದರೆ ಇಲ್ಲ ಎನ್ನುತ್ತಾರೆ, ನಾಟಕ ಮಾಡುತ್ತಾಳೋ ನಿಜವಾಗಿ ನೋವನ್ನು ಅನುಭವಿಸುತ್ತಾಳೋ ಒಂದು ಗೊತ್ತಾಗುವುದಿಲ್ಲ.
ಗಂಡನೊಂದಿಗೆ ಕೆಲವು ದಿನಗಳು ಗಿಳಿಮರಿಯಂತಿರುತ್ತಾಳೆ. ಕೆಲವು ದಿನ ಮುಖ ಊದಿಸಿಕೊಂಡು, ಮಾತನಾಡದೆ ಅವನ ಹತ್ತಿರ ಹೋಗದೆ ದೂರವೇ ಉಳಿಯುತ್ತಾಳೆ. ಅವಳ ಈ ಕೆಟ್ಟ ಮೂಡಿಗೆ ಕಾರಣವೇ ಬೇಕಿಲ್ಲ. ನಯ-ವಿನಯಕ್ಕಿಂತ ಒರಟುತನವೇ ಹೆಚ್ಚು, ಇತರರ ಕ್ಷೇಮ-ಸಂತೋಷಕ್ಕಿಂತ ಅವಳ ಕ್ಷೇಮ-ಸಂತೋಷವೇ ಅವಳಿಗೆ ಹೆಚ್ಚು. ಸ್ವಾರ್ಥಿ ಎಂದರೂ ಅಡ್ಡಿ ಇಲ್ಲ.
ಆಗಾಗ ಅವಳಿಗೆ ಪ್ರಜ್ಞೆ ತಪ್ಪುತ್ತದೆ. ಅವಳ ಇಷ್ಟಕ್ಕೆ ವಿರುದ್ಧವಾಗಿ ಯಾರಾದರೂ ಮಾತಾಡಿದರೆ, ಅವಳು ಮಾಡಿದ್ದು, ಹೇಳಿದ್ದು ಸರಿ ಇಲ್ಲ ಎಂದರೆ ಸಾಕು, ತೇಲುಗಣ್ಣು ಮಾಡುತ್ತಾ ತಲೆಸುತ್ತು ಬರುತ್ತಿದೆ ಎಂದು ಹೇಳುತ್ತಾ, ಕುಸಿದು ಕೂರುತ್ತಾಳೆ ಇಲ್ಲವೇ ಮಲಗಿ ಬಿಡುತ್ತಾಳೆ, 10 ನಿಮಿಷವಾದ ಮೇಲೆ ಕಣ್ಣು ಬಿಟ್ಟು, ನನಗೇನಾಯಿತು ಎಂದು ನಮ್ಮನ್ನೇ ಕೇಳುತ್ತಾಳೆ.
ಇದನ್ನೂ ಓದಿ: ಮಾನಸಿಕ ಆರೋಗ್ಯ ವರ್ಧನೆಗೆ ಏನು ಮಾಡಬೇಕು? ಈ 15 ಸೂತ್ರಗಳನ್ನು ಪಾಲಿಸಿದರೆ ಸಾಕು!
ಸ್ವಲ್ಪ ವೀಕ್ನೆಸ್ ಇದೆ. ಇದೇನು ಫಿಟ್ಸ್ ಅಲ್ಲ ಎಂದರು ವೈದ್ಯರು. ಹಾಗೇ ನಿಮ್ಮನ್ನು ಕಾಣಿರಿ ಎಂದರು. ಅದಕ್ಕೆ ಸಮಾಧಾನ ಸೆಂಟರ್ ನ ಅಡ್ರೆಸ್ ಪಡೆದು, ನಿಮ್ಮಲ್ಲಿಗೆ ಬಂದಿದ್ದೇವೆ. “ರಮ್ಯ ಹೀಗೇಕೆ ಮಾಡುತ್ತಾಳೆ?”ಎಂದರು ಆಕೆಯ ಅತ್ತೆ ವಿಮಲಮ್ಮ.
ರಮ್ಯಾಳಗೆ ಹಿಸ್ತ್ರಿಯಾನಿಕ್ ವ್ಯಕ್ತಿತ್ವ ಸಮಸ್ಯೆ ಎಂಬುದು ಸ್ಪಷ್ಟವಾಗಿತ್ತು. ಇದು ಭಾವೋನ್ಮಾದದ ನಾಟಕೀಯವಾಗಿ ತನ್ನ ಬೇಕು ಬೇಡಗಳನ್ನು ಪ್ರಕಟಿಸುವ, ಪ್ರೌಢತೆ ಇಲ್ಲದೆ, ಬೇಜವಾಬ್ದಾರಿಯಿಂದ ಪ್ರತಿಕ್ರಿಯಿಸುವ ವ್ಯಕ್ತಿತ್ವ ದೋಷ.
ಹಿಸ್ತ್ರಿಯಾನಿಕ್ ವ್ಯಕ್ತಿತ್ವದ ಪ್ರಮುಖ ಲಕ್ಷಣಗಳು
- ಆಡಂಬರದ, ಇತರರ ಗಮನ ಸೆಳೆಯುವಂತೆ ಅಲಂಕಾರ ಮಾಡಿಕೊಳ್ಳುವುದು. ಗುಂಪಿನಲ್ಲಿ ಎದ್ದುಕಣುವಂತೆ ಹಾವಭಾವಗಳನ್ನು ಪ್ರಕಟಿಸುವುದು.
- ಕೆಲಸ- ಕರ್ತವ್ಯ ಜವಾಬ್ದಾರಿಗಳ ನಿರ್ವಹಣೆಯಲ್ಲಿ ಅಸಡ್ಡೆ, ನಿರ್ಲಕ್ಷ್ಯ.
- ಸಮಸ್ಯೆ- ವಿಷಯ ವಿಶ್ಲೇಷಣ ಮತ್ತು ಸರಿನಿರ್ಧಾರಗಳನ್ನು ಮಾಡುವ ಸಾಮರ್ಥ್ಯ ಚತುರತೆ ಇಲ್ಲದಿರುವುದು. ಪರವಾಲಂಬಿ ಯಂತೆ ಬದುಕುವುದು.
- ವಯಸ್ಸಿಗೆ ತಕ್ಕಂತಹ ವಿವೇಚನೆ ಯುಕ್ತ ಕ್ರಿಯೆ- ಪ್ರತಿಕ್ರಿಯೆಗಳನ್ನು ತೋರುವುದಿಲ್ಲ ಮಕ್ಕಳಂತೆ ಹಠ ಮಾಡುವುದು.
- ಭಾವನೆಗಳಲ್ಲಿ ನೈಜತೆ ಇರುವುದಿಲ್ಲ–ಕೃತಕತೆ, ನಾಟಕೀಯತೆ ಹೆಚ್ಚು.
- ತನ್ನ ಬೇಕು ಬೇಡಗಳನ್ನು ಅವುಸರಿ ಇರಲಿ, ಇಲ್ಲದಿರಲಿ, ಅಗತ್ಯವಿರಲಿ, ಇಲ್ಲದಿರಲಿ, ಪೂರೈಸುವಂತೆ, ಮನೆಯವರನ್ನು ಒತ್ತಾಯಿಸುವುದು, ಪೂರೈಸದಿದ್ದರೆ, ಹಿಂಸಾಚಾರ, ಮನೆ ಬಿಟ್ಟುಹೋಗುವುದು, ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಹೆದರಿಸುವುದು. ಉಪವಾಸ ಕೂರುವುದು, ಮುನಿಸಿಕೊಂಡು ದಿನಗಟ್ಟಳೆ ಮಾತಾಡದೇ ಕೂರುವುದು.
- ಇತರರ ಸವಿ ಮಾತುಗಳಿಗೆ, ಹೊಗಳಿಕೆಗೆ ಉಬ್ಬಿ, ಅವರು ಹೇಳಿದಂತೆ ಕೇಳುವುದು, ಸುಲಭಕ್ಕೆ ಮೋಸ ಹೋಗುವುದು. ಮೂಢನಂಬಿಕೆಗಳಿಗೆ ಜೋತುಬೀಳುವುದು.
- ಮೈಮೇಲೆ ದೇವರು/ದೆವ್ವ, ಬರುವಂತೆ ಆಡುವುದು, ಹುಸಿ ರೋಗಲಕ್ಷಣಗಳನ್ನು ಪ್ರಕಟಿಸುವುದು.
ಹಿಸ್ತ್ರಿಯಾನಿಕ್ ವ್ಯಕ್ತಿತ್ವಕ್ಕೆ ಚಿಕಿತ್ಸೆ
ಈ ವ್ಯಕ್ತಿತ್ವ ದೋಷಕ್ಕೆ ಚಿಕಿತ್ಸೆ ಸುಲಭವಲ್ಲ, ಬದಲಾಗಲು ಇವರು ಒಪ್ಪುವುದಿಲ್ಲ. ದೀರ್ಘಕಾಲದ ಆಪ್ತ ಸಮಲೋಚನೆ -ನಡೆವಳಿಕೆ ಚಿಕಿತ್ಸೆಯಿಂದ ಸ್ವಲ್ಪ ಪ್ರಯೋಜನವಿದೆ.
ಪ್ರಿಯ ಓದುಗರೇ,
ಮಾನಸಿಕ ಸಮಸ್ಯೆಗಳ ಕುರಿತು ನಿಮಗೆ ಏನಾದರು ಗೊಂದಲಗಳಿದ್ದರೆ, ಅಥವಾ ಅದಕ್ಕೆ ಸಂಬಂಧಪಟ್ಟ ಯಾವುದಾದರು ವಿಷಯಗಳ ಬಗ್ಗೆ ಇನ್ನಷ್ಟು ತಿಳಿದಿಕೊಳ್ಳಬಯಸಿದರೆ, ಅಥವಾ ಆ ತರಹದ ಯಾವುದಾದರು ಸಮಸ್ಯೆ ಎದುರಿಸುತ್ತಿದ್ದರೆ, ದಯವಿಟ್ಟು kponline@kannadaprabha.com ಇಮೇಲ್ ವಿಳಾಸಕ್ಕೆ ಮೇಲ್ ಮಾಡಿ. ನಿಮ್ಮ ಸಮಸ್ಯೆಗೆ ಮಾನಸಿಕ ಮನೋವೈದ್ಯರಾದ ಡಾ. ಸಿ.ಆರ್. ಚಂದ್ರಶೇಖರ್ ಉತ್ತರಿಸುತ್ತಾರೆ.
ಡಾ. ಸಿ.ಆರ್. ಚಂದ್ರಶೇಖರ್, ಮನೋವೈದ್ಯ
drcrchandrashekhar@gmail.com