ವಿದ್ಯುತ್ ಸರಬರಾಜು ಖಾಸಗೀಕರಣ ಎಷ್ಟು ಸರಿ? (ಹಣಕ್ಲಾಸು)

ಈ ಎಲೆಕ್ಟ್ರಿಸಿಟಿ ಪ್ರೈವೆಟೈಸೇಷನ್ ಬಿಲ್ ನ್ನು 08/08/2022 ರಂದು ಲೋಕಸಭೆಯ ಪಾರ್ಲಿಮೆಂಟರಿ ಬೋರ್ಡ್ ಎದುರು ಒಪ್ಪಿಗೆಗೆ ಇಡಲಾಗಿದೆ. ಹೀಗೆ ವಿದ್ಯುತ್ ಖಾಸಗೀಕರಣ ಗೊಳಿಸುವುದರಿಂದ ಆಗುವ ಸಾಧಕ ಮತ್ತು ಬಾಧಕಗಳನ್ನ ನೋಡೋಣ.
ವಿದ್ಯುತ್ ಖಾಸಗೀಕರಣ ಮಸೂದೆ (ಸಾಂಕೇತಿಕ ಚಿತ್ರ)
ವಿದ್ಯುತ್ ಖಾಸಗೀಕರಣ ಮಸೂದೆ (ಸಾಂಕೇತಿಕ ಚಿತ್ರ)

ಕೇಂದ್ರ ಸರಕಾರ ಅತ್ಯಂತ ಲಾಭದಾಯಕವಾಗಿದ್ದ ಎಲ್ಐಸಿ ಸಂಸ್ಥೆಯ 3.5 ಪ್ರತಿಶತ ಷೇರುಗಳನ್ನ ಮಾರಾಟಕ್ಕಿಟ್ಟದ್ದು ಮುಂದೊಂದು ದಿನ ಅದನ್ನ ಪೂರ್ಣವಾಗಿ ಖಾಸಗೀಕರಣಗೊಳಿಸುವ ಮೊದಲ ಹಂತವೆಂದು ಹಲವರು ವಿಮರ್ಶಿಸಿದ್ದರು. ಗಮನಿಸಿ ನೋಡಿ ಯಾವಾಗ ಕೆಲವೊಂದು ಪಬ್ಲಿಕ್ ಸೆಕ್ಟರ್ ಸಂಸ್ಥೆಗಳು ಅಥವಾ ಪೂರ್ಣ ಸರಕಾರಿ ಸಂಸ್ಥೆಗಳು ನಿಗದಿತ ರೀತಿಯಲ್ಲಿ ಫಲಿತಾಂಶವನ್ನ ನೀಡದೆ ಕಾರ್ಯ ನಿರ್ವಹಿಸುತ್ತದೆ ಆಗ ಅವುಗಳಲ್ಲಿ ಕಾರ್ಯ ಕ್ಷಮತೆಯನ್ನ ಹೆಚ್ಚಿಸುವ ಸಲುವಾಗಿ ಅವುಗಳನ್ನ ಖಾಸಗೀಕರಣಗೊಳಿಸಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಸಂಸ್ಥೆ ಹೆಚ್ಚು ಲಾಭದಾಯಕವಾಗಿದ್ದರು ಅವುಗಳನ್ನ ಖಾಸಗೀಕರಣಗೊಳಿಸುವ ಉದ್ದೇಶ ಎದ್ದು ಕಾಣುತ್ತಿದೆ. 

ಸರಕಾರದ ಕೆಲಸ ಕೇವಲ ಲಾಭ ಮಾಡುವುದಷ್ಟೇ ಅಲ್ಲ, ಸೇವೆ ನೀಡುವುದು ಕೂಡ ಹೌದು, ಆ ನಿಟ್ಟಿನಲ್ಲಿ ಹಲವಾರು ಸಂಸ್ಥೆಗಳನ್ನ ಸರಕಾರ ನಡೆಸುವುದು ಒಳ್ಳೆಯದು. ಈ ಮಾತುಗಳು ಚರ್ಚೆಗೆ ಬರಲು ಕಾರಣ ಎಲೆಕ್ಟ್ರಿಸಿಟಿ ಅಮೆಂಡ್ಮೆಂಟ್ ಬಿಲ್ 2022. ಹೌದು ಈ ಎಲೆಕ್ಟ್ರಿಸಿಟಿ ಪ್ರೈವೆಟೈಸೇಷನ್ ಬಿಲ್ (ವಿದ್ಯುತ್ ಖಾಸಗೀಕರಣ ಮಸೂದೆ)ನ್ನು ಸೋಮವಾರ ಅಂದರೆ 08/08/2022 ರಂದು ಲೋಕಸಭೆಯ ಪಾರ್ಲಿಮೆಂಟರಿ ಬೋರ್ಡ್ ಎದುರು ಒಪ್ಪಿಗೆಗೆ ಇಡಲಾಗಿದೆ. ಹೀಗೆ ವಿದ್ಯುತ್ ಖಾಸಗೀಕರಣ ಗೊಳಿಸುವುದರಿಂದ ಆಗುವ ಸಾಧಕ ಮತ್ತು ಬಾಧಕಗಳನ್ನ ನೋಡೋಣ.

ಖಾಸಗೀಕರಣ ಎಂದರೇನು?

ಒಂದು ಸಂಸ್ಥೆಯ ಮಾಲೀಕತ್ವ, ಆಪರೇಷನ್ ಮತ್ತು ಕಂಟ್ರೋಲ್ ಹೀಗೆ ಎಲ್ಲವನ್ನೂ ಸರಕಾರಿ ಅಥವಾ ಪಬ್ಲಿಕ್ ಸೆಕ್ಟರ್ ಪರಿಧಿಯಿಂದ ಹೊರತೆಗೆದು ಮೂರನೆಯ ವ್ಯಕ್ತಿಗೆ ಅಥವಾ ಸಂಸ್ಥೆಗೆ ನೀಡುವ ಕ್ರಿಯೆಗೆ ಖಾಸಗೀಕರಣ ಎನ್ನುತ್ತಾರೆ. ಸಾಮಾನ್ಯವಾಗಿ ಆರ್ಥಿಕವಾಗಿ ಮತ್ತು ಕಾರ್ಯಕ್ಷಮತೆ ಎರಡರಲ್ಲೂ ಇನ್ನಿಲ್ಲದ ಸೋಲು ಕಂಡ ಸಂಸ್ಥೆಗಳನ್ನ ಪುನರುಜ್ಜೀವನಗೊಳಿಸುವ ಉದ್ದೇಶದಿಂದ ಇಂತಹ ಖಾಸಗೀಕರಣವನ್ನ ಮಾಡಲಾಗುತ್ತದೆ.

ಎಲೆಕ್ಟ್ರಿಸಿಟಿ ಅಮೆಂಡ್ಮೆಂಟ್ ಬಿಲ್ ಉದ್ದೇಶವೇನು?

ನಮ್ಮೆಲ್ಲರ ಮನೆಯಲ್ಲಿ ಹಿಂದೆ ಬಿಎಸ್ಎನ್ಎಲ್ ವತಿಯಿಂದ ಲ್ಯಾಂಡ್ಲೈನ್ ಇದ್ದವು, ಬಿಲ್ ಅಲ್ಲಿಂದ ಬರುತ್ತಿತ್ತು ಅಲ್ಲವೇ? ಈಗೇನಾಗಿದೆ ಆ ಜಾಗದಲ್ಲಿ ಹಲವಾರು ಸೇವೆ ನೀಡುವ ಸಂಸ್ಥೆಗಳು ಬಂದಿವೆ. ಗ್ರಾಹಕನ ಮುಂದೆ ಯಾರ ಸೇವೆಯನ್ನ ಪಡೆಯ ಬೇಕು ಎನ್ನುವ ಆಯ್ಕೆ ಇರುತ್ತದೆ. ಇದೆ ಮಾದರಿಯಲ್ಲಿ ವಿದ್ಯುತ್ ಸರಬರಾಜು ಮಾಡುವ ಹಲವಾರು ಸಂಸ್ಥೆಗಳು ಇದ್ದರೆ ಒಳ್ಳೆಯದು ಎನ್ನುವುದು ಈ ಬಿಲ್ ನ ಉದ್ದೇಶ. ಅರ್ಥ ಬಹಳ ಸರಳ ಈಗಾಗಲೇ ವಿದ್ಯುತ್ ಬಿಲ್ ಗಳ ಹಣವನ್ನ ವಸೂಲಿ ಮಾಡುವುದು ಖಾಸಗೀಕರಣಗೊಳಿಸಲಾಗಿದೆ, ಅದೇ ರೀತಿಯಲ್ಲಿ ವಿದ್ಯುತ್ ಸರಬರಾಜು ಕೂಡ ಹಲವಾರು ಖಾಸಗಿ ಸಂಸ್ಥೆಗಳಿಗೆ ನೀಡಿದರೆ ಆಗ ಗ್ರಾಹಕ ತನಗೆ ಯಾರು ಬೇಕು ಅವರಿಂದ ವಿದ್ಯುತ್ ಪಡೆಯಬಹುದು. ಟೆಲಿಕಾಮ್ ಕ್ಷೇತ್ರದಲ್ಲಿ ಆಗಿರುವ ಬದಲಾವಣೆಯನ್ನ ನೀವು ಗಮನಿಸಿ ನೋಡಿ, ಈ ಬಿಲ್ ಪಾಸಾದರೆ ವಿದ್ಯುತ್ ಕ್ಷೇತ್ರದಲ್ಲಿ ಕೂಡ ಅದೇ ರೀತಿಯ ಬದಲಾವಣೆಯನ್ನ ನೀವು ಕಾಣಬಹುದು.

ಖಾಸಗೀಕರಣ ಮಾಡಿಕೊಳ್ಳಲಿ ಬಿಡಿ ನಮಗೇನು ಎನ್ನುವ ಮುನ್ನ:

  1. ಈ ಕಾರ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ 27 ಲಕ್ಷ ಕೆಲಸಗಾರರ ಭವಿಷ್ಯ ಮಂಕಾಗುತ್ತದೆ: ಗಮನಿಸಿ ನೋಡಿ, ಇಂದಿನ ದಿನದಲ್ಲಿ ವಿದ್ಯುತ್ ಪೂರೈಕೆ ಆಯಾ ರಾಜ್ಯಗಳ ವಿದ್ಯುತ್ ಮಂಡಳಿಯ ಆಡಳಿತದಲ್ಲಿದೆ. ಒಟ್ಟಾರೆ ಇಲ್ಲಿ 27 ಲಕ್ಷಕ್ಕೂ ಹೆಚ್ಚು ಜನರು ಕೆಲಸ ಮಾಡುತ್ತಿದ್ದಾರೆ. ಟೆಲಿಕಾಮ್ ಕ್ಷೇತ್ರವನ್ನ ಮುಕ್ತವಾಗಿ ಎಲ್ಲರಿಗೂ ಬಿಟ್ಟದರ ಪರಿಣಾಮ  ಈ ಕಾರ್ಯಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಸಾವಿರಾರು ಜನರು ಕೆಲಸಕ್ಕೆ ಒತ್ತಾಯ ಪೂರ್ವಕವಾಗಿ ಸ್ವಯಂ ನಿವೃತ್ತಿ ಘೋಷಿಸುವಂತಾಯಿತು. ರಾಜ್ಯಗಳ ವಿದ್ಯುತ್ ಮಂಡಳಿಯನ್ನ ಖಾಸಗೀಕರಣಗೊಳಿಸಿ ಹೀಗೆ ಅದೇ ಕ್ಷೇತ್ರದಲ್ಲಿ ಇತರ ಸಂಸ್ಥೆಗಳು ಸೇವೆ ನೀಡಲು ಬಿಡುವುದರಿಂದ ನಿಧಾನವಾಗಿ ಸರಕಾರಿ ಮಂಡಳಿಗಳು ಸೊರಗಿ ಹೋಗುತ್ತವೆ. ಇಲ್ಲಿ ಕೆಲಸ ಮಾಡುತ್ತಿರುವ ಜನರ ಭವಿಷ್ಯ ಅತಂತ್ರವಾಗುತ್ತದೆ.
  2. ಸರಕಾರಿ ಖಜಾನೆಗೆ ನೇರವಾಗಿ ಬರುತ್ತಿದ್ದ ಆದಾಯದಲ್ಲಿ ಕುಸಿತವಾಗುತ್ತದೆ: ಇದು ಮೇಲ್ನೋಟಕ್ಕೆ ಸರಿ ಎನಿಸುತ್ತದೆ, ಆದರೆ ಸರಕಾರ ಖಾಸಗಿ ಲೈಸೆನ್ಸ್ ನೀಡುವಾಗ ಮತ್ತು ಅವರು ನೀಡುವ ಸೇವೆಯ ಮೇಲೆ ಹಾಕುವ ತೆರಿಗೆಯ ಮೂಲಕ ಹೆಚ್ಚಿನ ಹಣವನ್ನ ಗಳಿಸುತ್ತದೆ. ಕಡಿಮೆ ಜವಾಬ್ದಾರಿ ಹೆಚ್ಚಿನ ಹಣ ಗಳಿಸುವಿಕೆ ಕೇಂದ್ರ ಸರಕಾರದ ಹುನ್ನಾರವಾಗಿದೆ, ಹತ್ತಾರು ವರ್ಷದಿಂದ ಸಂಸ್ಥೆಗೆ ದುಡಿದ ಜನರಿಗೆ ಅವರ ಸೇವೆಗೆ ಕವಡೆ ಕಾಸಿನ ಕಿಮ್ಮತ್ತಿಲ್ಲವಾಗಿದೆ.
  3. ಖಾಸಗೀಕರಣ ಎಂದರೆ ಕಾರ್ಯಕ್ಷೇತ್ರದ ಮೇಲೆ ಕೆಲವೇ ಕೆಲವು ಜನರ ಹಿಡಿತ ಎಂದರ್ಥ: ಖಾಸಗೀಕರಣ ಆದ ತಕ್ಷಣ ಇದು ಗಮನಕ್ಕೆ ಬರುವುದಿಲ್ಲ, ಒಂದಷ್ಟು ವರ್ಷಗಳ ನಂತರ ಗಮನಿಸಿ ನೋಡಿ, ಅಲ್ಲಿ ಕೆಲವೇ ಕೆಲವು ವ್ಯಕ್ತಿಗಳ ಅಥವಾ ಸಂಸ್ಥೆಗಳ ಹಿಡಿತವನ್ನ ನೀವು ಕಾಣಬಹುದು. ಸರಕಾರ ಹೀಗೆ ಏಕಸ್ವಾಮ್ಯತೆಯನ್ನ ತಡೆ ಹಿಡಿಯಲು ಕಾನೂನು ಜಾರಿಗೆ ತಂದಿದೆ ಅದಕ್ಕೆಂದೆ ಪ್ರತ್ಯೇಕ ಸಂಸ್ಥೆಯೂ ಇದೆ, ಆದರೆ ಟೆಲಿಕಾಮ್ ಕ್ಷೇತ್ರವನ್ನ ಒಮ್ಮೆ ಗಮನಿಸಿ ನೋಡಿ ಕಾಂಪಿಟಿಷನ್ ಆಕ್ಟ್ 2002 ಇದೆಯೇ ಎನ್ನುವ ಅನುಮಾನ ನಿಮಗೆ ಬರದಿದ್ದರೆ ಕೇಳಿ. ಈ ಮೂಲಕ ಸಮಾಜದಲ್ಲಿ ಮತ್ತೆ ಅದೇ ಐದಾರು ಜನ ಹಣವಂತ, ಪ್ರಖ್ಯಾತ ಉದ್ಯಮಿಗಳ ಹಿಡಿತ ಇನ್ನಷ್ಟು ಹೆಚ್ಚಾಗುತ್ತಾ ಹೋಗುತ್ತದೆ.
  4. ಸಂಸ್ಥೆಯ ಲೆಕ್ಕ ಪತ್ರಗಳನ್ನ ಇತ್ಯಾದಿಗಳನ್ನ ಹೇಗೆ ಬೇಕಾದರೂ ತಿರುಚಬಹುದು: ಸರಕಾರಿ ಸಂಸ್ಥೆಗಳಲ್ಲಿ ಮಾತ್ರ ಲೆಕ್ಕ ಪತ್ರಗಳು ಸರಿಯಿರುವುದಿಲ್ಲ, ಅಲ್ಲಿ ಮಾತ್ರ ಭ್ರಷ್ಟಾಚಾರ ನಡೆಯುತ್ತದೆ ಎನ್ನುವ ನಂಬಿಕೆ ಬಹಳ ಜನರಿಗಿದೆ. ಖಾಸಗಿ ಸಂಸ್ಥೆಗಳಲ್ಲಿ ಮಾಲೀಕನ ಅನುಮತಿಯ ಮೂಲಕ ಅಥವಾ ಆತ ಹೇಳಿದ ಎನ್ನುವ ಕಾರಣಕ್ಕೆ ಲೆಕ್ಕ ಪತ್ರಗಳನ್ನ ಬೇಕಾದ ಹಾಗೆ ತಿರುಚುವ ಸಾಧ್ಯತೆಗಳಿವೆ. ಇದರರ್ಥ ಈ ಸಂಸ್ಥೆಗಳು ಕಡಿಮೆ ಟ್ರಾನ್ಸ್ಪರೆಂಟ್. ಅಲ್ಲಿನ ಯಾವ ಲೆಕ್ಕಾಚಾರವನ್ನೂ ನಂಬುವ ಹಾಗಿರುವುದಿಲ್ಲ. ಎಲ್ಲವನ್ನೂ ಮಾಲಿಕನಿಗೆ ಹೆಚ್ಚು ಲಾಭವಾಗುವ ಹಾಗೆ ನೋಡಿಕೊಳ್ಳುವ ವ್ಯವಸ್ಥೆಯನ್ನ ಹಣೆಯಲಾಗುತ್ತದೆ.
  5. ಗ್ರಾಹಕರಿಗೆ ಹೆಚ್ಚಿನ ಹೊರೆ: ಗಮನಿಸಿ ನೋಡಿ, ಈ ಬಿಲ್ ಮಂಡಿಸುವ ಸಮಯದಲ್ಲಿ ಗ್ರಾಹಕರಿಗೆ ಒಬ್ಬರಿಗಿಂತ ಹೆಚ್ಚು ಸೇವೆ ನೀಡುವ ಸಂಸ್ಥೆಗಳು ಸಿಗುತ್ತವೆ ಹೀಗಾಗಿ ಅವರಿಗೆ ಆಯ್ಕೆ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ. ವಿದ್ಯುತ್ ಯಾರು ಸರಬರಾಜು ಮಾಡಿದರೂ ವಿದ್ಯುತ್ ಅದರಲ್ಲಿ ಇನ್ನೇನು ವಿಶೇಷವಿದ್ದಿತು? ಕಡಿತ ಕಡಿಮೆಯಾಗಬಹುದು, ಸೇವೆಯಲ್ಲಿ ಗುಣಮಟ್ಟ ಹೆಚ್ಚಾಗಬಹುದು. ಆದರೆ ನೆನಪಿರಲಿ ಇಲ್ಲಿ ಯಾವುದೂ ಪುಕ್ಕಟೆ ಸಿಗುವುದಿಲ್ಲ. ಸರಕಾರ ವಿದ್ಯುತ್ ಬಿಲ್ ಹೆಚ್ಚಿಸಿದರೆ ಜನತೆ ಪ್ರೊಟೆಸ್ಟ್ ಮಾಡುವ ಅವಕಾಶವಾದರೂ ಇರುತ್ತಿತ್ತು, ಮುಂದಿನ ದಿನಗಳಲ್ಲಿ ಆ ಅವಕಾಶವೂ ಇರವುದಿಲ್ಲ. ಮಾರುಕಟ್ಟೆಯಲ್ಲಿ ಆಗುವ ಸಣ್ಣ ಪುಟ್ಟ ಬದಲಾವಣೆಯಲ್ಲೂ ಲಾಭವನ್ನ ಹುಡಕುವ ಖಾಸಗಿ ಸಂಸ್ಥೆಗಳ ಲಾಭಕೋರತನಕ್ಕೆ ಗ್ರಾಹಕ  ಖಂಡಿತ ಹೆಚ್ಚಿನ ಬೆಲೆಯನ್ನ ತೆರೆಬೇಕಾಗುತ್ತದೆ.

ಈಗ ನಿಮ್ಮಲ್ಲಿ ಒಂದು ಪ್ರಶ್ನೆ ಉದ್ಭವಾಗಿರುತ್ತದೆ, ಜಿಡ್ಡುಗಟ್ಟಿದ ಸರಕಾರಿ ಸಂಸ್ಥೆಗಳಿಗೆ ಸರಿಯಾಗಿ ಬುದ್ದಿ ಕಲಿಸಲು ಕಾರ್ಯ ಕ್ಷೇತ್ರವನ್ನ ಖಾಸಗೀಕರಣಗೊಳಿಸುವುದು ಒಳ್ಳೆಯದು ಅದಕ್ಕೇಕೆ ರೈತರು ಮತ್ತು ಅಲ್ಲಿನ ಸಿಬ್ಬಂದಿ ತಕರಾರು ಎತ್ತಬೇಕು?  

ಗಮನಿಸಿ ಭಾರತದಲ್ಲಿ ಎಲ್ಲರಿಗೂ ಸಾಮಾಜಿಕ ಭದ್ರತೆಯಿಲ್ಲ. ಇಲ್ಲಿ ಎಲ್ಲದಕ್ಕೂ ಹಣವನ್ನ ತೆರಬೇಕಾದ ಪರಿಸ್ಥಿತಿಯಿದೆ. ಇಂತಹ ಸಂದರ್ಭದಲ್ಲಿ 27 ಲಕ್ಷ ಸಿಬ್ಬಂದಿ ತಮ್ಮ ಮುಂದಿನ ಭವಿಷ್ಯ ನೆನೆದು ಅಭದ್ರತೆಯಲ್ಲಿ ಜೀವನ ಸಾಗಿಸಬೇಕಾಗುತ್ತದೆ. ವರ್ಷಾನುಗಟ್ಟಲೆ ಅಲ್ಲಿ ಕೆಲಸ ಮಾಡಿರುವ ಜನ ಬೇರೆ ಕ್ಷಮತೆ, ಕೌಶಲ್ಯವಿಲ್ಲದ ಕಾರಣ ಬೇರಾವ ಕೆಲಸ ಕೂಡ ಮಾಡಲಾಗದ ಸ್ಥಿತಿಯನ್ನ ತಲುಪಿರುತ್ತಾರೆ. ಒಮ್ಮೆಲೇ ಎದುರಾಗುವ ಇಂತಹ ಸ್ಥಿತಿಯನ್ನ ಎದುರಿಸುವ ತಾಕತ್ತು ಅವರಿಗಿರುವುದಿಲ್ಲ.

ಇನ್ನು ರೈತರಿಗೆ ಡಿಸ್ಕೌಂಟ್ ಬೆಲೆಯಲ್ಲಿ, ಕೆಲವೊಮ್ಮೆ ಉಚಿತ ವಿದ್ಯುತ್ ಕೂಡ ನೀಡಲಾಗುತ್ತಿದೆ. ಇದು ನಿಲ್ಲುತ್ತದೆ ಎನ್ನುವ ಭಯ ಅವರದು. ಇಂದಿಗೆ ಸರಕಾರ ಹಾಗೇನಿಲ್ಲ ರೈತರಿಗೆ ನೀಡುತ್ತಿರುವ ಸವಲತ್ತು ಮುಂದುವರೆಸುತ್ತೇವೆ ಎನ್ನುತ್ತಿದೆ. ಆದರೆ ಗಮನಿಸಿ ಗ್ಯಾಸ್ ಸಬ್ಸಿಡಿ ಸಮಯದಲ್ಲಿ ಕೂಡ ಸರಕಾರ ಇದೆ ರೀತಿ ಮಾಡಿತು. ಮೊದಲು ಸ್ವಇಚ್ಛೆಯಿಂದ ಬಿಡಿ, ಬಿಟ್ಟವರು ಬಿಡಬಹುದು, ಇಲ್ಲದವರು ಬೇಡ ಎಂದಿತು, ಆಮೇಲೆ ಸದ್ದಿಲ್ಲದೇ ಎಲ್ಲರ ಸಬ್ಸಿಡಿ ತೆಗೆದು ಬಿಟ್ಟಿತು. ನಾಳೆ ರೈತರಿಗೆ ಸಿಗುತ್ತಿರುವ ಉಚಿತ ಅಥವಾ ಸಬ್ಸಿಡಿ ವಿದ್ಯುತ್ ಕಥೆಯೂ ಹೀಗೆ ಆಗುತ್ತದೆ ಎನ್ನುವ ಭಯ ಅವರದು.

ಕೊನೆ ಮಾತು: ಖಾಸಗೀಕರಣ ಖಂಡಿತ ತಪ್ಪಲ್ಲ, ಸಂಪನ್ಮೂಲಗಳ ಗರಿಷ್ಟ ಬಳಕೆಗೆ, ಉತ್ತಮ ಸೇವೆಗೆ ಮತ್ತು ಹೆಚ್ಚಿನ ಲಾಭ ತೆಗೆಯಲು ಖಾಸಗೀಕರಣ ಉತ್ತಮ ಮಾರ್ಗ. ಆದರೆ ಯಾವ ಸಮಯದಲ್ಲಿ ಯಾವುದನ್ನ ಖಾಸಗೀಕರಣಗೊಳಿಸಬೇಕು ಎನ್ನುವುದು ಕೂಡ ಮುಖ್ಯ. ಸರಕಾರ ಎಲ್ಲವನ್ನೂ ಖಾಸಗೀಕರಣಗೊಳಿಸುತ್ತಾ ಕೇವಲ ತೆರಿಗೆ ಸಂಗ್ರಹಣೆಯಲ್ಲಿ ಮಾತ್ರ ತೊಡಗಿಸಿಕೊಳ್ಳುವುದು ಸಾಧುವಲ್ಲ. ಹೀಗೆ ಖಾಸಗೀಕರಣಗೊಳಿಸುವ ಮುನ್ನ ಸಮಾಜದಲ್ಲಿ ಪ್ರಬಲ ಸಾಮಾಜಿಕ ಭದ್ರತೆಯನ್ನ ಸೃಷ್ಟಿಸಬೇಕು. ಆ ನಂತರ ಏನಾದರೂ ಜನರ ಬೆಂಬಲ ಇರುತ್ತದೆ. ಹೀಗೆ ಏಕಾಏಕಿ ಖಾಸಗೀಕರಣ ಭಾರತದ ಮಟ್ಟಿಗೆ ಒಳ್ಳೆಯದಲ್ಲ. 

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com