ಚೀನಾದಲ್ಲಿ ಅತಿ ಹೆಚ್ಚು ಸರ್ಚ್ ಆಗುತ್ತಿರುವುದು 'ಕ್ರಿಮೇಶನ್ ಹೋಮ್' ಅಡ್ರೆಸ್; ಅಲ್ಲಿನ ದಾರುಣತೆಗೆ ಹಿಡಿದ ಕನ್ನಡಿ! (ಹಣಕ್ಲಾಸು)

ಹಣಕ್ಲಾಸು-339ರಂಗಸ್ವಾಮಿ ಮೂನಕನಹಳ್ಳಿ
ಚೀನಾ
ಚೀನಾ

ಚೀನಾದಲ್ಲಿ ಏನಾಗುತ್ತಿದೆ? ಎನ್ನುವ ಕುತೂಹಲ ಎಲ್ಲರಿಗೂ ಸದಾ ಇದ್ದೇ ಇರುತ್ತದೆ. ಚೀನಾ ಸರಕಾರ ಅದೆಷ್ಟೇ ಕಟ್ಟುನಿಟ್ಟು, ಬಿಗಿಪಟ್ಟು ಮಾಡಿದರೂ ಅವುಗಳನ್ನ ಮೀರಿ ಗಡಿಯನ್ನ ದಾಟಿ ಅಲ್ಲಿನ ವಿದ್ಯಮಾನಗಳು ವಿಡಿಯೋ ರೂಪದಲ್ಲಿ ಹೊರ ಜಗತ್ತಿಗೆ ಸಿಗುತ್ತಿದೆ. 

ಅಷ್ಟೊಂದು ದೊಡ್ಡ ಜನಸಂಖ್ಯೆಯನ್ನ ಎಲ್ಲಿಯವರೆಗೆ ಬಂದೂಕಿನ ನಳಿಕೆಯ ಅಡಿಯಲ್ಲಿ ಹಿಡಿದಿಡಲು ಸಾಧ್ಯ? ನಿಮಗೆಲ್ಲಾ ಗೊತ್ತಿರುವಂತೆ ಚೀನಾದಲ್ಲಿ ಜಗತ್ತು ಬಳಸುವ ಸೋಶಿಯಲ್ ಮೀಡಿಯಾ ಬಳಕೆಯಲ್ಲಿಲ್ಲ, ಅವೆಲ್ಲ ಅಲ್ಲಿ ಬ್ಯಾನ್ ಆಗಿವೆ. ಅವರದೇ ಆದ ಪರ್ಯಾಯಗಳು ಅವರಿಗಿವೆ, ಅವುಗಳು ಕೂಡ ಸರಕಾರದ ಅತೀವ ಹದ್ದಿನ ಕಣ್ಣಿನಡಿಯಲ್ಲಿ ಬರುತ್ತದೆ. ಆದರೆ ಕೊರೋನಾದ ಒಮಿಕ್ರಾನ್ ಹೊಸ ತಳಿ ಜನರಲ್ಲಿನ ಸರಕಾರದ ಬಗೆಗಿನ ಭಯವನ್ನ ಹೋಗಲಾಡಿಸಿ ಬಿಟ್ಟಿದೆ ಎನ್ನಿಸುತ್ತದೆ. ಯಾವ ಜನ ಸರಕಾರದ ವಿರುದ್ಧ ಮಾತನಾಡಲು ಅಂಜುತ್ತಿದ್ದರೋ, ಅದೇ ಜನ ಸೋಶಿಯಲ್ ಮೀಡಿಯಾದಲ್ಲಿ ಸರಕಾರದ ಕೋವಿಡ್ ನಿಯಮಾವಳಿಗಳ ವಿರುದ್ಧ ಬರೆಯಲು ಶುರು ಮಾಡಿದ್ದಾರೆ, ಅದು ಅಷ್ಟಕ್ಕೇ ನಿಲ್ಲದೆ ಬೀದಿಗಿಳಿದು ಪ್ರತಿಭಟನೆ ಕೂಡ ಮಾಡಿದ್ದಾರೆ. ಇದರ ಫಲವಾಗಿ ಸರಕಾರ ಕೋವಿಡ್ ನಿಯಮಾವಳಿಗಳನ್ನ ಸಡಿಲಿಸಿದೆ. 

ಚೀನಾ ತನ್ನ ಮೆಟ್ರೋ ನಗರಗಳಲ್ಲಿ ಕಳೆದ ಎರಡೂವರೆ, ಮೂರು ತಿಂಗಳುಗಳಿಂದ ಲಾಕ್ ಡೌನ್ ಸ್ಥಿತಿಯನ್ನ ಕಾಯ್ದುಕೊಂಡಿತ್ತು. ಸಣ್ಣ ಪುಟ್ಟ ನಗರಗಳಲ್ಲಿ ಕೂಡ ಕೋವಿಡ್ ಭೀತಿ ಪೂರ್ಣವಾಗಿ ಆವರಿಸಿತ್ತು.

ನಿಯಮಾವಳಿಗಳ ಸಡಿಲಿಕೆ ಒಂದಷ್ಟು ಜನರಲ್ಲಿ ಖುಷಿಯ ಭಾವವನ್ನ ತಂದರೆ ಇನ್ನೊಂದಷ್ಟು ಜನ ಇದರಿಂದ ಪ್ಯಾಂಡಮಿಕ್ ಉಗ್ರರೂಪಕ್ಕೆ ತಿರುಗಿದರೆ ಎನ್ನುವ ಭಯವನ್ನ ವ್ಯಕ್ತಪಡಿಸಿದ್ದಾರೆ. ಖುಷಿಯಾಗಿರುವ ನಾಗರಿಕರು, ಇದೆಲ್ಲವೂ ಅವರ ಇಚ್ಚೆಗೆ ತಕ್ಕಂತೆ ಆಡುತ್ತಿರುವ ನಾಟಕ, ದೊಡ್ಡ ಮಟ್ಟದ ಭಯವನ್ನ ನಮ್ಮಲ್ಲಿ ಹುಟ್ಟುಹಾಕಿ ಸರಕಾರ ನಮ್ಮನ್ನ ನಿಯಂತ್ರಿಸಲು ಪ್ರಯತ್ನಿಸುತ್ತಿದೆ, ನಿಯಮಾವಳಿ ಸಡಿಲಿಕೆಯಿಂದ ಒಂದೇ ದಿನದಲ್ಲಿ ಜಗತ್ತು ಬದಲಾಗಿ ಹೊಸ ಜಗತ್ತನ್ನ ಕಾಣುವಂತಾಗಿದೆ ಎನ್ನುವ ಉದ್ಘಾರವನ್ನ ತೆಗೆದರೆ, ಇನ್ನೊಂದು ವರ್ಗದ ಜನಕ್ಕೆ ತಮ್ಮ ಕಣ್ಣ ಮುಂದೆಯೇ ಕೋವಿಡ್ ಪಾಸಿಟಿವ್ ಕಾರಣದಿಂದ ತಮ್ಮ ಬಂಧು ಬಳಗದವರನ್ನ ಚೀನಾ ಸರಕಾರ ಬೇರ್ಪಡಿಸಿ ಕೊಂಡೊಯ್ದು ಸೆಂಟ್ರಲೈಜ್ಡ್ ಕ್ವಾರಂಟೈನ್ ಕೇಂದ್ರದಲ್ಲಿ ಇರುಸುತ್ತಿರುವುದು ಮತ್ತು ಅವರನ್ನ ನೋಡಲು, ಭೇಟಿ ಮಾಡಲು ಯಾರನ್ನೂ ಬಿಡದೆ ಇರುವುದು ಚಿಂತೆಗೆ ಈಡುಮಾಡಿದೆ. ಸತ್ತ ನಂತರವಷ್ಟೇ ಸುದ್ದಿ. ಮತ್ತೊಂದೆಡೆ ಚೀನಾದಲ್ಲಿ ನಿಯಮಾವಳಿಗಳನ್ನ ಇನ್ನಷ್ಟು ಬಿಗಿ ಮಾಡಿ ಎನ್ನುವವರ ಸಂಖ್ಯೆಗೂ ಕಡಿಮೆಯಿಲ್ಲ.

ಪಾಶ್ಚಾತ್ಯ ದೇಶಗಳಲ್ಲಿ ಕೋವಿಡ್ ತೀವ್ರವಾಗಿದ್ದ ಕಾಲದಲ್ಲಿ ಉಂಟಾದ ಪ್ಯಾನಿಕ್ ಇಂದು ನಾವು ಚೀನಾದ ಮಹಾನಗರಗಳಲ್ಲಿ ಕಾಣುತ್ತಿದ್ದೇವೆ. ಬೀಜಿಂಗ್ ನಂತಹ ಮಹಾನಗರದಲ್ಲಿ ಇಂದಿಗೂ ಅಂದರೆ 21/12/2022ರ ಬುಧವಾರದವರೆಗೂ ರೆಸ್ಟೋರೆಂಟ್ ನಲ್ಲಿ ಊಟ ಮಾಡಬೇಕಾದರೆ ಕೋವಿಡ್ ನೆಗಟಿವ್ ರಿಪೋರ್ಟ್ ಕಡ್ಡಾಯ ಎನ್ನುವ ನಿಯಮ ಜಾರಿಯಲ್ಲಿದೆ. ನಿಯಮಾವಳಿಗಳನ್ನ ಸಡಿಲಗೊಳಿಸಲಾಗಿದೆ ಎನ್ನುವುದನ್ನ ಮಾಧ್ಯಮಗಳ ಮುಂದೆ ಹೇಳಿದ್ದರೂ ಇಂದಿಗೂ ರೆಸ್ಟೋರೆಂಟ್ ಗಳ ಸ್ಥಿತಿಯಲ್ಲಿ ಮಾತ್ರ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಹೀಗಾಗಿ ಈ ವಲಯ ತೀವ್ರವಾಗಿ ಕುಸಿತ ಕಂಡಿದೆ. ಕಳೆದ ಒಂದೂವರೆ ದಶಕದಿಂದ ಅತಿ ವೇಗವಾಗಿ ಬೆಳೆದ ಮಧ್ಯಮ ವರ್ಗ ಈ ಉದ್ದಿಮೆಯನ್ನ ಬಹಳವಾಗಿ ಬೆಳೆಸಿತ್ತು. ಇವತ್ತಿಗೆ ಈ ವಲಯದವರ ನೋವು ಯಾರಿಗೂ ಬೇಡ ಎನ್ನುವ ಸ್ಥಿತಿಗೆ ಬಂದಿದೆ.

ಜನ ಆಹಾರ ಮತ್ತು ಔಷಧವನ್ನ ಹೆಚ್ಚು ಖರೀದಿ ಮಾಡಿ ಸ್ಟಾಕ್ ಇಟ್ಟುಕೊಳ್ಳುವುದಕ್ಕೆ ಶುರು ಮಾಡಿದ್ದಾರೆ. ಶೀತ , ನೆಗಡಿ, ಜ್ವರಕ್ಕೆ ಸಂಬಂದಿಸಿದ ಔಷಧಗಳು ಕಳೆದ ವಾರಕ್ಕಿಂತ 18 ಪಟ್ಟು ಹೆಚ್ಚು ಮಾರಾಟವನ್ನ ಕಂಡಿದೆ. ಇದಕ್ಕೆ ಸಂಬಂಧಿಸಿದ ಚೀನಾದ ಟ್ರಡಿಷನಲ್ (ನಮ್ಮಲ್ಲಿನ ಆಯುರ್ವೇದದಂತೆ) ಔಷಧಕ್ಕೆ 2000 ಪಟ್ಟು ಹೆಚ್ಚಿನ ಬೇಡಿಕೆ ಉಂಟಾಗಿದೆ. ಮಾಸ್ಕ್ ಮಾರಾಟದ ಭರಾಟೆ ಕಳೆದ ವಾರಕ್ಕಿಂತ 680 ಪ್ರತಿಶತ ಹೆಚ್ಚಳ ಕಂಡಿದೆ. ಗಮನಿಸಿ ಇದರ ಹಿಂದಿನವಾರ ಯಾರೂ ಮಾಸ್ಕ್ ಧರಿಸದೆ ಇರುತ್ತಿರಲಿಲ್ಲ, ನಿಯಮಾವಳಿ ಸಡಿಲಿಕೆ , ಮಾಸ್ಕ್ ಸಿಕ್ಕದಿದ್ದರೆ ಎನ್ನುವ ಭಯ ಇಂತಹ ಪ್ಯಾನಿಕ್ ಸೇಲ್ಸ್ ಗೆ ಕಾರಣವಾಗಿದೆ. ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳುವವರ ಸಂಖ್ಯೆ ಕೂಡ ಹತ್ತಿರಹತ್ತಿರ 500 ಪ್ರತಿಶತ ಹೆಚ್ಚಳವಾಗಿದೆ ಎನ್ನುವುದು ಸದ್ಯದ ಚೀನಾದ ಪರಿಸ್ಥಿತಿಯ ಅನಾವರಣ ಮಾಡುತ್ತಿದೆ.

ಈ ಸೋಂಕಿಗೆ ಯಾವ ರೀತಿಯಲ್ಲಿ ನಾವು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು? ಅಥವಾ ಸೋಂಕು ತಗುಲಿದಾಗ ಯಾವ ಔಷಧ ತೆಗೆದುಕೊಳ್ಳಬೇಕು ಎನ್ನುವುದನ್ನ ಸರಕಾರ ಜನರಿಗೆ ತಿಳಿಸುತ್ತಿಲ್ಲ ಎನ್ನುವ ಕೂಗು ಇನ್ನೊಂದು ವರ್ಗದ್ದು. ಎರೆಡು ಬಾರಿ ಸೋಂಕಿಗೆ ತುತ್ತಾಗಿ ಎದ್ದವರು, ಮುಂದಿನ ನಮ್ಮ ಗತಿಯೇನು? ಇನ್ನೊಮ್ಮೆ ಸೋಂಕು ತಗುಲಿದರೆ ಅದು ನಮ್ಮ ದೇಹಾರೋಗ್ಯಕ್ಕೆ ಯಾವ ರೀತಿಯ ಪರಿಣಾಮ ಬೀರಬಹುದು ಎನ್ನುವ ಚಿಂತೆಯ ಜನರ ರಾಶಿಗೆ ಉತ್ತರವಿಲ್ಲ. ಪ್ರಥಮ ಬಾರಿಗೆ ಚೀನಾ ಸರಕಾರ ತನ್ನ ಜನತೆಯಿಂದ ಇಷ್ಟೊಂದು ಪ್ರಶ್ನೆಯನ್ನ ಎದುರಿಸುತ್ತಿದೆ. ಪ್ರಥಮ ಬಾರಿಗೆ ಅವುಗಳಿಗೆ ಉತ್ತರ ಕೊಡುವ ದರ್ದಿಗೆ ಬಿದ್ದಿದೆ. ಕಂಗಾಲದಂತೆ ಕಂಡು ಬರುತ್ತಿದೆ. ಚೀನಾದ ಅಧ್ಯಕ್ಷ ಜನರ ಒತ್ತಾಯಕ್ಕೆ ಮಣಿದು ನಿಯಮಾವಳಿಗಳನ್ನ ಸಡಿಲಿಸಿರುವುದಾಗಿ ಹೇಳಿಕೆಯನ್ನ ಕೂಡ ನೀಡಿರುವುದು ಇದನ್ನ ಪುಷ್ಟಿಕರಿಸುತ್ತದೆ.

ಸಾವು ನೋವು, ಸೋಲು ಅಥವಾ ಗೆಲುವು ಎಲ್ಲೆಡೆ ಅಂಕಿ ಸಂಖ್ಯೆಗಳ ಕಾರುಬಾರು ಮಾತ್ರ ತಪ್ಪಿಸುವಂತಿಲ್ಲ, ಸಾವು, ರಿಕವರಿ ಎಲ್ಲವೂ ಸಂಖ್ಯೆಗಳಾಗಿ ಮಾರ್ಪಾಡಿ ಹೋಗುತ್ತವೆ. ಇವತ್ತಿನ ಚೀನಾದಲ್ಲಿನ ಕೋವಿಡ್ ಔಟ್ ಬರ್ಸ್ಟ್ ನಿಂದ ಪ್ರತಿ ಹತ್ತು ಲಕ್ಷಕ್ಕೆ 684 ಸಾವು ಖಚಿತ ಎನ್ನುತ್ತಾರೆ ಆರೋಗ್ಯ ತಜ್ಞರು. ಹತ್ತಿರತ್ತಿರ ಒಂದೂವರೆ ಬಿಲಿಯನ್ ಜನಸಂಖ್ಯೆಯ ಚೀನಾ ದೇಶದಲ್ಲಿ ಈ ಲೆಕ್ಕಾಚಾರದ ಪ್ರಕಾರ ನೋಡಿದರೂ ತಿಂಗಳೊಪ್ಪತ್ತಿನಲ್ಲಿ ಹತ್ತು ಲಕ್ಷ ಅರ್ಥಾತ್ ಒಂದು ಮಿಲಿಯನ್ ಜನ ಸಾಯುವುದು ತಪ್ಪಿಸಲಾಗುವುದಿಲ್ಲ. ಸಣ್ಣ ಪುಟ್ಟ ಕ್ರಿಮಿನೇಷನ್ ಕೇಂದ್ರಗಳಲ್ಲಿ ಸಾಮಾನ್ಯವಾಗಿ 12/15 ಶವಗಳು ಬರುತ್ತಿದ್ದ ಜಾಗದಲ್ಲಿ ಇಂದಿಗೆ 200/300 ಶವಗಳು ಬರುತ್ತಿವೆ. ಹೆಣಗಳು ಕೂಡ ಸರದಿಗಾಗಿ ಕಾಯುವ ಪರಿಸ್ಥಿತಿ ಬಂದಿದೆ. ಇನ್ನು ಆಸ್ಪತ್ರೆಗಳ ಸ್ಥಿತಿ ಕೇಳುವುದು ಬೇಡ. ಚೀನಾ ದೇಶ ಈ ಮಟ್ಟಿನ ಔಟ್ ಬ್ರೇಕ್ ಗೆ ತಯಾರಾಗಿರಲಿಲ್ಲ.  ಇದೇ ಕಾರಣಕ್ಕೆ ತಿಂಗಳುಗಳಿಂದ ಸರಕಾರ ಕಡ್ಡಾಯ ಲಾಕ್ ಡೌನ್ ಘೋಷಣೆ ಮಾಡಿತ್ತು.  ಚೀನಾದ ಸರ್ಚ್ ಎಂಜಿನ್ ನಲ್ಲಿ ಸದ್ಯದ ಮಟ್ಟಿಗೆ ಅತಿ ಹೆಚ್ಚು ಸರ್ಚ್ ಆಗುತ್ತಿರುವುದು 'ಕ್ರಿಮೇಶನ್ ಹೋಮ್' ಅಡ್ರೆಸ್ ಎನ್ನುವುದು ಅಲ್ಲಿನ ದಾರುಣತೆಗೆ ಹಿಡಿದ ಕನ್ನಡಿಯಾಗಿದೆ.

ಶಾಲೆ, ಕಾಲೇಜುಗಳನ್ನ ಮುಚ್ಚಲಾಗಿದೆ, ಆದರೆ ಕಲಿಕೆಗೆ ತೊಂದರೆಯಾಗಬಾರದು ಎನ್ನುವ ಉದ್ದೇಶದಿಂದ ಎಲ್ಲವನ್ನೂ ಮರಳಿ ಆನ್ಲೈನ್ ಮಾಡಲಾಗಿದೆ. ಚೀನಾ ಸರಕಾರ ನಿಖರವಾಗಿ ಸೋಂಕಿಗೆ ತುತ್ತಾದವರು ಎಷ್ಟು ಜನ ಎನ್ನುವುದನ್ನ ಟ್ರಾಕ್ ಮಾಡಲು ಸಾಧ್ಯವಿಲ್ಲ ಎನ್ನುವ ಹೇಳಿಕೆಯನ್ನ ನೀಡಿದೆ. ಇದರ ಜೊತೆಗೆ ಯಾವುದೇ ಲಕ್ಷಣವಿಲ್ಲದ ಆದರೆ ಸೋಂಕಿಗೆ ತುತ್ತಾದವರನ್ನ ಬೇರ್ಪಡಿಸುವುದು ಕೂಡ ಆಗದ ಕೆಲಸ ಎಂದು ಕೈ ಚೆಲ್ಲಿದೆ. ಈ ಕಾರಣಗಳಿಂದ ಮನೆಯಿಂದ ಕಲಿಕೆಯನ್ನ ಮುಂದುವರಿಸಲು ಸೂಚನೆ ಹೊರಡಿಸಲಾಗಿದೆ.

ಜನವರಿಯಲ್ಲಿ ಚೀನಿಯರ ಹೊಸ ವರ್ಷ ಆಚರಣೆ ಬಹಳ  ಜೋರಾಗಿ ಆಚರಿಸುತ್ತಾರೆ. ಹತ್ತಿರದಲ್ಲಿ ಇರುವ ಈ ಹಬ್ಬ ಚೀನಾ ಸರಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಮೆಟ್ರೋ ಗಳಲ್ಲಿ ಬದುಕು ಕಟ್ಟಿಕೊಳ್ಳಲು ಬಂದ ಬಹುತೇಕರು ಮರಳಿ ಚೀನಾ ಮೂಲೆ ಮೂಲೆಯಲ್ಲಿರುವ ತಮ್ಮ ಹಳ್ಳಿಗಳಿಗೆ, ನಗರಗಳಿಗೆ ಹೋಗಲಿದ್ದಾರೆ. ಇವರನ್ನ ಬೇಡವೆಂದು ತಡೆಯುವುದು ಹೇಗೆ? ತಿಂಗಳಲ್ಲಿ ಈ ವೈರಸ್ ಚೀನಾದ ಸಣ್ಣ ಪುಟ್ಟ ಹಳ್ಳಿಗಳನ್ನೂ ಕೂಡ ಇದು ವ್ಯಾಪಿಸಲಿದೆ. ಇದರ ಜೊತೆಗೆ ಚಳಿಗಾಲ ಗಾಯದ ಮೇಲೆ ಉಪ್ಪು ಸುರಿದಂತೆ ಇದನ್ನ ಇನ್ನಷ್ಟು ಸಂಕೀರ್ಣಗೊಳಿಸಲಿದೆ. ಹೌದು ಸಾಮಾನ್ಯವಾಗೇ ಚಳಿಗಾಲದಲ್ಲಿ ಶೀತ, ನೆಗಡಿ ಇದ್ದೆ ಇರುತ್ತದೆ. ಫೆಬ್ರವರಿ ಅಥವಾ ಮಾರ್ಚ್ ಅಂತ್ಯದವರೆಗೆ ಮುಗಿಯದ ತೀವ್ರ ಚಳಿಗಾಲ ಚೀನಾಕ್ಕೆ ಇನ್ನಷ್ಟು ಸಂಕಷ್ಟ ನೀಡಲಿದೆ.

ಚೀನಾದ ಆರೋಗ್ಯ ಇಲಾಖೆ ಈ ಬಾರಿಯ ಔಟ್ ಬ್ರೇಕ್ ಕೂಡ ಮೂರು ಹಂತದಲ್ಲಿ ಇರುತ್ತದೆ ಎಂದು ಅಂದಾಜಿಸಿದೆ. ಮಾರ್ಚ್ ಅಂತ್ಯದ ವೇಳೆಗೆ ಮೂರನೇ ವೇವ್ ಮುಕ್ತಾಯದ ಹಂತಕ್ಕೆ ಬರಬಹುದು ಎನ್ನುವುದು ಅವರ ಲೆಕ್ಕಾಚಾರ. ಮೊದಲೇ ಹೇಳಿದಂತೆ ಜನವರಿ 21 ರಿಂದ ಶುರುವಾಗುವ ಹೊಸ ವರ್ಷಕ್ಕೆ ತಮ್ಮ ಊರುಗಳಿಗೆ ಹೋಗಲು ಆಗಲೇ ಬುಕಿಂಗ್ ಮಾಡಿರುವ ಮಿಲಿಯನ್ ಗಟ್ಟಲೆ ಜನ ಈ ಸಾಂಕ್ರಾಮಿಕ ಹರಡಲು ಕಾರಣರಾಗುತ್ತಾರೆ. ಆದರೆ ಅವರನ್ನ ಚೀನಾ ಸರಕಾರ ತಡೆ ಹಿಡಿಯುವ ಸಹಾಯ ಮಾಡಿತೇ? ಎನ್ನುವುದನ್ನ ಕಾದು ನೋಡಬೇಕು.

ಕೊನೆಮಾತು: ನಾವು ಭಾರತೀಯರು, ನಮಗಾಗಲೇ ಲಸಿಕೆಯಾಗಿದೆ, ಮಾಡಿದುಣ್ಣೋ ಮಹರಾಯ, ಚೀನಾಗೆ ತಕ್ಕಶಾಸ್ತಿಯಾಯ್ತು  ಎನ್ನುವ ಮುನ್ನ ಸ್ವಲ್ಪ ನಿಧಾನವಾಗಿ ಯೋಚಿಸಿ , ಚೀನಾದ ಆರ್ಥಿಕತೆ ಹತ್ತಿರ ಹತ್ತಿರ 18 ಟ್ರಿಲಿಯನ್, ಹೊಸ ಲಾಕ್ ಡೌನ್ ಕಾರಣ ಆರ್ಥಿಕತೆಯಲ್ಲಿ ಹತ್ತು ಪ್ರತಿಶತ ಕುಸಿತ ಕಂಡರೂ ಅದು 1.8 ಟ್ರಿಲಿಯನ್ ಆಗುತ್ತದೆ. ಭಾರತದ ಆರ್ಥಿಕತೆ ಯಾವುದೇ ಕುಸಿತವಿಲ್ಲದೆ 3 ಟ್ರಿಲಿಯನ್, ಅಂದರೆ ಅವರ ಕುಸಿತ ನಮ್ಮ ಒಟ್ಟು ಆರ್ಥಿಕತೆಯ 2/3 ರಷ್ಟು ಎಂದರೆ ಚೀನಾ ಅದೆಷ್ಟು ಪ್ರಬಲ ಮತ್ತು ಆ ದೇಶದ ಕುಸಿತದ ಪರಿಣಾಮ ಜಾಗತಿಕ ಮಟ್ಟದಲ್ಲಿ ಎಷ್ಟಾಗಬಹುದು ಎನ್ನುವ ಅರಿವಾದೀತು. ದಶಕದ ಹಿಂದೆ ಸೋವಿಯತ್ ಯೂನಿಯನ್, ರಷ್ಯಾ ಕುಸಿತವಾದಂತೆ ಆಕಸ್ಮಿಕವಾಗಿ ಚೀನಾ ಕುಸಿತ ಕಂಡರೆ ಏನಾಗಬಹುದು? ಎನ್ನುವ ಬಗ್ಗೆ ಲೇಖನ ಬರೆದಿದ್ದೆ, ನಮ್ಮ ಮನೆಯಲ್ಲಿನ ಕೆಲಸದ ನಿಂಗಿ , ರಂಗಿ ಜಾಗದಲ್ಲಿ ಚಿನ್, ನಿನ್, ಮಿನ್ ಗಳು ಬಂದಾರು ಎಂದು ಬರೆದಿದ್ದೆ. ಇವತ್ತಿನ ಪ್ರಪಂಚದಲ್ಲಿ ಇಂತಹುದು ಆಗುವುದಿಲ್ಲ ಎಂದು ಯಾರೂ ಧೈರ್ಯವಾಗಿ ಹೇಳಲು ಸಾಧ್ಯವಿಲ್ಲ ಅಷ್ಟರಮಟ್ಟಿಗೆ ಕೊರೋನ ಜಗತ್ತನ್ನ ಬದಲಾಯಿಸಿದೆ. ಅದು ಚೀನಾದ ಅದೃಷ್ಟ ರೇಖೆಯನ್ನ ಕೂಡ ಬದಲಾಯಿಸಬಹುದೇ? ಕಾದು ನೋಡೋಣ. ಅದೇನೇ ಇರಲಿ, 2023 ಜಾಗತಿಕ ಆರ್ಥಿಕ ಕುಸಿತವನ್ನಂತೂ ತಪ್ಪಿಸಲು ಸಾಧ್ಯವಿಲ್ಲ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com