5ಜಿ ತರಂಗಾಂತರಕ್ಕೆ ಭಾರತ ಸಜ್ಜು; ಹೇಗೆ ಕೆಲಸ ಮಾಡುತ್ತದೆ ಹೊಸ ಸೇವೆ?

ಹಣಕ್ಲಾಸು-313-ರಂಗಸ್ವಾಮಿ ಮೂಕನಹಳ್ಳಿ
5 ಜಿ (ಸಂಗ್ರಹ ಚಿತ್ರ)
5 ಜಿ (ಸಂಗ್ರಹ ಚಿತ್ರ)

ಜೂನ್ 15, 2022, ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಬದಲಾವಣೆಗೆ ಮಹತ್ವದ ನಿರ್ಧಾರ ತೆಗೆದುಕೊಂಡ ದಿನ ಎನ್ನಲು ಅಡ್ಡಿಯಿಲ್ಲ. ಬಹಳ ತಿಂಗಳುಗಳಿಂದ ನಾವು 5ಜಿ ತರಂಗಾಂತರವನ್ನ ಹರಾಜು ಹಾಕುವ ಬಗ್ಗೆ ಕೇಳುತ್ತಾ ಬಂದಿದ್ದೆವು. ಜೂನ್ 15 ರಂದು ಕೇಂದ್ರ ಸರಕಾರದ ಯೂನಿಯನ್ ಕ್ಯಾಬಿನೆಟ್ ಪ್ರಧಾನ ಮಂತ್ರಿಗಳ ನೇತೃತ್ವದಲ್ಲಿ ಹರಾಜಿಗೆ ಸಮ್ಮತಿಯನ್ನ ನೀಡಲಾಗಿದೆ. ಇದನ್ನ ನಾವು ಎರಡು ರೀತಿಯಲ್ಲಿ ವ್ಯಾಖ್ಯಾನವನ್ನ ಮಾಡಬಹುದು.

ಎಲ್ಲಕ್ಕಿಂತ ಮೊದಲಿಗೆ ಇದು 4ಜಿ ಯಲ್ಲಿದ್ದ ಅನೇಕ ನೂನ್ಯತೆಗಳನ್ನ ನಿವಾರಿಸುತ್ತದೆ. ವೇಗ, ಹೌದು ಇಂದಿನ ವೇಗಕ್ಕೆ 5 ಜಿ ಸಾಥ್ ಕೊಡುವುರದಲ್ಲಿ ಯಾವುದೇ ಅನುಮಾನವಿಲ್ಲ. ಅಷ್ಟರ ಮಟ್ಟಿಗೆ ಇದು ಉಪಕಾರಿ. ಅಲ್ಟ್ರಾ ಹೈ ಡೆಫಿನಿಶನ್ ಚಲಚಿತ್ರಗಳನ್ನ ಕೂಡ ನಿಮಿಷಗಳಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು. ಇನ್ನು ಅಪ್ಲೋಡ್ ಕೂಡ 4ಜಿ ಗಿಂತ ಹತ್ತಾರು ಪಟ್ಟು ವೇಗದಲ್ಲಿ ಮಾಡಬಹುದು. 5ಜಿ ಒಂದಲ್ಲ ಹತ್ತಾರು ಮಷೀನ್ ಗಳನ್ನ ಏಕಕಾಲದಲ್ಲಿ ಕನೆಕ್ಟ್ ಮಾಡುವ ತಾಕತ್ತು ಹೊಂದಿರಲಿದೆ, ಕೇವಲ ಸ್ಮಾರ್ಟ್ ಫೋನ್ ಅಲ್ಲದೆ ಜಗತ್ತಿನ ಇತರ ಮಷೀನ್ ಗಳ ಜೊತೆಯಲ್ಲಿ ಏಕಕಾಲದಲ್ಲಿ ಕನೆಕ್ಟ್ ಆಗಿ ಮಾಹಿತಿಯನ್ನ ಹಂಚಿಕೊಳ್ಳುವ ಕ್ಷಮತೆಯನ್ನ ಹೊಂದಿರಲಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಇಂದಿಗಿಂತ ಬಹಳ ವೇಗವಾಗಿ ಬಹಳಷ್ಟು ಕೆಲಸವನ್ನ ಮುಗಿಸಲು, ಸಂವಹನ ನಡೆಸಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಇದನ್ನ ಇನ್ನೊಂದು ಕ್ರಾಂತಿ ಎನ್ನಲು ಅಡ್ಡಿಯಿಲ್ಲ.

ಎರಡನೆಯದಾಗಿ 5ಜಿ ಲಾಗೂ ಆಗುವುದರಿಂದ ನಮ್ಮ ಈಗಿನ ಡೇಟಾ ಸಂಗ್ರಹಣೆ ಇನ್ನಷ್ಟು ವೇಗವನ್ನ ಪಡೆದುಕೊಳ್ಳಲಿದೆ. ಇಂದಿಗೆ ಸಾಧ್ಯವಾಗದಿರುವ ಸಣ್ಣ ಪುಟ್ಟ ಡೇಟಾ ಕೂಡ 5ಜಿ ಯಿಂದ ಸಂಗ್ರಹಣೆ ಸಾಧ್ಯವಾಗುತ್ತದೆ. ಆರ್ಟಿಫಿಷಿಯಲ್ ಇಂಟೆಲಿಜೆನ್ಸಿ ಗೆ ನಮ್ಮನ್ನ ಇನ್ನಷ್ಟು ಚೆನ್ನಾಗಿ ಅರಿಯಲು, ನಮ್ಮ ನಡವಳಿಕೆಯನ್ನ ಅಭ್ಯಾಸ ಮಾಡಲು ಮತ್ತು ನಮ್ಮ ಬೇಕು-ಬೇಡಗಳ ಪಟ್ಟಿ ಮಾಡಲು ಇನ್ನಷ್ಟು ಸುಲಭವಾಗುತ್ತದೆ. ಇದನ್ನ ಸಮಾಜದ ಒಳಿತಿಗೆ ಬಳಸಿದ್ದೆ ಆದರೆ ಇದರಿಂದ ಯಾವುದೇ ಬಾಧಕವಿಲ್ಲ. ಆದರೆ ಸಮಾಜದಲ್ಲಿ ಎಲ್ಲವೂ ನಾವಂದುಕೊಂಡಂತೆ ಇರುವುದಿಲ್ಲ. ಮುಕ್ಕಾಲು ಪಾಲು ನಮ್ಮ ನಡವಳಿಕೆಯನ್ನ ನಮ್ಮ ವಿರುದ್ಧ ಬಳಸುವ ಸಾಧ್ಯತೆಯೇ ಹೆಚ್ಚು. ನಮಗೆ ಗೊತ್ತಿಲದೇ ನಮ್ಮ ನಿರ್ಧಾರವನ್ನ ಪೋಷಿಸುವ, ನಮ್ಮ ನಿರ್ಧಾರವನ್ನ ಬದಲಿಸುವ ತಾಕತ್ತು ಎಐ ಪಡೆದುಕೊಳ್ಳಲಿದೆ. ಹೀಗಾಗಿ ಇದು ಒಂದು ಮಟ್ಟಿಗೆ ಚಿಂತಿಸ ಬೇಕಾದ ವಿಷಯ ಕೂಡ ಹೌದು.

ಯಾವುದೇ ವಿಷಯದಲ್ಲಿ ಸಾಧಕ ಮತ್ತು ಬಾಧಕ ಇದ್ದೇ ಇರುತ್ತದೆ. ಇಲ್ಲಿಯೂ ಕೂಡ ಒಳಿತು ಮತ್ತು ಕೆಡಕು ಎರಡೂ ಇದೆ. ಸಾಮಾನ್ಯ ಮನುಷ್ಯನ ಜೀವನವನ್ನ ಅವನ ನಿರ್ಧಾರಗಳನ್ನ ಮ್ಯಾನಿಪುಲೇಟ್ ಮಾಡಲು 5ಜಿ ಇಂದು ಬಹಳ ಸಲಭವಾಗಲಿದೆ. ಅದನ್ನ ಅಧಿಕಾರದಲ್ಲಿರುವ ಸರಕಾರಗಳು , ಟೆಕ್ನಾಲಜಿ ಮತ್ತು ಟೆಲಿಕಾಮ್ ಸಂಸ್ಥೆಗಳು ಕೂಡ ತಮ್ಮ ಹಿತಕ್ಕೆ ಬಳಸಿಕೊಳ್ಳುವ ಸಾಧ್ಯತೆಗಳಿವೆ. ಇದನ್ನ ನಾವು ನಿಯಂತ್ರಣದಲ್ಲಿಡಲು ಸಾಧ್ಯವಾದರೆ ಇದರಿಂದ ಲಾಭವೇ ಹೆಚ್ಚು. ಮುಂದಿನ 10 ರಿಂದ 15 ವರ್ಷದಲ್ಲಿ 450 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯವನ್ನ ಈ ಕ್ಷೇತ್ರ ಭಾರತೀಯ ಎಕಾನಮಿಗೆ ದೇಣಿಗೆ ನೀಡಲಿದೆ. ಅಸಂಖ್ಯಾತ ಉದ್ಯೋಗ ಅವಕಾಶಗಳು ಕೂಡ ಸೃಷ್ಟಿಯಾಗಲಿವೆ.

5ಜಿ ಹೆಸರು ಚೆನ್ನಾಗಿದೆ, ಇದೇನು..? ಹೇಗೆ ಕೆಲಸ ಮಾಡುತ್ತದೆ?

5ಜಿ ಎನ್ನುವುದು ಹೊಚ್ಚ ಹೊಸ ಸಂಪರ್ಕ ಸಾಧನ ಅಥವಾ ನೆಟ್ ವರ್ಕ್, ಇಲ್ಲಿಯವರೆಗೆ ಲಭ್ಯವಿರುವ ಇಂಟರ್ನೆಟ್ ವೇಗಕ್ಕಿಂತ ಹಲವಾರು ಪಟ್ಟು ವೇಗದ ಜೊತೆಗೆ ಎಲ್ಲಾ ಬಳಕೆದಾರರಿಗೂ ಹೆಚ್ಚುಕಡಿಮೆ ಒಂದೇ ರೀತಿಯ ಬಳಕೆಯ ಅನುಭವವನ್ನ ನೀಡಲಿರುವ ಹೊಸ ಸಿಸ್ಟಮ್ ಆಗಲಿದೆ. ಇದನ್ನ ಮಿಡ್ ಮತ್ತು ಹೈ ಬ್ಯಾಂಡ್ ಸ್ಪೆಕ್ಟ್ರಮ್ ಬಳಸಿ ಸೇವೆಯನ್ನ ನೀಡಲಾಗುವುದು, ಇಂದಿನ ಇಂಟರ್ನೆಟ್ ಹೇಗೆ ಕೆಲಸ ಮಾಡುತ್ತದೆ ಹಾಗೆಯೇ ಎಲ್ಲವೂ ಇರಲಿದ್ದು ವೇಗ ಮತ್ತು ನಿಖರತೆ ಇಂದಿಗಿಂತ ಹತ್ತು ಪಟ್ಟು ಹೆಚ್ಚಾಗಲಿದೆ. ಹೀಗಾಗಿ ಇದನ್ನ ಟೆಲಿಕಾಂ ಕ್ಷೇತ್ರದಲ್ಲಿ ಒಂದು ಹೊಸ ಮೈಲಿಗಲ್ಲು ಎನ್ನಬಹುದು. 4ಜಿ ಮತ್ತು 5ಜಿ ನಡುವಿನ ವ್ಯತ್ಯಾಸವೆಂದರೆ ಅದು ವೇಗ ಮತ್ತು ನಿಖರತೆ ಉಳಿದಂತೆ ಕಾರ್ಯ ನಿರ್ವಹಣೆ ಹೆಚ್ಚು ಕಡಿಮೆ ಒಂದೇ ಆಗಿರುತ್ತದೆ.

ಹೆಚ್ಚಿನ ಸ್ಪೀಡ್ ಮತ್ತು ಕಾರ್ಯ ಕ್ಷಮತೆ ಹೆಚ್ಚಾಗುತ್ತೆ ನಿಜ ಆದರೆ ಬೆಲೆ? ಬೆಲೆ ಕೂಡ ಹೆಚ್ಚಾಗುತ್ತಾ?

ಭಾರತದ ಜನಸಂಖ್ಯೆಯನ್ನ ನಾವು ಯಾವಾಗಲೂ ಶಾಪ ಎಂದು ಹೇಳಿಕೊಂಡು ಬಂದಿದ್ದೇವೆ. ಆದರೆ ಅದೇ ಜನಸಂಖ್ಯೆಯನ್ನ ಸರಿಯಾಗಿ ಬಳಸಿದ್ದೆ ಆದರೆ ಅದು ವರದಾನವಾಗಿ ಕೂಡ ಬದಲಾಗುತ್ತದೆ. ಜಗತ್ತಿನ ಎಲ್ಲಾ ರಾಷ್ಟ್ರಗಳು ಭಾರತಕ್ಕೆ ವ್ಯಾಪಾರ ಮಾಡಲು ಉತ್ಸಾಹ ತೋರಿಸುವುದು ಇದೆ ಕಾರಣಕ್ಕೆ! ಭಾರತದಲ್ಲಿ ಒಂದು ಪ್ರಾಡಕ್ಟ್ ಗೆದ್ದು ಬಿಟ್ಟರೆ ಅದನ್ನ ಜಗತ್ತಿನಲ್ಲೆಡೆ ಮಾರಿ ಗೆಲ್ಲಿಸಬಹುದು ಎನ್ನುವ ಹೊಸ ನಿಯಮ ಗಸ್ತು ಹೊಡೆಯುತ್ತಿದೆ. ಪಿನ್ ನಿಂದ ಹಿಡಿದು ಪ್ಲೇನ್ ವರೆಗೆ ಬಹುರಾಷ್ಟ್ರೀಯ ಕಂಪನಿಗಳು ಭಾರತದಲ್ಲಿ ಗಿರಕಿ ಹೊಡೆಯಲು ಕಾರಣ ನಮ್ಮ ಜನಸಂಖ್ಯೆ, ಮತ್ತು ಹೆಚ್ಚುತ್ತಿರುವ ಖರೀದಿ ಶಕ್ತಿ. ನಿಮಗೆಲ್ಲಾ ನೆನಪಿರಲಿ ಭಾರತ ಜಗತ್ತಿನಲ್ಲೇ ಅತಿ ಕಡಿಮೆ ದರದಲ್ಲಿ ಇಂಟರ್ನೆಟ್ ಸೌಲಭ್ಯ ನೀಡುತ್ತಿರುವ ದೇಶ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. 4ಜಿ ಯಿಂದ 5ಜಿ ಗೆ ಬದಲಾವಣೆಯಾದರೆ ಹೆಚ್ಚು ಹಣ ತೆರಬೇಕಾಗುತ್ತದೆಯೇ? ಎನ್ನುವ ಪ್ರಶ್ನೆ ಬಹತೇಕರಲ್ಲಿ ಉದ್ಭವಾಗಿರುತ್ತದೆ. ಬೆಲೆ ಹೆಚ್ಚಾಗುವ ಸಾಧ್ಯತೆ ಕಡಿಮೆ, ಹಾಗೇನಾದರು ಹೆಚ್ಚಾದರೂ ಅದು ನಗಣ್ಯ ಎನ್ನುವಷ್ಟಿರುತ್ತದೆ.

5ಜಿ ಕೂಡ ಈಗಿರುವ ರೇಡಿಯೋ ಫ್ರಿಕ್ವೆನ್ಸಿ ಬಳಸಿ ಕಾರ್ಯ ನಡೆಸುತ್ತದೆ. ಹೀಗಾಗಿ ಸರ್ವಿಸ್ ಪ್ರೊವೈಡರ್ಸ್ ಮೊಬೈಲ್ ಟವರ್ ಗಳನ್ನ ಬದಲಿಸುವ ಅವಶ್ಯಕತೆ ಇರುವುದಿಲ್ಲ. ಮೊಬೈಲ್ ಡೇಟಾ, ವೈಫೈ ಸರ್ವಿಸ್ ಗಳಿಗೆ ಹೊಸದಾಗಿ ಯಾವುದನ್ನೂ ಸೇರಿಸುವ ಅವಶ್ಯಕತೆ ಇರುವುದಿಲ್ಲ. ತರಂಗಾಂತರಗಳು ಅದೇ ಇದ್ದರೂ ವೇಗ ಮತ್ತು ನಿಖರತೆ ಮಾತ್ರ ಹೆಚ್ಚಾಗುವ ಕಾರಣ, ಹೊಸದಾಗಿ ಹೆಚ್ಚಿನ ಖರ್ಚಿಲ್ಲದೆ ನಮಗೆ ಉತ್ತಮ ಸೌಲಭ್ಯ ಸಿಗಲಿದೆ. ಹೀಗಾಗಿ ಬೆಲೆ ಹೆಚ್ಚಳ ಭಾರತದ ಮಟ್ಟಿಗೆ ಸಮಸ್ಯೆಯಾಗಲಾರದು.

ವೇಗ ಮತ್ತು ನಿಖರತೆಯಿಂದ ವೈದ್ಯಕೀಯ ಕ್ಷೇತ್ರದಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ ಮಾತ್ರವಲ್ಲದೆ ಲಾಜಿಸ್ಟಿಕ್ಸ್ ಮತ್ತು ಕೃಷಿ ಕ್ಷೇತ್ರದಲ್ಲಿ ಸಹ ಬಹಳಷ್ಟು ಅಭಿವೃದ್ಧಿ ಕಾಣಲಿದ್ದೇವೆ. ಈ ವೇಗದಲ್ಲಿ ಭಾರತ ಮುಂದುವರೆಯುತ್ತ ಹೋದರೆ ಮುಂದಿನ 10/15 ವರ್ಷಗಳಲ್ಲಿ ಜಗತ್ತಿನ ಅತಿ ಮುಂದುವರೆದ ದೇಶಕ್ಕಿಂತ ಭಾರತ ಯಾವ ರೀತಿಯಲ್ಲೂ ಕಡಿಮೆ ಇರುವುದಿಲ್ಲ. ನಿಮಗೆಲ್ಲಾ ನೆನಪಿರಬಹದು 90 ರ ದಶಕದಲ್ಲಿ ಮನೆಗೆ ಬೇಕಾದ ದೂರವಾಣಿ ಅದು ಲ್ಯಾಂಡ್ಲೈನ್ ಪಡೆಯಲು ಹರಸಾಹಸ ಪಡೆಯಬೇಕಾಗಿತ್ತು. ತಿಂಗಳುಗಟ್ಟಲೆ ಕಾದರೂ ಲ್ಯಾಂಡ್ಲೈನ್ ಸಿಗುವುದು ಕಷ್ಟವಾಗುತ್ತಿತ್ತು. ಆ ನಂತರ ನಮ್ಮ ದೇಶದಲ್ಲಿ ಈ ಕಾರ್ಯ ಕ್ಷೇತ್ರದಲ್ಲಿ ಆದ ಅಭಿವೃದ್ಧಿಯನ್ನ ಇಲ್ಲಿ ವಿಶೇಷವಾಗಿ ಹೇಳುವ ಅವಶ್ಯಕಕೆಯಿಲ್ಲ ಏಕೆಂದರೆ ನಾವೆಲ್ಲರೂ ಅದರ ಫಲಾನುಭವಿಗಳು. ಇದು ಒಂದು ಹಂತದ ಅಭಿವೃದ್ಧಿ! ಭಾರತೀಯ ಟೆಲಿಕಾಮ್ ಇನ್ನೊಂದು ದೊಡ್ಡ ಮಟ್ಟದ ಬದಲಾವಣೆಗೆ ಸಾಕ್ಷಿಯಾಗಲಿದೆ. ಭಾರತೀಯ ದೊರವಾಣಿ ಸಂಸ್ಥೆಗಳು ಕ್ಯಾಶ್ ಫ್ಲೋ ಸಮಸ್ಯೆಯಿಂದ ಬಳಲುತ್ತಿವೆ. ವ್ಯಾಪಾರ ನಡೆದರೂ ಹಣದ ಹರಿವು ಕಡಿಮೆ. ಈ ಸಮಸ್ಯೆಯನ್ನ ಬಗೆ ಹರಿಸಲು ಆಡ್ಜಸ್ಟೆಡ್ ಗ್ರಾಸ್ ರೆವೆನ್ಯೂ ಎನ್ನುವ ಪದದ ಅರ್ಥವನ್ನ ಕೂಡ ಬದಲಾವಣೆ ಮಾಡಿದೆ. ಈ ನಿಟ್ಟಿನಲ್ಲಿ ಟೆಲಿಕಾಮ್ಗೆ ಸಂಬಂಧಿಸದೆ ಇರುವ ಬಾಕಿಯನ್ನ ಬೇರ್ಪಡಿಸಿ ಅವುಗಳ ಮೇಲಿನ ಪೆನಾಲ್ಟಿಯನ್ನ ಕೂಡ ಕಡಿತಗೊಳಿಸಲಾಗಿದೆ. ಸ್ಪೆಕ್ಟ್ರಮ್ ಅಥವಾ ದೂರವಾಣಿ ಸೇವೆಯಲ್ಲಿ ಬಳಸುವ ವೆವ್ಗಳ ಮೇಲಿನ ಸ್ವಾಮತ್ಯವನ್ನ 20 ವರ್ಷದಿಂದ 30 ವರ್ಷಕ್ಕೆ ಏರಿಸಲಾಗಿದೆ. ಅಂದರೆ ಮುಂದಿನ ಹತ್ತು ವರ್ಷ ಹೆಚ್ಚಿನ ಬಳಕೆಯನ್ನ, ಹೆಚ್ಚಿನ ಹಣ ನೀಡದೆ ಮಾಡಿಕೊಳ್ಳಬಹುದಾಗಿದೆ. ಈ ಕಾರಣಗಳಿಂದ ಬೆಲೆಯಲ್ಲಿ ಹೆಚ್ಚಳ ಆಗುವ ಸಂಭಾವ್ಯತೆ ಕಡಿಮೆ ಎಂದು ಹೇಳಬಹುದು.

5ಜಿ ಸೇವೆ ಎಂದಿನಿಂದ ಸಿಗಬಹುದು?

ನಿನ್ನೆಯಷ್ಟೇ ಅಂದರೆ 15/೦6/2022 ರಂದು ಇದಕ್ಕೆ ಸಂಬಂಧಿಸಿದಂತೆ ಸ್ಪೆಕ್ಟ್ರಮ್ ಹರಾಜು ಪ್ರಕ್ರಿಯೆಗೆ ಹಸಿರು ನಿಶಾನೆ ನೀಡಲಾಗಿದೆ. ಒಮ್ಮೆ ಹರಾಜು ಪ್ರಕ್ರಿಯೆ ಮುಗಿದ ನಂತರ ಎರಡರಿಂದ ನಾಲ್ಕು ತಿಂಗಳಲ್ಲಿ ನಾವೆಲ್ಲಾ ಹೊಸ ವೇಗಕ್ಕೆ ಸಾಕ್ಷಿಯಾಗಲಿದ್ದೇವೆ. ಹಾಗೊಮ್ಮೆ ವಿಳಂಬವಾದರೂ 2023 ರ ಪ್ರಥಮ ತಿಂಗಳುಗಳಲ್ಲಿ ಖಂಡಿತ 5ಜಿ ಕಾರ್ಯಾರಂಭ ಮಾಡುತ್ತದೆ.

ಯಾವ ಸಂಸ್ಥೆಗಳು ಈ ಸೇವೆಯನ್ನ ನೀಡಲಿವೆ?
ಭಾರತದ ಮಟ್ಟಿಗೆ ಜಿಯೋ ಮತ್ತು ಏರ್ಟೆಲ್ ಸಂಸ್ಥೆಗಳು 5ಜಿ ಸೇವೆಯನ್ನ ನೀಡಲು ಪ್ರಾರಂಭಿಸಲಿವೆ. ಭಾರತದ ಆಯ್ದ 13 ನಗರಗಳಲ್ಲಿ ಮೊದಲಿಗೆ ಈ ಸೇವೆಯನ್ನ ಪ್ರಾರಂಭಿಸಲಾಗುತ್ತದೆ. ಬೆಂಗಳೂರು , ದೆಹಲಿ , ಮುಂಬೈ , ಹೈದರಾಬಾದ್ , ಪುಣೆ , ಗಾಂಧಿ ನಗರ್ ಮತ್ತು ಲಕ್ನೋ ಸಹಿತ ಒಟ್ಟು 13 ನಗರದಲ್ಲಿ ಈ ಸೇವೆ ಸಿಗಲಿದೆ. ಪ್ರಾಯೋಗಿಕ ಹಂತದಲ್ಲಿ ಮಾತ್ರ ಈ ರೀತಿಯ ಆಯ್ದ ನಗರದಲ್ಲಿ ಸೇವೆ ಸಿಗಲಿದ್ದು 2023ರ ಅಂತ್ಯದ ವೇಳೆಗೆ ದೇಶದಾದ್ಯಂತ ಈ ಸೇವೆಯನ್ನ ವಿಸ್ತರಿಸಲಾಗುವುದು.

ಕೊನೆಮಾತು: 5ಜಿ ತಂತ್ರಜ್ಞಾನದ ಮೂಲಕ ಏಕಕಾಲಕ್ಕೆ ರಿಯಲ್ ಟೈಮ್ ನಲ್ಲಿ ಲಕ್ಷಾಂತರ ಡಿವೈಸ್ ಗಳನ್ನ ಜೋಡಿಸಬಹುದು ಮತ್ತು ಆ ಮೂಲಕ ಒಂದು ಡಿವೈಸ್ ನಿಂದ ಇನ್ನೊಂದಕ್ಕೆ ಡೇಟಾ, ಮಾಹಿತಿ ವರ್ಗಾವಣೆ ಮಾಡಬಹುದು, ಅಲ್ಲದೆ ಲಕ್ಷಾಂತರ ಮಾಹಿತಿಯನ್ನ ಕ್ಷಣದಲ್ಲಿ ಅನಲೈಸ್ ಮಾಡಬಹುದು. ಈ ವೇಗ ಮತ್ತು ನಿಖರತೆಯ ಮೂಲಕ ಜನರ ಮೇಲೆ, ಸಮಾಜದ ಮೇಲೆ ಹೆಚ್ಚಿನ ನಿಯಂತ್ರಣವನ್ನ ಹೊಂದಲು ಸಾಧ್ಯವಿದೆ. ಇದನ್ನ ತಮ್ಮ ಹಿತಕ್ಕೆ ಸರಕಾರ ಅಥವಾ ಟೆಲಿಕಾಮ್ ಸಂಸ್ಥೆಗಳು ಬಳಸಿಕೊಂಡದ್ದೇ ಆದರೆ ಜನ ಸಾಮಾನ್ಯನ ನಿತ್ಯ ಜೀವನದಲ್ಲಿ ಅವನ ನಿಯಂತ್ರಣ ಇರುವುದಿಲ್ಲ. ಅವನ ಅನುಮತಿಯಿಲ್ಲದೆ ಎಲ್ಲವೂ ನಡೆದು ಹೋಗುತ್ತದೆ. ಹೊಸ ತಂತ್ರಜ್ಞಾನದ ಬಗ್ಗೆ ಕೂಗು ಇಷ್ಟಕ್ಕೆ ನಿಲ್ಲುವುದಿಲ್ಲ, 5ಜಿ ತಂತ್ರಜ್ಞಾನದಲ್ಲಿ ಬಳಕೆಯಾಗುವ ತರಂಗಾಂತರಗಳು ಅತ್ಯಂತ ಪ್ರಕರವಾಗಿದ್ದು ಇದು ಮನುಷ್ಯನ ಆರೋಗ್ಯದ ಮೇಲೆ ಕೂಡ ಪರಿಣಾಮ ಬೀರಲಿದೆ ಎನ್ನುವ ಕೂಗು ಆಗಲೇ ಶುರುವಾಗಿದೆ. ಆ ಕೂಗನ್ನ ಕೂಡ ವ್ಯವಸ್ಥಿತವಾಗಿ ಹತ್ತಿಕ್ಕುವ ಕೆಲಸಗಳು ಆಗಿವೆ. ಸಂಶೋಧನೆ ನಡೆಸುವ ವಿಜ್ಞಾನಿಗಳ ಪ್ರಕಾರ ಇದು ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರುತ್ತದೆ ಎನ್ನುವುದಕ್ಕೆ ಪುರಾವೆ ಇಲ್ಲ. ಹೊಸತು ಯಾವುದೇ ಬಂದರೂ ಅದಕ್ಕೆ ಪ್ರಾರಂಭದಲ್ಲಿ ಅಡಚಣೆ ಇದ್ದೆ ಇರುತ್ತದೆ. ಆದರೆ ಇಂದಿನ ದಿನಗಳಲ್ಲಿ ಯಾರನ್ನೂ ಕೇಳದೆ ಹೊಸ ಬದಲಾವಣೆಗಳು ಚಲಾವಣೆಗೆ ಬಂದು ಬಿಡುತ್ತವೆ. ನಮಗೆ ಗೊತ್ತಿಲ್ಲದೇ ನಾವು ಅದನ್ನ ಬಳಸಲು ಕೂಡ ಶುರು ಮಾಡಿಬಿಡುತ್ತೇವೆ. ಇದರಿಂದ ಸಮಾಜಕ್ಕೆ ಒಳಿತಾಗುತ್ತದೆಯೇ ಅಥವಾ ಕೆಡುಕು ? ಎನ್ನುವುದನ್ನ ಸಮಯವೇ ನಿರ್ಧರಿಸಿ ಹೇಳುತ್ತದೆ. ಅಲ್ಲಿಯವರೆಗೆ ಸಮಯದ ಜೊತೆ ಜೊತೆಗೆ ನಡೆಯುವುದಷ್ಟೇ ನಮ್ಮ ಕೆಲಸ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com