ಆತಂಕ ಎಂಬ ಅಸ್ವಸ್ಥತೆ, ನಿಯಂತ್ರಣ ಹೇಗೆ? (ಕುಶಲವೇ ಕ್ಷೇಮವೇ)

ಇಂದು ನಮ್ಮ ಜೀವನಶೈಲಿಯಲ್ಲಿ ಬಿಡುವೇ ಇಲ್ಲವಾಗಿದೆ. ಯಾವಾಗಲೂ ಏನಾದರೂ ಕೆಲಸ ಮಾಡುತ್ತಿರುತ್ತೇವೆ ಅಥವಾ ಯೋಚಿಸುತ್ತಿರುತ್ತೇವೆ. ಇದರಿಂದ ಒಂದಲ್ಲಾ ಒಂದು ವಿಷಯಕ್ಕೆ ಆತಂಕ ಪಡುವುದು ಸಾಮಾನ್ಯವಾಗಿದೆ.
ಆತಂಕ
ಆತಂಕ

ಇಂದು ನಮ್ಮ ಜೀವನಶೈಲಿಯಲ್ಲಿ ಬಿಡುವೇ ಇಲ್ಲವಾಗಿದೆ. ಯಾವಾಗಲೂ ಏನಾದರೂ ಕೆಲಸ ಮಾಡುತ್ತಿರುತ್ತೇವೆ ಅಥವಾ ಯೋಚಿಸುತ್ತಿರುತ್ತೇವೆ. ಇದರಿಂದ ಒಂದಲ್ಲಾ ಒಂದು ವಿಷಯಕ್ಕೆ ಆತಂಕ ಪಡುವುದು ಸಾಮಾನ್ಯವಾಗಿದೆ.

ಆತಂಕ ಎಂದರೇನು?

ಆತಂಕ ಒಂದು ಮಾನಸಿಕ ಅಸ್ವಸ್ಥತೆ. ಯಾವುದೋ ಒಂದು ನಕಾರಾತ್ಮಕ ಆಲೋಚನೆಯು ನಮ್ಮ ಮಾನಸಿಕ ಸ್ಥಿತಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರಿಂದಾಗಿ ನಾವು ಯಾವ ಕೆಲಸವನ್ನೂ ಸರಿಯಾಗಿ ಮಾಡಲು ಆಗುವುದಿಲ್ಲ ಮತ್ತು ಸಂತೋಷದ ಸಂದರ್ಭದಲ್ಲೂ ಸಂತೋಷವನ್ನು ಅನುಭವಿಸುವುದಿಲ್ಲ. ಇಂದು ಆತಂಕ ವಿದ್ಯಾರ್ಥಿಗಳಿಂದ ಹಿಡಿದು ವೃದ್ಧರ ತನಕ ಯಾರಿಗೆ ಬೇಕಾದರೂ ಬರಬಹುದು.

ಆತಂಕವಿದ್ದಾಗ ಆಗಾಗ್ಗೆ ಏನೋ ಕೆಟ್ಟದ್ದೇನಾದರೂ ಸಂಭವಿಸುತ್ತದೆ ಎಂದು ಭಯ ಮತ್ತು ಚಿಂತೆ ಇರುತ್ತದೆ. ಚಿಂತೆಯ ಕಾರಣದಿಂದ ಯಾವುದೇ ವಿಷಯದ ಮೇಲೆ ಅಥವಾ ಕೆಲಸದ ಮೇಲೆ ಮನಸ್ಸನ್ನು ಕೇಂದ್ರೀಕರಿಸಲು ಕಷ್ಟವಾಗುತ್ತದೆ. ಇದರಿಂದಾಗಿ ಕೆಲಸ ಮಾಡುವುದನ್ನು ನಿಲ್ಲಿಸಬೇಕಾಗುತ್ತದೆ.

ಆತಂಕದ ಲಕ್ಷಣಗಳು

ಆತಂಕದಿಂದ ಉಸಿರಾಟವು ಹೆಚ್ಚಾಗಬಹುದು. ಹೃದಯ ಹೆಚ್ಚು ಜೋರಾಗಿ ಬಡಿಯಲು ಪ್ರಾರಂಭಿಸಬಹುದು. ಪ್ರತಿಯೊಬ್ಬರೂ ಕೆಲವೊಮ್ಮೆ ಆತಂಕವನ್ನು ಅನುಭವಿಸುತ್ತಾರೆ. ನಮ್ಮ ದೈನಂದಿನ ಹಣಕಾಸು ಸಮಸ್ಯೆ, ಸ್ನೇಹಿತರು ಮತ್ತು ಕುಟುಂಬದ ಕೆಲವು ಸಮಸ್ಯೆಗಳು ನಮ್ಮಲ್ಲಿ ಆತಂಕವನ್ನುಂಟು ಮಾಡುತ್ತವೆ. ಆದರೆ ಕೆಲವು ಸಂದರ್ಭಗಳಲ್ಲಿ ಒಂದು ನಿರ್ದಿಷ್ಟ ಮಟ್ಟದ ಆತಂಕವು ಸಾಮಾನ್ಯವಾಗಿದೆ ಮತ್ತು ನಾವು ಚೆನ್ನಾಗಿ ಕೆಲಸ ಮಾಡಲು ಸಹಕಾರಿಯಾಗುತ್ತದೆ.

ಉದ್ವಿಗ್ನತೆ, ಪ್ರಕ್ಷುಬ್ಧತೆ, ಬೆವರುವುದು, ಅಲುಗಾಡುವಿಕೆ, ದುರ್ಬಲತೆ ಅಥವಾ ದಣಿದ ಭಾವನೆ, ಗೀಳು ಚಿಂತನೆ ಅತಿಯಾದ ಭಯ ಮತ್ತು ಚಿಂತೆ, ಕೆಟ್ಟ ಸನ್ನಿವೇಶವನ್ನು ಕಲ್ಪಿಸಿಕೊಳ್ಳುವುದು. ಚಿಂತೆ ಮಾಡುವುದನ್ನು ಬಿಟ್ಟು ಬೇರೆ ಯಾವುದರ ಬಗ್ಗೆಯೂ ಯೋಚಿಸುವುದು ಕಷ್ಟವಾಗುವುದು, ರಾತ್ರಿ ಸರಿಯಾಗಿ ನಿದ್ರೆ ಬರದೇ ಇರುವುದು ಮತ್ತು ಹೊಟ್ಟೆ ಅಥವಾ ಜೀರ್ಣಕ್ರಿಯೆಯ ಸಮಸ್ಯೆಗಳು ಆತಂಕದ ಲಕ್ಷಣಗಳು.

ಆತಂಕವು ಜೀವನದ ಮೇಲೆ ಪರಿಣಾಮ ಬೀರಲು ಪ್ರಾರಂಭಿಸಿದಾಗ ಮತ್ತು ಸ್ನೇಹಿತರು, ಕುಟುಂಬ, ಕೆಲಸ ಅಥವಾ ಶಾಲೆಯಲ್ಲಿ ತೊಡಗಿಸಿಕೊಳ್ಳುವುದನ್ನು ತಡೆಯುವಾಗ ಆತಂಕದ ಕಾಯಿಲೆ ಉಂಟಾಗುತ್ತದೆ. ಆತಂಕದ ಕಾಯಿಲೆ ಇದ್ದರೆ ನಿಮ್ಮ ಕುಟುಂಬ ವೈದ್ಯರನ್ನು ಅಥವಾ ಮಾನಸಿಕ ಆರೋಗ್ಯ ವೃತ್ತಿಪರರನ್ನು ಭೇಟಿ ಮಾಡಿ.

ಆತಂಕದ ನಿಯಂತ್ರಣ ಹೇಗೆ?

ಆತಂಕವು ಸಮಸ್ಯೆಯಾಗಿ ಕಾಡುತ್ತಿದ್ದರೆ ಅದನ್ನು ನಿವಾರಿಸಿಕೊಳ್ಳಲು ಹಲವಾರು ಮಾರ್ಗಗಳಿವೆ. ಹಿತವಾದ ಸಂಗೀತ ಕೇಳುತ್ತ, ಇಷ್ಟವಾದ ಸಿನಿಮಾಗಳನ್ನು ನೋಡುತ್ತ, ದೀರ್ಘ ನಡಿಗೆಯನ್ನು ನಡೆಯುತ್ತ, ಹಬೆಯಾಡುವ ನೀರನ್ನು ಸ್ನಾನ ಮಾಡುವುದರಿಂದಲೋ ಹೀಗೆ ಹಲವಾರು ರಿಲ್ಯಾಕ್ಸೇಶನ್ ತಂತ್ರಗಳು ಆತಂಕದಿಂದ ಹೊರಬರುವಂತೆ ಮಾಡುತ್ತವೆ. ಚಿಂತೆಯಿಂದ ದೂರಮಾಡಿ ಲವಲವಿಕೆ ಉಂಟುಮಾಡುತ್ತವೆ.

ಆತಂಕದ ಫಲವಾಗಿ ಹೆಚ್ಚು ನಕಾರಾತ್ಮಕ ಭಾವನೆಗಳನ್ನು ಹೋಗಲಾಡಿಸಿಕೊಳ್ಳಲು ಯೋಗ ಮಾಡಬಹುದು. ಇದರ ಜೊತೆಗೆ ಪ್ರಾಣಾಯಾಮವನ್ನು ಮಾಡಿದರೆ, ನಿಮ್ಮ ಮನಸ್ಸು ಮತ್ತು ದೇಹದ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಬಹುದು. ಪ್ರಾಣಾಯಾಮ ಮತ್ತು ಯೋಗವು ಆತಂಕವನ್ನು ನಿಯಂತ್ರಿಸುವ ಅತ್ಯುತ್ತಮ ಚಟುವಟಿಕೆಗಳಾಗಿವೆ.

ಆತಂಕವನ್ನು ನಿಯಂತ್ರಿಸುವ ಅತ್ಯುತ್ತಮ ಪರಿಹಾರ ವ್ಯಾಯಾಮ ಮಾಡುವುದು. ವ್ಯಾಯಾಮವು ಒತ್ತಡ ಮತ್ತು ಆತಂಕವನ್ನು ನಿಯಂತ್ರಿಸುವ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ. ಒಂದು ಒಳ್ಳೆಯ ವ್ಯಾಯಾಮ ಅಥವಾ ವರ್ಕ್ ಔಟ್‍ನ ನಂತರ ಹೊಸ ಹುರುಪು ಉಂಟಾಗುತ್ತದೆ. ಆಗ ಸದಾ ತಲೆ ಕೊರೆಯುತ್ತಿರುವ ವಿಷಯಗಳನ್ನು ಪರಿಹರಿಸಲು ಹಲವಾರು ಮಾರ್ಗಗಳು ಹೊಳೆಯಬಹುದು. ಜಿಮ್, ತೂಕ ಎತ್ತುವುದು, ಟ್ರೇಡ್ ಮಿಲ್, ಓಟ, ಡಾನ್ಸಿಂಗ್ ಇತ್ಯಾದಿ ಚಟುವಟಿಕೆಗಳು ವ್ಯಾಯಾಮದಲ್ಲಿ ಬರುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ಪ್ರತಿದಿನವು 15 ನಿಮಿಷಗಳ ಕಾಲ ಧ್ಯಾನ ಮಾಡುವುದರಿಂದ ಬಹಳಷ್ಟು ಪ್ರಯೋಜನವಿದೆ. ಇದು ಆತಂಕವನ್ನು ನಿಭಾಯಿಸುವುದರ ಜೊತೆಗೆ ಹಲವಾರು ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ. ಧ್ಯಾನವು ಮನಸ್ಸನ್ನು ಶಾಂತಗೊಳಿಸಿ ವಿಶ್ರಾಂತಿಯನ್ನು ಒದಗಿಸುತ್ತದೆ. ಇಡೀ ದೇಹವನ್ನು ನಿಯಂತ್ರಿಸುವ ಮೆದುಳು ಮತ್ತು ಮನಸ್ಸು ವಿಶ್ರಾಂತಿಯನ್ನು ಪಡೆದರೆ ನವ ಚೈತನ್ಯ ಮೂಡುತ್ತದೆ.

ಮನಸ್ಸನ್ನು ಘಾಸಿಗೊಳಿಸುವ ಅಥವಾ ನೋವು ನೀಡುವ ಯಾವುದೇ ವಿಚಾರ ಎದುರಿಸುವ ಸಂದರ್ಭ ಬಂದಾಗ ಗಮನವನ್ನು ಬೇರೆ ವಿಷಯಗಳತ್ತ ಹೊರಳಿಸಿ. ತಂಪಾದ ನೀರಿನೊಳಗೆ ಕೈಗಳನ್ನು ಇರಿಸುವುದು, ಬಣ್ಣ ಹಚ್ಚುವುದು, ಚಿತ್ರ ಬಿಡಿಸುವುದು ಹೀಗೆ ನಿಮ್ಮ ಗಮನ ಬೇರೆಡೆ ಸೆಳೆಯುವ ಮೂಲಕ ಆತಂಕ ಕಡಿಮೆ ಮಾಡಿಕೊಳ್ಳಬಹುದು. ಆತಂಕ ಕಡಿಮೆಯಾಗಲು ಒಬ್ಬ ವ್ಯಕ್ತಿ ದಿನಕ್ಕೆ 7ರಿಂದ 9 ಗಂಟೆಗಳ ಕಾಲ ಉತ್ತಮವಾಗಿ ನಿದ್ದೆ ಮಾಡಬೇಕು. ನಿದ್ರಾಹೀನತೆ ಕೂಡಾ ಆತಂಕ ಹೆಚ್ಚಾಗಲು ಕಾರಣವಾಗುತ್ತದೆ.

ಆಯುರ್ವೇದದಲ್ಲಿ ಆತಂಕ ನಿವಾರಣೆಗೆ ಬ್ರಾಹ್ಮಿ, ಜೋತಿಷ್ಮತಿ ಮುಂತಾದ ಗಿಡಮೂಲಿಕೆಗಳಿಂದ ತಯಾರಿಸಿದ ಔಷಧಿಗಳು ಲಭ್ಯವಿದೆ. ಜೊತೆಗೆ ಶಿರೋಧಾರಾ ಚಿಕಿತ್ಸೆಯೂ ಆತಂಕ ನಿವಾರಣೆಗೆ ಸಹಾಯಕವಾಗಿದೆ.

ಕೆಲವೊಮ್ಮೆ ವಿದ್ಯಾರ್ಥಿಗಳು ಚೆನ್ನಾಗಿ ಓದಿಕೊಂಡಿದ್ದರೂ ಭಯ, ಆತಂಕದಿಂದ ಗಾಬರಿಯಾಗಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸುತ್ತಾರೆ. ಉತ್ತಮ ಅಂಕಗಳನ್ನು ಗಳಿಸಲು ಓದುವಾಗ ಸಮಾಧಾನ, ಶಾಂತಿ ಮತ್ತು ಏಕಾಗ್ರತೆ ಮುಖ್ಯ. ಇದರಿಂದ ನೆನಪಿನ ಶಕ್ತಿ ಉಳಿಯುತ್ತದೆ. ಒತ್ತಡ, ಅತಿಯಾದ ಕಂಪ್ಯೂಟರ್ ಬಳಕೆ, ಟಿವಿ ವೀಕ್ಷಣೆ, ಬೇಡವಾದ ವಿಷಯಗಳ ಬಗ್ಗೆ ಯೋಚನೆ ಮಾಡುವುದರಿಂದ ಮನಸ್ಸು ಚಂಚಲವಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಸದಾಚಾರ, ಒಳ್ಳೆಯ ಜೀವನಶೈಲಿ, ಯೋಗ ಮತ್ತು ಪ್ರಾಣಾಯಾಮ ಮಾಡುವ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಓದಿದ್ದನ್ನು ಆಗಾಗ ಮನನ ಮಾಡುವುದು ಒಳ್ಳೆಯ ಕ್ರಮ. 

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com