ಸೋರಿಯಾಸಿಸ್ ಗೆ ಖಚಿತ ಪರಿಹಾರವಿದೆಯೇ?: ನೀವು ತಿಳಿಯಬೇಕಾದ ಅಂಶಗಳು... (ಕುಶಲವೇ ಕ್ಷೇಮವೇ)

ಸೋರಿಯಾಸಿಸ್ ಸಾಮಾನ್ಯ ಚರ್ಮರೋಗದ ಕಾಯಿಲೆಗಳಲ್ಲಿ ಒಂದಾಗಿದೆ. ಇದು ದೀರ್ಘಕಾಲದ, ಸಾಂಕ್ರಾಮಿಕವಲ್ಲದ, ರೋಗನಿರೋಧಕ ಶಕ್ತಿಯ ವೈಪರೀತ್ಯದಿಂದ ಉಂಟಾಗುವ ಮತ್ತು ಉರಿಯೂತದ ಚರ್ಮದ ತೊಂದರೆಯಾಗಿದೆ.
ಸೋರಿಯಾಸಿಸ್ (ಸಂಗ್ರಹ ಚಿತ್ರ)
ಸೋರಿಯಾಸಿಸ್ (ಸಂಗ್ರಹ ಚಿತ್ರ)

ಸೋರಿಯಾಸಿಸ್ ಸಾಮಾನ್ಯ ಚರ್ಮರೋಗದ ಕಾಯಿಲೆಗಳಲ್ಲಿ ಒಂದಾಗಿದೆ. ಇದು ದೀರ್ಘಕಾಲದ, ಸಾಂಕ್ರಾಮಿಕವಲ್ಲದ, ರೋಗನಿರೋಧಕ ಶಕ್ತಿಯ ವೈಪರೀತ್ಯದಿಂದ ಉಂಟಾಗುವ ಮತ್ತು ಉರಿಯೂತದ ಚರ್ಮದ ತೊಂದರೆಯಾಗಿದೆ. ಸೋರಿಯಾಸಿಸ್ ಮುಖ್ಯವಾಗಿ ಚರ್ಮದ ಒಳಕೋಶಗಳಿಗೆ ತೊಂದರೆಯುಂಟುಮಾಡುತ್ತದೆ ಮತ್ತು ಚರ್ಮ ಕೋಶಗಳ ಉತ್ಪಾದನೆಯನ್ನು ಅನಿಯಮಿತವಾಗಿ ಹೆಚ್ಚಿಸುತ್ತದೆ. 

ಸೋರಿಯಾಸಿಸ್ ಚರ್ಮರೋಗದ ಲಕ್ಷಣಗಳು

ಸಾಮಾನ್ಯವಾಗಿ ಸೋರಿಯಾಸಿಸ್ ತುರಿಕೆ ಅಥವಾ ಗಂಧೆ ರೂಪದ ಚರ್ಮ ವ್ಯಾಧಿಯಾಗಿದ್ದು ಬಿಳಿಯ ಪದರಗಳ ರೂಪದಲ್ಲಿ ಚರ್ಮದ ನಿರ್ಜೀವ ಕೋಶಗಳು ಶೇಖರಣೆಗೊಂಡು ನಿರಂತರವಾಗಿ ಚಕ್ಕೆಗಳ ರೂಪದಲ್ಲಿ ಬೀಳುತ್ತಿರುತ್ತದೆ. ಸೋರಿಯಾಸಿಸ್ ಲಕ್ಷಣಗಳು ರೋಗಿಯಿಂದ ರೋಗಿಗೆ ಬೇರೆ ಬೇರೆಯಾಗಿರುತ್ತದೆ. ಇದು ಕೇವಲ ದೈಹಿಕವಾಗಿ ಮಾತ್ರವಲ್ಲ ಭಾವನಾತ್ಮಕ ಹಾಗೂ ಮಾನಸಿಕ ಸ್ವಾಸ್ಥ್ಯದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಇಂದು ವಿಶ್ವದ ಶೇಕಡ 2 ರಿಂದ 4 ರಷ್ಟು ಜನರಲ್ಲಿ ಸೋರಿಯಾಸಿಸ್ ಕಂಡುಬಂದಿದೆ ಅಂದಾಜಿಸಲಾಗಿದೆ.

ಸೋರಿಯಾಸಿಸ್ ಪುರುಷರು ಮತ್ತು ಮಹಿಳೆಯರಲ್ಲಿ ಸಮಾನವಾಗಿ ಯಾವುದೇ ವಯಸ್ಸಿನಲ್ಲಿಯಾದರೂ ಕಾಣಿಸಿಕೊಳ್ಳಬಹುದು.  ಸಾಮಾನ್ಯವಾಗಿ ತಲೆಯ ನೆತ್ತಿ, ದೇಹ ಮತ್ತು ಕೈ-ಕಾಲುಗಳಲ್ಲಿ ಕೆಂಪು ಚಕ್ಕೆಯ ರೀತಿ ಸೋರಿಯಾಸಿಸ್ ಕಂಡುಬರುತ್ತದೆ. ನೆತ್ತಿಯಲ್ಲಿ ಕಾಣಿಸಿಕೊಳ್ಳುವ ಚರ್ಮದ ಚಕ್ಕೆಗಳು ದಪ್ಪಗಿರುತ್ತವೆ ಮತ್ತು ಸಾಮಾನ್ಯ ತಲೆಹೊಟ್ಟಿಗಿಂತ ಹೆಚ್ಚು ವ್ಯಾಪಕವಾಗಿ ಹರಡಿರುತ್ತವೆ.  ಇದಕ್ಕೆ ಕಾರಣ ಏನು ಎಂಬುದು ನಿಖರವಾಗಿ ತಿಳಿದಿಲ್ಲ. ಆದರೆ ಆನುವಂಶಿಕ ದೇಹಸ್ಥಿತಿ ಮತ್ತು ಪರಿಸರದ ಅಂಶಗಳ ಸಂಪರ್ಕದ ಸಂಕೀರ್ಣ ಪ್ರಭಾವವು ಸೋರಿಯಾಸಿಸ್ ಉಂಟಾಗಲು ಕಾರಣವಾಗುತ್ತದೆ ಎನ್ನುವುದು ಕೆಲವು ಅಧ್ಯಯನಗಳ ಅಭಿಪ್ರಾಯ.

ಸೋರಿಯಾಸಿಸ್ ಚರ್ಮರೋಗ ತಡೆಯುವುದು ಹೇಗೆ?

ಸೋರಿಯಾಸಿಸ್ಸನ್ನು ತಡೆಗಟ್ಟಲು ಪ್ರತಿದಿನ ಸಾಕಷ್ಟು ನೀರು ಕುಡಿಯುವುದು ಮತ್ತು ಹೆಚ್ಚು ಪ್ರೊಟೀನ್‍ಯುಕ್ತ ಆಹಾರ ಸೇವನೆ ಬಹಳ ಮುಖ್ಯ. ಹಾಗೆಯೇ ಚರ್ಮ ಉದುರಿ ಹೋಗದಂತೆ ಕೊಬ್ಬರಿ ಎಣ್ಣೆ ಮಾಯ್ಚಿರೈಸರನ್ನು ನಿಯಮಿತವಾಗಿ ಹಚ್ಚಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಚರ್ಮ ಒಣಗದಂತೆ ನೋಡಿಕೊಳ್ಳಬೇಕು. ಮನೆ ಅಥವಾ ಕಚೇರಿಯಲ್ಲಿ ಮಾಯಿಶ್ಚರೈಸರನ್ನು ಸದಾ ಕಾಲ ಹಚ್ಚಿಕೊಂಡಿರಬೇಕು. ಚರ್ಮದ ಮೃದುತ್ವ ಕಾಪಾಡಲು ಒಮೆಗಾ 3 ಇರುವ ಆಹಾರ ಸೇವಿಸುವುದು, ಪ್ರತಿದಿನ ವ್ಯಾಯಾಮ ಮಾಡುವುದು, ಪ್ರತಿನಿತ್ಯ ಬೆಳಗಿನ ಸೂರ್ಯ ಕಿರಣಗಳಿಗೆ ದೇಹವನ್ನು ಒಡ್ಡುವುದು ಚರ್ಮದ ಆರೋಗ್ಯಕ್ಕೆ ಬಹಳ ಉತ್ತಮ. ಚಳಿಗಾಲ, ಮಾನಸಿಕ ಒತ್ತಡ, ಧೂಮಪಾನ, ಮದ್ಯಪಾನ ಮತ್ತು ಕೆಲವು ದುರಾಭ್ಯಾಸಗಳಿಂದ ಕಾಯಿಲೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಈ ಬಗ್ಗೆ ಹುಷಾರಾಗಿರಬೇಕು. 

ಸೋರಿಯಾಸಿಸ್‍ಗೆ ಪರಿಹಾರವಿದೆಯೇ?

ಸೋರಿಯಾಸಿಸ್‍ಗೆ ಖಚಿತ/ನಿಖರ ಪರಿಹಾರ ಎಂಬುದು ಯಾವುದೂ ಇಲ್ಲ. ಆದರೆ ಸೋರಿಯಾಸಿಸ್‍ಗೆ ನೀಡುವ ಚಿಕಿತ್ಸೆಗಳು ಕಾಯಿಲೆಯ ನಿಯಂತ್ರಣದಲ್ಲಿ ಪರಿಣಾಮಕಾರಿ ಆಗಿರುತ್ತವೆ. ಇದರಿಂದ ಈ ಸಮಸ್ಯೆ ಬರದಂತೆ ಸಾಕಷ್ಟು ನಿಯಂತ್ರಣ ಮಾಡಲು ಸಾಧ್ಯ. ಇದಕ್ಕೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಎಂಬುದಿಲ್ಲ. ಚಿಕಿತ್ಸೆಯು ರೋಗದ ಪ್ರಮಾಣ, ರೋಗ ನಿರೋಧಕ ಶಕ್ತಿ ಮತ್ತು ರೋಗದ ಹಂತವನ್ನು ಅವಲಂಬಿಸಿರುತ್ತದೆ. ರೋಗಿಗೆ ಆಪ್ತಸಲಹೆ ನೀಡುವುದು ಮತ್ತು ರೋಗದ ಸ್ವರೂಪ, ಗುಣ, ಹರಡುವಿಕೆ, ಅದು ಮರುಕಳಿಸುವ ಸಾಧ್ಯತೆಗಳು ಮತ್ತು ಅದರ ಉಲ್ಬಣಕ್ಕೆ ಕಾರಣವಾಗುವ ಅಂಶಗಳ ಬಗ್ಗೆ ವಿವರಿಸುವುದು ಬಹಳ ಮುಖ್ಯ.  

ಸೋರಿಯಾಸಿಸ್‍ಗೆ ಆಯುರ್ವೇದದಲ್ಲಿ ಚಿಕಿತ್ಸೆ

ಸೋರಿಯಾಸಿಸ್ ಸಮಸ್ಯೆಗೆ ಆಯುರ್ವೇದದಲ್ಲಿ ಪಂಚಕರ್ಮ ಚಿಕಿತ್ಸೆ ಇದೆ. ವಿರೇಚನ ಶೋಧನಾ ಚಿಕಿತ್ಸೆಯಿಂದ ದೇಹದೊಳಗಿರುವ ದೋಷಗಳನ್ನು ಹೊರಹಾಕಬಹುದು. ಒಂದು ವಾರ ವಿರೇಚನ ಚಿಕಿತ್ಸೆ ತೆಗೆದುಕೊಳ್ಳಬೇಕು. ಸೋರಿಯಾಸಿಸ್ ಮೈಯ್ಯಲ್ಲೆಲ್ಲ ಅಥವಾ ತಲೆಯಲ್ಲಿ ಹರಡಿದ್ದರೆ ಔಷಧೀಯ ಸರ್ವಾಂಗಧಾರಾ/ ಶಿರೋಧಾರಾ ಚಿಕಿತ್ಸೆ ಮಾಡಿಸಿಕೊಳ್ಳಬಹುದು. ವಿವಿಧ ರೀತಿಯ ಔಷಧೀಯ ತೈಲಗಳನ್ನು ಬಳಸಿ ಪ್ರತಿದಿನ ಸ್ನಾನದ ಮೊದಲು ಮತ್ತು ನಂತರ ಸೋರಿಯಾಸಿಸ್ಸಿನಿಂದ ಬಾಧಿತ ಚರ್ಮವನ್ನು ಸ್ವಚ್ಛಗೊಳಿಸಬಹುದು. ಸ್ನಾನದ ವೇಳೆಯಲ್ಲಿಯೂ ಔಷಧೀಯ ಕಷಾಯಗಳಿಂದ ಬಾಧಿತ ಭಾಗವನ್ನು ಸ್ವಚ್ಛಮಾಡಿಕೊಳ್ಳಬಹುದು.

ಸೋರಿಯಾಸಿಸ್‍ ನಿಯಂತ್ರಣಕ್ಕೆ ಪಥ್ಯವೂ ಮುಖ್ಯ

ಸೋರಿಯಾಸಿಸ್ ಪರಿಣಾಮವನ್ನು ಕಡಿಮೆ ಮಾಡಲು ಆಹಾರದಲ್ಲಿ ಪಥ್ಯವೂ ಬಹಳ ಮುಖ್ಯ. ಬಾಳೆಹಣ್ಣು, ಅಲಸಂದೇ, ಕಡಲೆಕಾಳು ಇಂತಹ ವಾಯು ಪದಾರ್ಥಗಳು ಮತ್ತು ಮಸಾಲೆ ಪದಾರ್ಥಗಳನ್ನು ವರ್ಜಿಸಬೇಕು. ಕಾಫೀ ಮತ್ತು ಟೀ ಸೇವನೆಯನ್ನು ಮಿತಗೊಳಿಸಬೇಕು. ಜೊತೆಗೆ ಮಾನಸಿಕ ನೆಮ್ಮದಿ ಬಹಳ ಮುಖ್ಯ. ಮಾನಸಿಕ ಒತ್ತಡ ಹೆಚ್ಚಾಗಿದ್ದರೆ, ಖಿನ್ನತೆ ಮತ್ತು ಆತಂಕ ಇದ್ದರೆ ಸೋರಿಯಾಸಿಸ್ ಮತ್ತೆ ಮತ್ತೆ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಆದ್ದರಿಂದ ಧ್ಯಾನ, ಸಾಹಿತ್ಯದ ಓದು, ಸಂಗೀತ, ಕ್ರೀಡೆ, ತೋಟಗಾರಿಕೆ ಮತ್ತು ವಿವಿಧ ಹವ್ಯಾಸಗಳಲ್ಲಿ ತೊಡಗಿಕೊಳ್ಳುವುದು ಉತ್ತಮ. ಆರರಿಂದ ಎಂಟು ಗಂಟೆಗಳ ಕಾಲ ಪ್ರತಿದಿನ ನಿದ್ದೆ ಮಾಡಬೇಕು. ದೇಹದ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಗಮನ ನೀಡಬೇಕು. ಹೆಚ್ಚಾಗಿ ಹುರಿದ, ಕರಿದ, ಹೆಚ್ಚು ಉಪ್ಪು, ಖಾರ ಹಾಗೂ ಮೈದಾ ಅಥವಾ ಹಿಟ್ಟಿನಿಂದ ಮಾಡಿದ ಆಹಾರ ಸೇವಿಸಬಾರದು. 

ವ್ಯಾಯಾಮ, ಯೋಗ, ವಿಶ್ರಾಂತಿ ಮತ್ತು ಧ್ಯಾನದಂತಹ ಆರೋಗ್ಯಕರ ಜೀವನಶೈಲಿಯ ಅಭ್ಯಾಸವನ್ನು ಅಳವಡಿಸಿಕೊಳ್ಳಬೇಕು. ಈ ಅಭ್ಯಾಸಗಳು ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ ಮತ್ತು ಸೋರಿಯಾಸಿಸ್ ಸ್ಥಿತಿಯ ತೀವ್ರತೆಯನ್ನು ನಿರ್ವಹಿಸಲು ಅನುಕೂಲಕರ.

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com