ಬಿಎಸ್ ವೈ ವಿರುದ್ಧದ ಸಮರದಲ್ಲಿ ಸೋಮಣ್ಣ ಏಕಾಂಗಿ! (ಸುದ್ದಿ ವಿಶ್ಲೇಷಣೆ)

-ಯಗಟಿ ಮೋಹನ್ಬಿಜೆಪಿಯಲ್ಲೇ ಉಳಿಯಬೇಕೋ..? ಕಾಂಗ್ರೆಸ್ ಗೆ  ಹೋಗಬೇಕೊ? ಹೋದರೆ ಏನು ಲಾಭ? ಹೋಗದೇ ಉಳಿದರೆ ಮುಂದಿನ ರಾಜಕಾರಣದ ಕತೆ ಏನು?
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬಿಜೆಪಿಯಲ್ಲೇ ಉಳಿಯಬೇಕೋ…? ಕಾಂಗ್ರೆಸ್ ಗೆ ಹೋಗಬೇಕೊ? ಹೋದರೆ ಏನು ಲಾಭ? ಹೋಗದೇ ಉಳಿದರೆ ಮುಂದಿನ ರಾಜಕಾರಣದ ಕತೆ ಏನು?

ಬಿಜೆಪಿಯ ಪ್ರಮುಖ ನಾಯಕ, ಮಾಜಿ ಸಚಿವ ವಿ. ಸೋಮಣ್ಣ ಎದುರಿಸುತ್ತಿರುವ ಗೊಂದಲದ ಸ್ಥಿತಿ ಇದು. ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎರಡೂ ಕ್ಷೇತ್ರಗಳಲ್ಲಿ ಸೋತ ನಂತರ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿಯ ಪ್ರಶ್ನಾತೀತ ನಾಯಕ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಕುದಿಯುತ್ತಿದ್ದ ಅವರಿಗೆ ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ, ವಿಧಾನಸಭೆಯ ಪ್ರತಿಪಕ್ಷದ ನಾಯಕನಾಗಿ ಮತ್ತೊಬ್ಬ ಮುಖಂಡ ಆರ್.ಅಶೋಕ್ ನೇಮಕಗೊಂಡಂದಿನಿಂದ ವಿಚಿತ್ರ ಚಡಪಡಿಕೆಯಲ್ಲಿದ್ದಾರೆ.

ಭವಿಷ್ಯದ ರಾಜಕಾರಣದ ದೃಷ್ಟಿಯಿಂದ ಕಾಂಗ್ರೆಸ್ ಸೇರಲು ನಿರ್ಧರಿಸಿದ್ದರೂ ಪರಿಸ್ಥಿತಿ ಅವರಿಗೆ ಪೂರ್ಣ ಅನುಕೂಲವಾಗಿಲ್ಲ. ಇದಕ್ಕೆ ಕಾರಣ ಅವರ ದಾರಿ ಪೂರ್ಣ ಸುಗಮವಾಗಿಲ್ಲ. ಹೀಗಾಗಿ ಬಿಜೆಪಿ ತೊರೆಯುವ ಬಗ್ಗೆ ಅವರಿನ್ನೂ ಅಂತಿಮ ತೀರ್ಮಾನ  ಕೈಗೊಂಡಂತೆ ಕಾಣುತ್ತಿಲ್ಲ. ಚುನಾವಣೆಗೆ ಮುನ್ನ ಅವರನ್ನು 'ಸಂತೋಷ' ದಿಂದ ಹೊತ್ತು ಮೆರೆದಿದ್ದ ಬಿಜೆಪಿಯ ಕೆಲವು ನಾಯಕರಿಗೂ ಈಗ ಅವರು ಬೇಕಾಗಿಲ್ಲ. ಬದಲಾದ ಸನ್ನಿವೇಶದಲ್ಲಿ ಹೈಕಮಾಂಡ್ ಮುಂದೆ ತಮ್ಮ ಅಸ್ತಿತ್ವ ಉಳಿದರೆ ಸಾಕು ಎಂಬ ತೀರ್ಮಾನಕ್ಕೆ ಬಂದಿರುವ ಅವರು ಅತ್ಯಂತ ರಕ್ಷಣಾತ್ಮಕ ಆಟ ಆರಂಭಿಸಿದ್ದಾರೆ.

ಹೀಗಾಗಿ ಸದ್ಯಕ್ಕೆ ಸೋಮಣ್ಣ ಅವರದ್ದು ಒಂಟಿ ಹೋರಾಟ. ರಾಜಕಾರಣದ ಮುಂದಿನ ಹಾದಿಯಲ್ಲಿ ತನ್ನನ್ನು ಬೆಂಬಲಿಸಿ ಜೊತೆಗಿರಬಹುದೆಂಬ ನಿರೀಕ್ಷೆ ಇಟ್ಟುಕೊಂಡಿದ್ದ ಬಿಜೆಪಿಯ ಉಳಿದ ಅತೃಪ್ತರೂ ಈಗ ಹೋರಾಟದ ಹಾದಿಯಿಂದ ಹಿಂದೆ ಸರಿದಿದ್ದಾರೆ. ಅವರೇ ಹಿಂದೆ ಸರಿದಿದ್ದಾರೆ ಎಂಬದಕ್ಕಿಂತ ಸಂಘ ಪರಿವಾರದ ಹಿನ್ನಲೆಯಿಂದ ಬಂದ ಈ ಮುಖಂಡರನ್ನು ಸಂಘಟನೆಯ ಪ್ರಮುಖರು ಸುಮ್ಮನಾಗಿರಿಸಿದ್ದು ಯಡಿಯೂರಪ್ಪ ಅಥವಾ ವಿಜಯೇಂದ್ರ ವಿರುದ್ಧ ಯಾವುದೇ ಅಸಮಾಧಾನ ಮಾತುಗಳನ್ನಾಡದಂತೆ ತಾಕೀತು ಮಾಡಿದ್ದಾರೆ. ಹೀಗಾಗಿ ಬೆಂಬಲಿಸುವವರು ಎಂದೇ ಭಾವಿಸಲಾಗಿದ್ದ ಮುಖಂಡರು ಹೆಜ್ಜೆ ಹಿಂದೆ ಇಟ್ಟಿದ್ದಾರೆ. ಮತ್ತೊಂದು ಕಡೆ ನೂತನ ಅಧ್ಯಕ್ಷ ಬಿ.ವೈ ವಿಜಯೇಂದ್ರ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಪ್ರಮುಖರು ಸೋಮಣ್ಣ ಅಸಮಾಧಾನವನ್ನು ಗಂಭಿರವಾಗಿ ಪರಿಗಣಿಸದೇ ಉಪೇಕ್ಷಿಸಿದ್ದಾರೆ.

ಯಡಿಯೂರಪ್ಪನವರೇ ತಮ್ಮ ದೂರವಾಣಿ ಕರೆಗಳಿಗೆ ಸೋಮಣ್ಣ ಸಿಗುತ್ತಿಲ್ಲ. ಹೀಗಾಗಿ ಅವರನ್ನು ಸಂಪರ್ಕಿಸಿ ಮಾತನಾಡಲು ಆಗುತ್ತಿಲ್ಲ ಎಂದು ಬಹಿರಂಗವಾಗೇ ಸ್ಪಷ್ಟ ಪಡಿಸಿರುವುದರೊಂದಿಗೆ ಸಂಧಾನದ ಪ್ರಯತ್ನಗಳನ್ನು ತಳ್ಳಿ ಹಾಕಿದ್ದಾರೆ. ಹೀಗಾಗಿ ಅವರ ಪಾಲಿಗೆ ಸಂಧಾನದ ಬಾಗಿಲುಗಳು ಮುಚ್ಚಿದಂತಾಗಿದೆ. ಇದರಿಂದ ತೀವ್ರ ಅಸಮಾಧಾನಗೊಂಡಿರುವ ಸೋಮಣ್ಣ ಕಾಂಗ್ರೆಸ್ ಸೇರಲು ನಿರ್ಧರಿಸಿದ್ದಾರೆ.

ಡಿಸೆಂಬರ್ 6 ರಂದು ಏನಾಗಲಿದೆ?
ಡಿಸೆಂಬರ್ 6 ರಂದು ತುಮಕೂರಿನ ಸಿದ್ದಗಂಗಾ ಮಠದಲ್ಲಿ ತಮ್ಮ ಟ್ರಸ್ಟ್ ನಿಂದ ಕಟ್ಟಲಾಗಿರುವ ನೂತನ ಕಟ್ಟಡದ ಉದ್ಘಾಟನಾ ಸಮಾರಂಭವನ್ನು ಆಯೋಜಿಸಿರುವ ಸೋಮಣ್ಣ ಆ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರದ ಅದರಲ್ಲೂ ತುಮಕೂರು ಜಿಲ್ಲೆಯ ಸಚಿವರು ಶಾಸಕರನ್ನು ಕರೆದಿದ್ದಾರೆ. ಆದರೆ ಈ ಕಾರ್ಯಕ್ರಮಕ್ಕೆ ಯಡಿಯೂರಪ್ಪ ಅವರಿಗೆ ಆಮಂತ್ರಣ ಇಲ್ಲ.

ಈ ಮೊದಲು ಈ ಕಾರ್ಯಕ್ರಮ ರಾಜಕೀಯ ಶಕ್ತಿ ಪ್ರದರ್ಶನದ ವೇದಿಕೆ ಆಗಬಹುದೆಂಬ ನಿರೀಕ್ಷೆಗಳು ಇತ್ತಾದರೂ ಅದರಿಂದ ಆಗಬಹುದಾದ ಸಂಭವನೀಯ ಅಪಾಯ ಅರಿತು ಮುನ್ನೆಚ್ಚರಿಕೆ ವಹಿಸಿದ ಮಠದ ಆಡಳಿತ ಅದನ್ನು ರಾಜಕೀಯ ಸಮಾರಂಭ ಮಾಡದಂತೆ ನೀಡಿದ ಸೂಚನೆಯ ಫಲವಾಗಿ ಬಲಾಬಲ ಪ್ರದರ್ಶನ ತಾತ್ಕಾಲಿಕವಾಗಿ ಮುಂದಕ್ಕೆ ಹೋಗಿದೆ.

ರಾಜಕೀಯ ಚಟುವಟಿಕೆಗಳೊಂದಿಗೆ ಎಂದಿಗೂ ಗುರುತಿಸಿಕೊಳ್ಳದ ತನ್ನ ಪರಂಪರಾನುಗತ ನಿಲುವನ್ನು ಸಿದ್ದಗಂಗಾ ಮಠ ಮುಂದುವರಿಸಿಕೊಂಡು ಬರುವ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಕಾಂಗ್ರೆಸ್ ಸೇರಿ ತುಮಕೂರು ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ನಿಲ್ಲುವ ಆಲೋಚನೆಯಲ್ಲಿರುವ ಸೋಮಣ್ಣ ಅವರಿಗೆ ಅಲ್ಲಿ ಲೆಕ್ಕಾಚಾರಗಳು ರಾಜಕೀಯ ಸಮೀಕರಣಗಳು ಹೊಂದಾಣಿಕೆ ಆಗುವ ಸಾಧ್ಯತೆಗಳು ಕಂಡು ಬರುತ್ತಿಲ್ಲ. ತಮ್ಮ ರಾಜಕೀಯ ಭವಿಷ್ಯವನ್ನು ಕಾಯ್ದುಕೊಳ್ಳುವುದರ ಜತೆಗೇ ಪುತ್ರನಿಗೊಂದು ರಾಜಕೀಯ ಭದ್ರತೆ ಕಲ್ಪಿಸಬೇಕಾದ ಅನಿವಾರ್ಯತೆಗೆ ಸಿಲುಕಿರುವ ಅವರಿಗೆ ಸದ್ಯಕ್ಕೆ ಮುಂದಿನ ದಾರಿ ಸ್ಪಷ್ಟವಾಗಿ ಗೋಚರವಾಗುತ್ತಿಲ್ಲ.

ಕಾಂಗ್ರೆಸ್ ಮುಖಂಡರೇನೋ ಪಕ್ಷಕ್ಕೆ ಸ್ವಾಗತಿಸುವ ಸಂಭ್ರಮದಲ್ಲಿದ್ದಾರೆ. ಆದರೆ ಪುತ್ರನಿಗೆ ರಾಜಕೀಯ ಆಶ್ರಯ ಕಲ್ಪಿಸುವ ವಿಚಾರದಲ್ಲಿ ಯಾವುದೇ ಸ್ಪಷ್ಟ ಭರವಸೆಗಳು ಸಿಗುತ್ತಿಲ್ಲ. ಈ ಮೊದಲು ಬಿಜೆಪಿಯಲ್ಲೇ ಈ ಪ್ರಯೋಗ ಮಾಡಲು ಅವರು ಬಯಸಿದ್ದರಾದರೂ ಅಲ್ಲಿ ಕುಟುಂಬ ರಾಜಕಾರಣದ ನೆಪವೊಡ್ಡಿ ಅವರ ಮಹತ್ವಾಕಾಂಕ್ಷೆಗೆ ತಡೆಯೊಡ್ಡಲಾಯಿತು. ಈಗ ಮತ್ತೆ ಅದೇ ಪ್ರಯೋಗವನ್ನು ಕಾಂಗ್ರೆಸ್ ನಲ್ಲಿ ಮಾಡಲು ಬಯಸಿದ್ದಾರಾದರೂ ಅದೂ ಸುಲಭವಾಗೇನೂ ಇಲ್ಲ. ಹೀಗಾಗಿ ಒಂದು ಕಡೆ ಯಡಿಯೂರಪ್ಪ ಹಾಗೂ ಕುಟುಂಬದ ಜತೆ ಹೊಂದಿಕೊಳ್ಳಲೂ ಆಗದೇ ಮತ್ತೊಂದು ಕಡೆ ಕಾಂಗ್ರೆಸ್ ಸೇರುವ ಹಾದಿಯೂ ಸುಗಮವಾಗದೇ ತೊಳಲಾಟಕ್ಕೆ ಸಿಕ್ಕಿದ್ದಾರೆ.

ಯಡಿಯೂರಪ್ಪನವರು ಮುಖ್ಯಮಂತ್ರಿ  ಪದವಿಯಿಂದ ಕೆಳಗಿಳಿದ ನಂತರ ಅವರಿಂದ ನಿಧಾನವಾಗಿ ದೂರವಾಗುತ್ತಾ ಬಂದ ಸೋಮಣ್ಣ ಒಂದು ನಂತರ ಮುಖ್ಯಮಂತ್ರಿಯಾದ ಬಸವರಾಜ ಬೊಮ್ಮಾಯಿಯವರಿಗೆ ಹತ್ತಿರವಾಗುವ ಪ್ರಯತ್ನ ಮಾಡಿದರಾದರೂ ಅಧಿಕಾರದಲ್ಲಿದ್ದಷ್ಟು ಕಾಲ ಯಡಿಯೂರಪ್ಪ ಅವರ ಆದೇಶಗಳನ್ನು ಶಿರಸಾ ವಹಿಸಿ ಪಾಲಿಸುವುದರಲ್ಲೇ ಕೃತಾರ್ಥರಾದ ಬೊಮ್ಮಾಯಿ ಸೋಮಣ್ಣ ನವರ ಇಷ್ಟಾರ್ಥಗಳಿಗೆ ಬೆಂಬಲ ನೀಡದೇ ಉಪಾಯವಾಗಿ ಅಂತರ ಕಾಯ್ದುಕೊಂಡರು.

ಇತ್ತೀಚೆಗೆ ವಿಜಯೇಂದ್ರ ಪಕ್ಷದ ಅಧ್ಯಕ್ಷರಾಗಿ ನೇಮಕಗೊಂಡ ನಂತರವೂ ಅತೃಪ್ತರೊಡಗೂಡಿ ಪಕ್ಷದಲ್ಲಿ ತಾನೂ ಒಬ್ಬ ಬಲಿಷ್ಠ ನಾಯಕ ಎಂಬ ಸಂದೇಶ ನೀಡಲು ಅವರು ನಡೆಸಿದ ಪ್ರಯತ್ನವೂ ವಿಫಲವಾಗಿದೆ. ದಿಲ್ಲಿಗೆ ನಿಯೋಗದೊಂದಿಗೆ  ತೆರಳಿ ಬಿಜೆಪಿ ಹೈಕಮಾಂಡ್ ನ ಪ್ರಮುಖರನ್ನು ಭೇಟಿ ಆಗಿ ತಮ್ಮ ಅಸಮಾಧಾನ ತೋಡಿಕೊಳ್ಳಲು ನಿರ್ಧರಿಸಿದ್ದರಾದರೂ ವಿಜಯೇಂದ್ರ ಆಯ್ಕೆ ಕುರಿತು ಎಷ್ಟೇ ಅಸಮಾಧಾನಗಳಿದ್ದರೂ ಅವರೊಂದಿಗೆ ಗುರುತಿಸಿಕೊಳ್ಳಲು ಶಾಸಕರಾದ ಬಸವನಗೌಡ ಪಾಟೀಲ ಯತ್ನಾಳ್, ಅರವಿಂದ ಬೆಲ್ಲದ, ಹಾಗೂ ಮಾಜಿ ಸಚಿವ ಅರವಿಂದ ಲಿಂಬಾವಳಿ ಸಿದ್ಧರಿಲ್ಲ. ಇವರೆಲ್ಲ ಸಂಘ ಪರಿವಾರಕ್ಕೆ ನಿಷ್ಠರಾಗಿರುವುದು ಇದಕ್ಕೆ ಕಾರಣ.

ಹಾಗೆ ನೋಡಿದರೆ ಯಡಿಯೂರಪ್ಪ ಅವರಿಗೆ ಸಮಾನಾಂತರವಾಗಿ ಪ್ರಬಲ ನಾಯಕನಾಗಿ ಬೆಳೆಯುವ ಎಲ್ಲ ಅವಕಾಶಗಳೂ ಸೋಮಣ್ಣಗೆ ಇತ್ತಾದರೂ ಅದನ್ನು ಸಮರ್ಥವಾಗಿ ಬಳಸಿಕೊಂಡು ಆ ಮಟ್ಟಕ್ಕೆ ಬೆಳೆಯಲು ಅವರಿಗೆ ಸಾಧ್ಯವಾಗದೇ ಇರುವುದಕ್ಕೆ ಸ್ವಯಂಕೃತ ಅಪರಾಧಗಳೇ ಕಾರಣ ಎಂದು ಅವರ ಒಂದು ಕಾಲದ ಬೆಂಬಲಿಗರೇ ಹೇಳುತ್ತಾರೆ.

ಜನತಾ ಪರಿವಾರದ ಕಾಲದಿಂದ ರಾಜಕಾರಣ ಆರಂಭಿಸಿ ದೇವೇಗೌಡರು, ಜೆ.ಎಚ್.ಪಟೇಲ್, ಸೇರಿದಂತೆ ಹಲವು ಪ್ರಮುಖ ಪ್ರಭಾವಿ ನಾಯಕರೊಂದಿಗೆ ಕೆಲಸ ಮಾಡಿ ದಶಕಗಳ ಅನುಭವ ಇದ್ದರೂ ಬೆಂಗಳೂರಿನ ವಿಜಯನಗರ, ಗೋವಿಂದರಾಜನಗರ ಕ್ಷೇತ್ರಗಳ ರಾಜಕಾರಣಕ್ಕೆ ತಮ್ಮನ್ನು ಸೀಮಿತಗೊಳಿಸಿಕೊಂಡಿದ್ದು, ಬೆಂಗಳೂರು ಮಹಾನಗರ ರಾಜಕಾರಣದ ವ್ಯಾಪ್ತಿಯಿಂದ ಬೇರೆ ಜಿಲ್ಲೆಗಳಲ್ಲಿ ತಮ್ಮ ಪ್ರಭಾವ ನಿರೂಪಿಸುವಲ್ಲಿ ಎಡವಿದ್ದು, ಅವರ ವೈಪಲ್ಯಗಳಿಗೆ ಕಾರಣ ಎಂಬ ವಾದದಲ್ಲಿ ಅರ್ಥವಿದೆ.

ಯಡಿಯೂರಪ್ಪ ನಾಯಕತ್ವಕ್ಕೆ ಸೆಡ್ಡು ಹೊಡೆದು ಅವರಷ್ಟೇ ತಾನು ಸಮುದಾಯದಲ್ಲಿ ಪ್ರಭಾವ ಹೊಂದಿರುವ ನಾಯಕ ಎಂದು ಬಿಂಬಿಸಿಕೊಳ್ಳುವ ಮಹತ್ವಾಕಾಂಕ್ಷೆಯಿಂದ ಮೈಸೂರು ಮತ್ತು ಚಾಮರಾಜನಗರ ಕ್ಷೇತ್ರಗಳನ್ನು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆಗೆ ಆಯ್ಕೆ ಮಾಡಿಕೊಂಡ ಸೋಮಣ್ಣ ಸಮುದಾಯದಲ್ಲಿ ತನಗಿರುವ ಜನಪ್ರಿಯತೆ, ಮಠಾಧೀಶರ ಪ್ರಭಾವ ತನ್ನನ್ನು ಗೆಲ್ಲಿಸಬಹುದು ಎಂಬ ಪ್ರಬಲ ಆತ್ಮ ವಿಶ್ವಾಸ ಹೊಂದಿದ್ದರು. ಅದೇ ಹುಮ್ಮಸ್ಸಿನಲ್ಲಿ ರಾಜಕೀಯವಾಗಿ ಭದ್ರ ನೆಲೆ ಹೊಂದಿದ್ದ ಗೋವಿಂದರಾಜನಗರ ಕ್ಷೇತ್ರವನ್ನು ಬಿಟ್ಟರು. ಅಲ್ಲೂ ತಮ್ಮನ್ನೇ ನಂಬಿಕೊಂಡು ಚುನಾವಣೆಗೆ ಸ್ಪರ್ಧಿಸಿದ್ದ ಪಕ್ಷದ ಅಭ್ಯರ್ಥಿಯ ಗೆಲುವಿಗೆ ನೆರವಾಗುವಲ್ಲಿ ಎಡವಿದರು. ಮತ್ತೊಂದು ಕಡೆ ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಎಂದು ಆಗಲೇ ಹಬ್ಬಿದ್ದ ರಾಜಕಾರಣದ ಸನ್ನಿವೇಶವನ್ನು ಅಂದಾಜಿಸುವಲ್ಲಿ ಸೋತರು. ಅದರ ಜತೆಗೇ ರಾಜಕಾರಣ ಮೀರಿದ ನಾಯಕರ ಸಂಬಂಧಗಳ ಒಳ ಸಮೀಕರಣವನ್ನು ಅರ್ಥ ಮಾಡಿಕೊಳ್ಳುವ ವೇಳೆಗೆ ಕಾಲ ಮಿಂಚಿತ್ತು.

ಚಾಮರಾಜನಗರದಲ್ಲಿ ತಮ್ಮ ಸ್ಪರ್ಧೆ ವಿರೋಧಿಸಿದ ಸ್ವಪಕ್ಷೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಜಾಣ್ಮೆಯನ್ನೂ ಪ್ರದರ್ಶಿಸುವಲ್ಲೂ ವಿಫಲರಾದರು. ಹೀಗೆ ರಾಜಕಾರಣದಲ್ಲಿ ದಶಕಗಳ ಇದ್ದರೂ ಅದರ ಸೂಕ್ಷ್ಮತೆಗಳನ್ನು ಅರಿಯುವಲ್ಲಿ ಸೋತಿದ್ದೇ ಅವರ ರಾಜಕಾರಣದ ಇಂದಿನ ಹತಾಶ ಸ್ಥಿತಿಗೆ ಕಾರಣ ಎಂಬ ವಾದವನ್ನು ಬಿಜೆಪಿ ಮುಖಂಡರೇ ಮುಂದಿಡುತ್ತಾರೆ.  ತಮ್ಮ ಪುತ್ರ ವಿಜಯೇಂದ್ರ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸುತ್ತಿದ್ದರೂ. ಅದರ ಪರಿಣಾಮ ಮತ್ತು ಸಂಭವನೀಯ ಅಪಾಯವನ್ನು ತಿಳಿದೂ ಮೌನ ವಹಿಸಿದ್ದೇ ಈ ಪರಿಸ್ಥಿತಿಗೆ ಕಾರಣ ಎಂಬುದನ್ನು ಅಲ್ಲಗಳೆಯುವಂತಿಲ್ಲ.

ಸೋಮಣ್ಣಗೆ ಹೋಲಿಸಿದರೆ ನೂತನ ಅಧ್ಯಕ್ಷರ ನೇಮಕ ಸಂದರ್ಭದಲ್ಲಿ ನೇರವಾಗಿ ಅಪಸ್ವರ ಎತ್ತಿದ್ದ ಬಿಜೆಪಿಯ ಇನ್ನೊಬ್ಬ ಹಿರಿಯ ನಾಯಕ, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಇದೀಗ ಕಹಿಯನ್ನು ಮರೆತು ಬುಧವಾರ ಶಿವಮೊಗ್ಗದಲ್ಲಿ ನಡೆದ ವಿಜಯೇಂದ್ರ ಸ್ವಾಗತ ಉತ್ಸವ ಅದ್ದೂರಿಯಾಗಿ ನಡೆಯುವಂತೆ ನೋಡಿಕೊಳ್ಳುವ ಮೂಲಕ ಯಡಿಯೂರಪ್ಪ ಜತೆಗಿನ ತಮ್ಮ ಹಳೆಯ ಗೆಳೆತನವನ್ನು ಉಳಿಸಿಕೊಳ್ಳುವ ರಾಜಕೀಯ ಮುತ್ಸದ್ದಿತನ ಪ್ರದರ್ಶಿಸಿದ್ದಾರೆ. ಅಭಿನಂದನಾ ಸಮಾರಂಭದಲ್ಲಿ ವಿಜಯೇಂದ್ರ ಗೆ ಸಮಸ್ತ ಹಿಂದೂ ಸಮಾಜದ ನಾಯಕ, ಭವಿಷ್ಯದಲ್ಲಿ ರಾಷ್ಟ್ರ ನಾಯಕನಾಗುವ ಎಲ್ಲ ಅರ್ಹತೆಗಳೂ ಇವೆ ಎಂದೂ ಪ್ರಶಂಸೆ ಮಾಡುತ್ತಲೇ ಕೇವಲ  ಒಂದು ಜಾತಿಯ ನಾಯಕರಾಗಿ ಗುರುತಿಸಿಕೊಳ್ಳುವುದು ಬೇಡ ಎಂಬ ಸೂಕ್ಷ್ಮ ಎಚ್ಚರಿಕೆಯನ್ನೂ ನೀಡುವ ಮೂಲಕ ತಮ್ಮ ರಾಜಕೀಯ ದೂರ ದೃಷ್ಟಿಯನ್ನು ಮೆರೆದಿದ್ದಾರೆ.

ಈ ಎಲ್ಲ ಸಂಗತಿಗಳನ್ನು ಗಮನಿಸಿದರೆ ಈ ಮೊದಲು ವಿಜಯೇಂದ್ರ ನೇಮಕವನ್ನು ವಿರೋಧಿಸಿದ್ದ ಅನೇಕ ಪ್ರಮುಖ ನಾಯಕರು ಕಹಿಯನ್ನು ಮರೆತು ರಾಜಿ ಸಂಧಾನದ ಮಾತುಕತೆಗೆ ಮಣಿದು ಕೈ ಜೋಡಿಸಿದ್ದಾರೆ. ಆದರೆ ಈ ನಾಯಕರಿಗಿಂತ ಭಿನ್ನ ಹಾದಿ ಹಿಡಿದಿರುವ ಸೋಮಣ್ಣ ಬಿಜೆಪಿ ಹೈಕಮಾಂಡ್ ಮುಂದೆ  ತಮಗೆ ರಾಜ್ಯ ಸಭೆ ಸದಸ್ಯ ಸ್ಥಾನ ನೀಡುವುದೂ ಸೇರಿದಂತೆ ಹಲವು ಬೇಡಿಕೆಗಳನ್ನುಳ್ಳ ಷರತ್ತನ್ನು ಮುಂದಿಟ್ಟಿದ್ದಾರೆ. ಆದರೆ ಬಿಜೆಪಿ ವರಿಷ್ಠರು ಈಗಿನ ಸನ್ನಿವೇಶದಲ್ಲಿ ಈ ಷರತ್ತುಗಳಿಗೆ ಒಪ್ಪುವ ಸಾಧ್ಯತೆಗಳು ಕಡಿಮೆ.

ಯಡಿಯೂರಪ್ಪ ವಿರುದ್ಧ ಯುದ್ಧ ಸಾರಿರುವ ಸೋಮಣ್ಣ ಸದ್ಯಕ್ಕೆ ಒಂಟಿ. ಮುಂದಿನ ದಿನಗಳಲ್ಲಿ ಅವರು ಕೈಗೊಳ್ಳುವ ರಾಜಕೀಯ ನಿರ್ಧಾರ ಕಾದು ನೋಡಬೇಕಿದೆ. 

-ಯಗಟಿ ಮೋಹನ್
yagatimohan@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com