ಕಾಂಗ್ರೆಸ್ ನಲ್ಲಿ ಅಸಮಾಧಾನದ ಬೆಂಕಿ; ಜೆಡಿಎಸ್ ಗೆ ಕುಟಂಬದವರ ಕಿತ್ತಾಟದ್ದೆ ಸಮಸ್ಯೆ (ಸುದ್ದಿ ವಿಶ್ಲೇಷಣೆ)

-ಯಗಟಿ ಮೋಹನ್ಅದೊಂದು ಅಸಮಾಧಾನದ ಬೆಂಕಿ. ಯುದ್ಧ ಆರಂಭಕ್ಕೆ ಮೊದಲೇ ಎರಡೂ ಪಕ್ಷಗಳಿಗೆ ಸಂಕಷ್ಟ ತಂದೊಡ್ಡಲಿದೆಯಾ? ಅಥವಾ ಹಾಗೇ ತಣ್ಣಗಾಗುತ್ತಾ?
ಕಾಂಗ್ರೆಸ್- ಜೆಡಿಎಸ್ ನಾಯಕರು
ಕಾಂಗ್ರೆಸ್- ಜೆಡಿಎಸ್ ನಾಯಕರು

ಅದೊಂದು ಅಸಮಾಧಾನದ ಬೆಂಕಿ. ಯುದ್ಧ ಆರಂಭಕ್ಕೆ ಮೊದಲೇ ಎರಡೂ ಪಕ್ಷಗಳಿಗೆ ಸಂಕಷ್ಟ ತಂದೊಡ್ಡಲಿದೆಯಾ? ಅಥವಾ ಹಾಗೇ ತಣ್ಣಗಾಗುತ್ತಾ ?

ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು ಮೂರೂ ಪಕ್ಷಗಳು ರಾಜ್ಯಪ್ರವಾಸ ಕೈಗೊಂಡು ಜನರ ವಿಶ್ವಾಸ ಗಳಿಸಲು ಹರಸಾಹಸ ನಡೆಸಿವೆ. ಇಂತಹ ಹೊತ್ತಿನಲ್ಲೇ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಲ್ಲಿ ಆರಂಭವಾಗಿರುವ ಆಂತರಿಕ ದಳ್ಳುರಿ ಎರಡೂ ಪಕ್ಷಗಳ ಅಸ್ತಿತ್ವದ  ಬೇರನ್ನೇ ಸುಡಲು ಆರಂಭಿಸಿದೆ.

ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡರ ನೇತೃತ್ವದ ಜೆಡಿಎಸ್ ಪ್ರಥಮ ಹಂತದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕೋಲಾರದಿಂದ  ಕಾಂಗ್ರೆಸ್  ಅಭ್ಯರ್ಥಿಯಾಗಿ ಸ್ಪರ್ಧೆ ಖಚಿತ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹೊತ್ತಿನಲ್ಲೇ ಎರಡೂ ಪಕ್ಷಗಳಲ್ಲಿ ಅಂತರಿಕ ಅಸಮಾಧಾನದ ಬೆಂಕಿ ಹೊತ್ತಿಕೊಂಡಿದೆ.

ಕಾಂಗ್ರೆಸ್ ನಲ್ಲಿ ತಮ್ಮನ್ನು ಕಡೆಗಣಿಸುತ್ತಿರುವದರ ವಿರುದ್ಧ ಪ್ರಣಾಳಿಕೆ ಸಮಿತಿ ಅಧ್ಯಕ್ಷರೂ ಆದ ಹಿರಿಯ ನಾಯಕ ಡಾ.ಜಿ.ಪರಮೇಶ್ವರ್ ಅಸಮಧಾನಗೊಂಡು ರಾಜೀನಾಮೆ ಕೊಡುವ ಹಂತಕ್ಕೆ ಹೋಗಿದ್ದರೆ, ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಕೂಡಾ ಇದೇ ಕಾರಣಕ್ಕೆ ಅಸಮಾಧಾನಗೊಂಡಿದ್ದಾರೆ.

ರಾಜಕೀಯ ವಲಯದಲ್ಲಿ ಆಶ್ಚರ್ಯಕ್ಕೆ ಕಾರಣವಾಗಿರುವ ಸಂಗತಿ ಎಂದರೆ ಜೆಡಿಎಸ್ ನ ಪ್ರಶ್ನಾತೀತ ನಾಯಕ, ದೇವೇಗೌಡರ ಕುಟುಂಬದಲ್ಲಿ ಎದ್ದಿರುವ ಅಸಮಾಧಾನದ ಹೊಗೆ. ಇದು ಇಡೀ ಪಕ್ಷವನ್ನೇ ಇಕ್ಕಟ್ಟಿಗೆ ಸಿಕ್ಕಿಸಿದೆ. ಹಾಸನ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಘೋಷಣೆ ವಿಚಾರದಲ್ಲಿ ಗೌಡರ ಪುತ್ರರಾದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಎಚ್.ಡಿ.ರೇವಣ್ಣ ನಡುವಿನ ಮುಸುಕಿನ ಗುದ್ದಾಟ ರೇವಣ್ಣ ಅವರ ಮಕ್ಕಳು ಬಹಿರಂಗವಾಗಿ ಕುಮಾರಸ್ವಾಮಿ ವಿರುದ್ಧ  ಪ್ರತಿಕ್ರಿಯಿಸುವ ಹಂತಕ್ಕೆ ಮುಟ್ಟಿದೆ. 

ಇದರ ಜತೆಗೆ ಬಹಳಷ್ಟು ಶಾಸಕರು, ಮಾಜಿ ಶಾಸಕರು ಪಕ್ಷ ತೊರೆದು ಕಾಂಗ್ರೆಸ್ ನತ್ತ ಹೆಜ್ಜೆ ಇಟ್ಟಿರುವುದು ಜೆಡಿಎಸ್ ಗೆ ಸಂಘಟನಾತ್ಮಕ ದೃಷ್ಟಿಯಿಂದಲೂ ದೊಡ್ಡ ಪೆಟ್ಟು ಬಿದ್ದಂತಾಗಿದೆ. ಈ ಬಿಕ್ಕಟ್ಟಿನಿಂದ ಹೊರ ಬರಲು ಕುಮಾರಸ್ವಾಮಿ ಪ್ರಯತ್ನ ನಡೆಸಿರುವ ಸಂಧರ್ಭದಲ್ಲೇ ಕುಟುಂಬದ ಜಗಳ ಬೀದಿಗೆ ಬಂದಿರುವುದು ಅವರನ್ನು ಇನ್ನಷ್ಟು ಸಂದಿಗ್ದಕ್ಕೆ ದೂಡಿದೆ. 

ಜೆಡಿಎಸ್ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಘೋಷಿಸುವ ಸಂದರ್ಭದಲ್ಲಿ ಹಾಸನ ಜಿಲ್ಲೆ ಹಾಗೂ ಲೋಕಸಭಾ ಕ್ಷೇತ್ರಕ್ಕೆ ಸೇರಿದ ಏಳು ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಜವಾಬ್ದಾರಿಯನ್ನು ರೇವಣ್ಣ ಅವರಿಗೆ ಬಿಟ್ಟಿತ್ತು. ಸ್ವತಹಾ ಕುಮಾರಸ್ವಾಮಿಯವರೇ ಇದನ್ನು ಸಾರ್ವಜನಿಕ ಸಭೆಯಲ್ಲಿ ಘೋಷಿಸಿದ್ದರು.

ಆದರೆ ಯಾವಾಗ ಹಾಸನ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯಾಗ ಬಯಸಿ ರೇವಣ್ಣ ಅವರ ಪತ್ನಿ ಶ್ರೀಮತಿ ಭವಾನಿ ಕಾರ್ಯಾಚರಣೆಗೆ ಇಳಿದರೋ ಅಂದಿನಿಂದ ಕುಟುಂಬದಲ್ಲಿ ಅಪಸ್ವರ ಕೇಳಿ ಬರತೊಡಗಿತು ಎಂಬುದು ಈಗ ಬಹಿರಂಗವಾಗಿರುವ ವಿಚಾರ. ಭವಾನಿ ರೇವಣ್ಣ ಹಾಸನದಿಂದ ತಾವು ಸ್ಪರ್ಧಿಸಿಯೇ ಸಿದ್ಧ ಎಂದು ಪಟ್ಟು ಹಿಡಿದು ಕ್ಷೇತ್ರದ ಹಳ್ಳಿ ಹಳ್ಳಿಗಳಲ್ಲಿ ಪ್ರಚಾರ ಆರಂಭಿಸಿದ್ದಾರೆ. ಇದೇ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯಾಗುವ ಭರವಸೆ ಇಟ್ಟುಕೊಂಡಿರುವ ಸ್ವರೂಪ್, ವರಿಷ್ಠರ ನಿರ್ಧಾರಕ್ಕೆ ಕಾಯುತ್ತಿದ್ದಾರೆ. ಇದು ತವರಲ್ಲೇ ಜೆಡಿಎಸ್ ನಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಸಂದೇಶ ಹರಡಲು ಕಾರಣವಾಗಿದೆ.

ಪ್ರಮುಖವಾಗಿ ಇದರಿಂದ ಇಕ್ಕಟ್ಟಿಗೆ ಒಳಗಾಗಿರುವುದು ಪಕ್ಷದ ಪ್ರಶ್ನಾತೀತ ನಾಯಕ ದೇವೇಗೌಡರು. ಹಾಸನ ಜಿಲ್ಲೆಯ ರಾಜಕಾರಣ ಮಾತ್ರ ತಮ್ಮ ಅಂಕೆ ಮೀರಿ ಹೋಗಬಾರದು,ಎಂಬ ನಿಲುವಿಗೆ ಬದ್ದರಾಗಿರುವ ಗೌಡರಿಗೆ ಈಗ ಕುಟುಂಬದಲ್ಲೇ ಎದ್ದಿರುವ ಅಸಮಾಧಾನದ ಬೆಂಕಿಯನ್ನು ತಣ್ಣಗಾಗಿಸುವುದೇ ಒಂದು ಸವಾಲಾಗಿದೆ. 

ಪಕ್ಷದ ಮೇಲೆ ಹಿಡಿತ ಸಾಧಿಸಲು ಗೌಡರ ಕುಟುಂಬದ ಈ ಇಬ್ಬರು ಸಹೋದರರ ನಡುವೆ ನಡೆಯುತ್ತಿರುವ ಶೀತಲ ಸಮರಕ್ಕೆ ದೊಡ್ಡ ಇತಿಹಾಸವೇ ಇದೆ. 2013 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಗೌಡರ ಸೊಸೆ ಶ್ರೀಮತಿ ಅನಿತಾ ಕುಮಾರ ಸ್ವಾಮಿ ಮಧುಗಿರಿ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಕಣಕ್ಕಿಳಿದಾಗಲೇ ಪಕ್ಷದ ಇತರ ಮುಖಂಡರಿಗೆ ಅಲ್ಲಿ ಬೇರೆಯವರನ್ನು ಅಭ್ಯರ್ಥಿಯಾಗಿ ಸ್ಪರ್ಧೆಗೆ ಇಳಿಸಬಹುದಿತ್ತಲ್ಲವೇ? ಎಂಬ ಪ್ರಶ್ನೆ ಕಾಡಿತ್ತು. ಆದರೂ ದೇವೇಗೌಡರ ನಾಯಕತ್ವಕ್ಕೆ ಮಣಿದು ಸುಮ್ಮನಾಗಿದ್ದರು. ರೇವಣ್ಣ ಕುಟುಂಬದಲ್ಲೂ ಇದು ಗೊಂದಲಕ್ಕೆ ಕಾರಣವಾಗಿತ್ತು ಎಂಬುದೂ ಗುಟ್ಟೇನಲ್ಲ..ಆ ಸಂದರ್ಭದಲ್ಲೇ ಕುಟುಂಬದಲ್ಲಿ ಉದ್ಬವವಾಗಬಹುದಾಗಿದ್ದ ಅಸಮಾಧಾನವನ್ನು ಖುದ್ದು ದೇವೇಗೌಡರೇ ಮುಂದೆ ನಿಂತು ಸಂಬಾಳಿಸಿ ವಿವಾದ ಆಗದಂತೆ, ಬಿಕ್ಕಟ್ಟು ಬೀದಿಗೆ ಬರದಂತೆ ಎಚ್ಚರಿಕೆ ವಹಿಸಿದ್ದರು. ನಂತರ ಭವಾನಿ ರೇವಣ್ಣ ಅವರು ಹಾಸನ ಜಿಲ್ಲಾ ಪಂಚಾಯ್ತಿಗೆ ಸದಸ್ಯೆಯಾಗಿ ಆಯ್ಕೆಯಾಗುವುದರೊಂದಿಗೆ ಬಿಕ್ಕಟ್ಟು ತಣ್ಣಗಾಗಿತ್ತು.

ಪುನಃ 2018 ರ ಚುನಾವಣೆಯಲ್ಲಿ ಅವರು ಕೆ.ಆರ್.ನಗರದಿಂದ ಸ್ಪರ್ಧೆಗೆ ತಯಾರಿ ಮಾಡಿಕೊಂಡು ಕ್ಷೇತ್ರ ಪ್ರವಾಸ ನಡೆಸಿದರೆ ಅವರ ಪುತ್ರ ಪ್ರಜ್ವಲ್ ರೇವಣ್ಣ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಆಕಾಂಕ್ಷೆಯಿಂದ ಕ್ಷೇತ್ರದಲ್ಲಿ ಕಾರ್ಯಕರ್ತರ ಸಭೆಗಳನ್ನೂ ನಡೆಸಿದ್ದರು. ಆದರೆ ಅಲ್ಲೂ ನಿರೀಕ್ಷೆ ಸುಳ್ಳಾಯಿತು. ಕುಟುಂಬದ ಇತರೆ ಸದಸ್ಯರು ಯಾರೂ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂಬ ತೀರ್ಮಾನವನ್ನು ಖುದ್ದು ದೇವೇಗೌಡರೇ ಕೈಗೊಂಡ ಕಾರಣಕ್ಕೆ ಕೆ.ಆರ್.ನಗರದಿಂದ ಸಾ.ರಾ ಮಹೇಶ್ ಜೆಡಿಎಸ್ ಅಭ್ಯರ್ಥಿಯಾಗಿ ಗೆದ್ದರೆ,  ರಾಜರಾಜೇಶ್ವರಿ ನಗರದಲ್ಲಿ ಪರಿಸ್ಥಿತಿಯ ಲಾಭ ಪಡೆದ ಮುನಿರತ್ನ ಕಾಂಗ್ರೆಸ್ನ ನಿಂದ  ಸ್ಪರ್ಧಿಸಿ ಗೆದ್ದರು. ಆ ಸಂದರ್ಭದಲ್ಲೂ ಕುಮಾರಸ್ವಾಮಿ ವಿರುದ್ಧ ಪಕ್ಷದೊಳಗೆ ಅಸಮಧಾನದ ಮಾತುಗಳು ಕೇಳಿ ಬಂದಿದ್ದವು. ಆದರೆ ರಾಮನಗರದಿಂದ ಅನಿತಾ ಕುಮಾರಸ್ವಾಮಿ ಯವರನ್ನು ಅನಿವಾರ್ಯತೆ ನೆಪವೊಡ್ಡಿ ಕಣಕ್ಕಿಳಿಸಿದಾಗ ಜೆಡಿಎಸ್ ಪಾಳೇಯದಲ್ಲಿ ಮತ್ತೆ ಅಸಮಧಾನದ ಬೆಂಕಿ ಹೊಗೆಯಾಡಿತು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಕುಟುಂಬದೊಳಗಿನ ಅತೃಪ್ತಿ ಬೆಂಕಿಯಾಗಿ ಹರಡಬಾರದೆಂಬ ಕಾರಣಕ್ಕೆ ಕಾಳಜಿ ವಹಿಸಿದ ದೇವೇಗೌಡರು, ಪ್ರಜ್ವಲ್ ರೇವಣ್ಣಗೆ ಹಾಸನ ಲೋಕಸಭಾ ಕ್ಷೇತ್ರ ಬಿಟ್ಟುಕೊಟ್ಟು ತುಮಕೂರಿನಿಂದ ಸ್ಪರ್ಧಿಸಿ ಸೋತರು. ಆದರೆ ಮೊಮ್ಮಗನೊಂದಿಗೆ ಲೋಕಸಭೆ ಪ್ರವೇಶಿಸುವ ಅವರ ಆಸೆ ಕೈಗೂಡಲಿಲ್ಲ. ಮಂಡ್ಯದಿಂದ ಸ್ಪರ್ಧಿಸಿದ್ದ ಕುಮಾರ ಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ,  ಸುಮಲತಾ ಎದರು ಅಬ್ಬರದ ಪ್ರಚಾರ ಇನ್ನಿತರ ತಂತ್ರಗಳ ಹೊರತಾಗಿಯೂ ಸೋಲನ್ನಪಿದರು. ನಿಖಿಲ್ ಸೋಲಿಗೆ ರೇವಣ್ಣ ಸುಮಲತಾ ಕುರಿತು ಆಡಿದ ಆಕ್ಷೇಪಾರ್ಹ ಮಾತೂ ಕಾರಣವಾಯಿತು ಎಂಬ ಸುದ್ದಿಗಳು ಹರಡಿದವು,ಸಹಜವಾಗೇ ಇದು ಕುಮಾರಸ್ವಾಮಿಯವರ ಅಸಮಧಾನಕ್ಕೂ ಕಾರಣವಾಗಿತ್ತು.

ಹೀಗೆ ಆರಂಭಗೊಂಡ  ಆಂತರಿಕ ಬೇಗುದಿ ಈಗ ಸ್ಫೊಟಗೊಳ್ಳುವ ಹಂತಕ್ಕೆ ಬಂದು ನಿಂತಿದೆ. ಹಾಸನಕ್ಕೆ ಭವಾನಿ ರೇವಣ್ಣ ಅಭ್ಯರ್ಥಿಯಾಗುವುದು ಅನಿವಾರ್ಯವಲ್ಲ ಎಂದು ಕುಮಾರಸ್ವಾಮಿ ಇತ್ತೀಚೆಗೆ ಬಹಿರಂಗವಾಗಿ ಹೇಳಿದ್ದೇ ಅಸಮಾಧಾನ ಸ್ಫೊಟಗೊಳ್ಳಲು ದಾರಿ ಮಾಡಿಕೊಟ್ಟಂತಾಗಿದೆ. ಈ ಹೇಳಿಕೆಯಿಂದ ಕುದ್ದು ಹೋದ ರೇವಣ್ಣ ಪುತ್ರರು ಹಾಸನದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಯಾರು ಅಭ್ಯರ್ಥಿಗಳಾಗಬೇಕೆಂದು ನಿರ್ಧರಿಸುವ ಅಧಿಕಾರ ದೇವೇಗೌಢರು ಮತ್ತು ರೇವಣ್ಣ ಹೊರತು ಪಡಿಸಿ ಬೇರೆ ಯಾರಿಗೂ ಇಲ್ಲ ಎಂದು ಹೇಳುವ ಮೂಲಕ ಕುಮಾರಸ್ವಾಮಿ ವಿರುದ್ಧ ದಂಗೆಯ ಬಾವುಟ ಹಾರಿಸಿದ್ದಾರೆ. ಯಾವಾಗ ಈ ಹೇಳಿಕೆಗಳ ಸಮರ ವಿವಾದದ ಪರಾಕಾಷ್ಠೆಗೆ ಮುಟ್ಟಿತೋ ಮತ್ತೆ ದೇವೇಗೌಡರೇ ಅಖಾಡಕ್ಕಿಳಿದು ಅದು ಬೆಳೆಯಗೊಡದಂತೆ ಇಬ್ಬರು ಮಕ್ಕಳಿಗೂ ತಾಕೀತು ಮಾಡಿದ್ದಾರೆ. ಆನಂತರದಲ್ಲೇ ರೇವಣ್ಣ ತಮ್ಮ ಮಕ್ಕಳು ನೀಡಿದ ಹೇಳಿಕೆಗಳ ಬಗ್ಗೆ ತಮಗೇನೂ ಗೊತ್ತಿಲ್ಲ. ಜಿಲ್ಲೆಯಲ್ಲಿ ಪಕ್ಷದ ಅಭ್ಯರ್ಥಿಗಳು ಯಾರಾಗ ಬೇಕೆಂಬುದನ್ನು ಕುಮಾರಸ್ವಾಮಿ, ಇಬ್ರಾಹಿಂ, ದೇವೇಗೌಡರು ನಿರ್ಧರಿಸುತ್ತಾರೆ ಎಂದು ಹೇಳುವ ಮೂಲಕ ವಿವಾದ ತಣ್ಣಗಾಗಿಸುವ ಮಾತಾಡಿದ್ದಾರೆ.

ಇಲ್ಲಿ ಎಳುವ ಪ್ರಶ್ನೆ ಎಂದರೆ ಹೇಳಿಕೆ ಪ್ರತಿ ಹೇಳಿಕೆಗಳ ಸಮರ ನಡೆಯುತ್ತಿದ್ದಾಗ ತಮಗೂ ಇದಕ್ಕೂ ಸಂಬಂಧವೇ ಇಲ್ಲದಂತೆ ಮೌನ ವಹಿಸಿದ್ದ ರೇವಣ್ಣ, ದೇವೇಗೌಡರ ಸೂಚನೆ ಬಂದ ನಂತರ ವಿವಾದಕ್ಕೆ ತೇಪೆ ಹಚ್ಚವ ಕೆಲಸ ಮಾಡಿದರೆ, ಮತ್ತೊಂದು ಕಡೆ ಕುಮಾರಸ್ವಾಮಿ ಕೂಡಾ ನಮ್ಮ ಮಕ್ಕಳು ಅರಿವಿಲ್ಲದೇ ಮಾತಾಡಿದ್ದಾರೆ,ಎಂದು ತಿಪ್ಪೆ ಸಾರಿಸುವ ಪ್ರಯತ್ನ ಮಾಡಿದ್ದಾರೆ. ಮೇಲ್ನೊಟಕ್ಕೆ ಇದು ಸಹಜವಾಗೇ ಕಂಡರೂ ಪಕ್ಷದ ಮೇಲೆ ಹಿಡಿತ ಸಾಧಿಸಲು ಕುಮಾರಸ್ವಾಮಿ ಮತ್ತು ರೇವಣ್ಣ ಪೈಪೋಟಿ ನಡೆಸುತ್ತಿರುವುದು ಬಹಿರಂಗವಾಗಿದೆ.

ಒಂದು ಕಾಲಕ್ಕೆ ದೇವೇಗೌಡರ ಜತೆಗೆ ಪಕ್ಷದ ಆಧಾರ ಸ್ತಂಭಗಳಂತೆ ಇದ್ದ ಅರಸೀಕೆರೆ ಶಾಸಕ ಶಿವಲಿಂಗೇಗೌಡ, ಗುಬ್ಬಿಯ ಶ್ರೀನಿವಾಸ್, ಇವರಲ್ಲದೇ ದೇವೇಗೌಡರ ಮಾನಸ ಪುತ್ರ ಎಂದೇ ಬಿಂಬಿತವಾಗಿ ಅವರ ನೆರಳಿನಂತೆಯೇ ಇದ್ದ ಮಾಜಿ ಶಾಸಕ ವೈ.ಎಸ್.ವಿ.ದತ್ತ ಸೇರಿದಂತೆ ಹಳಬರು ಒಬ್ಬೊಬ್ಬರಾಗಿ ಜೆಡಿಎಸ್ ತೊರೆಯುತ್ತಿದ್ದಾರೆ. ಹೀಗೆ ಪಕ್ಷ ತೊರೆದ ಎಲ್ಲರದ್ದೂ ಒಂದೇ ಮಾತು.ನಾವೆಲ್ಲ ದೇವೆಗೌಡರ ನಾಯಕತ್ವವನ್ನು ಒಪ್ಪಿಕೊಂಡು  ಕೆಲಸ ಮಾಡಿದವರು ಆದರೆ ಕುಮಾರಸ್ವಾಮಿ ಜತೆ ಕೆಲಸ ಮಾಡಲು ಸಾಧ್ಯವಿಲ್ಲ. ಏಕೆಂದರೆ ಗೌಡರ ಆದ್ಯತೆಗಳೇ ಬೇರೆ ಕುಮಾರಸ್ವಾಮಿಯ ದಾರಿಯೇ ಬೇರೆ ಎನ್ನುತ್ತಾರೆ.ಈಗ ಇದೇ ಮಾತನ್ನು ಅದೇ ಅರ್ಥ ಬರುವಂತೆ ರೇವಣ್ಣ ಮಕ್ಕಳು ಆಡಿ ಮುಗಿಸಿದ್ದಾರೆ.

ಹಾಲಿ ಇರುವ ಶಾಸಕರಲ್ಲಿ ಮದ್ದೂರಿನ ಡಿ.ಸಿ.ತಮ್ಮಣ್ಣ ಗೌಡರ ಬೀಗರು, ಚೆನ್ನರಾಯ ಪಟ್ಟಣದ ಸಿ.ಎನ್.ಬಾಲಕೃಷ್ಣ ಗೌಡರ ಸಂಬಂಧಿ. ಹೊಳೆ ನರಸೀಪುರದ ಎಚ್.ಡಿ.ರೇವಣ್ಣ ಗೌಡರ ಇನ್ನೊಬ್ಬ ಮಗ. ಮೊಮ್ಮಕ್ಕಳ ಪೈಕಿ ಪ್ರಜ್ವಲ್ ಹಾಸನ ಕ್ಷೇತ್ರದ ಲೋಕಸಭಾ ಸದಸ್ಯ, ಸೂರಜ್ ರೇವಣ್ಣ ವಿಧಾನ ಪರಿಷತ್ ಸದಸ್ಯ, ಕುಮಾರಸ್ವಾಮಿಯವರ ಪತ್ನಿ ಅನಿತಾ ಕುಮಾರಸ್ವಾಮಿ ವಿಧಾನಸಭೆ ಸದಸ್ಯೆ. ಸ್ವತಹಾ ದೇವೇಗೌಡರು ರಾಜ್ಯಸಭೆ ಸದಸ್ಯರು.ಪಟ್ಟಿ ಗಮನಿಸಿದರೆ ಇಡೀ ಅಧಿಕಾರ ಸೂತ್ರ ಗೌಡರ ಕುಟುಂಬದಲ್ಲೇ ಇದೆ. ಸಹಜವಾಗೇ ಜೆಡಿಎಸ್ ಅಪ್ಪ- ಮಕ್ಕಳು-ಮೊಮ್ಮಕ್ಕಳ ಪಕ್ಷ ಎಂಬ ಸಾರ್ವತ್ರಿಕ ಟೀಕೆಗೂ ಗುರಿಯಾಗಿದೆ. ಈಗ ಕುಟುಂಬದಲ್ಲೇ ಪಕ್ಷದ ಪಾರುಪತ್ಯಕ್ಕಾಗಿ ಹೋರಾಟ ಆರಂಭವಾಗಿದೆ.

ಕಾಂಗ್ರೆಸ್ ನಲ್ಲೂ ಅಸಮಾಧಾನದ ಬೆಂಕಿ:  ಇನ್ನು ಕಾಂಗ್ರೆಸ್ ನಲ್ಲೂ ಅಸಮಾಧಾನದ ಬೆಂಕಿ ಹೊತ್ತಿ ಉರಿಯತೊಡಗಿದೆ. ಚುನಾವಣೆಗಾಗಿ ಒಂದು ಸುತ್ತು  ಜಂಟಿ ರಾಜ್ಯ ಪ್ರವಾಸ ಮುಗಿಸಿ ಬಂದಿರುವ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೋದಲ್ಲಿ ಬಂದಲ್ಲಿ ಪಕ್ಷದ ಹೊಸ ಯೋಜನೆಗಳನ್ನು ಘೋಷಿಸುತ್ತಿರುವುದು ಪ್ರಣಾಳಿಕೆ ಸಮಿತಿ ಅಧ್ಯಕ್ಷರೂ ಆದ ಹಿರಿಯ ನಾಯಕ ಡಾ.ಜಿ.ಪರಮೇಶ್ವರ್ ಅಸಮಧಾನಕ್ಕೆ ಕಾರಣವಾಗಿದೆ. 

ಪಕ್ಷದ ಪ್ರಣಾಳಿಕೆ ಸಿದ್ಧವಾಗುವ ಮುನ್ನವೇ ಕನಿಷ್ಟ ಚರ್ಚೆಯನ್ನೂ ನಡೆಸದೇ ಈ ನಾಯಕರು ಹೊಸ ಕಾರ್ಯಕ್ರಮಗಳನ್ನು ಘೋಷಿಸುವುದಾದರೆ ಪ್ರಣಾಳಿಕೆ ಸಮಿತಿ, ಅದಕ್ಕೊಬ್ಬ ಅಧ್ಯಕ್ಷ ಯಾಕಿರಬೇಕು? ಎಂದು ಅಸಮಾಧಾನಗೊಂಡು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದು ಅವರನ್ನು ಎಐಸಿಸಿ ಪ್ರತಿನಿಧಿ ಸುರ್ಜೇವಾಲ ಸಮಾಧಾನ ಪಡಿಸಿದ್ದಾರೆ. ಮತ್ತೊಂದು ಕಡೆ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಕೂಡಾ ಮುನಿಸಿ ಕೊಂಡಿದ್ದಾರೆ. ಅಲ್ಲಿಗೆ ಅಧಿಕಾರಕ್ಕೇರುವ ಉಮೇದಿನಲ್ಲಿರುವ ಕಾಂಗ್ರೆಸ್ ನಲ್ಲೂ ಎಲ್ಲವೂ ಸರಿ ಇಲ್ಲ. ಎರಡೂ ಪಕ್ಷಗಳಲ್ಲಿನ ಅತೃಪ್ತ ಈಗ ಬೂದಿ ಮುಚ್ಚಿದ ಕೆಂಡ. ಬೆಂಕಿ ಮಾತ್ರ ಇನ್ನೂ ತಣ್ಣಗಾಗಿಲ್ಲ.

ಯಗಟಿ ಮೋಹನ್
yagatimohan@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com