ಉಳ್ಳವರ ಹೊಸ ಆಟಗಳು! ಇಲ್ಲದವರ ಪೀಕಲಾಟಗಳು!! (ಹಣಕ್ಲಾಸು)

ಹಣಕ್ಲಾಸು-367-ರಂಗಸ್ವಾಮಿ ಮೂಕನಹಳ್ಳಿ
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಜುಲೈ 7, 2023 ರಿಂದ ಮುಖೇಶ್ ಅಂಬಾನಿಯವರ ಹೊಸ ಜಿಯೋ ಭಾರತ್ ಎನ್ನುವ ಹೊಸ ಫೋನ್ ಲಾಂಚ್ ಮಾಡಲಿದೆ. ಇದು ಸದ್ಯಕ್ಕೆ ಇನ್ನೂ ಬೀಟಾ ಟ್ರೈಯಲ್ನಲ್ಲಿರುವ ಕಾರಣ ಇದನ್ನ ಕೇವಲ 10 ಲಕ್ಷ ಜನರಿಗೆ ಮಾತ್ರ ಮಾರಾಟ ಮಾಡಲಾಗುವುದು. ಯಾರು ಬೇಕಾದರೂ ಕೊಳ್ಳುವ ಆಯ್ಕೆ ಇರುವುದರಿಂದ ಹತ್ತು ಲಕ್ಷದಲ್ಲಿ ನೀವೂ ಒಬ್ಬರಾಗಬಹುದು. ಇದರಲ್ಲಿ ಏನು ವಿಶೇಷ ಎಂದಿರಾ? ಇದು ದೇಶದ ಅತ್ಯಂತ ಕಡಿಮೆ ಬೆಲೆಯ ಮೊಬೈಲ್ ಫೋನ್ ಎನ್ನಿಸಿಕೊಳ್ಳಲಿದೆ. ಅತಿ ಕಡಿಮೆ ಬೆಲೆಗೆ ಡೇಟಾ ಪ್ಯಾಕ್ಗಳನ್ನ ಕೂಡ ನೀಡಲಾಗುತ್ತದೆ. ಈ ಮೊಬೈಲ್ನಲ್ಲಿ ಜಿಯೋ ಸಿನಿಮಾ, ಜಿಯೋ ಸಾವನ್ ಮ್ಯೂಸಿಕ್.. ಹೀಗೆ ತರಹೇವಾರಿಯ ಎಂಟರ್ಟೈನ್ಟ್ಮೆಂಟ್ ಚಾನಲ್ಗಳು ಲಭ್ಯವಿರಲಿದೆ. ಡೇಟಾ ಬಹಳಷ್ಟು ಕಡಿಮೆ ಬೆಲೆಯಲ್ಲಿ ಸಿಕ್ಕುವ ಕಾರಣ ಮಿತಿಯಿಲ್ಲದ ಸೋಶಿಯಲ್ ಮೀಡಿಯಾ ಬಳಕೆ ಕೂಡ ಮಾಡಬಹುದು.

ಇದರ ಜೊತೆ ಜೊತೆಗೆ ಇನ್ನೊಂದು ಸುದ್ದಿ ಕೂಡ ಇದೆ. ರಿಲಯನ್ಸ್ ಸಂಸ್ಥೆ ನೋಯ್ಡಾ ಮೂಲದ ಆಡ್ವೇರ್ಬ್ ಎನ್ನುವ ರೊಬೆಟಿಕ್ ಸಂಸ್ಥೆಯ ಮೇಲೆ ಈಗಾಗಲೇ ೨೦೦ ಕೋಟಿ ಹೂಡಿಕೆ ಮಾಡಿದೆ, ಶೀಘ್ರದಲ್ಲಿ ಇನ್ನೂ 500 ಕೋಟಿ ರೂಪಾಯಿಯನ್ನ ಹೂಡಿಕೆ ಮಾಡಲಿದ್ದಾರೆ. ಮುಂದಿನ ಐದು ವರ್ಷದಲ್ಲಿ ೮ ಸಾವಿರ ಕೋಟಿ ಆದಾಯವನ್ನ ಗಳಿಸುವ ಅಂದಾಜು ಮಾಡಲಾಗಿದೆ. ಸದ್ಯಕ್ಕೆ ಇಂಡಸ್ಟ್ರಿಯಲ್ ರೋಬೋಟ್ ಗಳನ್ನ ಈ ಸಂಸ್ಥೆ ಉತ್ಪಾದನೆ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಬಹುತೇಕ ಎಲ್ಲಾ ರಂಗದಲ್ಲಿ, ಅದರಲ್ಲೂ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆಗೆ ರೋಬೋಟ್ ಗಳನ್ನ ಸಿದ್ಧಪಡಿಸುವ ಮಹತ್ವದ ಯೋಜನೆಯನ್ನ ಕೂಡ ಸಂಸ್ಥೆ ಹಾಕಿಕೊಂಡಿದೆ.

ಮೇಲಿನ ಎರಡೂ ಸುದ್ದಿಯನ್ನ ಜೋಡಿಸಿ ಓದಿ. ಮೊದಲಿನದರಲ್ಲಿ ಪ್ರಾಥಮಿಕ ಹಂತದಲ್ಲಿ 10 ಲಕ್ಷ ಜನರಿಗೆ ಅತ್ಯಂತ ಚೀಪ್ ಮೊಬೈಲ್ ಮತ್ತು ಡೇಟವನ್ನ ನೀಡಲಾಗುತ್ತದೆ. ನಿಧಾನವಾಗಿ ಎಲ್ಲರಿಗೂ ಚೀಪ್ ಮೊಬೈಲ್ ಮತ್ತು ಡೇಟಾ ನೀಡಲಾಗುವುದು. ನಾವು ನಮ್ಮ ಮೊಬೈಲ್ನಿಂದ ತಲೆಯನ್ನ ಎತ್ತಬಾರದು, ಪ್ರಶ್ನೆ ಕೇಳಬಾರದು. ಇವತ್ತಿನ ದಿನದಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸಿ ಕಲಿತವರ ಕೆಲಸವನ್ನ ಲಪಟಾಯಿಸುತ್ತಿದೆ, ದೈಹಿಕ ಶ್ರಮ ಬೇಡುವ ಕೆಲಸಗಳನ್ನ ಮುಂದಿನ ಐದು ವರ್ಷದಲ್ಲಿ ರೊಬೊಟ್ಗಳು ಮಾಡಲು ಶುರು ಮಾಡುತ್ತವೆ.

ನಾಳೆ ಏನಾಗಬಹುದು ಎನ್ನುವ ಸೂಚನೆಯನ್ನ ಅತಿ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳು ನೀಡುತ್ತಿರುತ್ತವೆ. ನಾವು ಅದರ ಬಗ್ಗೆ ಚಿಂತಿಸುವುದೇ ಇಲ್ಲ. ಅತಿ ದೊಡ್ಡ ಜನಸಂಖ್ಯೆಯನ್ನ ಹೊಂದಿರುವ ಭಾರತದಲ್ಲಿ ಬದುಕುವುದು ಬೇರೆಯ ದೇಶಗಳಿಗೆ ಹೋಲಿಸಿದರೆ ಚೀಪ್. ಹೀಗಾಗಿ ಬಹಳಷ್ಟು ಜನ ಕುಳಿತು ಕಾಲಹರಣ ಮಾಡುತ್ತಾರೆಯೇ ವಿನಃ ಕೆಲಸ ಮಾಡಲು ಇಚ್ಛಿಸುವುದಿಲ್ಲ. ಅದರ ಸಮಾಜದ ಒಂದು ವರ್ಗ ಕೆಲಸ ಮಾಡಲು ಸಿದ್ಧರಿದ್ದಾರೆ, ಅಂತಹವರಿಗೂ ಕೂಡ ಇದರಿಂದ ಪೆಟ್ಟು ಬೀಳಲಿದೆ. ಕೆಲಸವಿಲ್ಲದ, ಗುರಿಯಿಲ್ಲದ ಜನತೆ ಬದುಕುವ ಬಗೆ ಹೇಗೆ? ಆದಾಯದ ಮೂಲ ಮುಚ್ಚಿ ಹೋದರೆ ಬದುಕುವುದು ಹೇಗೆ ?

ಮುಂದಿನ ಐದು ಅಥವಾ ಹೆಚ್ಚೆಂದರೆ 8 ವರ್ಷದಲ್ಲಿ ಭಾರತದಲ್ಲಿ ಬೇಸಿಕ್ ಯೂನಿವರ್ಸಲ್ ಇನ್ಕಮ್ ಘೋಷಣೆ ಮಾಡದೆ ಬೇರೆ ದಾರಿಯಿಲ್ಲ ಎನ್ನುವ ಹಂತಕ್ಕೆ ಬಂದು ನಿಲ್ಲುತ್ತದೆ. ರಿಲಯನ್ಸ್ ಇಡುತ್ತಿರುವ ದೈತ್ಯ ಹೆಜ್ಜೆಗಳು ಈ ಮಾತುಗಳನ್ನ ಸಾಬೀತು ಪಡಿಸುತ್ತಿದೆ. ಇವೆಲ್ಲುವುಗಳ ಅರ್ಥ ಬಹಳ ಸರಳ. ಬದಲಾವಣೆ ಮತ್ತು ಅನಿಶ್ಚಿತತೆ ಇವೆರೆಡೂ ಬದುಕಿನ ಅವಿಭಾಜ್ಯ ಅಂಗವಾಗಲಿವೆ. ಬದಲಾವಣೆಗೆ ಹೊಂದಿಕೊಳ್ಳುತ್ತ , ಅನಿಶ್ಚಿತತೆಗೆ ಕೂಡ ನಾವು ತಯಾರಾಗಬೇಕಿದೆ. ಹಿಂದೆ ಒಂದು ಕೆಲಸಕ್ಕೆ ಸೇರಿದರೆ ಹತ್ತು , ಇಪ್ಪತ್ತು ಕೆಲವೊಮ್ಮೆ ನಿವೃತ್ತಿ ತನಕ ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡಿದ ಉದಾಹರಣೆಗಳು ನಮ್ಮ ಮುಂದಿವೆ. ಆದರೆ ಇದರ ವ್ಯಾಖ್ಯೆ ಬದಲಾಗಲಿದೆ. ಹೊಸ ಕೆಲಸಕ್ಕೆ ಶೀಘ್ರ ಗತಿಯಲ್ಲಿ ಹೊಂದಿಕೊಳ್ಳುವ ಮತ್ತು ಕೌಶಲ್ಯ ವೃದ್ದಿಕೊಳ್ಳುವರು ಮಾತ್ರ ಕೆಲಸ ಉಳಿಸಿಕೊಳ್ಳಬಲ್ಲರು. ಉಳಿದವರ ಕಥೆಯೇನು? ಮುಂಬರುವ ದಿನಗಳಲ್ಲಿ ಕೆಲಸವಿಲ್ಲ ಎನ್ನುವುದಕ್ಕಿಂತ ಆರೋಗ್ಯಕರ ರೀತಿಯಲ್ಲಿ ಮನುಷ್ಯ ಹೇಗೆ ಯಾವುದಾದರೂ ಒಂದು ವಿಷಯದಲ್ಲಿ ತನ್ನನ್ನ ತೊಡಗಿಸಿಕೊಳ್ಳಬಹುದು ಎನ್ನುವುದು ಅತ್ಯಂತ ಮಹತ್ವದ ಪ್ರಶ್ನೆಯಾಗಲಿದೆ.

ಜಗತ್ತು ಹೆಚ್ಚಿನ ತಂತ್ರಜ್ಞಾನಕ್ಕೆ ತೆರೆದುಕೊಂಡಂತೆಲ್ಲಾ ಹೆಚ್ಚು ಹೆಚ್ಚು ಜನ ಬದುಕಿನಾಟದಲ್ಲಿ ಲೆಕ್ಕಕಿಲ್ಲದ ಜೀವಂತ ಶವಗಳಾಗಿ ಬದಲಾಗುತ್ತಾರೆ. ಇವರು ದಂಗೆ ಏಳದಂತೆ ತಡೆಯಲು ಯೂನಿವರ್ಸಲ್ ಬೇಸಿಕ್ ಇನ್ಕಮ್ ನಂತಹ ಸ್ಕೀಮ್ ಗಳು ಜಾರಿಗೆ ಬಂದರೆ ಅದು ಆಶ್ಚರ್ಯ ಪಡುವ ವಿಷಯವಾಗೇನೂ ಉಳಿಯುವುದಿಲ್ಲ. ಗಮನಿಸಿ ನೋಡಿ ಭಾರತದಂತ ದೊಡ್ಡ ದೇಶದಲ್ಲಿ ಕರೋನ ಸಮಯದಲ್ಲಿ  ವ್ಯಾಪಾರ -ವಹಿವಾಟು ಸ್ತಬ್ದವಾಗಿದ್ದು ಕೂಡ ಸಾಮಾಜಿಕ ಹೋರಾಟ ಅಥವಾ ದಂಗೆಗಳು ಆಗಿಲ್ಲ. ಇದಕ್ಕೆ ಮುಖ್ಯ ಕಾರಣ ಇಲ್ಲಿನ ಜನಸಂಖ್ಯೆಯ ಮೆಜಾರಿಟಿ ಜನರಿಗೆ ಊಟಕ್ಕೆ ಕೊರತೆಯಾಗಿಲ್ಲ. ಹೇಗೂ ಏನೋ ಅವರಿಗೆ ಊಟ ಸಿಗುತ್ತಿದೆ. ಬದುಕಿಗೆ ಬೇಕಾದ ಮಿನಿಮಮ್ ಸೌಕರ್ಯಗಳು ಇಲ್ಲದ ಹೀನಾಯ ಸ್ಥಿತಿಯಲ್ಲಿದ್ದರೂ , ಹೊಟ್ಟೆಗೆ ತತ್ವಾರ ಮಾಡದಿದ್ದರೆ ಸಾಕು ಎನ್ನುವ ವಲಯಕ್ಕೆ ಕೋಟ್ಯಂತರ ಜನತೆ ತಲುಪಿಯಾಗಿದೆ. ಈ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ.

ಯೂನಿವರ್ಸಲ್ ಬೇಸಿಕ್ ಇನ್ಕಮ್ (UBI ) ಕನ್ನಡಲ್ಲಿ ಸಾರ್ವತ್ರಿಕ ಮೂಲ ಆದಾಯ ಅನ್ನಬಹದು. ಇದೊಂದು ಥಿಯರಿ .  ಇದರ ಪ್ರಕಾರ ದೇಶದ ಪ್ರತಿ ನಾಗರೀಕನಿಗೂ ಕೆಲಸವಿರಲಿ ಬಿಡಲಿ ಇಷ್ಟು ಅಂತ ಪ್ರತಿ ತಿಂಗಳು ಹಣ ಕೊಡುವುದು . ಕೆಲಸವಿದ್ದು  ಅಥವಾ ಮತ್ತೇನೋ ಆದಾಯ ಮೂಲವಿದ್ದು ಅದರಿಂದ ಅವರಿಗೆ ಹೆಚ್ಚಿನ ಆದಾಯ ಬರುತ್ತಿದ್ದರೂ ಕೂಡ ಅವರಿಗೂ ಈ ಹಣ ಸಿಗುತ್ತದೆ. ಅರ್ಥ ಇಷ್ಟೇ ಯಾರಿಗೆ ಎಷ್ಟಾದರೂ ಆದಾಯ ಬರುತ್ತಿರಲಿ ಅಥವಾ ಏನೂ ಬರದೆಯೇ ಇರಲಿ ತಿಂಗಳಿಗಷ್ಟು ಎಂದು ಪ್ರತಿ ನಾಗರೀಕನಿಗೂ  ಹಣ ನೀಡುವ ಪರಿಕಲ್ಪನೆಯ ಹೆಸರೇ ಯೂನಿವರ್ಸಲ್ ಬೇಸಿಕ್ ಇನ್ಕಮ್ ಸ್ಕೀಮ್ .

ಸಧ್ಯದ ಸ್ಥಿತಿಯಲ್ಲಿ ಬೇಸಿಕ್ ಇನ್ಕಮ್ ಗ್ಯಾರಂಟಿ (BIG ) ಅಥವಾ ಯೂನಿವರ್ಸಲ್ ಬೇಸಿಕ್ ಇನ್ಕಮ್ (UBI ) ಅಥವಾ ಮಿನಿಮಮ್ ಇನ್ಕಮ್ ಗ್ಯಾರಂಟಿ (MIG ) ಎನ್ನುವುದುಬೇರೆ ಬೇರೆ ರೂಪದಲ್ಲಿ ಭಾರತದಲ್ಲಿ ಚಾಲನೆಯಲ್ಲಿದೆ. ಬೆಂಕಿಯಿಲ್ಲದೆ ಹೊಗೆ ಹೇಗೆ ಬಂದೀತು? ಇಂದಿನ ಸಣ್ಣ ಕಿಡಿ ಇನ್ನೊಂದು ದಶಕದಲ್ಲಿ ಕಾಳ್ಗಿಚ್ಚಿನಂತೆ ಜಗತ್ತನ್ನ ಅವರಿಸದೆ ಇರುವುದೇ? ಮುಂದಿನ ಹತ್ತು ಅಥವಾ ಇಪ್ಪತ್ತು ವರ್ಷದಲ್ಲಿ ಜಗತ್ತು ಅಮೂಲಾಗ್ರ ಬದಲಾವಣೆ ಹೊಂದುವುದಂತೂ ಸತ್ಯ. ಭಾರತದ ಮಟ್ಟಿಗೆ ಹೇಳುವುದಾದರೆ, ಭಾರತ ಈ ರೀತಿಯ ವ್ಯವಸ್ಥೆಯನ್ನ ಜಾರಿಗೆ ತರುವ ಮೊದಲ ದೇಶವಾಗುವ ಸಾಧ್ಯತೆಯಿದೆ.

ಈ ಎಲ್ಲಾ ಪ್ರಹನಗಳ ಮಧ್ಯೆ ಜಗತ್ತಿನಲ್ಲಿ, ಭಾರತದಲ್ಲಿ ಮಧ್ಯಮವರ್ಗ ಎನ್ನುವುದು ಪಳಯುಳಿಕೆಯಾಗಲಿದೆ. ಈಗಾಗಲೇ ಜಗತ್ತಿನಲ್ಲಿ ಮನುಷ್ಯ ಮತ್ತು ಮನುಷ್ಯನ ನಡುವಿನ ಅಂತರ ಬಹಳ ಹೆಚ್ಚಾಗುತ್ತಿದೆ. ಸದ್ದಿಲ್ಲದೇ ಮಧ್ಯಮವರ್ಗ ಕರಗಿ ಬಡತನದ ಪಟ್ಟಿಯಲ್ಲಿ ಸೇರುತ್ತಿದ್ದಾರೆ. ಒಂದೇ ಸಮನೆ ಏರುತ್ತಿರುವ ಬೆಲೆಯೇರಿಕೆ ಇದಕ್ಕೆ ಪ್ರಮುಖ ಕಾರಣ , ಆದಾಯದಲ್ಲಿ ಕುಸಿತ ಮತ್ತು ಕೆಲಸದಲ್ಲಿನ ಅಸ್ಥಿರತೆಗಳು ಕೂಡ ತಮ್ಮದೇ ಆದ ದೇಣಿಗೆಯನ್ನ ನೀಡುತ್ತಿವೆ.

ತಂತ್ರಜ್ಞಾನ ಬೆಳೆದಂತೆ ಹಣ ಕೇವಲ ಕೆಲವೇ ಕೆಲವು ಜನರ ಕೈಯಲ್ಲಿ ಸಂಗ್ರಹವಾಗುತ್ತಾ ಹೋಯಿತು. 1940 ರ ದಶಕದಲ್ಲಿ ಲಂಡನ್ ನಂತಹ ನಗರದ 65 ಪ್ರತಿಶತ ಜನ ಮಧ್ಯಮವರ್ಗ ಎಂದು ಪರಿಗಣಿಸಲ್ಪಟ್ಟಿದ್ದರು ಇಂದು ಅವರ ಸಂಖ್ಯೆ ಅದರ ಅರ್ಧಕ್ಕೂ ಹೆಚ್ಚು ಕುಸಿದಿದೆ. ಇದು ಇಟಲಿ , ಸ್ಪೇನ್ ದೇಶಗಳಿಗೂ ಅನ್ವಯ . ಅಸಮಾನತೆ ಎನ್ನುವುದು ಮನುಷ್ಯ -ಮನುಷ್ಯರ ನಡುವೆ ಸೃಷ್ಟಿ ಮಾಡುತ್ತಿರುವ ಅಂತರ ಅಥವಾ ಸಂಬಂಧಗಳ ನಡುವೆ ಹಚ್ಚುತ್ತಿರುವ ಕಿಚ್ಚಿನ ಬಿಸಿಯನ್ನ' ಹ್ಯೂಮನ್ ಗ್ಲೋಬಲ್ ವಾರ್ಮಿಂಗ್' ಎನ್ನುತ್ತಾರೆ. ನಮಗೆಲ್ಲಾ ಪ್ರಕೃತ್ತಿಯನ್ನ ಸರಿಯಾಗಿ ನೆಡೆಸಿಕೊಳ್ಳದೆ ಇರುವುದರ ಪರಿಣಾಮ ಜಗತ್ತಿನಲ್ಲಿ ಬಿಸಿಲಿನ ತಾಪ ಹೆಚ್ಚುತ್ತಿರುವು ಗೊತ್ತಿರುವ ವಿಷಯ ಆದರೆ ನಮ್ಮ ನಡುವೆ ಹೆಚ್ಚುತ್ತಿರುವ ವಿತ್ತೀಯ ಅಂತರದ ಬಗ್ಗೆ ಜನರಲ್ಲಿ ತಿಳಿವಳಿಕೆಯ ಕೊರತೆಯಿದೆ. ಇಂತಹ ಆರ್ಥಿಕ ಅಂತರವನ್ನ ಕಡಿಮೆಗೊಳಿಸಲು ನಮ್ಮ ಅರಿವು ಮತ್ತು ಸಂಘಟನೆಯ ಹಸಿವು ಎರಡೂ ಹೆಚ್ಚಬೇಕು.

ಕೊನೆ ಮಾತು: 
ಇವತ್ತು ಜನ ಸಾಮಾನ್ಯ ಒಂದು ನೆಡೆದಾಡುವ ಟೈಮ್ ಬಾಂಬ್ ಆಗಿದ್ದಾನೆ. ಯಾವ ಕ್ಷಣದಲ್ಲಿ ಸಿಡಿಯುತ್ತಾನೆ ಹೇಳಲು ಬಾರದು. ಮಹಾನಗರದಲ್ಲಿ ಟ್ರಾಫಿಕ್ ನಲ್ಲಿ ಆಗುವ ಜಗಳಗಳು., ಆಸ್ತಿಗಾಗಿ ಕೊಲೆ, ಮನೆ ಲೂಟಿ , ಸರಗಳ್ಳತನ., ಒಟ್ಟಿನಲ್ಲಿ ಹೆಚ್ಚುತ್ತಿರುವ ಅಪರಾಧಗಳು ಅಸಮಾನತೆಯ ಬಳುವಳಿ. ನಾಳಿನ ಬದುಕಿಗೆ ಭರವಸೆಯೇ ಆಧಾರ ಅದಕ್ಕೆ ಚ್ಯುತಿ ಬಂದರೆ ಗತಿಯಿನ್ನೇನು ?

ಬದುಕಲು ಹಣ ಬೇಕು ,ಹಣ ದುಡಿಯಲು ವೇಳೆ ಒತ್ತೆ ಇಡಬೇಕು, ಹಾಗೆ ಬಂದ ಹಣ ವ್ಯಯಿಸಿ ಉಳಿದ ವೇಳೆ ವ್ಯಯಿಸಬೇಕು ?ವ್ಯಯಿಸುತ್ತ ಕ್ಷಯಿಸಿ ಹೋಗಬೇಕು. ಈ ವಿಷವರ್ತುಲ ಸೃಷ್ಟಿಯಾಗಿದೆ, ಜಗತ್ತಿನ 99 ಪ್ರತಿಶತ ಜನ ಈ ವರ್ತುಲದಲ್ಲಿ ಟ್ರ್ಯಾಪ್ ಆಗಿದ್ದಾರೆ. ಎಲ್ಲರಿಗೂ ಎತ್ತಲೂ ಓಡುವ ಧಾವಂತ, ಓಡುತ್ತಿದ್ದೇವೆ ಎನ್ನುವ ಭಾವನೆ ಆದರೆ ನಿಜವಾಗಿಯೂ ಆಗುತ್ತಿರುವುದೇನು? ಉತ್ತರ ಸಿಕ್ಕರೆ ಹಿಂದೆ ಮೋಕ್ಷ ಸಿದ್ದಿ ಎನ್ನುತ್ತಿದರಲ್ಲ ಅದಕ್ಕೆ ಸಮ!.

ಅಸಮಾನತೆಯ  ವಿರುದ್ಧ ಸೆಣೆಸುವ ಮಾತು ಹಾಗಿರಲಿ ಅದೇನೆಂದು ಜನರಿಗೆ ತಿಳುವಳಿಕೆ ಮೂಡಿಸುವುದು ಹೇಗೆ ? ನಮ್ಮ ಅಜ್ಞಾನವೇ ನಮ್ಮ ಶತ್ರು ಹೊರತು ಬೇರಾರೂ ಅಲ್ಲ!. ಕೊನೆಗೂ ಜೀವನವೆಂದರೆ ಇನ್ನೊಬ್ಬರ ಅಜ್ಞಾನವನ್ನ ಬಂಡವಾಳ ಮಾಡಿಕೊಳ್ಳುವುದು ಎನ್ನುವ ಮಟ್ಟಿಗೆ ಬದುಕು ಬದಲಾಗಿ ಹೋಗಿದೆ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com