ಅಮೆರಿಕಾ ಕುಸಿದರೆ ಜಗತ್ತಿನ ಆರ್ಥಿಕತೆ ಕುಸಿಯುತ್ತಾ? ಭಾರತದ ಕಥೆಯೇನು? (ಹಣಕ್ಲಾಸು)

ಹಣಕ್ಲಾಸು-362ರಂಗಸ್ವಾಮಿ ಮೂನಕನಹಳ್ಳಿ
ಅಮೆರಿಕಾ ಕುಸಿತ (ಸಂಗ್ರಹ ಚಿತ್ರ)
ಅಮೆರಿಕಾ ಕುಸಿತ (ಸಂಗ್ರಹ ಚಿತ್ರ)

ವೈಭವೋಪೇತ ಹೋಟೆಲ್ ಅದು, ಪೀಠೋಪಕರಣಗಳು ಕೂಡ ಅತಿ ದುಬಾರಿಯವು. ಅಲ್ಲಿನ ಕಾಫಿ ಕೂಡ ಅಷ್ಟೇ ದುಬಾರಿ. ಇಷ್ಟೊಂದು ದುಬಾರಿ ಹೋಟೆಲ್ನಲ್ಲಿ ಕುಳಿತು ಕಾಫಿ ಹೀರುತ್ತಾ ಒಮ್ಮೆ ಯೋಚಿಸಿ ನೋಡಿ, ನಿಮ್ಮ ತುಟಿಯನ್ನ ಸ್ಪರ್ಶಿಸುತ್ತಿರುವ ಕಾಸ್ಟ್ಲಿ ಲೋಟ, ಕುಳಿತ ಛೇರು, ಟೇಬಲ್, ಹೋಟೆಲ್ ಕಟ್ಟಡ, ಕಿಟಕಿಯಿಂದ ಕಾಣುತ್ತಿರುವ ಅಷ್ಟೇ ಐಷಾರಾಮಿ ಇನ್ನೊಂದು ಕಟ್ಟಡ, ಅದ್ಬುತ ರಸ್ತೆ, ರಸ್ತೆಯಲ್ಲಿ ಸಾಗುತ್ತಿರುವ ಐಷಾರಾಮಿ ಕಾರುಗಳು, ಅಷ್ಟೆ ಏಕೆ, ಇಷ್ಟೆಲ್ಲಾ ಯೋಚಿಸುತ್ತ, ನೀವು ಕುಡಿದ ಕಾಫಿಗೆ ಪಾವತಿಸುವ ಹಣ ಕೂಡ ಸ್ವಂತದ್ದಲ್ಲ! ಎಲ್ಲವೂ ಸಾಲದ ರೂಪದಲ್ಲಿ ಪಡೆದ ಹಣದಿಂದ ಪಡೆದುಕೊಂಡದ್ದು, ಸೃಷ್ಟಿಸಿದ್ದು. ಮುಂದೆ ಗಳಿಸಬಹುದಾದ ಹತ್ತು-ಇಪತ್ತು ವರ್ಷದ ಹಣವನ್ನ ಇಂದೇ ಮುಂಗಡ ಪಡೆದು ಖರ್ಚು ಮಾಡುವ, ಆಸ್ತಿ ಸೃಷ್ಟಿಸುವ ಕೆಲಸವನ್ನ ಅಮೆರಿಕಾ ದೇಶ 1960ರ ದಶಕದಿಂದ ಶುರು ಹಚ್ಚಿಕೊಂಡಿತು. ಅಲ್ಲಿಯ ತನಕ ಸಾಲವಿರಲಿಲ್ಲ ಅಂತಲ್ಲ, ಆದರೆ ಸಾಲವೇ ಬದುಕು, ಸಾಲವೇ ಜೀವನ, ಸಾಲವೇ ಸರ್ವಸ್ವ ಎನ್ನುವ ಮಟ್ಟಕ್ಕೆ ಬದಲಾಗಲು ಶುರುವಾಗಿದ್ದು 60ನೇ ದಶಕದಿಂದ ಈಚೆಗೆ. ಒಂದು ರೂಪಾಯಿ ಆಸ್ತಿಯನ್ನ ಸೃಷ್ಟಿಸಲು ಅಮೇರಿಕಾ ಎರಡು ರೂಪಾಯಿ ನಲವತ್ತು ಪೈಸೆ ಸಾಲ ಮಾಡಿಕೊಂಡು ಕೂತಿದೆ. ಇದೇನಿದು? ಇದು ಹೇಗೆ ಸಾಹುಕಾರ ದೇಶವಾಯಿತು? ಇಷ್ಟೊಂದು ಸಾಲವೇಕೆ ಆಯ್ತು? ಎನ್ನುವ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಇಷ್ಟೊತ್ತಿಗೆ ಉಗಮವಾಗಿರುತ್ತದೆ. 

ಇದರ ಜೊತೆಗೆ ಇಂದಿನ ದಿನಗಳಲ್ಲಿ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುವ 'ಅಮೇರಿಕಾ ಡೆಟ್ ಸೀಲಿಂಗ್ ಹೆಚ್ಚಳಕ್ಕೆ ಜೂನ್ ಡೆಡ್ಲೈನ್ 'ಅಥವಾ ಅಮೆರಿಕಾ ಸಂಸತ್ತು ಡೆಟ್ ಲಿಮಿಟ್ ಹೆಚ್ಚಳ ಮಾಡುತ್ತದೆಯೆ? ಎನ್ನುವ ತಲೆಬರಹ ಕೂಡ ಓದಿರುತ್ತಿರಿ. ಇಂದಿನ ಲೇಖನದಲ್ಲಿ ಅಮೆರಿಕಾ ಆರ್ಥಿಕತೆ ಈ ಮಟ್ಟಿಗೆ ಕುಸಿಯಲು ಕಾರಣವೇನು? ಡೆಟ್ ಸೀಲಿಂಗ್ ಅಥವಾ ಡೆಟ್ ಲಿಮಿಟ್ ಎಂದರೇನು? ಆಕಸ್ಮಾತ್ ಅಮೆರಿಕಾ ಕುಸಿದರೆ ಜಗತ್ತಿನ ಮೇಲಾಗುವ ಪರಿಣಾಮವೇನು? ಎಲ್ಲಕ್ಕಿಂತ ಮುಖ್ಯವಾಗಿ ಅದು ಭಾರತದ ಮೇಲೆ ಬೀರುವ ಪರಿಣಾಮವೇನು? ಎನ್ನುವುದನ್ನ ನೋಡೋಣ.

ಅಮೆರಿಕಾ ಆರ್ಥಿಕತೆ ಈ ಮಟ್ಟಿಗೆ ಕುಸಿಯಲು ಕಾರಣವೇನು?

ಅಮೆರಿಕಾದಲ್ಲಿ ಹಣವಂದರೆ ಅದು ಸಾಲ. ಸಾಲವಿಲ್ಲದೆ ಬದುಕಿಲ್ಲ. ಇಡೀ ಸಮಾಜ ನಿಂತಿರುವುದು ಸಾಲದ ಮೇಲೆ. ಇದು ಕೇವಲ ಪ್ರಜೆಗಳ ಕಥೆ ಎಂದುಕೊಳ್ಳಬೇಡಿ, ಅಲ್ಲಿನ ಸರಕಾರದ ಕಥೆ ಅದಕ್ಕಿಂತ ಹೆಚ್ಚಿನ ಸಾಲದ ಕಥೆ. ಪ್ರತಿ ನೂರು ಡಾಲರ್ ಆದಾಯದ ಮುಂದೆ ಖರ್ಚು ನೂರತ್ತು ಡಾಲರ್ ಎಂದುಕೊಳ್ಳಿ, ಹೀಗೆ ಹೆಚ್ಚಿಗೆ ಬೇಕಾದ 10 ಡಾಲರ್ ಖರ್ಚನ್ನ ಸರಕಾರ ಡೆಟ್ ಬಾಂಡ್ ವಿತರಿಸುವ ಮೂಲಕ, ಸೇವೆ, ಸರುಕು ನೀಡಿದ ಸಂಸ್ಥೆಗಳಿಗೆ ಮುಂದಿನ ತಿಂಗಳು ನೀಡಲಾಗುತ್ತದೆ ಎನ್ನುವ ಭರವಸೆ ನೀಡುವ ಮೂಲಕ ಸರಿದೂಗಿಸಲಾಗುತ್ತಿತ್ತು. ಪ್ರತಿ ವರ್ಷವೂ ಇದೆ ಕಥೆ. ಮೊದಲ ವರ್ಷ ಮಾಡಿದ 10 ರೂಪಾಯಿ ಸಾಲವನ್ನ ಬಡ್ಡಿ ಸಮೇತ 3 ವರ್ಷದ ನಂತರ ಕೊಡಬೇಕು. ಆಗ 13 ಡಾಲರ್ ಬೇಕಾಗುತ್ತದೆ ಎಂದುಕೊಳ್ಳಿ. ಮೂರನೇ ವರ್ಷದ ವಿತ್ತೀಯ ಕೊರತೆ ಜೊತೆಗೆ ಹೊಸದಾಗಿ ಮೊದಲ ವರ್ಷದ ಸಾಲ ಮತ್ತು ಬಡ್ಡಿ ಹಿಂತಿರುಗಿಸ ಬೇಕು, ಏನು ಮಾಡುವುದು? ಹೊಸದಾಗಿ ಸಾಲ. ಅಂದರೆ ಗಮನಿಸಿ ಮೂರನೇ ವರ್ಷದಲ್ಲಿ ಆದಾಯ ಮೀರಿದ ಖರ್ಚು 10 ಡಾಲರ್ ಎಂದುಕೊಂಡರೆ, ಸಾಲ ಬೇಕಾಗಿರುವುದು 10 ಮತ್ತು ಮೊದಲ ವರ್ಷದ ಸಾಲ ಮತ್ತು ಬಡ್ಡಿಯ ಬಾಬತ್ತು 13 ಡಾಲರ್, ಒಟ್ಟು 23 ಡಾಲರ್. ನಾಲ್ಕನೇ ವರ್ಷದಿಂದ ಸಾಲದ ಮೊತ್ತ ಹೆಚ್ಚುತ್ತಲೇ ಹೋಗುತ್ತದೆ. ಯಾವುದೇ ಕಾರಣಕ್ಕೂ ಇದು ಕಡಿಮೆಯಾಗುವ ಸಾಧ್ಯತೆ ಇಲ್ಲವೇ ಇಲ್ಲ.

ಡೆಟ್ ಸೀಲಿಂಗ್ ಅಥವಾ ಡೆಟ್ ಲಿಮಿಟ್ ಎಂದರೇನು?

ಹಾಗಾದರೆ ಇದಕ್ಕೆ ಕೊನೆಯೆಲ್ಲಿ? ಹೌದು ಇದಕ್ಕೆ ಕೊನೆಯಿಲ್ಲ. ಅದಕ್ಕೆ ಇದನ್ನ ಅರಿತ ಅರ್ಥಶಾಸ್ತ್ರಜ್ಞರು ಅಮೆರಿಕದ ಸಂಸತ್ತಿಗೆ ವರದಿ ಸಲ್ಲಿಸುತ್ತಾರೆ. ಸಾಲದ ಮೊತ್ತ ವರ್ಷದ ಜಿಡಿಪಿಗಿಂತ ಎಂದಿಗೂ ಮೀರಬಾರದು ಎನ್ನುವುದು ವರದಿಯ ಸಾರಾಂಶ. ಅಂದರೆ ಸಾಲಕ್ಕೆ ಒಂದು ಮಿತಿಯನ್ನ ನಿರ್ಮಿಸುತ್ತಾರೆ. ಇದನ್ನ ಮೀರಿ ಹೋದರೆ ಅಪಾಯ ಎನ್ನುವುದನ್ನ ತಿಳಿಸಲು ಸೃಷ್ಟಿಸಿದ ಸಂಖ್ಯೆಗೆ ಡೆಟ್ ಲಿಮಿಟ್ ಅಥವಾ ಡೆಟ್ ಸೀಲಿಂಗ್ ಎನ್ನಲಾಗುತ್ತದೆ. 2023 ರಲ್ಲಿ ಅಮೆರಿಕಾ ಒಟ್ಟು ಸಾಲ 31.4 ಟ್ರಿಲಿಯನ್ ಅಮೆರಿಕನ್ ಡಾಲರ್. ಇದು ದೇಶದ ವಾರ್ಷಿಕ ಜಿಡಿಪಿಗಿಂತ ಹೆಚ್ಚಾಗಿದೆ. ಹೀಗಾಗಿ ಅಮೆರಿಕಾ ಸಂಸತ್ತಿನ ಮುಂದೆ ಸಾಲದ ಲಿಮಿಟ್ ಹೆಚ್ಚಳ ಮಾಡುವುದು ಅಂದರೆ ಸೀಲಿಂಗ್ ಹೆಚ್ಚಳ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಅದೇನು ಸುಲಭ ಅಲ್ಲವೇ, ಅಮೆರಿಕಾ ದೇಶಕ್ಕೆ ಯಾವ ದೇಶದ ಅಪ್ಪಣೆ ಬೇಕು? ಲಿಮಿಟ್ ಹೆಚ್ಚಿಸಿದರೆ ಮುಗಿಯಿತು ಎನ್ನುವಂತಿಲ್ಲ. ಏಕೆಂದರೆ ಅಮೆರಿಕಾ ಸಂಸತ್ತಿನ ಮೆಜಾರಿಟಿ ಸದಸ್ಯರ ಒಪ್ಪಿಗೆ ಇದಕ್ಕೆ ಬೇಕಾಗುತ್ತದೆ. ಇಂದು ಅಮೆರಿಕಾ ದೇಶದ ಚುಕ್ಕಾಣಿ ಹಿಡಿದಿರುವವರು ಡೆಮಾಕ್ರಟ್ಸ್, ವಿರೋಧ ಪಕ್ಷದಲ್ಲಿರುವ ರಿಪಬ್ಲಿಕನ್ಸ್ ಲಿಮಿಟ್ ಹೆಚ್ಚಳಕ್ಕೆ ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ. ಸಂಸತ್ತಿನಲ್ಲಿ ಇದನ್ನ ಒಪ್ಪಿಗೆಗಾಗಿ ಮುಂದಿಟ್ಟಾಗ ರಿಪಬ್ಲಿಕನ್ಸ್ ಇದರ ವಿರುದ್ಧ ವೋಟ್ ಮಾಡುವುದಾಗಿ ಹೇಳಿದ್ದಾರೆ. ಅಮೆರಿಕಾ ದೇಶದ ಮುಂದೆ ಲಿಮಿಟ್ ಹೆಚ್ಚಳ ಮಾಡದೆ ಬೇರೆ ಯಾವ ದಾರಿಯೂ ಇಲ್ಲ. ಒಪ್ಪಿಗೆ ಪಡೆಯಲೇಬೇಕಾಗಿದೆ. ಹೀಗಾಗಿ ಡೆಮಾಕ್ರಟ್ಸ್, ರಿಪಬ್ಲಿಕನ್ಸ್ ಮನ ಒಲಿಸಲು ಮುಂದಾಗಿದ್ದಾರೆ. ಆದರೆ ರಿಪಬ್ಲಿಕನ್ಸ್, ಜೋ ಬಿಡೆನ್ ಗೆ ಷರತ್ತು ಹಾಕಿದ್ದಾರೆ. ಸರಕಾರಿ ಖರ್ಚುಗಳಿಗೆ, ದುಂದು ವೆಚ್ಚಗಳಿಗೆ ಕಡಿವಾಣ ಹಾಕುವುದಿದ್ದರೆ ಮಾತ್ರ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ಜೋ ಬಿಡೆನ್, ಕಾಂಗ್ರೆಸ್ನಲ್ಲಿ ಅನುಮತಿ ನೀಡಲಾಗಿರುವ ಖರ್ಚುಗಳಿಗೆ ಕಡಿವಾಣ ಹಾಕಲು ಬರುವುದಿಲ್ಲ ಎನ್ನುವ ಮೊಂಡುವಾದವನ್ನ ಮಾಡುತ್ತಾ ಕುಳಿತ್ತಿದ್ದಾರೆ. ಜೂನ್ ತಿಂಗಳಲ್ಲಿ ಇದು ಇತ್ಯರ್ಥ ಆಗಬೇಕು.  

ಆಕಸ್ಮಾತ್ ಅಮೆರಿಕಾ ಕುಸಿದರೆ ಜಗತ್ತಿನ ಮೇಲಾಗುವ ಪರಿಣಾಮವೇನು?

ಆಕಸ್ಮಾತ್ ಸಂಸತ್ತಿನಲ್ಲಿ ಡೆಟ್ ಲಿಮಿಟ್ ಹೆಚ್ಚಳಕ್ಕೆ ಜಯ ಸಿಗದೇ ಹೋಗದಿದ್ದರೆ, ಅಮೆರಿಕಾ ದೇಶ 'ಡಿಫಾಲ್ಟ್ರ್' ಎನ್ನಿಸಿಕೊಳ್ಳುತ್ತದೆ. ಅಂದರೆ ತನಗೆ ಯಾವೆಲ್ಲ ದೇಶಗಳು, ಜನ, ಸಂಸ್ಥೆಗಳು ಡೆಟ್ ಬಾಂಡ್ ಕೊಳ್ಳುವ ಮೂಲಕ ಸಾಲ ಕೊಟ್ಟಿದ್ದಾರೆ, ಅವರಿಗೆ ಬಡ್ಡಿ ಮತ್ತು ಅಸಲು ಹಣವನ್ನ ನೀಡಲಾಗುವುದಿಲ್ಲ. ಹೀಗೆ ಕೊಡಬೇಕಾದ ಹಣವನ್ನ ಕೊಡುವಲ್ಲಿ ವಿಫಲವಾದವರನ್ನ 'ಡಿಫಾಲ್ಟ್ರ್' ಎನ್ನಲಾಗುತ್ತದೆ. ಅಮೇರಿಕಾ ದೇಶದ ಕ್ರೆಡಿಬಿಲಿಟಿ ಜಾಗತಿಕ ಮಟ್ಟದಲ್ಲಿ ಇನ್ನಿಲ್ಲದ ಕುಸಿತ ಕಾಣುತ್ತದೆ. ಸರಕಾರವೇ ಪಡೆದುಕೊಂಡ ಹಣವನ್ನ ಕೊಡುವಲ್ಲಿ ವಿಫಲವಾದರೆ ಉಳಿದವರ ಪಾಡೇನು? ಇದು ಚೈನ್ ರಿಯಾಕ್ಷನ್ಗೆ ದಾರಿ ಮಾಡಿಕೊಡುತ್ತದೆ. ಅನೇಕ ಸಂಸ್ಥೆಗಳು, ಬ್ಯಾಂಕುಗಳು, ಫೈನಾನ್ಸಿಯಲ್ ಇನ್ಸ್ಟಿಟ್ಯೂಟ್ ಗಳು ಕುಸಿತ ಕಾಣುತ್ತ ಸಾಗುತ್ತವೆ. ಒಟ್ಟಿನಲ್ಲಿ ಅಮೆರಿಕಾ ದೇಶ ಆರ್ಥಿಕ ಕುಸಿತಕ್ಕೆ ತುತ್ತಾಗುತ್ತದೆ. ಇದು ಈಗಾಗಲೇ ಇರುವ ಆರ್ಥಿಕ ಹಿಂಜರಿತಕ್ಕೆ ಮತ್ತಷ್ಟು ಪುಷ್ಟಿ ನೀಡುತ್ತದೆ. ಅಮೇರಿಕಾ ಕುಸಿದರೆ ಅದು ಜಾಗತಿಕ ಕುಸಿತಕ್ಕೂ ಕಾರಣವಾಗುತ್ತದೆ. ನಿಮಗೆ ಗೊತ್ತಿರಲಿ ಜಾಗತಿಕವಾಗಿ ಇಂದು ಎಲ್ಲಾ ದೇಶದ ಆರ್ಥಿಕತೆಯೂ ಒಂದರ ಮೇಲೊಂದು ಅವಲಂಬಿತವಾಗಿದೆ. ಅಲ್ಲದೆ ಜಗತ್ತಿನ ಒಟ್ಟು ಆರ್ಥಿಕತೆಯನ್ನ 100 ಡಾಲರ್ ಎಂದುಕೊಂಡರೆ ಅದರಲ್ಲಿ 30 ಡಾಲರ್ ಅಮೇರಿಕಾ ದೇಶ ಒಂದರಿಂದ ಉತ್ಪತ್ತಿಯಾಗುತ್ತಿದೆ. ಹೀಗಾಗಿ ಜಗತ್ತಿನ ಅತಿ ದೊಡ್ಡ ಆರ್ಥಿಕತೆಯ ದೇಶ ಕುಸಿದರೆ ಅದು ಸಹಜವಾಗೇ ಜಾಗತಿಕ ಕುಸಿತಕ್ಕೂ ನಾಂದಿ ಹಾಡುತ್ತದೆ. ಚೀನಾ, ಯೂರೋಪಿಯನ್ ಯೂನಿಯನ್ ಮತ್ತು ಭಾರತದ ಮೇಲೆ ಇವು ಹೆಚ್ಚಿನ ಪರಿಣಾಮವನ್ನ ಬೀರಲಿದೆ.

ಭಾರತದ ಮೇಲೆ ಬೀರುವ ಪರಿಣಾಮವೇನು?

ಅಮೆರಿಕಾ ದೇಶದ ಜೊತೆಗೆ ವರ್ಷದಿಂದ ವರ್ಷಕ್ಕೆ ವ್ಯಾಪಾರ ವಹಿವಾಟು ವೃದ್ಧಿಯಾಗುತ್ತ ಬಂದಿದೆ. 2022-23 ನೇ ಸಾಲಿನಲ್ಲಿ ಭಾರತದ ನಂಬರ್ ಒನ್ ಟ್ರೇಡಿಂಗ್ ಪಾರ್ಟ್ನರ್ ಎನ್ನುವ ಪಟ್ಟವನ್ನ ಕೂಡ ಅಮೆರಿಕಾ ಅಲಂಕರಿಸಿದೆ. ಕೋವಿಡ್ ನಂತರದ ಬದಲಾವಣೆ, ಭಾರತ ಸರಕಾರ ಅಮೇರಿಕಾ ಸರಕಾರದ ಜೊತೆಗೆ ಬೆಳಸಿಕೊಂಡ ಉತ್ತಮ ಬಾಂಧವ್ಯ ಎಲ್ಲವೂ ಒಗ್ಗೊಡಿ, ಭಾರತ ಮತ್ತು ಅಮೇರಿಕಾ ನಡುವಿನ ವ್ಯಾಪಾರ ವಹಿವಾಟು ಹೆಚ್ಚಳ ಕಂಡಿದೆ. ಭಾರತದ ಜೊತೆಗೆ ಅಮೆರಿಕಾದ ವ್ಯಾಪಾರ ವಹಿವಾಟು ನಗಣ್ಯವಾಗಿದ್ದಿದ್ದರೆ ನಮಗೆ ಅಮೆರಿಕಾ ಕುಸಿತ ತಲೆನೋವಾಗಿ ಪರಿಣಮಿಸುತ್ತಿರಲಿಲ್ಲ . ಇಂದಿಗೆ ಅಮೇರಿಕಾ ಕುಸಿದರೆ ಅದರ ನೇರ ಪರಿಣಾಮ ಭಾರತದ ಮೇಲೂ ಆಗುತ್ತದೆ. ಮುಂದಿನ 11 ತಿಂಗಳಲ್ಲಿ ಭಾರತದಲ್ಲಿ ರಾಷ್ಟೀಯ ಚುನಾವಣೆ ಕೂಡ ಇರುವ ಕಾರಣ, ಆರ್ಥಿಕ ಕುಸಿತ ಭಾರತದ ಮಟ್ಟಿಗೆ ಒಳ್ಳೆಯ ಸುದ್ದಿಯಂತೂ ಖಂಡಿತ ಅಲ್ಲ. ಭಾರತದ ಅನೇಕ ವಲಯಗಳಲ್ಲಿ ತಲ್ಲಣ ತಪ್ಪಿದ್ದಲ್ಲ.

ಕೊನೆ ಮಾತು: ಅಮೆರಿಕಾದ ಅಭಿವೃದ್ಧಿ ಮಾಡೆಲ್ ಬಹಳ ತಪ್ಪುಗಳಿಂದ ತುಂಬಿದೆ. ಮುಂದಿನ ಹತ್ತು ವರ್ಷದಲ್ಲಿ ಗಳಿಸಬಹುದಾದ ಸಂಭಾವ್ಯ ಹಣವನ್ನ ಇಂದೇ ಖರ್ಚು ಮಾಡುವುದು ಅಭಿವೃದ್ಧಿ ಹೇಗಾದೀತು? ಇದು ತಪ್ಪು ಎನ್ನುವುದನ್ನ ಕಳೆದ 8 ವರ್ಷದಿಂದ 'ಹಣಕ್ಲಾಸು' ಅಂಕಣದಲ್ಲಿ ಬರೆಯುತ್ತಾ ಬಂದಿದ್ದೇನೆ. ಅಮೆರಿಕಾದ ಹಾದಿಯನ್ನ ತುಳಿದ ಚೀನಾ ಕೂಡ ಕುಸಿತದ ಹಂತದಲ್ಲಿದೆ. ಇವೆರೆಡೂ ದೇಶಗಳ ಕುಸಿತ ಜಗತ್ತಿನ ಇತರೆ ದೇಶಗಳಿಗೆ ಆರ್ಥಿಕತೆಯ ಪಾಠವಾಗಬೇಕು. ಆದಾಗುತ್ತಿಲ್ಲ ಎನ್ನುವುದು ಒಂದು ನೋವಾದರೆ, ಡೆಟ್ ಲಿಮಿಟ್ ಹೆಚ್ಚಳ ಮಾಡಿದರೂ ಕೂಡ ಅದು ಸಮಸ್ಯೆಗೆ ತಾತ್ಕಾಲಿಕ ಪರಿಹಾರವೇ ಹೊರತು, ಶಾಶ್ವತ ಸಮಾಧಾನವಲ್ಲ ಎನ್ನುವುದು ಇನ್ನೊಂದು ದೊಡ್ಡ ನೋವಿನ ಅಂಶವಾಗಿದೆ. ಒಟ್ಟಿನಲ್ಲಿ ಜಾಗತಿಕ ಆರ್ಥಿಕ ಕುಸಿತ, ಹಿಂಜರಿಕೆ ಎನ್ನುವುದು ಸದಾ ಹಿಂಬಾಲಿಸುವ ನೆರಳಾಗಿದೆ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com