
ಜಗತ್ತು ಹಿಂದೆಂಗಿಂತಲೂ ಇಂದು ಹೆಚ್ಚಿನ ಅನಿಶ್ಚಿತತೆಯಿಂದ ತುಂಬಿದೆ. ಅದರಲ್ಲೂ ವಿತ್ತ ಜಗತ್ತಿನಲ್ಲಿ ತಲ್ಲಣಗಳು ನಿಲ್ಲುವ ಲಕ್ಷಣಗಳೇ ಕಾಣುತ್ತಿಲ್ಲ. ಇದಕ್ಕೆ ಬಹುಮುಖ್ಯ ಕಾರಣ ಕೋವಿಡ್ ಸಮಯದಲ್ಲಿ ಅಮೆರಿಕಾ ಸೇರಿದಂತೆ ಒಂದೈದಾರು ದೇಶಗಳು ಅವಶ್ಯಕತೆಗೆ ತಕ್ಕಂತೆ ಹಣವನ್ನ ಮುದ್ರಿಸಿದ್ದು. ಅದು ತಾತ್ಕಾಲಿಕ ಶಮನವನ್ನ ನೀಡಿತು. ಆದರೆ ಧೀರ್ಘಾವಧಿಯಲ್ಲಿ ಹಣದುಬ್ಬರವನ್ನ ಅದು ಹೆಚ್ಚು ಮಾಡಿತು.
ಒಂದೊಕ್ಕೊಂದು ನೇರ ಸಂಬಂಧವಿರುವ ಈ ಕಾರಣಗಳು ಹಣದ ಮೌಲ್ಯ ಇನ್ನಿಲ್ಲದಂತೆ ಕುಸಿಯಲು ಪ್ರಮುಖ ಕಾರಣಗಳಾದವು. ಹೆಚ್ಚುತ್ತಿರುವ ಹಣದುಬ್ಬರವನ್ನ ತಡೆಯಲು ಬೇರೆ ದಾರಿಯಿಲ್ಲದೆ ಅಮೆರಿಕಾ ಕಳೆದ ಮೂರು ವರ್ಷದಿಂದ ಒಂದೇ ಸಮನೆ ಫೆಡರಲ್ ಬಡ್ಡಿ ದರವನ್ನ ಹೆಚ್ಚಿಸುತ್ತಲೆ ಬಂದಿವೆ. ಜಗತ್ತಿನ ಬೇರೆ ಯಾವುದೇ ದೇಶವಾಗಿದ್ದರೂ ಈ ಮಟ್ಟದ ಹಣದುಬ್ಬರ ಮತ್ತು ಬಡ್ಡಿ ಏರಿಕೆಗೆ ಈ ವೇಳೆಗೆ ಕುಸಿತವನ್ನ ಕಾಣಬೇಕಿತ್ತು. ಅಮೇರಿಕಾ ಕೂಡ ಕುಸಿದಿದೆ ಆದರೆ ಗಮನಿಸಿ ಅಮೇರಿಕಾ ಕುಸಿದರೆ ಜಾಗತಿಕ ವಿತ್ತ ಜಗತ್ತು ಕೂಡ ಕುಸಿಯುತ್ತದೆ. ಅದು ಯಾವುದೇ ಕಾರಣದಿಂದ ಜಗತ್ತಿಗೆ ಒಳ್ಳೆಯದಲ್ಲ. ಹೀಗಾಗಿ ಅದರ ಕುಸಿತವನ್ನ ಮುಂದೂಡಲಾಗುತ್ತಿದೆ.
ಅಮೇರಿಕಾದಲ್ಲಿ ನಡೆಯುತ್ತಿರುವ ಮಂದಗತಿಗೆ ಫೆಡರಲ್ ಬಡ್ಡಿ ದರವೇ ಕಾರಣ ಎಂದು ಡೊನಾಲ್ಡ್ ಟ್ರಂಪ್ ದೂರುತ್ತಿದ್ದರು. ಬಡ್ಡಿ ದರವನ್ನ ಇಳಿಸುವುದಷ್ಟೇ ಅಲ್ಲ ಅದನ್ನ ನೆಗಟಿವ್ ದರಕ್ಕೆ ತೆಗೆದುಕೊಂಡು ಹೋಗಬೇಕು ಎನ್ನುವುದು ಅವರ ಉದ್ದೇಶವಾಗಿತ್ತು. ಫೆಡರಲ್ ಬ್ಯಾಂಕಿನ ನಿಲುವುಗಳು ಮತ್ತು ಅದರ ಕಾರ್ಯ ವೈಖರಿಯ ಬಗ್ಗೆ ಎಲ್ಲರ ಮುಂದೆ ತಮ್ಮ ಅಸಮಾಧಾನವನ್ನ ಹೊರಹಾಕುತ್ತಿದ್ದರು. ಬ್ಯಾಂಕಗಳ ಬಡ್ಡಿ ದರವನ್ನ ಋಣಾತ್ಮಕ ಮಾಡಿ, ಏಕಿಷ್ಟು ಪುಕ್ಕಲು ತನದಿಂದ ವರ್ತಿಸುತ್ತೀರಿ? ಎನ್ನುವ ಮಾತನ್ನ ಕೂಡ ಟ್ರಂಪ್ ಆಡಿದ್ದರು ಎನ್ನುವುದನ್ನ ನಾವು ಎಂದಿಗೂ ಮರೆಯಬಾರದು. ಟ್ರಂಪ್ ಸೋಲಲು ಇದು ಪ್ರಮುಖ ಕಾರಣವಾಯ್ತು. ಗಮನಿಸಿ ನೋಡಿ ಅಂದಿನಿಂದ ಇಂದಿನವರೆಗೆ ಫೆಡರಲ್ ಬಡ್ಡಿ ದರ ಏರುತ್ತಲೇ ಇದೆ. ಟ್ರಂಪ್ ಇದಿದ್ದರೆ ಎಲ್ಲವೂ ಸುಖಮಯವಾಗಿರುತ್ತಿತ್ತು ಎನ್ನುವಂತಿಲ್ಲ, ಇಂದಿಗಿಂತ ಜಾಗತಿಕ ಆರ್ಥಿಕತೆ ಅದರಲ್ಲೂ ಅಮೆರಿಕಾದ ಆರ್ಥಿಕತೆ ಒಂದಷ್ಟು ಉತ್ತಮವಾಗಿರುತ್ತಿತ್ತು ಎನ್ನುವುದು ನಿರ್ವಿವಾದ.
ಇದನ್ನೂ ಓದಿ: ಅಮೆರಿಕಾ ಕುಸಿದರೆ ಜಗತ್ತಿನ ಆರ್ಥಿಕತೆ ಕುಸಿಯುತ್ತಾ? ಭಾರತದ ಕಥೆಯೇನು?
ಹೀಗೆ ಜಗತ್ತಿನ ಪ್ರಮುಖ ಮನಿ ಸ್ಪಿನ್ನರ್ (money spinner) ದೇಶಗಳು ಆರ್ಥಿಕ ಮಂದಗತಿಯಿಂದ ಬಳಲುತ್ತಿರುವುದು ಹೆಚ್ಚು ಕಡಿಮೆ ಗೊತ್ತಿದ್ದೂ ಗೊತ್ತಿಲ್ಲದೇ ಇರುವ ವಿಷಯವಾಗಿದೆ. ಇವೆಲ್ಲವುಗಳ ನಡುವೆ ಭಾರತ ಆರ್ಥಿಕತೆಗೆ ವೇಗವಾಗಿ ಅಭಿವೃದ್ಧಿ ಹೊಂದುತ್ತಾ ಸಾಗಲಿದೆ. ಭಾರತದ ಬಲಿಷ್ಠ ಮಧ್ಯಮವರ್ಗ ಜಗತ್ತಿನ ಎಲ್ಲಾ ದೇಶಗಳ ಕಣ್ಣಿಗೆ ಉತ್ತಮ ಮಾರುಕಟ್ಟೆ, ಗ್ರಾಹಕರಂತೆ ಕಾಣುತ್ತಿದ್ದರೆ ಅದರಲ್ಲಿ ಆಶ್ಚರ್ಯ ಪಡುವ ವಿಷಯವೇನಿಲ್ಲ. ಮುಂದಿನ ಹತ್ತು ವರ್ಷದಲ್ಲಿ ಭಾರತ ಅತ್ಯಂತ ವೇಗವಾಗಿ ಬೆಳೆಯಲಿದೆ ಇದರಿಂದ ಭಾರತದ ಲಕ್ಷಾಂತರ ಬಡವರು ಬಡತನದ ರೇಖೆಯಿಂದ ಹೊರಬಂದು ಉತ್ತಮ ಜೀವನ ನೆಡೆಸಲಿದ್ದಾರೆ ಎನ್ನುವುದು ಕೂಡ ಸತ್ಯ.
ಭಾರತದಲ್ಲಿ ಹೂಡಿಕೆ ಮಾಡಲು ಇಚ್ಛಿಸುವ ಹೂಡಿಕೆದಾರರು ಅವರು ವಿದೇಶಿಯಾಗಿರಲಿ ಅಥವಾ ಡೊಮೆಸ್ಟಿಕ್ ಇನ್ವೆಸ್ಟರ್ಸ್ ಆಗಿರಲಿ, ಅವರಿಗೆ ಪ್ರಮುಖವಾಗಿ ಆರೋಗ್ಯ, ಶಿಕ್ಷಣ ಮತ್ತು ಮೂಲಭೂತ ಸೌಲಭ್ಯಗಳಲ್ಲಿ ಹೆಚ್ಚಿನ ಅವಕಾಶಗಳು ತೆರೆದುಕೊಳ್ಳಲಿವೆ. ಈ ಕ್ಷೇತ್ರದ ಕಡೆ ಹೆಚ್ಚಿನ ಗಮನ ನೀಡಬಹುದು.
ಒಂದೇ ಸಮನೆ ಏರುತ್ತಿರುವ ಫೆಡರಲ್ ಬಡ್ಡಿ ದರ, ಏರುತ್ತಿರುವ ತೈಲ ಬೆಲೆ, ಪರ್ಯಾಯವಿಲ್ಲದ ವರ್ಲ್ಡ್ ಕರೆನ್ಸಿ (world currency), ಬೆಲೆ ಇವೆಲ್ಲಾ ಒಗ್ಗೊಡಿ ಡಾಲರ್ ಅನ್ನು ಬಹಳ ಬಲಿಷ್ಠವಾಗಿಸಿವೆ. ಗಮನಿಸಿ ತೈಲ ಬೆಲೆಯನ್ನ ಏರುಪೇರು ಮಾಡುವುದು ಅಮೇರಿಕಾ, ಫೆಡರಲ್ ಬಡ್ಡಿ ಏರಿಸುವುದು ಕೂಡ ಅದರ ಕೈಲಿದೆ, ಜಗತ್ತಿಗೆ ಇಂದು ಸದ್ಯದ ಮಟ್ಟಿಗಂತೂ ಡಾಲರ್ಗೆ ಪರ್ಯಾಯ ಸಿಕ್ಕಿಲ್ಲ. ಇದರ ಅರ್ಥವೇನು? ಇವತ್ತು ಜಗತ್ತಿನ ಆರ್ಥಿಕತೆಯನ್ನ ತನ್ನ ಲಾಭಕ್ಕೆ ತಿರುಚಿಕೊಳ್ಳುವ ಎಲ್ಲಾ ಸಾಧನಗಳು ಅಮೇರಿಕಾ ಕೈಲಿದೆ. ಇಂತಹ ಒಂದು ಉತ್ತಮ ಅವಕಾಶವನ್ನ ಅದೇಕೆ ಬಿಟ್ಟೀತು? ಇದೆಲ್ಲಾ ಸರಿ. ಇಲ್ಲಿ ಎಲ್ಲಕ್ಕಿಂತ ಹೆಚ್ಚು ನೆಮ್ಮದಿ ಕೊಡುವ ವಿಷಯವೆಂದರೆ ಅಮೇರಿಕಾ ಕೂಡ ಇಂತಹ ಹೊಲಸು ಆಟವನ್ನ ಹೆಚ್ಚು ಹೊತ್ತು ಆಡಲು ಆಗುವುದಿಲ್ಲ. ಏಕೆಂದರೆ ಅದು ತಿರುಗುಬಾಣವಾಗುವ ಸಾಧ್ಯತೆಯನ್ನ ಅಲ್ಲಗೆಳೆಯಲು ಬರುವುದಿಲ್ಲ. ಹೀಗಾಗಿ ಇದು ತಾತ್ಕಾಲಿಕ ಆಟ. ಆದರೆ ಗಮನಿಸಿ ಈ ಸಮಯದಲ್ಲಿ ಹತ್ತಾರು ಸಣ್ಣ ಪುಟ್ಟ ದೇಶಗಳು, ಕೋಟ್ಯಂತರ ಜನರ ಬದುಕು ಕೆಟ್ಟು ಹೋಗುತ್ತದೆ. ಹಲವು ದೇಶಗಳ ಭವಿಷ್ಯ ಬದಲಾಗುತ್ತದೆ. ಅಮೇರಿಕಾದಲ್ಲಿ ಒಂದೇ ಸಮನೆ ಹೆಚ್ಚುತ್ತಿರುವ ಫೆಡರಲ್ ಬಡ್ಡಿ ದರ ಭಾರತದ ಮಟ್ಟಿಗೆ ಒಳ್ಳೆಯದಲ್ಲ ನಿಜ ಹೇಳಬೇಕೆಂದರೆ ಮುಂಬರುವ ಚುನಾವಣೆಯ ಮೇಲೂ ಪ್ರಭಾವ ಬೀರುವ ಸಾಧ್ಯತೆಯಿದೆ.
ಇದನ್ನೂ ಓದಿ: ಕೊರೋನೋತ್ತರ ಹಣದುಬ್ಬರ: ಜಗತ್ತಿಗೆ ಜಗತ್ತೇ ತತ್ತರ!
ಸದ್ಯದ ಮಟ್ಟಿಗೆ ಕೇಂದ್ರ ಸರಕಾರ ಕೆಳಗಿನ ಹಲವು ಅಂಶಗಳನ್ನ ಗಣನೆಗೆ ತೆಗೆದುಕೊಂಡು ಕಾರ್ಯ ತತ್ಪರಾಗಬೇಕಾದ ಅನಿವಾರ್ಯತೆ ಹೆಚ್ಚಾಗಿದೆ.
ಕೊನೆ ಮಾತು: ವಿತ್ತ ಜಗತ್ತು ಹೆಚ್ಚು ತಲ್ಲಣದ ಸಂಕ್ರಮಣ ಸ್ಥಿತಿಯಲ್ಲಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಹೆಚ್ಚಿನ ಅನಿಶ್ಚಿತತೆ ಇರುತ್ತದೆ. ಯಾವುದೇ ಹೂಡಿಕೆ ಮಾಡುವ ಮುನ್ನ ಅದರ ಆಳ ಅಗಲವನ್ನ ಅರಿತು ಹೂಡಿಕೆ ಮಾಡುವುದು ಉತ್ತಮ. 2024ರ ಅಂತ್ಯದ ವರೆಗೆ ಈ ಅನಿಶ್ಚಿತತೆ ಮುಂದುವರಿಯಲಿದೆ. ವಿತ್ತ ಜಗತ್ತಿನಲ್ಲಿ ಹಿಡಿತ ಹೊಂದಿರುವ ಬೆರಳೆಣಿಕೆಯಷ್ಟು ಜನ ಯಾವ ದೇಶದ ಪ್ರಧಾನಿ ಯಾರಾಗಬೇಕು ಎನ್ನುವುದನ್ನ ನಿರ್ಧರಿಸುತ್ತಾರೆ. ಅದು ಭಾರತಕ್ಕೂ ಲಾಗೂ ಆಗುವ ಸಾಧ್ಯತೆಯನ್ನ ಅಲ್ಲಗೆಯಲಾಗುವುದಿಲ್ಲ. ಜನ ಸಾಮಾನ್ಯನ ಮನಸ್ಸು ಗೆಲ್ಲದಿದ್ದರೆ ಮುಂದಿನ ದಾರಿ ಸುಗಮವಲ್ಲ.
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com
Advertisement