ಯಡಿಯೂರಪ್ಪ ಮಾಸ್ಟರ್ ಸ್ಟ್ರೋಕ್: ಕಮಲ ಕಲಿಗಳು ಕಂಗಾಲು! (ಸುದ್ದಿ ವಿಶ್ಲೇಷಣೆ)

ಯಗಟಿ ಮೋಹನ್ಒಂದೇ ಒಂದು ಹೇಳಿಕೆ. ಇಡೀ ಬಿಜೆಪಿಗೆ ಬಿಜೆಪಿಯೇ ಥಂಡಾ ಹೊಡೆದು ಹೋಗಿದೆ. ದಿಲ್ಲಿಯಲ್ಲಿ ಕುಳಿತು ಹೇಳಿಕೆ ನೀಡುತ್ತಿದ್ದ  ರಾಜ್ಯದ ಘಟಾನುಘಟಿ ನಾಯಕರು ತಣ್ಣಗಾಗಿದ್ದಾರೆ. ಅವರ ಮಾತುಗಳಿಗೆ ಪಕ್ಷದ ದಿಲ್ಲಿಯ ಪಡಸಾಲೆಗಳಲ್ಲಿ ಮಾನ್ಯತೆ ಸಿಗುತ್ತಿಲ್ಲ.
ಯಡಿಯೂರಪ್ಪ
ಯಡಿಯೂರಪ್ಪ

ಒಂದೇ ಒಂದು ಹೇಳಿಕೆ. ಇಡೀ ಬಿಜೆಪಿಗೆ ಬಿಜೆಪಿಯೇ ಥಂಡಾ ಹೊಡೆದು ಹೋಗಿದೆ. ದಿಲ್ಲಿಯಲ್ಲಿ ಕುಳಿತು ಹೇಳಿಕೆ ನೀಡುತ್ತಿದ್ದ  ರಾಜ್ಯದ ಘಟಾನುಘಟಿ ನಾಯಕರು ತಣ್ಣಗಾಗಿದ್ದಾರೆ. ಅವರ ಮಾತುಗಳಿಗೆ ಪಕ್ಷದ ದಿಲ್ಲಿಯ ಪಡಸಾಲೆಗಳಲ್ಲಿ ಮಾನ್ಯತೆ ಸಿಗುತ್ತಿಲ್ಲ.

ಇದು ಹಿರಿಯ ನಾಯಕ ,ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಗುಪ್ತ ಸಮರ ಸಾರಿದ್ದ ರಾಜ್ಯ ಬಿಜೆಪಿಯ ಕೆಲವು ಮುಖಂಡರ ಪರಿಸ್ಥಿತಿ. ಇದಕ್ಕೆ ಕಾರಣ ದಾವಣಗೆರೆಯಲ್ಲಿ ನಡೆದ ಪಕ್ಷದ ಸಭೆಯಲ್ಲಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಘರ್ಜಿಸಿರುವ ಯಡಿಯೂರಪ್ಪ, ಚುನಾವಣೆಗೆ ಮುನ್ನ ಕಾಂಗ್ರೆಸ್ ಘೋಷಿಸಿದ್ದ ಗ್ಯಾರಂಟಿಗಳನ್ನು ಜುಲೈ ತಿಂಗಳಿಂದ ಸರ್ಕಾರ ಜಾರಿಗೆ ತರದಿದ್ದರೆ 4 ನೇ ತಾರೀಕಿನಿಂದ ಬೆಂಗಳೂರಿನಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಅನಿರ್ದಿಷ್ಟ ಅವಧಿಯ ಸತ್ಯಾಗ್ರಹ ಆರಂಭಿಸುವುದಾಗಿ ಘೋಷಿಸಿರುವುದು ಸರ್ಕಾರಕ್ಕಿಂತ ಹೆಚ್ಚಾಗಿ ಬಿಜೆಪಿಯಲ್ಲೇ ತಳಮಳ ಆರಂಭವಾಗಿದೆ.

ಯಡಿಯೂರಪ್ಪನವರೇ ಹಾಗೆ. ವಿರೋಧಿಗಳಿಗೆ ತಮ್ಮ ವಿರುದ್ಧ ಚಟುವಟಿಕೆ ನಡೆಸಲು ಅವಕಾಶ ಕೊಟ್ಟು ಕಡೆಗೆ ಒಂದೇ ಬಾರಿಗೆ ಅವರನ್ನು ಯಾರೂ ನಿರೀಕ್ಷಿಸದ ರೀತಿ ಬಗ್ಗು ಬಡಿಯುವುದು ಅವರ ರಾಜಕೀಯ ಕಾರ್ಯತಂತ್ರದ ಶೈಲಿ.

ರಾಜ್ಯದಲ್ಲಿ ಚುನಾವಣೆ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಈಗಾಗಲೇ ಒಂದು ತಿಂಗಳು ಕಳೆದಿದೆ. ಈ ಪರಿಸ್ಥಿತಿಯಲ್ಲಿ ಚುನಾವಣೆ ಸಂದರ್ಭದಲ್ಲಿ ತನ್ನ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳ ಪೈಕಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಯೋಜನೆಯೊಂದನ್ನು ಹೊರತು ಪಡಿಸಿದರೆ ಇನ್ನುಳಿದಂತೆ ಯಾವ ಯೋಜನೆಗಳೂ ಜಾರಿ ಆಗಿಲ್ಲ. 200 ಯೂನಿಟ್ ಗಳ ವರೆಗೆ ಉಚಿತ ವಿದ್ಯುತ್ ನೀಡುವ ಯೋಜನೆ ಕುರಿತು ಗೊಂದಲಗಳು ಇನ್ನೂ ಬಗೆಹರಿದಿಲ್ಲ. ಇನ್ನು  ಬಡವರಿಗೆ ಅನ್ನ ಭಾಗ್ಯ ಕಾರ್ಯಕ್ರಮದಡಿ ಹತ್ತು ಕೆ.ಜಿ. ಅಕ್ಕಿ ವಿತರಿಸುವ ಯೋಜನೆಯೂ ಗೊಂದಲದ ಗೂಡಾಗಿದೆ.  ರಾಜ್ಯ ಸರ್ಕಾರದ ಬಳಿ ಅಗತ್ಯ ಅಕ್ಕಿ ದಾಸ್ತಾನಿಲ್ಲ. ಕೇಂದ್ರ ಸರ್ಕಾರ ಹೆಚ್ಚುವರಿ ಅಕ್ಕಿ ಕೊಡುವ ಬಗ್ಗೆ ಇದುವರೆಗೆ ಒಪ್ಪಿಗೆ ನೀಡಿಲ್ಲ.  ಸ್ವತಹಾ ಸಿದ್ದರಾಮಯ್ಯ ದಿಲ್ಲಿಯಲ್ಲಿ ಹೇಳಿರುವ ಪ್ರಕಾರ ಹೊರ ರಾಜ್ಯಗಳಿಂದ ಅಕ್ಕಿ ತರಿಸಿ ವಿತರಣೆ ಮಾಡುವುದು ರಾಜ್ಯ ಸರ್ಕಾರಕ್ಕೆ ದುಬಾರಿ ಆಗಲಿದೆ. ಹೀಗಾಗಿ ಜುಲೈನಿಂದ ಯೋಜನೆ ಜಾರಿ ಅಸಾಧ್ಯ ಆದರೆ ಆಗಸ್ಟ್ ನಿಂದ ಜಾರಿಗೆ ಪ್ರಯತ್ನಿಸಲಾಗುವುದು ಎಂದಿದ್ದಾರೆ. ಅಲ್ಲಿಗೆ ಅನ್ನ ಭಾಗ್ಯ ಯೋಜನೆ ಜಾರಿ ಇನ್ನೂ ತೂಗುಯ್ಯಾಲೆಯಲ್ಲೇ ಇದೆ. ಇದಷ್ಟೇ ಅಲ್ಲ,ಕರ್ನಾಟಕಕ್ಕೆ ಅಕ್ಕಿ ಪೂರೈಸಲು ಇತರ ರಾಜ್ಯಗಳು ಇನ್ನೂ ಒಪ್ಪಿಲ್ಲ. ಇದಕ್ಕೆ ನಾನಾ ಆಡಳಿತಾತ್ಮಕ ಮತ್ತು ತಾಂತ್ರಿಕ ತೊಡಕುಗಳು ಇವೆ. ಚುನಾವಣೆ ಸಂದರ್ಭದಲ್ಲಿ ಹುಮ್ಮಸ್ಸಿನಿಂದ ಈ ಯೋಜನೆ ಘೋಷಿಸಿದ್ದ ಸಿದ್ದರಾಮಯ್ಯ ಈಗ ಅಧಿಕಾರಕ್ಕೆ ಬಂದ ನಂತರ ವಾಸ್ತವಿಕ ಪರಿಸ್ಥಿತಿಯನ್ನು ಮನಗಂಡು ಇಕ್ಕಟ್ಟಿಗೆ ಸಿಲುಕಿದ್ದಾರೆ. ಇದು ರಾಜ್ಯ ಸರ್ಕಾರದ ಪರಿಸ್ಥಿತಿ.

ಇದೇ ವೇಳೆ ಹೆಚ್ಚುವರಿ ಅಕ್ಕಿ ಪೂರೈಸುವ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ಮುಖಂಡರು, ಕೆಲವು ಸಚಿವರು ವಾಗ್ದಾಳಿ ನಡೆಸಿರುವ ಹಂತದಲ್ಲೇ ಜುಲೈ ನಿಂದ ಯೋಜನೆ ಅನುಷ್ಠಾನ ಮಾಡದಿದ್ದಲ್ಲಿ ಸತ್ಯಾಗ್ರಹ ಆರಂಭಿಸುವುದಾಗಿ ಯಡಿಯೂರಪ್ಪ ಘೋಷಿಸಿದ್ದಾರೆ. ಈಗಿನ ಪರಿಸ್ಥಿತಿಯಲ್ಲಿ ಅನ್ನ ಭಾಗ್ಯ ಯೋಜನೆ ಸೇರಿದಂತೆ ಇನ್ನುಳಿದಿರುವ ಮೂರು ಗ್ಯಾರಂಟಿಗಳನ್ನು ಸಂಪೂರ್ಣವಾಗಿ ಜುಲೈನಿಂದಲೇ ಜಾರಿಗೊಳಿಸುವುದು ಸರ್ಕಾರಕ್ಕೆ ಸಾಧ್ಯವಿಲ್ಲದ ಮಾತು. ಈ ವಾಸ್ತವ ಬಿಜೆಪಿಗೂ ಗೊತ್ತು. ಆದರೆ ಒಂದು ರಾಜಕೀಯ ಪಕ್ಷವಾಗಿ ಸರ್ಕಾರದ ವೈಫಲ್ಯವನ್ನು ಬಳಸಿಕೊಂಡು ಹೋರಾಟದ ರೂಪುರೇಷೆ ರೂಪಿಸಬೇಕಿದ್ದ ರಾಜ್ಯ ಬಿಜೆಪಿ ಇನ್ನೂ ಚುನಾವಣಾ ಸೋಲಿನ ಹತಾಶೆಯಿಂದ ಹೊರ ಬಂದಿಲ್ಲ. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸೇರಿದಂತೆ ಕೆಲವು ಮುಖಂಡರು ತಮ್ಮದೇ ಪಕ್ಷದ ನಾಯಕರ ವಿರುದ್ಧ ಹೊಂದಾಣಿಕೆ ರಾಜಕಾರಣದ ಆರೋಪಗಳನ್ನ ಡಂಗುರ ಸಾರುತ್ತಿದ್ದರೆ ಮತ್ತೊಂದು ಕಡೆ ವಿಧಾನ ಮಂಡಲದ ಅಧಿವೇಶನಕ್ಕೆ ಅಧಿ ಸೂಚನೆ ಪ್ರಕಟವಾಗಿದ್ದರೂ ಉಭಯ ಸದನಗಳಲ್ಲಿ ಪ್ರತಿಪಕ್ಷದ ನಾಯಕರು ಯಾರೆಂಬುದನ್ನು ನಿರ್ಧರಿಸುವ ದೈರ್ಯವನ್ನು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆಗಲೀ ಅಥವಾ ಪಕ್ಷದ ರಾಷ್ಟ್ರೀಯ ನಾಯಕತ್ವವಾಗಲೀ ಪ್ರದರ್ಶಿಸುತ್ತಿಲ್ಲ. ಈ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಇಡೀ ಪಕ್ಷದ ಸ್ಥಿತಿ ಅಯೋಮಯ ಎಂಬಂತಾಗಿದೆ.

ಈ ಪರಿಸ್ಥಿತಿಯ ಬಗ್ಗೆ ಇಷ್ಟು ದಿನ ಮೌನ ತಾಳಿದ್ದ ಯಡಿಯೂರಪ್ಪ ದಾವಣಗೆಯಲ್ಲಿ ಗುರುವಾರ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಸರ್ಕಾರದ ವೈಫಲ್ಯಗಳ ವಿರುದ್ಧ ಬೆಂಗಳೂರಿನ ಮಹಾತ್ಮಗಾಂಧಿ ಪ್ರತಿಮೆ ಮುಂದೆ ಸತ್ಯಾಗ್ರಹ ಆರಂಭಿಸುವುದಾಗಿ ಘೋಷಿಸುವ ಮೂಲಕ ಪಕ್ಷದೊಳಗಿನ ತಮ್ಮ ವಿರೋಧಿಗಳು ದಿಕ್ಕುತಪ್ಪುವಂತೆ ಮಾಡಿದ್ದಾರೆ.  ಸರ್ಕಾರದ ವಿರುದ್ಧ ಜುಲೈ ನಾಲ್ಕರಿಂದ ವಿಧಾನ ಮಂಡಲದ ಉಭಯ ಸದನಗಳ ಒಳಗೆ ಪಕ್ಷದ ಶಾಸಕರು, ಸದನದ ಹೊರಗೆ ಪಕ್ಷದ ಕಾರ್ಯಕರ್ತರು, ಮುಖಂಡರು, ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಬಹಿರಂಗವಾಗೇ ಹೇಳಿದ್ದಾರೆ. ಸಾಮಾನ್ಯವಾಗಿ ಪಕ್ಷದ ರಾಜ್ಯ ಕಾರ್ಯಕಾರಿ ಅಥವಾ ಶಾಸಕಾಂಗ ಪಕ್ಷ ಇಂತಹ ನಿರ್ಣಯವನ್ನು ಕೈಗೊಂಡು ಪ್ರಕಟಿಸುವುದು ವಾಡಿಕೆ. ಆದರೆ ರಾಜ್ಯಾಧ್ಯಕ್ಷರೂ ಸೇರಿದಂತೆ ಇಡೀ ಪಕ್ಷ ಗೊಂದಲದಲ್ಲಿ ಇರುವ ಸಂದರ್ಭದಲ್ಲೇ ಇಂಥದೊಂದು ಪ್ರಮುಖ ಹೋರಾಟದ ನಿರ್ಧಾರವನ್ನು ಯಡಿಯೂರಪ್ಪನವರು ಘೋಷಿಸಿರುವುದು ಚುನಾವಣೆಯಲ್ಲಿ ಸೋಲಿನಿಂದ ಕಂಗೆಟ್ಟು ಹತಾಶರಾಗಿದ್ದ ಕಾರ್ಯಕರ್ತರಲ್ಲಿ ಹೊಸ ಭರವಸೆ ಹುಟ್ಟು ಹಾಕಿದೆ. ಸಹಜವಾಗೇ ಈ ಘೋಷಣೆಗೆ ಕಾರ್ಯಕರ್ತರು, ಮುಖಂಡರಿಂದ ಉತ್ತಮ ಸ್ಪಂದನೆ ದೊರಕಿದೆ.

ಆದರೆ ಈ ಘೋಷಣೆಯಿಂದ ಆಘಾತಕ್ಕೊಳಗಾಗಿರುವುದು ಮಾತ್ರ ಪಕ್ಷದೊಳಗಿರುವ  ಅವರ ವಿರೋಧಿಗಳು. ಹೋರಾಟಕ್ಕೆ ಬೆಂಬಲಿಸದೇ ಅಸಹಕಾರ ಅಥವಾ ವಿರೋಧ ತೋರಿದರೆ ಸಾರ್ವಜನಿಕವಾಗಿ ಕಾರ್ಯಕರ್ತರು ಹಾಗೂ ಜನಗಳ ದೃಷ್ಟಿಯಲ್ಲಿ ಖಳನಾಯಕರಾಗಿ ಬಿಂಬಿತವಾಗುವ ಹಾಗೆಯೇ ಇಷ್ಟು ದಿವಸ ತಾವೇ ಆರೋಪಿಸುತ್ತಾ ಬಂದ ಹೊಂದಾಣಿಕೆ ರಾಜಕಾರಣದಲ್ಲಿ ಭಾಗಿ ಆಗಿರುವ ಕಳಂಕ ಹೊತ್ತುಕೊಳ್ಳಬೇಕಾಗುತ್ತದೆ. ಹಾಗಂತ ಯಡಿಯೂರಪ್ಪನವರ ಹೋರಾಟವನ್ನು ಬೆಂಬಲಿಸಿದರೆ ಮುಂದಿನ ದಿನಗಳಲ್ಲಿ ಪಕ್ಷದಲ್ಲಿ ಅವರ ಸಾರ್ವಭೌಮತ್ವವನ್ನೇ ಒಪ್ಪಿಕೊಂಡು ಮುಂದುವರಿಯುವ ಅನಿವಾರ್ಯತೆಗೆ ಒಳಗಾಗಬೇಕಾಗುತ್ತದೆ.

ಯಡಿಯೂರಪ್ಪನವರು ಒಮ್ಮೆ ಇಂತಹ ಹೋರಾಟಗಳ ನಿರ್ಧಾರ ಕೈಗೊಂಡರೆ ಜಪ್ಪಯ್ಯ ಅಂದರೂ ಅದರಿಂದ ಹಿಂದೆ ಸರಿಯುವ ಮನೋಭಾವದವರಲ್ಲ. ಈಗಿನ ಸನ್ನಿವೇಶದಲ್ಲಿ ಅವರ ಹೋರಾಟ ಸಾರ್ವಜನಿಕರ ಮನ ಸೆಳೆಯವುದಂತೂ ಖಚಿತ . ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರಚಾರಕ್ಕೆ ಬಿಜೆಪಿಗೆ ಅದೊಂದು ಭದ್ರ ಅಡಿಪಾಯವೂ ಆಗುವುದು ಖಚಿತ. ಹೀಗಾಗಿ ಜುಲೈ ನಾಲ್ಕರಿಂದ ಅವರು ಆರಂಭಿಸಿಲು ಉದ್ದೇಶಿಸಿರುವ ಸತ್ಯಾಗ್ರಹವನ್ನು ನಿಲ್ಲಿಸುವಂತೆ ಅಥವಾ ಮುಂದೂಡುವಂತೆ ಹೇಳುವ ಸ್ಥಿತಿಯಲ್ಲಿ ಪಕ್ಷದ ವರಿಷ್ಠರೂ ಇಲ್ಲ. ಹೀಗಾಗಿ ಈ ಬೆಳವಣಿಗೆ  ಪಕ್ಷದಲ್ಲಿನ  ಅವರ ವಿರೋಧಿಗಳಿಗೆ ಅಡಕತ್ತರಿಯಲ್ಲಿ ಸಿಕ್ಕಂತಾಗಿದೆ.

ಮತ್ತೊಂದು ಕಡೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ಬೇಡಿಕೆಯನ್ನು ಪರಿಗಣಿಸಿ ಕರ್ನಾಟಕಕ್ಕೆ ಹೆಚ್ಚುವರಿ ಅಕ್ಕಿ ಮಂಜೂರು ಮಾಡಿದರೆ ಅದರ ನೇರ ರಾಜಕೀಯ ಲಾಭ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಗಲಿದೆ. ಜನ ಸಾಮಾನ್ಯರ ದೃಷ್ಟೀಯಲ್ಲಿ ಸಿದ್ದರಾಮಯ್ಯ ಜನಪ್ರಿಯತೆ ಇನ್ನೂ ಉತ್ತುಂಗಕ್ಕೆ ಏರಿಂತಾಗುತ್ತದೆ. ಅದರಿಂದ ಬಿಜೆಪಿಗೆ ರಾಜಕೀಯವಾಗಿ ನಷ್ಟವೇ ಹೆಚ್ಚು. ಹೀಗಾಗಿ ಹೈಕಮಾಂಡಿಗೂ ಇದು ಇಕ್ಕಟ್ಟು ತಂದಿದೆ.

ವಿಧಾನಸಭೆಯ ಅಧಿವೇಶನದ ಜುಲೈ 3 ರಿಂದ ಆರಂಭವಾಗಲಿದ್ದು ಅದಕ್ಕೂ ಮುನ್ನ ಪ್ರತಿಪಕ್ಷದ ನಾಯಕನನ್ನು ಬಿಜೆಪಿ ಘೋಷಿಸಿಬೇಕಾಗಿದೆ. ಮೊದಲ ದಿನ ರಾಜ್ಯಪಾಲರು ಉಭಯ ಸದನಗಳ ಜಂಟಿ ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡುವುದರಿಂದ ಒಂದು ರಾಷ್ಟ್ರೀಯ ಪಕ್ಷವಾಗಿ ಸಂಸದೀಯ ಉನ್ನತ ಪರಂಪರೆಯ ನಡವಳಿಕೆಯನ್ನು ಪಾಲಿಸಲು ಬಿಜೆಪಿ ಪ್ರತಿಪಕ್ಷದ ನಾಯಕನನ್ನು ಆಯ್ಕೆ ಮಾಡಲೇ ಬೇಕು. ಆದರೆ ಆ ಸ್ಥಾನದ ಬಗ್ಗೆ ಕೆಲವು ಪ್ರಮುಖ ಹಿರಿಯ ಶಾಸಕರು ನಿರಾಸಕ್ತಿ ವ್ಯಕ್ತಪಡಿಸಿದ್ದಾರೆ. ಸದನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎದುರು ಅವರಿಗೆ ಸರಿಸಾಟಿಯಾಗಿ ಪ್ರತಿಪಕ್ಷದ ನಾಯಕನ ಸ್ಥಾನದಲ್ಲಿ ಕುಳಿತು ಕಾರ್ಯ ನಿರ್ವಹಿಸುವುದು ಕಷ್ಟ ಎಂಬುದು ಅನೇಕ  ಹಿರಿಯ ಶಾಸಕರ ಅನಿಸಿಕೆ.

ನಾಲ್ಕು ದಶಕಗಳ ಅವಧಿಯಲ್ಲಿ ಪ್ರತಿಪಕ್ಷದ ನಾಯಕ, ಮುಖ್ಯಮಂತ್ರಿ, ಹಣಕಾಸು ಸಚಿವ ಸೇರಿದಂತೆ ಪ್ರಮುಖ ಸ್ಥಾನಗಳನ್ನು ನಿರ್ವಹಿಸಿರುವ ಸಿದ್ದರಾಮಯ್ಯ ರಂತಹ ವರ್ಚಸ್ವಿ ನಾಯಕನನ್ನು ಸದನದಲ್ಲಿ ಸರಿಗಟ್ಟಬೇಕಾದರೆ ಅಷ್ಟೇ ಸಾಮರ್ಥ್ಯ ಹೊಂದಿರುವ ಹಿರಿಯ ಶಾಸಕರು ಬೇಕು. ಆದರೆ ಆ ಕೊರತೆ ಬಿಜೆಪಿಯನ್ನು ಕಾಡುತ್ತಿದೆ. ಇದ್ದುದರಲ್ಲಿ ಮಾಜಿ ಸಚಿವ ಹಾಗೂ ಕಾನೂನು ಸಂಸದೀಯ ವ್ಯವಹಾರಗಳ ಸಚಿವರಾಗಿಯೂ ಕೆಲಸ ಮಾಡಿದ ಅನುಭವ ಹೊಂದಿರುವ ಶಾಸಕ ಸುರೇಶ್ ಕುಮಾರ್ ಹೆಸರು ಕೇಳಿ ಬರುತ್ತಿದೆಯಾದರೂ ಜಾತಿ ಸಮೀಕರಣ ಮತ್ತು ಪ್ರಾತಿನಿಧ್ಯದ ವಿಚಾರ ಪರಿಗಣನೆಗೆ ಬಂದರೆ ಅವರ ಹೆಸರು ಪಕ್ಕಕ್ಕೆ ಸರಿಯುವುದು ಖಚಿತ.

ಸದನದಲ್ಲಿ ಮುಖ್ಯಮಂತ್ರಿಗಿರುವಷ್ಟೇ ಮಹತ್ವದ ಸ್ಥಾನ ಗೌರವ ಪ್ರತಿಪಕ್ಷದ ನಾಯಕರಿಗೂ ಇದೆ. ಸರ್ಕಾರ ಮಂಡಿಸುವ ವಿವಿಧ ವಿಧೇಯಕಗಳ ಕಾನೂನಾತ್ಮಕ ಮತ್ತು ಸಾಂವಿಧಾನಾತ್ಮಕ ಅಂಶಗಳ ಕುರಿತು ಅಧ್ಯಯನ ನಡೆಸಿ ಸದನದಲ್ಲಿ ಮಾತನಾಡಬೇಕಾದ ಹೊಣೆಗಾರಿಕೆಯೂ ಪ್ರತಿ ಪಕ್ಷದ ನಾಯಕರದ್ದಾಗಿರುತ್ತದೆ. ಈ ಎಲ್ಲ ಪರಿಸ್ಥಿತಿಗಳ ಹಿನ್ನೆಲೆಯನ್ನು ಅವಲೋಕಿಸಿ ನೋಡಿದರೆ ಪ್ರತಿಪಕ್ಷದ ನಾಯಕನಾಗುವ ಅರ್ಹತೆ ಉಳ್ಳ ಸಮರ್ಥ ಶಾಸಕರ ಶೋಧವನ್ನು ಇನ್ನೂ ಮುಂದುವರಿಸಿದೆ. ಈ ಗೊಂದಲಗಳು ಒಂದುಕಡೆಯಾದರೆ ಯಡಿಯೂರಪ್ಪ ನವರು ಜುಲೈ ನಾಲ್ಕರಿಂದ ಆರಂಭಿಸಲು ಉದ್ದೇಶಿಸಿರುವ ಅನಿರ್ದಿಷ್ಟ ಅವಧಿಯ ಸತ್ಯಾಗ್ರಹದ ದೂರಗಾಮಿ ಪರಿಣಾಮಗಳ ಬಗ್ಗೆ ಪಕ್ಷದೊಳಗಿನ ಅವರ ವಿರೋಧಿಗಳು ಚಿಂತೆಗಿಡಾಗಿದ್ದಾರೆ. ಇದುವರೆಗೆ ಕೆಲವು ಮುಖಂಡರು ಆರೋಪಿಸುತ್ತಾ ಬಂದ ಹೊಂದಾಣಿಕೆ ರಾಜಕಾರಣದ ವಿಚಾರಈಗ ಮೂಲೆಗೆ ಸರಿದಿದೆ.

ಯಗಟಿ ಮೋಹನ್
yagatimohan@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com