ಸನ್ನಿವೇಶ ಮತ್ತು ಪರಿಸ್ಥಿತಿಗೆ ತಕ್ಕ ನಿರ್ಧಾರ ತೆಗೆದುಕೊಂಡವನೇ ಷೇರುಪೇಟೆ ಸರದಾರ! (ಹಣಕ್ಲಾಸು)

ಹಣಕ್ಲಾಸು-349ರಂಗಸ್ವಾಮಿ ಮೂನಕನಹಳ್ಳಿ
ಷೇರು ಮಾರುಕಟ್ಟೆ
ಷೇರು ಮಾರುಕಟ್ಟೆ

ಕಳೆದ ಎಂಟು ದಿನದಿಂದ ಒಂದೇ ಸಮನೆ ಕುಸಿತದಲ್ಲಿ ಕೊನೆಯಾಗುತ್ತಿದ್ದ ಸೆನ್ಸೆಕ್ಸ್ ಮತ್ತು ನಿಫ್ಟಿ 01.03.2023 ರಂದು ಪಾಸಿಟಿವ್ನಲ್ಲಿ ದಿನವನ್ನ ಮುಗಿಸಿವೆ. ಏಷ್ಯಾ ಮತ್ತು ಯೂರೋಪಿಯನ್ ಮಾರುಕಟ್ಟೆಯಲ್ಲಿ ಕಂಡ ಚೇತರಿಕೆ ಕೂಡ ಇದಕ್ಕೆ ದೇಣಿಗೆ ನೀಡಿವೆ. ಷೇರು ಮಾರುಕಟ್ಟೆ ಎಂದಮೇಲೆ ಅಲ್ಲಿ ಏರಿಳಿತ ಇದ್ದದ್ದೆ, ಎಷ್ಟೇ ತಿಳುವಳಿಕೆಯ ಮಾತುಗಳನ್ನ ಕೇಳಿದ್ದರೂ ಸಾಮಾನ್ಯ ಹೂಡಿಕೆದಾರ ಕುಸಿತದ ಹಂತದಲ್ಲಿ ಭಯಕ್ಕೆ ಗುರಿಯಾಗುವುದು ಮತ್ತು ಪ್ಯಾನಿಕ್ ಸೆಲ್ಲಿಂಗ್ಗೆ ಮುಂದಾಗುವುದು , ಆ ಮೂಲಕ ಮಾರುಕಟ್ಟೆಯಲ್ಲಿ ಮತ್ತಷ್ಟು ಅಸ್ಥಿರತೆಗೆ ಬುನಾದಿ ಹಾಕುವುದು ಮಾತ್ರ ತಪ್ಪದೆ ನಡೆದು ಬರುತ್ತಿರುವ ವಿಷಯವಾಗಿದೆ. ಕೊಳ್ಳುವಾಗ ಮತ್ತು ಮಾರುವಾಗ ಮತ್ತು ಆ ಮಧ್ಯೆ ಷೇರುಗಳನ್ನ ಇಟ್ಟುಕೊಂಡಿರುವ ಸಮಯದಲ್ಲಿ ಒಂದಷ್ಟು ಸಮಚಿತ್ತತೆ ಹೂಡಿಕೆದಾರನಲ್ಲಿ ಇರಬೇಕಾದದ್ದು ಅತ್ಯಂತ ಅವಶ್ಯಕ.

ನೀವು ಕೊಳ್ಳಲು ಇಚ್ಛಿಸಿರುವ ಷೇರು ಬ್ಲೂ ಚಿಪ್ ಆಗಿರಲಿ ಅಥವಾ ಮಾರುಕಟ್ಟೆಯಲ್ಲಿ ಅಷ್ಟೇನೂ ಹೆಸರಿಲ್ಲದ ಸಂಸ್ಥೆಯಾಗಿರಲಿ ಕೊಳ್ಳುವ ಮುನ್ನ ಅವುಗಳ ಬಗ್ಗೆ ಪೂರ್ಣ ಮಾಹಿತಿಯನ್ನ ಪಡೆದುಕೊಳ್ಳಲು ಪ್ರಶ್ನೆಗಳನ್ನ ಕೇಳಬೇಕು. ಇಂತಹ ಸಂಸ್ಥೆಯ ಮೇಲೆ ಹೂಡಿಕೆ ನೀವೇ ಮಾಡುತ್ತಿದ್ದರೆ ಸಂಸ್ಥೆಯ ಬಗ್ಗೆ ಲಭ್ಯವಿರುವ ಎಲ್ಲಾ ಮಾಹಿತಿಯನ್ನ ಒಂದಲ್ಲ ಹಲವು ಬಾರಿ ಪರಿಶಿಸಲೇಬೇಕು. ಹಾಗೊಮ್ಮೆ ನೀವು ಮಧ್ಯವರ್ತಿಯ ಅಥವಾ ಸಲಹೆಗಾರರ ಸಹಾಯದ ಮೂಲಕ ಹೂಡಿಕೆಯನ್ನ ಮಾಡುತ್ತಿದ್ದರೆ ನಿಮ್ಮ ಮನಸ್ಸಿಗೆ ಸರಿ ಎನ್ನಿಸುವವರೆಗೆ ಪ್ರಶ್ನೆಗಳನ್ನ ಕೇಳಬೇಕು. ಕೆಲವೊಮ್ಮೆ ಅದು ತೀರಾ ಬಾಲಿಶ ಎನ್ನಿಸಿದರೂ ಪರವಾಗಿಲ್ಲ. ಹಣ ನಿಮ್ಮದು , ಹೂಡಿಕೆ ಮಾಡುವ ಮುನ್ನ ಅಲ್ಲಿನ ಹೂಡಿಕೆ ಬಗ್ಗೆ ನಿಮಗೆ ಆತ್ಮತೃಪ್ತಿ ಇರಬೇಕು. ಆತುರಾತುರವಾಗಿ ಮಾರುಕಟ್ಟೆಯಲ್ಲಿ ಇನ್ನಷ್ಟು ಬೆಲೆ ಏರುತ್ತದೆ ಎನ್ನುವ ಅಥವಾ ಇನ್ನ್ಯಾವುದೇ ಕಾರಣ ಹೇಳಿ ನಿಮ್ಮನ್ನ ಬೇಗ ಹೂಡಿಕೆ ಮಾಡಲು ಹೇಳಿದರೆ ಅದಕ್ಕೆ ಸುತರಾಂ ಒಪ್ಪಬೇಡಿ. ಅವರು ಹೇಳಿದ್ದು ಸರಿಯೇ ಇರಬಹುದು , ಬೆಲೆ ಏರಲೂ ಬಹುದು , ಆದರೆ ನೀವು ಎಲ್ಲಿ ಹೂಡಿಕೆ ಮಾಡುತ್ತೀರಿ ಅದರ ಪೂರ್ಣ ಮಾಹಿತಿ ಇಲ್ಲದೆ ಹೂಡಿಕೆ ಮಾಡುವುದು ತಪ್ಪು. ನಿಮಗೆ ನೆನಪಿರಲಿ ಹಣ ನಮ್ಮ ಕೈಲಿರುವ ವರೆಗೆ ಮಾತ್ರ ನಮ್ಮದು ಅದನ್ನ ಹೂಡಿಕೆ ಮಾಡಿದ ಮರುಕ್ಷಣ ಅದು ನಮ್ಮದಲ್ಲ.

ಸಾಮಾನ್ಯವಾಗಿ ನೀವು ಷೇರು ಮಾರುಕಟ್ಟೆಯಲ್ಲಿ ಸಕ್ರಿಯರಾಗಿರುವ ಮತ್ತು ಸಾಕಷ್ಟು ಯಶಸ್ಸು ಗಳಿಸಿರುವ ವ್ಯಕ್ತಿಗಳನ್ನ ಮಾತನಾಡಿಸಿ ನೋಡಿ, ಅವರು ಹೇಳುವುದು ಅತ್ಯುತ್ತಮ ಸಂಸ್ಥೆಗಳಲ್ಲಿ ಹೂಡಿಕೆ ಮಾಡುವುದು, ಉತ್ತಮ ಪೋರ್ಟ್ಫೋಲಿಯೋ ಸೃಷ್ಟಿಸಿಕೊಳ್ಳುವುದು ಅತಿ ಮುಖ್ಯ ಎನ್ನುವ ಮಾತನ್ನ ಹೇಳುತ್ತಾರೆ. ಅವರು ಹೇಳಿದ್ದು ಪೂರ್ಣವಾಗಿ ತಪ್ಪು ಎನ್ನುವುದು ಉದ್ದೇಶವಲ್ಲ. ಹೌದು ಉತ್ತಮ ಪೋರ್ಟ್ಫೋಲಿಯೋ ನಿಮಗೆ ಹಣವನ್ನ , ಆದಾಯವನ್ನ ತಂದುಕೊಡುತ್ತದೆ. ಆದರೆ ನೀವು ನಿಜಕ್ಕೂ ಹೆಚ್ಚಿನ ಮಟ್ಟದ ಹಣವನ್ನ ಗಳಿಸಬೇಕಾದರೆ ಉತ್ತಮ ಐಡಿಯಾ ಇರುವ ಸಂಸ್ಥೆಯನ್ನ ಗುರುತಿಸಬೇಕು. ಮತ್ತು ಅದರಲ್ಲಿ ನಂಬಿಕೆಯಿಟ್ಟು ಹೂಡಿಕೆ ಮಾಡಬೇಕು. ಮಾರುಕಟ್ಟೆಯ ಗದ್ದಲದಲ್ಲಿ ಇಂತಹ ಸಂಸ್ಥೆಗಳನ್ನ ಹುಡಕುವುದು ನಿಜಕ್ಕೂ ಕಷ್ಟವೇ ಸರಿ. ಆದರೂ ಪ್ರಯತ್ನ ಜಾರಿಯಲ್ಲಿರಬೇಕು.

ಮಾರುಕಟ್ಟೆಯಲ್ಲಿ ಬೇಗ ಹಣಗಳಿಸುವ ಉದ್ದೇಶದಿಂದ ಒಂದಲ್ಲ ಹತ್ತಾರು ಸ್ಕೀಮುಗಳನ್ನ ಹಿಡಿದುಕೊಂಡು ಹೂಡಿಕೆದಾರರ ಬಳಿ ಹೂಡಿಕೆ ಮಾಡುವಂತೆ ದಂಬಾಲು ಬೀಳುವ ಏಜೆಂಟ್ಗಳಿಗೆ ಕೊರತೆಯಿಲ್ಲ. ಮಾರುಕಟ್ಟೆಯಲ್ಲಿ ಪ್ರಚಲಿತವಿರುವ ಲಾಭದ ಅಂಶಕ್ಕಿಂತ ಅತಿ ಹೆಚ್ಚು ಲಾಭವನ್ನ ನೀಡುವ ಆಮಿಷಗಳನ್ನ ಹೊತ್ತು ಬರುವವರ ಸಂಖ್ಯೆ ಕೂಡ ಅಸಂಖ್ಯ. ಗಮನಿಸಿ ನೋಡಿ ಅಷ್ಟೊಂದು ದೊಡ್ಡ ಮಟ್ಟದ ಲಾಭವನ್ನ ಆ ಸಂಸ್ಥೆ ನೀಡುವಂತಿದ್ದರೆ ಮತ್ತು ಅದು ನಿಜವಾಗಿದ್ದರೆ ದೊಡ್ಡ ಮತ್ತು ಅತಿ ದೊಡ್ಡ ಬುದ್ದಿವಂತ ಹೂಡಿಕೆದಾರರು ಅಲ್ಲಿ ಹೂಡಿಕೆ ಮಾಡಿರುತ್ತಿದ್ದರು ಮತ್ತು ಯಾವುದೋ ಏಜೆಂಟ್ ನಿಮ್ಮ ಬಳಿ ಬಂದು ಹೂಡಿಕೆ ಮಾಡಲು ಕೇಳುತ್ತಿರಲಿಲ್ಲ ಅಲ್ಲವೇ ? ಈ ಸಾಮಾನ್ಯ ಜ್ಞಾನ ಸದಾ ಇರಲಿ. ಒಮ್ಮೆ ಇಂತಹ ಕೆಟ್ಟ ಹೂಡಿಕೆಯಲ್ಲಿ ಹಣ ತೊಡಗಿಸಿದರೆ ಇದರಿಂದ ಎರಡು ತರಹದಲ್ಲಿ ನಷ್ಟವಾಗುತ್ತದೆ. ಮೊದಲಿಗೆ ನೀವು ಹೂಡಿದ ಹಣ ಪೂರ್ತಿ ಮರಳಿ ಬರುವುದಿಲ್ಲ, ಇದು ನೇರ ನಷ್ಟ. ಎರಡನೆಯದು ಇದೆ ಹಣವನ್ನ ಉತ್ತಮ ಹೂಡಿಕೆಯ ಮೇಲೆ ಹಾಕುವುದರ ಅವಕಾಶದಿಂದ ವಂಚಿತರಾಗಿದ್ದು, ದೀರ್ಘಾವಧಿಯಲ್ಲಿ ಇಂತಹ ಅವಕಾಶ ಮಿಸ್ ಮಾಡಿಕೊಂಡದ್ದರ ಬೆಲೆ ಕೋಟಿಗಳಲ್ಲಿ ಕೂಡ ಇರಬಹುದು. ಹೀಗಾಗಿ ಕೆಟ್ಟ ಹೂಡಿಕೆ ಮಾಡುವುದ್ಕಕಿಂತ ಅಂತಹ ಹೂಡಿಕೆಯಿಂದ ದೂರವಿರುವುದು ಉತ್ತಮ.

ಕೆಲವೊಮ್ಮೆ ಕೆಲವು ಷೇರುಗಳ ಮೌಲ್ಯ ಮೇಲಕ್ಕೆ ಏರುತ್ತಲೇ ಹೋಗುತ್ತದೆ, ಹಾಗೆಯೇ ಕೆಲವೊಂದು ಷೇರುಗಳ ಬೆಲೆ ಕುಸಿಯುತ್ತಲೇ ಹೋಗುತ್ತದೆ. ಮೇಲೇರಿದ್ದು ಕೆಳಗೆ ಇಳಿಯಬೇಕು ಅಥವಾ ಕೆಳಗಿಳಿದದ್ದು ಮೇಲೇರಬೇಕು ಎನ್ನುವ ನಿಯಮ ಮಾರುಕಟ್ಟೆಯಲ್ಲಿ ಲಾಗೂ ಆಗುವುದಿಲ್ಲ. ಕುಸಿತ ಕಂಡ ಷೇರು ಮೇಲಕ್ಕೆ ಏರಬಹುದು ಎಂದು ಕಾಯಬೇಕು ಎಂದು ಮೇಲಿನ ಸೂತ್ರವೊಂದರಲ್ಲಿ ಹೇಳಲಾಗಿದೆ. ಆತುರದಿಂದ ಮಾರಿದರೆ ಅದು ಮಾತ್ರ ನಷ್ಟ ಇಲ್ಲದಿದ್ದರೆ ಅದು ನೋಷನಲ್ ಲಾಸ್ ಎಂದು ಕೂಡ ಹೇಳಲಾಗಿದೆ. ಷೇರು ಮಾರುಕಟ್ಟೆಯಲ್ಲಿ ಸಾಮಾನ್ಯ ಜ್ಞಾನ ಇರಬೇಕು ಮತ್ತು ಅದೇ ಅತಿ ಮುಖ್ಯ ಸೂತ್ರ ಎನ್ನವುದು ಇದೆ ಕಾರಣಕ್ಕೆ, ಸನ್ನಿವೇಶ ಮತ್ತು ಪರಿಸ್ಥಿತಿಗೆ ಅನುಗುಣವಾಗೇ ನಿರ್ಧಾರ ತೆಗೆದುಕೊಳ್ಳಬೇಕು. ಹಾಗೆಯೇ ಮೇಲೇರಿದ್ದು ಕೆಳಗೆ ಇಳಿಯಬಾರದು ಎಂದೇನೂ ಇಲ್ಲ. ಇದು ಅತ್ಯಂತ ಡೈನಾಮಿಕ್, ಸದಾ ಬದಲಾವಣೆ ಆಗುತ್ತಿರುತ್ತದೆ. ಹೀಗಾಗಿ ಒಂದು ಸೂತ್ರಕ್ಕೆ ಆಂಟಿ ಕೂರುವುದು ಕೂಡ ತರವಲ್ಲ.

ಇಂಗ್ಲಿಷ್ ನಲ್ಲಿ ಒಂದು ಮಾತಿದೆ 'ಗೋ ವಿಥ್ ದಿ ಫ್ಲೋ ' ಎನ್ನುವುದು ಆ ಮಾತು. ಅಂದರೆ ಹೆಚ್ಚು ಜನ ಯಾವುದನ್ನ ಮಾಡುತ್ತಿದ್ದಾರೆ ಅದನ್ನ ಮಾಡಿದರೆ ಹೆಚ್ಚು ಸುರಕ್ಷಿತ ಎನ್ನುವುದು ಅರ್ಥ. ಇದನ್ನ ನಾವು ಕನ್ನಡದಲ್ಲಿ ಗುಂಪಿನಲ್ಲಿ ಗೋವಿಂದ ಎನ್ನುತ್ತೇವೆ. ಎಲ್ಲರೂ ಮಾಡಿದಕ್ಕೆ ನಾವು ಜೈ ಎನ್ನುವುದು ಕೈ ಜೋಡಿಸುವುದು ಎಂದರ್ಥ. ಗಮನಿಸಿ ಸತ್ತ ಮೀನು, ಜೀವವಿಲ್ಲದ ಕಡ್ಡಿ ಕಸಗಳು ಮಾತ್ರ ನೀರು ಯಾವ ದಿಸೆಯಲ್ಲಿ ವೇಗವಾಗಿ ಸಾಗುತ್ತದೆ ಅತ್ತ ಹೋಗುತ್ತವೆ. ಜೀವಂತ ಮೀನು ಎಂದಿಗೂ ಗಾಳಿ ಹೆಚ್ಚು ಬೀಸಿದ ಕಡೆಗೆ ವಾಲುವುದಿಲ್ಲ. ಇದನ್ನ ಷೇರು ಮಾರುಕಟ್ಟೆಗೆ ಅಳವಡಿಸಿಕೊಂಡು ನೋಡಿ, ನಮ್ಮಲ್ಲಿ ಯಾವುದೇ ಸಿದ್ಧತೆಯಿಲ್ಲದೆ ಎಲ್ಲರೂ ಕೊಳ್ಳುತ್ತಿದ್ದಾರೆ ಹಾಗಾಗಿ ಈ ಸಂಸ್ಥೆಯ ಷೇರು ಚನ್ನಾಗಿಯೇ ಇರುತ್ತದೆ ಎಂದು ಕೊಳ್ಳುವುದು ಒಂದು ಬಾರಿ ಅಥವಾ ಎರಡು ಬಾರಿ ಉತ್ತಮ ಫಲಿತಾಂಶ ನೀಡಬಹುದು. ಸದಾ ಹೀಗೆಯೇ ಆಗುತ್ತದೆ ಎನ್ನುವುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ. ಸಿದ್ಧತೆಯಿಂದ ಹೂಡಿಕೆ ಮಾಡುವುದು ಜಾಣ ಹೂಡಿಕೆದಾರನ ಲಕ್ಷಣ.

ಹೂಡಿಕೆ ಯಾವಾಗ ಮಾಡಬೇಕು? ಮಾರುಕಟ್ಟೆ ಮೇಲಿದ್ದಾಗ? ಕುಸಿದಾಗ? ಜನರಲ್ ಮೂಡ್ ಸರಿಯಾಗಿದ್ದಾಗ? ಸಮಾಜದಲ್ಲಿ ಆರ್ಥಿಕತೆ ಪ್ರಬಲವಾಗಿದ್ದಾಗ ? ಕುಸಿದಿದ್ದಾಗ ? ಹೀಗೆ ಹಲವಾರು ಪ್ರಶ್ನೆಗಳು. ಗಮನಿಸಿ ಇವೆಲ್ಲವೂ ಇಲ್ಲಿ ಮುಖ್ಯವಲ್ಲ. ಸಮಾಜ, ಮಾರುಕಟ್ಟೆ ಕುಸಿದ ಸಮಯದಲ್ಲಿ ಕೂಡ ನಿಮ್ಮ ಆರ್ಥಿಕತೆ ಭದ್ರವಾಗಿದ್ದರೆ ಮತ್ತು ಉತ್ತಮ ಹೂಡಿಕೆಯ ಅವಕಾಶ ಕಂಡರೆ ತಕ್ಷಣ ಹೂಡಿಕೆ ಮಾಡಬೇಕು. ಸಾಮಾನ್ಯವಾಗಿ ಜನರಲ್ಲಿ ಅದರಲ್ಲೂ ಪ್ರಾರಂಭಿಕ ಹಂತದ ಹೂಡಿಕೆದಾರರಲ್ಲಿ ಹೀಗೆ ಇಲ್ಲ ಸಲ್ಲದ ಮಾತುಗಳನ್ನ ಮನಸ್ಸಿನಲ್ಲಿ ಬಿತ್ತಲಾಗುತ್ತದೆ. ನೆನಪಿರಲಿ ಸಮಯ ಹೇಗೆ ಇರಲಿ ಹೂಡಿಕೆ ಮಾಡುವ ಮುನ್ನ ವಹಿಸುವ ಒಂದಷ್ಟು ಜಾಗ್ರತೆ ಹೂಡಿಕೆಯ ರಕ್ಷಣೆ ಮಾಡುತ್ತದೆ. ಮಿಕ್ಕ ಬಾಹ್ಯ ಕಾರಣಗಳು ನೆಪಗಳು ಮಾತ್ರ.

ಕೊನೆಮಾತು: ಕನ್ನಡದಲ್ಲಿ ಒಂದು ಮಾತಿದೆ ' ಕುಂಬಾರನಿಗೆ ವರ್ಷ, ದೊಣ್ಣೆಗೆ ನಿಮಿಷ ' ಎನ್ನುವುದು ಆ ಮಾತು. ಅಂದರೆ ಮಡಿಕೆಯನ್ನ ಮಾಡಲು ಕುಂಬಾರನಿಗೆ ಸಮಯ ಹಿಡಿಯುತ್ತದೆ. ಅದೇ ಮಡಿಕೆಯನ್ನ ಹೊಡೆದು ಹಾಕಲು ಕ್ಷಣ ಸಾಕು. ಷೇರು ಮಾರುಕಟ್ಟೆಯಲ್ಲಿ ಕೂಡ ಅಷ್ಟೇ ಒಂದು ಉತ್ತಮ ಮಟ್ಟದ ಪೋರ್ಟ್ಫೋಲಿಯೋ ಕಟ್ಟುವುದು, ಉತ್ತಮ ಆದಾಯ ಬರುವಂತೆ ಮತ್ತು ಹಾಕಿದ ಬಂಡವಾಳ ವೃದ್ಧಿಯಾಗುವಂತೆ ಮಾಡುವುದಕ್ಕೆ ಸಮಯ ಹಿಡಿಯುತ್ತದೆ. ಒಂದು ಆತುರದ ನಿರ್ಧಾರ, ಒಂದು ಕೆಟ್ಟ ಗಳಿಗೆಯ ಕೊಳ್ಳುವ ಅಥವಾ ಮಾರುವ ಕ್ರಿಯೆ ಎಲ್ಲವನ್ನೂ ವಾಶ್ ಔಟ್ ಮಾಡಿ ಬಿಡುತ್ತದೆ. ಹೀಗಾಗಿ ಕೇವಲ ಉತ್ತಮ ಹೂಡಿಕೆ ಮಾಡಿದರೆ ಸಾಲದು, ಸದಾ ಸನ್ನದ್ಧ ಸ್ಥಿತಿಯಲ್ಲಿರಬೇಕು. ನಾನು ಯಶಸ್ವಿ ಹೂಡಿಕೆದಾರ ಎಂದು ಬೀಗಲು ಇಲ್ಲಿ ಸಮಯವಿಲ್ಲ. ಏಕೆಂದರೆ ಎಲೆ ಮಡಚಿದಂತೆ ಸಮಯ ಮತ್ತು ಸನ್ನಿವೇಶ ಎರಡೂ ಕ್ಷಣಾರ್ಧದಲ್ಲಿ ಇಲ್ಲಿ ಬದಲಾಗಿಬಿಡುತ್ತದೆ.ಹೀಗಾಗಿ ಸದಾ ಎಚ್ಚರಿಕೆಯಲ್ಲಿ ಇರುವುದು ಒಳ್ಳೆಯದು. 

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com