ಲ್ಯುಕೇಮಿಯಾ ಅಥವಾ ಬ್ಲಡ್ ಕ್ಯಾನ್ಸರ್ (ಕುಶಲವೇ ಕ್ಷೇಮವೇ)

ಇಂದು ವಿಶ್ವಾದ್ಯಂತ ಪ್ರತಿವರ್ಷ ಸಾವಿರಾರು ಜನರು ಅಸುನೀಗಲು ಕ್ಯಾನ್ಸರ್ ಪ್ರಮುಖ ಕಾರಣವಾಗಿದೆ. ಕ್ಯಾನ್ಸರಿನಲ್ಲಿ ಹಲವಾರು ವಿಧಗಳಿವೆ. ಅವುಗಳಲ್ಲಿ ಲ್ಯುಕೇಮಿಯಾ ಕೂಡ ಒಂದು. ಇದನ್ನು ಸಾಮಾನ್ಯವಾಗಿ ರಕ್ತದ ಕ್ಯಾನ್ಸರ್ ಎಂದು ಕರೆಯುತ್ತಾರೆ.
ಲ್ಯುಕೇಮಿಯಾ ಅಥವಾ ಬ್ಲಡ್ ಕ್ಯಾನ್ಸರ್
ಲ್ಯುಕೇಮಿಯಾ ಅಥವಾ ಬ್ಲಡ್ ಕ್ಯಾನ್ಸರ್
Updated on

ಇಂದು ವಿಶ್ವಾದ್ಯಂತ ಪ್ರತಿವರ್ಷ ಸಾವಿರಾರು ಜನರು ಅಸುನೀಗಲು ಕ್ಯಾನ್ಸರ್ ಪ್ರಮುಖ ಕಾರಣವಾಗಿದೆ. ಕ್ಯಾನ್ಸರಿನಲ್ಲಿ ಹಲವಾರು ವಿಧಗಳಿವೆ. ಅವುಗಳಲ್ಲಿ ಲ್ಯುಕೇಮಿಯಾ ಕೂಡ ಒಂದು. ಇದನ್ನು ಸಾಮಾನ್ಯವಾಗಿ ರಕ್ತದ ಕ್ಯಾನ್ಸರ್ ಎಂದು ಕರೆಯುತ್ತಾರೆ. 

ರಕ್ತದ ಕ್ಯಾನ್ಸರ್ ಎಂದರೆ ರಕ್ತ ಉತ್ಪಾದನೆಯಾಗುವ ಅಸ್ಥಿ ಮಜ್ಜೆ ಮತ್ತು ದುಗ್ಧರಸ (ಲಿಂಫ್ಯಾಟಿಕ್) ಗ್ರಂಥಿಗಳಲ್ಲಿ ಬಿಳಿ ರಕ್ತ ಕಣಗಳ ಅನಿಯಂತ್ರಿತ ಬೆಳವಣಿಗೆಯ ಸ್ಥಿತಿಯಾಗಿದೆ. ರಕ್ತದ ಕ್ಯಾನ್ಸರ್ ಯಾವುದೇ ವಯಸ್ಸಿನ ಜನರ ಮೇಲೆ ಪರಿಣಾಮ ಬೀರಬಹುದಾಗಿದೆ. 

ರಕ್ತದ ಕ್ಯಾನ್ಸರ್‌ಗೆ ನಿಖರವಾದ ಕಾರಣವನ್ನು ಇನ್ನೂ ಗುರುತಿಸಲಾಗಿಲ್ಲ. ರಕ್ತ ಮತ್ತು ಅಸ್ಥಿ ಮಜ್ಜೆಯ ಜೀವಕೋಶಗಳು ಆನುವಂಶಿಕ ರೂಪಾಂತರಗಳಿಗೆ ಒಳಗಾದಾಗ ರಕ್ತದ ಕ್ಯಾನ್ಸರ್ ಸಂಭವಿಸುತ್ತದೆ ಎಂದು ನಂಬಲಾಗಿದೆ. ಕೆಲವರಿಗೆ ವಯಸ್ಸಾಗುತ್ತಿದ್ದಂತೆ ಮತ್ತು ರೋಗನಿರೋಧಕ ಶಕ್ತಿ ಕಡಿಮೆಯಾದಾಗ ಇದು ಕಾಣಿಸಿಕೊಳ್ಳಬಹುದು. ವಿವಿಧ ರೀತಿಯ ರಕ್ತದ ಕ್ಯಾನ್ಸರ್‌ಗಳಲ್ಲಿ ಲ್ಯುಕೇಮಿಯಾ, ಲಿಂಫೋಮಾ ಮತ್ತು ಮೈಲೋಮಾಗಳು ಸೇರಿವೆ.

ರೋಗಲಕ್ಷಣಗಳು ಕಾಣಿಸಿಕೊಳ್ಳುವ ಅವಧಿಯನ್ನು ಆಧರಿಸಿ ರಕ್ತದ ಕ್ಯಾನ್ಸರ್ ತೀವ್ರವಾಗಿರಬಹುದು ಅಥವಾ ದೀರ್ಘಕಾಲದಲ್ಲಿ ಹೆಚ್ಚಾಗಬಹುದು. ಇದು ಸುಳಿವು ನೀಡದೆ ಪ್ರಾಣ ತೆಗೆಯುವಂತಹ ಮಹಾಮಾರಿ. ಕೆಲವು ಸಂದರ್ಭಗಳಲ್ಲಿ ಆರಂಭದಲ್ಲೇ ಇದರ ಲಕ್ಷಣಗಳು ಕಂಡುಬಂದರೆ ಆಗ ಸೂಕ್ತ ಚಿಕಿತ್ಸೆ ಪಡೆದು ಜೀವಿತಾವಧಿಯನ್ನು ವಿಸ್ತರಿಸಿಕೊಳ್ಳಬಹುದು. ಔಷಧಿ ಮತ್ತು ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಂಡು ಹೆಚ್ಚಿನ ಸಮಸ್ಯೆ ಇಲ್ಲದೇ ಬಾಳು ಸಾಗಿಸಬಹುದು. 

ರಕ್ತದ ಕ್ಯಾನ್ಸರ್ ಲಕ್ಷಣಗಳು
ರಕ್ತದ ಕ್ಯಾನ್ಸರಿನ ಲಕ್ಷಣಗಳೆಂದರೆ ತೂಕ ಇಳಿಕೆ, ಒಸಡುಗಳ ರಕ್ತಸ್ರಾವ, ಆಯಾಸ, ಬೆನ್ನು ನೋವು, ಹೊಟ್ಟೆ ನೋವು, ಮೂಳೆ ನೋವು, ತಲೆ ನೋವು, ತಲೆ ಭಾರ, ಜ್ವರ, ಕಪ್ಪು ಕಲೆಗಳು, ದದ್ದುಗಳು ಮತ್ತು ದುಗ್ಧರಸ ಗ್ರಂಥಿಯ ಹಿಗ್ಗುವಿಕೆ. 

ರಕ್ತದ ಕ್ಯಾನ್ಸರ್ ರಕ್ತ ಉತ್ಪಾದನೆಯಾಗುವ ಅಸ್ಥಿ ಮಜ್ಜೆಯಲ್ಲಿ ಪ್ರಾರಂಭವಾಗುತ್ತದೆ. ನಂತರ ಕ್ಯಾನ್ಸರ್ ಕೋಶಗಳು ರಕ್ತದ ಪರಿಚಲನೆಯಲ್ಲಿ ಸೇರುತ್ತದೆ. ಇತರ ರೀತಿಯ ಕ್ಯಾನ್ಸರುಗಳಂತೆ ಇದು ಗಡ್ಡೆಯ ರೂಪದಲ್ಲಿ ಇರುವುದಿಲ್ಲ. ಆದ್ದರಿಂದ ಇದನ್ನು ರಕ್ತ ಪರೀಕ್ಷೆ ಮತ್ತು ಎಕ್ಸ್-ರೇಗಳಂತಹ ಇಮೇಜಿಂಗ್ ಪರೀಕ್ಷೆ ಮಾಡಿ ಗುರುತಿಸಬೇಕು. ರಕ್ತ ಪರೀಕ್ಷೆಯiಲ್ಲಿ ಕೆಂಪು ರಕ್ತ ಕಣಗಳಿಗಿಂತ ಬಿಳಿ ರಕ್ತ ಕಣಗಳ ಸಂಖ್ಯೆ ಹೆಚ್ಚಾಗಿದ್ದರೆ ತಕ್ಷಣ ವೈದ್ಯರನ್ನು ಕಾಣಬೇಕು. ರಕ್ತದ ಸ್ಮಿಯರ್ ಪರೀಕ್ಷೆ ಮತ್ತು ಅಸ್ಥಿ ಮಜ್ಜೆಯ ಪರೀಕ್ಷೆಗಳು ರಕ್ತದ ಕ್ಯಾನ್ಸರನ್ನು ಪತ್ತೆ ಹಚ್ಚಲು ಬಳಸುವ ಕೆಲವು ಸಾಮಾನ್ಯ ರೋಗನಿರ್ಣಯ ಪರೀಕ್ಷೆಗಳಾಗಿವೆ. 

ಆರೋಗ್ಯದ ಮೇಲೆ ಬ್ಲಡ್ ಕ್ಯಾನ್ಸರ್ ಪರಿಣಾಮಗಳು
ಕ್ಯಾನ್ಸರ್ ಕೋಶಗಳು ಹೆಚ್ಚಾಗುತ್ತಿದ್ದಂತೆ ಅವು ರಕ್ತದಲ್ಲಿರುವ ಕೆಂಪು ರಕ್ತ ಕಣ, ಬಿಳಿ ರಕ್ತ ಕಣ ಮತ್ತು ಪ್ಲೇಟ್ಲೆಟ್ಟುಗಳ ಮೇಲೆ ಪರಿಣಾಮ ಬೀರಬಹುದು. ಕೆಂಪು ರಕ್ತ ಕಣಗಳು ಕ್ರಮೇಣ ಕಡಿಮೆಯಾಗುವ ಅಥವಾ ಇಲ್ಲದಿರುವ ಸ್ಥಿತಿ ರಕ್ತದ ಕ್ಯಾನ್ಸರಿನಿಂದ ಉಂಟಾಗುತ್ತದೆ. ಕೆಂಪು ರಕ್ತ ಕಣಗಳು ದೇಹದಲ್ಲಿ ಜೀವಕೋಶಗಳಿಗೆ ಶ್ವಾಸಕೋಶದಿಂದ ಅಂಗಾಂಶಗಳಿಗೆ ಆಮ್ಲಜನಕ ಸರಬರಾಜು ಮಾಡುವುದು ಮತ್ತು ಕಾರ್ಬನ್ ಡೈ ಆಕ್ಸೈಡನ್ನು ಶ್ವಾಸಕೋಶಕ್ಕೆ ಕಳುಹಿಸುವ ಕೆಲಸ ಮಾಡುತ್ತವೆ. ಆದ್ದರಿಂದ ಅವುಗಳು ದೇಹದಲ್ಲಿ ಸರಿಯಾಗಿರಬೇಕು. ಇಲ್ಲವಾದರೆ ಕಷ್ಟ. ರಕ್ತದಲ್ಲಿ ಕೆಂಪು ರಕ್ತಗಳು ಕ್ರಮೇಣ ಕಡಿಮೆಯಾದರೆ ರೋಗನಿರೋಧಕ ಶಕ್ತಿ ಕುಸಿದು ಅದು ಅನೇಕ ಸೋಂಕುಗಳಿಗೆ ದಾರಿ ಮಾಡಿಕೊಡುತ್ತದೆ. 

ರಕ್ತದ ಕ್ಯಾನ್ಸರ್ ಗೆ ಚಿಕಿತ್ಸೆಗಳು
ರಕ್ತದ ಕ್ಯಾನ್ಸರ್ ಬಂದ ಮೇಲೆ ಆಹಾರ ಮತ್ತು ಜೀವನಶೈಲಿಯನ್ನು ಬದಲಾಯಿಸಿ ವೇಗವಾಗಿ ಚೇತರಿಸಿಕೊಳ್ಳುವುದು ಬಹಳ ಮುಖ್ಯವಾಗಿದೆ. ಆಲ್ಕೊಹಾಲ್ ಮತ್ತು ತಂಬಾಕು ಸೇವನೆ, ಸ್ಥೂಲಕಾಯತೆ, ದೈಹಿಕವಾಗಿ ಸಕ್ರಿಯವಾಗಿಲ್ಲದಿರುವುದು ಮತ್ತು ಆರೋಗ್ಯಕರ ಆಹಾರದ ಕಡಿಮೆ ಸೇವನೆಯಂತಹ ವರ್ತನೆಯ ಅಪಾಯಕಾರಿ ಅಂಶಗಳು ಶೇಕಡ 30ರಷ್ಟು ಕ್ಯಾನ್ಸರ್ ಸಾವುಗಳಿಗೆ ಕಾರಣವಾಗಬಹುದು ಎಂದು ತಿಳಿದುಬಂದಿದೆ. ಆರೋಗ್ಯಕರ ಆಹಾರ ಮತ್ತು ವಿಹಾರವು ಚಿಕಿತ್ಸೆಯ ಸಮಯದಲ್ಲಿ ಬಲವಾಗಿ ಮತ್ತು ಫಿಟ್ ಆಗಿರಲು ಸಹಾಯ ಮಾಡುತ್ತದೆ. 

ರಸಾಯನಿಕಗಳನ್ನು ಬಳಸಿ ನೀಡಲಾಗುವ ಕೀಮೋಥೆರಪಿ ಚಿಕಿತ್ಸೆ ಪ್ರಸಿದ್ಧವಾಗಿದೆ. ಕೀಮೋಥೆರಪಿ ಔಷಧಿಗಳು ಕ್ಯಾನ್ಸರ್ ಕೋಶಗಳನ್ನು ಗುರಿಯಾಗಿಸಿಕೊಂಡು ಕೊಲ್ಲುತ್ತವೆ. ಆದರೂ ಅವು ಇತರ ಕ್ಯಾನ್ಸರ್ ಅಲ್ಲದ ಕೋಶಗಳ ಮೇಲೆ ಪರಿಣಾಮ ಬೀರುತ್ತವೆ. ಇದರಿಂದ ಕೂದಲು ಉದುರುವಿಕೆ, ತೂಕ ನಷ್ಟ ಮತ್ತು ವಾಕರಿಕೆ, ರಕ್ತ ಕಣಗಳ ಸಂಖ್ಯೆಯಲ್ಲಿನ ಇಳಿಕೆಯಂತಹ ತೀವ್ರವಾದ ಅಡ್ಡಪರಿಣಾಮಗಳು ಉಂಟಾಗುತ್ತವೆ. 

ಅಸ್ಥಿ ಮಜ್ಜೆಯ ಕಸಿ ವಿಧಾನವೂ ರಕ್ತದ ಕ್ಯಾನ್ಸರನ್ನು ಗುಣಪಡಿಸುವ ವಿಧಾನಗಳಲ್ಲಿ ಪ್ರಮುಖವಾದದ್ದಾಗಿದೆ. ಇದು ಸಾಮಾನ್ಯವಾಗಿ ಹಾನಿಗೊಳಗಾದ ಅಥವಾ ನಾಶವಾದ ಅಸ್ಥಿ ಮಜ್ಜೆಯನ್ನು ಆರೋಗ್ಯಕರ ಅಸ್ಥಿ ಮಜ್ಜೆಯ ಆಕರಕೋಶಗಳೊಂದಿಗೆ ಬದಲಾಯಿಸುವ ವಿಧಾನವಾಗಿದೆ. ಇದರ ಜೊತೆಗೆ ವಿಕಿರಣ ಚಿಕಿತ್ಸೆಯೂ ಲಭ್ಯವಿದೆ. ಮುಂದುವರಿದ ಸಂಶೋಧನೆಯ ಕಾರಣದಿಂದ ಲ್ಯುಕೇಮಿಯಾ, ಲಿಂಫೋಮಾ ಮತ್ತು ಮೈಲೋಮಾ ಇರುವ ಜನರ ಬದುಕುಳಿಯುವಿಕೆಯ ಪ್ರಮಾಣವು ದಿನೇ ದಿನೇ ಹೆಚ್ಚುತ್ತಲೇ ಇದೆ. ಆದರೆ ರಕ್ತದ ಕ್ಯಾನ್ಸರಿಗೆ ಸಂಪೂರ್ಣ ಪರಿಹಾರ ಪಡೆಯಲು ಬಹಳ ದೂರ ಸಾಗಬೇಕಿದೆ. 

ರಕ್ತದ ಕ್ಯಾನ್ಸರಿನಿಂದ ತಪ್ಪಿಸಿಕೊಳ್ಳಲು ವಿಕಿರಣಗಳಿಗೆ ಮೈಯ್ಯೊಡ್ಡುವಿಕೆ, ಕೀಟನಾಶಕಗಳು ಅಥವಾ ಬೆಂಜೀನ್‌ನಂತಹ ರಾಸಾಯನಿಕಗಳಿಂದ ದೂರವಾಗಿರಬೇಕು. ಧೂಮಪಾನ ಬಿಡಬೇಕು. ತಂಬಾಕನ್ನು ಯಾವುದೇ ರೂಪದಲ್ಲಿಯೂ ಸೇವಿಸಬಾರದು. ದೈನಂದಿನ ಜೀವನದಲ್ಲಿ ಸಕ್ರಿಯವಾಗಿರುವುದು ಮತ್ತು ಆರೋಗ್ಯಕರ ಆಹಾರ ಸೇವನೆ ಬಹಳ ಮುಖ್ಯ.

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com