ಟೆಕ್ಸ್ಟ್ ನೆಕ್ ಸಿಂಡ್ರೋಮ್ ಬಾಧಿಸುತ್ತಿದೆಯೇ? (ಕುಶಲವೇ ಕ್ಷೇಮವೇ)

ಸಂವಹನವನ್ನು ಅತ್ಯಂತ ಸುಲಭವಾಗಿಸಿದ ಕೀರ್ತಿ ಮೊಬೈಲ್ ಫೋನಿಗಿದೆ. ಹಲವಾರು ಉಪಯುಕ್ತ ಅಪ್ಲಿಕೇಷನ್ನುಗಳಿಂದ ಮೊಬೈಲ್ ಫೋನುಗಳು ಕಿರಿಯರ, ಹಿರಿಯರ ಎಲ್ಲರ ಮನ ಗೆದ್ದಿವೆ. ಒಂದು ಸಂಶೋಧನೆಯ ಪ್ರಕಾರ ಇಂದು ಸಾಮಾನ್ಯ ಜನರು ಫೋನ್ ಸ್ಕ್ರೀನ್‌ಗಳನ್ನು ನೋಡುತ್ತಾ ಸರಾಸರಿ ಏಳು ಗಂಟೆಗಳ ಕಾಲ ಕಳೆಯುತ್ತಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಇಂದಿನ ದಿನಮಾನದ ಅತ್ಯಗತ್ಯ ಸಾಧನ ಮೊಬೈಲ್ ಫೋನ್. ಸಂವಹನವನ್ನು ಅತ್ಯಂತ ಸುಲಭವಾಗಿಸಿದ ಕೀರ್ತಿ ಮೊಬೈಲ್ ಫೋನಿಗಿದೆ. ಹಲವಾರು ಉಪಯುಕ್ತ ಅಪ್ಲಿಕೇಷನ್ನುಗಳಿಂದ ಮೊಬೈಲ್ ಫೋನುಗಳು ಕಿರಿಯರ, ಹಿರಿಯರ ಎಲ್ಲರ ಮನ ಗೆದ್ದಿವೆ. ಒಂದು ಸಂಶೋಧನೆಯ ಪ್ರಕಾರ ಇಂದು ಸಾಮಾನ್ಯ ಜನರು ಫೋನ್ ಸ್ಕ್ರೀನ್‌ಗಳನ್ನು ನೋಡುತ್ತಾ ಸರಾಸರಿ ಏಳು ಗಂಟೆಗಳ ಕಾಲ ಕಳೆಯುತ್ತಾರೆ.

ಇದಕ್ಕೆ ಕಾರಣ ಗೇಮ್ಸ್, ವಾಟ್ಸಾಪ್, ಇನ್ಸ್ಟಾಗ್ರಾಮ್, ಟ್ಟಿಟ್ಟರ್, ಯೂಟ್ಯೂಬ್, ಒಟಿಟಿ ಹೀಗೆ ಮನರಂಜನೆಯ ಹಲವಾರು ಆಮಿಷಗಳು ಮೊಬೈಲ್ ಫೋನಿನಲ್ಲಿ ನೆಲೆನಿಂತಿರುವುದು. ಜೊತೆಗೆ ಹೊಸ ಹೊಸ ವಿಶೇಷ ಲಕ್ಷಣಗಳಿರುವ ಮೊಬೈಲ್ ಫೋನುಗಳ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿ ಮೊಬೈಲ್ ಮೇನಿಯಾ ಹೆಚ್ಚಾಗುತ್ತಿದೆಯೇ ಹೊರತು ಕಡಿಮೆ ಆಗಿಲ್ಲ. ಆದ್ದರಿಂದ ಹಲವಾರು ಜನರಿಗೆ ಇಂದು ಮೊಬೈಲ್ ಫೋನ್ ವ್ಯಸನವೂ ಆಗಿ ಹತ್ತು ಹಲವು ಬಗೆಯ ಸಮಸ್ಯೆಗಳು ಉಂಟಾಗಿರುವುದನ್ನು ನಾವು ಕಾಣುತ್ತಿದ್ದೇವೆ.

ಇವುಗಳಲ್ಲಿ ಟೆಕ್ಸ್ಟ್ ನೆಕ್ ಸಿಂಡ್ರೋಮ್ (Text Neck Syndrome) ಕೂಡ ಒಂದು. ಇಂದು ಪ್ರಪಂಚದಾದ್ಯಂತ ಮೊಬೈಲ್ ಬಳಕೆದಾರರ ಸಂಖ್ಯೆಯ ಪ್ರಚಂಡ ಏರಿಕೆಯಿಂದಾಗಿ ಟೆಕ್ಸ್ಟ್ ನೆಕ್ ಸಿಂಡ್ರೋಮ್ ಒಂದು ಸಮಸ್ಯೆಯಾಗಿ ಮಾರ್ಪಟ್ಟಿದೆ.

ಟೆಕ್ಸ್ಟ್ ನೆಕ್ ಸಿಂಡ್ರೋಮ್ ಎಂದರೇನು?
ಟೆಕ್ಸ್ಟ್ ನೆಕ್ ಸಿಂಡ್ರೋಮ್ ಎಂದರೆ ಸರಿಯಾಗಿಲ್ಲದ ಒಂದೇ ಭಂಗಿಯಲ್ಲಿ ಕುಳಿತು ಹೆಚ್ಚು ಗಂಟೆಗಳ ಕಾಲ ಮೊಬೈಲ್ ಫೋನ್, ಟ್ಯಾಬ್ಲೆಟ್, ಲ್ಯಾಪ್ ಟಾಪ್, ಎಲೆಕ್ಟ್ರಾನಿಕ್ ಸಾಧನಗಳನ್ನು ಆಥವಾ ಯಾವುದೇ ವೈರ್‌ಲೆಸ್ ಸಾಧನವನ್ನು ಆಗಾಗ್ಗೆ ಮತ್ತು ಹೆಚ್ಚು ಕಾಲ ಕೆಳಗೆ ನೋಡುವುದರಿಂದ ಬಳಸಿದಾಗ ಕುತ್ತಿಗೆ ಮತ್ತು ಭುಜಗಳಿಗೆ ಉಂಟಾಗುವ ಹಾನಿಯನ್ನು ವಿವರಿಸಲು ಬಳಸಲಾಗುವ ಪದವಾಗಿದೆ. ಹೀಗೆ ಮಾಡುವುದರಿಂದ ಕೆಲವೊಮ್ಮೆ ಕೆಳ ಬೆನ್ನಿನಲ್ಲಿ ಸ್ನಾಯು ನೋವು ಉಲ್ಬಣಗೊಳ್ಳುವುದು. ಇದು ಹದಿಹರೆಯದವರು ಮತ್ತು ಚಿಕ್ಕ ಮಕ್ಕಳಲ್ಲಿಯೂ ಕಂಡುಬರುತ್ತದೆ. ಇದಲ್ಲದೇ ಕೆಲವರಿಗೆ ತಲೆನೋವುಮತ್ತು ಕೈ ಜುಮ್ಮೆನ್ನುವ ಅನುಭವ ಕೂಡ ಆಗಬಹುದು.

ಟೆಕ್ಸ್ಟ್ ನೆಕ್ ಸಿಂಡ್ರೋಮ್ ಉಂಟಾಗಲು ಕಾರಣಗಳು
ಇಂದು ಮನೆಯಿಂದಲೇ ಕೆಲಸ ಮಾಡುವುದು ಹಲವಾರು ಜನರಿಗೆ ಅಭ್ಯಾಸವಾಗಿರುವುದರಿಂದ ಅವರು ಸದಾ ಲ್ಯಾಪ್ ಟಾಪ್ ನಲ್ಲಿಯೇ ಮುಳುಗಿರುತ್ತಾರೆ. ಒಮ್ಮೆಗೆ ಎಂಟು-ಹತ್ತುಗಳ ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಆಗ ಕುತ್ತಿಗೆಯ ಸ್ನಾಯುಗಳು, ಸ್ನಾಯುರಜ್ಜುಗಳು ಮತ್ತು ಅಸ್ಥಿರಜ್ಜುಗಳು ಎಲ್ಲದರ ಮೇಲೆಯೂ ಪರಿಣಾಮ ಉಂಟಾಗುತ್ತದೆ. ತಲೆಯ ಭಾರ ಕುತ್ತಿಗೆ ಮೇಲೆ ನಿರಂತರವಾಗಿ ಬೀಳುತ್ತದೆ. ಹಾಗೆಯೇ ಮೊಬೈಲ್ ಫೋನ್‌ನಲ್ಲಿ ಸಂದೇಶ ಕಳುಹಿಸುವಾಗ, ತಲೆಯನ್ನು ಮುಂದಕ್ಕೆ ಬಗ್ಗಿಸುವುದು ಮತ್ತು 45 ಅಥವಾ 60 ಡಿಗ್ರಿ ಕೋನದಲ್ಲಿ ಕೆಳಗೆ ನೋಡುವುದು ಸಾಮಾನ್ಯವಾಗಿದೆ. ಇದು ಕುತ್ತಿಗೆಯ ಮೇಲೆ ಹೆಚ್ಚು ಬಲ ಬಿದ್ದಂತೆ ಮಾಡುತ್ತದೆ. ಕುತ್ತಿಗೆ ಈ ಒತ್ತಡವನ್ನು ದೀರ್ಘಕಾಲದವರೆಗೆ ತಡೆದುಕೊಳ್ಳುವುದಿಲ್ಲ. ಆಗ ನೋವುಂಟಾಗುತ್ತದೆ.

ಸಾಮಾನ್ಯವಾಗಿ ಟೆಕ್ಸ್ಟ್ ನೆಕ್ ಸಿಂಡ್ರೋಮ್ ಸೌಮ್ಯವಾಗಿರುವ ಕುತ್ತಿಗೆ ಅಥವಾ ಮೇಲಿನ ಬೆನ್ನಿನ ನೋವಿನಿಂದ ಪ್ರಾರಂಭವಾಗುತ್ತದೆ. ನಿಧಾನವಾಗಿ ನೋವು ಹೆಚ್ಚಾಗುತ್ತದೆ. ಇಂದಿನ ಜಡ (ಸೆಡೆಂಟರಿ) ಜೀವನಶೈಲಿ ಮತ್ತು ನಡಿಗೆ, ಜಾಗಿಂಗ್ ಆಥವಾ ಯಾವುದೇ ಬಗೆಯ ವ್ಯಾಯಾಮಗಳನ್ನು ಮಾಡದಿರುವುದರಿಂದ ಈ ಸಮಸ್ಯೆ ಉಲ್ಬಣಿಸುವುದು ಕಟ್ಟಿಟ್ಟ ಬುತ್ತಿಯಾಗಿದೆ.

ಟೆಕ್ಸ್ಟ್ ನೆಕ್ ಸಿಂಡ್ರೋಮ್ ತಡೆಯುವುದು ಹೇಗೆ?
ಈ ಸಮಸ್ಯೆಯನ್ನು ತಡೆಗಟ್ಟಲು ಮೊತ್ತಮೊದಲಿಗೆ ಮೊಬೈಲ್ ಫೋನನ್ನು/ ಲ್ಯಾಪ್‌ಟಾಪನ್ನು/ ಎಲೆಕ್ಟ್ರಾನಿಕ್ ಸಾಧನಗಳನ್ನು ಅಗತ್ಯಕ್ಕೆ ತಕ್ಕಂತೆ ಸೀಮಿತ ಕಾಲಾವಧಿಯಲ್ಲಿ ಮಾತ್ರ ಬಳಸುವುದು ಅತ್ಯುತ್ತಮ ವಿಧಾನ. ಕುತ್ತಿಗೆ, ಎದೆ ಮತ್ತು ಮೇಲಿನ ಬೆನ್ನನ್ನು ನಿರ್ದಿಷ್ಟವಾಗಿ ಗುರಿಯಾಗಿರಿಸಿಕೊಂಡಿರುವ ಉತ್ತಮ ವ್ಯಾಯಾಮಗಳನ್ನು ಮಾಡುವುದು ಎರಡನೇ ವಿಧಾನವಾಗಿದೆ. ಈ ಸಮಸ್ಯೆಯನ್ನು ಆರಂಭದಲ್ಲಿಯೇ ಸಮಯಕ್ಕೆ ಸರಿಯಾಗಿ ಪರಿಹರಿಸದಿದ್ದರೆ, ಅದು ಮುಂದುವರೆದು ತಲೆಯ ಭಂಗಿ ಮತ್ತು ಭುಜಗಳಿಗೆ ದುಷ್ಟರಿಣಾಮ ಉಂಟುಮಾಡಬಹುದು.

ಸಾಧ್ಯವಾದಷ್ಟು ಮೊಬೈಲ್ ಫೋನನ್ನು ಕಣ್ಣಿನ ಮಟ್ಟದಲ್ಲಿ ಹಿಡಿದುಕೊಂಡು ಬಳಸಬೇಕು. ತಲೆಯನ್ನು ಬಗ್ಗಿಸಿ ಅದನ್ನು ನೋಡುವುದು ಸಲ್ಲದು. ಮೊಬೈಲ್ ಫೋನನ್ನು ಹೆಚ್ಚು ಸಮಯ ಬಳಸುವುದಾದರೆ ಪ್ರತಿ 15 ನಿಮಿಷಗಳಿಗೊಮ್ಮೆ ವಿರಾಮ ತೆಗೆದುಕೊಳ್ಳಿ, ಮೇಲಕ್ಕೆ ನೋಡಿ ಮತ್ತು ಕುತ್ತಿಗೆಯನ್ನು ತಟಸ್ಥ ಸ್ಥಾನಕ್ಕೆ ತಂದುಕೊಳ್ಳಿ.

ಪ್ರತಿ 20-30 ನಿಮಿಷಗಳಿಗೊಮ್ಮೆ ಎದ್ದು ನಡೆಯಲು ಅಲಾರಾಂ ಇಟ್ಟುಕೊಳ್ಳಬಹುದು. ಯೋಗ, ವಾಕಿಂಗ್ ಮತ್ತು ಜಿಮ್ ತರಬೇತಿ ಅಭ್ಯಾಸ ಮಾಡಿಕೊಂಡು ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಬಹುದು.

ಯೋಗಾಭ್ಯಾಸವು ನಿಸ್ಸಂದೇಹವಾಗಿ ಕುತ್ತಿಗೆ ಮತ್ತು ಬೆನ್ನು ನೋವನ್ನು ನಿವಾರಿಸಲು ಮತ್ತು ತಪ್ಪಿಸಲು ಉತ್ತಮ ಮಾರ್ಗವಾಗಿದೆ, ಇದು ಚಲನೆಯ ಮಾದರಿಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಪ್ರತಿದಿನ 10-20-30 ನಿಮಿಷಗಳ ಕಾಲ ಯೋಗಾಸನ ಮಾಡುವುದು ಬಹಳ ಉತ್ತಮ. ನೇರವಾಗಿ ವಾಕಿಂಗ್ ಮಾಡುವುದರಿಂದ ಕುತ್ತಿಗೆ ಮತ್ತು ಬೆನ್ನಿಗೆ ಬಲ ಬರುತ್ತದೆ. ಜಿಮ್ಮಿಗೆ ಹೋಗಿ ಮೈಕೈ ದಂಡಿಸುವುದರಿಂದ ದೈಹಿಕ ಸದೃಢತೆ ಹೆಚ್ಚುತ್ತದೆ.

ಟೆಕ್ಸ್ಟ್ ನೆಕ್ ಸಿಂಡ್ರೋಮ್ ಗೆ ಚಿಕಿತ್ಸೆ
ಅಂತಿಮವಾಗಿ ಟೆಕ್ಸ್ಟ್ ನೆಕ್ ಸಿಂಡ್ರೋಮಿನಿಂದ ಬಳಲುತ್ತಿದ್ದರೆ ಮಸಾಜ್ ಥೆರಪಿಸ್ಟ್ ಅಥವಾ ವಿಶೇಷ ತಜ್ಞರನ್ನು ಸಂಪರ್ಕಿಸುವುದು ಉತ್ತಮ. ಅವರು ಈ ಸಮಸ್ಯೆಯನ್ನು ಪರಿಹರಿಸಲು ಸೂಕ್ತವಾದ ವ್ಯಾಯಾಮಗಳನ್ನು ಸೂಚಿಸುತ್ತಾರೆ. ನೋವನ್ನು ನಿಶ್ಚೇಷ್ಟಗೊಳಿಸಲು ಸಹಾಯ ಮಾಡುವ ಕೆಲವು ಔಷಧಿಗಳನ್ನು ನೀಡುತ್ತಾರೆ. ಆಯುರ್ವೇದದಲ್ಲಿ ಗ್ರೀವ ಬಸ್ತಿ ಎಂಬ ಚಿಕಿತ್ಸೆ ಇದೆ. ಇದರಲ್ಲಿ ಕತ್ತಿನ ಭಾಗದ ಸುತ್ತ ಉದ್ದಿನ ಹಿಟ್ಟನ್ನು ಕಟ್ಟಿ ಅದರೊಳಗೆ ಬಿಸಿ ಎಣ್ಣೆಯನ್ನು ಹಾಕಿ ಸ್ವಲ್ಪ ಸಮಯ ಬಿಟ್ಟು ತೆಗೆಯುತ್ತಾರೆ ನಂತರ ಮಸಾಜು ಮಾಡುವುದು ಮತ್ತು ಶಾಖ ಕೊಡುವುದು ಹೀಗೆ ಒಂದು ವಾರ/10 ದಿನಗಳ ಕಾಲ ಮಾಡುತ್ತಾರೆ. ಇದರಿಂದ ಈ ಸಮಸ್ಯೆ ದೂರವಾಗುತ್ತದೆ.

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com