ಯೂರೋಪಿಗೆ ಹಿಡಿದಿದೆ ಹಣದುಬ್ಬರದ ಗ್ರಹಣ! (ಹಣಕ್ಲಾಸು)

ಹಣಕ್ಲಾಸು-386-ರಂಗಸ್ವಾಮಿ ಮೂಕನಹಳ್ಳಿ
ಯುರೋಪ್ ಹಣದುಬ್ಬರ (ಸಾಂಕೇತಿಕ ಚಿತ್ರ)
ಯುರೋಪ್ ಹಣದುಬ್ಬರ (ಸಾಂಕೇತಿಕ ಚಿತ್ರ)

ಕಳೆದ ಎರಡೂವರೆ ದಶಕದಿಂದ ಯುರೋಪನ್ನು ಬಹಳ ಹತ್ತಿರದಿಂದ ನೋಡುವ ಅವಕಾಶ ನನ್ನದು. ಆಗ ಯೂರೋಪು ಒಂದರ್ಥದಲ್ಲಿ ಸ್ವರ್ಗ. ಅಂದರೆ ಜೀವನ ಮಟ್ಟ, ಜೀವನ ಶೈಲಿ, ಕಾಸ್ಟ್ ಆಫ್ ಲಿವಿಂಗ್ ಎಲ್ಲವೂ ಸ್ಥಿರತೆಯನ್ನು ಹೊಂದಿರುತ್ತಿದ್ದವು. 2007 ರ ಅಮೇರಿಕಾ ಆರ್ಥಿಕ ಕುಸಿತ ಯೂರೋಪಿಗೆ ತಟ್ಟಿದ್ದು 2009 ರಲ್ಲಿ , ಆಗಲೂ ಕೂಡ ಹೇಳಿಕೊಳ್ಳುವ ಮಟ್ಟದಲ್ಲಿ ಹಣದುಬ್ಬರ ಅಥವಾ ಇನ್ಫ್ಲೇಶನ್ ಇಲ್ಲಿ ಏರಿಕೆ ಕಾಣಲಿಲ್ಲ. ಹೆಚ್ಚು ಕಡಿಮೆ ಎಲ್ಲವೂ ಸಮಸ್ಥಿತಿ ಕಾಯ್ದು ಕೊಂಡಿದ್ದವು. ಜನರ ಖರೀದಿ ಶಕ್ತಿ ಅಲ್ಪ ಕುಸಿತ ಕಂಡರೂ ಸಮಾಜ, ಎಕಾನಮಿ ಅದನ್ನು ಅರಗಿಸಿಕೊಂಡಿತು.

ಯೂರೋಪಿನಲ್ಲಿ ದೊಡ್ಡ ಮಟ್ಟದ ಬದಲಾವಣೆ ಕಂಡದ್ದು 2011ರಲ್ಲಿ ಯುರೋ ಹಣವನ್ನು ಯೂರೋಪಿನ ಎಲ್ಲಾ ಸದಸ್ಯ ರಾಷ್ಟ್ರಗಳ ಹಣ ಎಂದು ಘೋಷಣೆಯಾದಾಗ ಹಣದುಬ್ಬರ ಹೆಚ್ಚಾಗಿತ್ತು. ಸ್ಪೇನ್, ಇಟಲಿ, ಪೋರ್ಚುಗಲ್ ನಂತಹ ದೇಶಗಳಲ್ಲಿ ಅತ್ಯಂತ ಕಡಿಮೆ ಸಮಯದಲ್ಲಿ ಸರಕು ಮತ್ತು ಸೇವೆಯ ಬೆಲೆ ಒಮ್ಮೆಲೇ ದುಪ್ಪಟಾಗಿ ಹೋಗಿತ್ತು. ಆ ನಂತರ 2020ರ ತನಕ ಏರಿಕೆ ಕಂಡರೂ ಅದು ಗೌಣ. ಒಂದು, ಎರಡು ಅತಿ ಹೆಚ್ಚೆಂದರೆ ಮೂರು ಪ್ರತಿಶತ ಏರಿಕೆ ಕಾಣುತ್ತಿತ್ತು. ವೇತನವೂ ಅದೇ ಮಟ್ಟಕ್ಕೆ ಏರಿಕೆ ಕಾಣುತ್ತಿದ್ದ ಕಾರಣ ಸಮಾಜದಲ್ಲಿ ಸ್ಥಿರತೆ, ಶಾಂತಿ ನೆಲಸಿತ್ತು. ಇದೀಗ ಅಂದರೆ 2023 ರ ಅಕ್ಟೋಬರ್ ತಿಂಗಳ ಸಮಯದಲ್ಲಿ, ಕೋವಿಡ್ ಹಿಂದಿನ ಬೆಲೆಗಳಿಗಿಂತ ದುಪ್ಪಟಾಗಿದೆ, ಕೆಲವೊಂದು ಸೇವೆ ಮತ್ತು ಪದಾರ್ಥಗಳು ಅದಕ್ಕಿಂತ ಹೆಚ್ಚಿನ ಏರಿಕೆಯನ್ನು ಕಂಡಿವೆ.

ಯೂರೋಪಿನಲ್ಲಿ ಕಳೆದ ವರ್ಷ ಅಂದರೆ 2022ರ ಅಕ್ಟೋಬರ್ ನಲ್ಲಿ ಇದ್ದ ಹಣದುಬ್ಬರ 10.6ಪ್ರತಿಶತ! ಇಂದಿಗೂ ಇಲ್ಲಿನ ಇನ್ಫ್ಲೇಶನ್ ನಾಲ್ಕುವರೆಯಿಂದ ಐದು ಪ್ರತಿಶತ ಸರಾಸರಿಯಿದೆ. ಗಮನಿಸಿ ಇದು ಒಟ್ಟು ಒಕ್ಕೂಟದ ಸರಾಸರಿ. ಇದು ದೇಶದಿಂದ ದೇಶಕ್ಕೆ ಬದಲಾಗುತ್ತದೆ. ಒಟ್ಟಿನಲ್ಲಿ ಸರಳವಾಗಿ ಹೇಳಬೇಕೆಂದರೆ ಯೂರೋಪಿನಲ್ಲಿ ಜನ ಸಾಮಾನ್ಯನ ಬದುಕು ಇಂದಿಗೆ ಬಹಳ ಕಷ್ಟವಾಗಿದೆ. ಈ ರೀತಿ ಆಗಲು ಪ್ರಮುಖ ಕಾರಣಗಳನ್ನು ನೋಡೋಣ.

  1. ರಷ್ಯಾ ಮತ್ತು ಉಕ್ರೈನ್ ಯುದ್ಧ: ಯೂರೋಪಿಗೆ ತಾಕಿಕೊಂಡಿರುವ ಕಾರಣ ಮತ್ತು ಯೂರೋಪಿಗೆ ಬೇಕಾಗುವ ಎನರ್ಜಿ ಮೂಲ ರಷ್ಯಾ ಆಗಿರುವುದರ ಕಾರಣ, ಇಲ್ಲಿನ ಯುದ್ಧ ಯೂರೋಪಿಯನ್ ಯೂನಿಯನ್ ಮೇಲೆ ಬಹಳ ಪರಿಣಾಮ ಬೀರಿದೆ. ಎಲೆಕ್ಟ್ರಿಸಿಟಿ ಬೆಲೆ ಗಗನವನ್ನು ಭೇದಿಸಿ ಹಾರಿದೆ. ಸಹಜವಾಗೇ ಎಲ್ಲಾ ಬೆಲೆಗಳ ಬೆಲೆಯಲ್ಲಿ ಏರಿಕೆಯಾಗಿದೆ.
  2. ಕಾರ್ಪೊರೇಟ್ ಸಂಸ್ಥೆಗಳ ಹೆಚ್ಚಿದ ಲಾಭದ ಹಸಿವು: ಪೂರ್ಣ ಯೂರೋಪಿನ ಹಣದುಬ್ಬರದ ೪೫ ಪ್ರತಿಶತ ಕೇವಲ ಕಾರ್ಪೊರೇಟ್ ಸಂಸ್ಥೆಗಳ ಆಸೆಬುರುಕತನದಿಂದ ಉಂಟಾಗಿದೆ ಎಂದರೆ ನಂಬುವಿರಾ? ಆದರೆ ಇದು ನಿಜ. ಕರೋನೋತ್ತರ ಬೆಲೆಗಳಲ್ಲಿ ಹೆಚ್ಚಳವಾಯ್ತು, ನಂತರ ರಷ್ಯಾ ಉಕ್ರೈನ್ ಯುದ್ದದಿಂದ ಸಪ್ಲೈ ಚೈನ್ ನಲ್ಲಿ ಉಂಟಾದ ಕುಸಿತದ ಲಾಭವನ್ನು ಕಾರ್ಪೊರೇಟ್ ಸಂಸ್ಥೆಗಳು ಯಥೇಚ್ಛವಾಗಿ ಬಳಸಿಕೊಂಡವು. ತಮ್ಮ ಬೆಲೆಯನ್ನು ಸಾಮಾನ್ಯಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಏರಿಸಿದವು. ಅಂದರೆ ಸಾಮಾನ್ಯ ಪರಿಸ್ಥಿತಿಯಲ್ಲಿ ಎಷ್ಟು ಲಾಭ ಗಳಿಸುತ್ತಿದ್ದವು ಅದಕ್ಕಿಂತ ದುಪ್ಪಟ್ಟು ಲಾಭವನ್ನು ಅವು ಬಾಚಿಕೊಂಡವು. ಜನರ ಖರೀದಿ ಶಕ್ತಿ ಇದರಿಂದ ಕುಂಠಿತವಾಯ್ತು. ಕಾರ್ಪೊರೇಟ್ ಸಂಸ್ಥೆಗಳು ತಮ್ಮ ಲಾಭದಲ್ಲಿ ಒಂದಷ್ಟು ಪ್ರತಿಶತ ಕಡಿಮೆ ಮಾಡಿಕೊಂಡಿದ್ದರೂ ಯೂರೋಪು ಇಂದಿಗೆ ರಿಕವರಿ ದಾರಿಯಲ್ಲಿರುತ್ತಿತ್ತು .
  3. ಹೆಚ್ಚಿದ ಲೇಬರ್ ಕಾಸ್ಟ್: ಖರೀದಿ ಶಕ್ತಿ ಕಳೆದುಕೊಂಡ ಜನ ಸಹಜವಾಗೇ, ಹೆಚ್ಚಿನ ವೇತನದ ಬೇಡಿಕೆಯನ್ನು ಇಟ್ಟರು. ಕಾರ್ಪೊರೇಟ್ ಸಂಸ್ಥೆಗಳು ರಮಿಸುವ ಮತ್ತು ಕಿವಿ ಹಿಂಡುವ ಎರಡೂ ಕೆಲಸದಲ್ಲಿ ತೊಡಗಿಕೊಂಡು ಇನ್ನಷ್ಟು ಬಲಿಷ್ಠವಾಗುತ್ತಿವೆ. ಅಂದರೆ ತಮ್ಮ ಲಾಭದಲ್ಲಿ ಮಾತ್ರ ಯಾವುದೇ ಕಾರಣಕ್ಕೂ ಕುಸಿತವಾಗಬಾರದು. ಕೆಲಸಗಾರರಿಗೆ ಹೆಚ್ಚಿಸಿದ ವೇತನವನ್ನು ಸದ್ದಿಲ್ಲದೇ ಮತ್ತೆ ಜನತೆಗೆ ವರ್ಗಾಯಿಸಿ ಬಿಟ್ಟವು. ಹೀಗಾದಾಗ ಹಣದುಬ್ಬರ ಇಳಿಯುವುದು ಹೇಗೆ? ಹಣದುಬ್ಬರ ಸದ್ಯದ ಸ್ಥಿತಿಯಲ್ಲಿ ಇಳಿಯುವ ಸೂಚನೆಗಳಲಿಲ್ಲ. ಎಲ್ಲಿಯವರೆಗೆ ದೊಡ್ಡ ಕಾರ್ಪೊರೇಟ್ ಹೌಸ್ಗಳು ಈ ರೀತಿಯ ಸಣ್ಣ ಬುದ್ದಿಯನ್ನು ಬಿಡುವುದಿಲ್ಲ ಅಲ್ಲಿಯವರೆಗೆ ಇದು ತಪ್ಪಿದ್ದಲ್ಲ.
  4. ಹೆಚ್ಚಿದ ಬಡ್ಡಿ ದರ: ಹಣದುಬ್ಬರವನ್ನು ಕಡಿಮೆ ಮಾಡಲು ಬ್ಯಾಂಕ್ಗಳು ಬಡ್ಡಿದರವನ್ನು ಏರಿಸಿದವು. ಜಗತ್ತಿನಾದ್ಯಂತ ಇದು ಸಹಜವಾಗಿ ಮಾಡುವ ಕ್ರಿಯೆ ಇದರಲ್ಲಿ ತಪ್ಪಿಲ್ಲ. ಇಂದಿಗೆ ಯುರೋ ವಲಯದಲ್ಲಿ ಬಡ್ಡಿ ದರ 4 ಪ್ರತಿಶತವಿದೆ. ಇದು ಕರೋನಗೆ ಮುಂಚಿನ ಸ್ಥಿತಿಗಿಂತ 1 ಪ್ರತಿಶತ ಹೆಚ್ಚು. ಸಾಮಾನ್ಯವಾಗಿ 1.5 ಇಂದ 2.25ರ ಆಜುಬಾಜಿನಲ್ಲಿ ಇರುತ್ತಿದ್ದ ಬಡ್ಡಿ ದರ 4 ಪ್ರತಿಶತವಾಗಿದೆ. ಇದು ಎಲ್ಲಾ ರೀತಿಯ ಸಾಲ ಮಾಡುವವರಿಗೆ ಪೆಟ್ಟು. ಸಹಜವಾಗೇ ಇದರಿಂದ ಸಮಾಜದಲ್ಲಿ ಆರ್ಥಿಕ ವಹಿವಾಟು ಬ್ಯಾಕ್ ಸೀಟ್ ತೆಗೆದುಕೊಳ್ಳುತ್ತದೆ. ಡಿಮ್ಯಾಂಡ್ ಕುಸಿತವಾಗುತ್ತದೆ. ಇದರಿಂದ ಪ್ರೊಡಕ್ಷನ್ ಕೂಡ ಕುಸಿಯುತ್ತದೆ. ಇಡೀ ವ್ಯವಸ್ಥೆ ಯಾವ ತಳಹದಿಯ ಮೇಲೆ ಕಟ್ಟಲಾಗಿತ್ತು ಅದರ ಉದ್ದೇಶ ಕುಸಿತ ಕಾಣುತ್ತದೆ. ಪ್ರೊಡಕ್ಷನ್ -ಕಾನ್ಸುಮಶನ್ ಎನ್ನುವ ತೀರಾ ತೆಳು ದಾರದ ಮೇಲಿನ ನಡಿಗೆಯಲ್ಲಿ ಎಡುವುದು ತಪ್ಪಿಸಲಾಗುವುದಿಲ್ಲ.
  5. ಕುಸಿದ ಲೇಬರ್ ಪ್ರೊಡಕ್ಟಿವಿಟಿ : ಕರೋನೋತ್ತರ ಕೆಲಸದಲ್ಲಿನ ಕ್ಷಮತೆಯಲ್ಲಿ ಕುಸಿತ ಉಂಟಾಗಿದೆ. ಗಮನಿಸಿ ನೋ , ಹಣದುಬ್ಬರದ ಪ್ರಕಾರ ವೇತನ ಏರಿಸಿದ್ದು ಒಂದು ಕಡೆ ಮತ್ತೆ ಬೆಲೆಯೇರಿಕೆಗೆ ಕಾರಣವಾಗುತ್ತದೆ. ಅದರ ಜೊತೆಗೆ ಕರೋನಗೆ ಮುಂಚೆ ಒಬ್ಬ ವ್ಯಕ್ತಿ ದಿನದಲ್ಲಿ 10 ಪದಾರ್ಥಗಳನ್ನು ತಯಾರಿಸುತ್ತಿದ್ದ ಎಂದುಕೊಳ್ಳೋಣ. ಕರೋನೋತ್ತರ ಅದೇ ವ್ಯಕ್ತಿ ತಯಾರಿಸುವ ಪದಾರ್ಥ ದಿನದಲ್ಲಿ 7/8 ಆಗಿದೆ. ಅಂದರೆ ಆತನ ಕಾರ್ಯ ಕ್ಷಮತೆಯಲ್ಲಿ ಕುಸಿತ ಉಂಟಾಗಿದೆ. ಹತ್ತು ಪದಾರ್ಥ ತಯಾರಿಸಲು ದಿನಕ್ಕೆ ಹಿಂದೆ ನೀಡಿದ ವೇತನ 100 ಯುರೋ ಎಂದು ಕೊಳ್ಳೋಣ ಆಗ ಪದಾರ್ಥದ ಬೆಲೆಯ ಒಂದಂಶ, ಲೇಬರ್ ಕಾಸ್ಟ್ 10 ಯುರೋ ಆಯ್ತು. ಇದೀಗ ಆತನಿಗೆ ೧೧೦ ಯುರೋ ವೇತನ , ಆದರೆ ಆತ ಉತ್ಪಾದಿಸುವ ಪದಾರ್ಥ ದಿನಕ್ಕೆ ಕುಸಿತ ಕಂಡು 8ಕ್ಕೆ ಇಳಿದಿದೆ. ಈಗ ಪದಾರ್ಥದ ಲೇಬರ್ ಕಾಸ್ಟ್ 110/8 =13.75. ಹಣದುಬ್ಬರ ಎನ್ನುವುದು ಅತಿ ಸೂಕ್ಷ್ಮ ವಿಷಯ. ಇದನ್ನು ನಿಭಾಯಿಸಲು ನಿಪುಣತೆ ಬೇಕು.
  6. ಕುಸಿದ ರಫ್ತು: ಯಾವಾಗ ಪ್ರೊಡಕ್ಷನ್ ಕುಸಿತ ಕಾಣುತ್ತದೆ, ಸಹಜವಾಗೇ ರಫ್ತು ಕುಸಿತ ಕಾಣುತ್ತದೆ. ಡೊಮೆಸ್ಟಿಕ್ ಡಿಮ್ಯಾಂಡ್ ಕೂಡ ಕೆಲವೊಂದು ಬಾರಿ, ಕೆಲವೊಂದು ಪದಾರ್ಥಗಳಲ್ಲಿ ಪೂರೈಸಲು ಆಗುವುದಿಲ್ಲ. ಇದು ಆಮದು ಹೆಚ್ಚಳಕ್ಕೆ ಕಾರಣವಾಗುತ್ತದೆ. ಒಟ್ಟಾರೆ ಟ್ರೇಡ್ ಬ್ಯಾಲೆನ್ಸ್ ನಲ್ಲಿ ವ್ಯತ್ಯಯ ಉಂಟಾಗುತ್ತದೆ.

ಹೀಗೆ ಇನ್ನು ಹಲವಾರು ಸಣ್ಣಪುಟ್ಟ ಕಾರಣಗಳು ಜೊತೆಗೆ ಮನುಷ್ಯನ ಭಾವನೆಗಳು ತಾನೇ ಕಟ್ಟಿದ ನಂಬಿದ ವ್ಯವಸ್ಥೆಯನ್ನ ಕುಸಿಯುವಂತೆ ಮಾಡುತ್ತದೆ. ಇದರಿಂದ ಯೂರೋಪಿನ ಸಮಾಜದಲ್ಲಿ ಅನೇಕ ಬದಲಾವಣೆಗಾಳಿವೆ. ಕೆಲವು ಒಳ್ಳೆಯದು ಎನ್ನಿಸಬಹದು ಕೆಲವು ಕೆಟ್ಟವು ಅನ್ನಿಸಬಹದು. ಒಟ್ಟಿನಲ್ಲಿ ಆರ್ಥಿಕ ಕುಸಿತ ಅಲ್ಲಿನ ಸಮಾಜದಲ್ಲಿ ಕಣ್ಣಿಗೆ ಕಾಣುವ ಬದಲಾವಣೆ ತಂದಿರುವುದಂತೂ ದಿಟ. ಅವೇನು ಎನ್ನುವುದನ್ನ ನೋಡೋಣ .

  • ನಿರುದ್ಯೋಗ ಅಥವಾ ಅರೆಕಾಲಿಕ ಉದ್ಯೋಗದಿಂದ ಜನರ ಸಂಪಾದನೆಯಲ್ಲಿ ಕುಸಿತ ಕಂಡಿದೆ. ಇಲ್ಲಿನ ಸಮಾಜ ಭಾರತೀಯ ಸಮಾಜದಂತಲ್ಲ. ಇಲ್ಲಿ ಎಲ್ಲರೂ ಪ್ರತ್ಯೇಕ ಬದುಕಲು ಇಷ್ಟಪಡುತ್ತಾರೆ. ಆದರೆ ನಿರುದ್ಯೋಗ ಮತ್ತು ಸಂಪಾದನೆಯಲ್ಲಿ ಕುಸಿತ ಒಂದು ಪೀಳಿಗೆಯನ್ನ ಇನ್ನೊಂದು ಪೀಳಿಗೆಯೊಂದಿಗೆ ಇಷ್ಟವಿರಲಿ ಬಿಡಲಿ ಹೊಂದಿಕೊಂಡು ಬಾಳಲು ಒತ್ತಾಯ ಮಾಡಿದೆ. ಅಂದರೆ ಯುವ ಜನತೆ ಸ್ವತಃ ಬದುಕಲು, ಬಾಡಿಗೆ ಕಟ್ಟಲು ಸಾಧ್ಯವಿಲ್ಲದೆ ಹೆತ್ತವರ ಜೊತೆಯಲ್ಲಿ ಬದುಕಲು ಶುರುಮಾಡಿದ್ದಾರೆ .
  • 2005ರಿಂದ 2009 ರಲ್ಲಿ ಪದವಿ ಪಡೆದು ಹೊರಬಂದ ಒಂದು ಪೀಳಿಗೆ ತಮ್ಮ ಓದಿಗೆ ತಕ್ಕ ಉದ್ಯೋಗ ಸಿಗದೇ ದಿನದೂಡಲು ಸಿಕ್ಕ ಉದ್ಯೋಗವನ್ನ ಮಾಡಿಕೊಂಡು ಕಾಲ ತಳ್ಳುತ್ತಿದೆ, ಅನಂತರದ ವರ್ಷಗಳು ಕೂಡ ಏರುಗತಿಯನ್ನ ಕಾಣಲಿಲ್ಲ . ಅಚಾನಕ್ಕಾಗಿ ಎದುರಾದ ಕರೋನ ಜಗತ್ತನ್ನ ಬದಲಿಸ್ ಬಿಟ್ಟಿತು. ಗಮನಿಸಿ ಅಂದು 25ರ ತರುಣ ಅಥವಾ ತರುಣಿ ಇಂದಿಗೆ ನಲವತ್ತರ ಹತ್ತಿರಕ್ಕೆ ಬಂದಿರುತ್ತಾರೆ. ಕಾರ್ಪೊರೇಟ್ ವಲಯದಲ್ಲಿ ಈ ವಯೋಮಾನಕ್ಕೆ ತಕ್ಕ ಅನುಭವಿರದಿದ್ದರೆ ಪ್ರವೇಶ ಹೇಗೆ ಸಿಕ್ಕೀತು? ಅಮೇರಿಕಾ, ಇಂಗ್ಲೆಂಡ್, ಸ್ಪೇನ್, ಗ್ರೀಸ್, ಪೋರ್ಚುಗೀಸ್, ಇಟಲಿ ಜೊತೆಗೆ ಇನ್ನು ಹಲವಾರು ದೇಶಗಳಲ್ಲಿ ಲಕ್ಷಾಂತರ ಸಂಖ್ಯೆಯ ಈ ಸಮಯದಲ್ಲಿನ ಯುವ ಜನತೆ ಸಂಪಾದನೆಯಿಲ್ಲದೆ ತಮ್ಮ ಹಿರಿಯರು ಬದುಕಿದ ರೀತಿ ಬಾಳಲು ಆಗದೆ ಉನ್ನತಿಯನ್ನ ಕಾಣದೆ ಜೀವನವನ್ನ ಕಳೆದಿದ್ದಾರೆ/ ಕಳೆಯುತ್ತಿದ್ದಾರೆ.
  • ಹತ್ತು ವರ್ಷ ಹಿಂದೆ ಈ ದೇಶಗಳಲ್ಲಿ ಇದ್ದ ಮಧ್ಯವರ್ಗದ ಸಂಖ್ಯೆ ತೀವ್ರ ಕುಸಿತ ಕಂಡು. ಶ್ರೀಮಂತ ಮತ್ತು ಬಡವ ಎನ್ನುವ ಪ್ರಭೇದ ಹೆಚ್ಚಾಗುತ್ತಿದೆ. ಇವೆರೆಡರ ಮಧ್ಯದಲ್ಲಿದ್ದ ಜನ ನಿಧಾನವಾಗಿ ಬಡತನದ ಬಾಹುವಿಗೆ ಸಿಕ್ಕಿದ್ದಾರೆ .
  • ಗಮನಿಸಿ ಇವೆಲ್ಲಾ ಚಳಿ ದೇಶಗಳು. ಬೇಸಿಗೆಯ ಒಂದಷ್ಟು ತಿಂಗಳು ಬಿಟ್ಟರೆ ಮುಕ್ಕಾಲು ಪಾಲು ಚಳಿ! ಚಳಿಯಿಂದ ಬಚಾವಾಗಲು ಹೀಟರ್ ಗಳ ಅವಶ್ಯಕೆತೆ ಇರುತ್ತದೆ. ಹೀಗೆ ರಾತ್ರಿಯೆಲ್ಲ ಹೀಟರ್ ಬಳಸಿದರೆ ಹೆಚ್ಚಾಗುವ ವಿದ್ಯುತ್ ಬಿಲ್ ಕಟ್ಟುವರಾರು? ಹೀಗಾಗಿ ಚಳಿಯಿಂದ ಸಾವು ನೋವುಗಳ ಸುದ್ದಿಯೂ ಹೆಚ್ಚಾಗುತ್ತಿದೆ.
  • ಹಿರಿಯ ನಾಗರಿಕರು ಕಸದ ಡಬ್ಬದಲ್ಲಿ ತಿಂದು ಬಿಟ್ಟಿರುವ ತಿನ್ನುವ ಪದಾರ್ಥಗಳು ಏನಾದರೂ ಸಿಗುತ್ತದೆಯೇ? ಎಂದು ಹುಡಕುವುದು ಕೂಡ ಸಾಮಾನ್ಯ ದೃಶ್ಯ .
  • ಮನೆಯಿಲ್ಲದವರು ಅಥವಾ ಹೋಂ ಲೆಸ್ ಜನರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ರಸ್ತೆಯಲ್ಲಿ , ಪಾರ್ಕ್ಗಳಲ್ಲಿ ಮತ್ತು ಬ್ಯಾಂಕಿನ ಎಟಿಎಂ ಗಳಲ್ಲಿ ಮುದುಡಿ ಮಲಗುವರ ಸಂಖ್ಯೆ ಕೂಡ ಹೆಚ್ಚಾಗಿದೆ. ಮೆಟ್ರೋ, ರೈಲು ಮತ್ತು ಪ್ರವಾಸಿ ತಾಣಗಳ ಬಳಿ ಭಿಕ್ಷೆ ಬೇಡುವರ ಸಂಖ್ಯೆ ಹೆಚ್ಚಾಗಿದೆ .
  • ಪಿಕ್ ಪ್ಯಾಕೆಟ್ ನಿಂದ ಹಿಡಿದು ಇತರ ಕಳ್ಳತನಗಳು ಹೆಚ್ಚಾಗಿವೆ. ಸುಖ ಶಾಂತಿಯಿಂದ ಇದ್ದ ಸಮಾಜದಲ್ಲಿ ಕ್ರೈಂ ರೇಟ್ ಹೆಚ್ಚಾಗುತ್ತಿದೆ .
  • ನಾಳಿನ ಬಗ್ಗೆಯ ಭರವಸೆ ಇಲ್ಲದೆ ಯುವಜನತೆ ಇಂದಿಗೂ ಕಾಲ ಕಳೆಯಲು ಏನೋ ಒಂದು ಕೆಲಸ ಎನ್ನುವಂತೆ ಇದ್ದಾರೆ. ಇದು ಅವರನ್ನ ಸಿಗರೇಟು, ಮಾದಕ ದ್ರವ್ಯಗಳ ವ್ಯಸನಕ್ಕೆ ದೂಡುತ್ತಿವೆ.

ಕೊನೆಮಾತು: ಯೂರೋಪು ತನ್ನ ಹಿಂದಿನ ಆಕರ್ಷತೆಯನ್ನು ಉಳಿಸಿಕೊಂಡಿಲ್ಲ. ಹಣದುಬ್ಬರ ಒಂದು ಕಡೆ ಕಿತ್ತು ತಿನ್ನುತ್ತಿದ್ದರೆ, ಇನ್ನೊಂದು ಕಡೆ ಇಮಿಗ್ರೇಷನ್ ಎನ್ನುವ ಇನ್ನೊಂದು ದೊಡ್ಡ ಪಿಡುಗನ್ನು ಕೂಡ ಯೂರೋಪು ಅನುಭಸುತ್ತಿದೆ. ದೊಡ್ಡ ಮಾಲ್ಗಳಲ್ಲಿ ಹಿರಿಯ ನಾಗರಿಕರು ಗುಂಪಾಗಿ ಕುಳಿತು ಸಮಯ ಕಳೆಯುವುದು ಇಲ್ಲಿ ಸಾಮಾನ್ಯ ದ್ರಶ್ಯವಾಗಿದೆ. ಮನೆಯಲ್ಲಿ ಹೀಟರ್ ಹಾಕಲು ಹಣವೆಲ್ಲಿಂದ ತರುವುದು ? ಒಟ್ಟಿನಲ್ಲಿ ಚಳಿಗಾಲದ ಸಮಯ ಯೂರೋಪು ಇನ್ನಷ್ಟು ತತ್ತರಿಸುತ್ತದೆ. ಸದ್ಯದ ಮಟ್ಟಿಗೆ ಈ ಯುರೋ ವಲಯ ಪ್ರಗತಿ ಪಥದಲ್ಲಿ ಮರಳಿ ಸಾಗಲು ಸಮಯ ಬೇಡುತ್ತದೆ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com