ಹೂಡಿಕೆದಾರರು ಮಾಡುವ ಸಾಮಾನ್ಯ ತಪ್ಪುಗಳೇನು ಗೊತ್ತಾ? (ಹಣಕ್ಲಾಸು)

ಹಣಕ್ಲಾಸು-387-ರಂಗಸ್ವಾಮಿ ಮೂಕನಹಳ್ಳಿ
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ನಾನು ಸದಾ ಹೇಳುವ ಮಾತು 'ಹಣವನ್ನ ಹೂಡಿಕೆ ಮಾಡಿದವರೆಲ್ಲಾ ಹೂಡಿಕೆದಾರ ಅಥವಾ ಇನ್ವೆಸ್ಟರ್ ಎನ್ನಿಸಿಕೊಳ್ಳುವುದಿಲ್ಲ' ಎನ್ನುವುದು. ಸಾಮಾನ್ಯ ಹೂಡಿಕೆದಾರ ಅಥವಾ ಇನ್ವೆಸ್ಟರ್ ಮನಸ್ಥಿತಿ ಟ್ರೇಡರ್ನಂತೆ ಆಗೀಗ ವರ್ತಿಸಲು ಶುರು ಮಾಡುತ್ತದೆ. ಹೀಗಾಗಿ ಆತ ಷೇರು ಮಾರುಕಟ್ಟೆಯಲ್ಲಿ ಹಣವನ್ನ ಕಳೆದುಕೊಳ್ಳುತ್ತಾನೆ. ಟ್ರೇಡರ್ ಆದವರು ಹಣವನ್ನ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಎಷ್ಟು ಬೇಗ ಸಾಧ್ಯ ಅಷ್ಟು ಬೇಗ ಒಂದಷ್ಟು ಹಣ ಗಳಿಸುವ ಉದ್ದೇಶದಿಂದ, ಅವರಿಗೆ ಸಂಸ್ಥೆಯ ದೀರ್ಘಕಾಲದ ಅಭಿವೃದ್ಧಿಯ ಬಗ್ಗೆ ಹೆಚ್ಚಿನ ಒಲವು ಇರುವುದಿಲ್ಲ. ಒಂದೇ ಸಂಸ್ಥೆಯ ಷೇರುಗಳನ್ನ ಹಲವಾರು ಬಾರಿ ಕೊಂಡು ಮಾರುತ್ತಾರೆ. ಕೊಳ್ಳುವ ಮೌಲ್ಯಕ್ಕೂ ಮಾರುವ ಮೌಲ್ಯದ ನಡುವೆ ಒಂದಷ್ಟು ಲಾಭಂಶ ಕಂಡರೆ ಸಾಕು ಅದನ್ನ ಅವರು ಎನ್ಕ್ಯಾಷ್ ಮಾಡಿಕೊಳ್ಳುತ್ತಾರೆ.

ಮತ್ತೆ ನಾಳೆ ಮಾರಿದ ಬೆಲೆಗಿಂತ ಹೆಚ್ಚಿನ ಬೆಲೆಗೆ ಅದನ್ನ ಕೊಳ್ಳುವುದಿಲ್ಲ ಎನ್ನುವ ಯಾವ ಗ್ಯಾರಂಟಿ ಇರುವುದಿಲ್ಲ. ಆ ಷೇರಿನ ಮೌಲ್ಯ ಇನ್ನಷ್ಟು ಹೆಚ್ಚುತ್ತದೆ ಎನ್ನುವ ಸುಳಿವು ಸಿಕ್ಕರೆ ಮತ್ತೆ ಟ್ರೇಡ್ ಮಾಡುತ್ತಾರೆ. ಅದೇ ಇನ್ವೆಸ್ಟರ್ ದಿನ ನಿತ್ಯದ ಜಂಜಾಟದಲ್ಲಿ ಪಾಲ್ಗೊಳ್ಳಬಾರದು, ಆದರೆ ಗಮನಿಸಿ ಮೊದಲ ಸಾಲಿನಲ್ಲಿ ಹೇಳಿದ ಹಾಗೆ ಹೊಸ ಇನ್ವೆಸ್ಟರ್ ಅಥವಾ ಸಾಮಾನ್ಯ ಇನ್ವೆಸ್ಟರ್ ಮನಸ್ಥಿತಿ ಟ್ರೇಡರ್ ಮನಸ್ಥಿತಿಗಿಂತ ಬಹಳ ಬಿನ್ನವಾಗಿರುವುದಿಲ್ಲ. ಮಾರುಕಟ್ಟೆಯ ಏರಿಳಿತ ಆತನನ್ನ ಕೆಲವು ಸಾಮಾನ್ಯ ತಪ್ಪುಗಳನ್ನ ಮಾಡಲು ಪ್ರಚೋದಿಸುತ್ತವೆ. ಆ ಸಾಮಾನ್ಯ ತಪ್ಪುಗಳು ಯಾವುವು ಎನ್ನುವುದನ್ನ ಕೆಳಗಿನ ಸಾಲುಗಳಲ್ಲಿ ನಿಮಗೆ ಹೇಳಲಿದ್ದೇನೆ. ಈ ಲೇಖನವನ್ನು ವಾರಕೊಮ್ಮೆ ಅಥವಾ ಹದಿನೈದು ದಿನಕ್ಕೊಮ್ಮೆ ತಿರುವಿ ಹಾಕುವುದನ್ನ ಮರೆಯಬೇಡಿ. ಕಾರಣವಿಷ್ಟೆ ಈ ಸಾಮಾನ್ಯ ತಪ್ಪುಗಳು ಅರಿವಿಗೆ ಬಾರದೆ ಕ್ಷಣಾರ್ಧದಲ್ಲಿ ಘಟಿಸಿಬಿಡುತ್ತದೆ.

ಸದಾ ಟಿವಿಯ ಮುಂದೆ ಅಥವಾ ಕಂಪ್ಯೂಟರ್ ಪರದೆಯ ಮುಂದೆ ಕುಳಿತು ಮಾರುಕಟ್ಟೆಯ ಕ್ಷಣ ಕ್ಷಣದ ಬದಲಾವಣೆಯನ್ನ ಗಮನಿಸುವುದು: ಈ ಚಾಪ್ಟರ್ನ ಮೇಲಿನ ಸಾಲುಗಳಲ್ಲಿ  ಹೇಳಿದ್ದೇನೆ, ಹೀಗೆ ಮಾರುಕಟ್ಟೆಯ ಕ್ಷಣ ಕ್ಷಣದ ಬದಲಾವಣೆಯನ್ನ ಗಮನಿಸಿವವರನ್ನ ಟ್ರೇಡರ್ ಎನ್ನಲಾಗುತ್ತದೆ. ಒಬ್ಬ ಇನ್ವೆಸ್ಟರ್ ಎಂದಿಗೂ ಈ ತಪ್ಪು ಮಾಡಬಾರದು. ಮಾರುಕಟ್ಟೆಯಲ್ಲಿ ಆಗುತ್ತಿರುವ ಬದಲಾವಣೆಯ ಬಗ್ಗೆ ಅರಿವಿರಬೇಕು, ಅಂದ ಮಾತ್ರಕ್ಕೆ ಕ್ಷಣ ಕ್ಷಣದ ಬದಲಾವಣೆಯನ್ನ ಗಮನಿಸಬೇಕು ಎಂದಲ್ಲ. ಹೂಡಿಕೆ ಎನ್ನುವುದು ಕ್ಷಣದ ನಿರ್ಧಾರದ ಮೇಲೆ ಆಗುವಂತದ್ದಲ್ಲ, ಹೂಡಿಕೆಯನ್ನ ಹಲವಾರು ಮಾನದಂಡಗಳು ಪೂರ್ಣಗೊಂಡ ನಂತರ ತೆಗೆದುಕೊಂಡ ನಿರ್ಧಾರ. ಒಂದು ಒಳ್ಳೆಯ ಹೂಡಿಕೆ ಮಾಡುವುದು ಬಹಳ ಕಷ್ಟದ ಕೆಲಸ. ಆದರೆ ಅದನ್ನ ಮಾರಿಕೊಂಡು ಹೊರಗೆ ಬರುವುದು ಬಹಳ ಸುಲಭದ ಕೆಲಸ. ಪ್ರತಿ ನಿತ್ಯ, ಪ್ರತಿ ಕ್ಷಣ ಮಾರುಕಟ್ಟೆಯನ್ನ ವೀಕ್ಷಣೆ ಮಾಡುವುದರಿಂದ ಹೂಡಿಕೆಯಲ್ಲಿ ಅಲ್ಪ ಮಟ್ಟದ ಏರಿಕೆ ಕಂಡರೆ ಅಥವಾ ಅಲ್ಪ ಮಟ್ಟದ ಇಳಿಕೆ ಕಂಡರೆ ಅದನ್ನ ಮಾರುವಂತೆ ಮನಸ್ಸು ಪ್ರೇರೇಪಿಸುತ್ತದೆ. ಇದು ಸಹಜ. ಹೀಗಾಗಿ ಒಟ್ಟಾರೆ ಮಾರುಕಟ್ಟೆಯಲ್ಲಿ ಆಗುತ್ತಿರುವ ಬದಲಾವಣೆಯ ಬಗ್ಗೆ ಮಾಹಿತಿ ಪಡೆದುಕೊಳ್ಳುವುದು ತಪ್ಪಿಸಬಾರದು, ಆದರೆ ಕ್ಷಣ ಕ್ಷಣವೂ ಮಾರುಕಟ್ಟೆ ವೀಕ್ಷಿಸುವುದು ಹೂಡಿಕೆದಾರ ಮಾಡುವ ಅತಿ ಸಾಮಾನ್ಯ ತಪ್ಪು. ನೀವು ಒಬ್ಬ ಉತ್ತಮ ಹೂಡಿಕೆದಾರನಾಗಬೇಕಿದ್ದರೆ ಈ ತಪ್ಪನ್ನ ಮಾಡಬಾರದು.

ನಿತ್ಯವೂ ಮಾರುಕಟ್ಟೆಯಲ್ಲಿ ಹೊಸದೊಂದು ಟ್ರೆಂಡ್ ಶುರುವಾಗುತ್ತದೆ, ಅವುಗಳನ್ನ ಎಂದಿಗೂ ಬೆನ್ನೆತ್ತಬಾರದು: ನಿತ್ಯದ ಟ್ರೆಂಡ್ ಅಥವಾ ಟಿಪ್ಸ್ಗಳನ್ನ ಪಡೆದುಕೊಂಡು ದಿನದ ಲೆಕ್ಕಾಚಾರದಲ್ಲಿ ಲಾಭ ಅಥವಾ ನಷ್ಟವನ್ನ ಬರೆದುಕೊಳ್ಳುವವರು ಎಂದಿಗೂ ಹೂಡಿಕೆದಾರ ಎನ್ನಿಸಿಕೊಳ್ಳಲು ಸಾಧ್ಯವಿಲ್ಲ. ಇದು ನೇರವಾಗಿ ಮೊದಲನೇ ಅಂಶಕ್ಕೆ ಜೋಡಣೆಯಾಗಿದೆ. ನೀವು ಮೊದಲ ತಪ್ಪನ್ನ ಮಾಡದಿದ್ದಲ್ಲ, ಈ ತಪ್ಪು ಮಾಡಲು ಸಾಧ್ಯವಿಲ್ಲ. ಆದರೂ ಹಾಗೊಮ್ಮೆ ಹೀಗೊಮ್ಮೆ ಟ್ರೆಂಡ್ ನ ರಭಸ, ಶಕ್ತಿ ನೋಡಿ , ಕೇಳಿ ತಪ್ಪು ಮಾಡುವ ಸಾಧ್ಯತೆಯನ್ನ ಅಲ್ಲಗೆಳೆಯಲು ಬರುವುದಿಲ್ಲ. ಕೆಲವು ಟ್ರೆಂಡ್ಗಳು ಒಂದಷ್ಟು ಗಂಟೆಗಳ ನಂತರ ತಣ್ಣಗಾಗುತ್ತವೆ, ಕೆಲವೊಂದು ಒಂದಷ್ಟು ದಿನ, ವಾರ ನಡೆಯುತ್ತವೆ. ದೀರ್ಘಕಾಲದ ಗೇಮ್ ಪ್ಲಾನ್ ಇಟ್ಟುಕೊಂಡವರು ಈ ಸಣ್ಣ ಟ್ರ್ಯಾಪ್ ಗಳಿಗೆ ಎಂದೂ ಬಲಿಯಾಗಬಾರದು. ಅಂತಿಮ ಉದ್ದೇಶ, ಟಾರ್ಗೆಟ್ ಏನು ಎನ್ನುವುದನ್ನ ಹೂಡಿಕೆಯ ಹಂತದಲ್ಲಿ ನಿರ್ಧಾರ ಮಾಡಿಕೊಂಡಿದ್ದರೆ , ಆಗ ಇಂತಹ ಟ್ರೆಂಡ್ ಗಳಿಗೆ ಮನಸೋಲುವುದಿಲ್ಲ . ಆದರೆ ಕೆಲವೊಮ್ಮೆ ಇದು ಅತಿ ಪ್ರಚೋದಕಾರಿಯಾಗಿರುತ್ತದೆ. ಇದಕ್ಕೆ ಸಿಲುಕುವ ಮುನ್ನ ಯಾವ ಕಾರಣಕ್ಕೆ ಹೂಡಿಕೆ ಮಾಡಿದ್ದೆವು ಎನ್ನವುದನ್ನ ನೆನಪಿಸಿಕೊಂಡಾಗ ಇಂತಹ ತಪ್ಪಿನಿಂದ ಪಾರಾಗಬಹುದು.

ಸಿಕ್ಕಸಿಕ್ಕವರ ಸಲಹೆ, ಪುಕ್ಕಟೆ ಸಲಹೆ, ಟಿಪ್ಸ್ ಗಳಿಗೆ ಮನಸೋಲುವುದು: ನಮ್ಮಲ್ಲಿ ಒಂದಷ್ಟು ಅಲ್ಲಿಲ್ಲಿ ವಿಷಯ ಸಂಗ್ರಹಣೆ ಮಾಡಿ ತಾವಾಗೇ ಹೂಡಿಕೆ ಮಾಡುವವರ ಸಂಖ್ಯೆ ಬಹಳವಿದೆ.  ಹೀಗೆ ಪಡೆದುಕೊಂಡ ಮಾಹಿತಿಯ ಪೂರ್ವಾಪರ, ಅದರ ಸತ್ಯಾಸತ್ಯತೆ ಬಗ್ಗೆ ತಲೆಕೆಡಿಸಿಕೊಳ್ಳುವವರ ಸಂಖ್ಯೆ ಕೂಡ ಕಡಿಮೆ. ತಮ್ಮ ಸರ್ಕಲ್ ನಲ್ಲಿ, ಗ್ರೂಪ್ ನಲ್ಲಿ ಇದ್ದುದರಲ್ಲೇ ಬುದ್ದಿವಂತ ಎಂದು ಬಿಂಬಿಸಿಕೊಂಡ, ಅಥವಾ ಗೆಳೆಯರ ಗುಂಪು ಹಾಗೆಂದು ನಂಬಿದ ವ್ಯಕ್ತಿಗಳು ನಿಮ್ಮ ಪರವಾಗಿ ಯಾವಾಗ ಮಾರಬೇಕು, ಯಾವಾಗ ಕೊಳ್ಳಬೇಕು ಎನ್ನುವ ನಿರ್ಧಾರ ಕೈಗೊಳ್ಳುತ್ತಾರೆ. ಗಮನಿಸಿ ನೋಡಿ ಈ ರೀತಿಯ ಸಲಹೆ ನೀಡುವ ಸ್ನೇಹಿತರು ಅಥವಾ ವ್ಯಕ್ತಿಗಳು ನಿಮ್ಮಿಂದ ಅದಕ್ಕೆ ಹಣ ಕೇಳುವುದಿಲ್ಲ. ಅವರು ವೃತ್ತಿನಿರತರು ಕೂಡ ಅಲ್ಲ . ಪುಕ್ಕಟೆ ನೀಡಿದ ಸಲಹೆಗೆ ಬದ್ಧತೆಯನ್ನ ಹೇಗೆ ಬಯಸುವಿರಿ? ನಿಮಗೆ ಲಾಭವಾದರೆ ಹತ್ತು ಜನರ ಮುಂದೆ ನಾನೇ ಸಲಹೆ ಕೊಟ್ಟದ್ದು ಎಂದು ಹೇಳಿಕೊಂಡು ಓಡಾಡುತ್ತಾರೆ. ನಷ್ಟವಾದರೆ ಅದರ ಮಾತೆ ಆಡುವುದಿಲ್ಲ. ನೆನಪಿರಲಿ ಪುಕ್ಕಟೆ ಸಲಹೆಗೆ ಎಂದಿಗೂ ದುಬಾರಿ.

ಹೂಡಿಕೆಯಲ್ಲಿ ಎಮೋಷನ್ ಜೋಡಿಸಿಕೊಳ್ಳುವುದು: ಒಂದು ಉತ್ತಮ ಸಂಸ್ಥೆಯಲ್ಲಿ ಹೂಡಿಕೆ ಮಾಡಿದ ನಂತರ ಅದರ ಜೊತೆಗೆ ಭಾವನಾತ್ಮಕವಾಗಿ ಒಂದಷ್ಟು ಜನ ಕನೆಕ್ಟ್ ಆಗಿ ಬಿಡುತ್ತಾರೆ. ವ್ಯವಹಾರದಲ್ಲಿ ಭಾವನೆಗೆ ಎಂದಿಗೂ ಬೆಲೆಯಿಲ್ಲ ಎನ್ನುವುದನ್ನ ಹೂಡಿಕೆದಾರರು ಎಂದಿಗೂ ಮರೆಯಬಾರದು. ಈ ರೀತಿಯ ಭಾವನಾತ್ಮಕ ಜೋಡಣೆಯಿಂದ ಹೂಡಿಕೆಯ ಸಮಯದಲ್ಲಿನ ಉದ್ದೇಶ ಅಥವಾ ಗುರಿಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಯಿರುತ್ತದೆ. ಭಾರತೀಯ ಸಾಮಾನ್ಯ ಹೂಡಿಕೆದಾರರ ವಿಷಯದಲ್ಲಿ ಈ ಮಾತುಗಳು ಬಹಳ ಸತ್ಯ. ಉದಾಹರಣೆಗೆ ಟಿಸಿಎಸ್, ವಿಪ್ರೊ, ಇನ್ಫೋಸಿಸ್ ಮೇಲಿನ ಹೂಡಿಕೆಯನ್ನ ಇಂತಹ ಸಾಮಾನ್ಯ ಹೂಡಿಕೆದಾರರು ಪೂಜಿಸುತ್ತಾರೆ, ಆರಾಧಿಸುತ್ತಾರೆ. ತಮ್ಮ ಉದ್ದೇಶಿತ ಹೂಡಿಕೆಯ ಗುರಿ ಮುಟ್ಟಿದರೂ ಅದರಿಂದ ಹೊರಬರಲು ಅವರಿಗೆ ಆಗುವುದಿಲ್ಲ, ಎಮೋಷನಲ್ ಕನೆಕ್ಟ್ ಇದಕ್ಕೆ ಅಡ್ಡಿ ಬರುತ್ತದೆ. ಸಂಸ್ಥೆ ಎಷ್ಟೇ ಉತ್ತಮವಾಗಿರಲಿ ಏರಿಳಿತ ಎನ್ನುವುದು ಇದ್ದೆ ಇರುತ್ತದೆ. ಹೀಗಾಗಿ ನಷ್ಟವಾಗುವ ಸಂಭಾವ್ಯತೆ ಹೆಚ್ಚಾಗುತ್ತದೆ.

ನಷ್ಟದ ಹೂಡಿಕೆಯನ್ನ ಮಾರಲು ಸಿದ್ಧವಿಲ್ಲದೆ ಇರುವುದು: ಗಮನಿಸಿ ಎಲ್ಲಾ ಹೂಡಿಕೆದಾರರೂ ಲಾಭ ಮಾಡಬೇಕು ಎನ್ನುವ ಉದ್ದೇಶದಿಂದ ಹೂಡಿಕೆ ಮಾಡುತ್ತಾರೆ. ಆದರೆ ಕೆಲವೊಮ್ಮೆ ಅಂದುಕೊಂಡ ರೀತಿಯಲ್ಲಿ ಎಲ್ಲವೂ ಆಗುವುದಿಲ್ಲ. ಇದರರ್ಥ ಷೇರಿನ ಮೌಲ್ಯದಲ್ಲಿ ಕುಸಿತವಾದ ತಕ್ಷಣ ಮಾರಬೇಕು ಎಂದಲ್ಲ, ಬದಲಿಗೆ ಅದನ್ನ ಸರಿಯಾಗಿ ವಿಶ್ಲೇಷಣೆಗೆ ಹಚ್ಚಬೇಕು. ಕೆಲವೊಮ್ಮೆ ನಷ್ಟದಲ್ಲಿ ಮಾರಿಕೊಂಡು ಬರುವುದು ಹೆಚ್ಚಿನ ನಷ್ಟವನ್ನ ತಡೆಯಲು ಸಹಕಾರಿಯಾಗುತ್ತದೆ. ಇಲ್ಲಿ ಇನ್ನೊಂದು ಪ್ರಮುಖ ಅಂಶವನ್ನ ಗಮನಿಸಬೇಕು, ಯಾವುದನ್ನೂ ಇಷ್ಟೇ ಎಂದು ಹೇಳಲು ಬಾರದು, ಪ್ರತಿಯೊಂದನ್ನ ಅದರ ವಸ್ತುಸ್ಥಿತಿಗೆ ಅನ್ವಯಿಸಿ ಅನಲೈಸ್ ಮಾಡಬೇಕಾಗುತ್ತದೆ. ಹೆಚ್ಚಿನ ನಷ್ಟ ತಪ್ಪಿಸಲು ಕಡಿಮೆ ನಷ್ಟದಲ್ಲಿ ಮಾರಬೇಕಾದ ಸಂದರ್ಭದಲ್ಲಿ ಮಾರದೆ ಇರುವುದು ಕೂಡ ತಪ್ಪು. ಇಂತಹ ಸನ್ನಿವೇಶವನ್ನ ಹೇಗೆ ಗುರುತಿಸುವುದು? ಯಾವುದು ಸರಿ ಯಾವುದು ತಪ್ಪು? ಇವುಗಳ ವಿಶ್ಲೇಷಣೆಗೆ ನುರಿತ ವೃತ್ತಿನಿರತರ ಸಹಾಯ ಪಡೆಯುವುದು ಉತ್ತಮ.

ಅಪರ್ಚುನಿಟಿ ಕಾಸ್ಟ್ ಲೆಕ್ಕ ಹಾಕದೆ ಇರುವುದು: ಇದು ಅತ್ಯಂತ ಸಾಮಾನ್ಯ ತಪ್ಪು , ಆದರೆ ಇದು ತಪ್ಪು ಎನ್ನುವುದು ಕೂಡ ಬಹಳಷ್ಟು ಜನರ ಗಮನಕ್ಕೆ ಬರುವುದೇ ಇಲ್ಲ. ಅಪರ್ಚುನಿಟಿ ಕಾಸ್ಟ್ ಅಂದರೇನು ಗೊತ್ತೇ? ನಾವು ಇದೆ ಹಣವನ್ನ ಬೇರೆ ಸಂಸ್ಥೆಯ ಮೇಲೆ ಅಥವಾ ಬೇರೆಲ್ಲಾದರೂ ಹೂಡಿಕೆ ಮಾಡಿದ್ದರೆ ಅದರಿಂದ ಆಗುತ್ತಿದ್ದ ಬೆಳವಣಿಗೆಯನ್ನ, ಅಂತಹ ಒಂದು ಅಭಿವೃದ್ದಿಯನ್ನ ಕಳೆದುಕೊಂಡು ಇಲ್ಲಿ ಹೂಡಿಕೆ ಮಾಡಿರುತ್ತೇವೆ, ಹೀಗೆ ಬೇರೆಡೆ ಹೂಡಿಕೆಯಿಂದ ಬರುತ್ತಿದ್ದ ಸಂಭಾವ್ಯ ಲಾಭವನ್ನ ನಾವು ಅಪರ್ಚುನಿಟಿ ಕಾಸ್ಟ್ ಎನ್ನುತ್ತೇವೆ. ಹೀಗಾಗಿ ಹೂಡಿಕೆದಾರನಾದವನು ಸದಾ ಜಾಗ್ರತಾವಸ್ಥೆಯಲ್ಲಿ ಇರಬೇಕು. ಹೂಡಿಕೆಯ ಮೂಲ ಉದ್ದೇಶ ಹೆಚ್ಚಿನ ಲಾಭವನ್ನ ಮಾಡುವುದು. ಹೀಗಾಗಿ ಯಾವುದೇ ಅವಕಾಶವನ್ನ ಕಳೆದುಕೊಳ್ಳಬಾರದು.

ಗೆದ್ದ ಸಂಸ್ಥೆಯ, ಗೆದ್ದ ಷೇರುಗಳ ಮೇಲೆ ಹೂಡಿಕೆ ಮಾಡುವುದು: ಗೆಲುವು ಎಂದರೆ ಓಟ, ಓಡುವ ಕುದುರೆಯನ್ನ ಹತ್ತುವುದು ಕಷ್ಟ, ನಿಂತ ಕುದುರೆಯನ್ನ ಏರುವುದು ಸುಲಭ. ಗೆದ್ದ ಸಂಸ್ಥೆಯ ಷೇರುಗಳ ಬೆಲೆ ಗಗನಮುಖಿಯಾಗಿರುತ್ತದೆ. ಸಾಮಾನ್ಯವಾಗಿ ಎಲ್ಲರೂ ಮಾಡುವುದು ಬೆಲೆ ಹೆಚ್ಚಿದ್ದಾಗ, ಸಂಸ್ಥೆ ನಾಗಾಲೋಟದಲ್ಲಿ ಓಡುತ್ತಿರುವಾಗ ಅದರ ಷೇರುಗಳನ್ನ ಖರೀದಿ ಮಾಡುತ್ತಾರೆ, ಸ್ವಲ್ಪ ಹೆಚ್ಚು ಕಡಿಮೆಯಾದರೆ ಸಾಕು ಪ್ಯಾನಿಕ್ ಗೆ ಒಳಗಾಗಿ ಅವುಗಳನ್ನ ಮಾರಿ ಬಿಡುತ್ತಾರೆ. ಷೇರು ಮಾರುಕಟ್ಟೆಯ ಮೂಲಭೂತ ರೂಲ್ ಬೆಲೆ ಕಡಿಮೆ ಇದ್ದಾಗ ಕೊಳ್ಳಬೇಕು, ಜಾಸ್ತಿಯಾದಾಗ ಮಾರಬೇಕು ಆದರೆ ಗಮನಿಸಿ ನೋಡಿ ಸಾಮಾನ್ಯ ಹೂಡಿಕೆದಾರ ಇದಕ್ಕೆ ತದ್ವಿರುದ್ದ ಮಾಡುತ್ತಾನೆ. ಈ ತಪ್ಪನ್ನ ಮಾಡದಿರಲು ಪ್ರಯತ್ನಪೂರ್ವಕವಾಗಿ ಮನಸ್ಸನ್ನ ತರಬೇತುಗೊಳಿಸಬೇಕಾಗುತ್ತದೆ.

ಸಿದ್ದ ಸೂತ್ರಗಳಿಗೆ ಕಟ್ಟುಬೀಳುವುದು: ಇವತ್ತು ನೀವು ಮಾರುಕಟ್ಟೆಯನ್ನ ಗಮನಿಸಿ ನೋಡಿ , ಎಲ್ಲರೂ ವಾರೆನ್ ಬಫೆಟ್ ಅಥವಾ ರಾಕೇಶ್ ಜುನ್ಜುನ್ವಾಲಾ ಅವರ ಹೆಸರನ್ನ ಹೇಳಿಕೆಗಳನ್ನ, ಅವರ ತತ್ವ ಮತ್ತು ಸೂತ್ರಗಳನ್ನ ಶಿರಸಾವಹಿಸಿ ಪಾಲಿಸುವುದು ನೋಡುತ್ತೇವೆ. ಇಲ್ಲಿ ಎಲ್ಲಕ್ಕಿಂತ ಪ್ರಮುಖವಾಗಿ ಒಂದು ಅಂಶವನ್ನ ನಾವು ಕಂಡುಕೊಳ್ಳಬೇಕು, ಅದೇನೆಂದರೆ ಷೇರು ಮಾರುಕಟ್ಟೆಯಲ್ಲಿ ಯಾವ ಸೂತ್ರಗಳೂ ನಡೆಯುವುದಿಲ್ಲ, ಆದರೆ ಎಲ್ಲಾ ಸೂತ್ರಗಳು ನಡೆಯುತ್ತವೆ. ಅಂದರೆ ಎಲ್ಲಾ ಸೂತ್ರಗಳೂ ಬೇಕು ಆದರೆ ಅವುಗಳ ವ್ಯಾಖ್ಯಾನ ಸಮಯದಿಂದ ಸಮಯಕ್ಕೆ, ಒಂದು ಸಂಸ್ಥೆಯಿಂದ ಇನ್ನೊಂದು ಸಂಸ್ಥೆಗೆ ಬದಲಾಗುತ್ತದೆ. ನಾವು ಮಾತ್ರ ಬದಲಾಗದೆ ಸಿದ್ದ ಸೂತ್ರಕ್ಕೆ ಅಂಟಿಕೊಂಡು ಕುಳಿತರೆ ನಷ್ಟ ಕಟ್ಟಿಟ್ಟ ಬುತ್ತಿ. ಹೀಗಾಗಿ ವ್ಯಕ್ತಿ ಅದೆಷ್ಟೇ ಪ್ರಖ್ಯಾತನಿರಲಿ, ಅದೆಷ್ಟೇ ವರ್ಷದ ಅನುಭವ ಅವರಿಗಿರಲಿ, ಅದನ್ನ ಪ್ರಶ್ನಿಸದೆ, ಸಮಯಕ್ಕೆ ಹೊಂದುತ್ತದೆಯೇ? ಎಂದು ವಿವೇಚನೆ ಮಾಡದೆ ಪಾಲಿಸುವುದು ಎಂದಿಗೂ ಸಮ್ಮತವಲ್ಲ. ಹೂಡಿಕೆದಾರ ಕೆಲವು ಖ್ಯಾತನಾಮರನ್ನ ಹೀಗೆ ಕಣ್ಣುಮುಚ್ಚಿ ಫಾಲೋ ಮಾಡುತ್ತಾರೆ. ಇದು ಕೂಡ ತಪ್ಪು.

ಕೊನೆಮಾತು: ಸಾಮಾನ್ಯ ತಪ್ಪುಗಳಲ್ಲಿ ಬಹಳ ಮುಖ್ಯವಾದ ತಪ್ಪುಗಳನ್ನ ಮೇಲೆ ಪಟ್ಟಿಮಾಡಲಾಗಿದೆ. ಇಲ್ಲಿ ಹೂಡಿಕೆದಾರರು ಅತ್ಯಂತ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಇವುಗಳನ್ನ ಮೀರಿದ ಇನ್ನೂ ಹತ್ತು ತಪ್ಪುಗಳನ್ನ ಪಟ್ಟಿ ಮಾಡಬಹುದು ಎನ್ನುವುದು, ಒಬ್ಬ ಹೂಡಿಕೆದಾರ ಮಾರುಕಟ್ಟೆಯನ್ನ ತೆರೆದ ಕಣ್ಣುಗಳಿಂದ ಗಮನಿಸುತ್ತಾ ಇದ್ದರೆ ಆಗ ಅವರಿಗೆ ಇದೆ ರೀತಿಯ ಇನ್ನಷ್ಟು ಸಾಮಾನ್ಯ ತಪ್ಪುಗಳು ಗೋಚರವಾಗುತ್ತದೆ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com