ಅಡಿಸನ್ಸ್ ಕಾಯಿಲೆ (ಕುಶಲವೇ ಕ್ಷೇಮವೇ)

ಅಡಿಸನ್ಸ್ ಕಾಯಿಲೆಯು ಮಾನವರಲ್ಲಿ ಎಂಡೋಕ್ರೈನ್ (ಅಂತ:ಸ್ರಾವಕ ಗ್ರಂಥಿಗಳು) ಅಥವಾ ಹಾರ್ಮೋನ್ ಉತ್ಪಾದನಾ ವ್ಯವಸ್ಥೆಗೆ ಸಂಬಂಧಿಸಿದ ದೀರ್ಘಕಾಲದ ಅಪರೂಪದ ಕಾಯಿಲೆಯಾಗಿದೆ.
ಅಡಿಸನ್ಸ್ ಕಾಯಿಲೆ (ಸಾಂಕೇತಿಕ ಚಿತ್ರ)
ಅಡಿಸನ್ಸ್ ಕಾಯಿಲೆ (ಸಾಂಕೇತಿಕ ಚಿತ್ರ)

ಅಡಿಸನ್ಸ್ ಕಾಯಿಲೆಯು ಮಾನವರಲ್ಲಿ ಎಂಡೋಕ್ರೈನ್ (ಅಂತ:ಸ್ರಾವಕ ಗ್ರಂಥಿಗಳು) ಅಥವಾ ಹಾರ್ಮೋನ್ ಉತ್ಪಾದನಾ ವ್ಯವಸ್ಥೆಗೆ ಸಂಬಂಧಿಸಿದ ದೀರ್ಘಕಾಲದ ಅಪರೂಪದ ಕಾಯಿಲೆಯಾಗಿದೆ. ಈ ಸಮಸ್ಯೆ ಕಾಣಿಸಿಕೊಂಡಾಗ ಕಾರ್ಟಿಸೋಲ್ ಮತ್ತು ಅಲ್ಡೋಸ್ಟೆರಾನಿನಂತಹ ಹಾರ್ಮೋನುಗಳ ಪ್ರಮಾಣದಲ್ಲಿ ಇಳಿಕೆಯಾಗುತ್ತದೆ.

ಈ ಹಾರ್ಮೋನುಗಳು ವಿವಿಧ ದೈಹಿಕ ಕಾರ್ಯಗಳನ್ನು ನಿಯಂತ್ರಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ ಮತ್ತು ಅವುಗಳ ಕೊರತೆಯು ಹಲವಾರು ರೋಗಲಕ್ಷಣಗಳು ಮತ್ತು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಈ ರೋಗವು ನಿಧಾನವಾಗಿ ಬೆಳೆಯುತ್ತದೆ. ಪ್ರತಿ 15,000 ಜನರಲ್ಲಿ ಒಬ್ಬರಿಗೆ ಅಡಿಸನ್ಸ್ ಕಾಯಿಲೆ ಇದೆ. ಆದ್ದರಿಂದಲೇ ಇದೊಂದು ಅಪರೂಪದ ಕಾಯಿಲೆಯಾಗಿದೆ. ಪುರುಷರಿಗಿಂತ ಮಹಿಳೆಯರ ಮೇಲೆಯೇ ಈ ರೋಗ ಪರಿಣಾಮ ಬೀರುತ್ತದೆ ಎಂಬುದನ್ನು ಗಮನಿಸಲಾಗಿದೆ.

ಅಡಿಸನ್ಸ್ ಕಾಯಿಲೆಗೆ ಬ್ರಿಟಿಷ್ ವೈದ್ಯ ಡಾ. ಥಾಮಸ್ ಅಡಿಸನ್ ಅವರ ಹೆಸರಿಡಲಾಗಿದೆ. ಏಕೆಂದರೆ 1855ರಲ್ಲಿ ಅವರು ಈ ರೋಗಸ್ಥಿತಿಯನ್ನು ವಿವರಿಸಿದರು. ಅವರು ತಮ್ಮ ರೋಗಿಗಳಲ್ಲಿ ದೀರ್ಘಕಾಲದ ಆಯಾಸ, ತೂಕ ನಷ್ಟ ಮತ್ತು ಕಡಿಮೆ ರಕ್ತದೊತ್ತಡ ಸೇರಿದಂತೆ ರೋಗಲಕ್ಷಣಗಳನ್ನು ಗುರುತಿಸಿದರು ಮತ್ತು ಈ ಬಗ್ಗೆ ವ್ಯಾಪಕವಾದ ಸಂಶೋಧನೆಗಳನ್ನು ನಡೆಸಿದರು. 

ಅಡಿಸನ್ಸ್ ಕಾಯಿಲೆಯ ಪರಿಣಾಮಗಳು

ಅಡಿಸನ್ಸ್ ಕಾಯಿಲೆಯ ಪ್ರಾಥಮಿಕ ಕಾರಣಗಳಲ್ಲಿ ಸ್ವಯಂನಿರೋಧಕ (ಆಟೋಇಮ್ಯೂನ್) ಅಸ್ವಸ್ಥತೆಗಳು ಸೇರಿವೆ. ದೇಹದ ರಕ್ಷಣಾ ವ್ಯವಸ್ಥೆಯು ಮೂತ್ರಜನಕಾಂಗದ ಗ್ರಂಥಿಗಳ ಮೇಲೆ ತಪ್ಪಾಗಿ ದಾಳಿ ಮಾಡುತ್ತದೆ. ಇದರ ಪರಿಣಾಮವಾಗಿ ಮೂತ್ರಜನಕಾಂಗದ ಗ್ರಂಥಿಗಳು ಸಾಕಷ್ಟು ಪ್ರಮಾಣದಲ್ಲಿ ಕಾರ್ಟಿಸೋಲ್ ಮತ್ತು ಅಲ್ಡೋಸ್ಟೆರಾನ್ ಹಾರ್ಮೋನುಗಳನ್ನು ಉತ್ಪಾದಿಸಲು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ಕ್ಷಯರೋಗ, ಮೂತ್ರಜನಕಾಂಗದ ಗ್ರಂಥಿಗಳ ಮೇಲೆ ಪರಿಣಾಮ ಬೀರುವ ಕೆಲವು ಕ್ಯಾನ್ಸರ್ ಅಥವಾ ಅಪರೂಪದ ಆನುವಂಶಿಕ ದೋಷಗಳಂತಹ ಸೋಂಕುಗಳ ಕಾರಣದಿಂದ ಕೆಲವು ಸಂದರ್ಭಗಳಲ್ಲಿ ಸ್ಟೀರಾಯಿಡ್ಡುಗಳನ್ನು ಬಹುಕಾಲ ಬಳಸುವುದರಿಂದ ಮೂತ್ರಜನಕಾಂಗದ ಸಮಸ್ಯೆಗೆ ಕಾರಣವಾಗಬಹುದು.

ಅಡಿಸನ್ಸ್ ಕಾಯಿಲೆಯ ಲಕ್ಷಣಗಳು

ಸಾಮಾನ್ಯವಾಗಿ ಅಡಿಸನ್ಸ್ ಕಾಯಿಲೆ 30 ರಿಂದ 50 ವರ್ಷ ವಯಸ್ಸಿನ ನಡುವೆ ಪ್ರಾರಂಭವಾಗುತ್ತದೆ. ಆಯಾಸ, ದೌರ್ಬಲ್ಯ, ತೂಕ ನಷ್ಟ, ಕಡಿಮೆ ರಕ್ತದೊತ್ತಡ, ಚರ್ಮದ ಕಪ್ಪಾಗುವಿಕೆ, ತೀವ್ರವಾಗಿ ಉಪ್ಪು ಸೇವಿಸುವ ಬಯಕೆ, ಸ್ನಾಯು ಮತ್ತು ಕೀಲು ನೋವು ಮತ್ತು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಈ ರೋಗದ ಲಕ್ಷಣಗಳಾಗಿವೆ. ತೀವ್ರ ಸಂದರ್ಭಗಳಲ್ಲಿ ಮೂತ್ರಜನಕಾಂಗಕ್ಕೆ ಹೆಚ್ಚಿನ ಹಾನಿಯಾಗಬಹುದು. ಹೊಟ್ಟೆ, ಕೆಳ ಬೆನ್ನು ಅಥವಾ ಕಾಲುಗಳಲ್ಲಿ ಹಠಾತ್ ನೋವು, ತೀವ್ರ ವಾಂತಿ ಅಥವಾ ಅತಿಸಾರ, ಸುಸ್ತು, ನಿರ್ಜಲೀಕರಣ ಮತ್ತು ಕಡಿಮೆ ರಕ್ತದೊತ್ತಡದಂತಹ ಹಠಾತ್ ಮತ್ತು ತೀವ್ರ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಮಹಿಳೆಯರಲ್ಲಿ ಈ ರೋಗಲಕ್ಷಣಗಳ ಹೊರತಾಗಿ ಅನಿಯಮಿತ ಋತುಚಕ್ರದ ಸಮಸ್ಯೆಗಳು ಕಾಣಿಸಬಹುದು.

ಅಡಿಸನ್ಸ್ ಕಾಯಿಲೆಯ ನಿರ್ಣಯವು ಆರಂಭಿಕ ಹಂತಗಳಲ್ಲಿ ಕಷ್ಟಕರ. ರೋಗಲಕ್ಷಣಗಳು ಮತ್ತು ವೈದ್ಯಕೀಯ ಇತಿಹಾಸದ ಆಧಾರದ ಮೇಲೆ (ಹಿಂದಿನ ಕಾಯಿಲೆಗಳು ಮತ್ತು ಅವುಗಳ ಚಿಕಿತ್ಸೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ರೋಗಿಗಳಿಗೆ ವೈದ್ಯರು ಕೇಳುವ ಮೂಲಕ) ಮತ್ತು ದೈಹಿಕ ಪರೀಕ್ಷೆಯನ್ನೂ ಮಾಡಬಹುದು. ಹಾರ್ಮೋನ್ ಮಟ್ಟ ಪರೀಕ್ಷಿಸಲು ಪ್ರಯೋಗಾಲಯ ಪರೀಕ್ಷೆಯನ್ನು ಮತ್ತು ಕ್ಯಾಲ್ಸಿಯಂ ಶೇಖರಣೆಯನ್ನು ಪರೀಕ್ಷಿಸಲು ಕಿಬ್ಬೊಟ್ಟೆಯ ಮತ್ತು ಶ್ರೋಣಿಯ ಭಾಗಗಳ ಎಕ್ಸ್ ರೇ ಮಾಡಿಸಲು ಶಿಫಾರಸು ಮಾಡಬಹುದು. 

ಅಡಿಸನ್ಸ್ ಕಾಯಿಲೆಗೆ ಚಿಕಿತ್ಸೆಗಳು

ಈ ರೋಗಕ್ಕೆ ಹಾರ್ಮೋನುಗಳ ಚಿಕಿತ್ಸೆಯನ್ನು ನೀಡಬಹುದು. ವೈದ್ಯರು ನೀಡುವ ಔಷಧಿಗಳು ಮೂತ್ರಜನಕಾಂಗ ಸರಿಯಾಗಿ ಹಾರ್ಮೋನುಗಳನ್ನು ತಯಾರಿಸಲು ಸಹಾಯ ಮಾಡುತ್ತದೆ. ಚಿಕಿತ್ಸೆಯು ತಕ್ಷಣದ ರೋಗಿಯ ಸ್ಥಿತಿಯನ್ನು ಎಚ್ಚರಿಕೆಯಿಂದ ನಿರ್ವಹಣೆ ಮಾಡುವುದನ್ನು ಒಳಗೊಂಡಿದೆ. ಆದರೂ ಈ ಕಾಯಿಲೆ ಆಜೀವ ಪರ್ಯಂತದ ಅನಾರೋಗ್ಯಕರ ಸ್ಥಿತಿಯಾಗಿದೆ. ಇದಕ್ಕೆ ಯಾವುದೇ ಚಿಕಿತ್ಸೆ ಇಲ್ಲದಿದ್ದರೂ ಬದುಕಿರುವಷ್ಟು ಕಾಲ ಹಾರ್ಮೋನ್ ರಿಪ್ಲೇಸ್‌ಮೆಂಟ್ ಥೆರಪಿಯನ್ನು ರೋಗಿಗಳಿಗೆ ನೀಡಬಹುದು. ಅಡಿಸನ್ಸ್ ಕಾಯಿಲೆ ಇರುವ ವ್ಯಕ್ತಿಗಳು ತಮ್ಮ ಹಾರ್ಮೋನ್ ಮಟ್ಟದ ಮೇಲೆ ಗಮನವಿಡಲು, ರೋಗಲಕ್ಷಣಗಳನ್ನು ನಿರ್ವಹಿಸಲು ಮತ್ತು ಇದರಿಂದ ಉಂಟಾಗುವ ಸಮಸ್ಯೆಗಳನ್ನು ಪರಿಹರಿಸಲು ವೈದ್ಯರು ಮತ್ತು ಅವರ ತಂಡದೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು. ಸರಿಯಾದ ಚಿಕಿತ್ಸೆ ಮತ್ತು ರೋಗಲಕ್ಷಣಗಳ ನಿರ್ವಹಣೆಯೊಂದಿಗೆ ಅವರು ಸಾಮಾನ್ಯ ಮತ್ತು ಆರೋಗ್ಯಕರ ಜೀವನವನ್ನು ನಡೆಸಬಹುದು.

ಅಡಿಸನ್ಸ್ ಕಾಯಿಲೆಯನ್ನು ಗುಣಪಡಿಸಬಹುದೇ?

ಅಡಿಸನ್ಸ್ ಕಾಯಿಲೆಯನ್ನು ಸಂಪೂರ್ಣವಾಗಿ ತಡೆಗಟ್ಟಲಾಗುವುದಿಲ್ಲ. ಆದರೆ ಆರೋಗ್ಯಕರ ಜೀವನಶೈಲಿಯಿಂದ ಮೂತ್ರಜನಕಾಂಗದ ಕಾರ್ಯ ಉತ್ತಮವಾಗುತ್ತದೆ. ಆದ್ದರಿಂದ ನಿಯಮಿತ ವ್ಯಾಯಾಮ, ಒತ್ತಡ ನಿರ್ವಹಣೆ ಮತ್ತು ಸಮತೋಲಿತ ಆಹಾರವನ್ನು ಸೇವನೆಯು ಬಹಳ ಮುಖ್ಯ. ಅಡಿಸನ್ಸ್ ಕಾಯಿಲೆಯೊಂದಿಗೆ ಬದುಕಲು ಮಾನಸಿಕ ಸ್ಥಿರತೆ, ಪುಷ್ಟಿ ಮತ್ತು ಸಕಾರಾತ್ಮಕ ದೃಷ್ಟಿಕೋನದ ಅಗತ್ಯವಿದೆ. ಈ ರೋಗದ ಸ್ಥಿತಿಯನ್ನು ಅರ್ಥಮಾಡಿಕೊಂಡು ಚಿಕಿತ್ಸಾ ಯೋಜನೆಯ ಸೂಕ್ತ ಅನುಷ್ಠಾನ ಮತ್ತು ಅಗತ್ಯ ಜೀವನಶೈಲಿ ಹೊಂದಾಣಿಕೆಗಳನ್ನು ಮಾಡಿಕೊಳ್ಳುವ ಇದನ್ನು ನಿರ್ವಹಿಸಬಹುದು. ಸರಿಯಾದ ಬೆಂಬಲ ಮತ್ತು ಸ್ವಯಂ-ಆರೈಕೆಯೊಂದಿಗೆ ಯಾವುದೇ ಸಮಸ್ಯೆಯನ್ನಾದರೂ ಎದುರಿಸಬಹುದು. ಈ ಕಾರಣಕ್ಕಾಗಿಯೇ ಈ ರೋಗದ ಮತ್ತು ಇದರ ಚಿಕಿತ್ಸೆಯ ಬಗ್ಗೆ ಜನರಲ್ಲಿ ಅರಿವನ್ನು ಮೂಡಿಸಲು ಪ್ರತಿ ವರ್ಷ ಮೇ 20ರಂದು ಅಂತರರಾಷ್ಟ್ರೀಯ ಅಡಿಸನ್ಸ್ ಕಾಯಿಲೆಯ ದಿನವನ್ನು ಆಚರಿಸಲಾಗುತ್ತದೆ.

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com