ಸಿದ್ದರಾಮಯ್ಯ
ಸಿದ್ದರಾಮಯ್ಯ

ಮತ್ತೊಂದು ಬಂಡಾಯಕ್ಕೆ ಸಿದ್ದರಾಮಯ್ಯ ತಯಾರಿ? (ಸುದ್ದಿ ವಿಶ್ಲೇಷಣೆ)

-ಯಗಟಿ ಮೋಹನ್ಸಿದ್ದರಾಮಯ್ಯ ಮತ್ತೆ ಕೋಲಾರ ಜಿಲ್ಲೆ ಮುಖಂಡರ ಆಗ್ರಹಕ್ಕೆ ಮಣಿದು ಮತ್ತೆ ತಮ್ಮ ನಿಲುವು ಬದಲಾಯಿಸಿದ್ದಾರೆ. ಇದರ ಹಿಂದೆ ದೂರಗಾಮಿ ಲೆಕ್ಕಾಚಾರಗಳಿವೆ.

ಬಂಡಾಯ ಅಥವಾ ಸಂಧಾನ…. ಯಾವುದು ಮುಂದಿನ ದಾರಿ? ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ  ಎದುರಿಸುತ್ತಿರುವ ಪರಿಸ್ಥಿತಿ ಇದು. ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿಯೂ ಬಿಡುಗಡೆ ಆಗಿದ್ದು ಅದರಲ್ಲಿ ಕೋಲಾರ ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಪ್ರಕಟಿಸಿಲ್ಲ.

ವರುಣಾ ಕ್ಷೇತ್ರದ ಜತೆಗೆ ಕೋಲಾರ ಕ್ಷೇತ್ರದಿಂದಲೂ ಸ್ಪರ್ಧಿಸಲು ಮತ್ತೆ ಆಸಕ್ತಿ ವ್ಯಕ್ತಪಡಿಸಿದ್ದಾರಾದರೂ ಕಾಂಗ್ರೆಸ್ ಹೈಕಮಾಂಡ್ ಇನ್ನೂ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ. ಇದು ಅವರನ್ನು ಆತಂಕಕ್ಕೆ ದೂಡಿದೆ. ಇದೇ ವೇಳೆ ಸಿದ್ದರಾಮಯ್ಯಅವರಿಗೆ ಎರಡು ವಿಧಾನಸಭಾ ಕ್ಷೇತ್ರಗಳಿಂದ ಸ್ಪರ್ಧಿಸಲು ಅವಕಾಶ ನೀಡುವ ಬಗ್ಗೆ ಮೂಲ ಕಾಂಗ್ರೆಸ್ಸಿಗರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಇಂತಹ ಅವಕಾಶವನ್ನು ತಮಗೂ ನೀಡಬೇಕೆಂಬ ಬೇಡಿಕೆಯನ್ನು ಹಿರಿಯ ಕಾಂಗ್ರೆಸ್ ನಾಯಕ ಡಾ. ಜಿ.ಪರಮೇಶ್ವರ್ ಕೂಡಾ ಇಟ್ಟಿದ್ದಾರೆ. ಇದು ಹೈಕಮಾಂಡ್ ನ್ನು ಚಿಂತೆಗೀಡು ಮಾಡಿದೆ.

ಸಿದ್ದರಾಮಯ್ಯ ಬೇಡಿಕೆಯನ್ನು ಒಪ್ಪಿದರೂ ಕಷ್ಟ , ಬಿಟ್ಟರೂ  ಕಷ್ಟ ಎಂಬ ಇಕ್ಕಟ್ಟಿನ ಸ್ಥಿತಿ ಹೈಕಮಾಂಡ್ ದು. ಬೇಡಿಕೆ ಒಪ್ಪಿದರೆ ಮೂಲ ಕಾಂಗ್ರೆಸ್ಸಿಗರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ಒಪ್ಪದಿದ್ದರೆ ಚುನಾವಣೆ ಸಂದರ್ಭದಲ್ಲಿ ಸಿದ್ದರಾಮಯ್ಯ ಪಕ್ಷದ ಎಲ್ಲ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಹೋಗದೇ ಇರುವ ಮೂಲಕ ತಮ್ಮ ಅಸಮಧಾನವನ್ನು ಪ್ರಕಟಿಸಬಹುದು  ಅದರಿಂದ ಹಾನಿಯೇ ಹೆಚ್ಚು. ಕೋಲಾರದಲ್ಲೂ ಸ್ಪರ್ಧೆಗೆ ಅವಕಾಶ ನೀಡಿದರೆ ಅವರ ಮುಂದೆ ಹೈಕಮಾಂಡ್  ಮಂಡಿಯೂರಿದಂತೆ ಆಗುತ್ತದೆ, ಆಗ ಕಾಂಗ್ರೆಸ್ ವರಿಷ್ಠ ಮಂಡಳಿ ತನ್ನ ಪಕ್ಷದ ಸಾಮಾನ್ಯ ಮುಖಂಡನೊಬ್ಬನನ್ನು ನಿಯಂತ್ರಿಸಲಾಗದ ಅಸಹಾಯಕ ಪರಿಸ್ಥಿತಿಗೆ ಮುಟ್ಟಿದೆ ಎಂಬ ಟೀಕೆಗಳು ಪ್ರತಿಪಕ್ಷಗಳ ಕಡೆಯಿಂದ ಬರಲೂಬಹುದು ಹೀಗಾಗಿ ಸಿದ್ದರಾಮಯ್ಯ ಸ್ಪರ್ಧೆ ವಿಚಾರದಲ್ಲಿ ಸ್ಪಷ್ಟ ನಿಲುವಿಗೆ ಬರಲು ಸಾಧ್ಯವಾಗದೇ ಕಾಂಗ್ರೆಸ್ ಹೈಕಮಾಂಡ್ ಇಕ್ಕಟ್ಟಿನ ಸ್ಥಿತಿ ಎದುರಿಸುತ್ತಿದೆ.  ಇಷ್ಟೆಲ್ಲ ಆಂತರಿಕ ಸಮಸ್ಯೆಗಳಿದ್ದರೂ ಕಡೇ ಗಳಿಗೆಯಲ್ಲಿ ಅವರ ಬೇಡಿಕೆಯನ್ನು ಹೈಕಮಾಂಡ್ ಒಪ್ಪಲೂ ಬಹುದು ಎಂಬ ಸುದ್ದಿ ದಿಲ್ಲಿಯ ಕಾಂಗ್ರೆಸ್ ಪಡಸಾಲೆಯಿಂದ ಬಂದಿದೆ.

ಈ ಮೊದಲು ಕೋಲಾರದಿಂದ ಸ್ಪರ್ಧಿಸಲು ಬಯಸಿದ್ದ ಸಿದ್ದರಾಮಯ್ಯ ಹಲವು ಸಮೀಕ್ಷೆಗಳ ನಂತರ ಅಲ್ಲಿಂದ ಸ್ಪರ್ಧಿಸುವ ಬಗ್ಗೆ ಆಸಕ್ತಿ ತೋರಿರಲಿಲ್ಲ. ಕಾಂಗ್ರೆಸ್ ನ ದಿಲ್ಲಿಯ ನಾಯಕರೂ ಈ ಬಗ್ಗೆ ಅವರ ಮನವೊಲಿಸಿ ಅಲ್ಲಿನ ಪರಿಸ್ಥಿತಿ ಅನುಕೂಲಕರವಾಗಿಲ್ಲದ ಕಾರಣ ಸ್ಪರ್ಧೆ ಬೇಡ, ವರುಣಾದಿಂದ ಮಾತ್ರ ಸ್ಪರ್ಧಿಸಿ ಎಂದೂ ತಿಳಿ ಹೇಳಿದ್ದರು. ಇದಕ್ಕೆ ಒಪ್ಪಿದ್ದ ಸಿದ್ದರಾಮಯ್ಯ ಮತ್ತೆ ಕೋಲಾರ ಜಿಲ್ಲೆ ಮುಖಂಡರ ಆಗ್ರಹಕ್ಕೆ ಮಣಿದು ಮತ್ತೆ ತಮ್ಮ ನಿಲುವು ಬದಲಾಯಿಸಿದ್ದಾರೆ. ಇದರ ಹಿಂದೆ ದೂರಗಾಮಿ ಲೆಕ್ಕಾಚಾರಗಳಿವೆ.

ಒಂದು ವೇಳೆ ಎರಡೂ ಕ್ಷೇತ್ರಗಳಿಂದ ಗೆದ್ದರೆ ವರುಣಾ ಕ್ಷೇತ್ರದ ಪ್ರಾತನಿಧ್ಯಕ್ಕೆ ರಾಜೀನಾಮೆ ನೀಡಿ ಕೋಲಾರವನ್ನು ಉಳಿಸಿಕೊಳ್ಳುವುದು ನಂತರ ನಡೆಯುವ ಉಪ ಚುನಾವಣೆಯಲ್ಲಿ ಹಾಲಿ ಶಾಸಕ ತಮ್ಮ ಪುತ್ರ ಡಾ. ಯತೀಂದ್ರ ಅವರನ್ನು ಗೆಲ್ಲಿಸಿಕೊಳ್ಳುವುದು ಆ ಮೂಲಕ ಕೋಲಾರ ಮೈಸೂರು ಸೇರಿದಂತೆ ಹಳೇ ಮೈಸೂರು ಪ್ರಾಂತ್ಯದ ಮೇಲೆ ತಮ್ಮ ಹಿಡಿತ ಸಾಧಿಸುವುದು ಮತ್ತು ಇದೇ ಅವಕಾಶವನ್ನು ಬಳಸಿಕೊಂಡು ಪಕ್ಷ ಹೆಚ್ಚು ಸ್ಥಾನ ಗಳಿಸಿ ಅಧಿಕಾರಕ್ಕೆ ಬರುವ ಸನ್ನಿವೇಶ ನಿರ್ಮಾಣವಾದರೆ ಮುಖ್ಯಮಂತ್ರಿ ಪಟ್ಟಕ್ಕೆ ಆಗ್ರಹಿಸುವುದು ಸಿದ್ದರಾಮಯ್ಯ ಲೆಕ್ಕಾಚಾರ.

ಇದನ್ನು ಮುಂಚಿತವಾಗೇ ಗ್ರಹಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಲ್ಲಿರುವ ಸಿದ್ದರಾಮಯ್ಯ ವಿರೋಧಿ ಪಡೆ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆಗೆ  ಅವಕಾಶ ನೀಡಿದರೆ ಮುಂದೆ  ಪಕ್ಷದಲ್ಲಿ ಸಿದ್ದರಾಮಯ್ಯ ಪ್ರಭುತ್ವಕ್ಕೇ ತಲೆ ಬಾಗಬೇಕಾದ ಸನ್ನಿವೇಶ ನಿರ್ಮಾಣವಾಗಬಹುದು ಆಗ ಮತ್ತೆ ಅವರೇ ಮೇಲುಗೈ ಸಾಧಿಸಿದರೆ ಭವಿಷ್ಯದಲ್ಲಿ ಮೂಲ ಕಾಂಗ್ರೆಸ್ಸಿಗರ ಅಸ್ತಿತ್ವವೇ ಇಲ್ಲದಂತಾಗಿ ಇಡೀ ಪಕ್ಷವನ್ನು ಸಿದ್ದರಾಮಯ್ಯ ಮತ್ತು ಅವರ ಬೆಂಬಲಿಗರೇ ಆವರಿಸಿಕೊಳ್ಳಬಹುದು ಎಂಬುದನ್ನು ಅರಿತೇ ಅವರ ವಿರುದ್ಧ ತಂತ್ರ ರೂಪಿಸಿದೆ.

ಬಹು ಮುಖ್ಯವಾಗಿ ಈ ಬಾರಿಯ ಚುನಾವಣೆಗೆ ಕಾಂಗ್ರೆಸ್ ಬಿಡುಗಡೆ ಮಾಡಿರುವ  ಎರಡು ಪಟ್ಟಿಗಳಲ್ಲಿ ಪೂರ್ಣವಾಗಿ ಸಿದ್ದರಾಮಯ್ಯ ಮಾತು ನಡೆದಿಲ್ಲ. ರಾಜ್ಯದ ರಾಜಕಾರಣದ ಅತಿ ಸೂಕ್ಷ್ಮ ಸಂಗತಿಗಳನ್ನು ಅರಿತಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಭ್ಯರ್ಥಿಗಳ ಆಯ್ಕೆಯಲ್ಲಿ ಸಾಕಷ್ಟು ಸಮತೋಲನ ಕಾಯ್ದುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಆದರೂ ಅಲ್ಲಲ್ಲಿ ಟಿಕೆಟ್ ಸಿಗದವರು ಬಂಡಾಯದ ಕಹಳೆ ಊದಿದ್ದಾರಾದರೂ ಅದು ಪಕ್ಷಕ್ಕೆ ಅಂತಹ ಅಪಾಯ ತಂದೊಡ್ಡುವ ಸನ್ನಿವೇಶ ಸದ್ಯಕ್ಕೆ ಕಾಣುತ್ತಿಲ್ಲ,

ಬಹು ಮುಖ್ಯವಾಗಿ ಸಿದ್ದರಾಮಯ್ಯ ಬೆಂಬಲಿಗರೇ ಮೇಲುಗೈ ಸಾಧಿಸುವುದನ್ನು ತಡೆಯುವಲ್ಲಿ ಶಿವಕುಮಾರ್ ಯಶಸ್ವಿಯಾಗಿದ್ದಾರೆ ಎಂಬುದಕ್ಕೆ ವರುಣಾ ಹಾಗೂ ನಂಜನಗೂಡು ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಅವರು ಅನುಸರಿಸಿರುವ ಲೆಕ್ಕಾಚಾರದ ನಡೆ ಫಲ ಕೊಟ್ಟಿದೆ. ನಂಜನಗೂಡು ವಿಧಾನಸಭಾ ಕ್ಷೇತ್ರಕ್ಕೆ ಪುತ್ರ ಸುನಿಲ್ ಬೋಸ್ ಅವರನ್ನು ಕಣಕ್ಕಿಳಿಸಿ, ಟಿ.ನರಸೀಪುರದಿಂದ ತಾನು ಅಭ್ಯರ್ಥಿಯಾಗುವ ಲೆಕ್ಕಚಾರದಲ್ಲಿದ್ದ ಸಿದ್ದರಾಮಯ್ಯ ಕಟ್ಟಾ ಬೆಂಬಲಿಗ, ಮಾಜಿ ಸಚಿವ ಡಾ. ಮಹದೇವಪ್ಪ ಅವರ ಪ್ರಯತ್ನವನ್ನು ಆರಂಭದಲ್ಲೇ ವಿಫಲಗೊಳಿಸಿದ ಡಿ.ಕೆ.ಶಿವಕುಮಾರ್, ನಂಜನಗೂಡಿಗೆ ಮಾಜಿ ಸಂಸದ ದಿವಂಗತ ಧ್ರವನಾರಾಯಣ್ ಪುತ್ರನನ್ನು ಅಭ್ಯರ್ಥಿಯಾಗಿಸುವ ಮೂಲಕ ಮಹದೇವಪ್ಪ ಪ್ರಯತ್ನವನ್ನು ವಿಫಲಗೊಳಿಸಿದ್ದಾರೆ.

ಇತ್ತ ವರುಣಾದಲ್ಲಿ ಪುತ್ರ, ಹಾಲಿ ಶಾಸಕ ಡಾ. ಯತೀಂದ್ರ ನನ್ನು ಕಣಕ್ಕಿಳಿಸಿ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸಲು ಮುಂದಾಗಿದ್ದ ಸಿದ್ದರಾಮಯ್ಯ ನವರಿಗೆ ಹೈಕಮಾಂಡ್ ಮೂಲಕವೇ ಆ ಕ್ಷೇತ್ರ ಸುರಕ್ಷಿತವಲ್ಲ  ನೀವು ವರುಣಾದಲ್ಲೇ ಸ್ಪರ್ಧಿಸಿ ಎಂದು ಮನವೊಲಿಸುವ ಮೂಲಕ ಸಿದ್ದರಾಮಯ್ಯ ಪ್ರಾಬಲ್ಯಕ್ಕೆ ತಡೆಯೊಡ್ಡಿದ್ದಾರೆ. ಕೋಲಾರದಲ್ಲಿ ಸಿದ್ದರಾಮಯ್ಯ ಒಂದು ವೇಳೆ  ಸ್ಪರ್ಧಿಸಿದರೂ ಗೆಲುವು ಸದ್ಯದ ಪರಿಸ್ಥಿತಿಯಲ್ಲಿ ಸುಲಭವಲ್ಲ. ವರುಣಾದಲ್ಲಿ ಪ್ರಬಲ ಸಮುದಾಯಗಳ ವಿರೋಧದ ಜತೆಗೇ ಬಿಜೆಪಿಯ ಚಕ್ರವ್ಯೂಹವನ್ನು ಭೇದಿಸಿ ಅವರು ಗೆಲ್ಲಬೇಕಾಗಿದ್ದರೆ, ಕೋಲಾರದಲ್ಲಿ ಸ್ವಪಕ್ಷೀಯರೆ ಕೈಕೊಡುವ ಭೀತಿಯೂ ಅವರಲ್ಲಿದೆ. 

ಚಿಕ್ಕಮಗಳೂರು, ತರೀಕೆರೆ, ಹಾಗೂ ಬೆಂಗಳೂರಿನ ಪುಲಿಕೇಶಿ ನಗರ ಸೇರಿದಂತೆ ಕೆಲವು ಕ್ಷೆತ್ರಗಳ ಅಭ್ಯರ್ಥಿಗಳ ಪಟ್ಟಿ ಇನ್ನೂ ಅಂತಿಮವಾಗಿಲ್ಲ. ಈ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಈ ಇಬ್ಬರು ನಾಯಕರ ನಡುವೆ ಸಹಮತ ಮೂಡಿಲ್ಲ. ಕಡೂರು ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಖಾತರಿಯ ಭರವಸೆಯೊಂದಿಗೆ ಕಾಂಗ್ರೆಸ್ ಸೇರಿದ್ದ ಮಾಜಿ ಪ್ರಧಾನಿ ದೇವೇಗೌಡರ ಒಂದು ಕಾಲದ ಶಿಷ್ಯ , ಮಾಜಿ ಶಾಸಕ ವೈ.ಎಸ್.ವಿ ದತ್ತಗೂ ಟಿಕೆಟ್ ಸಿಗದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾದ ಶಿವಕುಮಾರ್ ಆ ಕ್ಷೇತ್ರದಿಂದ ಕುರುಬ ಸಮುದಾಯದ ಕಟ್ಟಾ ಕಾಂಗ್ರೆಸ್ ಮುಖಂಡ ಕೆ.ಎಸ್. ಆನಂದ್ ಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕುರುಬ ಸಮುದಾಯಕ್ಕೆ ಟಿಕೆಟ್ ಕೊಡಿಸಿದಂತೆಯೂ ಆಯಿತು ಸಿದ್ದರಾಮಯ್ಯ ಪ್ರಾಬಲ್ಯ ಮುರಿದಂತೆಯೂ ಆಯಿತು ಎಂಬ ತಂತ್ರ ಫಲ ಕೊಟ್ಟಿದೆ. ಇನ್ನು ಬೆಂಗಳೂರಿನ ಪುಲಿಕೇಶಿ ನಗರದಲ್ಲಿ ಹಾಲಿ ಶಾಸಕ ಹಾಗೂ ಸಿದ್ದರಾಮಯ್ಯ ಕಟ್ಟಾ ಬೆಂಬಲಿಗ ಅಖಂಡ ಶ್ರೀನಿವಾಸ ಮೂರ್ತಿಯವರಿಗೆ ಟಿಕೆಟ್ ನೀಡುವ ವಿಚಾರದಲ್ಲಿ ಕ್ಷೇತ್ರದಲ್ಲಿ ಅಧಿಕ ಸಂಖ್ಯೆಯಲ್ಲಿರುವ ಮುಸ್ಲಿಂ ಮುಖಂಡರೇ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಅಲ್ಲಿ ಅವರಿಗೆ ಟಿಕೆಟ್ ತಪ್ಪಿದರೆ ಆಶ್ಚರ್ಯ ಏನಿಲ್ಲ. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದರೆ ಕಾಂಗ್ರೆಸ್ ಪಕ್ಷದಲ್ಲಿ ಒಂದು ಕಾಲಕ್ಕೆ ಮುಖ್ಯಮಂತ್ರಿಯಾಗಿ ಪ್ರಶ್ನಾತೀತ ನಾಯಕರಾಗಿ ಮೆರೆದಿದ್ದ ಸಿದ್ದರಾಮಯ್ಯ ನವರ ಏಕ ಚಕ್ರಾಧಿಪಥ್ಯಕ್ಕೆ ಮೂಲ ಕಾಂಗ್ರೆಸ್ಸಿಗರು ತಡೆಗೋಡೆಯಾಗಿರುವುದು ಕಂಡು ಬರುತ್ತದೆ.

ಈ ಬೆಳವಣಿಗೆ ಅರಿತಿರುವ ಸಿದ್ದರಾಮಯ್ಯ ಈಗ ಕೆಲವು ಟಿ.ವಿ. ಚಾನಲ್ ಗಳಿಗೆ ನೀಡಿರುವ ಸಂದರ್ಶನದಲ್ಲಿ ಚುನಾವಣೆ ನಂತರ ಪಕ್ಷ  ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಹುದ್ದೆಗೆ ತಾನೂ ಆಕಾಂಕ್ಷಿ ಎಂಬ ಸಂದೇಶವನ್ನು ನೀಡುವುದರ ಜತೆಗೇ ಹಿಂದಿನಂತೆ ಹೈಕಮಾಂಡ್ ಕವರ್ ಸಂಸ್ಕೃತಿ ನಡೆಯುವುದಿಲ್ಲ ಬದಲಾಗಿ ಶಾಸಕರೇ ಸೇರಿ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುತ್ತಾರೆ ಎಂದಿರುವುದು ಮುಂದಿನ ಬಂಡಾಯದ ಸೂಚನೆ ಎಂದೂ ಹೇಳಲಾಗುತ್ತಿದೆ. ಒಂದು ವೇಳೆ ಕಾಂಗ್ರೆಸ್ ಬಹುಮತ ಗಳಿಸಿ ಅಧಿಕಾರಕ್ಕೆ ಬರುವ ಸನ್ನಿವೇಶ ನಿರ್ಮಾಣವಾದರೆ ತನ್ನನ್ನೇ ಮುಖ್ಯಮಂತ್ರಿ ಹುದ್ದೆಗೆ ಪರಿಗಣಿಸುವಂತೆ ಬೆಂಬಲಿಗ ಶಾಸಕರ ಮೂಲಕ ಹೈಕಮಾಂಡ್ ಮೇಲೆ ಒತ್ತಡ ಹೇರುವುದು ಅದು ನಡೆಯದಿದ್ದಾಗ ಬಂಡಾಯ ಎದ್ದು ಪ್ರತ್ಯೇಕ ಗುಂಪಾಗಿ ಉಳಿಯುವುದು ಸಿದ್ದರಾಮಯ್ಯ ಆಲೋಚನೆ ಇರುವಂತೆ ಕಾಣುತ್ತಿದೆ.

ಕಾಂಗ್ರೆಸ್ ನಲ್ಲಿ ಒಂದು ರೀತಿಯ ಚಡಪಡಿಕೆಯ ಸ್ಥಿತಿ ಅನುಭವಿಸುತ್ತಿರುವ ಅವರಿಗೆ ಪಕ್ಷ ರಾಷ್ಟ್ರೀಯ ಮಟ್ಟದಲ್ಲೂ ಬಲಯುತವಾಗಿಲ್ಲ ಎಂಬ ಅಂಶ ಮನವರಿಕೆ ಆಗಿದೆ. ಹೀಗಾಗೇ ಅವರು ಮತ್ತೊಂದು ಸುತ್ತಿನ ಅಂತರ್ಯುದ್ಧಕ್ಕೆ ಅಣಿಯಾಗುತ್ತಿದ್ದಾರೆ. ಪಕ್ಷದಲ್ಲಿ ಈಗ ನಡೆಯುತ್ತಿರುವ ಮುಸುಕಿನ ಗುದ್ದಾಟ ಚುನಾವಣಾ ಫಲಿತಾಂಶದ ನಂತರ ಬೀದಿಗೆ ಬಂದರೂ ಆಶ್ಚರ್ಯ ಪಡಬೇಕಿಲ್ಲ. ಸದ್ಯಕ್ಕಂತೂ ಸಿದ್ದರಾಮಯ್ಯ ಮೌನಿಯಾಗಿದ್ದಾರೆ. ಆದರೆ ಇದೇ ಮೌನ ಇನ್ನು ಒಂದೂವರೆ ತಿಂಗಳ ನಂತರವೂ ಇರುತ್ತದೆ ಎಂದು ಹೇಳಲಾಗುವುದಿಲ್ಲ.

ಯಗಟಿ ಮೋಹನ್
yagatimohan@gmail.com

Related Stories

No stories found.

Advertisement

X
Kannada Prabha
www.kannadaprabha.com