ಒಣ ಚರ್ಮ ಅಥವಾ ಡ್ರೈ ಸ್ಕಿನ್ ಸಮಸ್ಯೆ (ಕುಶಲವೇ ಕ್ಷೇಮವೇ)

ಒಣ ಚರ್ಮ ಇತ್ತೀಚೆಗೆ ಹಲವಾರು ಜನರಲ್ಲಿ ಕಂಡುಬರುತ್ತಿದೆ. ಹೀಗಾಗಿ ಇದೊಂದು ಸಾಮಾನ್ಯ ಸಮಸ್ಯೆ ಎನ್ನುವಂತೆಯೇ ಆಗಿದೆ. ಸ್ತ್ರೀ ಪುರುಷರಿಬ್ಬರಲ್ಲಿಯೂ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಒಣ ಚರ್ಮ
ಒಣ ಚರ್ಮ
Updated on

ಒಂದು ದಿನ ಸಂಜೆ ನನ್ನ ಕ್ಲಿನಿಕ್ಕಿಗೆ ಸುಮಾರು 24-25 ವರ್ಷದ ಯುವತಿಯೊಬ್ಬಳು ಬಂದು “ಡಾಕ್ಟರ್, ನೋಡಿ ಚರ್ಮ ಇತ್ತೀಚೆಗೆ ತುಂಬಾ ಡ್ರೈ ಆಗಿದೆ. ಯಾವಾಗಲೂ ಒಣಗಿದಂತಿದ್ದು ಸ್ವಲ್ಪವು ಮೃದುತನ ಇಲ್ಲ. ಒಮ್ಮೊಮ್ಮೆ ಇದರಿಂದ ಕಿರಿಕಿರಿ ಎನಿಸುತ್ತದೆ” ಎಂದು ಹೇಳಿದರು. ನಾನು ಅವಳನ್ನು ಪರೀಕ್ಷಿಸಿದಾಗ ಆಕೆ ತುಂಬಾ ಮೇಕಪ್ ಮಾಡಿಕೊಳ್ಳುವುದು ಗಮನಕ್ಕೆ ಬಂತು. ಒಣ ಚರ್ಮ ಸಮಸ್ಯೆಗೆ ಅತಿಯಾಗಿ ಸೌಂದರ್ಯ ಪ್ರಸಾಧನಗಳ (ಕಾಸ್ಮೆಟಿಕ್ಸ್) ಬಳಕೆಯೂ ಒಂದು ಕಾರಣ ಎಂದು ಅದನ್ನು ಸರಿಮಾಡಿಕೊಳ್ಳಲು ತೆಗೆದುಕೊಳ್ಳಬೇಕಾದ ಕ್ರಮಗಳು ಮತ್ತು ಸಲಹೆಯನ್ನು ನೀಡಿ ಕಳಿಸಿದೆ.

ಒಣ ಚರ್ಮ ಇತ್ತೀಚೆಗೆ ಹಲವಾರು ಜನರಲ್ಲಿ ಕಂಡುಬರುತ್ತಿದೆ. ಹೀಗಾಗಿ ಇದೊಂದು ಸಾಮಾನ್ಯ ಸಮಸ್ಯೆ ಎನ್ನುವಂತೆಯೇ ಆಗಿದೆ. ಸ್ತ್ರೀ ಪುರುಷರಿಬ್ಬರಲ್ಲಿಯೂ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಒಣ ಚರ್ಮವು ಎಲ್ಲಾ ವಯಸ್ಸಿನವರ ಮೇಲೆ ಪರಿಣಾಮ ಬೀರುತ್ತದೆ. ಅವರನ್ನು ವಯಸ್ಸಾದಂತೆ ಕಾಣುವಂತೆ ಮಾಡುತ್ತದೆ. ಮಕ್ಕಳನ್ನು ಇದು ಬಾಧಿಸಬಹುದು ಎನ್ನುವುದನ್ನು ನಾವು ನೆನಪಿನಲ್ಲಿಡಬೇಕು.

ಒಣ ಚರ್ಮ ಸಮಸ್ಯೆಗೆ ಕಾರಣಗಳು

ಚರ್ಮದ ಪ್ರಕಾರಗಳನ್ನು ಸ್ಥೂಲವಾಗಿ ಮೂರು ವರ್ಗಗಳಾಗಿ ವಿಂಗಡಿಸಲಾಗಿದೆ - ಒಣ, ಎಣ್ಣೆಯುಕ್ತ ಮತ್ತು ಸಂಯೋಜಿತ (ಡ್ರೈ, ಆಯಿಲಿ ಮತ್ತು ಕಾಂಬಿನೇಷನ್). ಚರ್ಮದ ಪ್ರಕಾರವು ಅನುವಂಶೀಯತೆಯಿಂದ ನಿರ್ಧರಿಸಲ್ಪಡುತ್ತದೆ. ಇದಲ್ಲದೇ ದಿನಂಪ್ರತಿ ಬಿಸಿ ಬಿಸಿ ನೀರಿನಿಂದ ಸ್ನಾನ, ವಿಟಮಿನ್ ಕೊರತೆ, ಹವಾಮಾನ ಬದಲಾವಣೆ, ಕಠಿಣವಾದ ಸಾಬೂನು ಮತ್ತು ಚರ್ಮದ ರಕ್ಷಣೆಯ ಉತ್ಪನ್ನಗಳಲ್ಲಿ ರಾಸಾಯನಿಕವಾಗಿ ಬಳಸುವುದರಿಂದಲೂ ಒಣ ಚರ್ಮ ಉಂಟಾಗುವ ಸಾಧ್ಯತೆಯಿದೆ. ಕೆಲವೊಮ್ಮೆ ಥೈರಾಯ್ಡ್ ಕಾಯಿಲೆ ಮತ್ತು ಮಧುಮೇಹವು ತೀವ್ರವಾದ ಒಣ ಚರ್ಮದ ಸಮಸ್ಯೆಯನ್ನು ಉಂಟುಮಾಡಬಹುದು.

ವಯಸ್ಸಾದಂತೆ ನಮ್ಮ ಚರ್ಮವು ಕಡಿಮೆ ಎಣ್ಣೆಯನ್ನು ಉತ್ಪಾದಿಸುತ್ತದೆ ಮತ್ತು ಶುಷ್ಕತೆಗೆ ಹೆಚ್ಚು ಒಳಗಾಗುತ್ತದೆ. ತಂಪು ವಾತಾವರಣ ಚರ್ಮದ ಮೇಲೆ ಕಠಿಣ ಪರಿಣಾಮ ಬೀರಬಹುದು, ಆಗ ಚರ್ಮಕ್ಕೆ ಅಗತ್ಯವಿರುವ ತೇವಾಂಶ ಕಡಿಮೆಯಾಗಿ ಚರ್ಮ ಒಣಗುತ್ತದೆ. ಕೆಲವೊಮ್ಮೆ ಧೂಮಪಾನ ಮತ್ತು ಆಲ್ಕೋಹಾಲ್ ಸೇವನೆಯು ಚರ್ಮದಲ್ಲಿ ನಿರ್ಜಲೀಕರಣಕ್ಕೆ ಕಾರಣವಾಗಬಹುದು, ಜೊತೆಗೆ ಒತ್ತಡ ಮತ್ತು ನಿದ್ರೆಯ ಕೊರತೆಯಂತಹ ಇತರ ಜೀವನಶೈಲಿಯ ಅಂಶಗಳಿಗೆ ಕಾರಣವಾಗಬಹುದು. ಇದಲ್ಲದೇ ಎಕ್ಸಿಮಾ, ಸೋರಿಯಾಸಿಸ್ ಮತ್ತು ಡರ್ಮಟೈಟಿಸ್‌ನಂತಹ ಪರಿಸ್ಥಿತಿಗಳು ಚರ್ಮವು ಒಣಗಲು ಕಾರಣವಾಗಬಹುದು. ದಿನನಿತ್ಯ ಬಳಸುವ ಲೋಷನ್, ಕ್ರೀಮಿನಂತಹ ಸ್ಕಿನ್‌ಕೇರ್ ಉತ್ಪನ್ನಗಳು, ಕೆಮಿಕಲ್ ಗಳನ್ನು ಬಳಸಿ ತಯಾರಿಸಿರುವ ಪೌಡರ್, ಸೋಪುಗಳು, ಶ್ಯಾಂಪೂಗಳು ಮತ್ತು ಮಾಯಿಶ್ಚರೈಸರ್‌ಗಳು ಸೇರಿದಂತೆ ಚರ್ಮದ ಆರೋಗ್ಯದ ಮೇಲೆ ಪ್ರಭಾವ ಬೀರಿ ಒಣಗುವಿಕೆಗೆ ದಾರಿ ಮಾಡಿಕೊಡಬಹುದು.

ಒಣ ಚರ್ಮ ಸಮಸ್ಯೆಯ ಲಕ್ಷಣಗಳು

ಶವರ್ ಅಥವಾ ಮುಖ ತೊಳೆದ ನಂತರ ಚರ್ಮದಲ್ಲಿ ಬಿಗಿತ, ನಿರಂತರ ಒರಟುತನ ಮತ್ತು ತುರಿಕೆ, ಚರ್ಮ ಸುಲಿಯುತ್ತಾ ಬರುವುದು, ಸುಕ್ಕುಗಳು ಕಾಣಿಸಿಕೊಳ್ಳುವುದು, ಕೆಂಪಾಗುವುದು ಮತ್ತು ಉರಿಯೂತ ಇವು ಒಣಚರ್ಮದ ಕೆಲವು ಲಕ್ಷಣಗಳು. ಕೆಲವೊಮ್ಮೆ ಚರ್ಮ ಒಣಗಲು ನಾವು ಬಟ್ಟೆಗಳು ಕೂಡ ಕಾರಣವಾಗಬಹುದು. ಸೂಕ್ಷ್ಮ ಚರ್ಮವನ್ನು ಹೊಂದಿದ್ದರೆ ಕೆಲವು ಬಟ್ಟೆಗಳು ಚರ್ಮದ ಮೇಲೆ ಗೀರು ಮತ್ತು ನೋವು ಉಂಟುಮಾಡುತ್ತದೆ. ಶುಷ್ಕತೆ, ಕೆಂಪು ಮತ್ತು ತುರಿಕೆ ಮುಂತಾದ ಸೂಕ್ಷ್ಮ ಚರ್ಮದ ರೋಗಲಕ್ಷಣಗಳು ಬರುವುದು ಬಟ್ಟೆಗಳಿಂದ ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಸರಿಯಾದ ಬಟ್ಟೆ ಆಯ್ಕೆಯು ಚರ್ಮವನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಬಿಸಿಯಾದ ಗಾಳಿ ಚರ್ಮದಿಂದ ತೇವಾಂಶ ಕಸಿದುಕೊಳ್ಳುತ್ತದೆ. ಆದ್ದರಿಂದ ಶುಷ್ಕತೆ ಕಡಿಮೆ ಮಾಡಲು ಮನೆಯಲ್ಲಿ ಹ್ಯೂಮಿಡಿಫೈಯರ್ ಬಳಸಿ. ಗ್ಯಾಸ್ ಮತ್ತು ಎಲೆಕ್ಟ್ರಿಕ್ ಹೀಟ್ ಗಾಳಿಯಿಂದ ತೇವಾಂಶವನ್ನು ತೆಗೆಯುತ್ತದೆ.

ಒಣ ಚರ್ಮ ಸಮಸ್ಯೆಗೆ ಮನೆಮದ್ದು

ತೆಂಗಿನ ಎಣ್ಣೆ, ಹರಳೆಣ್ಣೆ, ಎಳ್ಳೆಣ್ಣೆ, ತುಪ್ಪ, ಜೇನುತುಪ್ಪ ಅಥವಾ ಬೆಣ್ಣೆಯು ಒಣ ಚರ್ಮ, ಒಡೆದ ಹಿಮ್ಮಡಿಗಳು, ಕೈಗಳು ಮತ್ತು ತುಟಿಗಳಿಗೆ ಚಿಕಿತ್ಸೆ ನೀಡಲು ಉತ್ತಮ ಪರಿಹಾರವಾಗಿದೆ. ಇತ್ತೀಚೆಗೆ ಸಾವಯವ (ಆರ್ಗಾನಿಕ್) ರೀತಿಯಲ್ಲಿ ಈ ಎಣ್ಣೆಗಳನ್ನು ತಯಾರಿಸುತ್ತಾರೆ. ಅವುಗಳನ್ನು ಬಳಸಿದರೂ ಸರಿಯೇ. ಕಾಲಿನಲ್ಲಿ ತೊಂದರೆಯಿದ್ದರೆ ದಪ್ಪ ಮತ್ತು ಮೃದುವಾಗಿರುವ ಕಾಲುಚೀಲ ಧರಿಸಬೇಕು.

ಕಡಲೆ ಹಿಟ್ಟನ್ನು ಕೆನೆಭರಿತ ಹಾಲಿನಲ್ಲಿ ಕಲಸಿ ಮುಖ ಮತ್ತು ಕೈಕಾಲುಗಳಿಗೆ ಲೇಪಿಸಿ ಹದಿನೈದು ನಿಮಿಷ ಬಿಟ್ಟು ಬೆಚ್ಚನೆಯ ತೊಳೆದರೆ ಉತ್ತಮ. ಪ್ರತಿನಿತ್ಯ ಸೋಪುಗಳನ್ನು ಬಳಸುವ ಬದಲು ಹಾಲಿನೊಂದಿಗೆ ಕಡಲೆಹಿಟ್ಟು ಬೆರೆಸಿ ಬಳಸಿ ಚರ್ಮವನ್ನು ಸ್ವಚ್ಛಗೊಳಿಸಿ. ಲೋಳಸರ (ಅಲೋವಿರಾ) ರಸವನ್ನು ಚರ್ಮಕ್ಕೆ ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು ತೊಳೆಯಬೇಕು. ಪಪ್ಪಾಯ ಪೇಸ್ಟ್ ಗೆ ಮೊಸರು, ಜೇನುತುಪ್ಪ ಮತ್ತು ನಿಂಬೆರಸ ಸೇರಿಸಿ ಚರ್ಮಕ್ಕೆ ಲೇಪಿಸಿ ಹತ್ತು ನಿಮಿಷದ ನಂತರ ತಣ್ಣೀರಿನಲ್ಲಿ ತೊಳೆದರೆ ಒಣ ಚರ್ಮ ಮೃದುವಾಗುತ್ತದೆ.

ಒಣ ಚರ್ಮ ತಡೆಗಟ್ಟಲು ಪ್ರತಿದಿನ ಸಾಕಷ್ಟು ನೀರು ಕುಡಿಯುವುದು ಮತ್ತು ಹೆಚ್ಚು ಪ್ರೋಟೀನ್‌ಯುಕ್ತ ಆಹಾರ ಸೇವನೆ ಬಹಳ ಮುಖ್ಯ. ಹಾಗೆಯೇ ಚರ್ಮ ಉದುರಿ ಹೋಗದಂತೆ ಕೊಬ್ಬರಿ ಎಣ್ಣೆ ನಿಯಮಿತವಾಗಿ ಹಚ್ಚಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಚರ್ಮ ಒಣಗದಂತೆ ನೋಡಿಕೊಳ್ಳಬೇಕು. ಮನೆ ಅಥವಾ ಕಚೇರಿಯಲ್ಲಿ ಮಾಯಿಶ್ಚರೈಸರನ್ನು ಸದಾ ಕಾಲ ಹಚ್ಚಿಕೊಂಡಿರಬೇಕು. ಚರ್ಮದ ಮೃದುತ್ವ ಕಾಪಾಡಲು ಒಮೆಗಾ 3 ಇರುವ ಆಹಾರ ಸೇವಿಸುವುದು, ಪ್ರತಿದಿನ ವ್ಯಾಯಾಮ ಮಾಡುವುದು ಮತ್ತು ಪ್ರತಿನಿತ್ಯ ಬೆಳಗಿನ ಸೂರ್ಯ ಕಿರಣಗಳಿಗೆ ದೇಹವನ್ನು ಒಡ್ಡುವುದು ಚರ್ಮದ ಆರೋಗ್ಯಕ್ಕೆ ಬಹಳ ಉತ್ತಮ.

ಆಹಾರದಲ್ಲಿ ತೈಲದ ಅಂಶವಿರುವ ಬಾದಾಮಿ, ಕಡಲೆಕಾಯಿ ಬೀಜ ಮತ್ತು ಎಳ್ಳು ಸೇವನೆ ಬಹಳ ಮುಖ್ಯ. ಇದಲ್ಲದೇ ಮಕ್ಕಳಿಗೆ ವಾರಕ್ಕೊಮ್ಮೆಯಾದರೆ ಮೈಗೆಲ್ಲಾ ಕೊಬ್ಬರಿ ಎಣ್ಣೆ ಅಥವಾ ಹರಳೆಣ್ಣೆಯನ್ನು ತಲೆಗೆ ಮತ್ತು ಮೈಗೆ ಹಚ್ಚಿ ಕನಿಷ್ಠ ಒಂದೆರಡು ಗಂಟೆಗಳ ಕಾಲ ಬಿಟ್ಟು ಸ್ನಾನ ಮಾಡಿಸಬೇಕು, ದೊಡ್ಡವರೂ ಹೀಗೆ ಎಣ್ಣೆ ಹಚ್ಚಿಕೊಂಡು ಸ್ನಾನ ಕೂಡ ಮಾಡಬಹುದು.  ಒಣ ಚರ್ಮದ ಸಮಸ್ಯೆ ಹೆಚ್ಚಾಗಿದ್ದರೆ ವೈದ್ಯರನ್ನು ತಡಮಾಡದೇ ಕಾಣಬೇಕು.

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com