ಕಾಲರಾ: ಈ ಕಾಯಿಲೆ ಹೇಗೆ ಹರಡುತ್ತದೆ? ಇದರ ಲಕ್ಷಣಗಳು ಏನು? (ಕುಶಲವೇ ಕ್ಷೇಮವೇ)

ಕಾಲರಾ ಸಾಂಕ್ರಾಮಿಕ ರೋಗವಲ್ಲ ಅಂದರೆ ಒಬ್ಬರಿಗೆ ಒಬ್ಬರಿಗೆ ಹರಡುವುದಿಲ್ಲ. ಇದೊಂದು ಸೂಕ್ಷ್ಮಾಣುಜೀವಿಯಿಂದ (ಬ್ಯಾಕ್ಟೀರಿಯಾ) ಬರುವ ಸೋಂಕು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಇತ್ತೀಚೆಗೆ ಬೆಂಗಳೂರಿನ ವೈದ್ಯಕೀಯ ಕಾಲೇಜೊಂದರಲ್ಲಿ ಎರಡು ಕಾಲರಾ ಪ್ರಕರಣಗಳು ಕಾಣಿಸಿಕೊಂಡಿದ್ದು ಆತಂಕಕ್ಕೆ ಕಾರಣವಾಗಿದೆ. ಜೊತೆಗೆ ರಾಜ್ಯದ ಇತರ ಕಡೆಗಳಲ್ಲಿಯೂ ಕೆಲವು ಪ್ರಕರಣಗಳು ದಾಖಲಾಗಿವೆ.

ಈ ಹಿನ್ನೆಲೆಯಲ್ಲಿ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಆರೋಗ್ಯ ಇಲಾಖೆಯು ಸುರಕ್ಷತಾ ಕ್ರಮಗಳನ್ನು ಕೈಗೊಂಡು ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

ಕಾಲರಾ ರೋಗ ಹೇಗೆ ಬರುತ್ತದೆ?

ಕಾಲರಾ ಒಂದು ಸೋಂಕುಕಾರಕ ರೋಗ. ಸ್ವಚ್ಛತೆಗೆ ಕಡಿಮೆ ಇರುವ ಸ್ಥಳಗಳಲ್ಲಿ ಮತ್ತು ಹೆಚ್ಚು ಜನರು ಅತಿ ಚಿಕ್ಕ ಸ್ಥಳದಲ್ಲಿ ವಾಸಿಸುತ್ತಿರುವ ಸ್ಥಳಗಳಲ್ಲಿ ಇದು ಕಂಡುಬರುತ್ತದೆ. ಹಿಂದೆಲ್ಲಾ ಯುದ್ದ ಅಥವಾ ಬರಗಾಲದ ಸಮಯದಲ್ಲಿ ಈ ರೋಗ ಹೆಚ್ಚು ಕಾಣಿಸಿಕೊಳ್ಳುತ್ತಿತ್ತು.

ಕಾಲರಾ ಸಾಂಕ್ರಾಮಿಕ ರೋಗವಲ್ಲ ಅಂದರೆ ಒಬ್ಬರಿಗೆ ಒಬ್ಬರಿಗೆ ಹರಡುವುದಿಲ್ಲ. ಇದೊಂದು ಸೂಕ್ಷ್ಮಾಣುಜೀವಿಯಿಂದ (ಬ್ಯಾಕ್ಟೀರಿಯಾ) ಬರುವ ಸೋಂಕು. ಈ ಸೋಂಕಿಗೆ ಒಳಗಾದ ಆಹಾರ ಅಥವ ಕಲುಷಿತ ನೀರನ್ನು ಸೇವಿಸಿದ ಬಳಿಕ ಹನ್ನೆರಡು ಗಂಟೆಯಿಂದ ಐದು ದಿನಗಳ ಒಳಗಾಗಿ ಜನರಲ್ಲಿ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಕಲುಷಿತ ನೀರು ಹಾಗೂ ವಸತಿ ಪ್ರದೇಶಗಳಲ್ಲಿ ಬೀದಿಬದಿಯಲ್ಲಿ ತೆರೆದಿಟ್ಟ ಆಹಾರ ಸೇವನೆಯಿಂದ ಕಾಲರಾ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆಯಿದ್ದು ಈ ಎಚ್ಚರಿಕೆ ವಹಿಸಬೇಕು.

ವಿಬ್ರಿಯೊ ಕಾಲರಾ ಎಂಬ ಬ್ಯಾಕ್ಟೀರಿಯಾ

ವಿಬ್ರಿಯೊ ಕಾಲರಾ (Vibrio Cholera) ಎಂಬ ಬ್ಯಾಕ್ಟೀರಿಯಾದಿಂದ ಕಾಲರಾ ಬರುತ್ತದೆ. ಈ ಬ್ಯಾಕ್ಟೀರಿಯಾ ಸಣ್ಣ ಕರುಳಿನ ಮೇಲೆ ಪರಿಣಾಮ ಬೀರಿ ತೀವ್ರ ಅತಿಸಾರ ಮತ್ತು ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ. ಕಾಲರಾವು ಮನುಕುಲದ ಇತಿಹಾಸದುದ್ದಕ್ಕೂ ಗಮನಾರ್ಹವಾದ ಸಾರ್ವಜನಿಕ ಆರೋಗ್ಯ ಕಾಳಜಿಯಾಗಿದೆ ಮತ್ತು ಪ್ರಪಂಚದ ಅನೇಕ ಭಾಗಗಳಲ್ಲಿ ವಿಶೇಷವಾಗಿ ಕಡಿಮೆ ನೈರ್ಮಲ್ಯ ಮತ್ತು ಶುದ್ಧ ನೀರಿನ ಲಭ್ಯತೆ ಇಲ್ಲದೇ ಇರುವ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ಸಮಸ್ಯೆಯಾಗಿ ಮುಂದುವರೆದಿದೆ.

ಈ ಬ್ಯಾಕ್ಟೀರಿಯಾ ಸಾಮಾನ್ಯವಾಗಿ ಕಲುಷಿತ ನೀರು ಅಥವಾ ಆಹಾರದ ಮೂಲಕ ಹರಡುತ್ತದೆ. ಸ್ವಲ್ಪ ಪ್ರಮಾಣದ ಕಲುಷಿತ ನೀರು ಅಥವಾ ಆಹಾರವನ್ನು ಸೇವಿಸುವುದು ಸೋಂಕಿಗೆ ಕಾರಣವಾಗಬಹುದು. ಒಮ್ಮೆ ದೇಹದೊಳಗೆ ಸೇರಿದ ಬ್ಯಾಕ್ಟೀರಿಯಾವು ವಿಷವನ್ನು (ಟಾಕ್ಸಿನ್) ಬಿಡುಗಡೆ ಮಾಡುತ್ತದೆ. ಇದು ಕರುಳು ಹೆಚ್ಚಿನ ಪ್ರಮಾಣದ ದ್ರವವನ್ನು ಸ್ರವಿಸಿ ಅತಿಸಾರಕ್ಕೆ (ಭೇದಿ) ಕಾರಣವಾಗುತ್ತದೆ. ದ್ರವಗಳು ಮತ್ತು ವಿದ್ಯುದ್ವಿಚ್ಛೇದ್ಯಗಳ (ಎಲೆಕ್ಟ್ರೋಲೈಟುಗಳು) ತ್ವರಿತ ನಷ್ಟವು ನಿರ್ಜಲೀಕರಣ, ಎಲೆಕ್ಟ್ರೋಲೈಟ್ ಅಸಮತೋಲನಕ್ಕೆ ಕಾರಣವಾಗಬಹುದು ಮತ್ತು ತೀವ್ರತರವಾದ ಪ್ರಕರಣಗಳಲ್ಲಿ, ಚಿಕಿತ್ಸೆ ನೀಡದೆ ಬಿಟ್ಟರೆ ಮಾರಣಾಂತಿಕವೂ ಆಗಬಹುದು ಎಂಬುದನ್ನು ಎಲ್ಲರೂ ಗಮನದಲ್ಲಿಡಬೇಕು.

ಕಡಿಮೆ ನೈರ್ಮಲ್ಯ ಮತ್ತು ಆರೋಗ್ಯ ರಕ್ಷಣೆಗೆ ಸೀಮಿತ ಪ್ರವೇಶವಿರುವ ಪ್ರದೇಶಗಳಲ್ಲಿ ಕಾಲರಾದ ಪರಿಣಾಮವು ವಿನಾಶಕಾರಿಯಾಗಿದೆ. ಕಿಕ್ಕಿರಿದ ಜನವಸತಿ ಪ್ರದೇಶಗಳು, ಅಸಮರ್ಪಕ ನೈರ್ಮಲ್ಯ, ಮೂಲಸೌಕರ್ಯ ಮತ್ತು ಶುದ್ಧ ನೀರಿನ ಕೊರತೆ ಇರುವ ಪ್ರದೇಶಗಳಲ್ಲಿ ಕಾಲರಾ ಹೆಚ್ಚು ಸಾಮಾನ್ಯವಾಗಿದೆ.

ಸಂಗ್ರಹ ಚಿತ್ರ
ವಿಶ್ವ ಆರೋಗ್ಯ ದಿನ ಘೋಷವಾಕ್ಯ: ನನ್ನ ಆರೋಗ್ಯ, ನನ್ನ ಹಕ್ಕು (ಕುಶಲವೇ ಕ್ಷೇಮವೇ)

ಕಾಲರಾ ರೋಗಲಕ್ಷಣಗಳು

ಕಾಲರಾದ ಇತರ ರೋಗಲಕ್ಷಣಗಳು ವಾಂತಿ, ತ್ವರಿತ ಹೃದಯ ಬಡಿತ, ಕಡಿಮೆ ರಕ್ತದೊತ್ತಡ, ಸ್ನಾಯು ಸೆಳೆತ ಮತ್ತು ತೀವ್ರತರವಾದ ಪ್ರಕರಣಗಳಲ್ಲಿ ಆಘಾತ ಮತ್ತು ಕುಸಿತ. ರೋಗಲಕ್ಷಣಗಳ ತೀವ್ರತೆಯು ವ್ಯಾಪಕವಾಗಿ ಬದಲಾಗಬಹುದು, ಕೆಲವರಿಗೆ ಕೇವಲ ಸೌಮ್ಯ ಅನಾರೋಗ್ಯವಾಗಬಹುದು. ಇತರರಿಗೆ ಈ ಲಕ್ಷಣಗಳು ಗಂಭೀರವಾಗಿರಬಹುದು. ತಕ್ಷಣ ಚಿಕಿತ್ಸೆ ಮತ್ತು ಉಪಚಾರ ದೊರೆತರೆ ಕಾಲರಾವನ್ನು ಬೇಗ ಗುಣಪಡಿಸಬಹುದು.

ಕಾಲರಾವನ್ನು ತಡೆಗಟ್ಟಲು ಎಲ್ಲಕ್ಕಿಂತ ಮೊದಲು ಶುದ್ಧ ನೀರು ಸೇವನೆ ಮತ್ತು ನೈರ್ಮಲ್ಯ ಪಾಲನೆ ಅತ್ಯಗತ್ಯ. ಹೆಚ್ಚಿನ ಅಪಾಯದ ಪ್ರದೇಶಗಳಲ್ಲಿ ಲಸಿಕೆಗಳನ್ನು ನೀಡಬಹುದಾಗಿದೆ. ಈ ರೋಗದ ಹರಡುವಿಕೆಯನ್ನು ತಡೆಗಟ್ಟಲು ಮತ್ತು ಮರಣ ಪ್ರಮಾಣವನ್ನು ಕಡಿಮೆ ಮಾಡಲು ಪ್ರಕರಣಗಳ ತ್ವರಿತ ರೋಗನಿರ್ಣಯ ಮತ್ತು ಚಿಕಿತ್ಸೆಯು ನಿರ್ಣಾಯಕವಾಗಿದೆ.

ಕಾಲರಾಗೆ ಚಿಕಿತ್ಸೆ

ಕಾಲರಾಗೆ ಅತಿ ಸುಲಭ ಚಿಕಿತ್ಸೆ ಎಂದರೆ ಪುನರ್ಜಲೀಕರಣ. ಸುಲಭ ದರದಲ್ಲಿ ಸಿಗುವ ಓ.ಆರ್.ಎಸ್. ಪುಡಿಯನ್ನು ನೀರಿನಲ್ಲಿ ಕರಗಿಸಿ ರೋಗಿಗಳಿಗೆ ಆಗಿಂದಾಗ್ಗೆ ದಿನವಿಡೀ ಕುಡಿಸುತ್ತಿರಬೇಕು. ಏಕೆಂದರೆ ನಿರ್ಜಲೀಕರಣದಿಂದ ದೇಹ ವಿಟಮಿನ್ನುಗಳು ಮತ್ತು ಖನಿಜಗಳನ್ನು ಕಳೆದುಕೊಂಡಿರುತ್ತದೆ. ಈ ಚಿಕಿತ್ಸೆಗೆ ಓರಲ್ ಹೈಡ್ರೇಶನ್ ಥೆರಪಿ ಎಂದು ಹೆಸರು. ಹೀಗೆ ಮಾಡುವುದರಿಂದ ದೇಹದಲ್ಲಿ ಎಲೆಕ್ಟ್ರೋಲೈಟುಗಳ ಸಮತೋಲನವನ್ನು ಸಾಧ್ಯವಾಗುತ್ತದೆ. ಆ ಬಳಿಕವೇ ಸ್ನಾಯುಗಳ ಸೆಳೆತ ಹಾಗೂ ನಡುಕವನ್ನು ನಿಯಂತ್ರಣಕ್ಕೆ ತರಬಹುದು. ಹೊರ ಸ್ಥಳಕ್ಕೆ ಹೊರಟಾಗ ಸ್ವಚ್ಛತೆ ಹಾಗೂ ನೈರ್ಮಲ್ಯಕ್ಕೆ ಗಮನ ನೀಡಬೇಕು. ಶುದ್ಧ ಆಹಾರ ಮತ್ತು ನೀರನ್ನೇ ಸೇವಿಸಬೇಕು.

ಸಂಗ್ರಹ ಚಿತ್ರ
ಆರೋಗ್ಯಕ್ಕಾಗಿ ಸೂಪರ್ ಸೀಡ್ಸ್ & ಪೌಷ್ಟಿಕಾಂಶದ ಪ್ರಯೋಜನಗಳು (ಕುಶಲವೇ ಕ್ಷೇಮವೇ)

ಕಾಲರಾವನ್ನು ನಿಯಂತ್ರಿಸುವ ಮತ್ತು ತಡೆಗಟ್ಟುವ ಪ್ರಯತ್ನಗಳು ಶತಮಾನಗಳಿಂದಲೂ ನಡೆಯುತ್ತಿವೆ. 19ನೇ ಶತಮಾನದಲ್ಲಿ ಜಾನ್ ಸ್ನೋ ಲಂಡನ್ನಲ್ಲಿ ಸಾರ್ವಜನಿಕ ಪಂಪ್ ನಿಂದ ಕಲುಷಿತ ನೀರಿನಿಂದ ಕಾಲರಾ ಹರಡುವಿಕೆಯನ್ನು ಪತ್ತೆಹಚ್ಚಿದಾಗಿನಿಂದ ಈ ರೋಗದ ರೋಗಶಾಸ್ತ್ರವನ್ನು ಅರ್ಥಮಾಡಿಕೊಳ್ಳುವಲ್ಲಿ ಇದರ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ಅನೇಕ ಕ್ರಮಗಳನ್ನು ಶೋಧಿಸಲಾಗಿದೆ. ಇಂದು ಕಾಲರಾ ವಿರುದ್ಧ ಲಸಿಕೆಗಳು ಲಭ್ಯವಿವೆ. ಇಷ್ಟೆಲ್ಲಾ ಪ್ರಗತಿಯ ನಡುವೆಯೂ ಕಾಲರಾ ಇಂದಿಗೂ ಗಮನಾರ್ಹವಾದ ಜಾಗತಿಕ ಆರೋಗ್ಯ ಸವಾಲಾಗಿ ಉಳಿದಿದೆ. ಕಾಲರಾ ನಿರ್ಮೂಲನೆಗಾಗಿ ಸರ್ಕಾರ, ಅಂತರರಾಷ್ಟ್ರೀಯ ಸಂಘಸಂಸ್ಥೆಗಳು, ಆರೋಗ್ಯ ಪೂರೈಕೆದಾರರು ಮತ್ತು ಸಮುದಾಯಗಳನ್ನು ಒಳಗೊಂಡಿರುವ ಸಂಘಟಿತ ಪ್ರಯತ್ನದ ಅಗತ್ಯವಿದೆ.


Dr Vasundhara Bhupathi

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com