
ಶೇಕ್ ಹಸೀನಾ ಅವರ 15 ವರ್ಷದ ಅಧಿಕಾರ ಕೊನೆಗೊಂಡಿದೆ. ವಿಶ್ವಕ್ಕೆ ಇದು ಆಗಸ್ಟ್ ನಲ್ಲಿ ಸಿಕ್ಕ ಮಾಹಿತಿಯಾಗಿದೆ. ಆದರೆ ಜುಲೈ ತಿಂಗಳಲ್ಲಿ ಶುರುವಾದ ಆಂತರಿಕ ಗಲಭೆ ತಿಂಗಳಲ್ಲಿ ಹಸೀನಾ ಅವರ ಕುರ್ಚಿಯನ್ನು ಕಸಿದು ಕೊಂಡಿದೆ. ಹಾಗೆಂದ ಮಾತ್ರಕ್ಕೆ ಈ ರೀತಿಯ ಸಂಘರ್ಷದಲ್ಲಿ ಹಸೀನಾ ಅವರು ಸಿಲುಕಿದ್ದು ಇದೆ ಮೊದಲಲ್ಲ.
2018 ರಲ್ಲಿ ಈ ರೀತಿಯ ಗಲಭೆಯನ್ನು ಅವರು ಯಶಸ್ವಿಯಾಗಿ ಹತ್ತಿಕ್ಕಿದ್ದರು. 2019ರ ಚುನಾವಣೆ ಸಮಯದಲ್ಲಿ ಕೂಡ ಇಂತಹ ಸಂಕಷ್ಟದಿಂದ ಅವರು ಪಾರಾಗಿದ್ದರು. ಆದರೆ ಮೂರನೇ ಬಾರಿ ಈ ರೀತಿಯ ಗಲಾಟೆಯನ್ನು ಅವರು ಹತ್ತಿಕ್ಕಲು ಸಾಧ್ಯವಾಗಲಿಲ್ಲ. ವಿರೋಧಿಗಳ ಬಗ್ಗೆ ಅವರು ಬಳಸಿದ ಪದ ರಾಝಕರು ಅಂದರೆ ದೇಶ ವಿರೋಧಿಗಳು ಎಂಬ ಅರ್ಥ ಬರುವ ಪದ ಅವರ ಕುತ್ತಿಗೆಗೆ ಉರುಳಾಯಿತು. ಕೇವಲ ಆ ಒಂದು ಪದವನ್ನು ಹಿಡಿದುಕೊಂಡು ವಿರೋಧಿಗಳು ಈ ಬಾರಿ ಹಸೀನಾ ಅವರನ್ನು ಪದಚ್ಯುತಿಗೊಳಿಸುವುದರಲ್ಲಿ ಸಫಲರಾಗಿದ್ದಾರೆ.
ಬಾಂಗ್ಲಾದಲ್ಲಿ ನಡೆದಿದ್ದನ್ನು South Asia (ದಕ್ಷಿಣ ಏಷ್ಯಾ)ದಲ್ಲಿ ಭಾರತದ ಶಕ್ತಿಯನ್ನು ಕುಗ್ಗಿಸುವ ಪ್ರಯತ್ನ ಎಂದೂ ಹೇಳಬಹುದು. ಅದು ಒಂದು ರೀತಿಯಲ್ಲಿ ನಿಜವೂ ಹೌದು. ಕಳೆದ 15 ವರ್ಷದಿಂದ ಶೇಕ್ ಹಸೀನಾ ಭಾರತದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದರು. ಆದರೆ ಶೇಕ್ ಹಸೀನಾ ಅವರ ಈ ನಿಲುವು ಮಿಲಿಟರಿಯ ಉನ್ನತ ಅಧಿಕಾರಿಗಳಿಗೆ ಇಷ್ಟವಾಗಿರಲಿಲ್ಲ. ನೀರು ಹಂಚಿಕೆಯ ವಿಷಯ ಬಂದಾಗ ಭಾರತದ ದೊಡ್ಡಣ್ಣನ ನಡವಳಿಕೆಯನ್ನು ಅವರು ಇಷ್ಟಪಡುತ್ತಿರಲಿಲ್ಲ. ಆದರೆ ಜಗತ್ತು ನಡೆಯುವುದೇ ಹಾಗೆ, ಹೀಗಾಗಿ ದೊಡ್ಡ ಹಡಗಿನಲ್ಲಿ ಸಣ್ಣ ರಂಧ್ರ ಉಂಟಾಗಿತ್ತು. ಅದೆಷ್ಟೇ ದೊಡ್ಡ ಹಡಗಿರಲಿ ಸಣ್ಣ ರಂಧ್ರ ಸಮಯದ ಜೊತೆಗೆ ಹಡಗನ್ನು ಮುಳುಗಿಸುತ್ತದೆ ಎನ್ನುವ ಮಾತು ಇದೀಗ ಮತ್ತೊಮ್ಮೆ ನಿಜವೆಂದು ಸಾಬೀತಾಗಿದೆ.
ಬಾಂಗ್ಲಾದೇಶದಲ್ಲಿ ಸಣ್ಣ ಮಟ್ಟದಲ್ಲಿ ಆಡಳಿತದ ವಿರುದ್ಧ ಇದ್ದ ಈ ಅಂಶವನ್ನು ಬ್ರಿಟನ್, ಅಮೇರಿಕಾ ಮತ್ತು ಚೀನಾ ಸರಿಯಾಗಿ ಬಳಸಿಕೊಂಡಿವೆ. ಶೇಕ್ ಹಸೀನಾ ತನ್ನ ಕೆಟ್ಟ ಆಡಳಿತಕ್ಕೆ ಬೆಲೆ ತೆತ್ತಿದ್ದಾರೆ. ಭಾರತೀಯ ಬಲಪಂಥದ ಸುದ್ದಿ ಮನೆಗಳು ಇದಕ್ಕೆ ಜಿಯೋ ಪೊಲಿಟಿಕಲ್ ಕಥೆಯನ್ನು ಹೆಣೆಯುತ್ತಿವೆ, ಸುಮ್ಮನೆ ಚೀನಾ, ಬ್ರಿಟನ್ ಮತ್ತು ಅಮೇರಿಕಾ ದೇಶದ ಹೆಸರನ್ನು ಮುಂಚೂಣಿಗೆ ತರುತ್ತಿವೆ ಎನ್ನುವ ಮಾತುಗಳು ಕೂಡ ಕೇಳಿ ಬರುತ್ತಿದೆ. ಆದರೆ ಈ ಮಾತುಗಳು ಸುಳ್ಳು. ಚೀನಾ, ಬ್ರಿಟನ್ ಮತ್ತು ಅಮೇರಿಕಾ ಇದರ ಹಿಂದಿನ ಕಾರಣ ಎನ್ನುವುದನ್ನು ಸ್ವಲ್ಪ ವಿಶ್ಲೇಷಣೆ ಮಾಡಿದರೂ ಗೊತ್ತಾಗುತ್ತದೆ.
ಎಲ್ಲಕ್ಕೂ ಮೊದಲಿಗೆ ಇಂಗ್ಲೆಂಡ್ ಮತ್ತು ಅಮೇರಿಕಾ ಎರಡೂ ಬಾಂಗ್ಲಾದಲ್ಲಿ ಸೈನ್ಯದ ಆಡಳಿತವನ್ನು ವಿರೋಧಿಸುವ ಅಥವಾ ತಟಸ್ಥವಾಗಿರುವ ನಿಲುವು ತೆಗೆದುಕೊಂಡಿಲ್ಲ. ಬದಲಿಗೆ ಅದನ್ನು ಸ್ವಾಗತಿಸಿವೆ. ಕಳ್ಳ, ಖದೀಮರಿಗೆಲ್ಲಾ ಆಶ್ರಯ ನೀಡುವ ಇಂಗ್ಲೆಂಡ್ ಶೇಕ್ ಹಸೀನಾ ಗೆ ನೆಲೆ ನೀಡುವುದಿಲ್ಲ ಎಂದು ಹೇಳಿದೆ. ಅಮೇರಿಕಾ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಅವರಿಗೆ ಇದ್ದ ಅಮೇರಿಕಾ ವೀಸಾವನ್ನು ರದ್ದು ಮಾಡಿದೆ. ಬ್ರಿಟನ್ ಆರ್ಥಿಕತೆ ನೆಲಕಚ್ಚಿ ದಶಕಗಳ ಮೇಲಾಗಿದೆ. ಪರವಾಗಿಲ್ಲ ಎನ್ನುವ ಮಟ್ಟಕ್ಕೆ ಚೇತರಿಸಿಕೊಳ್ಳುತ್ತಿದ್ದ ಬ್ರಿಟನ್ ದೇಶವನ್ನು ಕೊರೋನ ಹೈರಾಣು ಮಾಡಿತು.
ಇನ್ನು ಅಮೇರಿಕಾ ದೇಶದಲ್ಲಿ ಕೊರೋನ ವೇಳೆಯಲ್ಲಿ ಅವೈಜ್ಞಾನಿಕವಾಗಿ ಮುದ್ರಿಸಿದ ಹಣದ ಕಾರಣ ಅಲ್ಲಿ ಹಣದುಬ್ಬರ ಹೆಚ್ಚಾಗಿದೆ. ಎಲ್ಲರ ಕೈಲೂ ಹಣವಿದೆ. ಆದರೆ ಅದರಿಂದ ಬೇಕಾದ ಸೇವೆ, ಸವಲತ್ತು ಕೊಳ್ಳಲಾಗದ ಪರಿಸ್ಥಿತಿ ಅಲ್ಲಿದೆ. ಇನ್ನು ಚೀನಾ ದೇಶ ತನ್ನ ಮೊದಲಿನ ಓಟವನ್ನು, ವೇಗವನ್ನು ಉಳಿಸಿಕೊಳ್ಳಲು ಹೆಣಗುತ್ತಿದೆ.
ಕೊರೋನೋತ್ತರ ಚೀನಾ ಪ್ಲಸ್ ಒನ್ ಎನ್ನುವ ಪಾಲಿಸಿಗೆ ಅಮೇರಿಕಾ ಮತ್ತು ಯೂರೋಪು ಒಕ್ಕೊಟ ಹೆಚ್ಚು ಮಾನ್ಯತೆ ನೀಡಿರುವುದು ಮತ್ತು ಅದರ ನೇರ ಫಲಾನುಭವಿ ಆಗಿರುವುದು ಭಾರತ. ಇದು ಚೀನಾದ ಕಣ್ಣಿಗೆ ಕಾರದ ಪುಡಿ ಎರಚಿದಂತೆ ಆಗಿದೆ. ಜಗತ್ತನ್ನು ಆಳಬೇಕು ಎನ್ನುವ ಚೀನಾದ ಮಹತ್ವಾಕಾಂಕ್ಷೆಗೆ ಅಡ್ಡಿಯಾಗಿರುವುದು ಭಾರತ. ಏಕೆಂದರೆ ಮೊದಲಿಗೆ ಅವರು ಏಷ್ಯಾದಲ್ಲಿ ಏಕೈಕ ನಾಯಕ ಎನ್ನಿಸಿಕೊಳ್ಳಬೇಕಾಗಿದೆ. ಭಾರತದ ಪ್ರಾಬಲ್ಯ ಕುಂದಿಸದೆ ಅದು ಸಾಧ್ಯವಾಗದ ಮಾತು.
ಎರಡನೆಯದಾಗಿ ಯೂರೋಪು, ಅಮೇರಿಕಾ ದೇಶಗಳಿಗೆ ಭಾರತ ಇನ್ನೊಂದು ಚೀನಾ ಅಥವಾ ಅದಕ್ಕಿಂತ ದೊಡ್ಡ ತಲೆನೋವಾಗಿ ಬೆಳೆದು ಬಿಟ್ಟರೆ ಎನ್ನುವ ಭಯ ಮತ್ತು ಅಸ್ಥಿರತೆ ಕಾಡುತ್ತಿದೆ. ಚೀನಾಗು ಭಾರತವನ್ನು ಹಣಿಯಬೇಕಾಗಿದೆ. ಹೀಗಾಗಿ ಭಾರತವನ್ನು ಎಲ್ಲೆಡೆಯಿಂದ ಕಟ್ಟಿ ಹಾಕುವುದು ಇವೆರೆಲ್ಲರ ಹುನ್ನಾರ. ಒಮ್ಮೆ ಭಾರತದ ಪ್ರಾಬಲ್ಯ ಕುಸಿದರೆ ಮತ್ತೆ ಚೀನಾ, ಅಮೇರಿಕಾ ಮತ್ತು ಯೂರೋಪುಗಳ ನಡುವೆ ಬೇರೆ ರೀತಿಯ ಕಾದಾಟ ಶುರುವಾಗುತ್ತದೆ. ಸದ್ಯದ ಮಟ್ಟಿಗೆ ನೇರವಾಗಿ ಭಾರತವನ್ನು ಹಣಿಯುವುದು ಸಾಧ್ಯವಿಲ್ಲದ ಮಾತು. ಹೀಗಾಗಿ ಅನ್ಯ ಮಾರ್ಗಗಳ ಮೂಲಕ ಭಾರತಕ್ಕೆ ಮೂಗುದಾರ ತೊಡಿಸುವ ಹವಣಿಕೆಯಲ್ಲಿ ಅವುಗಳು ನಿರತವಾಗಿವೆ.
ಬಾಂಗ್ಲಾದಲ್ಲಿನ ದಂಗೆ ಭಾರತವನ್ನು ಟಾರ್ಗೆಟ್ ಮಾಡಲು ಪ್ರಾಕ್ಟೀಸ್ ಪಂದ್ಯ!
ಸಣ್ಣ ಪುಟ್ಟ ದೇಶಗಳಲ್ಲಿ ಈ ರೀತಿಯ ದಂಗೆಯನ್ನು ಹುಟ್ಟುಹಾಕುವುದು ಇಂದು ನಿನ್ನೆಯ ಕಥೆಯಲ್ಲ. ಚರಿತ್ರೆ ತೆಗೆದು ನೋಡಿದರೆ ದಕ್ಷಿಣ ಅಮೇರಿಕಾ ದೇಶಗಳ ನಿಟ್ಟುಸುರಿನ ಕಥೆಯನ್ನು ನೀವು ಕೇಳಬಹುದು. ಹಾಗೆ ನೋಡಲು ಹೋದರೆ ಭಾರತದಲ್ಲೂ ದಂಗೆ ಸೃಷ್ಟಿಸಲು ಹಲವಾರು ವಿಫಲ ಯತ್ನಗಳಾಗಿವೆ. ಅದು ಮುಂದೆಯೂ ಆಗುತ್ತದೆ. ಅದಕ್ಕೆ ಪ್ರಾಕ್ಟೀಸ್ ಪಂದ್ಯದಂತೆ ಬಾಂಗ್ಲಾವನ್ನು ದುಷ್ಟಕೂಟ ಬಳಿ ಪಡೆದಿದೆ.
ಭಾರತಕ್ಕೆ ಒಂದು ಮಿತ್ರ ರಾಷ್ಟ್ರ ಕಡಿಮೆಯಾಯಿತು. ಈಗಿರುವ ಮಿಲಿಟರಿ ಆಡಳಿತ ಖಂಡಿತ ಭಾರತ ವಿರೋಧಿಯಾಗಿದೆ.
ಜಾಗತಿಕವಾಗಿ ಬಾಂಗ್ಲಾ ದರ್ಜಿಯ ಕೆಲಸ ಮಾಡುತ್ತಿದೆ. ಅಂದರೆ ಬಟ್ಟೆ ವ್ಯಾಪಾರದಲ್ಲಿ ಬಾಂಗ್ಲಾದ ಪಾತ್ರ ಬಹಳ ದೊಡ್ಡದಾಗಿದೆ. ಭಾರತದದಿಂದ ಅತಿ ಹೆಚ್ಚು ಹತ್ತಿಯನ್ನು ಬಾಂಗ್ಲಾ ತರಿಸಿಕೊಳ್ಳುತ್ತಿತ್ತು. ಅಸ್ಥಿರ ಸರಕಾರದ ಕಾರಣ ಮತ್ತು ಭಾರತದ ವಿರೋಧದ ಕಾರಣ ಇದರಲ್ಲಿ ಕುಸಿತ ಉಂಟಾಗಲಿದೆ.
ಹತ್ತಿಯ ಜೊತೆಗೆ ತರಕಾರಿ, ಕಾಫಿ, ಟೀ, ಮಸಾಲೆ ಪದಾರ್ಥಗಳು, ಕೆಮಿಕಲ್ಸ್, ಐರನ್ ಅಂಡ್ ಸ್ಟೀಲ್ ಇತ್ಯಾದಿಗಳನ್ನು ಸಹ ದೊಡ್ಡ ಪ್ರಮಾಣದಲ್ಲಿ ಬಾಂಗ್ಲಾ ದೇಶಕ್ಕೆ ಭಾರತವು ರಫ್ತು ಮಾಡುತ್ತಿತ್ತು. ಇವುಗಳಲ್ಲಿ ಕೂಡ ಇಳಿಕೆಯಾಗಲಿದೆ.
ಬಾಂಗ್ಲಾದಿಂದ ನಾವು ಮೀನು, ಲೆದರ್ ಬಟ್ಟೆಗಳು, ಪ್ಲಾಸ್ಟಿಕ್ ಮತ್ತು ಇತರೆ ಬಟ್ಟೆಗಳನ್ನು ಆಮದು ಮಾಡಿಕೊಳ್ಳುತ್ತಿದ್ದೇವು. ಇದೀಗ ದರಲ್ಲೂ ಏರಿಳಿತವಾಗುವುದು ಸ್ಪಷ್ಟ.
ಒಟ್ಟಾರೆ ಬಾಂಗ್ಲಾ ದೇಶದೊಂದಿಗಿನ ವ್ಯಾಪಾರದಲ್ಲಿ ಭಾರತ ಟ್ರೇಡ್ ಸರ್ ಪ್ಲಸ್ ನಲ್ಲಿತ್ತು. ಅಂದರೆ ನಾವು ಅವರಿಂದ ಕೊಳ್ಳುವುದಕ್ಕಿಂತ ಅವರಿಗೆ ಮಾರುವುದು ಹೆಚ್ಚಾಗಿತ್ತು. ಹೀಗಾಗಿ ಭಾರತ ಬಿಲಿಯನ್ ಗಟ್ಟಲೆ ಹಣವನ್ನು ಈ ವ್ಯಾಪಾರದ ಮೂಲಕ ಗಳಿಸಿಕೊಳ್ಳುತ್ತಿತ್ತು. ಇದರ ಜೊತೆಗೆ ಬಾಂಗ್ಲಾದಿಂದ ಮೆಡಿಕಲ್ ಟೂರಿಸಂ ಹೆಸರಿನಲ್ಲಿ ಕೂಡ ಕೋಟ್ಯಂತರ ರೂಪಾಯಿ ವಹಿವಾಟು ನಡೆಯಿತ್ತಿತ್ತು. ಇವೆಲ್ಲಕ್ಕೂ ಪೆಟ್ಟು ಬೀಳುವ ಕಾರಣ ಭಾರತದ ಆದಾಯದಲ್ಲಿ ಒಂದಷ್ಟು ಕಡಿಮೆಯಾಗುವುದು ಸಹಜ.
ಬಾಂಗ್ಲಾ ದೇಶದಲ್ಲಿ ಟೆಕ್ಸ್ಟೈಲ್ ಮಾರುಕಟ್ಟೆ ಕುಸಿತವನ್ನು ಕಾಣಲಿದೆ. ಹೀಗಾಗಿ ಅದರ ನೇರ ಲಾಭವನ್ನು ಭಾರತೀಯ ಟೆಕ್ಸ್ ಟೈಲ್ ಮಾರುಕಟ್ಟೆ ಪಡೆದುಕೊಳ್ಳುವ ಸಂಭಾವ್ಯತೆಯನ್ನು ಕೂಡ ತಳ್ಳಿ ಹಾಕುವಂತಿಲ್ಲ. ಅವರ ಮಟ್ಟಿನ ಪ್ರೈಸ್ ಕಾಂಪಿಟೇಟಿವ್ನೆಸ್ ನಾವು ಬೆಳಸಿಕೊಂಡರೆ ಇಂತಹ ಸ್ಥಿತಿಯಲ್ಲೂ ನಾವು ಹೊಸ ಅವಕಾಶವನ್ನು ಕಂಡುಕೊಳ್ಳಬಹುದು.
ನೀವು ಜಗತ್ತಿನ ಬಹುತೇಕ ರಾಷ್ಟ್ರಗಳನ್ನು ನೋಡಿ ಅವೆಲ್ಲವೂ ಹಣಕಾಸಿನ ಮುಗ್ಗಟ್ಟಿನಲ್ಲಿ ಬಳಲುತ್ತಿವೆ. ಒಂದೆರೆಡು ದಿನಗಳ ಹಿಂದೆ ಜಪಾನ್, ಕೊರಿಯಾ ಷೇರು ಮಾರುಕಟ್ಟೆಗಳ ಕುಸಿತ ಇದಕ್ಕೆ ಪ್ರತ್ಯಕ್ಷ ಸಾಕ್ಷಿ. ಅಮೇರಿಕಾ ಷೇರು ಮಾರುಕಟ್ಟೆ ಕೂಡ ಬಹಳ ದೊಡ್ಡ ಕುಸಿತವನ್ನು ಕಂಡಿತು. ಇವೆಲ್ಲವುಗಳ ಚೈನ್ ರಿಯಾಕ್ಷನ್ ಕಾರಣ ಭಾರತದ ಷೇರು ಮಾರುಕಟ್ಟೆ ಕೂಡ ಕುಸಿತವನ್ನು ಕಂಡಿತು. ಆದರೆ ಕುಸಿದಷ್ಟೇ ವೇಗವಾಗಿ ಅದು ಮತ್ತೆ ಹಿಂದಿನ ದಾರಿಗೆ ಮರಳುತ್ತಿದೆ. ಆ ಲೆಕ್ಕಾಚಾರದಲ್ಲಿ ಭಾರತೀಯ ಷೇರು ಮಾರುಕಟ್ಟೆಗೆ ಬಾಂಗ್ಲಾ ಕುಸಿತ ಹೆಚ್ಚಿನ ಪೆಟ್ಟನ್ನು ನೀಡುವುದಿಲ್ಲ. ಬದಲಾಗಿ ಭಾರತೀಯ ಟೆಕ್ಸ್ ಟೈಲ್ ವಲಯದಲ್ಲಿ ಹೊಸ ಆಶಾಭಾವ ಚಿಗುರಿದ ಕಾರಣ ಮಾರುಕಟ್ಟೆ ಮೇಲೇರುವ ಸಂಭಾವ್ಯತೆಯನ್ನು ಕೂಡ ತಳ್ಳಿ ಹಾಕುವಂತಿಲ್ಲ.
ಭಾರತದ ನೆರೆಹೊರೆ ದೇಶಗಳನ್ನು ನೋಡಿ, ಅವುಗಳಲ್ಲಿ ಒಂದೆರೆಡು ದೇಶ ಮಾತ್ರ ಮಿತ್ರ ದೇಶಗಳಾಗಿವೆ. ಮಿಕ್ಕವೆಲ್ಲವೂ ತಟಸ್ಥ ಅಥವಾ ಶತ್ರು ದೇಶಗಳಾಗಿವೆ. ಹೀಗೆ ಭಾರತದ ಸುತ್ತುಮುತ್ತಲಿನ ದೇಶಗಳನ್ನು ಅರಾಜಕತೆಗೆ ಸಿಲುಕಿಸುವ ಮೂಲಕ ಭಾರತವನ್ನು ಕೂಡ ನಿಯಂತ್ರಣದಲಿಟ್ಟು ಕೊಳ್ಳುವ ಹುನ್ನಾರಕ್ಕೆ ಜಯ ಸಿಕ್ಕಿರುವುದು ಸದ್ಯದ ಮಟ್ಟಿಗೆ ಕಣ್ಣಿಗೆ ಕಾಣುತ್ತಿರುವ ಸತ್ಯವಾಗಿದೆ.
ಕೊನೆಮಾತು: ನೀವು ಮುಂದುವರೆದ ದೇಶಗಳ ಆರ್ಥಿಕತೆಯನ್ನು ಗಮನಿಸುತ್ತಾ ಬನ್ನಿ. ಯಾವಾಗೆಲ್ಲಾ ಅವರ ಆರ್ಥಿಕತೆ ಕುಸಿಯುತ್ತದೆ ಆಗೆಲ್ಲಾ ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ದಂಗೆಗಳಾಗುತ್ತವೆ. ಸಣ್ಣ ಪುಟ್ಟ ದೇಶಗಳು, ಅಜ್ಞಾನದ ಕೂಪವಾಗಿರುವ ದೇಶಗಳು ಇಂತಹ ಕೂಟಕ್ಕೆ ಸುಲಭ ತುತ್ತಾಗುತ್ತವೆ. ಭಾರತವನ್ನು ಅವರು ನೇರವಾಗಿ ಅಸ್ಥಿರಗೊಳಿಸುವುದಿಲ್ಲ.
ನಿಜ ಹೇಳಬೇಕೆಂದರೆ ಭಾರತ ಬಾಂಗ್ಲಾ ರೀತಿಯಲ್ಲಿ ದಂಗೆಗೆ ಒಳಗಾಗುವುದು ಅವರಿಗೆ ಬೇಕಿಲ್ಲ. ಅವರಿಗೆ ಬೇಕಿರುವುದು ಭಾರತದ ಮೇಲಿನ ನಿಯಂತ್ರಣ. ನಿಮಗೆಲ್ಲಾ ಗೊತ್ತಿರಲಿ ಭಾರತ ಜಾಗತಿಕವಾಗಿ ಅತಿ ದೊಡ್ಡ ಮಾರುಕಟ್ಟೆಗಳಲ್ಲಿ ಒಂದು, ಚೀನಾ, ಅಮೇರಿಕಾ ಮತ್ತು ಯೂರೋಪು ಎಲ್ಲರಿಗೂ ಭಾರತ ಬೇಕು. ಆದರೆ ಎದ್ದು ನಿಂತು ಪ್ರಶ್ನಿಸುವ, ನಾಯಕನಾಗಿ ಅವರ ಮುಂದೆ ಸೆಟೆದು ನಿಲ್ಲುವ ಭಾರತ ಬೇಕಿಲ್ಲ. ಅವರು ತಂದು ಸುರಿಯುವ ಕೆಸವನ್ನು ಹಣ ಕೊಟ್ಟು ಖರೀದಿಸಿ ಬಹು ಪರಾಕು ಹಾಕುವ ಭಾರತ ಅವರಿಗೆ ಬೇಕಿದೆ. ಇದಕ್ಕಾಗಿ ಅವರು ಅವಿರತ ಪ್ರಯತ್ನ ಜಾರಿಯಲ್ಲಿದೆ. ಸದ್ಯದ ಮಟ್ಟದಲ್ಲಿ ಬಾಂಗ್ಲಾ ಕುಸಿತ ಭಾರತದ ಮಟ್ಟಿಗೆ ಸಣ್ಣ ಸೋಲು. ಭಾರತದ ಮುಂದಿನ ನಡೆ, ನಮ್ಮ ವಿದೇಶಾಂಗ ನೀತಿಯ ಮೇಲೆ ಇನ್ನಷ್ಟು ಬದಲಾವಣೆಗಳನ್ನು ನಾವು ಮುಂಬರುವ ದಿನಗಳಲ್ಲಿ ಕಾಣಬಹುದು. ಇದೇನಿದ್ದರೂ ಹಣ, ಅಧಿಕಾರ, ನಿಯಂತ್ರಣದ ಕಥೆಯಷ್ಟೇ. ಗೆದ್ದವರು ರಾಜ್ಯವನ್ನು ಆಳುತ್ತಾರೆ. ಸೋತ ದೇಶದ ಜನರ ಗತಿ ಮಾತ್ರ ಇನ್ನಷ್ಟು ಅಧೋಗತಿಯತ್ತ ಸಾಗುತ್ತದೆ.
Advertisement