ಕುಷ್ಠರೋಗ: ಲಕ್ಷಣಗಳು, ಕಾರಣ ಮತ್ತು ಅಪಾಯಗಳು (ಕುಶಲವೇ ಕ್ಷೇಮವೇ)

ಕುಷ್ಠರೋಗವು ಚರ್ಮ, ಲೋಳೆಪೊರೆ ಮತ್ತು ನರಗಳ ಮೇಲೆ ಪರಿಣಾಮ ಬೀರುವ, ದೀರ್ಘಕಾಲ ಕಾಡುವ ಮತ್ತು ದಿನೇ ದಿನೇ ಹೆಚ್ಚಾಗುವ ಬ್ಯಾಕ್ಟೀರಿಯಾ ಸೋಂಕು.
ಕುಷ್ಠರೋಗ (ಸಾಂಕೇತಿಕ ಚಿತ್ರ)
ಕುಷ್ಠರೋಗ (ಸಾಂಕೇತಿಕ ಚಿತ್ರ)

ಕುಷ್ಠರೋಗವು ಚರ್ಮ, ಲೋಳೆಪೊರೆ ಮತ್ತು ನರಗಳ ಮೇಲೆ ಪರಿಣಾಮ ಬೀರುವ, ದೀರ್ಘಕಾಲ ಕಾಡುವ ಮತ್ತು ದಿನೇ ದಿನೇ ಹೆಚ್ಚಾಗುವ ಬ್ಯಾಕ್ಟೀರಿಯಾ ಸೋಂಕು. ಇದು ದೇಹದ ಅಂಗಾಂಗಗಳ ಆಕಾರವನ್ನು ಮತ್ತು ಆರೋಗ್ಯವನ್ನು ಹದಗೆಡಿಸುತ್ತದೆ. ದೇಹದ ಮಾಂಸಖಂಡಗಳು ಇದರಿಂದ ತೊಂದರೆಗೆ ಒಳಗಾಗುತ್ತವೆ. ಕುಷ್ಠರೋಗವನ್ನು ಯಾವುದೇ ಚಿಕಿತ್ಸೆ ಪಡೆಯದೇ ಹಾಗೆಯೇ ಬಿಟ್ಟರೆ ದೈಹಿಕ ಅಸಮರ್ಥತೆ ಎದುರಾಗುತ್ತದೆ. ಇದು ಕ್ರಮೇಣ ಉಸಿರಾಟದ ನಾಳವನ್ನು ನಂತರ ರಕ್ತನಾಳಗಳನ್ನು ಮತ್ತು ಕಣ್ಣುಗಳ ಭಾಗವನ್ನು ಹಾನಿಗೊಳಿಸುತ್ತದೆ.

ಕುಷ್ಠರೋಗವು (Leprosy) ಮೈಕೋಬ್ಯಾಕ್ಟೀರಿಯಂ ಲೆಪ್ರೇ ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗಿ ನಿಧಾನವಾಗಿ ಹೆಚ್ಚಾಗುತ್ತದೆ. ಶೈಶವಾವಸ್ಥೆಯಿಂದ ವೃದ್ಧಾಪ್ಯದವರೆಗೆ ಎಲ್ಲಾ ವಯಸ್ಸಿನಲ್ಲೂ ಕುಷ್ಠರೋಗ ಕಂಡುಬರುತ್ತದೆ. ಇದೊಂದು ಗುಣಪಡಿಸುವ ಕಾಯಿಲೆಯಾಗಿದ್ದು ಆರಂಭಿಕ ಹಂತದಲ್ಲಿ ಚಿಕಿತ್ಸೆ ಪಡೆದರೆ ಮುಂದೆ ಆಗಬಹುದಾದ ಗಂಭೀರ ಪರಿಣಾಮಗಳು ಮತ್ತು ಅಂಗವೈಕಲ್ಯತೆಯನ್ನು ತಡೆಯಬಹುದು. ಕುಷ್ಠರೋಗ ಇರುವ ವ್ಯಕ್ತಿಗಳೊಂದಿಗೆ ಇತರರು ಸಂಪರ್ಕ ಹೊಂದಬಾರದು. ಏಕೆಂದರೆ ಅವರ ಮೂಗು ಮತ್ತು ಬಾಯಿಂದ ಹೊರ ಬೀಳುವ ಹನಿಗಳ ಮೂಲಕ ಈ ರೋಗ ಇತರರಿಗೆ ಹರಡುತ್ತದೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ 2020ರಲ್ಲಿ ಪ್ರಪಂಚದ 139 ದೇಶಗಳಲ್ಲಿ ಒಟ್ಟು 1,27,558 ಹೊಸ ಕುಷ್ಠರೋಗ ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ 15 ವರ್ಷದೊಳಗಿನ 8,629 ಮಕ್ಕಳು ಸೇರಿದ್ದಾರೆ. ಮಕ್ಕಳ ಜನಸಂಖ್ಯೆಯಲ್ಲಿ ಹೊಸ ಪ್ರಕರಣ ಪತ್ತೆ ಪ್ರಮಾಣವು ಪ್ರತಿ ಮಿಲಿಯನ್ ಮಕ್ಕಳ ಜನಸಂಖ್ಯೆಗೆ 4.4 ಎಂದು ದಾಖಲಾಗಿದೆ. ನಮ್ಮ ದೇಶದ ಬಹುತೇಕ ನಗರಗಳು ಕುಷ್ಠರೋಗದ ವಿರುದ್ಧ ಗೆದ್ದಿವೆ. ಹೀಗಾಗಿ ಇದು ಹೆಚ್ಚು ಜನರನ್ನು ಕಾಡುವ ಸಮಸ್ಯೆಯಾಗಿ ಉಳಿದಿಲ್ಲ.

ಕುಷ್ಠರೋಗದ ಲಕ್ಷಣಗಳು ಮತ್ತು ಅಪಾಯಗಳು

ಕುಷ್ಠರೋಗದ ಒಂದು ವಿಶಿಷ್ಟ ಲಕ್ಷಣವೆಂದರೆ ಅದರ ಲಕ್ಷಣಗಳಲ್ಲಿ ಕಂಡುಬರುವ ವ್ಯತ್ಯಾಸ, ಸೌಮ್ಯವಾದ ಚರ್ಮದ ಪ್ಯಾಚ್ ಳಿಂದ ಹಿಡಿದು ತೀವ್ರ ವಿರೂಪಗಳು ಮತ್ತು ಅಂಗವೈಕಲ್ಯಗಳವರೆಗೆ ಇದರ ಲಕ್ಷಣಗಳು ಕಂಡುಬರುತ್ತವೆ.

ಕುಷ್ಠರೋಗದ ಲಕ್ಷಣಗಳು ಮೊದಲಿಗೆ ಚರ್ಮದ ಮೇಲೆ ಬಣ್ಣ ಬಣ್ಣದ ತೇಪೆಗಳ ರೀತಿ ಕಾಣಿಸಿಕೊಳ್ಳುತ್ತವೆ. ಇವು ಸಾಮಾನ್ಯವಾಗಿ ಚಪ್ಪಟೆಯಾಗಿ ಕಳೆಗುಂದಿರುವಂತೆ ಕಾಣುತ್ತವೆ. ಚರ್ಮದ ಮೇಲೆ ಗಂಟುಗಳು, ದಪ್ಪ, ಗಟ್ಟಿಯಾದ ಅಥವಾ ಒಣ ಚರ್ಮ, ಪಾದದ ಅಡಿಭಾಗದಲ್ಲಿ ನೋವುರಹಿತ ಹುಣ್ಣುಗಳು, ಮುಖ ಅಥವಾ ಕಿವಿಯಲ್ಲಿ ನೋವುರಹಿತ ಊತಗಳು ಮತ್ತು ಹುಬ್ಬುಗಳು ಅಥವಾ ಕಣ್ಣಿನ ರೆಪ್ಪೆಗಳು ಉದುರುತ್ತವೆ. ಕೆಲವರಿಗೆ ವಾರಗಳ ತನಕ ಚಿಕಿತ್ಸೆ ನೀಡಿದರು ಕೂಡ ವಾಸಿಯಾಗದ ರೀತಿ ದೇಹದ ಚರ್ಮದ ಮೇಲೆ ಗಾಯಗಳು ಹಾಗೆ ಉಳಿದಿರುತ್ತವೆ. ಇವುಗಳನ್ನು ಮುಟ್ಟಿದರೂ ಕೂಡ ಅಥವಾ ಬಿಸಿ ತಾಗಿಸಿದರೂ ಸ್ವಲ್ಪ ಕೂಡ ಗೊತ್ತಾಗುವುದಿಲ್ಲ. ನರಗಳು ಪ್ರಭಾವಿತಗೊಂಡರೆ ಕೈ, ಕಾಲುಗಳು, ಅಂಗೈ ಮತ್ತು ಪಾದಗಳಲ್ಲಿ ಮರ ಗಟ್ಟಿದ ಅನುಭವ ಉಂಟಾಗುತ್ತದೆ. ಕೆಲವೊಮ್ಮೆ ಕಣ್ಣು ಮಂಜಾಗುವುದು ಸಾಮಾನ್ಯವಾಗಿರುತ್ತದೆ ಮತ್ತು ಇದು ದಿನಗಳು ಕಳೆದಂತೆ ಹೆಚ್ಚಾಗಿ ಕುರುಡುತನ ಆವರಿಸಬಹುದು. ಲೋಳೆಪೊರೆಯ ಸಮಸ್ಯೆಯಿಂದ ಉಸಿರುಗಟ್ಟಿದ ಮೂಗು ಮತ್ತು ಮೂಗಿನ ರಕ್ತಸ್ರಾವ ಉಂಟಾಗಬಹುದು. ಒಟ್ಟಾರೆಯಾಗಿ ಹೇಳಬೇಕೆಂದರೆ ಮೈಕೋಬ್ಯಾಕ್ಟೀರಿಯಂ ಲೆಪ್ರೇ ಮೂಲಭೂತವಾಗಿ ಚರ್ಮದ ಮತ್ತು ಬಾಹ್ಯ ನರಗಳಂತಹ ದೇಹದಲ್ಲಿ ತಂಪಾಗಿರುವ ಭಾಗಗಳನ್ನು ಗುರಿಯಾಗಿರಿಸಿಕೊಳ್ಳುತ್ತದೆ.

ವಿಶ್ವ ಆರೋಗ್ಯ ಸಂಸ್ಥೆಯು ಕುಷ್ಠರೋಗವನ್ನು ಎರಡು ಮುಖ್ಯ ವಿಧಗಳಾಗಿ ವರ್ಗೀಕರಿಸಿದೆ: ಪೌಸಿಬಾಸಿಲರಿ ಮತ್ತು ಮಲ್ಟಿಬಾಸಿಲರಿ. ಪೌಸಿಬಾಸಿಲ್ಲರಿ ಕುಷ್ಠರೋಗದಲ್ಲಿ ಕೆಲವು ಚರ್ಮದ ಗಾಯಗಳು ಮತ್ತು ಬ್ಯಾಕ್ಟೀರಿಯಾದ ಪ್ರಭಾವ ಕಡಿಮೆ ಇರುತ್ತದೆ. ಆದರೆ ಮಲ್ಟಿಬ್ಯಾಸಿಲ್ಲರಿ ಕುಷ್ಠರೋಗದಲ್ಲಿ ಹಲವಾರು ಗಾಯಗಳು ಮತ್ತು ಬ್ಯಾಕ್ಟೀರಿಯಾದ ಪ್ರಭಾವ ಹೆಚ್ಚಾಗಿ ಕಂಡುಬರುತ್ತದೆ. 1873ರಲ್ಲಿ ಕುಷ್ಠರೋಗವನ್ನು ಕಂಡುಹಿಡಿದ ಗೆರ್ಹಾಡ್ ಹ್ಯಾನ್ಸೆನ್ ಎಂಬ ವಿಜ್ಞಾನಿಯ ಹೆಸರಿನ ನೆನಪಿಗಾಗಿ ಹ್ಯಾನ್ಸೆನ್ಸ್ ಡಿಸೀಸ್ ಎಂದೂ ಕರೆಯುತ್ತಾರೆ.

ಕುಷ್ಠರೋಗಕ್ಕೆ ಚಿಕಿತ್ಸೆ

ಈ ರೋಗಕ್ಕೆ ವಿವಿಧ ಔಷಧಿಗಳ ಸಂಯೋಜನೆಯ ಚಿಕಿತ್ಸೆಯನ್ನು ವೈದ್ಯರು ನೀಡಬಹುದು, ಸಾಮಾನ್ಯವಾಗಿ ಇದನ್ನು ಮಲ್ಟಿಡ್ರಗ್ ಥೆರಪಿ (ಎಂಡಿಟಿ) ಎಂದು ಕರೆಯುತ್ತಾರೆ. ಈ ಚಿಕಿತ್ಸೆಯು ಒಂದು ವರ್ಷ ಅಥವಾ ಎರಡು ವರ್ಷಗಳವರೆಗೆ ಇರುತ್ತದೆ. 1982ರಲ್ಲಿ ಕೀಮೋಥೆರಪಿ ಕುರಿತು ಅಧ್ಯಯನ ಮಾಡಿದ ಕುಷ್ಠರೋಗ ತಜ್ಞರ ಗುಂಪು ಶಿಫಾರಸು ಮಾಡಿದ ಎಂಡಿಟಿ ಬಹುಬೇಗ ಪ್ರಮಾಣಿತ ಚಿಕಿತ್ಸೆಯಾಗಿ ಮಾರ್ಪಟ್ಟಿತು. 1995ರಿಂದ ಎಲ್ಲಾ ದೇಶಗಳಿಗೆ ವಿಶ್ವ ಆರೋಗ್ಯ ಸಂಸ್ಥೆಯು ಇದನ್ನೇ ಶಿಫಾರಸು ಮಾಡಿ ಒದಗಿಸಿದೆ.

ಇಂದು ಕುಷ್ಠರೋಗಕ್ಕೆ ಪರಿಣಾಮಕಾರಿ ಚಿಕಿತ್ಸೆಯ ಲಭ್ಯವಿದೆ. ಆದರೆ ಇದಕ್ಕೆ ಸಂಬಂಧಿಸಿದ ಸಾಮಾಜಿಕ ಕಳಂಕವು ಸವಾಲಾಗಿ ಉಳಿದಿದೆ. ಇತಿಹಾಸದುದ್ದಕ್ಕೂ, ಕುಷ್ಠರೋಗದಿಂದ ಪೀಡಿತ ವ್ಯಕ್ತಿಗಳು ರೋಗದ ಸಾಂಕ್ರಾಮಿಕ ಸ್ವಭಾವದ ಬಗ್ಗೆ ತಪ್ಪು ಕಲ್ಪನೆಗಳಿಂದಾಗಿ ತಾರತಮ್ಯ ಮತ್ತು ಸಾಮಾಜಿಕ ಬಹಿಷ್ಕಾರವನ್ನು ಎದುರಿಸಿದ್ದಾರೆ. ಕುಷ್ಠರೋಗದ ಸುತ್ತಲಿನ ಕಳಂಕವನ್ನು ತೊಡೆದುಹಾಕುವ ಪ್ರಯತ್ನಗಳು ಕುಷ್ಠರೋಗ ಮುಕ್ತ ಜಗತ್ತನ್ನು ಸಾಧಿಸುವಲ್ಲಿ ಚಿಕಿತ್ಸೆಯಂತೆಯೇ ನಿರ್ಣಾಯಕವಾಗಿವೆ.

ನಮ್ಮ ದೇಶದಲ್ಲಿ ರಾಷ್ಟ್ರೀಯ ಕುಷ್ಠರೋಗ ದಿನವನ್ನು ಜನವರಿ ತಿಂಗಳ ಕೊನೆಯ ಭಾನುವಾರದಂದು ಆಚರಿಸಲಾಗುತ್ತದೆ, ಈ ಸಂದರ್ಭದಲ್ಲಿ ಕುಷ್ಠರೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು, ಸಾಮಾಜಿಕ ಕಳಂಕವನ್ನು ತೊಡೆದುಹಾಕಲು, ಇದರ ಆರಂಭಿಕ ಪತ್ತೆ ಮತ್ತು ಚಿಕಿತ್ಸೆಯನ್ನು ಉತ್ತೇಜಿಸಲು ಪ್ರಯತ್ನ ಮಾಡಲಾಗುತ್ತಿದೆ.

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com