
ಭಾರತದ ಸುದೀರ್ಘ ಚುನಾವಣಾ ಪ್ರಕ್ರಿಯೆ ಪೂರ್ಣಗೊಂಡಿದ್ದು, ಸ್ಪಷ್ಟ ಫಲಿತಾಂಶ ಹೊರಬಂದಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸತತ ಮೂರನೇ ಬಾರಿಗೆ ಭಾರತದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಆದರೆ, ಈ ಬಾರಿ ಅವರಿಗೆ ನಿರೀಕ್ಷೆಗಿಂತ ಸ್ವಲ್ಪ ಸಣ್ಣ ಮಟ್ಟದ ಬಹುಮತ ಲಭಿಸಿದೆ.
ಚುನಾವಣಾ ಫಲಿತಾಂಶದ ಸುತ್ತಲಿನ ಒಂದಷ್ಟು ಅನಿಶ್ಚಿತತೆಗಳು ಹಾಗೇ ಮುಂದುವರಿದಿದ್ದರೂ, ದೇಶದ ಭದ್ರತಾ ದೃಷ್ಟಿಯಿಂದ ಒಂದು ವಿಚಾರ ಸ್ಪಷ್ಟವಾಗಿದೆ. ಅದೇನೆಂದರೆ, ಭಾರತ ಚೀನಾವನ್ನು ತನ್ನ ಅತಿದೊಡ್ಡ ಭದ್ರತಾ ಅಪಾಯವೆಂದು ಪರಿಗಣಿಸಿದೆ. ಎಲ್ಲ ರಾಜಕೀಯ ಹಿನ್ನೆಲೆಗಳ ಮತದಾರರೂ ಚೀನಾ ಈಗ ರಾಜಕೀಯವಾಗಿ, ಆರ್ಥಿಕವಾಗಿ, ಮತ್ತು ಕಾರ್ಯತಂತ್ರದ ದೃಷ್ಟಿಯಿಂದ ಭಾರತಕ್ಕೆ ಬಹುದೊಡ್ಡ ಸವಾಲು ಎಂದು ಒಪ್ಪಿಕೊಂಡಿದ್ದಾರೆ.
ಇನ್ನು ಸಾಗರ ಸಂಬಂಧಿ ದೃಷ್ಟಿಯಿಂದ ನೋಡಿದಾಗ, ಇದು ಇನ್ನಷ್ಟು ಸ್ಪಷ್ಟವಾಗಿದ್ದು, ಭಾರತ ಮತ್ತು ಚೀನಾಗಳು ಹೆಚ್ಚಿನ ಸಾಗರ ನಿಯಂತ್ರಣಕ್ಕಾಗಿ ಪರಸ್ಪರ ಸ್ಪರ್ಧೆಗಿಳಿದಿವೆ. ಈ ಪ್ರಯತ್ನಗಳು ಪ್ರಾದೇಶಿಕ ಮತ್ತು ಜಾಗತಿಕ ಮಟ್ಟದಲ್ಲೂ ಪ್ರಭಾವ ಬೀರಿವೆ.
ಇತ್ತೀಚೆಗೆ ಭಾರತೀಯ ನೌಕಾ ಸೇನೆ ಕೆಂಪು ಸಮುದ್ರ, ಹಿಂದೂ ಮಹಾಸಾಗರ, ಆಡೆನ್ ಕೊಲ್ಲಿ ಮತ್ತಿತರ ಪ್ರದೇಶಗಳಲ್ಲಿ ಕಡಲ್ಗಳ್ಳತನದ ವಿರುದ್ಧ ಕಾರ್ಯಾಚರಣೆ ನಡೆಸಿತ್ತು. ಆ ಮೂಲಕ, ಸೋಮಾಲಿ ಕಡಲ್ಗಳ್ಳರ ಅಪಾಯವನ್ನು ಪರಿಣಾಮಕಾರಿಯಾಗಿ ಮಟ್ಟ ಹಾಕಿತ್ತು.
ಭಾರತದ ಹೆಚ್ಚುತ್ತಿರುವ ನೌಕಾ ಚಟುವಟಿಕೆಗಳು ಕೇವಲ ಸ್ವಂತ ಗುರಿಗಳ ಸಾಧನೆಗೆ ಮಾತ್ರ ಸೀಮಿತವಾಗಿಲ್ಲ. ಬದಲಿಗೆ, ಭಾರತದ ಚಟುವಟಿಕೆಗಳು ದೊಡ್ಡ ಯೋಜನೆಯೊಂದರ ಭಾಗವಾಗಿದೆ. ಭಾರತದ ನೌಕಾಪಡೆ ಸದೃಢವಾಗಿದ್ದರೆ, ಅದು ಇಂಡೋ - ಪೆಸಿಫಿಕ್ ಪ್ರದೇಶದಲ್ಲಿ ಚೀನಾದ ಪ್ರಭಾವವನ್ನು ತಗ್ಗಿಸಲು ಅಮೆರಿಕಾಗೆ ನೆರವಾಗಲಿದೆ.
ಹಿಂದೂ ಮಹಾಸಾಗರ ಪ್ರದೇಶ ಜಗತ್ತಿನ ಅತ್ಯಂತ ಮುಖ್ಯ ಮತ್ತು ಮೌಲ್ಯಯುತವಾದ ಪ್ರದೇಶಗಳಲ್ಲಿ ಒಂದಾಗಿದೆ. ಇದು ಹಲವು ಭೂಖಂಡಗಳನ್ನು ಸಂಪರ್ಕಿಸುವ ಪ್ರಮುಖ ವ್ಯಾಪಾರ ಮಾರ್ಗವೂ ಹೌದು.
ಜಗತ್ತಿನ ಒಟ್ಟಾರೆ ಮೂರನೇ ಒಂದರಷ್ಟು ಬೃಹತ್ ಸಾಗಾಣಿಕಾ ಹಡಗುಗಳು ಮತ್ತು ಮೂರನೇ ಎರಡರಷ್ಟು ಅಂತಾರಾಷ್ಟ್ರೀಯ ತೈಲ ಸಾಗಾಣಿಕೆ ಈ ಪ್ರಾಂತ್ಯದ ಮೂಲಕವೇ ಸಾಗುತ್ತಿದ್ದು, ಜಾಗತಿಕ ವ್ಯಾಪಾರ, ಇಂಧನ ಮತ್ತು ಭದ್ರತಾ ಕ್ಷೇತ್ರಗಳಲ್ಲಿ ಹಿಂದೂ ಮಹಾಸಾಗರದ ಪ್ರಾಮುಖ್ಯತೆಯನ್ನು ತೋರುತ್ತದೆ.
ಅಮೆರಿಕನ್ ಅಧಿಕಾರಿಗಳೂ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಕಾಪಾಡಿಕೊಳ್ಳುವ ಅವಶ್ಯಕತೆಯನ್ನು ಪ್ರತಿಪಾದಿಸುತ್ತಾ ಬಂದಿದ್ದಾರೆ. ಹಿಂದೂ ಮಹಾಸಾಗರ ಪ್ರದೇಶದಲ್ಲಿ ಈಗ ಚೀನಾದ ಉಪಸ್ಥಿತಿ ಹೆಚ್ಚಾಗತೊಡಗಿದ್ದು, ಇದು ಭಾರತ ಮತ್ತು ಅಮೆರಿಕಾಗಳೆರಡಕ್ಕೂ ಭೌಗೋಳಿಕ ರಾಜಕಾರಣದ ಆತಂಕ ಮೂಡಿಸಿದೆ. ಇಂತಹ ಸನ್ನಿವೇಶದಲ್ಲಿ ಈ ಪ್ರದೇಶದಲ್ಲಿ ಶಾಂತಿ ಮತ್ತು ಭದ್ರತೆಯ ನಿರ್ವಹಣೆ ಹೆಚ್ಚು ಮುಖ್ಯವಾಗಿದೆ.
ಭಾರತ ಪ್ರಥಮ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರೂ ಅವರಿಂದ, ಇಂದಿನ ಪ್ರಧಾನಿ ನರೇಂದ್ರ ಮೋದಿಯವರ ತನಕ, ಎಲ್ಲ ನಾಯಕರೂ ಭಾರತವನ್ನು ಜಾಗತಿಕ ಶಕ್ತಿಯನ್ನಾಗಿಸುವ ಗುರಿ ಹೊಂದಿದ್ದರು.
ಆದರೆ, ಭಾರತವನ್ನು ಒಂದು ನೌಕಾ ಶಕ್ತಿಯನ್ನಾಗಿಸುವ ಕುರಿತು ಗಮನ ಹರಿಸುತ್ತಿರುವುದು ಇತ್ತೀಚಿನ ಬೆಳವಣಿಗೆಯಾಗಿದೆ. ಈ ಬದಲಾವಣೆಗಳಿಗೆ ಪಾಕಿಸ್ತಾನದ ಜೊತೆಗಿರುವ ಐತಿಹಾಸಿಕ ಗಡಿ ಬಿಕ್ಕಟ್ಟು ಮತ್ತು 1962ರ ಭಾರತ - ಚೀನಾ ಯುದ್ಧದ ಬಳಿಕ ಚೀನಾದ ಕುರಿತಂತೆ ಭಾರತದ ಜಾಗರೂಕ ನಿಲುವುಗಳು ಕಾರಣವಾಗಿವೆ.
ಭಾರತೀಯ ನೌಕಾಪಡೆಯ ದಕ್ಷಿಣ ಕಮಾಂಡ್ ಮಾಜಿ ಮುಖ್ಯಸ್ಥರಾದ ವೈಸ್ ಅಡ್ಮಿರಲ್ ಅನಿಲ್ ಕುಮಾರ್ ಚಾವ್ಲಾ ಅವರು "ಪ್ರಬಲ ನೌಕಾ ಶಕ್ತಿಯಾಗಿ ಹೊರಹೊಮ್ಮದ ಹೊರತು ಯಾರಿಗೂ ಜಾಗತಿಕ ಶಕ್ತಿಯಾಗಿ ಹೊರಹೊಮ್ಮಲು ಸಾಧ್ಯವಿಲ್ಲ" ಎಂದು ಅಭಿಪ್ರಾಯ ಪಟ್ಟಿದ್ದರು.
2018ರಲ್ಲಿ ನಡೆದ ಶಾಂಗ್ರಿ-ಲಾ ಸಮಾವೇಶದಲ್ಲಿ, ಪ್ರಧಾನಿ ನರೇಂದ್ರ ಮೋದಿಯವರು ಇಂಡೋ - ಪೆಸಿಫಿಕ್ ಪ್ರದೇಶಕ್ಕೆ ಸಂಬಂಧಿಸಿದಂತೆ ಭಾರತದ ಆಧುನಿಕ ದೃಷ್ಟಿಕೋನವನ್ನು ವಿವರಿಸಿದ್ದರು. ಮೋದಿಯವರು ಇದಕ್ಕಾಗಿ ಜೊತೆಯಾಗಿ ಕಾರ್ಯಾಚರಿಸುವ, ಸಂಪರ್ಕವನ್ನು ಬಲಪಡಿಸುವ, ಮತ್ತು ಸಾಗರ ಸುರಕ್ಷತೆಯನ್ನು ಕಾಪಾಡುವುದರ ಮಹತ್ವವನ್ನು ಒತ್ತಿ ಹೇಳಿದ್ದರು. ನವದೆಹಲಿ ಅತ್ಯಂತ ಕ್ಷಿಪ್ರವಾಗಿ ಈ ಯೋಜನೆಗಳನ್ನು ಜಾರಿಗೆ ತರತೊಡಗಿತು.
ಶಾಂಗ್ರಿ-ಲಾ ಸಮಾವೇಶ ಎನ್ನುವುದು ಏಷ್ಯಾದ ವಾರ್ಷಿಕ ಭದ್ರತಾ ಸಮಾವೇಶವಾಗಿದ್ದು, ಇದರಲ್ಲಿ ವಿವಿಧ ದೇಶಗಳ ರಕ್ಷಣಾ ಸಚಿವರುಗಳು, ಮಿಲಿಟರಿ ಮುಖ್ಯಸ್ಥರು, ನೀತಿ ನಿರೂಪಕರು ಪಾಲ್ಗೊಂಡು, ಪ್ರಾದೇಶಿಕ ಭದ್ರತಾ ವಿಚಾರಗಳು ಮತ್ತು ಪರಸ್ಪರ ಸಹಕಾರದ ಕುರಿತು ಮಾತುಕತೆ ನಡೆಸುತ್ತಾರೆ. ಈ ಸಮಾವೇಶ ಪರಸ್ಪರ ಸಂವಾದ ಮತ್ತು ಸಂಬಂಧಗಳ ಅಭಿವೃದ್ಧಿಗೆ ಉತ್ತಮ ವೇದಿಕೆಯಾಗಿ ಕಾರ್ಯಾಚರಿಸುತ್ತದೆ.
ಇತ್ತೀಚಿನ ವರ್ಷಗಳಲ್ಲಿ, ಭಾರತದ ರಕ್ಷಣಾ ಬಜೆಟ್‌ನಲ್ಲಿ ನೌಕಾ ಸೇನೆಯ ಪಾಲು ಅಂದಾಜು 14%ದಿಂದ 19%ಗೆ ಹೆಚ್ಚಳ ಕಂಡಿದೆ. ಜೂನ್ 2023ರಲ್ಲಿ, ಭಾರತೀಯ ನೌಕಾ ಸೇನೆ ತನ್ನ ಎರಡೂ ವಿಮಾನವಾಹಕ ನೌಕೆಗಳನ್ನು ಒಳಗೊಂಡಂತೆ ಬೃಹತ್ ಅಭ್ಯಾಸ ನಡೆಸಿತು. ಆದರೆ, ಚೀನಾದ ಬಳಿ ಇಂದಿಗೂ ಎರಡು ವಿಮಾನವಾಹಕ ನೌಕೆಗಳ ಸೌಲಭ್ಯವಿಲ್ಲ.
ಭಾರತೀಯ ನೌಕಾ ಸೇನೆ ಇಷ್ಟೊಂದು ಅಭಿವೃದ್ಧಿ ಸಾಧಿಸಿದ್ದರೂ, ನೌಕಾಪಡೆಯ ಸಾಮರ್ಥ್ಯದ ವಿಚಾರದಲ್ಲಿ ಚೀನಾದೊಡನೆ ಇನ್ನೂ ಭಾರೀ ಅಂತರ ಹೊಂದಿದೆ.
ಚೀನಾ ನೌಕಾ ಸೇನೆ ಭಾರತದ ನೌಕಾಪಡೆಗಿಂತ ಮೂರು ಪಟ್ಟಿಗೂ ಹೆಚ್ಚು ದೊಡ್ಡದಾಗಿದೆ. ಅದರೊಡನೆ, ಬೀಜಿಂಗ್ ತನ್ನ ನೌಕಾ ಸಾಮರ್ಥ್ಯವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದ್ದು, ಸ್ಟೆಲ್ತ್ ಜಲಾಂತರ್ಗಾಮಿ ನೌಕೆಗಳನ್ನು ಪಾಕಿಸ್ತಾನಕ್ಕೆ ಕಳುಹಿಸಿದೆ. ದಕ್ಷಿಣ ಚೀನಾ ಸಮುದ್ರದಲ್ಲಿ ಕೃತಕ ದ್ವೀಪಗಳನ್ನು ನಿರ್ಮಿಸಿದ್ದು, ತನ್ನ ನೌಕಾ ಸಾಮರ್ಥ್ಯ ಪ್ರದರ್ಶಿಸಲು ಇತರ ಚಟುವಟಿಕೆಗಳನ್ನು ನಡೆಸುತ್ತಿದೆ.
ಇವೆಲ್ಲ ಕ್ರಮಗಳೂ ಬೀಜಿಂಗ್‌ನ ಮಹತ್ವಾಕಾಂಕ್ಷಿ 'ಸ್ಟಿಂಗ್ ಆಫ್ ಪರ್ಲ್ಸ್' ಯೋಜನೆಯ ಭಾಗವಾಗಿದ್ದು, ಈ ಯೋಜನೆ ಭಾರತೀಯ ಉಪಖಂಡದ ಸುತ್ತಲೂ ನೌಕಾ ನೆಲೆಗಳು ಮತ್ತು ಬಂದರುಗಳನ್ನು ಸ್ಥಾಪಿಸಲು ಉದ್ದೇಶಿಸಿದೆ. ಚೀನಾದ ಈ ಕಾರ್ಯತಂತ್ರ ನವದೆಹಲಿಗೆ ಹೆಚ್ಚಿನ ಆತಂಕ ಉಂಟುಮಾಡಿದೆ.
ಚೀನಾದ ಪ್ರಭಾವ ಹೆಚ್ಚುತ್ತಿರುವ ಕುರಿತು ಕೇವಲ ಭಾರತ ಮಾತ್ರ ಆತಂಕ ಹೊಂದಿಲ್ಲ. ಹಿಂದೂ ಮಹಾಸಾಗರದ ಪ್ರಾಂತ್ಯದಲ್ಲಿ ಚೀನಾ ತನ್ನ ಉಪಸ್ಥಿತಿಯನ್ನು ಹೆಚ್ಚಿಸಿಕೊಳ್ಳುತ್ತಿರುವುದು ಅಮೆರಿಕಾಗೂ ತಲೆನೋವು ಉಂಟುಮಾಡಿದೆ. ಇಂಡೋ - ಪೆಸಿಫಿಕ್ ಪ್ರದೇಶದಲ್ಲಿ ಹೆಚ್ಚಿನ ಸ್ಥಿರತೆ ಸಾಧಿಸುವ ಸಲುವಾಗಿ, ಅಮೆರಿಕಾ ಪ್ರಾದೇಶಿಕ ಸಹಯೋಗ ಸ್ಥಾಪಿಸುತ್ತಿದ್ದು, ಜಪಾನ್, ಭಾರತ ಮತ್ತು ಆಸ್ಟ್ರೇಲಿಯಾ ಜೊತೆಗಿನ ಕ್ವಾಡ್ ಒಕ್ಕೂಟ ಇದಕ್ಕೊಂದು ಉದಾಹರಣೆಯಾಗಿದೆ.
ಅದರೊಡನೆ, ಭಾರತದ ನೌಕಾ ಸೇನೆಯ ಸಾಮರ್ಥ್ಯ ವೃದ್ಧಿಯನ್ನು ಬೆಂಬಲಿಸುವುದು ಅಮೆರಿಕಾ ಮುಂದಿರುವ ಇನ್ನೊಂದು ಉಪಾಯವಾಗಿದೆ. ಈ ಪ್ರಯತ್ನ, ಚೀನಾದ ಹೆಚ್ಚುತ್ತಿರುವ ಸಾಮರ್ಥ್ಯ ಮತ್ತು ಆಕ್ರಮಣಶೀಲತೆಗೆ ತಡೆ ಒಡ್ಡುವ ಅಮೆರಿಕಾದ ಗುರಿಗೆ ಪೂರಕವಾಗಿದ್ದು, ಈಗಾಗಲೇ ಸದೃಢವಾಗಿರುವ ವಾಷಿಂಗ್ಟನ್ - ನವದೆಹಲಿ ಸಂಬಂಧವನ್ನು ಇನ್ನಷ್ಟು ಭದ್ರಗೊಳಿಸುತ್ತಿದೆ.
ತಂತ್ರಜ್ಞಾನ ಮತ್ತು ಮಿಲಿಟರಿ ವ್ಯಾಪಾರಕ್ಕೆ ಉತ್ತೇಜನ ನೀಡುವುದು, ಜಂಟಿ ನೌಕಾ ಅಭ್ಯಾಸಗಳನ್ನು ನಡೆಸುವುದು, ಮಾಹಿತಿ ವಿನಿಮಯ ವ್ಯವಸ್ಥೆಯನ್ನು ಉತ್ತಮಪಡಿಸುವುದು ಮುಂತಾದ ಕ್ರಮಗಳಿಂದ, ವಾಷಿಂಗ್ಟನ್ ಇಂಡೋ - ಪೆಸಿಫಿಕ್ ಪ್ರದೇಶವನ್ನು ಸೂಕ್ಷ್ಮವಾಗಿ ನಿರ್ವಹಿಸಲು ಭಾರತಕ್ಕೆ ನೆರವಾಗಬಹುದು.
ಭಾರತ ಮತ್ತು ಅಮೆರಿಕಾಗಳೆರಡೂ ಭವಿಷ್ಯದೆಡೆಗೆ ದೃಷ್ಟಿ ಹರಿಸುವಾಗ, ಹಿಂದೂ ಮಹಾಸಾಗರ ಪ್ರದೇಶದಲ್ಲಿ ಚೀನಾದ ಉಪಸ್ಥಿತಿ ಒಂದು ನಿರಂತರ ಸವಾಲಾಗಿ ಕಂಡುಬರುತ್ತಿದೆ. ಆದ್ದರಿಂದ, ಚೀನೀ ಡ್ರ್ಯಾಗನ್ ನಿಯಂತ್ರಣಕ್ಕೆ ಅಂಕುಶವಿಡಲು ಭಾರತೀಯ ನೌಕಾಪಡೆಯ ಸಾಮರ್ಥ್ಯವನ್ನು ಹೆಚ್ಚಿಸುವುದು ಕಾರ್ಯತಂತ್ರದ ಆದ್ಯತೆಯಾಗಬೇಕಿದೆ.
- ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
Advertisement