
ಡ್ರೈ ಐ ಸಿಂಡ್ರೋಮ್ ಅಥವಾ ಕೆರಾಟೊಕಂಜಂಕ್ಟಿವಿಟಿಸ್ ಸಿಕ್ಕಾ ಎಂದೂ ಕರೆಯಲಾಗುವ ಶುಷ್ಕ ನೇತ್ರ ಅಥವಾ ಒಣ ಕಣ್ಣು ಒಂದು ಸಾಮಾನ್ಯ ಸ್ಥಿತಿ. ಈ ಸಮಸ್ಯೆ ಇದ್ದಾಗ ಕಣ್ಣುಗಳು ಸಾಕಷ್ಟು ಕಣ್ಣೀರನ್ನು ಉತ್ಪಾದಿಸುವುದಿಲ್ಲ ಅಥವಾ ಕಣ್ಣೀರು ಬೇಗನೆ ಆವಿಯಾಗುತ್ತದೆ.
ಇದರಿಂದ ಕಣ್ಣಿನ ಮೇಲ್ಮೈಯಲ್ಲಿ ತೇವಾಂಶದ ಕೊರತೆ ಉಂಟಾಗುತ್ತದೆ ಮತ್ತು ಕಣ್ಣಿನಲ್ಲಿ ಮೃದುತ್ವ ಇರುವುದಿಲ್ಲ. ಇದರಿಂದ ಕಣ್ಣಿನಲ್ಲಿ ಕುಟುಕಿದ ಅನುಭವವಾಗುತ್ತದೆ ಮತ್ತು ಸೂಕ್ತ ಚಿಕಿತ್ಸೆ/ಆರೈಕೆ ಮಾಡದಿದ್ದರೆ ಕ್ರಮೇಣ ದೃಷ್ಟಿಯ ತೊಂದರೆಯು ಉಂಟಾಗುವ ಸಾಧ್ಯತೆ ಇರುತ್ತದೆ.
ಒಣ ಕಣ್ಣುಗಳ ಸಾಮಾನ್ಯ ಲಕ್ಷಣಗಳೆಂದರೆ ಕಣ್ಣಿನಲ್ಲಿ ಉರಿ, ಗೀರಿದಂತಹ ಸಂವೇದನೆ, ಲೋಳೆ ಇರುವಂತೆ ಅನುಭವ, ಬೆಳಕಿಗೆ ಸೂಕ್ಷ್ಮತೆ, ಕಣ್ಣು ಕೆಂಪಾಗುವುದು, ಕಣ್ಣಿನೊಳಗೆ ಏನೋ ಇದೆ ಎಂದೆನಿಸುವುದು, ಕಿರಿಕಿರಿ, ಮಂದ ದೃಷ್ಟಿ ಮತ್ತು ಕಣ್ಣಿಗೆ ಆಯಾಸವಾದ ಅನುಭವವಾಗುವುದು.
ಇತ್ತೀಚೆಗೆ ಮಕ್ಕಳೂ ಸೇರಿದಂತೆ ಎಲ್ಲರೂ ಮೊಬೈಲ್ ಮಾಯೆಗೆ ಮರುಳಾಗಿ ಅದರೊಂದಿಗೆ ಹೆಚ್ಚು ಕಾಲ ರೆಪ್ಪೆಯನ್ನೂ ಮಿಟುಕಿಸದಂತೆ ಮಗ್ನರಾಗಿರುವ ಕಾಲದಲ್ಲಿ ಒಣ ಕಣ್ಣಿನ ಸಮಸ್ಯೆ ಸಾಮಾನ್ಯವಾಗಿಬಿಟ್ಟಿರುವುದಂತೂ ನಿಜ. ವಯಸ್ಸಾದವರಲ್ಲಿ ಮತ್ತು ಋತುಬಂಧದ ನಂತರ ಮಹಿಳೆಯರಲ್ಲಿ ಇದು ಸಾಧಾರಣವಾಗಿ ಕಂಡುಬರುತ್ತದೆ. ಕೆಲವೊಮ್ಮೆ ರುಮಟಾಯ್ಡ್ ಸಂಧಿವಾತ ಮತ್ತು ಮಧುಮೇಹದಂತಹ ಅಸ್ವಸ್ಥತೆಗಳಿಂದ ಕಣ್ಣೀರಿನ ಉತ್ಪಾದನೆ ಕಡಿಮೆ ಆಗಬಹುದು. ಕೆಲವರು ಆರೋಗ್ಯ ಸಮಸ್ಯೆಗಳಿಗೆ ಔಷಧಿ/ಮಾತ್ರೆ ತೆಗೆದುಕೊಂಡಾಗ ಅವು ಕಣ್ಣೀರಿನ ಉತ್ಪಾದನೆಯನ್ನು ಕಡಿಮೆ ಮಾಡಬಹುದು. ಉರಿಯೂತ ಅಥವಾ ವಿಕಿರಣದಿಂದ ಉಂಟಾಗುವ ಹಾನಿ ಕಣ್ಣೀರನ್ನು ಉತ್ಪಾದಿಸುವ ಗ್ರಂಥಿಗಳನ್ನು ದುರ್ಬಲಗೊಳಿಸುತ್ತದೆ. ಇದರಿಂದ ಕಣ್ಣೀರಿನ ಉತ್ಪಾದನೆಯನ್ನು ಕಡಿಮೆ ಆಗಬಹುದು. ನೈಸರ್ಗಿಕವಾಗಿ ವಯಸ್ಸಾದಂತೆ ಕಣ್ಣಿನಲ್ಲಿ ಕಣ್ಣೀರಿನ ಉತ್ಪಾದನೆ ಕಡಿಮೆಯಾದರೂ ಒಣ ಕಣ್ಣಿನ ಸಮಸ್ಯೆ ಬರಬಹುದು.
ನಗರಪ್ರದೇಶಗಳಲ್ಲಿ AC, ಗಾಳಿ, ಹೊಗೆ ಅಥವಾ ಒಣ ಗಾಳಿಗೆ ಒಡ್ಡಿಕೊಳ್ಳುವುದರಿಂದ ಕಣ್ಣೀರಿನ ಆವಿಯಾಗುವಿಕೆ ಹೆಚ್ಚಾಗಬಹುದು. ತೀವ್ರವಾಗಿ ಟಿವಿ, ಸಿನೆಮಾ ನೋಡುವುದು, ಓದುವುದು ಅಥವಾ ಕಂಪ್ಯೂಟರುಗಳನ್ನು ಕೆಲಸಕ್ಕೆ/ಗೇಮ್ ಆಡಲು ಬಳಸಿದಾಗ ಕಣ್ಣುಗಳನ್ನು ಸರಿಯಾಗಿ ಮಿಟುಕಿಸದೇ ಇದ್ದಾಗ ಕಣ್ಣೀರಿನ ಆವಿಯಾಗುವಿಕೆ ಹೆಚ್ಚಾಗುತ್ತದೆ. ಕೆಲವೊಮ್ಮೆ ಕಣ್ಣುರೆಪ್ಪೆಯ ಸಮಸ್ಯೆಗಳು ಅಂದರೆ ಎಕ್ಟ್ರೋಪಿಯಾನ್ (ಕಣ್ಣುರೆಪ್ಪೆಗಳ ಹೊರಭಾಗಕ್ಕೆ ತಿರುಗುವುದು) ಅಥವಾ ಎಂಟ್ರೋಪಿಯಾನ್‌ನಂತಹ (ಕಣ್ಣುರೆಪ್ಪೆಗಳ ಒಳಮುಖವಾಗಿ ತಿರುಗುವುದು) ಪರಿಸ್ಥಿತಿಗಳು ಕಣ್ಣೀರನ್ನು ಬೇಗನೆ ಆವಿಯಾಗುವಂತೆ ಮಾಡುತ್ತದೆ. ಆಗಲೂ ಒಣ ಕಣ್ಣಿನ ಸಮಸ್ಯೆ ಕಾಣಿಸಿಕೊಳ್ಳಬಹುದು. ಈ ಸಮಸ್ಯೆಗೆ ಚಿಕಿತ್ಸೆ ಪಡೆಯದಿದ್ದರೆ ಕಣ್ಣಿನ ನೋವು ಹೆಚ್ಚಾಗುತ್ತದೆ. ಸೋಂಕು ತಗಲಬಹುದು ಕಣ್ಣಿನ ಮುಂಭಾಗದ ಕಾರ್ನಿಯಾದಲ್ಲಿ ಹುಣ್ಣುಗಳು ಅಥವಾ ಚುಕ್ಕೆಗಳನ್ನು ಉಂಟುಮಾಡಬಹುದು. ದೃಷ್ಟಿ ನಷ್ಟ ಆಗಬಹುದು. ಒಣ ಕಣ್ಣಿನ ಸಮಸ್ಯೆ ಪರಿಹಾರಕ್ಕೆ ವೈದ್ಯರನ್ನು ಕಂಡರೆ ಐ ಡ್ರಾಪ್ಸುಗಳನ್ನು ನೀಡಿ ಸುಧಾರಣೆಗೆ ಸಹಾಯ ಮಾಡುತ್ತಾರೆ.
ಒಣ ಕಣ್ಣಿನ ಸಮಸ್ಯೆಯಿಂದ ಪಾರಾಗಲು ಕಣ್ಣುಗಳಲ್ಲಿ ಗಾಳಿ ಹೆಚ್ಚಾಗಿ ಹೋಗದಂತೆ ನೋಡಿಕೊಳ್ಳಬೇಕು. ಇದರಿಂದ ಕಣ್ಣೀರು ಬೇಗನೆ ಆವಿಯಾಗುವುದಿಲ್ಲ. ಆದ್ದರಿಂದ ಹೇರ್ ಡ್ರೈಯರ್ಗಳು, ಕಾರ್ ಏಸಿ, ಹೀಟರ್‌ಗಳು, ಏರ್ ಕಂಡಿಷನರ್ ಅಥವಾ ಫ್ಯಾನ್‌ಗಳನ್ನು ಕಣ್ಣುಗಳ ಕಡೆಗೆ ಹೆಚ್ಚು ಇಟ್ಟುಕೊಳ್ಳಬೇಡಿ. ಹೊರಗಡೆ ಹೋದಾಗ ಸನ್ ಗ್ಲಾಸ್ ಅಥವಾ ರಕ್ಷಣಾತ್ಮಕ ಕನ್ನಡಕಗಳನ್ನು ಬಳಸಿ. ಗಾಳಿ ಮತ್ತು ಶುಷ್ಕ ಗಾಳಿಯನ್ನು ನಿರ್ಬಂಧಿಸಲು ಸುರಕ್ಷತಾ ಸಾಧನಗಳನ್ನು ಕನ್ನಡಕದ ಮೇಲ್ಭಾಗ ಮತ್ತು ಬದಿಗಳಿಗೆ ಸೇರಿಸಬಹುದು.
ಬಹಳ ಹೊತ್ತು ಕೆಲಸ ಮಾಡಬೇಕಾಗಿ ಬಂದಾಗಿ ಅದರಲ್ಲಿಯೂ ಕಂಪ್ಯೂಟರ್ ಬಳಸಿ ಕೆಲಸ ಮಾಡಬೇಕೆಂದಾಗ ಎವೆಯಿಕ್ಕದೇ ಕೆಲಸ ಮಾಡಬಾರದು. ಆಗಾಗ ಕಣ್ಣಿಗೆ ವಿಶ್ರಾಂತಿ ಕೊಡಿ. ಕಂಪ್ಯೂಟರ್ ಪರದೆಯನ್ನು ಕಣ್ಣಿನ ಮಟ್ಟಕ್ಕಿಂತ ಕೆಳಗೆ ಇರಿಸಿ. ಕಂಪ್ಯೂಟರ್ ಪರದೆಯು ಕಣ್ಣಿನ ಮಟ್ಟಕ್ಕಿಂತ ಮೇಲೆ ಇದ್ದರೆ ಅದನ್ನು ನೋಡಲು ಕಣ್ಣುಗಳನ್ನು ಅಗಲವಾಗಿ ತೆರೆದಾಗ ಕಣ್ಣೀರು ಬೇಗ ಆವಿಯಾಗುವ ಸಂಭವವಿರುತ್ತದೆ.
ಹಗಲು ರಾತ್ರಿ ಎನ್ನದೇ ಗಂಟೆಗಟ್ಟಲೇ ಮೊಬೈಲ್ ಫೋನಿನಿಂದ ಮನೆರಂಜನೆ ಪಡೆಯುವುದನ್ನು ನಿಲ್ಲಿಸಬೇಕು ಮತ್ತು ವಿದ್ಯಾರ್ಥಿಗಳಾಗಲೀ ದೊಡ್ಡವರಾಗಲೀ ಅತಿ ಹೆಚ್ಚು ಕಾಲ ಪುಸ್ತಕ ಓದುವುದು, ಟಿವಿ, ಸಿನೆಮಾ ನೋಡುವುದು ಸಲ್ಲದು. ಇಂತಹ ಚಟುವಟಿಕೆಗಳಲ್ಲಿ ತೊಡಗಿದಾಗ ಆಗಾಗ ಕೆಲವು ನಿಮಿಷಗಳ ಕಾಲ ಕಣ್ಣುಗಳನ್ನು ಮುಚ್ಚಿ ಅಥವಾ ಕಣ್ಣೀರನ್ನು ಕಣ್ಣುಗಳ ಮೇಲೆ ಸಮವಾಗಿ ಹರಡಲು ಸಹಾಯ ಮಾಡಲು ಕೆಲವು ಸೆಕೆಂಡುಗಳ ಕಾಲ ಪದೇ ಪದೇ ಕಣ್ಣುಗಳನ್ನು ಮಿಟುಕಿಸಿ.
ಕಣ್ಣುಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ತಾಜಾ ಆಗಿರುವ ಹಸಿ ಸೊಪ್ಪುಗಳನ್ನು ಸೇವಿಸಿ. ಕೆಲವು ಸೊಪ್ಪುಗಳಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ, ಇದು ಕಣ್ಣಿನ ಆರೋಗ್ಯಕ್ಕೆ ಪ್ರಮುಖ ಪೋಷಕಾಂಶ. ಒಮೆಗಾ-3 ಕೊಬ್ಬಿನಾಮ್ಲಗಳು ದೀರ್ಘಕಾಲದ ಒಣ ಕಣ್ಣು ಹೊಂದಿರುವ ಜನರಿಗೆ ಪ್ರಯೋಜನಕಾರಿ. ಆದ್ದರಿಂದ ಒಮೆಗಾ 3 ಕೊಬ್ಬಿನಾಮ್ಲಗಳ ಉತ್ತಮ ಮೂಲಗಳಾಗಿರುವ ಚಿಯಾ ಮತ್ತು ಅಗಸೆ ಬೀಜಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಿ. ಗೋಡಂಬಿ, ದ್ರಾಕ್ಷಿ, ಬಾದಾಮಿ ಮತ್ತು ಖರ್ಜೂರದಂತಹ ಡ್ರೈ ಫ್ರೂಟ್ಸ್ಗಳಲ್ಲಿ ವಿಟಮಿನ್ ಇ ಮತ್ತು ವಿಟಮಿನ್ ಸಿ ಅಧಿಕವಾಗಿವೆ. ಇವುಗಳನ್ನೂ ಸೇವಿಸಿ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಕಣ್ಣುಗಳನ್ನು ಆರೋಗ್ಯವಾಗಿಡುವಲ್ಲಿ ನೀರು ಪ್ರಮುಖ ಪಾತ್ರ ವಹಿಸುತ್ತದೆ. ದೇಹದಲ್ಲಿ ಸಾಕಷ್ಟು ನೀರು ಇಲ್ಲದಿದ್ದರೆ, ಕಣ್ಣುಗಳು ಒಣಗುತ್ತವೆ. ಆದ್ದರಿಂದ ನಿಯಮಿತವಾಗಿ ನೀರು ಕುಡಿಯುವುದು ಒಣ ಕಣ್ಣುಗಳನ್ನು ತಡೆಯಲು ಸಹಾಯ ಮಾಡುತ್ತದೆ ಎಂಬುದನ್ನು ನೆನಪಿಡಿ.
ಆಯುವೇದದಲ್ಲಿ ತಿಳಿಸಿರುವಂತೆ ನೇತ್ರ ತರ್ಪಣ ಚಿಕಿತ್ಸೆಯನ್ನು ವರ್ಷದಲ್ಲಿ ಒಂದು ಬಾರಿ ತೆಗೆದುಕೊಂಡರೆ ಒಣ ಕಣ್ಣಿನ ಸಮಸ್ಯೆಯಿಂದ ದೂರಾಗಬಹುದು.
Advertisement