ಲಿಗಮೆಂಟ್ ಟೇರ್ ಅಥವಾ ಅಸ್ಥಿರಜ್ಜು ಛಿದ್ರತೆ (ಕುಶಲವೇ ಕ್ಷೇಮವೇ)

ಲಿಗಮೆಂಟ್ (ಅಸ್ಥಿರಜ್ಜು) ನಮ್ಮ ದೇಹದಾದ್ಯಂತ ಇರುವ ಮೂಳೆಗಳನ್ನು ಕೀಲು ಭಾಗದಲ್ಲಿ ಬಲವಾಗಿ ಒಟ್ಟಿಗೆ ಜೋಡಿಸುವ ಅಂಗಾಂಶ.
Ligament Tears
ಲಿಗಮೆಂಟ್ ಟೇರ್online desk

ಲಿಗಮೆಂಟ್ (ಅಸ್ಥಿರಜ್ಜು) ನಮ್ಮ ದೇಹದಾದ್ಯಂತ ಇರುವ ಮೂಳೆಗಳನ್ನು ಕೀಲು ಭಾಗದಲ್ಲಿ ಬಲವಾಗಿ ಒಟ್ಟಿಗೆ ಜೋಡಿಸುವ ಅಂಗಾಂಶ. ಅಸ್ಥಿರಜ್ಜು ಇರುವುದರಿಂದಲೇ ಕೀಲು ಮೂಳೆಗಳ ಚಲನೆ ಅಂದರೆ ಉದಾಹರಣೆಗೆ ಪಾದಗಳನ್ನು ಬೇಕಾದ ಹಾಗೆ ಬಗ್ಗಿಸುವುದು ಮತ್ತು ಬೆರಳುಗಳನ್ನು ಅತ್ತಿತ್ತ ಸರಿಸಲು ಸಾಧ್ಯವಾಗಿದೆ.

ಅಸ್ಥಿರಜ್ಜು ಕೆಲವೊಮ್ಮೆ ಹಿಗ್ಗಿದಾಗ ಅಥವಾ ಸಾಮರ್ಥ್ಯಕ್ಕಿಂತ ಹೆಚ್ಚಾಗಿ ಬಳಸಿದಾಗ, ಆಯಾಸವಾದಾಗ ಹರಿದು ಹೋದಾಗ ಅಥವಾ ಗಾಯವಾದಾಗ ಲಿಗಮೆಂಟ್ ಟೇರ್ ಉಂಟಾಗುತ್ತದೆ. ಹೀಗೆ ಅಸ್ಥಿರಜ್ಜು ಛಿದ್ರವಾದಾಗ ಅಥವಾ ಅದಕ್ಕೆ ಗಾಯವಾದಾಗ ಅದರ ಕಾರ್ಯ ದುರ್ಬಲವಾಗುತ್ತದೆ ಮತ್ತು ಅಪಾರ ನೋವು ಉಂಟಾಗುತ್ತದೆ. ಇದು ಸಾಮಾನ್ಯವಾಗಿ ಪಾದದ, ಮೊಣಕಾಲು ಮತ್ತು ಮಣಿಕಟ್ಟು ಮತ್ತು ಹೆಬ್ಬೆರಳಿನ ಮೇಲೆ ಪರಿಣಾಮ ಬೀರುತ್ತದೆ. ಲಿಗಮೆಂಟ್ ಟೇರ್ ದೇಹದ ಯಾವುದೇ ಕೀಲಿನಲ್ಲಿ ಉಂಟಾಗಬಹುದು. ಆಗ ಅದಕ್ಕೆ ಸಂಬಂಧಿಸಿದ ಮೂಳೆ/ಭಾಗಗಳ ಚಲನೆ/ಕಾರ್ಯದ ಮೇಲೆ ಪರಿಣಾಮ ಉಂಟಾಗುತ್ತದೆ.

ಸಾಮಾನ್ಯವಾಗಿ ಕ್ರೀಡಾಪಟುಗಳಲ್ಲಿ ಅಸ್ಥಿರಜ್ಜು ಗಾಯವಾಗುವುದನ್ನು ನಾವು ಕಂಡಿದ್ದೇವೆ. ಟೆನ್ನಿಸ್, ಫುಟ್ಬಾಲ್, ಕ್ರಿಕೆಟ್ಟಿನಂತಹ ಕ್ರೀಡೆಗಳಲ್ಲಿ ತೊಡಗಿರುವಾಗ ಇಡೀ ದೇಹದ ಭಾರವನ್ನು ಮೊಣಕಾಲಿನ ಮೇಲೆ ಬಿಟ್ಟಾಗ ಅಸ್ಥಿರಜ್ಜು ಹರಿಯುತ್ತದೆ. ಕೇವಲ ಕ್ರೀಡಾಪಟುಗಳಷ್ಟೇ ಅಲ್ಲ ಜನಸಾಮಾನ್ಯರೂ ಕೂಡ ಕೆಲಸ ಮಾಡುವಾಗ ಅಥವಾ ಕಾಲುಗಳನ್ನು ಹೇಗೆಹೇಗೋ ತಿರುಗಿಸಿದಾಗ ಅಥವಾ ಅಪಘಾತಗಳ ಸಂದರ್ಭಗಳಲ್ಲಿ ನೇರವಾಗಿ ಕೀಲುಗಳಿಗೆ/ಮೊಣಕಾಲಿಗೆ ಗಾಯವಾದಾಗ ಅಸ್ಥಿರಜ್ಜು ಹರಿಯುತ್ತದೆ. ಕೆಲವೊಮ್ಮೆ ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳದೇ ಕೀಲು/ಮೊಣಕಾಲಿನ ಮೇಲೆ ಅತಿಯಾಗಿ ಒತ್ತಡ ಬಿದ್ದಾಗ ಅಥವಾ ಹಠಾತ್ತಾಗಿ ಮೇಲಿನಿಂದ ಕೆಳಗೆ ಬಿದ್ದ ಆಘಾತದಿಂದ ಅಸ್ಥಿರಜ್ಜು ದುರ್ಬಲವಾಗಿ ಗಾಯಗೊಳ್ಳುತ್ತದೆ.

ಲಿಗಮೆಂಟ್ ಟೇರ್ ಲಕ್ಷಣಗಳು

ಅಸ್ಥಿರಜ್ಜು ಗಾಯದ ಲಕ್ಷಣಗಳು ಗಾಯದ ತೀವ್ರತೆಯನ್ನು ಅವಲಂಬಿಸಿ ಬದಲಾಗಬಹುದು ಆದರೆ ಸಾಮಾನ್ಯವಾಗಿ ಗಾಯವಾದ ಭಾಗದಲ್ಲಿ ತಕ್ಷಣ ಮತ್ತು ತೀವ್ರವಾದ ನೋವು ಕಾಣಿಸಿಕೊಳ್ಳುತ್ತದೆ. ಉರಿಯೂತ ಮತ್ತು ದ್ರವದ ಶೇಖರಣೆಯಿಂದಾಗಿ ಕೀಲಿನ ಸುತ್ತಲೂ ಊತ ಕಂಡುಬರುತ್ತದೆ. ಮೂಗೇಟುಗಳಾದಾಗ ರಕ್ತನಾಳಗಳು ಹಾನಿಗೊಳಗಾಗುವುದರಿಂದ ಕೀಲಿನ ಭಾಗ ನಿರ್ವರ್ಣವಾಗುತ್ತದೆ. ಚಲಿಸುವಾಗ ಕೀಲುಗಳಲ್ಲಿ ಅಸ್ಥಿರತೆ ಕಂಡುಬರುತ್ತದೆ. ಮಂಡಿಯಲ್ಲಿ ಗಾಯವಾಗಿದ್ದಲ್ಲಿ ಮಂಡಿಯ ಚಿಪ್ಪು ಹೊರಬರುವಂತಹ ಭಾವನೆ ಉಂಟಾಗಬಹುದು. ಕೀಲುಗಳನ್ನು ಪೂರ್ಣ ಸಾಮರ್ಥ್ಯಕ್ಕೆ ತಕ್ಕಂತೆ ಚಲಿಸಲು ಆಗವುದಿಲ್ಲ.

Ligament Tears
ವೆಸ್ಟ್ ನೈಲ್ ಜ್ವರ ಅಥವಾ West Nile fever: ಲಕ್ಷಣಗಳು ಮತ್ತು ಚಿಕಿತ್ಸೆ (ಕುಶಲವೇ ಕ್ಷೇಮವೇ)

ಲಿಗಮೆಂಟ್ ಟೇರ್ ತೀವ್ರತೆ

ತೀವ್ರತೆಯ ಆಧಾರದ ಅಸ್ಥಿರಜ್ಜಿನ ಗಾಯವನ್ನು ಈ ರೀತಿಯಲ್ಲಿ ವರ್ಗೀಕರಿಸಲಾಗಿದೆ: ಗ್ರೇಡ್ 1ರಲ್ಲಿ ಅಸ್ಥಿರಜ್ಜಿಗೆ ಸೌಮ್ಯವಾದ ಉಳುಕು ಆದರೆ ಹರಿದಿರುವುದಿಲ್ಲ/ಗಾಯವಾಗಿರುವುದಿಲ್ಲ; ಗ್ರೇಡ್ 2ರಲ್ಲಿ ಸಾಧಾರಣ ಉಳುಕುಂಟಾಗಿ ಅಸ್ಥಿರಜ್ಜು ಭಾಗಶ: ಛಿದ್ರವಾಗಿರುತ್ತದೆ ಮತ್ತು ಗ್ರೇಡ್ 3ರಲ್ಲಿ ಅಸ್ಥಿರಜ್ಜು ಸಂಪೂರ್ಣವಾಗಿ ಛಿದ್ರವಾಗಿ ಕೀಲು ಅಸ್ಥಿರವಾಗುತ್ತದೆ.

ಅಸ್ಥಿರಜ್ಜು ಛಿದ್ರತೆಯನ್ನು ನೋವು, ಊತ ಮತ್ತು ಕೀಲಿನ ಸ್ಥಿರತೆಯನ್ನು ದೈಹಿಕ ಪರೀಕ್ಷೆಯ ಮೂಲಕ ಮತ್ತು ಎಕ್ಸ್-ರೇ, MRI ಮತ್ತು ಅಲ್ಟ್ರಾಸೌಂಡ್ ಪರೀಕ್ಷೆಗಳ ಮೂಲಕ ಅಸ್ಥಿರಜ್ಜಿನ ಮೆದು ಅಂಗಾಂಶಗಳಿಗೆ ಆಗಿರುವ ಹಾನಿಯನ್ನು ತಿಳಿದುಕೊಳ್ಳಬಹುದು.

ಲಿಗಮೆಂಟ್ ಟೇರ್ ಚಿಕಿತ್ಸೆ

ಗಾಯದ ಮತ್ತು ಛಿದ್ರತೆಯ ತೀವ್ರತೆಯ ಆಧಾರದ ಮೇಲೆ ಅಸ್ಥಿರಜ್ಜಿನ ಗಾಯದ ಚಿಕಿತ್ಸೆಯನ್ನು ನಿರ್ಧರಿತವಾಗುತ್ತದೆ. ಮೊದಲಿಗೆ ರೋಗಿಗಳಿಗೆ ವಿಶ್ರಾಂತಿ ನೀಡಬೇಕು. ಐಸ್ ಪ್ಯಾಕುಗಳನ್ನು ಬಾಧಿತ ಭಾಗಗಳಿಗೆ ಇಟ್ಟು ನೋವನ್ನು ಕಡಿಮೆ ಮಾಡಿಕೊಳ್ಳಬಹುದು. ಆ ಭಾಗವನ್ನು ಬ್ಯಾಂಡೇಜಿನಿಂದ ಕಟ್ಟಿ ಸಂಕುಚಿತಗೊಳಿಸಿ ಊತವನ್ನು ಕಡಿಮೆ ಮಾಡಲು ಪ್ರಯತ್ನ ಮಾಡಬಹುದು. ನಂತರ ನೋವು ನಿವಾರಕ ಮತ್ತು ಊರಿಯೂತದ ಶಮನಕ್ಕೆ ಔಷಧಗಳನ್ನು ಸೇವಿಸಬೇಕು. ಇದಾದ ಮೇಲೆ ನಿಯಮಿತವಾಗಿ ಫಿಸಿಯೋ ಥೆರಪಿಯ ಮೂಲಕ ಬಾಧಿತ ಭಾಗದ ಸಾಮಾನ್ಯ ಕಾರ್ಯವನ್ನು ಪುನ:ಸ್ಥಾಪಿಸಲು ಸೂಕ್ತ ವ್ಯಾಯಾಮಗಳನ್ನು ಮಾಡಬೇಕು. ಜೊತೆಗೆ ಮನೆಯಲ್ಲಿಯೇ ಬಿಸಿಮಾಡಿದ ಎಳ್ಳೆಣ್ಣೆಗೆ ಕರ್ಪೂರ ಬೆರೆಸಿ ಬಾಧಿತ ಭಾಗಕ್ಕೆ ಹಾಕಿ ಮೃದುವಾಗಿ ಮಸಾಜು ಮಾಡಿ ನಂತರ ಬಿಸಿ ನೀರಿನಿಂದ ತೊಳೆದುಕೊಳ್ಳಬೇಕು. ಇದರಿಂದ ನೋವು ಶಮನವಾಗುತ್ತದೆ. ತೀವ್ರತರವಾದ ಪ್ರಕರಣಗಳಲ್ಲಿ ಬಾಧಿತ ಭಾಗಕ್ಕೆ ಇತರ ಅಸ್ಥಿರಜ್ಜುಗಳಿಂದ ಅಗತ್ಯಕ್ಕೆ ತಕ್ಕಂತೆ ಅಂಗಾಂಶಗಳನ್ನು ಕಸಿ ಮಾಡುತ್ತಾರೆ. ಈ ಎಲ್ಲಾ ಔಷಧಿ/ಚಿಕಿತ್ಸೆ ನಡೆದು ರೋಗಿಗಳು ಇದರಿಂದ ಗುಣಮುಖರಾಗಲು ಐದಾರು ತಿಂಗಳುಗಳೇ ಬೇಕಾಗಬಹುದು.

Ligament Tears
ಮುಟ್ಟಿನ ನೋವು ಅಥವಾ Dysmenorrhea (ಕುಶಲವೇ ಕ್ಷೇಮವೇ)

ಲಿಗಮೆಂಟ್ ಟೇರ್ ತಡೆಯುವುದು ಹೇಗೆ?

ಅಸ್ಥಿರಜ್ಜು ಛಿದ್ರತೆ/ಗಾಯವನ್ನು ತಡೆಗಟ್ಟಲು ಕ್ರೀಡಾಪಟುಗಳು ಸಾಮಾನ್ಯವಾಗಿ ಸ್ನಾಯುಗಳು ಮತ್ತು ಕೀಲುಗಳನ್ನು ಕೇಂದ್ರೀಕರಿಸಿ ವ್ಯಾಯಾಮಗಳನ್ನು ಮಾಡಬೇಕು. ನಿಯಮಿತವಾಗಿ ಸ್ನಾಯು ಮತ್ತು ಅಸ್ಥಿರಜ್ಜುಗಳನ್ನು ಹಿಗ್ಗಿಸುವ ಕಸರತ್ತುಗಳನ್ನು ಮಿತವಾಗಿ ಮಾಡಬೇಕು. ಕ್ರೀಡೆಗಳಲ್ಲಿ ಭಾಗವಹಿಸುವಾಗ ಸೂಕ್ತ ರಕ್ಷಣಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ರಕ್ಷಣಾತ್ಮಕ ಸಾಧನಗಳನ್ನು ಬಳಸಬೇಕು. ಕ್ರೀಡೆಗಳನ್ನು ಆಡುವ ಮುನ್ನ ಸಾಕಷ್ಟು ವಾರ್ಮ್ ಅಪ್ ಆಗಬೇಕು. ಆಟದ ಮೈದಾನಗಳು ಸುರಕ್ಷಿತವಾಗಿದ್ದು ಎದ್ದಾಗ ಬಿದ್ದಾಗ ನೋವುಂಟಾಗುವ ಸಂದರ್ಭಗಳು ಇರಬಾರದು. ಜನಸಾಮಾನ್ಯರೂ ಭಾರದ ವಸ್ತುಗಳನ್ನು ಏರಿಸುವ/ಇಳಿಸುವ ಸಂದರ್ಭಗಳಲ್ಲಿ ಜನರು ಬಹಳ ಎಚ್ಚರಿಕೆ ವಹಿಸಬೇಕು. ಎಲ್ಲ ಕೆಲಸವನ್ನೂ ಒಂದೇ ಬಾರಿಗೆ ಮುಗಿಸಬಲ್ಲೆ, ಎಷ್ಟೇ ಭಾರವನ್ನೇ ಹೊರಬಲ್ಲೆ ಎಂಬ ಹುಂಬತನಗಳನ್ನು ಬಿಟ್ಟು ಸುರಕ್ಷಿತವಾಗಿ ಕೆಲಸ ಮಾಡಬೇಕು.

ಒಟ್ಟಾರೆಯಾಗಿ ಹೇಳುವುದಾದರೆ ಕಾರಣಗಳು, ಚಿಕಿತ್ಸೆಗಳು ಮತ್ತು ತಡೆಗಟ್ಟುವ ಕ್ರಮಗಳನ್ನು ಅರ್ಥಮಾಡಿಕೊಳ್ಳುವ ಮೂಲಕ ಅಸ್ಥಿರಜ್ಜು ಛಿದ್ರತೆ/ಗಾಯದ ಸಮಸ್ಯೆ ಪರಿಹಾರಗಳನ್ನು ಕಂಡುಕೊಳ್ಳಬಹುದು; ಈ ಸಮಸ್ಯೆ ಉಂಟಾದರೆ ಅದನ್ನು ಉತ್ತಮವಾಗಿ ನಿರ್ವಹಿಸಬಹುದು ಮತ್ತು ತಪ್ಪಿಸಬಹುದು, ಕೀಲುಗಳ ಆರೋಗ್ಯ ಮತ್ತು ಒಟ್ಟಾರೆ ಚಲನಶೀಲತೆಯನ್ನು ಕಾಪಾಡಿಕೊಳ್ಳಬಹುದು.


Dr Vasundhara Bhupathi

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com