ವೆಸ್ಟ್ ನೈಲ್ ಜ್ವರ ಅಥವಾ West Nile fever: ಲಕ್ಷಣಗಳು ಮತ್ತು ಚಿಕಿತ್ಸೆ (ಕುಶಲವೇ ಕ್ಷೇಮವೇ)

ಇತ್ತೀಚಿನ ವರ್ಷಗಳಲ್ಲಿ ಒಂದಲ್ಲಾ ಒಂದು ಸೂಕ್ಷ್ಮಾಣುಜೀವಿಗಳ (ಬ್ಯಾಕ್ಟೀರಿಯಾ ಅಥವಾ ವೈರಸ್) ಸೋಂಕು ಮಾನವರಿಗೆ ತಗುಲಿ ಸಾಕಷ್ಟು ಹಾನಿ ಉಂಟುಮಾಡಿ ಭೀತಿ ಮೂಡಿಸುತ್ತಿದೆ.
ವೆಸ್ಟ್ ನೈಲ್ ಜ್ವರ ಅಥವಾ West Nile fever: ಲಕ್ಷಣಗಳು ಮತ್ತು ಚಿಕಿತ್ಸೆ (ಕುಶಲವೇ ಕ್ಷೇಮವೇ)

ಇತ್ತೀಚಿನ ವರ್ಷಗಳಲ್ಲಿ ಒಂದಲ್ಲಾ ಒಂದು ಸೂಕ್ಷ್ಮಾಣುಜೀವಿಗಳ (ಬ್ಯಾಕ್ಟೀರಿಯಾ ಅಥವಾ ವೈರಸ್) ಸೋಂಕು ಮಾನವರಿಗೆ ತಗುಲಿ ಸಾಕಷ್ಟು ಹಾನಿ ಉಂಟುಮಾಡಿ ಭೀತಿ ಮೂಡಿಸುತ್ತಿದೆ. ಕೋವಿಡ್-19 ಸೋಂಕು, ನಿಫಾ, ಹಕ್ಕಿಜ್ವರ, ಹಂದಿಜ್ವರ ನಂತರ ಈಗ ವೆಸ್ಟ್ ನೈಲ್ ಜ್ವರದ ಸರದಿ. ನೆರೆಯ ಕೇರಳದಲ್ಲಿ ವೆಸ್ಟ್ ನೈಲ್ ಜ್ವರ ಕಾಣಿಸಿಕೊಂಡಿದ್ದು ನಮ್ಮ ರಾಜ್ಯದ ಮೈಸೂರು ಜಿಲ್ಲೆಯ ಗಡಿಭಾಗದಲ್ಲಿ ಈ ಬಗ್ಗೆ ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಿದೆ.

ವೆಸ್ಟ್ ನೈಲ್ ಜ್ವರದ ಲಕ್ಷಣಗಳು

ಅನೇಕ ವೈರಾಣು ಸೋಂಕುಗಳಂತೆಯೇ ವೆಸ್ಟ್ ನೈಲ್ ಜ್ವರವೂ ತೀವ್ರ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಕ್ಯೂಲೆಕ್ಸ್ ಜಾತಿಯ ಸೊಳ್ಳೆಗಳು ವೆಸ್ಟ್ ನೈಲ್ ಜ್ವರದ ಪ್ರಸರಣಕ್ಕೆ ಪ್ರಮುಖ ಕಾರಣ.

ಅನೇಕ ಜನರಲ್ಲಿ ವೆಸ್ಟ್ ನೈಲ್ ಜ್ವರ ಲಕ್ಷಣರಹಿತವಾಗಿದ್ದರೆ ಕೆಲವರಲ್ಲಿ ಜ್ವರ, ತಲೆನೋವು, ಆಯಾಸ, ದೇಹದ ನೋವು, ವಾಕರಿಕೆ, ದದ್ದು ಮತ್ತು ಊದಿಕೊಂಡ ಗ್ರಂಥಿಗಳಂತಹ ರೋಗ ಲಕ್ಷಣಗಳು ಕಂಡುಬರುತ್ತದೆ. ಜೊತೆಗೆ ಸಮಸ್ಯೆ ಗಂಭೀರವಾದರೆ ತೀವ್ರ ಜ್ವರ, ತಲೆನೋವು, ಕುತ್ತಿಗೆ ಬಿಗಿತ, ಮೂರ್ಛೆ ಹೋದಂತೆ ಅನುಭವ, ದಿಗ್ಭ್ರಮೆಯಂತಹ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಇದರ ಗಂಭೀರತೆ ಹೆಚ್ಚಾದಂತೆ ಕೋಮಾ, ನಡುಕ, ಸೆಳೆತ, ಸ್ನಾಯು ದೌರ್ಬಲ್ಯ, ದೃಷ್ಟಿ ನಷ್ಟ, ಮರಗಟ್ಟುವಿಕೆ ಮತ್ತು ಪಾರ್ಶ್ವವಾಯು ಉಂಟಾಗಬಹುದು.

ಆರೋಗ್ಯ ಇಲಾಖೆಯ ಪ್ರಕಾರ ಶೇ 80ರಷ್ಟು ಸೋಂಕಿತರಲ್ಲಿ ಯಾವುದೇ ರೋಗಲಕ್ಷಣಗಳು ಕಾಣಿಸುವುದಿಲ್ಲ. ಅಂಗಾಂಗ ಕಸಿ, ರಕ್ತ ವರ್ಗಾವಣೆ ಅಥವಾ ಗರ್ಭಾವಸ್ಥೆಯಲ್ಲಿ ಅಥವಾ ಹಾಲುಣಿಸುವ ಸಮಯದಲ್ಲಿ ತಾಯಿಯಿಂದ ಮಗುವಿಗೆ ಈ ವೈರಸ್ ಹರಡುವ ಸಾಧ್ಯತ ಇದೆ.

ಈ ಜ್ವರದಿಂದ ಚೇತರಿಸಿಕೊಳ್ಳಲು ಹಲವಾರು ವಾರಗಳು ಅಥವಾ ತಿಂಗಳುಗಳೇ ಬೇಕಾಗಬಹುದು. ವೆಸ್ಟ್ ನೈಲ್ ವೈರಸ್ ಸೋಂಕು ತಗುಲಿದ 150 ಜನರಲ್ಲಿ ಒಬ್ಬರಿಗೆ ಕಾಯಿಲೆ ಹೆಚ್ಚು ತೀವ್ರವಾಗಿರುತ್ತದೆ.

ವೆಸ್ಟ್ ನೈಲ್ ಜ್ವರ ಅಥವಾ West Nile fever: ಲಕ್ಷಣಗಳು ಮತ್ತು ಚಿಕಿತ್ಸೆ (ಕುಶಲವೇ ಕ್ಷೇಮವೇ)
ಮುಟ್ಟಿನ ನೋವು ಅಥವಾ Dysmenorrhea (ಕುಶಲವೇ ಕ್ಷೇಮವೇ)

ವೆಸ್ಟ್ ನೈಲ್ ಜ್ವರ ಹೇಗೆ ಹರಡುತ್ತದೆ?

ಈ ಜ್ವರವು ಮೊದಲ ಬಾರಿಗೆ 1937ರಲ್ಲಿ ಆಫ್ರಿಕಾ ಖಂಡದ ಉಗಾಂಡಾ ದೇಶದ ಪಶ್ಚಿಮ (ವೆಸ್ಟ್) ನೈಲ್ ಜಿಲ್ಲೆಯಲ್ಲಿ ಕಾಣಿಸಿಕೊಂಡಿದ್ದರಿಂದ ಇದಕ್ಕೆ ವೆಸ್ಟ್ ನೈಲ್ ಜ್ವರ ಎಂಬ ಹೆಸರು ಬಂದಿದೆ. ಸೋಂಕಿತ ಸೊಳ್ಳೆಗಳ ಕಡಿತದ ಮೂಲಕ ಮನುಷ್ಯರಿಗೆ ಹರಡುತ್ತದೆ. ಪಕ್ಷಿಗಳು ಮತ್ತು ಪ್ರಾಣಿಗಳಿಗೂ ಸಹ ಈ ಸಾಂಕ್ರಾಮಿಕ ಸೋಂಕು ತಗುಲಬಹುದು.

ಸೋಂಕಿತ ಜನರು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಅಥವಾ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಹೋದಾಗ ಈ ಸೋಂಕು ಬೇರೆಯವರಿಗೆ ಹರಡುತ್ತದೆ. ಹೀಗೆ ಆಫ್ರಿಕಾದಿಂದ ಏಷ್ಯಾ, ಯುರೋಪ್ ಹಾಗೂ ಉತ್ತರ ಅಮೆರಿಕಾಗೆ ವೆಸ್ಟ್ ನೈಲ್ ಜ್ವರ ಲಗ್ಗೆ ಇಟ್ಟಿದೆ. ಈ ವೈರಾಣು ಸಾಮಾನ್ಯವಾಗಿ ಆಫ್ರಿಕಾ, ಯುರೋಪ್, ಮಧ್ಯಪ್ರಾಚ್ಯ, ಉತ್ತರ ಅಮೆರಿಕಾ ಮತ್ತು ಪಶ್ಚಿಮ ಏಷ್ಯಾದಲ್ಲಿ ಕಂಡುಬರುತ್ತದೆ.

ಕಡಿಮೆ ತಾಪಮಾನ ಮತ್ತು ಮಳೆ ಹೆಚ್ಚಾಗಿರುವ ಪ್ರದೇಶಗಳಲ್ಲಿ ಸೊಳ್ಳೆಗಳ ಸಂತತಿ ಹೆಚ್ಚಾಗಿ ಅವುಗಳಿಗೆ ವೈರಾಣು ಸೋಂಕು ತಗುಲಿ ಕ್ರಮೇಣ ಈ ಸಾಂಕ್ರಾಮಿಕ ರೋಗ ಮಾನವರಿಗೆ ಹರಡುವ ಸಾಧ್ಯತೆ ಇರುತ್ತದೆ. ಸೊಳ್ಳೆಗಳ ಮೂಲಕ ಈ ಕಾಯಿಲೆ ಬಹಳ ವೇಗವಾಗಿ ಹರಡುತ್ತದೆ. ಮಕ್ಕಳು, ವಯಸ್ಕರು, ವಯಸ್ಸಾದವರು ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಇರುವವರು ಈ ವಿಚಾರದಲ್ಲಿ ತುಂಬಾ ಎಚ್ಚರಿಕೆ ಮತ್ತು ಆರೋಗ್ಯದಲ್ಲಿ ಜಾಗೃತೆಯನ್ನು ವಹಿಸಬೇಕು.

ವೆಸ್ಟ್ ನೈಲ್ ಜ್ವರಕ್ಕೆ ಚಿಕಿತ್ಸೆ

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ವೆಸ್ಟ್ ನೈಲ್ ಜ್ವರಕ್ಕೆ ಪ್ರಸ್ತುತ ಯಾವುದೇ ಚಿಕಿತ್ಸೆ ಇಲ್ಲ. ಹೀಗಾಗಿ ಸೋಂಕು ಬಾರದಂತೆ ತಡೆಯುವುದೊಂದೇ ಮಾರ್ಗ. ಆದರೆ ರೋಗಲಕ್ಷಣಗಳನ್ನು ನಿವಾರಿಸಿಲು ಔಷಧಿಗಳನ್ನು ಮತ್ತು ಚಿಕಿತ್ಸೆಯನ್ನು ನೀಡಿ ವೈದ್ಯರು ಇದರ ನಿರ್ವಹಣೆ ಮಾಡುತ್ತಾರೆ. ಈ ರೋಗದಿಂದ ಚೇತರಿಸಿಕೊಳ್ಳುವುದು ರೋಗಿಗಳ ವಯಸ್ಸು ಮತ್ತು ಒಟ್ಟಾರೆ ಆರೋಗ್ಯ ಸ್ಥಿತಿಯನ್ನು ಅವಲಂಬಿಸಿರುತ್ತದೆ.

ವೆಸ್ಟ್ ನೈಲ್ ಜ್ವರ ಅಥವಾ West Nile fever: ಲಕ್ಷಣಗಳು ಮತ್ತು ಚಿಕಿತ್ಸೆ (ಕುಶಲವೇ ಕ್ಷೇಮವೇ)
ಹಕ್ಕಿ ಜ್ವರ ಅಥವಾ ಬರ್ಡ್ ಫ್ಲೂ (ಕುಶಲವೇ ಕ್ಷೇಮವೇ)

ವೆಸ್ಟ್ ನೈಲ್ ಜ್ವರ ತಡೆಯುವುದು ಹೇಗೆ?

ಸೊಳ್ಳೆಗಳ ಸಂತತಿ ಹೆಚ್ಚಾಗದಂತೆ ನೋಡಿಕೊಳ್ಳುವುದೇ ಈ ಸಾಂಕ್ರಾಮಿಕ ಜ್ವರವನ್ನು ತಡೆಯಲು ಇರುವ ಮುಖ್ಯ ಮಾರ್ಗ. ಕೀಟನಿವಾರಕಗಳನ್ನು ಬಳಸಿ ಮನೆಯ ಸುತ್ತಮುತ್ತಲಿನ ಪರಿಸರದಲ್ಲಿ ಇರುವ ಸೊಳ್ಳೆಗಳನ್ನು ನಿಯಂತ್ರಿಸಬೇಕು. ರಾತ್ರಿ ಹೊತ್ತು ಮಲಗುವಾಗ ತಪ್ಪದೇ ಸೊಳ್ಳೆ ಪರದೆಯನ್ನು ಬಳಸಬೇಕು. ಮನೆಯಿಂದ ಹೊರಗೆ ಹೋದಾಗ ಅದರಲ್ಲಿಯೂ ಸೊಳ್ಳೆಗಳು ಹೆಚ್ಚು ಸಕ್ರಿಯವಾಗಿರುವ ಮುಂಜಾನೆ ಮತ್ತು ಮುಸ್ಸಂಜೆಯ ಸಮಯದಲ್ಲಿ ಉದ್ದ ತೋಳಿನ ಶರ್ಟ್ಗಳು ಮತ್ತು ಉದ್ದವಾದ ಪ್ಯಾಂಟ್ಗಳನ್ನು ಧರಿಸಿ ಓಡಾಡಬೇಕು. ಸೊಳ್ಳೆಗಳು ಮನೆಯೊಳಗೆ ಬರದಂತೆ ಕಿಟಕಿಗಳು ಮತ್ತು ಬಾಗಿಲುಗಳ ಮೇಲೆ ಪರದೆಗಳನ್ನು ಬಳಸಬೇಕು.

ಒಣಗಿದ ಬೇವಿನ ಎಲೆಗಳನ್ನು ಸಂಗ್ರಹಿಸಿ ಅವುಗಳನ್ನು ಧೂಪದಂತೆ ಹಚ್ಚುವುದರಿಂದ ಸೊಳ್ಳೆಗಳನ್ನು ನಿಯಂತ್ರಿಸಬಹುದು. ಗಂಧದ ಧೂಪವನ್ನು ಮನೆಯಲ್ಲಿ ಹೆಚ್ಚಬಹುದು. ಬೇವಿನೆಣ್ಣೆಯನ್ನು ದೀಪ ಹಚ್ಚಲು ಮನೆಯಲ್ಲಿ ಬಳಸಬಹುದು. ಮಕ್ಕಳಿಗೆ ಸೊಳ್ಳೆ ಕಚ್ಚುವುದನ್ನು ತಡೆಯಲು ಅವರ ಮೈಗೆ ಬಜೆ ಪುಡಿಯನ್ನು ಹಚ್ಚಬೇಕು.

ಎಲ್ಲಕ್ಕಿಂತ ಮುಖ್ಯವಾಗಿ ಜನರು ತಮ್ಮ ಸುತ್ತಮುತ್ತಲಿನ ಪರಿಸರದ ಸ್ವಚ್ಛತೆ ಕಾಪಾಡುವುದು ಅವಶ್ಯಕವಾಗಿದೆ. ಸುತ್ತಮುತ್ತ ಎಲ್ಲಿಯೂ ನೀರು ನಿಲ್ಲದಂತೆ ಮುನ್ನೆಚ್ಚರಿಕೆ ವಹಿಸುವ ಮೂಲಕ ಸೊಳ್ಳೆಗಳ ಸಂತಾನೋತ್ಪತ್ತಿಯನ್ನು ತಡೆಯಬೇಕು.


Dr Vasundhara Bhupathi

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com