ಯುದ್ಧವೆಂಬುದೊಂದು ನಿರಂತರ ವಾಸ್ತವ. ಹಾಗೆಂದು ಚರಿತ್ರೆ ಸಾರುತ್ತದೆ. ಅಲ್ಲೆಲ್ಲೋ ಪಶ್ಚಿಮ ಏಷ್ಯದಲ್ಲಿ ಯುದ್ಧ ನಡೆಯುತ್ತಿದೆ, ಅತ್ತ ಉಕ್ರೇನ್-ರಷ್ಯಗಳ ನಡುವೆ ಸಮರ ತೆರೆದುಕೊಂಡಿದೆ, ಭಾರತಕ್ಕೇನೂ ತಕ್ಷಣದ ಆತಂಕವಿಲ್ಲ ಎಂದೆಲ್ಲ ನಿರಾಳವಾಗುವಂತಿಲ್ಲ.
ಕಿಡಿಯೊಂದು ಕಾಳ್ಗಿಚ್ಚಾಗುವುದಕ್ಕೆ ಹೆಚ್ಚು ಸಮಯ ಬೇಕಿಲ್ಲ. ಸೇನೆ-ಶಸ್ತ್ರಬಲಗಳನ್ನೆಲ್ಲ ನಿರಂತರ ಕಸುವಿನಲ್ಲಿಟ್ಟುಕೊಂಡಿರುತ್ತಿದ್ದ ಪ್ರಾಚೀನ ಸಾಮ್ರಾಜ್ಯಗಳು ಭಾರತದ ನೆಲದಲ್ಲಿ ಶತಮಾನಗಳ ಕಾಲ ಬೆಳಗಿವೆ. ಯಾವಾಗಲೋ ಆಗಬಹುದಾದ ಯುದ್ಧಕ್ಕೆ ಸದಾಕಾಲ ಸೇನೆಯನ್ನು ಸನ್ನದ್ಧ ಸ್ಥಿತಿಯಲ್ಲಿಟ್ಟುಕೊಳ್ಳುವುದು ಬೇಡ, ಅದು ದುಬಾರಿಯಾಗುತ್ತದೆ ಎಂದು ಯೋಚಿಸಿದಾಗಲೆಲ್ಲ ನಮ್ಮ ಆಕ್ರಮಣಕಾರರಿಗೆ ಯಶಸ್ಸು ಸಿಕ್ಕಿದೆ.
ಹೀಗೊಂದು ಟಿಪ್ಪಣಿ ಮಾಡಿಕೊಳ್ಳುವುದಕ್ಕೆ ನವೆಂಬರ್ 16ರ ತಡರಾತ್ರಿ ಭಾರತದಲ್ಲಿ ಆಗಿರುವ ಪರೀಕ್ಷಾರ್ಥ ಅಸ್ತ್ರ ಪ್ರಯೋಗವೊಂದು ಪ್ರೇರಣೆ ಕೊಡುತ್ತಿದೆ. ಭಾರತವು ತನ್ನ ಸೇನೆ ಮತ್ತು ಅಸ್ತ್ರ ಬಲವನ್ನು ನಿರಂತರ ತಾಲೀಮಿನಲ್ಲಿ ಹಾಗೂ ಅನ್ವೇಷಣಾ ನಿರತ ಮತಿಯಲ್ಲಿಟ್ಟುಕೊಳ್ಳುತ್ತಿರುವ ಸಮಾಧಾನ ಮತ್ತು ಸಂತೋಷಕರ ವಿದ್ಯಮಾನ ಇದು. ಭಾರತದ ಡಿ ಆರ್ ಡಿ ಒ ದೇಶೀಯವಾಗಿ ನಿರ್ಮಿಸಿರುವ ದೀರ್ಘವ್ಯಾಪ್ತಿಯ ಹೈಪರ್ಸೊನಿಕ್ ಕ್ಷಿಪಣಿಯ ಯಶಸ್ವಿ ಪ್ರಯೋಗವಾಗಿದೆ. ಇದನ್ನು ದೇಶದ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರೇ ಸಾಮಾಜಿಕ ಮಾಧ್ಯಮದ ಮೂಲಕ ಬಹಿರಂಗಗೊಳಿಸಿದ್ದಾರೆ.
ಭಾರತದ ಬತ್ತಳಿಕೆಯಲ್ಲಿ ಕ್ಷಿಪಣಿಗಳು ಬಹಳಷ್ಟಿವೆ. ಹೀಗಿರುವಾಗ ಈ ಹೈಪರ್ಸೊನಿಕ್ ಜಾತಿಯ ಕ್ಷಿಪಣಿಯದ್ದೇನದು ಹೆಚ್ಚುಗಾರಿಕೆ ಎಂಬ ಪ್ರಶ್ನೆಗೆ ತತ್ ಕ್ಷಣದ ಸರಳ ಉತ್ತರ ದೊರಕಿಸಿಕೊಳ್ಳಬೇಕು ಎಂದರೆ ಈ ತಂತ್ರಜ್ಞಾನ ಎಷ್ಟು ದೇಶಗಳ ಬಳಿ ಇದೆ ಎಂಬುದನ್ನು ಗಮನಿಸಬೇಕು. ಅಮೆರಿಕ, ರಷ್ಯ, ಚೀನಾ ನಂತರದಲ್ಲಿ ಹೈಪರ್ಸೊನಿಕ್ ಕ್ಷಿಪಣಿ ಹೊಂದುತ್ತಿರುವ ಜಗತ್ತಿನ ನಾಲ್ಕನೇ ದೇಶವೇ ಭಾರತ ಎಂಬ ತಥ್ಯದಲ್ಲಿಯೇ ಇದರ ಮಹತ್ತ್ವ ಗೊತ್ತಾಗಿಹೋಗುತ್ತದೆ.
ಇಪ್ಪತ್ತು ಡಿಗ್ರಿ ಸೆಲ್ಶಿಯಸ್ ಇರುವ ವಾತಾವರಣವೊಂದರಲ್ಲಿ ಶಬ್ದವು ಒಂದು ಕಿ.ಮೀ ತಲುಪುವುದಕ್ಕೆ 2.91 ಸೆಕೆಂಡುಗಳ ಕಾಲವನ್ನು ತೆಗೆದುಕೊಳ್ಳುತ್ತದೆ. ಒಂದು ತಾಸಿಗೆ 1,235 ಕಿಲೊಮೀಟರ್ ವೇಗದಲ್ಲಿ ಹೋಗುತ್ತದೆ. ವಾತಾವರಣದ ಸಮೀಕರಣಗಳು ಬದಲಾದಾಗ ಇದರಲ್ಲಿ ವ್ಯತ್ಯಾಸಗಳಾಗುತ್ತವೆಯಾದರೂ ಇದೊಂದು ಸಾಮಾನ್ಯ ಲೆಕ್ಕಾಚಾರ. ಈ ಶಬ್ದದ ವೇಗವನ್ನು ಮೀರಿದ ವೇಗದಲ್ಲಿ ವಿಮಾನವೋ, ಇನ್ಯಾವುದೋ ವಸ್ತುವೋ ವಾತಾವರಣದಲ್ಲಿ ಪ್ರಯಾಣಿಸಿದಾಗ ಅದು ಸೂಪರ್ ಸೊನಿಕ್ ಎನಿಸಿಕೊಳ್ಳುತ್ತದೆ. ಭಾರತದ ಬಳಿ ಇರುವ ಕೆಲವು ಯುದ್ಧ ವಿಮಾನಗಳು ಹಾಗೂ ಅಸ್ತ್ರಗಳಿಗೆ ಈ ಸೂಪರ್ ಸೊನಿಕ್ ಸಾಮರ್ಥ್ಯವಿದೆ. ಜಗತ್ತಿನಲ್ಲಿ ಅದೇನೂ ಅತಿ ವಿರಳ ತಂತ್ರಜ್ಞಾನ ಎಂದೆನಿಸಿಕೊಂಡಿಲ್ಲ, ಹಲವು ದೇಶಗಳಿಗೆ ಆ ಸಾಮರ್ಥ್ಯ ಸಿದ್ಧಿಸಿದೆ. ಆದರೆ, ಹೀಗೆ ಶಬ್ದಾತೀತ ವೇಗ ಎಲ್ಲಯವರೆಗೆ ಎಂಬ ಪ್ರಶ್ನೆ ಬರುತ್ತದಲ್ಲ? ಹೀಗಾಗಿ, ಶಬ್ದದ ವೇಗದ ಐದು ಪಟ್ಟು ವೇಗದವರೆಗೆ ಅದನ್ನು ಸೂಪರ್ ಸೊನಿಕ್ ವರ್ಗೀಕರಣದಲ್ಲಿ ಇರಿಸಲಾಗಿದೆ. ಮ್ಯಾಕ್ 5 ಎಂಬ ತಾಂತ್ರಿಕ ಪದದಲ್ಲಿ ಅದನ್ನು ಸೂಚಿಸುತ್ತಾರೆ.
ಈ ಮ್ಯಾಕ್ 5 ಪರಿಮಿತಿ ಮೀರುತ್ತಲೇ ಅದು ಹೈಪರ್ಸೊನಿಕ್ ಎನಿಸಿಕೊಳ್ಳುತ್ತದೆ. ಶಬ್ದಾತೀತ ವೇಗವನ್ನು ಹೀಗೇಕೆ ಬೇರೆ ಬೇರೆ ಹಂತಗಳಲ್ಲಿ ವರ್ಗೀಕರಿಸಿದ್ದಾರೆ ಎಂಬ ಪ್ರಶ್ನೆ ಏಳಬಹುದೇನೋ. ಸೂಪರ್ ಸೊನಿಕ್ ಸ್ಥಿತಿಯಲ್ಲಿದ್ದಾಗ ಅಂದರೆ ಗಾಳಿಯಲ್ಲಿ ವಸ್ತುವೊಂದು ಐದು ಪಟ್ಟು ಶಬ್ದಾತೀತ ವೇಗದವರೆಗೆ ಪ್ರಯಣಿಸುವಾಗ ಅದರ ಮುಂದಿನ ಗಾಳಿ ಸಂಕುಚಿತಗೊಂಡು ಆಘಾತದಲೆಯೊಂದನ್ನು ಸೃಷ್ಟಿಸುತ್ತದೆ. ಈ ಅಲೆಗಳು ಭೂಮಿಯನ್ನು ಮುಟ್ಟುತ್ತಲೇ ಅಲ್ಲೊಂದು ಸೋನಿಕ್ ಬೂಮ್ ಎಂಬ ಕಿವಿಗಡಚಿಕ್ಕುವ ಶಬ್ದ ಸೃಷ್ಟಿಯಾಗುತ್ತದೆ.
ಒಮ್ಮೊಮ್ಮೆ ಮನೆಯ ಕಿಟಕಿ-ಗೋಡೆಗಳ ಮೇಲೆ ಬಿರುಕುಮೂಡಿಸುವಷ್ಟು ಪ್ರಬಲವಾಗಿಯೂ ಇರುತ್ತವೆ ಈ ಅಲೆಗಳು. ಅದೇ ಈ ವೇಗವು ಶಬ್ದಕ್ಕಿಂತ ಆರು ಪಟ್ಟು ಆದಾಗ ಆ ವಸ್ತುವಿನ ಸುತ್ತ ಇರುವ ಗಾಳಿ ಅದೆಷ್ಟರಮಟ್ಟಿಗೆ ಬಿಸಿ ಆಗುತ್ತದೆ ಎಂದರೆ, ಅದು ಹಾಗೆ ತೂರಿಕೊಂಡುಹೋಗುತ್ತಿರುವ ವಸ್ತುವಿನ ಸುತ್ತ ಪ್ಲಾಸ್ಮಾ ಸ್ಥಿತಿಯೊಂದನ್ನು ಸೃಷ್ಟಿಸುತ್ತದೆ. ಘನ, ದ್ರವ, ಅನಿಲಗಳ ನಂತರದ ಸ್ಥಿತಿ ಪ್ಲಾಸ್ಮಾ. ಚಲಿಸುತ್ತಿರುವ ವಸ್ತುವಿನ ಸ್ವರೂಪವನ್ನೇ ಮಾರ್ಪಡಿಸಬಲ್ಲ ಉಷ್ಣವು ಅಲ್ಲಿ ಸೃಜನವಾದಾಗಲೂ, ಹಾಗೆ ಶಬ್ದಾತೀತ ವೇಗದಲ್ಲಿ ಹೋಗುತ್ತಿರುವ ಅಸ್ತ್ರವು ಗುರಿಮುಟ್ಟುವ ಮೊದಲೇ ಧ್ವಂಸವಾಗದಂತೆ ಕಾಪಿಡುವ ತಂತ್ರವಿಜ್ಞಾನ ಸಾಧಿಸಿದವರಿಗಷ್ಟೇ ಹೈಪರ್ಸೊನಿಕ್ ಅಸ್ತ್ರ ಸಿದ್ಧಿಯಾಗುತ್ತದೆ. ಅದನ್ನು ಡಿ ಆರ್ ಡಿ ಒ (ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ) ದೇಶಿಯವಾಗಿಯೇ ಸಾಕಾರಗೊಳಿಸಿದೆ ಎಂಬುದು ಭಾರತದ ತಂತ್ರಜ್ಞಾನ ಶಕ್ತಿ ಜಾಗತಿಕ ಗುಣಮಟ್ಟದಲ್ಲಿ ಉತ್ತುಂಗ ತಲುಪುತ್ತಿರುವುದರ ದ್ಯೋತಕ.
ಮೇಲ್ಮೈನಲ್ಲಿಟ್ಟು ಚಿಮ್ಮಿಸಬೇಕಿರುವ ಈ ಹೈಪರ್ಸೊನಿಕ್ ಕ್ಷಿಪಣಿ 1,500 ಕಿಲೊಮೀಟರ್’ವರೆಗಿನ ವ್ಯಾಪ್ತಿ ಹೊಂದಿದೆ. ಇದು ಹಲವು ಬಗೆಯ ಪೇ ಲೋಡ್ (ಸಿಡಿತಲೆ) ಗಳನ್ನು ಹೊತ್ತು ಸಾಗುವ ಸಾಮರ್ಥ್ಯ ಹೊಂದಿರುವುದಾಗಿ ವರದಿಗಳು ಹೇಳುತ್ತಿವೆ. ಕಲ್ಪಿಸಿಕೊಳ್ಳಿ. ಇಲ್ಲಿಂದ ಒಂದು ಸಾವಿರ ಕಿಲೊಮೀಟರ್ ದೂರದಲ್ಲಿರುವ ನೌಕೆಯೊಂದನ್ನು ಗುರಿಮಾಡಿ ಭಾರತವು ಈ ಹೈಪರ್ಸೊನಿಕ್ ಅಸ್ತ್ರವನ್ನು ತೂರುತ್ತದೆ ಎಂದಿಟ್ಟುಕೊಳ್ಳೋಣ. ಅದು ಗಾಳಿಯಲ್ಲಿ ಶಬ್ದಾತೀತ ವೇಗದಲ್ಲಿ ಪ್ರಯಾಣಿಸಿ ಆ ನೌಕೆಗೆ ಪ್ರಹರಿಸುತ್ತದೆ. ಶಬ್ದದ ವೇಗ ಸಾಮಾನ್ಯವಾಗಿ ತಾಸಿಗೆ 1,235 ಕಿಲೊಮೀಟರ್ ಎಂಬ ಲೆಕ್ಕಾಚಾರ ಇರುವುದರಿಂದ, ಅದರ ಆರುಪಟ್ಟು ವೇಗ ಅಂದರೆ, ತಾಸಿಗೆ 7,400 ಕಿ.ಮೀ ವೇಗದಲ್ಲಿ ಹೋದ ವಸ್ತುವೊಂದು ಸುಮ್ಮನೇ ತಾಗಿದರೂ ಅದು ಸೃಷ್ಟಿಸುವ ವಿಧ್ವಂಸ ದೊಡ್ಡದು. ಹೀಗಿರುವಾಗ, ಅದು ಒಂದೈವತ್ತು ಕೆಜಿ ಸ್ಫೋಟಕವನ್ನೂ ಹೊತ್ತು ಗುರಿಗೆ ಢೀ ಕೊಟ್ಟರೆ ಅದರ ಪರಿಣಾಮ ಹೇಗಿರುತ್ತದೆಂಬುದನ್ನು ಊಹಿಸಿಕೊಳ್ಳಿ.
ಈಗೊಂದು ಪ್ರಶ್ನೆ ಬರಬಹುದು. ಅದೇನೆಂದರೆ, ನಮ್ಮಲ್ಲಿ ಅದಾಗಲೇ ಖಂಡಾಂತರ ಕ್ಷಿಪಣಿಗಳಿವೆಯಲ್ಲ ಅನ್ನೋದು. ಇವು ಪ್ರಾರಂಭದಲ್ಲಿ ರಾಕೆಟ್ ಬಲದಿಂದ ಮೇಲೆ ಚಿಮ್ಮಿ ಭೂ ವಾತಾವರಣದ ಆಚೆಗೆ ಹೋಗಿ ನಂತರ ಗುರಿಯನ್ನು ತಲುಪುವ ಲೆಕ್ಕಾಚಾರಕ್ಕೆ ಸರಿಹೊಂದುವಂತೆ ಬಾಗಿಕೊಂಡು ಮತ್ತೆ ಭೂವಾತಾವರಣ ಪ್ರವೇಶಿಸುತ್ತವೆ. ಈ ಹಂತದಲ್ಲಿ ಅವು ಗುರುತ್ವ ಬಲವನ್ನೇ ಉಪಯೋಗಿಸಿಕೊಂಡು ಉತ್ಕರ್ಷ ಪಡೆಯುತ್ತವೆ. ಅವುಗಳು ಪ್ರಯಾಣಿಸುವ ದೂರವೇನೂ ಕಡಿಮೆ ಅಲ್ಲ.
ಉದಾಹರಣೆಗೆ ಅಗ್ನಿ ಶ್ರೇಣಿಯ ಐದನೇ ಅವತರಣಿಕೆಯ ಕ್ಷಿಪಣಿಗಳು 5,000 - 8,000 ಕಿ.ಮೀ ವ್ಯಾಪ್ತಿಯ ಗುರಿಯನ್ನು ಮುಟ್ಟಬಲ್ಲವು. ಆದರೆ ಇದು ಪೂರ್ವನಿರ್ಧರಿತ ಪಥವೊಂದರಲ್ಲಿ ಚಲಿಸಬಲ್ಲದಷ್ಟೆ. ಹೀಗಾಗಿ ಎದುರಾಳಿಯು ಪ್ರಬಲನಾಗಿದ್ದರೆ ರಡಾರಿನಲ್ಲಿ ಪತ್ತೆಹಚ್ಚಿ ಆ ಖಂಡಾಂತರ ಕ್ಷಿಪಣಿಯನ್ನು ಗುರಿಗೆ ಮೊದಲೇ ಉರುಳಿಸಬಲ್ಲ.
ಇನ್ನು, ಹೀಗಲ್ಲದೇ ಕ್ರೂಸ್ ಕ್ಷಿಪಣಿಯೂ ಭಾರತದ ಬತ್ತಳಿಕೆಯಲ್ಲಿದೆ. ಖಂಡಾಂತರ ಕ್ಷಿಪಣಿ ರೀತಿ ಇದು ಗುರುತ್ವವನ್ನು ಉಪಯೋಗಿಸುವುದಿಲ್ಲ. ಬದಲಿಗೆ ಎಂಜಿನ್ ಬಲದಿಂದಲೇ ಭೂ ವಾತಾವರಣ ಸೀಳಿಕೊಂಡು ಗುರಿಯೆಡೆ ಚಿಮ್ಮತ್ತದೆ. ಪರಿಣತ ಯುದ್ಧಕೌಶಲ ತಂತ್ರಜ್ಞರು ಇಂಥ ಕ್ರೂಸ್ ಕ್ಷಿಪಣಿಗಳ ಪಥವನ್ನು ಮಾರ್ಗಮಧ್ಯೆ ಆಚೀಚೆ ಮಾಡಬಲ್ಲರು ಸಹ. ಉದಾಹರಣೆಗೆ, ಹೈಪರ್ಸೊನಿಕ್ ವೇಗದಲ್ಲಲ್ಲದ್ದಿದ್ದರೂ ಬ್ರಹ್ಮೊಸ್ ಕ್ಷಿಪಣಿಗಳು ಸುಪರ್ಸಾನಿಕ್ ವೇಗದಲ್ಲಿ ಪ್ರಯಾಣಿಸಿ ಅಣ್ವಸ್ತ್ರವನ್ನೂ ಹೊತ್ತೊಯ್ದು ಘಾತಿಸಬಲ್ಲವು. ಆದರೆ, ಇದನ್ನೂ ಕ್ಷಿಪಣಿ ನಿರೋಧಕ ವ್ಯವಸ್ಥೆ ಪತ್ತೆಹಚ್ಚಿ ತಡೆಯಬಲ್ಲದು.
ಆದರೆ, ಅಮೆರಿಕದ ಥಾಡ್ ಕ್ಷಿಪಣಿ ನಿರೋಧಕ ವ್ಯವಸ್ಥೆಯೇ ಆಗಲೀ, ರಷ್ಯದ ಎಸ್-400 ಕ್ಷಿಪಣಿ ನಿರೋಧಕ ವ್ಯವಸ್ಥೆಯೇ ಇರಲಿ ಹೈಪರ್ಸೊನಿಕ್ ಕ್ಷಿಪಣಿಗಳನ್ನು ಘಾತಕ್ಕೂ ಮೊದಲು ಗುರುತಿಸಿ ವಿಫಲಗೊಳಿಸುವಷ್ಟು ಸಶಕ್ತವಾಗಿಲ್ಲ. ಅರ್ಥಾತ್, ಹೈಪರ್ಸೊನಿಕ್ ಕ್ಷಿಪಣಿಗಳು ಮಾತ್ರವೇ ಸದ್ಯಕ್ಕೆ ಅಬೇಧ್ಯ ಎನಿಸಿವೆ. ಅಂಥ ಸಾಮರ್ಥ್ಯವೊಂದನ್ನು ಭಾರತ ಇದೀಗ ತನ್ನದಾಗಿಸಿಕೊಂಡಿದೆ.
ಭಾರತವೂ ಸೇರಿದಂತೆ ನಾಲ್ಕು ದೇಶಗಳು ಶಬ್ದದ ವೇಗದ ಐದುಪಟ್ಟಿಗಿಂತ ಹೆಚ್ಚಿನ ವೇಗದಲ್ಲಿ ತೂರುವ ಕ್ಷಿಪಣಿಯನ್ನು ಬತ್ತಳಿಕೆಗೆ ಸೇರಿಸಿಕೊಂಡಿರುವುದಂತೂ ಹೌದು. ಹಾಗಂತ ಭಾರತವಾಗಲೀ, ಜಗತ್ತಾಗಲೀ ಹೈಪರ್ಸೊನಿಕ್ ಕ್ಷಿಪಣಿ ತಂತ್ರಜ್ಞಾನವನ್ನು ಸಂಪೂರ್ಣವಾಗಿ ತನ್ನದಾಗಿಸಿಕೊಂಡಿದೆ ಅಂತ ಶರಾ ಬರೆಯಲಾಗುವುದಿಲ್ಲ.
ಏಕೆಂದರೆ, ರಣರಂಗದಲ್ಲಿ ಹೈಪರ್ಸೊನಿಕ್ ಕ್ಷಿಪಣಿಗಳನ್ನು ಪ್ರಯೋಗಿಸಿದಾಗ, ಪರೀಕ್ಷಾರ್ಥ ಹಾಗೂ ಸೈದ್ಧಾಂತಿಕ ಮಾದರಿಗಳಲ್ಲಿ ಸಾಕಾರವಾಗಿದ್ದೆಲ್ಲ ಮರುಕಳಿಸುತ್ತದೆ ಅಂತ ಖಚಿತವಾಗಿ ಹೇಳಲಾಗುವುದಿಲ್ಲ. ಉದಾಹರಣೆಗೆ, ಪ್ರಸ್ತುತ ರಷ್ಯ-ಉಕ್ರೇನ್ ಸಂಘರ್ಷದಲ್ಲಿ ರಷ್ಯವು ಒಟ್ಟಾರೆ ಆರೇಳು ಹೈಪರ್ಸೊನಿಕ್ ಕ್ಷಿಪಣಿಗಳನ್ನು ಉಕ್ರೇನ್ ಮೇಲೆ ಪ್ರಯೋಗಿಸಿರುವುದು ದಾಖಲಾಗಿದೆ. ಇವುಗಳಲ್ಲಿ ಹೆಚ್ಚಿನವು ಉಕ್ರೇನಿಗೆ ಭಾರಿ ಹಾನಿಯನ್ನೇ ಮಾಡಿವೆ. ಆದರೆ, ಅಮೆರಿಕದ ಪೆಟ್ರಿಯಾಟ್ ವೈಮಾನಿಕ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಉಪಯೋಗಿಸಿಕೊಂಡು ರಷ್ಯದ ಒಂದು ಹೈಪರ್ಸೊನಿಕ್ ಮಿಸೈಲ್ ಅನ್ನು ಹೊಡೆದುರುಳಿಸುವುದರಲ್ಲಿ ಉಕ್ರೇನ್ ಪಡೆ ಯಶಸ್ಸನ್ನೂ ಸಾಧಿಸಿದೆ. ಹೀಗಾಗಿ, ಹೈಪರ್ಸೊನಿಕ್ ಕ್ಷಿಪಣಿಗಳನ್ನು ನಿರಂತರ ಸುಧಾರಿಸಬೇಕಾದ ಎಚ್ಚರಿಕೆಯೂ ಈ ಅಸ್ತ್ರ ಹೊಂದಿರುವ ದೇಶಗಳಿಗಿದೆ.
ಖಂಡಾಂತರ ಹಾಗೂ ಕ್ರೂಸ್ ಕ್ಷಿಪಣಿಗಳಿಗೆ ಹೋಲುವ ವರ್ಗೀಕರಣವೇ ಹೈಪರ್ಸೊನಿಕ್ ಕ್ಷಿಪಣಿಗಳಲ್ಲೂ ಇದೆ. ಪ್ರಾರಂಭದಲ್ಲಿ ರಾಕೆಟ್ ಉಪಯೋಗಿಸಿಕೊಂಡು ನಂತರ ತನ್ನೊಳಗಿನ ವ್ಯವಸ್ಥೆಯಿಂದಲೇ ಉತ್ಕರ್ಷ ಪಡೆದುಕೊಳ್ಳುವ ‘ಹೈಪರ್ಸೊನಿಕ್ ಗ್ಲೈಡ್ ವೆಹಿಕಲ್’ ಈಗ ಪ್ರಮುಖವಾಗಿ ಉಪಯೋಗದಲ್ಲಿದೆ.
ಅದಲ್ಲದೇ, ಸ್ಕ್ರಾಮ್ಜೆಟ್ಸ್ ಎಂಬ ಎಂಜಿನ್ ಉಪಯೋಗಿಸಿಕೊಂಡು ‘ಹೈಪರ್ಸೊನಿಕ್ ಕ್ರೂಸ್ ಮಿಸೈಲ್’ ಅಭಿವೃದ್ಧಿಪಡಿಸುವುದರಲ್ಲೂ ಪ್ರಯತ್ನಗಳಾಗುತ್ತಿವೆ. ಈ ನಿಟ್ಟಿನಲ್ಲಿ ಚೀನಾ ಮುಂಚೂಣಿಯಲ್ಲಿರುವ ವರದಿಗಳಿವೆ. ಹೀಗಾಗಿ, ಭಾರತ ದಣಿವಾರಿಸಿಕೊಳ್ಳುವಂತಿಲ್ಲ. ಹೈಪರ್ಸೊನಿಕ್ ಕ್ಷಿಪಣಿ ತಂತ್ರಜ್ಞಾನವನ್ನು ಇನ್ನಷ್ಟು ಉತ್ತಮಪಡಿಸಿಕೊಳ್ಳುವುದಕ್ಕೆ ಸಮರೋಪಾದಿಯಲ್ಲಿ ಪ್ರಯತ್ನಗಳಾಗುತ್ತಲೇ ಇರಬೇಕಾಗುತ್ತದೆ.
ಸ್ವರ್ಗೀಯ ಡಾ. ಅಬ್ದುಲ್ ಕಲಾಂ ಅಂಥವರ ನೇತೃತ್ವದಲ್ಲಿ ದಶಕಗಳ ತಪಸ್ಸು-ಅನ್ವೇಷಣೆಗಳ ಮೂಲಕ ಭಾರತವು ಇವತ್ತಿನ ಪ್ರಮುಖ ಕ್ಷಿಪಣಿ ಬಲವಾಗಿದೆ. ಆ ಪ್ರಯಾಸದ ಹಾದಿ ಹೇಗಿತ್ತೆಂಬುದರ ಮೇಲೆ ಇನ್ಯಾವತ್ತಾದರೂ ಬೆಳಕು ಚೆಲ್ಲೋಣ. ಭಾರತವು ಏನೇ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸಿದರೂ ಅದರ ವ್ಯಾಪ್ತಿಯನ್ನು 290 ಕಿಲೊಮೀಟರಿಗೆ ಸೀಮಿತವಾಗಿಸಬೇಕಿತ್ತು. ಇಲ್ಲವಾದರೆ ಅಂತಾರಾಷ್ಟ್ರೀಯ ದಿಗ್ಬಂಧನಗಳಾಗುತ್ತಿದ್ದವು.
ಆದರೆ, 2016ರಲ್ಲಿ ಭಾರತವು ‘ಮಿಸೈಲ್ ಟೆಕ್ನಾಲಜಿ ಕಂಟ್ರೊಲ್ ರಿಜೀಂ’ ಎಂಬ ಜಾಗತಿಕ ಕೂಡುಕೂಟದೊಳಗೆ ಪ್ರವೇಶ ಪಡೆದಾಗಿನಿಂದ ನಿಬಂಧನೆಗಳಿಂದ ಮುಕ್ತವಾಗಿದೆ. ಈಗ ಭಾರತವು ರಷ್ಯದ ಜತೆಗೂಡಿ ಬ್ರಹ್ಮೋಸ್-2 ಅಭಿವೃದ್ಧಿಪಡಿಸುತ್ತಿದೆ. ಇದು ಸ್ಕ್ರಾಮ್ಜೆಟ್ ಎಂಜಿನ್ ಒಳಗೊಂಡ ಹೈಪರ್ಸೊನಿಕ್ ಮಿಸೈಲ್ ಆಗಿರಲಿದೆ.
ನಿನಗೆ ಪಟ್ಟಾಭಿಷೇಕ ಮಾಡಲಿದ್ದೇನೆಂಬ ವಾರ್ತೆಯನ್ನು ತಿಳಿಸುವುದಕ್ಕೆ ದಶರಥನು ರಾಮನನ್ನು ಬರಮಾಡಿಕೊಂಡ ಸಂದರ್ಭ. ನಿನಗೆ ಎಲ್ಲವೂ ಗೊತ್ತು, ಆದರೂ ತಂದೆಯ ಕರ್ತವ್ಯದ ಭಾಗವಾಗಿ ನಾಲ್ಕು ಮಾತುಗಳನ್ನು ಹೇಳುತ್ತೇನೆನ್ನುತ್ತ ಶ್ರೀರಾಮನನ್ನುದ್ದೇಶಿಸಿ ದಶರಥನು ಹೇಳಿದ್ದ ಮಾತುಗಳ ಪೈಕಿ ಒಂದು ಹೀಗಿತ್ತು-
ಕೋಷ್ಠಾಗಾರಾಯುಧಾಗಾರೈಃ ಕೃತ್ವಾ ಸನ್ನಿಚಯಾನ್ ಬಹೂನ್
ತುಷ್ಟಾನುರಕ್ತ ಪ್ರಕೃತಿರ್ಯಃ ಪಾಲಯತಿ ಮೇದಿನೀಮ್ ||
ಕೋಷ್ಠಾಗಾರ ಅಂದರೆ ಧಾನ್ಯ ಮತ್ತು ಅರ್ಥಸಂಪತ್ತುಗಳ ದಾಸ್ತಾನು, ಹಾಗೆಯೇ ಆಯುಧಾಗಾರ ಇವೆರಡನ್ನೂ ತುಂಬಿಸಿಡಬೇಕು. ಪ್ರಜೆಗಳ ಅನುರಾಗ ಸಂಪಾದಿಸಿ ಆಳಬೇಕು - ಎಂಬ ಮಾತು ಬಂದಿದೆ.
ಹೀಗಾಗಿ, ಹೈಪರ್ಸೊನಿಕ್ ಸೇರಿದಂತೆ ಮತ್ಯಾವುದೇ ಬಲಶಾಲಿ ಅಸ್ತ್ರ-ಶಸ್ತ್ರಗಳನ್ನು ಭಾರತದ ಯಾವುದೇ ಸರ್ಕಾರವು ಬತ್ತಳಿಕೆಗೆ ಸೇರಿಸಿದರೂ ನಮಗದು ವ್ಯರ್ಥ ಪೈಪೋಟಿ- ವೃಥಾ ಖರ್ಚು ಎಂಬೆಲ್ಲ ಭಾವನೆಗಳು ಬರದೇ ಆ ಬಗ್ಗೆ ಸಂಭ್ರಮಿಸಬೇಕಿದೆ.
- ಚೈತನ್ಯ ಹೆಗಡೆ
cchegde@gmail.com
Advertisement