SBIನ ಹೊಸ ಯೋಜನೆಗಳಲ್ಲಿ ಹೂಡಿಕೆ ಮಾಡುವುದು ಸರಿಯೇ? (ಹಣಕ್ಲಾಸು)

ಒಂದು ರೂಪಾಯಿ ಉಳಿಸಿದರೆ ಎರಡು ರೂಪಾಯಿ ಗಳಿಸಿದಂತೆ ಎಂದು ನಂಬಿದ್ದ ಸಮಾಜ ನಮ್ಮದು. ಆ ನಂಬಿಕೆ ಬಹಳಷ್ಟು ಬಲವಾಗಿದ್ದ ಕಾಲದಲ್ಲಿ ನನ್ನ ದುಡಿಮೆ ಕೂಡ ಶುರುವಾಗಿದ್ದು.
Is it right to invest in new schemes of SBI
ಎಸ್ ಬಿಐ
Updated on

ಗಳಿಸುವುದು ಮೊದಲ ಹಂತ, ಗಳಿಸಿದ ಹಣದಲ್ಲಿ ಇಂತಿಷ್ಟು ಎಂದು ಉಳಿಸುವುದು ಎರಡನೆಯ ಹಂತ. ನಂತರದ್ದು ಅದನ್ನು ಸರಿಯಾದ ಕಡೆ ಹೂಡಿಕೆ ಮಾಡುವುದು. ನಾವೀಗ ಎರಡನೆಯ ಹಂತಕ್ಕೆ ಬಂದಿದ್ದೇವೆ. ಒಂದು ರೂಪಾಯಿ ಉಳಿಸಿದರೆ ಎರಡು ರೂಪಾಯಿ ಗಳಿಸಿದಂತೆ ಎಂದು ನಂಬಿದ್ದ ಸಮಾಜ ನಮ್ಮದು. ಆ ನಂಬಿಕೆ ಬಹಳಷ್ಟು ಬಲವಾಗಿದ್ದ ಕಾಲದಲ್ಲಿ ನನ್ನ ದುಡಿಮೆ ಕೂಡ ಶುರುವಾಗಿದ್ದು.

ಹೀಗಾಗಿ ಮಾಸಿಕ ಮುನ್ನೂರು ರೂಪಾಯಿ ವಿದ್ಯಾರ್ಥಿ ವೇತನ ಸಿಗುವುದಕ್ಕೆ ಶುರುವಾದ ಮೊದಲ ತಿಂಗಳೇ ನೂರು ರೂಪಾಯಿ ರೆಕರಿಂಗ್ ಡೆಪಾಸಿಟ್ ಶುರು ಮಾಡಿದ್ದೆ. ಅಂದರೆ ನನ್ನ ಮೊದಲ ಗಳಿಕೆಯಲ್ಲಿ 33 ಪ್ರತಿಶತ ಹಣವನ್ನು ಉಳಿಕೆ ಮಾಡಿದ್ದೆ! ಆ ನಂತರದ ದಿನಗಳಲ್ಲಿ ಅದು ಇನ್ನಷ್ಟು ಹೆಚ್ಚಾಯ್ತು. ವಿತ್ತ ಜಗತ್ತಿನ ಪರಿಣಿತರು 50/30/20 ರ ನೀತಿಯನ್ನು ಭೋದಿಸುತ್ತಾರೆ. ನೂರು ರೂಪಾಯಿ ಹಣವನ್ನು ಗಳಿಸಿದರೆ ಅದರಲ್ಲಿ 50 ರೂಪಾಯಿಯಲ್ಲಿ ಎಲ್ಲಾ ಮೂಲಭೂತ ಖರ್ಚುಗಳನ್ನು ಮಾಡಬೇಕು.

ಉಳಿದ 30 ರಲ್ಲಿ ಕಲಿಕೆ, ಎಂಟರ್ಟೈನ್ಮೆಂಟ್, ಟ್ರಾವೆಲ್ ಇತ್ಯಾದಿಗಳು ಮುಗಿಯಬೇಕು. 20 ಪ್ರತಿಶತ ಹಣವನ್ನು ಉಳಿಸಬೇಕು ನಂತರ ಹೂಡಿಕೆ ಮಾಡಬೇಕು ಎನ್ನುವ ಫಾರ್ಮುಲಾ ತುಂಬಾ ಪ್ರಸಿದ್ಧ. ನಾನು ಗಳಿಸಲು, ಉಳಿಸಲು ಶುರುವಾದ ಸಮಯದಲ್ಲಿ ನನಗೆ ಇನ್ನೂ ವಿತ್ತ ಜಗತ್ತಿನ ಹೆಚ್ಚಿನ ಅರಿವಿರಲಿಲ್ಲ. ಇಲ್ಲಿನ ದಿಗ್ಗಜರ ಬಗ್ಗೆ ಅವರ ಫಾರ್ಮುಲಾಗಳ ಬಗ್ಗೆಯೂ ಗೊತ್ತಿರಲಿಲ್ಲ. ಇದೊಂತರ ಒಳ್ಳೆಯದೇ ಆಯ್ತು.

ಏಕೆಂದರೆ ನನ್ನ ಖರ್ಚು ಬಿಟ್ಟು ಉಳಿದದ್ದೆಲ್ಲಾ ಉಳಿಸಬೇಕು ಎನ್ನುವ ಮನೋಭಾವ, ಬೇಗ ಶುರು ಮಾಡಿದರೆ ಪ್ರತಿಫಲ ಹೆಚ್ಚು ಎನ್ನುವ ಜ್ಞಾನವಿದ್ದ ಕಾರಣ ಗಳಿಕೆಯ ಪ್ರಥಮ ವರ್ಷಗಳು 90 ಪ್ರತಿಶತ ಉಳಿಕೆ ಮಾಡಿದ್ದೂ ಇದೆ. ಇದನ್ನು ಹೇಳುವ ಕಾರಣ ಇಷ್ಟೇ, ನಮ್ಮ ಫಾರ್ಮುಲಾ ನಾವು ಸೃಷ್ಟಿಸಿಕೊಳ್ಳಬೇಕು. ಪರಿಣಿತರು ಹೇಳುವುದು ಸಾರ್ವತ್ರಿಕವಾಗಿ ಹೇಳುವ ಫಾರ್ಮುಲಾ. ನಮ್ಮ ಬದುಕಿಗೆ ಅನ್ವಯವಾಗುವ ಸಂಖ್ಯೆಯನ್ನು ನಾವು ಬರೆದುಕೊಳ್ಳಬೇಕು. ಇಲ್ಲವೇ ಪರಿಣಿತರ ಜೊತೆ ಕುಳಿತು ಮುಖಾಮುಖಿ ಮಾತನಾಡಿ ಒಂದು ನಿರ್ಧಾರಕ್ಕೆ ಬರಬೇಕು.

Is it right to invest in new schemes of SBI
ಷೇರುಮಾರುಕಟ್ಟೆಯಲ್ಲಿ ಕರಡಿ ಕುಣಿತಕ್ಕೇನು ಕಾರಣ? (ಹಣಕ್ಲಾಸು)

ನಮ್ಮದು ಬಹಳ ಹಿಂದಿನಿಂದಲೂ ಉಳಿಕೆಯನ್ನ ಅದರಲ್ಲೂ ಸಣ್ಣ ಉಳಿತಾಯವನ್ನ ನಂಬಿ ಬದುಕುತ್ತಿರುವ ಸಮಾಜ. ಮನೆ ಖರ್ಚಿಗೆ ಎಂದು ನೀಡುವ ಹಣದಲ್ಲೂ ಒಂದಷ್ಟು ಉಳಿಕೆ ಮಾಡಿ ಅದೆಷ್ಟೊ ಸಂಸಾರಗಳನ್ನ ಕಷ್ಟಕಾಲದಲ್ಲಿ ಕಾಪಾಡಿದ ನಿದರ್ಶನಗಳು ನಮ್ಮ ಮುಂದಿದೆ. ಆದರೆ ಇತ್ತೀಚೆಗಂತೂ ಭಾರತದಲ್ಲಿ ಕೂಡ ಸಾಮಾನ್ಯ ಜನರು ಉಳಿತಾಯ ಮಾಡುವುದರಿಂದ ಏನು ಪ್ರಯೋಜನ ಎಂದು ಕೇಳುವ ಮಟ್ಟಕ್ಕೆ ಸರಕಾರ ಉಳಿತಾಯಮ ಮೇಲಿನ ಬಡ್ಡಿಯನ್ನ ಕಡಿಮೆ ಮಾಡಿದೆ.

ಎಲ್ಲಕ್ಕೂ ಪಾಶ್ಚಾತ್ಯ ಆರ್ಥಿಕತೆಯನ್ನ ಅನುಸರಿಸಿದರೆ ಅವರಿಗಾದ ಗತಿಯೇ ನಮ್ಮದು ಕೂಡ ಆಗಲಿದೆ. ಭಾರತದಲ್ಲಿ ಕೂಡ ಮುಂದಿನ ಹತ್ತಾರು ವರ್ಷದ ಹಣವನ್ನ ಮುಂಗಡವಾಗಿ ತೆಗೆದುಕೊಂಡು ಖರ್ಚು ಮಾಡುವ ಸಂಪ್ರದಾಯ ಬೆಳೆದು ಬಿಟ್ಟಿದೆ. ಇಂದು ಅಮೇರಿಕಾದಲ್ಲಿ ಆಗುತ್ತಿರುವ ಘಟನೆಗಳು ನಮಗೆ ಎಚ್ಚರಿಕೆಯ ಕರೆಘಂಟೆ! ಈಗ ನಿಮ್ಮಲ್ಲಿ ಒಂದು ಪ್ರಶ್ನೆ ಮೂಡಿರುತ್ತದೆ, ಖರ್ಚು ಮಾಡದೆ ಮಿತವಾಗಿ ಬಳಸಿಕೊಂಡು ಸಾಲವನ್ನ ಮಾಡದೆ ಇದ್ದರೆ ದೇಶ ಅಭಿವೃದ್ಧಿ ಕಾಣುವುದು ಹೇಗೆ, ನಮ್ಮ ಕಾಲಘಟ್ಟದ ಅತ್ಯಂತ ದೊಡ್ಡ ದುರಂತವೆಂದರೆ ಸಾಲ ಮಾಡಿ ಸೃಷ್ಟಿಯಾದ ಸಂಪತ್ತನ್ನ ಅಭಿವೃದ್ಧಿ ಎನ್ನುವಂತೆ ಬಿಂಬಿಸುತ್ತಿರುವುದು. ಇಲ್ಲದ ಆಸ್ತಿಯನ್ನ ಸೃಷ್ಟಿಸಿ ಆನಂದ ಪಡುವುದು ಜಾಣತನವೇ, ನಿಮ್ಮನ್ನ ನೀವೇ ಪ್ರಶ್ನಿಸಿಕೊಳ್ಳಿ.

ಪಾಶ್ಚಾತ್ಯ ಆರ್ಥಿಕತೆ ನಿಂತಿರುವುದು ಸಾಲದ ಮೇಲೆ, ತಾವು ಗಳಿಸಿದ, ಖರ್ಚು ಮಾಡಿದ ಪ್ರತಿಯೊಂದು ಹಣವನ್ನೂ ಲೆಕ್ಕ ಇಟ್ಟು ಅದರ ಆಧಾರದ ಮೇಲೆ ಸಮಾಜದ ಆರ್ಥಿಕತೆ ಎಷ್ಟು ದೊಡ್ಡ ಮಟ್ಟದಲ್ಲಿದೆ ಎನ್ನುವುದನ್ನ ಅಳತೆ ಮಾಡುವುದರ ಮೇಲೆ. ಇದನ್ನೇ ನಾವು ಜಿಡಿಪಿ ಎನ್ನುವುದು. ಭಾರತವೂ ಸೇರಿದಂತೆ ಬಹಳ ದೇಶಗಳಲ್ಲಿ ಹೀಗೆ ಎಲ್ಲವನ್ನೂ ನಾವು ಲೆಕ್ಕ ಇಡಲು ಹೋಗುವುದಿಲ್ಲ. ಅದು ನಮ್ಮ ಸಂಸ್ಕಾರವೂ ಅಲ್ಲ.

ಉದಾಹಣೆಗೆ ಇಂಗ್ಲೆಂಡ್ ಮತ್ತು ಅಮೇರಿಕಾದಂತಹ ದೇಶಗಳಲ್ಲಿ ಫಂಡ್ ರೈಸಿಂಗ್ ಎನ್ನುವುದು ಒಂದು ದೊಡ್ಡ ಉದ್ಯಮ. ದಾನ ಧರ್ಮಕ್ಕೆ ಎಂದು ತೆರೆದ ಲಾಭಕ್ಕಲ್ಲದ ಸಂಸ್ಥೆಗಳಿಗೆ ಹಣವನ್ನ ದೇಣಿಗೆಯ ರೂಪದಲ್ಲಿ ತರಲು ಕೂಡ ಬಹಳಷ್ಟು ಜನರು, ಸಂಸ್ಥೆಗಳು ಇವೆ. ಆದರೆ ಭಾರತದಲ್ಲಿ ಅದು ಇಲ್ಲ. ಇದ್ದರೂ ಅಲ್ಲಿನಷ್ಟು ಭರಾಟೆಯಂತೂ ಖಂಡಿತ ಇಲ್ಲ. ಏಕೆಂದರೆ ನಮ್ಮದು ಎಡಗೈಯಲ್ಲಿ ಕೊಟ್ಟದ್ದು ಬಲಗೈಗೆ ತಿಳಿಯಬಾರದು ಎನ್ನುವ ಸಂಪ್ರದಾಯ ಅಥವಾ ಮನಸ್ಥಿತಿ ಹೊಂದಿದ ದೇಶ.

Is it right to invest in new schemes of SBI
Dubai Real Estate ಹೂಡಿಕೆ ಲಾಭದಾಯಕವೆ? (ಹಣಕ್ಲಾಸು)

ಕೇವಲ ದಾನ ಧರ್ಮದ ವಿಷಯದಲ್ಲಿ ಮಾತ್ರವಲ್ಲ ಬಹಳ ವಿಷಯದಲ್ಲಿ ನಮ್ಮ ಸಮಾಜ ಎಲ್ಲವನ್ನೂ ಸಮಸ್ಥಿತಿಯಲ್ಲಿ ಇಟ್ಟಿದ್ದ ಸಮಾಜ. ಉದಾಹರಣೆ ನೋಡೋಣ. ಹಿಂದೆ ನಮ್ಮ ಮನೆಯ ಹಿತ್ತಲಲ್ಲಿ ಒಂದೆರೆಡು ಆಕಳುಗಳು ಇರುತ್ತಿದ್ದವು. ಅವುಗಳಿಂದ ಹಾಲು,ಅದರಲ್ಲೂ ಕಲಬೆರಕೆಯಿಲ್ಲದ ತಾಜಾ ಹಾಲು ಸಿಗುತ್ತಿತ್ತು. ಹಾಗೆಯೇ ತರಕಾರಿ,ಹೂವು, ಸೊಪ್ಪು ಇತ್ಯಾದಿಗಳು ಅಲ್ಲಿಯೇ ಸಿಗುತ್ತಿದ್ದವು.

ಅವುಗಳನ್ನ ನಾವು ಕೊಂಡು ಕೊಳ್ಳುವ ಪ್ರಮೇಯವೇ ಬರುತ್ತಿರಲಿಲ್ಲ. ಹೀಗೆ ನಾವು ಕೊಂಡು ಕೊಳ್ಳದೆ ಅದರ ಉಪಭೋಗವನ್ನ ಮಾಡಿದರೆ ಅದು ಜಿಡಿಪಿ ಲೆಕ್ಕಕ್ಕೆ ಬರುವುದಿಲ್ಲ! ಪಾಶ್ಚ್ಯಾತ್ಯರ ಪ್ರಕಾರ ನೀವು ಯಾವುದೇ ವಸ್ತುವನ್ನ ಅಥವಾ ಸೇವೆಯನ್ನ ಹಣವನ್ನ ನೀಡದೆ ಬಳಸಿಕೊಂಡರೆ ಅದು ಲೆಕ್ಕಕ್ಕೆ ಬರುವುದಿಲ್ಲ. ಹೀಗಾಗಿ ನಿಮ್ಮ ಸಮಾಜವೆಷ್ಟು ದೊಡ್ಡದು, ನಿಮ್ಮ ಆರ್ಥಿಕತೆಯೆಷ್ಟು ಸಬಲ ಎನ್ನುವ ಅವರ ಲೆಕ್ಕಾಚಾರದಲ್ಲಿ ತಪ್ಪಾಗುತ್ತದೆ.

ಭಾರತದಲ್ಲಿ ಹಣದುಬ್ಬರ ಕಡಿಮೆಯಾಗಿಲ್ಲ ಎನ್ನುವುದಕ್ಕೆ ಕಳೆದ ವಾರ ಆರ್ಬಿಐ ತನ್ನ ರೆಪೋ ರೇಟ್ ಕಡಿಮೆ ಮಾಡದೆ ಇರುವುದು ಬಹು ದೊಡ್ಡ ಸಾಕ್ಷಿ. ಸರಕಾರ ಹೊರಡಿಸುವ ಹಣದುಬ್ಬರ ಸಂಖ್ಯೆ ಪ್ರಕಾರ ಭಾರತದಲ್ಲಿ 3.5 ಇಂದ 4 ಪ್ರತಿಶತದ ಆಸುಪಾಸಿನಲ್ಲಿ ಇದೆ. ಇದು ಯಾವುದೇ ಲೆಕ್ಕಾಚಾರದಲ್ಲೂ ಹೊರಜಗತ್ತಿನಲ್ಲಿ ಚಾಲ್ತಿಯಲ್ಲಿರುವ ಹಣದುಬ್ಬರದ ಹತ್ತಿರವೂ ಸುಳಿಯುವುದಿಲ್ಲ ಎನ್ನುವುದು ತಿಂಗಳ ಕೊನೆ ಮುಟ್ಟಲು ಹೆಣಗುವ ಪ್ರತಿಯೊಬ್ಬ ನಾಗರೀಕರಿಗೂ ಗೊತ್ತಿರುವ ಸತ್ಯ. ನೀವೇ ಗಮನಿಸಿ ನೋಡಿ ನಮ್ಮಲ್ಲಿ ರೆಪೋ ರೇಟ್ 6.5 ಪ್ರತಿಶತವಿದೆ.

Is it right to invest in new schemes of SBI
ಮನೆಕಟ್ಟುವ ಮುನ್ನ ಪರಿಗಣಿಸಬೇಕಾದ 8 ಅಂಶಗಳು! (ಹಣಕ್ಲಾಸು)

ಹಣದುಬ್ಬರ ಸರಕಾರ ಹೇಳುವ ಪ್ರಕಾರ 3.5 ಪ್ರತಿಶತ ಇರುವುದು ನಿಜವೇ ಆಗಿದಿದ್ದರೆ ಕಳೆದ ವಾರದ ಸಭೆಯಲ್ಲಿ ಆರ್ಬಿಐ ರೆಪೋ ರೇಟ್ ಕಡಿಮೆ ಮಾಡಬೇಕಾಗಿತ್ತು. ಅದು ಆಗಿಲ್ಲ. ಇನ್ನೊಂದು ಪ್ರಮುಖ ಅಂಶವೇನು ಗೊತ್ತೇ, ಭಾರತೀಯ ಮಧ್ಯಮವರ್ಗ ಬ್ಯಾಂಕುಗಳಿಂದ ಬಹಳ ಬೇಸತ್ತಿದ್ದಾರೆ. ಸರಿಯಾಗಿ ಸಿಗದ ಸೇವೆ, ಕಡಿಮೆ ಬಡ್ಡಿದರ,ಬ್ಯಾಂಕು ನೌಕರರ ಸಿಡುಕಾಟ ಇವೆಲ್ಲವೂ ಆತನನ್ನು ಬ್ಯಾಂಕಿನಿಂದ ದೂರ ಮಾಡುತ್ತಿವೆ. ಹೀಗಾಗಿ ಪ್ರಥಮ ಬಾರಿಗೆ ಭಾರತದಲ್ಲಿ ಹಣ ಉಳಿಸುವರ ಸಂಖ್ಯೆಯಲ್ಲಿ ಹಣದ ಮೊತ್ತದಲ್ಲಿ ಎರಡರಲ್ಲೂ ಕುಸಿತ ಕಂಡಿದೆ. ಹೀಗಾಗಿ ಬ್ಯಾಂಕುಗಳಲ್ಲಿ ಲಿಕ್ವಿಡಿಟಿ ಸಮಸ್ಯೆ ಶುರುವಾಗುತ್ತದೆ.

ನಿಜ ಹೇಳಬೇಕೆಂದರೆ ಆ ಸಮಸ್ಯೆಯ ಬಿಸಿ ಆಗಲೇ ತಟ್ಟಲು ಶುರುವಾಗಿದೆ. ಹೀಗಾಗಿ ಭಾರತದ ಬಹು ದೊಡ್ಡ ಬ್ಯಾಂಕು ಎಸ್ಬಿಐ ಹೊಸ ಠೇವಣಿದಾರರನ್ನು ಸೆಳೆಯಲು ಒಂದಷ್ಟು ಹೊಸ ಯೋಜನೆಗಳನ್ನು ಹೊತ್ತು ತಂದಿದೆ. ಇದು ಜನ ಸಾಮಾನ್ಯ ಮತ್ತು ಸೀನಿಯರ್ ಸಿಟಿಜನ್ಗಳಿಗೆ ಲಾಭದಾಯಕವಾಗಿದೆ. ಹಿರಿಯ ನಾಗರಿಕರಿಗೆ ಇವು ಅತ್ಯುತ್ತಮ ಉಳಿಕೆ ಮಾರ್ಗವಾಗಿದೆ.

ಏಕೆಂದರೆ ಇಲ್ಲಿ ನೀಡುವ ಬಡ್ಡಿ ನಿಗದಿತ ಸಮಯದ ವರೆಗೆ ಬದಲಾಗುವುದಿಲ್ಲ. ಇಲ್ಲಿನ ಹೂಡಿಕೆ ಮೇಲೆ ಯಾವುದೇ ಅಪಾಯವಿಲ್ಲ ಮತ್ತು ಷೇರು ಮಾರುಕಟ್ಟೆಯ ಯಾವ ಏರಿಳಿತಗಳು ಕೂಡ ಇಲ್ಲಿ ಯಾವುದೇ ಪರಿಣಾಮ ಬಿಡುವುದಿಲ್ಲ. ಹೀಗಾಗಿ ಹೆಚ್ಚು ಸುರಕ್ಷತೆ ಬಯಸುವ ಮತ್ತು ಸ್ಥಿರತೆಗೆ ಹೆಚ್ಚಿನ ಆದ್ಯತೆಯನ್ನು ನೀಡುವ ಹಿರಿಯ ನಾಗರಿಕರಿಗೆ ಇದು ಹೇಳಿ ಮಾಡಿಸಿದ ಯೋಜನೆಗಳಾಗಿವೆ.

Is it right to invest in new schemes of SBI
Emergency Fund: ಅಸ್ಥಿರ ಸಮಯಕ್ಕಾಗಿ ಹಣ ಕೂಡಿಡುವುದು ಹೇಗೆ? ನೀವು ತಿಳಿಯಬೇಕಾದ 5 ಸೂತ್ರಗಳು (ಹಣಕ್ಲಾಸು)

SBI, ಭಾರತದ ಅತಿ ದೊಡ್ಡ ಬ್ಯಾಂಕ್ ನಿನ್ನೆಯಿಂದ ಅಂದರೆ 15 ನೇ ಸೆಪ್ಟೆಂಬರ್ ನಿಂದ ಒಂದಷ್ಟು ಹೊಸ ವಿಶೇಷ ಯೋಜನಗಳನ್ನು ತಂದಿದೆ. ಅವುಗಳ ಬಗ್ಗೆ ಒಂದಷ್ಟು ತಿಳಿದುಕೊಳ್ಳೋಣ.

  1. ಎಸ್ಬಿಐ ಅಮೃತ ವರ್ಷಿಣಿ: ಜುಲೈ 15 ರಿಂದ ಈ ಯೋಜನೆ ಜಾರಿಗೆ ಬಂದಿದೆ ಮತ್ತು ಇಲ್ಲಿ ಹೂಡಿಕೆ ಮಾಡಲು ದಿನಾಂಕ ಮಾರ್ಚ್ 31,2025 ಆಗಿರುತ್ತದೆ. ಇಲ್ಲಿ ಅತಿ ಹೆಚ್ಚು ಎಂದರೆ 7.25 ಪ್ರತಿಶತ ಬಡ್ಡಿ ಸಿಗುತ್ತದೆ. ಆದರೆ 444 ದಿನದ ಠೇವಣಿ ಮೇಲೆ 7.75 ಪ್ರತಿಶತ ಬಡ್ಡಿ ಸಿಗುತ್ತದೆ. ಇಲ್ಲಿ ಯಾರು ಬೇಕಾದರೂ ಹಣವನ್ನು ತೊಡಗಿಸಬಹುದು. ಹಿರಿಯ ನಾಗರಿಕರಿಗೆ 0.5 ಪ್ರತಿಶತ ಹೆಚ್ಚು ಬಡ್ಡಿಯನ್ನು ನೀಡಲಾಗುತ್ತದೆ. ಅಂದರೆ 444 ದಿನದ ಹೂಡಿಕೆಯ ಮೇಲೆ 8.25 ಪ್ರತಿಶತ ಬಡ್ಡಿ ಸಿಗಲಿದೆ.

  2. ಎಸ್ಬಿಐ ಅಮೃತ ಕಲಶ: ಇಲ್ಲಿ ಹೂಡಿಕೆ ಮಾಡಲು 31 ಮಾರ್ಚ್,2025 ಕೊನೆಯ ದಿನಾಂಕವಾಗಿರುತ್ತದೆ. 400 ದಿನದ ಫಿಕ್ಸೆಡ್ ಡೆಪಾಸಿಟ್ ಮೇಲೆ ಜನ ಸಾಮ್ಯಾನರಿಗೆ 7.1 ಪ್ರತಿಶತ ಬಡ್ಡಿ ಇರುತ್ತದೆ. ಹಿರಿಯ ನಾಗರೀಕರಿಗೆ 7.6 ಪ್ರತಿಶತ ಅಂದರೆ ಅರ್ಧ ಪ್ರತಿಶತ ಹೆಚ್ಚಿನ ಬಡ್ಡಿ ಸಿಗುತ್ತದೆ.

  3. ಎಸ್ಬಿಐ ವೀ ಕೇರ್: ಇದರಲ್ಲಿ ಕೇವಲ ಹಿರಿಯ ನಾಗರಿಕರು ಮಾತ್ರ ಹೂಡಿಕೆ ಮಾಡಬಹುದು. ಆದರೆ ಇಲ್ಲಿನ ಹೂಡಿಕೆ ಸಮಯ ಐದರಿಂದ ಹತ್ತು ವರ್ಷ ಇರುತ್ತದೆ. ಇಲ್ಲಿಯ ಬಡ್ಡಿ ದರ 7.5 ಪ್ರತಿಶತವಿದೆ. ಇಲ್ಲಿ ಹೂಡಿಕೆ ಮಾಡಲು ಕೊನೆಯ ದಿನಾಂಕ ನವೆಂಬರ್ 30, 2024 ಆಗಿರುತ್ತದೆ. ಈ ದಿನಾಂಕವನ್ನು ವಿಸ್ತರಿಸಿದ ಕಾರಣ ನವೆಂಬರ್ ವರೆಗೆ ಅವಕಾಶವಿದೆ, ಇದನ್ನು ಮಾರ್ಚ್ 31,2024 ರ ವರೆಗೆ ಇಡಲಾಗಿತ್ತು. ಹೀಗಾಗಿ ಇದನ್ನು ಮತ್ತೆ ವಿಸ್ತರಿಸುವ ಸಾಧ್ಯತೆ ಕಡಿಮೆ ಇರುವ ಕಾರಣ ಮತ್ತು ಬಡ್ಡಿದರವೂ ಉತ್ತಮವಾಗಿರುವ ಕಾರಣ ಹಿರಿಯ ನಾಗರಿಕರು ಇದರ ಲಾಭವನ್ನು ಪಡೆಯಬಹುದು.

  4. ಎಸ್ಬಿಐ ಗ್ರೀನ್ ರುಪೀ ಟರ್ಮ್ ಡೆಪಾಸಿಟ್: ಈ ಯೋಜನೆಯ ಅಡಿಯಲ್ಲಿ 1111 ದಿನ ಮತ್ತು 1777 ದಿನದ ಡೆಪಾಸಿಟ್ ಮೇಲೆ ಹಿರಿಯ ನಾಗರಿಕರಿಗೆ 7.15 ಪ್ರತಿಶತ ಬಡ್ಡಿಯನ್ನು ನಿಗದಿ ಪಡಿಸಲಾಗಿದೆ. 2222 ದಿನದ ಡೆಪಾಸಿಟ್ ಮೇಲೆ 7.4 ಪ್ರತಿಶತ ಬಡ್ಡಿಯನ್ನು ನೀಡಲಾಗುತ್ತದೆ. ಇದೆ ಸಮಯದ ಹೂಡಿಕೆಗೆ ಜನ ಸಾಮಾನ್ಯನಿಗೆ 6.65 ಮತ್ತು 6.4 ಪ್ರತಿಶತ ಬಡ್ಡಿಯನ್ನುಕೊಡಲಾಗುತ್ತದೆ.

  5. ಎಸ್ಬಿಐ ಸರ್ವೋತ್ತಮ್: ಇಲ್ಲಿ ಕನಿಷ್ಠ ಹೂಡಿಕೆ 15 ಲಕ್ಷ ಮೇಲ್ಪಟ್ಟಿರಬೇಕು ಮತ್ತು ಗರಿಷ್ಟ ಹೂಡಿಕೆ 3 ಕೋಟಿ ರೂಪಾಯಿ ತನಕ ಮಾಡಬಹುದು. ವರ್ಷದ ಡೆಪಾಸಿಟ್ ಮೇಲೆ 7.1 ಪ್ರತಿಶತ ಮತ್ತು ಎರಡು ವರ್ಷದ ಡೆಪಾಸಿಟ್ ಮೇಲೆ 7.4 ಪ್ರತಿಶತ ಬಡ್ಡಿಯನ್ನು ನೀಡಲಾಗುತ್ತದೆ. ಹಿರಿಯ ನಾಗರಿಕರಿಗೆ ಅರ್ಧ ಪರ್ಸೆಂಟ್ ಹೆಚ್ಚಿನ ಬಡ್ಡಿ ನಿಗದಿಪಡಿಸಲಾಗಿದೆ.

ಕೊನೆ ಮಾತು:

ಭದ್ರತೆ ಮತ್ತು ಸ್ಥಿರತೆ ಬಯಸುವವರು ಮಾತ್ರ ಇಲ್ಲಿ ಹೂಡಿಕೆಗೆ ಮುಂದಾಗಿ ಏಕೆಂದರೆ ಇಲ್ಲಿ ಸಿಗುವ ರಿಟರ್ನ್ಸ್ ಎಂದಿಗೂ ನಮ್ಮ ಸಮಾಜದಲ್ಲಿ ಇರುವ ಹಣದುಬ್ಬರವನ್ನು ಮೀರಿಸಲು ಸಾಧ್ಯವಿಲ್ಲ. ಹೀಗಾಗಿ ಇಲ್ಲಿಟ್ಟ ಹಣ ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತದೆ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com