
ಭಾರತದಂತಹ ಅತಿ ದೊಡ್ಡ ದೇಶದಲ್ಲಿ ಮಾರ್ಕೆಟ್ ಸರ್ವೆ ಬಹಳ ಮುಖ್ಯವಾಗುತ್ತದೆ. ಪ್ರತಿ ಹತ್ತಿಪತ್ತು ಕಿಲೋಮೀಟರ್ ಗೆ ಆಡುವ ಮಾತಿನಿಂದ ತಿನ್ನುವ ಆಹಾರ, ಧರಿಸುವ ಉಡುಪಿನಲ್ಲೂ ಒಂದಷ್ಟು ವ್ಯತ್ಯಾಸ ಸಿಗುವ ದೇಶ ನಮ್ಮದು.
ಜಗತ್ತಿನ ಬೇರೆ ದೇಶಗಳಲ್ಲಿ ಒಂದು ಟ್ರೆಂಡ್ ಶುರುವಾದರೆ ಅದು ಬಹುಬೇಗ ವೈರಲ್ ಆಗಿಬಿಡುತ್ತದೆ. ಭಾರತದಲ್ಲಿ ಅದೆಷ್ಟೇ ವೈರಲ್ ಆಗಿದೆ ಎಂದರೂ ಜನಸಂಖ್ಯೆಯ ಒಂದಷ್ಟು ಪ್ರತಿಶತ ಜನರಿಗೆ ಹೀಗಾಗಿದೆ ಎನ್ನುವುದರ ಅರಿವು ಕೂಡ ಇರುವುದಿಲ್ಲ. ಪರಿಸ್ಥಿತಿ ಹೀಗಿರುವಾಗ ಹೊಸ ಪದಾರ್ಥ ಅಥವಾ ಸೇವೆ ಎನ್ನುವುದು ಮಾರುಕಟ್ಟೆಗೆ ಬಂದಿದೆ ಎನ್ನುವುದು ಕೂಡ ತಿಳಿಯುವುದಿಲ್ಲ. ಹೀಗಾಗಿ ಮಾರ್ಕೆಟಿಂಗ್ ಬೇಕು. ಮಾರ್ಕೆಟ್ ಸರ್ವೆ ಎನ್ನುವುದು ಕೂಡ ಒಂದರ್ಥದಲ್ಲಿ ಮಾರ್ಕೆಟಿಂಗ್ ಕೂಡ ಹೌದು, ಆದರೆ ಅದರ ಪ್ರಮಾಣ , ಪರಿಣಾಮ ಕಡಿಮೆಯಿರುತ್ತದೆ. ಇದನ್ನು ಪೂರ್ಣ ಪ್ರಮಾಣದ ಮಾರ್ಕೆಟಿಂಗ್ ಎನ್ನಲಾಗುವುದಿಲ್ಲ.
ಮಾರುಕಟ್ಟೆಯಲ್ಲಿ ನಾವು ತರಲಿರುವ ಪದಾರ್ಥ ಅಥವಾ ಸೇವೆಯೇ ಬಗ್ಗೆ ಜನರಿಗೆಷ್ಟು ಗೊತ್ತಿದೆ? ಆ ಪದಾರ್ಥ ಅಥವಾ ಸೇವೆ ಸಿಕ್ಕರೆ ಅವರು ಅದನ್ನು ಖರೀದಿಸಲು ಬಯಸುತ್ತಾರೆಯೇ? ನಮ್ಮ ಪದಾರ್ಥದ ಗ್ರಾಹಕರು ಎಲ್ಲಿ ಹೆಚ್ಚಾಗಿದ್ದಾರೆ? ಅವರ ಖರ್ಚು ಮಾಡುವ ಶಕ್ತಿ ಎಷ್ಟು, ಅಂದರೆ ಪದಾರ್ಥದ ಬೆಲೆ ಎಷ್ಟು ಇಟ್ಟರೆ ಉತ್ತಮ? ಹೀಗೆ ಇನ್ನೂ ಹಲವಾರು ಪ್ರಶ್ನೆಗಳಿಗೆ ಒಂದು ಮಟ್ಟದ ಸಮಂಜಸ ಉತ್ತರವನ್ನು ಕಂಡುಕೊಳ್ಳಬಹುದು. ಇಂತಹ ಪ್ರಶ್ನೆಗಳಿಗೆ ಉತ್ತರವನ್ನು ತಿಳಿದುಕೊಳ್ಳದೆ ಒಮ್ಮೆಲೇ ಮಾರುಕಟ್ಟೆಗೆ ಧುಮುಕುವುದು ಸಮಯ, ಹಣ ಮತ್ತು ರೆಪ್ಯೂಟೇಷನ್ ಎಲ್ಲವನ್ನೂ ಹಾಳು ಮಾಡುತ್ತದೆ.
ಈ ರೀತಿಯ ಮಾರ್ಕೆಟ್ ಸರ್ವೆ ಅಥವಾ ರಿಸೆರ್ಚ್ ಮಾಡಲು ಬಹಳಷ್ಟು ಹಣ ಬೇಕಾಗುತ್ತದೆ.ಹೀಗಾಗಿ ಬಹಳಷ್ಟು ಹೊಸದಾಗಿ ಮಾರುಕಟ್ಟೆಗೆ ಬರುವ ಸಂಸ್ಥೆಗಳು ಇದನ್ನು ಭರಿಸುವ ಶಕ್ತಿ ಹೊಂದಿರುವುದಿಲ್ಲ. ಮಾರುಕಟ್ಟೆಯಲ್ಲಿ ಅಧಿಪತ್ಯವನ್ನು ಸಾಧಿಸಬೇಕು ಎಂದರೆ ಈ ರೀತಿಯ ಮಾರ್ಕೆಟ್ ರಿಸೆರ್ಚ್ ಮತ್ತು ಸರ್ವೆ ಮಾಡಿಸುವುದು ಕಡ್ಡಾಯ. ಇದನ್ನು ಖರ್ಚು ಎಂದು ನೋಡುವುದರ ಬದಲು ಇದು ಕೂಡ ಸಂಸ್ಥೆಯ ಉಗಮಕ್ಕೆ ಹಾಕುತ್ತಿರುವ ಬಂಡವಾಳ ಎಂದು ಗುರುತಿಸಬೇಕು. ಏಕೆಂದರೆ ಮುಂದೆ ಆಗಬಹುದಾದ ದೊಡ್ಡ ನಷ್ಟವನ್ನು ಇದು ಉಳಿಸುತ್ತದೆ. ಹಣಕಾಸಿನ ದೃಷ್ಟಿಯಿಂದ ಮಾತ್ರವಲ್ಲ, ಪದಾರ್ಥದ ಯಶಸ್ಸಿಗೂ ಇದು ಬಹಳಷ್ಟು ದೇಣಿಗೆ ನೀಡುತ್ತದೆ.
ಈ ರೀತಿಯ ಮಾರ್ಕೆಟ್ ಸರ್ವೆ ಅಥವಾ ರಿಸೆರ್ಚ್ ಕೇವಲ ಹೊಸದಾಗಿ ಶುರು ಮಾಡಲಿರುವ ಉದ್ದಿಮೆಗಳಿಗೆ ಮಾತ್ರ ಸೀಮಿತವಲ್ಲ. ಮಾರುಕಟ್ಟೆಯಲ್ಲಿ ಈಗಾಗಲೇ ಬೇರೂರಿರುವ ಪ್ರಸಿದ್ಧ ಸಂಸ್ಥೆಗಳು ಕೂಡ ಮಾರುಕಟ್ಟೆಯಲ್ಲಿ ಇಂದಿಗೆ ತಮ್ಮ ಸ್ಥಾನ ಎಲ್ಲಿದೆ? ಹೇಗಿದೆ? ಎನ್ನುವುದನ್ನು ತಿಳಿದುಕೊಳ್ಳಲು ಕೂಡ ಮಾಡುತ್ತವೆ. ಇದರ ಜೊತೆಗೆ ಹೊಸ ಪದಾರ್ಥವನ್ನು ಮಾರುಕಟ್ಟೆಗೆ ಬಿಡುವ ಯೋಚನೆ ಇದ್ದಾಗ ಕೂಡ ಮಾರ್ಕೆಟ್ ಸರ್ವೆ ಅಗತ್ಯ ಎನ್ನುವುದನ್ನು ಅವುಗಳು ಮನಗಂಡಿವೆ. ಇದೇಕೆ ಅಷ್ಟೊಂದು ಪ್ರಾಮುಖ್ಯತೆ ಪಡೆದಿದೆ ಎನ್ನುವುದನ್ನು ಸ್ವಲ್ಪ ವಿವರವಾಗಿ ನೋಡೋಣ.
ಭಾರತ ಅತ್ಯಂತ ವಿವಿಧತೆಯನ್ನು ಹೊಂದಿರುವ ದೇಶ: ಭಾರತ ಬಹು ದೊಡ್ಡ ದೇಶ. ಪ್ರತಿ ರಾಜ್ಯವೂ ಒಂದಕ್ಕಿಂತ ಒಂದು ವಿಭಿನ್ನ. ರಾಜ್ಯದಲ್ಲಿ ಪ್ರತಿ ಜಿಲ್ಲೆಯೂ ಒಂದರಂತೆ ಒಂದಿಲ್ಲ, ಹಾಗೆ ಪ್ರತಿ ನಗರ , ಊರುಗಳು, ಹಳ್ಳಿಗಳು ಎಲ್ಲವೂ ಒಂದಕ್ಕಿಂತ ಒಂದು ಬಿನ್ನ. ಒಂದು ಕಡೆ ಇಷ್ಟಪಟ್ಟ ಪದಾರ್ಥವನ್ನು ಬೇರೆಕಡೆ ಇಷ್ಟಪಡಬೇಕು ಎನ್ನುವ ನಂಬಿಕೆಯಿಲ್ಲ. ಹೀಗಾಗಿ ಮಾರ್ಕೆಟ್ ಸರ್ವೆ ಬಹಳ ಅಗತ್ಯ. ಗ್ರಾಹಕನ ನಿಖರ ಬೇಡಿಕೆ, ಆತನ ಒಲವುಗಳು ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕುವುದು ಕೂಡ ಈ ಸರ್ವೆಯಿಂದ ಸಾಧ್ಯವಾಗುತ್ತದೆ. ಗ್ರಾಹಕನ ಇಚ್ಚೆಗೆ ತಕ್ಕಂತೆ ಪದಾರ್ಥವನ್ನು ತಯಾರಿಸಿದಾಗ ಅದು ಯಶಸ್ಸು ಗಳಿಸುವ ಸಾಧ್ಯತೆ ಹೆಚ್ಚಾಗುತ್ತದೆ. ಸರಿಯಾದ ಪ್ರದೇಶಕ್ಕೆ ಸರಿಯಾದ ಪದಾರ್ಥವನ್ನು ನೀಡುವುದು ಕೂಡ ಸಾಧ್ಯವಾಗುತ್ತದೆ. ಉದಾಹರಣೆಗೆ ಒಂದು ರೆಸ್ಟುರೆಂಟ್ ಚೈನ್ ಉತ್ತರಭಾರತದಲ್ಲಿ ಬಹಳ ಪ್ರಸಿದ್ಧವಾಗಿದೆ ಎಂದುಕೊಳ್ಳೋಣ. ಅವರು ದಕ್ಷಿಣ ಭಾರತಕ್ಕೆ ತಮ್ಮ ಶಾಖೆಗಳನ್ನು ವಿಸ್ತರಿಸಲು ಬಯಸಿದರೆ ಇಲ್ಲಿನ ಜನರ ರುಚಿಗೆ, ಅವರ ಸಂಸ್ಕಾರಕ್ಕೆ ಹೊಂದುವಂತೆ ಒಂದಷ್ಟು ಬದಲಾವಣೆ ಖಂಡಿತ ಮಾಡಿಕೊಳ್ಳಬೇಕಾಗುತ್ತದೆ. ಅದು ಗೊತ್ತಾಗುವುದು ಎಲ್ಲಿ ಹೋಟೆಲ್ ತೆಗೆಯಬೇಕು ಎಂದು ಬಯಸಿದ್ದೇವೆ ಅಲ್ಲಿನ ಜನರ ಟೆಸ್ಟ್ ಅಂಡ್ ಪ್ರಿಫರೆನ್ಸ ಏನು ಎಂದು ತಿಳಿದುಕೊಂಡಾಗ ಮಾತ್ರ! ನನ್ನ ಉದಾಹರಣೆಯನ್ನೇ ನೀಡುವೆ. ಬೆಂಗಳೂರಿನ ಕಮರ್ಶಿಯಲ್ ಸ್ಟ್ರೀಟ್ನಲ್ಲಿ ಒಂದು ಹೋಟೆಲ್ ತೆರೆದಿದ್ದೆ. ಅಲ್ಲಿ ಫ್ಲೋಟಿಂಗ್ ಪಾಪುಲೇಷನ್ ಅಂದರೆ ಪ್ರತಿ ನಿತ್ಯ ಬದಲಾಗುವ ಗ್ರಾಹಕರು ಜಾಸ್ತಿ ಎನ್ನುವುದು ನನ್ನ ಅಭಿಪ್ರಾಯವಾಗಿತ್ತು. ಹೇಳಿಕೇಳಿ ಅಲ್ಲಿಗೆ ನಿತ್ಯವೂ ಬೆಂಗಳೂರಿನ ವಿವಿಧ ಭಾಗಗಳಿಂದ ಖರೀದಿ ಮಾಡಲು ಬರುವ ಜನರ ಸಂಖ್ಯೆ ಜಾಸ್ತಿಯಿರುತ್ತದೆ. ಹೀಗಾಗಿ ಸ್ಥಳೀಯ ಗ್ರಾಹಕರು ಕಡಿಮೆ ಎನ್ನುವ ಭಾವನೆ ನನ್ನದಾಗಿತ್ತು. ಉದ್ದಿಮೆಯಲ್ಲಿ ಊಹೆಗಳನ್ನು ಎಂದಿಗೂ ಮಾಡಿಕೊಳ್ಳಬಾರದು ಎನ್ನುವ ಪಾಠವನ್ನು ನನಗೆ ಆ ವೆಂಚರ್ ಕಲಿಸಿತು. ಅಲ್ಲಿನ ಸ್ಥಳೀಯರಿಗೆ ಸಾಂಬಾರಿನಲ್ಲಿ ಹೆಚ್ಚಿನ ಸಕ್ಕರೆ ಇರಬೇಕು. ನಾವು ಸಕ್ಕರೆ ಹಾಕುತ್ತಿರಲಿಲ್ಲ. ಪೊಂಗಲ್ ನೀರಾಗಿರುತಿತ್ತು. ಅವರಿಗೆ ಪೊಂಗಲ್ ಇನ್ನಷ್ಟು ಗಟ್ಟಿಯಾಗಿರಬೇಕಿತ್ತು. ಸ್ಥಳೀಯರು ಹೆಚ್ಚು ಬರುವುದಿಲ್ಲ ಎನ್ನುವ ತಪ್ಪು ಊಹೆ ಮಾಡಿಕೊಂಡ ಕಾರಣ ಅವರ ಬೇಕು ಬೇಡಗಳು ನಮ್ಮ ಅರಿವಿಗೆ ಬರಲಿಲ್ಲ. ತಿಂಗಳಲ್ಲಿ ಅದನ್ನು ತಿದ್ದಿಕೊಂಡೆವು ಎನ್ನುವುದು ಬೇರೆ ವಿಷಯ. ಎಲ್ಲಾ ಉದ್ದಿಮೆಗಳಲ್ಲೂ ಸುಲಭವಾಗಿ ತಿದ್ದಿಕೊಳ್ಳುವ ಅವಕಾಶಗಳನ್ನು ಸನ್ನಿವೇಶ ನೀಡುವುದಿಲ್ಲ. ಹೀಗಾಗಿ ಊಹೆಗಿಂತ ಸರ್ವೇ ಉತ್ತಮ.
ಉತ್ತಮ ಮತ್ತು ನಿಖರ ತೀರ್ಮಾನಗಳನ್ನು ಕೈಗೊಳ್ಳಲು ಸಹಾಯ ಮಾಡುತ್ತದೆ: ಮಾರ್ಕೆಟ್ ಸರ್ವೇ ಮಾಡುವುದರಿಂದ ಎಲ್ಲಕ್ಕೂ ಮೊದಲಿಗೆ ಹೆಚ್ಚಿನ ಅಪಾಯ ತಪ್ಪುತ್ತದೆ. ಮಾರುಕಟ್ಟೆಯ ಆಳ ಅಗಲ ತಿಳಿಯದೆ ಧುಮುಕುವುದಕ್ಕಿಂತ ಒಂದಷ್ಟು ಮಾಹಿತಿ ಆಧಾರದ ಮೇಲೆ ಧುಮುಕುವುದು ಅಪಾಯವನ್ನು ಅಷ್ಟರ ಮಟ್ಟಿಗೆ ಕಡಿಮೆಗೊಳಿಸುತ್ತದೆ.ಇದನ್ನು ಕ್ಯಾಲ್ಕ್ಯುಲೇಟೆಡ್ ರಿಸ್ಕ್ ಎನ್ನುತ್ತೇವೆ. ಇದರಿಂದ ಮುಂದೆ ತಪ್ಪಾದರೂ ಅದರಿಂದ ಆಗುತ್ತಿದ್ದ ನಷ್ಟ ಬಹಳಷ್ಟು ಕಡಿಮೆಯಾಗುತ್ತದೆ. ಕೇವಲ ಅಪಾಯದ ದೃಷ್ಟಿಯಿಂದ ಅಲ್ಲ, ಅಭಿವೃದ್ಧಿ ದೃಷ್ಟಿಯಿಂದ ನೋಡಿದಾಗ ಕೂಡ ಸರ್ವೇ ಮಾಡಿಸುವುದು ಮುಖ್ಯವಾಗುತ್ತದೆ. ಹೊಸ ಅವಕಾಶಗಳನ್ನು ಸರ್ವೇ ನಮಗೆ ಒದಗಿಸುತ್ತದೆ. ನಾವು ಇಷ್ಟಪಟ್ಟ ಪ್ರದೇಶದಲ್ಲಿ ಪದಾರ್ಥದ ಜೊತೆಗೆ ಅದಕ್ಕೆ ಪೂರಕವಾದ ಇನ್ನೊಂದು ಪದಾರ್ಥಕ್ಕೂ ಇರುವ ಬೇಡಿಕೆಯನ್ನು ಸಹ ನಾವು ಗುರುತಿಸಬಹುದು. ಇದರಿಂದ ಸಂಸ್ಥೆಯ ಪೂರ್ಣ ಶಕ್ತಿಯ ಉಪಯೋಗ ಮಾಡಿಕೊಂಡಂತೆ ಆಗುತ್ತದೆ. ಜೊತೆಗೆ ಮಾರ್ಕೆಟ್ ಸ್ಟ್ರಾಟೆಜಿ ಬದಲಿಸಿಕೊಳ್ಳಲು ಕೂಡ ಸಹಾಯಕವಾಗುತ್ತದೆ.
ಸ್ಪರ್ಧೆಯಲ್ಲಿ ಮುಂದಿರಲು ಸರ್ವೇ ಸಹಕಾರಿ: ಮಾರ್ಕೆಟ್ ಸರ್ವೆ ಎಂದ ತಕ್ಷಣ ಅದು ಕೇವಲ ನಮ್ಮ ಪದಾರ್ಥಕ್ಕೆ ಬೇಡಿಕೆಯಿದೆಯೇ ಅಥವಾ ಇಲ್ಲವೇ ಎಂದು ನೋಡುವುದಷ್ಟೇ ಅಲ್ಲ, ಅದರ ಜೊತೆಗೆ ನಮ್ಮ ಪ್ರತಿಸ್ಪರ್ಧಿಗಳ ಮಾರ್ಕೆಟ್ ಪೊಸಿಷನಿಂಗ್ ಹೇಗಿದೆ? ಅವರ ಪದಾರ್ಥ ಹೇಗಿದೆ? ಮಾರುಕಟ್ಟೆಯಲ್ಲಿ ಅವರು ಗೆಲ್ಲುತ್ತಿದ್ದರೆ ಅದಕ್ಕೆ ಕಾರಣಗಳೇನು? ಸೋಲುತ್ತಿದ್ದರೆ ಅವರೇಕೆ ಸೋಲುತ್ತಿದ್ದಾರೆ? ಎನ್ನುವ ಅಂಶಗಳನ್ನು ಕೂಡ ಪಟ್ಟಿ ಮಾಡುವುದಾಗಿದೆ. ಇದರಿಂದ ನಾವು ಮಾರುಕಟ್ಟೆಯಲ್ಲಿ ನಮ್ಮನ್ನು ಹೇಗೆ ಗುರುತಿಸಿಕೊಳ್ಳಬೇಕು ಎನ್ನುವುದನ್ನು ಅರಿತುಕೊಳ್ಳಬಹುದು. ಇದರ ಜೊತೆಗೆ ಮಾರುಕಟ್ಟೆಯಲ್ಲಿ ಇಂದಿಗೆ ಹೆಚ್ಚು ಟ್ರೆಂಡ್ ಆಗುತ್ತಿರುವುದು ಏನು ಎನ್ನುವುದನ್ನು ಕೂಡ ಇದರಿಂದ ತಿಳಿದುಕೊಳ್ಳಬಹುದು. ಮಾರುಕಟ್ಟೆ ಕೆಲವೊಮ್ಮೆ ಬಹಳ ವಿಚಿತ್ರವಾಗಿ ವರ್ತಿಸುತ್ತದೆ. ಬಹಳಷ್ಟು ವಿವಿಧತೆಯನ್ನು ಹೊಂದಿರುವ ಈ ದೇಶದಲ್ಲಿ ಅಚಾನಕ್ಕಾಗಿ ಟ್ರೆಂಡ್ ಹೆಸರಿನಲ್ಲಿ ಎಲ್ಲರೂ ಒಂದು ವಿಷಯದ ಹಿಂದೆ ಬಿದ್ದು ಬಿಡುತ್ತಾರೆ. ಮಾರ್ಕೆಟ್ ಸರ್ವೇ ಟ್ರೇಡಿಂಗ್ ನಲ್ಲಿರುವ ಅಂಶಗಳ ಬಗ್ಗೆ ಕೂಡ ಬೆಳಕು ಚಲ್ಲುತ್ತದೆ. ನಮಗೆ ಹೆಚ್ಚೆಚ್ಚು ಮಾಹಿತಿ ತಿಳಿಯುತ್ತ ಹೋದಂತೆ ನಮ್ಮದೇ ಆದ ವಿಶಿಷ್ಟ ಮಾರಾಟದ ಸ್ಟ್ರಾಟರ್ಜಿ ತಯಾರಿಸಲು ಸಾಧ್ಯವಾಗುತ್ತದೆ. ನಮ್ಮ ಪ್ರತಿಸ್ಪರ್ಧಿಗಳಿಗಿಂತ ಉತ್ತಮವಾದ, ವಿಭಿನ್ನವಾದ ಪದಾರ್ಥ, ಅನುಭವ ನೀಡಲು ನಮಗೆ ಸಾಧ್ಯವಾಗುತ್ತದೆ.
ಪದಾರ್ಥ ಅಥವಾ ಸೇವೆಯ ಗುಣಮಟ್ಟ ಹೆಚ್ಚಿಸಿಕೊಳ್ಳಲು ಕೂಡ ಸಹಾಯ ಮಾಡುತ್ತದೆ: ಮಾರ್ಕೆಟ್ ಸರ್ವೆಯಲ್ಲಿ ಪದಾರ್ಥದ ಬಗ್ಗೆ ಗ್ರಾಹಕ ನೀಡುವ ಅಭಿಪ್ರಾಯ ಬಹಳ ಮುಖ್ಯವಾಗುತ್ತದೆ. ಪದಾರ್ಥದ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಲು, ತಪ್ಪುಗಳನ್ನು ತಿದ್ದಿಕೊಳ್ಳಲು ಮತ್ತು ಅದನ್ನು ಇನ್ನಷ್ಟು ಗ್ರಾಹಕ ಸ್ನೇಹಿಯನ್ನಾಗಿಸಲು ಇದು ಸಹಕಾರಿಯಾಗಲಿದೆ. ಮಾರುಕಟ್ಟೆಗೆ ಬರಲಿರುವ ಹೊಸ ಪದಾರ್ಥಗಳ ಬಗ್ಗೆ ಕೂಡ ಸರ್ವೆಯಲ್ಲಿ ತಿಳಿಯುವುದರಿಂದ ನಮ್ಮ ಪದಾರ್ಥದಲ್ಲಿ ನೂನ್ಯತೆ ಇಲ್ಲದಿದ್ದಾಗ ಕೂಡ ಅದನ್ನು ಇನ್ನಷ್ಟು ಮೇಲ್ಮಟ್ಟಕ್ಕೆ, ಹೊಸದಾಗಿ ಬರಲಿರುವ ಪದಾರ್ಥದ ಮಟ್ಟಕ್ಕೆ ಏರಿಸಲು ಕೂಡ ಇದು ಸಹಕಾರಿಯಾಗಲಿದೆ.
ಕೊನೆಮಾತು: ಭಾರತ ಬಹಳ ಅನನ್ಯವಾದದ್ದು. ಜಗತ್ತಿನ ಬೇರೆಕಡೆಯಲ್ಲಿ ಗೆದ್ದ ಸೇವೆ ಮತ್ತು ಸರಕುಗಳು ಇಲ್ಲಿ ಗೆಲ್ಲತ್ತವೆ ಎಂದು ಹೇಳಲುಬಾರದು. ಇಲ್ಲಿನ ಮಾರುಕಟ್ಟೆಗೆ ತಕ್ಕಂತೆ ಪದಾರ್ಥಗಳನ್ನು ಬಿಡದಿದ್ದರೆ ಏನಾಗುತ್ತದೆ ಎನ್ನುವುದಕ್ಕೆ ನಮ್ಮ ಕಾರ್ನ್ ಫ್ಲೆಕ್ಸ್ ಉದಾಹರಣೆಯಿದೆ. ನಾವು ಭಾರತೀಯರು ಹಾಲನ್ನು ಬಿಸಿ ಮಾಡಿ ಬಳಸುತ್ತೇವೆ. ತಣ್ಣನೆಯ ಹಾಲು ಬಳಕೆ ನಮ್ಮಲ್ಲಿ ಇಲ್ಲವೆನ್ನುವಷ್ಟು ನಗಣ್ಯ. ಕಾರ್ನ್ ಫ್ಲೆಕ್ಸ್ ಸೋಲಿಗೆ ಇದೊಂದು ಕಾರಣ ಸಾಕಾಯ್ತು. ಪ್ರದೇಶದಿಂದ ಪ್ರದೇಶಕ್ಕೆ ನಮ್ಮಲ್ಲಿ ಭಿನ್ನತೆಯಿದೆ. ಹೀಗಾಗಿ ಒಂದು ರಾಜ್ಯದಲ್ಲಿ ಗೆದ್ದದ್ದು ಇನ್ನೊಂದು ರಾಜ್ಯದಲ್ಲಿ ಗೆಲ್ಲುತ್ತದೆ ಎನ್ನುವುದಕ್ಕೆ ಆಗುವುದಿಲ್ಲ. ಪ್ರತಿ ಪ್ರದೇಶದ ಮಾರ್ಕೆಟ್ ಸರ್ವೆ ಬಹಳ ಅಗತ್ಯ. ಈ ರೀತಿಯ ಸಿದ್ಧತೆಯಿಲ್ಲದೆ ಮಾಡುವ ಯಾವ ಉಡಿಮೆಗಳೂ ಇಂದಿನ ದಿನದಲ್ಲಿ ಗೆಲ್ಲುವ ಸಾಧ್ಯತೆ ಬಹಳ ಕಡಿಮೆ.
Advertisement