ಇರಾನ್-ಇಸ್ರೇಲ್ ಯುದ್ಧ ಕಂಡಷ್ಟು ಸರಳವಿಲ್ಲ! (ಹಣಕ್ಲಾಸು)

ಅಮೇರಿಕಾ ಅದೇಕೆ ಇಸ್ರೇಲ್ ಬಗ್ಗೆ ಪ್ರೀತಿಯನ್ನು ಹೊಂದಿದೆ? ಎನ್ನುವ ಪ್ರಶ್ನೆಯ ಆಳಕ್ಕೆ ಇಳಿದರೆ ಸಿಕ್ಕುವ ಉತ್ತರ. ಹಣದ ಮೇಲಿನ, ಉದ್ದಿಮೆಗಳ ಮೇಲಿನ ಯಹೂದಿಗಳ ಪ್ರಾಬಲ್ಯ. (ಹಣಕ್ಲಾಸು-468)
Iran Supreme leader- Donald Trump
ಇರಾನ್ ಸರ್ವಾಧಿಕಾರಿ ಖಮೇನಿ- ಡೊನಾಲ್ಡ್ ಟ್ರಂಪ್online desk
Updated on

ಇಸ್ರೇಲ್ ಮತ್ತು ಇರಾನಿನ ನಡುವಿನ ಯುದ್ಧಕ್ಕೆ ಅಲ್ಪವಿರಾಮ ಬಿದ್ದಿದೆ. ಇದು ಮತ್ತೆ ಯಾವಾಗ ಬೇಕಾದರೂ ಭುಗಿಲೇಳುವ ಸಾಧ್ಯತೆಯಿದೆ. ಈ ಬಾರಿ ಇರಾನ್ ಹಾಕಿದ ಒಂದಷ್ಟು ಸಿಡಿಮದ್ದುಗಳು ಇಸ್ರೇಲ್ ದೇಶಕ್ಕೂ ಒಂದಷ್ಟು ನಷ್ಟ ಉಂಟು ಮಾಡಿದ್ದು ಸುಳ್ಳಲ್ಲ. ಹೀಗೆ ಇಸ್ರೇಲ್ ಮೇಲೆ ಯುದ್ಧ ಆದಾಗೆಲ್ಲಾ ಅಮೇರಿಕಾ ಎನ್ನುವ ದೈತ್ಯ ರಾಷ್ಟ್ರ ಅದರ ಸಹಾಯಕ್ಕೆ ಧಾವಿಸಿ ಬರುತ್ತದೆ. ಅಮೇರಿಕಾ ಅಖಾಡಕ್ಕೆ ಪ್ರವೇಶಿಸಿ ಇರಾನ್ ಮೇಲೆ ತನ್ನಲ್ಲಿದ್ದ ರಹಸ್ಯ ಮಿಸೈಲ್ ಹಾಕಿದ ಕಾರಣ ಇರಾನ್ ತೆಪ್ಪಗಾಗುತ್ತದೆ.

ನೂರಾರು ಮೀಟರ್ ಕಾಂಕ್ರೀಟ್ ನೆಲವನ್ನು ಕೂಡ ಕೊರೆದು ಹೊಳ ಹೊಕ್ಕುವ ಸಾಮರ್ಥ್ಯವಿರುವ ವಿಶೇಷ ಮಿಸೈಲ್ ಒಂದನ್ನು ಅಮೇರಿಕಾ ಜಗತ್ತಿಗೆ ಪರಿಚಯಿಸಿ ಕೊಟ್ಟಿತು. ಅಮೇರಿಕಾ ಯಾವಾಗಲೂ ತನ್ನ ಲಾಭವನ್ನು ಮಾತ್ರ ನೋಡುವ ದೇಶ. ಅದು ಜಗತ್ತಿನ ಕಣ್ಣಿಗೆ ಕಾಣುವಂತೆ ದ್ವಿಮುಖ ನೀತಿಯನ್ನು ಅಂದರೆ ಡಬಲ್ ಸ್ಟ್ಯಾಂಡರ್ಡ್ ಅನುಕರಿಸುತ್ತದೆ. ಇಂತಹ ಅಮೇರಿಕಾ ಅದೇಕೆ ಇಸ್ರೇಲ್ ಬಗ್ಗೆ ಪ್ರೀತಿಯನ್ನು ಹೊಂದಿದೆ? ಎನ್ನುವ ಪ್ರಶ್ನೆಯ ಆಳಕ್ಕೆ ಇಳಿದರೆ ಸಿಕ್ಕುವ ಉತ್ತರ. ಹಣದ ಮೇಲಿನ, ಉದ್ದಿಮೆಗಳ ಮೇಲಿನ ಯಹೂದಿಗಳ ಪ್ರಾಬಲ್ಯ. ಜಗತ್ತಿನ ತಂತ್ರಜ್ಞಾನ, ವಿಜ್ಞಾನ, ಎಕಾನಮಿ, ಬ್ಯಾಂಕಿಂಗ್ ಮತ್ತು ಮಾಧ್ಯಮ ಕ್ಷೇತ್ರಗಳ ಮೇಲೆ ಯಹೂದಿಗಳ ಹಿಡಿತ ಅಷ್ಟು ದೊಡ್ಡದು.

ಜಗತ್ತಿನಲ್ಲಿ ಒಟ್ಟಾರೆ ಮೂರುವರೆ ಸಾವಿರ ಬಿಲಿಯನೇರ್ ಗಳಿದ್ದಾರೆ. ಅದರಲ್ಲಿ 276 ಜನ ಯಹೂದಿಗಳು. ಈ 276 ಜನರಲ್ಲಿ 163 ಜನ ಅಮೇರಿಕಾ ದೇಶದಲ್ಲಿ ವಾಸಿಸುತ್ತಿದ್ದಾರೆ. ಇವರು ಸಾಮಾನ್ಯ ಬಿಲಿಯನೇರ್ಗಳಲ್ಲ. ಇವರು ಬಿಲಿಯನೇರ್ಗಳಿಗೆ ಬಿಲಿಯನೇರ್ಗಳು. ಇವರು ಹಿಡಿದಿರುವ ಉದ್ದಿಮೆಗಳ ತಾಕತ್ತು ಆ ಮಟ್ಟದ್ದು. ಅವರಿಗೆ ಜನರಲ್ಲಿ ಬೇಕಾದ ನರೇಟಿವ್ ಸೃಷ್ಟಿಸುವ ಮತ್ತು ಅದನ್ನು ಕ್ಷಣ ಮಾತ್ರದಲ್ಲಿ ಹರಡುವ ಶಕ್ತಿಯನ್ನು ಹೊಂದಿದ್ದಾರೆ.

ಮಾಧ್ಯಮ ಅದು ಪ್ರಿಂಟ್ ಇರಬಹುದು ಅಥವಾ ದ್ರಶ್ಯ, ಅಮೇರಿಕಾ ಮತ್ತು ಯೂರೋಪು ಒಳಗೊಂಡಂತೆ ಬಹುತೇಕ ದೇಶಗಳಲ್ಲಿ ಒಂದಲ್ಲ ಒಂದು ಮಾಧ್ಯಮ ಸಂಸ್ಥೆಯಲ್ಲಿ ಇವರ ಹೂಡಿಕೆ ಇದ್ದೆ ಇರುತ್ತದೆ. ಅವರೆಂದಿಗೂ ನಾವು ಶಕ್ತಿಶಾಲಿ ಎಂದು ತೋರಿಸಿಕೊಳ್ಳಲು ಬರುವುದಿಲ್ಲ. ಅವರು ಯಾವ ಮಾಧ್ಯಮದಲ್ಲೂ ತಮ್ಮ ಮುಖವನ್ನು ತೋರಿಸಲು ಬಯಸುವುದಿಲ್ಲ. ತಮ್ಮ ಸ್ವಸುಖ ಅಥವಾ ಸೆಲ್ಫ್ ಇಂಟರೆಸ್ಟ್ ಗೆ ತೊಂದರೆಯಾದಾಗ ಮಾತ್ರ ಕಾರ್ಯೋನ್ಮುಖರಾಗುತ್ತಾರೆ. ಇಲ್ಲವಾದಲ್ಲಿ ಅವರು ಇದ್ದಾರೆ ಎನ್ನುವುದು ಕೂಡ ಹೊರ ಜಗತ್ತಿಗೆ ತಿಳಿಯುವುದಿಲ್ಲ. ರೋತ್ಸ್ ಚೈಲ್ಡ್ ಎನ್ನುವ ಸಂಸ್ಥೆ ಮತ್ತು ಈ ಕುಟುಂಬದ ಸದಸ್ಯರು ಎಂದಿಗೂ ಜಗತ್ತಿನ ಕಣ್ಣಿಗೆ ಬೀಳುವುದಿಲ್ಲ. ಆದರೆ ಜಗತ್ತಿನ ಬಹುತೇಕ ಆಗು ಹೋಗುಗಳನ್ನು ಅವರು ಕಣ್ಣಿಗೆ ಕಾಣದಂತೆ ಕುಳಿತು ನಿಯಂತ್ರಿಸುತ್ತಾರೆ. ಜಗತ್ತಿನ ಬಹುತೇಕ ಬ್ಯಾಂಕುಗಳಲ್ಲಿ ಇವರ ಹೂಡಿಕೆಯಿದೆ. ಇವರಿಗೆ ತೊಟ್ಟಿಲು ತೂಗುವುದು ಮತ್ತು ಮಗುವನ್ನು ಚಿವುಟುವುದು ಚೆನ್ನಾಗಿ ಗೊತ್ತಿದೆ. ಅಮೆರಿಕಾದಲ್ಲಿನ ಅಧ್ಯಕ್ಷನನ್ನು ಬದಲಿಸುವ ತಾಕತ್ತು ಇವರಿಗಿದೆ. ಲಾಬಿ ಮಾಡುವ ತಾಕತ್ತು ಆ ಮಟ್ಟಕ್ಕೆ ಅವರು ಬೆಳೆಸಿಕೊಂಡಿದ್ದಾರೆ. ಚುನಾವಣೆ ಸಮಯದಲ್ಲಿ ರಾಜಕಾರಿಣಿಗಳಿಗೆ ಇವರು ಫಂಡ್ ಮಾಡುತ್ತಾರೆ. ಬದಲಿಗೆ ಸಮಯ ಬಂದಾಗ ಇವರ ಅಣತಿಯಂತೆ , ಇವರ ಲಾಭಕ್ಕೆ ತಕ್ಕಂತೆ ಅವರು ನಡೆಯುತ್ತಾರೆ.

Iran Supreme leader- Donald Trump
ಉದ್ದಿಮೆ ಶುರು ಮಾಡುವ ಮುನ್ನ ಮಾರ್ಕೆಟ್ ಸರ್ವೆ ಬಹಳ ಮುಖ್ಯ! (ಹಣಕ್ಲಾಸು)

ಇದು ನೂರಾರು ವರ್ಷದಿಂದ ನಡೆದುಕೊಂಡು ಬರುತ್ತಿದೆ. ಭೂಪಟದಲ್ಲಿ ಇರದ ಇಸ್ರೇಲ್ ಇಂದು ಈ ಮಟ್ಟಿಗೆ ಪ್ರಸಿದ್ಧ ಮತ್ತು ಬಲಶಾಲಿಯಾಗಿರುವುದು ಇದೆ ಕಾರಣದಿಂದ, ಅವರ ಮೇಲೆ ಸಣ್ಣ ದಾಳಿಯಾದರೂ ಸಾಕು ಅಮೇರಿಕಾ ಸಹಾಯಕ್ಕೆ ಧಾವಿಸುತ್ತದೆ ಎನ್ನುವುದು ಅವರಿಗೆ ಚೆನ್ನಾಗಿ ಗೊತ್ತಿದೆ. ಇದರಲ್ಲೂ ಅಮೇರಿಕಾ ತನ್ನ ಲಾಭವನ್ನು ಹುಡುಕಿ ಕೊಳ್ಳುತ್ತದೆ. ಇರಾನ್ -ಇಸ್ರೇಲ್ ಯುದ್ಧದಲ್ಲಿ ಅಮೇರಿಕಾ ಕುಸಿಯುತ್ತಿರುವ ತನ್ನ ವರ್ಚಸ್ಸು ಹೆಚ್ಚಿಸಿಕೊಳ್ಳುವ ಕೆಲಸವನ್ನು ಮಾಡಿದೆ. ಇರಾನ್ ಮೇಲೆ ದಾಳಿ ಮಾಡಿದ್ದು ಪಾಕಿಸ್ತಾನದ ನೆಲವನ್ನು ಬಳಸಿಕೊಂಡು, ಸಿರಿಯಾದ ನೆಲವನ್ನು ಬಳಸಿಕೊಂಡು ಎನ್ನುವುದನ್ನು ಮರೆಯಬಾರದು. ಸೌತ್ ಏಷ್ಯಾದಲ್ಲಿ ಚೀನಾ ಪ್ರಬಲವಾಗುವುದು ಅಮೆರಿಕಕ್ಕೆ ಬೇಕಿಲ್ಲ. ಹೀಗಾಗಿ ಅದರ ಪರಮ ಮಿತ್ರ ಪಾಕಿಸ್ತಾನವನ್ನು ಕ್ಷಣದಲ್ಲಿ ಖರೀದಿ ಮಾಡಿ ಬಿಟ್ಟಿತು. ಹೌದು ಚೀನಾ ವರ್ಷಗಳಿಂದ ಪಾಕಿಸ್ತಾನದ ಮೇಲೆ ತನ್ನ ಹಿಡಿತವನ್ನು ನಿಧಾನಕ್ಕೆ ಹೆಚ್ಚಿಸಿಕೊಳ್ಳುತ್ತಾ ಬಂದಿತ್ತು.

ಇವತ್ತಿಗೆ ಅದು ಅಮೆರಿಕಾದ ಪಾಲಾಗಿದೆ. ಇನ್ನೊಂದು ಫೇಲ್ಡ್ ನೇಶನ್ ಸಿರಿಯಾದ ನೆಲವನ್ನು ಕೂಡ ಅಮೇರಿಕಾ ತನ್ನದಾಗಿಸಿಕೊಂಡಿದೆ. ಹೀಗಾಗಿ ನಾಳೆ ಯುದ್ಧವಾದರೆ ಅಮೇರಿಕಾ ಈ ಎರಡು ನೆಲೆಗಳಿಂದ ಭಾರತ ಅಥವಾ ಚೀನಾ ಮೇಲೆ ದಾಳಿ ಮಾಡಲು ಸುಲಭವಾಗುತ್ತದೆ. ಅಮೇರಿಕಾ ಜಗತ್ತಿನ ಇಂದಿನ ಇನ್ನೆರೆಡು ಪ್ರಬಲ ಶಕ್ತಿಗಳಾದ ಭಾರತ ಮತ್ತು ಚೀನಾದಿಂದ ಬಹಳ ದೂರವಿದೆ. ಹೀಗಾಗಿ ನಾವು ಅವರ ಮೇಲೆ ಏರ್ ಸ್ಟ್ರೈಕ್ ಮಾಡುವುದು ಸಾಧ್ಯವಿಲ್ಲ. ಇದು ಅಮೆರಿಕಕ್ಕೆ ಒಂದು ರೀತಿಯ ವರದಾನ. ಹಾಗೆ ಅವರು ಕೂಡ ಏರ್ ಸ್ಟ್ರೈಕ್ ಮಾಡುವುದು ಸುಲಭವಲ್ಲ. ಹೀಗಾಗಿ ಅವರು ಸಿರಿಯಾ ಮತ್ತು ಪಾಕಿಸ್ತಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ಇರಾನ್ ಮೇಲೆ ಬಾಂಬ್ ಹಾಕುವುದರ ಮೂಲಕ ತನ್ನ ಇರುವಿಕೆ ಸಾಬೀತು ಪಡಿಸಿದೆ. ಜೊತೆಯಲ್ಲಿ ನನ್ನನ್ನು ಆಟದಿಂದ ಅಷ್ಟು ಸುಲಭವಾಗಿ ಹೊರಹಾಕಲು ಸಾಧ್ಯವಿಲ್ಲ ಎನ್ನುವ ಅಂಶವನ್ನು ಕೂಡ ಚೀನಾಗೆ ಸಾರಿದೆ.

ಅಮೆರಿಕಕ್ಕೆ ಯುದ್ಧಕ್ಕೆ ಬರುವಾಗಲೇ ಇರಾನ್ ಸಂಧಾನಕ್ಕೆ ಬರದಿದ್ದರೂ ತನಗೆ ಲಾಭವಾಗುತ್ತದೆ ಎನ್ನುವುದನ್ನು ಕಂಡುಕೊಂಡಿದೆ. ಗಮನಿಸಿ ಇರಾನ್ ಯುದ್ಧ ಬಿಗಡಾಯಿಸಿದರೆ ಸೊರಗುವುದು ಯೂರೋಪ್. ಏಕೆಂದರೆ ಯೂರೋಪು ಇರಾನ್ನಿಂದ ಬಹಳ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಹೀಗಾಗಿ ಯೂರೋಪು ವಿಧಿಯಿಲ್ಲದೇ ತೈಲಕ್ಕಾಗಿ ಅಮೆರಿಕಾವನ್ನು ಅವಲಂಬಿಸಬೇಕಾಗುತ್ತದೆ. ಯೂರೋಪು ಅಮೇರಿಕಾ ಹೇಳಿದ ಬೆಲೆಗೆ ತೈಲ ಕೊಳ್ಳಬೇಕಾಗುತ್ತದೆ. ಜೊತೆಗೆ ಎರಡು ಮೂರು ತಿಂಗಳಲ್ಲಿ ಇರಾನ್ ಆರ್ಥಿಕವಾಗಿ ಕುಸಿಯುತ್ತದೆ. ಭಾರತ ಇರಾನಿನ ಮೂಲಕ ತೈಲವನ್ನು ತರಿಸಿಕೊಳ್ಳುತ್ತಿಲ್ಲ. ನಮ್ಮ ಬಳಕೆಯ ಸರಿಸುಮಾರು 80 ಪ್ರತಿಶತ ತೈಲವನ್ನು ನಾವು ರಷ್ಯಾದಿಂದ ಕೊಳ್ಳುತ್ತಿದ್ದೇವೆ. ಹೀಗಾಗಿ ಭಾರತಕ್ಕೆ ಇದರ ಪರಿಣಾಮ ಅಷ್ಟಾಗಿ ಆಗುವುದಿಲ್ಲ. ಚೀನಾ ಇರಾನಿನ ತೈಲವನ್ನು ಹೆಚ್ಚಾಗಿ ಕೊಳ್ಳುತ್ತಿದೆ. ಹೀಗಾಗಿ ಇದು ಚೀನಾದ ಮೇಲೂ ಪ್ರಭಾವ ಬೀರುತ್ತಿತ್ತು. ಇವೆಲ್ಲವುಗಳನ್ನು ಗಮನಿಸಿ ನೋಡಿದಾಗ ಇಸ್ರೇಲ್ -ಇರಾನ್ ಯುದ್ಧ ನಾವೆಂದುಕೊಂಡಷ್ಟು ಸರಳವಲ್ಲ. ಅದರ ಹಿಂದೆ ಬಹಳಷ್ಟು ರಣನೀತಿಗಳಿವೆ. ಜಾಗತಿಕ ಚದುರಂಗದಾಟದ ಮೇಲಾಟದಲ್ಲಿ ಪೊಸಿಷನಿಂಗ್ ಬಹಳ ಮುಖ್ಯವಾಗುತ್ತದೆ. ಅಮೇರಿಕಾ ಇಂದಿಗೂ ನಾನೇ ಇಲ್ಲಿಯ ಸುಪ್ರೀಮ್ ಬಾಸ್ ಎನ್ನವುದನ್ನು ಹೇಳುವ ಪ್ರಯತ್ನದ್ದಲ್ಲಿದೆ.

ಭಾರತ , ಚೀನಾ ಮತ್ತು ರಷ್ಯಾ ಸದ್ದಿಲ್ಲದೇ ಡಾಲರಿನ ಶಕ್ತಿಯನ್ನು ಮುರಿಯಲು ಅಂದರೆ ಡಿ ಡಾಲರೈಸೇಷನ್ ಗೆ ಚಾಲ್ತಿ ನೀಡಿದ್ದವು. ಅದು ಬಹಳಷ್ಟು ವೇಗವನ್ನು ಕೂಡ ಪಡೆದುಕೊಂಡಿತ್ತು. ಡಾಲರ್ ಜಾಗತಿಕ ಹಣವಾಗಿ ಉಳಿಯದೆ ಹೋದರೆ ಅಮೆರಿಕಾದ ಅರ್ಧ ಬಲ ಕುಸಿದಂತೆ ಎನ್ನುವುದು ಸ್ವತಃ ಅಮೆರಿಕಕ್ಕೂ ಗೊತ್ತಿದೆ. ಹೀಗಾಗಿ ಟ್ರಂಪ್ ಸೋದರ ಮಾವ ಮತ್ತು ಆತನ ಇಬ್ಬರು ಮಕ್ಕಳು ಸ್ಟೇಬಲ್ ಕಾಯಿನ್ ತಂದಿದ್ದಾರೆ. ಅದನ್ನು ಜಾಗತಿಕ ಹಣವನ್ನಾಗಿ ತರುವ ಕನಸು ಕಾಣುತ್ತಿದ್ದಾರೆ. ಹೊಸ ಹಣಕಾಸಿನ ಆಟಕ್ಕೆ ಸಿದ್ಧವಿಲ್ಲದ ನೂರಾರು ದೇಶಗಳು ಅಮೆರಿಕಾದ ಈ ಹೊಸ ದಾಳಕ್ಕೆ ಶರಣಾಗದೆ ಬೇರೆ ದಾರಿಯಿಲ್ಲ. ಅವುಗಳು ಅಮೆರಿಕಕ್ಕೆ ಸುಲಭ ತುತ್ತು.

Iran Supreme leader- Donald Trump
ಜಗತ್ತಿನಲ್ಲಿ ಅತ್ಯಂತ ಪ್ರಬಲವಾದ ಕರೆನ್ಸಿ ಯಾವುದು ಗೊತ್ತಾ? (ಹಣಕ್ಲಾಸು)

ಅಮೆರಿಕಾದ ಬಾಸಿಸಂ ಗೆ ಇಂದು ಜಗತ್ತಿನಲ್ಲಿ ಪ್ರಶ್ನೆ ಮಾಡುವ ತಾಕತ್ತು ಹೊಂದಿರುವುದು ಚೀನಾ, ರಷ್ಯಾ, ಯೂರೋಪಿಯನ್ ಯೂನಿಯನ್ ಮತ್ತು ಭಾರತ. ಜಪಾನ್ ಎರಡನೇ ಮಹಾಯುದ್ಧದಲ್ಲಿ ಆದ ನೋವಿನಿಂದ ಹೊರಬಂದಿಲ್ಲ. ಅವರು ಓಪನ್ ಚಾಲೆಂಜ್ ಮಾಡಲು ಎಂದಿಗೂ ಬರುವುದಿಲ್ಲ. ಯೂರೋಪಿಯನ್ ಯೂನಿಯನ್ ನ ಇಂಜಿನ್ನಂತಿರುವ ಜರ್ಮನಿ ಮತ್ತು ಫ್ರಾನ್ಸ್ ಆರ್ಥಿಕ ಹಿಂಜರಿತವನ್ನು ಅನುಭವಿಸುತ್ತಿವೆ. ಹೀಗಾಗಿ ಈ ಒಕ್ಕೊಟ ಸಹ ಅಮೆರಿಕಕ್ಕೆ ಸೆಡ್ಡು ಹೊಡೆಯುವ ಸಾಧ್ಯತೆ ಕಡಿಮೆ. ರಷ್ಯಾ, ಚೀನಾ ಮತ್ತು ಭಾರತವನ್ನು ಸುಮ್ಮನಾಗಿಸಿಬಿಟ್ಟರೆ ಸಾಕು ಮುಂದಿನ ಎರಡು ದಶಕ ಮತ್ತೆ ರಾಜನಾಗಿರಬಹುದು ಎನ್ನುವ ಲೆಕ್ಕಾಚಾರ ಅಮೆರಿಕಾದ್ದು! ಪಾಕಿಸ್ತಾನವನ್ನು ಬಳಸಿಕೊಂಡು ಸದಾ ಭಾರತವನ್ನು ಬ್ಯುಸಿಯಾಗಿಡುವುದು ಅಮೆರಿಕೆಯ ರಣತಂತ್ರ. ಅವರಿಗೆ ಭಾರತ ಕುಸಿಯುವುದು ಬೇಕಿಲ್ಲ. ಭಾರತ ಅವರ ಪದಾರ್ಥಗಳಿಗೆ ಮಾರುಕಟ್ಟೆಯಾಗಿ ಬದಲಾದರೆ ಅಷ್ಟು ಸಾಕು. ಹೀಗಾಗಿ ಒಂದು ಹಂತಕ್ಕೆ ಅವರು ಭಾರತವನ್ನು ಕೂಡ ಕಟ್ಟಿಹಾಕುತ್ತಾರೆ. ನಾವು ಕೂಡ ಅಭಿವೃದ್ಧಿಯ ಹಿಂದೆ ಓಡುವುದು ಬಿಟ್ಟು ಯುದ್ಧಕ್ಕೆ ಸಿದ್ದರಿಲ್ಲ . ಇಂತಹ ಸನ್ನಿವೇಶದಲ್ಲಿ ಅಮೇರಿಕಾ ಮುಂದೆ ಇರುವುದು ಕೇವಲ ರಷ್ಯಾ ಮತ್ತು ಚೀನಾ.

ಕೊನೆಮಾತು: ಹಣ, ಅಧಿಕಾರ ಮತ್ತು ಜಗತ್ತಿನ ಮೇಲಿನ ನಿಯಂತ್ರಣಕ್ಕೆ ಇನ್ನಷ್ಟು ಹೊಡೆದಾಟಗಳಾಗುವುದು ತಪ್ಪಿಸಲಾಗುವುದಿಲ್ಲ. ಅದು ಸಣ್ಣಮಟ್ಟದಲ್ಲಿದ್ದು, ಒಂದಷ್ಟು ದಿನದಲ್ಲಿ ಮುಗಿಯುವಂತಾದರೆ ಪರವಾಗಿಲ್ಲ. ರಷ್ಯಾ, ಚೀನಾ ಮತ್ತು ಅಮೇರಿಕಾ ಯುದ್ಧಕ್ಕೆ ಇಳಿದರೆ ಆಗ ಭಾರತವೂ ಒಂದಲ್ಲ ಒಂದು ಕಡೆ ಸೇರಿಕೊಳ್ಳಬೇಕು. ನಿನ್ನೆಯ ತನಕ ಚೀನಾದ ಜೊತೆಯಲ್ಲಿದ್ದ ಪಾಕಿಸ್ತಾನ, ಅಮೇರಿಕಾ ಜೊತೆ ಹೋಗುತ್ತದೆ.

ನಮ್ಮ ಶತ್ರು ಎಂದುಕೊಂಡಿರುವ ಚೀನಾದ ಜೊತೆ ನಾವು ಕೈಜೋಡಿಸದೆ ಬೇರೆ ದಾರಿಯಿರುವುದಿಲ್ಲ. ನಮ್ಮ ಮಿತ್ರ ಎನ್ನಿಸಿಕೊಂಡಿರುವ ಇಸ್ರೇಲ್ ಕೂಡ ಅಮೇರಿಕಾ ಜೊತೆಗೆ ಹೋಗುತ್ತದೆ. ಇಸ್ರೇಲ್ ದೇಶವನ್ನು ಅತಿಯಾಗಿ ದ್ವೇಷಿಸುವ ಪಾಕಿಸ್ತಾನ ಇಸ್ರೇಲ್ ಇರುವ ಕಡೆ ಜೈ ಜೋಡಿಸುತ್ತದೆ. ಜಗತ್ತಿನಲ್ಲಿರುವ ೫೬ ಮುಸ್ಲಿಂ ದೇಶಗಳಲ್ಲಿ ಬಹುಪಾಲು ಅಮೇರಿಕಾ ಜೊತೆಗೆ ನಿಲ್ಲುತ್ತವೆ. ಇಷ್ಟೆಲ್ಲಾ ಆಗುವುದು ಹಣದ ಮಹಿಮೆಯಿಂದ, ಜಗತ್ತು ಪೂಜಿಸುವುದು ಶಕ್ತಿಯನ್ನು ಎನ್ನುವುದನ್ನು ಮರೆಯದಿರೋಣ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com