ಕ್ರೂರ ತಿರುವು: ಬಾಂಬಿಗಿಂತಲೂ ಕದನ ವಿರಾಮಕ್ಕೆ ಹೆದರುತ್ತಿರುವ ಇರಾನಿಯನ್ನರು! (ಜಾಗತಿಕ ಜಗಲಿ)

ಇಸ್ರೇಲ್ ಜೊತೆಗಿನ 12 ದಿನಗಳ ಗಂಭೀರ ಕದನದ ಬಳಿಕ, ಇರಾನ್ ಸರ್ಕಾರ ಈಗ ದೇಶದೊಳಗೆ ತನ್ನ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಆರಂಭಿಸಿದೆ.
ಕ್ರೂರ ತಿರುವು: ಬಾಂಬಿಗಿಂತಲೂ ಕದನ ವಿರಾಮಕ್ಕೆ ಹೆದರುತ್ತಿರುವ ಇರಾನಿಯನ್ನರು! (ಜಾಗತಿಕ ಜಗಲಿ)
Updated on

ಇರಾನ್ ಮತ್ತು ಇಸ್ರೇಲ್‌ಗಳ ನಡುವಿನ ಕದನವೇನೋ ಸದ್ಯಕ್ಕೆ ನಿಲುಗಡೆಗೆ ಬಂದಿರಬಹುದು. ಆದರೆ, ಇರಾನಿನ ಒಳಗೆ, ಸರ್ಕಾರ ಹೊಸದೊಂದು ರೀತಿಯ ಯುದ್ಧವನ್ನು ಆರಂಭಿಸಿದೆ. ಆದರೆ, ಈ ಬಾರಿಯ ಯುದ್ಧ ಅದರ ಸ್ವಂತ ಜನರ ವಿರುದ್ಧ ನಡೆಯುತ್ತಿದೆ. 'ರಾಷ್ಟ್ರೀಯ ಭದ್ರತೆ' ಎಂಬ ನೆಪವನ್ನು ನೀಡಿ, ಇರಾನ್ ಸರ್ಕಾರ ತನ್ನ ನಾಗರಿಕರ ಮೇಲೆ ಹೆಚ್ಚು ಹೆಚ್ಚು ಮುರಿದುಬೀಳುತ್ತಿದೆ.

ಇರಾನಿನಲ್ಲಿ ಏನಾಯಿತು?

ಇಸ್ರೇಲ್ ಜೊತೆಗಿನ 12 ದಿನಗಳ ಗಂಭೀರ ಕದನದ ಬಳಿಕ, ಇರಾನ್ ಸರ್ಕಾರ ಈಗ ದೇಶದೊಳಗೆ ತನ್ನ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಆರಂಭಿಸಿದೆ. ಸರ್ಕಾರ ಈಗಾಗಲೇ ನೂರಾರು ಜನರನ್ನು ಬಂಧಿಸಿದ್ದು, ಅವರ ವಿರುದ್ಧ ಬೇಹುಗಾರಿಕೆ, ಅವರ ಮಾತುಗಳು ಅಥವಾ ಕ್ರಮಗಳಲ್ಲಿ ಇಸ್ರೇಲ್‌ಗೆ ಬೆಂಬಲ ನೀಡಿರುವ ಆರೋಪ ಹೊರಿಸಿದೆ.

ಈ ವಾರ, ಇರಾನಿನ ಭದ್ರತಾ ಪಡೆಗಳು ದೇಶಾದ್ಯಂತ 700ಕ್ಕೂ ಹೆಚ್ಚು ನಾಗರಿಕರನ್ನು ಬಂಧಿಸಿರುವುದಾಗಿ ಹೇಳಿವೆ. ಸರ್ಕಾರ ಈಗ ಹೆಚ್ಚುತ್ತಿರುವ ಸಾರ್ವಜನಿಕರ ಆಕ್ರೋಶವನ್ನು ತಗ್ಗಿಸಲು ಪ್ರಯತ್ನ ನಡೆಸುತ್ತಿದ್ದು, ಬಹಳಷ್ಟು ನಾಗರಿಕರು ಇರಾನ್ ಸರ್ಕಾರ ದೇಶದೊಳಗೆ ಬಂದು ಇಸ್ರೇಲ್ ನಡೆಸಿದ ರಹಸ್ಯ ಕಾರ್ಯಾಚರಣೆಗಳನ್ನು ತಡೆಯಲು ವಿಫಲವಾಯಿತು ಎಂದು ಭಾವನೆ ಹೊಂದಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಇಸ್ರೇಲ್‌ ಇಂತಹ ಪ್ರಯತ್ನಗಳನ್ನು ಇರಾನ್ ನೆಲದಲ್ಲಿ ನಡೆಸಿದೆ ಎನ್ನಲಾಗಿದ್ದು, ಅವು ಇತ್ತೀಚಿನ ಯುದ್ಧದಲ್ಲಿ ಇಸ್ರೇಲ್‌ಗೆ ಸಾಕಷ್ಟು ನೆರವಾಗಿವೆ. ಅದರಲ್ಲೂ ಪ್ರಮುಖ ಇರಾನಿಯನ್ ವ್ಯಕ್ತಿಗಳನ್ನು ಸಂಹರಿಸಲು ಇದು ಸಹಾಯಕವಾಗಿದೆ.

ಅಧಿಕೃತ ವರದಿಗಳ ಪ್ರಕಾರ, ಈ ಯುದ್ಧದಲ್ಲಿ ಕನಿಷ್ಠ 39 ಉನ್ನತ ಮಿಲಿಟರಿ ಅಧಿಕಾರಿಗಳು ಮತ್ತು 14 ಪರಮಾಣು ವಿಜ್ಞಾನಿಗಳು ಸಾವಿಗೀಡಾಗಿದ್ದಾರೆ. ಇಸ್ರೇಲ್ ಇಷ್ಟೊಂದು ಯೋಜಿತವಾಗಿ, ಜಾಗರೂಕವಾಗಿ ದಾಳಿ ನಡೆಸಲು ಸಾಧ್ಯವಾಗಿರುವುದು ಇರಾನ್ ಗುಪ್ತಚರ ವ್ಯವಸ್ಥೆಯಲ್ಲಿನ ದೌರ್ಬಲ್ಯವನ್ನು ಪ್ರದರ್ಶಿಸಿದೆ.

ಜೂನ್ 24, ಮಂಗಳವಾರ, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದ್ದಕ್ಕಿದ್ದಂತೆ ಕದನ ವಿರಾಮ ಘೋಷಿಸಿದ ಬಳಿಕ ಈ ಯುದ್ಧ ನಿಲುಗಡೆಗೆ ಬಂತು. ಆದರೆ, ಆ ಬಳಿಕ ಇರಾನ್ ದೇಶದೊಳಗೆ ತನ್ನ ಕಠಿಣ ಕ್ರಮಗಳನ್ನು ಇನ್ನಷ್ಟು ತೀವ್ರಗೊಳಿಸಿದೆ.

ಇರಾನಿನ ಆಂತರಿಕ ದಾಳಿಗಳು ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ದೊಡ್ಡದಾಗಿದೆ ಎನ್ನಲಾಗಿದೆ. ಸರ್ಕಾರ ತಾನು ಗುಪ್ತಚರರು, ದೇಶದ್ರೋಹಿಗಳು, ಆಡಳಿತದ ಟೀಕಾಕಾರರು ಅಥವಾ ತಪ್ಪು ಮಾಹಿತಿಗಳನ್ನು ಹರಡುವವರು ಎಂದು ಭಾವಿಸಿರುವವರ ವಿರುದ್ಧ ಕ್ರಮ ಕೈಗೊಳ್ಳುತ್ತಿದೆ. ಇದೆಲ್ಲಕ್ಕೂ ದೇಶದ ರಕ್ಷಣೆ ಎಂಬ ನೆಪ ಒಡ್ಡಲಾಗುತ್ತಿದೆ.

ಇರಾನ್ ಅಧಿಕಾರಿಗಳು ಈಗಾಗಲೇ ಬಂಧನಕ್ಕೊಳಗಾಗಿರುವ ನಾಗರಿಕರು ಗುಪ್ತಚರ ಸಂಸ್ಥೆಗಳಿಗೆ, ಅದರಲ್ಲೂ ಇಸ್ರೇಲಿನ ಮೊಸಾದ್‌ಗೆ ನೆರವಾಗಿದ್ದು, ಇರಾನಿನ ಮಿಲಿಟರಿ ಮತ್ತು ಮುಖ್ಯ ಕಟ್ಟಡಗಳಿಗೆ ಸಂಬಂಧಿಸಿದ ಪ್ರಮುಖ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ಇರಾನಿನ ವಿವಿಧ ಭಾಗದಲ್ಲಿ ಬಂಧಿತರಾಗಿರುವ ಹಲವು ಜನರ ಬಳಿ ಸ್ಯಾಟಲೈಟ್ ಫೋನ್‌ಗಳು ಮತ್ತು ಇತರ ಸಂವಹನ ಉಪಕರಣಗಳು ಲಭಿಸಿವೆ ಎನ್ನಲಾಗಿದೆ. ಇನ್ನುಳಿದವರ ಮೇಲೆ ಇರಾನಿನ ರಕ್ಷಣಾ ಉದ್ಯಮದ ಕುರಿತ ಮಾಹಿತಿ ಸೋರಿಕೆ ಮಾಡಿದ ಆರೋಪ ಹೊರಿಸಲಾಗಿದೆ.

ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ಈ ಬಂಧನಗಳನ್ನು ಇಸ್ರೇಲ್, ಅಮೆರಿಕಾ (ಸಿಐಎ), ಮತ್ತು ಯುಕೆ (ಎಂಐ6) ವಿರುದ್ಧ ನಡೆಯುತ್ತಿರುವ ಗುಪ್ತಚರ ಯುದ್ಧದಲ್ಲಿ ಬಹುದೊಡ್ಡ ಗೆಲುವು ಎಂದು ಬಣ್ಣಿಸಿದೆ.

ಈ ಬೆಳವಣಿಗೆ ಏಕೆ ಮುಖ್ಯ?

ಇರಾನಿನ ನಾಗರಿಕರ ವಿರುದ್ಧವೇ ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳ ವೇಗ ಮತ್ತು ಕಠಿಣತೆ ಇರಾನಿಯನ್ನರಲ್ಲಿ ಭಯ ಮತ್ತು ಆಕ್ರೋಶ ಮೂಡಿಸಿದೆ. ಬಹಳಷ್ಟು ನಾಗರಿಕರು ಈ ಕಾರ್ಯಾಚರಣೆ ಗುಪ್ತಚರರ ಬಂಧನಕ್ಕಿಂತಲೂ ಹೆಚ್ಚಾಗಿ, ಗಾಬರಿಗೊಂಡಿರುವ ಸರ್ಕಾರ ತನ್ನ ವೈಫಲ್ಯಕ್ಕೆ ತನ್ನ ಸ್ವಂತ ನಾಗರಿಕರನ್ನು ಹೊಣೆಯಾಗಿಸುವ ಪ್ರಯತ್ನ ಎಂದು ಭಾವಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ಬಳಕೆದಾರರೊಬ್ಬರು ಈ ಕುರಿತು ಬರೆದುಕೊಂಡಿದ್ದಾರೆ. "ಇರಾನ್ ಸರ್ಕಾರ ಇನ್ನೂ ಪತನಗೊಂಡಿಲ್ಲ. ಆದ್ದರಿಂದ ಈ ಕದನ ವಿರಾಮ ಇನ್ನೊಂದು ಹೊಸ ಯುದ್ಧದಂತೆ ಭಾಸವಾಗುತ್ತಿದೆ. ಆದರೆ, ಈ ಬಾರಿಯ ಯುದ್ಧ ಬೇರೆ ದೇಶಗಳ ವಿರುದ್ಧವಲ್ಲ, ಬದಲಿಗೆ ಇರಾನಿನ ಸ್ವಂತ ನಾಗರಿಕರ ವಿರುದ್ಧವಾಗಿದೆ" ಎಂದು ಅವರು ವಿವರಿಸಿದ್ದಾರೆ.

ಯುದ್ಧದ ಸಂದರ್ಭದಲ್ಲಿ ಮತ್ತು ಕದನ ವಿರಾಮ ಜಾರಿಗೊಂಡ ಮೊದಲ ದಿನ ಕನಿಷ್ಠ 6 ಜನರ ಹತ್ಯೆ ಮಾಡಲಾಗಿದೆ. ಈ ನಾಗರಿಕರನ್ನು ಮೊದಲೇ ಬಂಧಿಸಲಾಗಿತ್ತು. ಅವರ ಮರಣದಂಡನೆಯನ್ನು ಕ್ಷಿಪ್ರವಾಗಿ ಜಾರಿಗೊಳಿಸಲಾಯಿತು. ಈ ಮೂಲಕ ಸರ್ಕಾರ ವಿದೇಶೀ ಬೇಹುಗಾರರ ಕುರಿತು ತಾನು ಅತ್ಯಂತ ಕಠಿಣ ನಿಲುವು ಹೊಂದಿರುವುದಾಗಿ ಪ್ರದರ್ಶಿಸುತ್ತಿದೆ.

ಇದರಿಂದಾಗಿ ಅಮಾಯಕ ನಾಗರಿಕರನ್ನೂ ಇರಾನ್ ಸರ್ಕಾರ ಕ್ಷಿಪ್ರ ಮತ್ತು ನ್ಯಾಯಯುತವಲ್ಲದ ವಿಚಾರಣೆ ನಡೆಸಿ ಮರಣದಂಡನೆ ವಿಧಿಸಬಹುದು ಎಂಬ ಆತಂಕಗಳು ಹೆಚ್ಚಾಗಿವೆ. ಹಿಂದೆಯೂ ಇರಾನ್ ಸರ್ಕಾರ ತನ್ನ ಅಧಿಕಾರ ಅಪಾಯದಲ್ಲಿದೆ ಎಂಬ ಆತಂಕ ಹೊಂದಿದಾಗ ಇಂತಹ ಕ್ರಮಗಳನ್ನು ಕೈಗೊಂಡಿತ್ತು.

ಕ್ರೂರ ತಿರುವು: ಬಾಂಬಿಗಿಂತಲೂ ಕದನ ವಿರಾಮಕ್ಕೆ ಹೆದರುತ್ತಿರುವ ಇರಾನಿಯನ್ನರು! (ಜಾಗತಿಕ ಜಗಲಿ)
ಭಾರತ ಮತ್ತು ಇರಾನ್: ಕಾಲಾತೀತ ನಂಬಿಕೆಯ ಬಾಂಧವ್ಯ (ಜಾಗತಿಕ ಜಗಲಿ)

ಇರಾನಿನ ನ್ಯಾಯಾಲಯಗಳು ಬೇಹುಗಾರಿಕೆ ನಡೆಸಿದ ಆರೋಪ ಎದುರಿಸುವವರ ವಿರುದ್ಧ ಇನ್ನಷ್ಟು ಕಠಿಣ ಕಾನೂನುಗಳನ್ನು ಜಾರಿಗೊಳಿಸುವ ಯೋಜನೆಯನ್ನು ಘೋಷಿಸಿವೆ. ಇದರಲ್ಲಿ ಮರಣದಂಡನೆ ಅಂತೂ ಅತ್ಯಂತ ಸಾಮಾನ್ಯವಾಗಿದೆ.

ಇದೇ ವೇಳೆ, ಇರಾನಿನ ಸರ್ಕಾರಿ ಮಾಧ್ಯಮ ಬೇಹುಗಾರಿಕೆ ಆರೋಪ ಎದುರಿಸುತ್ತಿರುವವರ 'ತಪ್ಪೊಪ್ಪಿಗೆ'ಗಳನ್ನು ನಿರಂತರವಾಗಿ ಪ್ರಸಾರ ನಡೆಸುತ್ತಿದೆ. ಆದರೆ, ಇಂತಹ ತಪ್ಪೊಪ್ಪಿಗೆಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದು ಮಾನವ ಹಕ್ಕು ಗುಂಪುಗಳು ಹೇಳಿದ್ದು, ನಿರಂತರವಾಗಿ ಹಿಂಸೆ ನೀಡಿ, ಜನರಿಂದ ಇಂತಹ ಹೇಳಿಕೆಗಳನ್ನು ನೀಡಿಸಲಾಗಿದೆ ಎಂದು ಆರೋಪಿಸಿವೆ.

ಸರ್ಕಾರ ಈಗ ಅಲ್ಪಸಂಖ್ಯಾತ ಗುಂಪುಗಳ ನಾಗರಿಕರನ್ನು ಗುರಿಯಾಗಿಸಿ ಕ್ರಮ ಕೈಗೊಳ್ಳುತ್ತಿದೆ. ಇದರಲ್ಲಿ ಕುರ್ದ್‌ಗಳು, ನಿಷೇಧಗೊಂಡಿರುವ ಬಹಾಯ್ ಧರ್ಮದ ಜನರು, ಮತ್ತು ಟೆಹರಾನ್ ಮತ್ತು ಶಿರಾಜ಼್ ನಗರಗಳ ಒಂದಷ್ಟು ಯಹೂದಿಗಳೂ ಸೇರಿದ್ದಾರೆ.

ಕುರ್ದ್‌ಗಳು ಎಂದರೆ ಯಾರು?

ಕುರ್ದ್ ಎನ್ನುವುದು ಒಂದು ಜನಾಂಗೀಯ ಗುಂಪಾಗಿದ್ದು, ತಮ್ಮದೇ ಆದ ಭಾಷೆ ಮತ್ತು ಸಂಸ್ಕೃತಿಯನ್ನು ಹೊಂದಿದೆ. ಬಹಳಷ್ಟು ಕುರ್ದ್‌ಗಳು ಪಶ್ಚಿಮ ಇರಾನಿನಲ್ಲಿ, ಇರಾಕ್ ಮತ್ತು ಟರ್ಕಿಗಳ ಗಡಿಗಳ ಬಳಿ ವಾಸಿಸುತ್ತಾರೆ. ಕುರ್ದ್‌ಗಳು ಇರಾನ್ ಸರ್ಕಾರದಿಂದ ನಿರಂತರವಾಗಿ ತಾರತಮ್ಯಕ್ಕೆ ತುತ್ತಾಗಿದ್ದಾರೆ.

ಯುದ್ಧದ ಸಂದರ್ಭದಲ್ಲೂ ಬಹಳಷ್ಟು ಇರಾನಿಯನ್ನರು ಭಯಭೀತರಾಗಿದ್ದರು. ಅವರಿಗೆ ಹಿಂದೆಯೂ ಸರ್ಕಾರ ಹೇಗೆ ನಾಗರಿಕರ ಮೇಲೆ ಮುಗಿಬಿದ್ದಿತ್ತು ಎನ್ನುವುದು ನೆನಪಾಗಿತ್ತು. ಒಂದು ಜನಪ್ರಿಯ ಸಾಮಾಜಿಕ ಜಾಲತಾಣದ ಬರಹ "ನಮಗೆ ಬಾಂಬ್‌ಗಳ ಭಯವಿದೆ. ಆದರೆ, ನಮಗೆ ಕದನ ವಿರಾಮ ಬಾಂಬ್‌ಗಳಿಗೂ ಹೆಚ್ಚು ಭಯ ಮೂಡಿಸುತ್ತದೆ" ಎಂದಿತ್ತು.

ಬಹಳಷ್ಟು ಜನರು ಇರಾನ್ ಸರ್ಕಾರವನ್ನು ಗಾಯಗೊಂಡ ಹಾವಿಗೆ ಹೋಲಿಸಿದ್ದು, ಇರಾನಿಯನ್ನರ ಕೈಬಿಡಬೇಡಿ ಎಂದು ಜಗತ್ತನ್ನು ಆಗ್ರಹಿಸಿದ್ದಾರೆ. ಇಂತಹ ಭೀತಿದಾಯಕ ಚಿತ್ರಣ ಸರ್ಕಾರ ಅವಮಾನಗೊಂಡಾಗ ಎಷ್ಟು ಅಪಾಯಕಾರಿಯಾಗಿ ಬದಲಾಗಬಹುದು ಎನ್ನುವುದಕ್ಕೆ ಸಾಕ್ಷಿಯಾಗಿದೆ.

ಇಂತಹದ್ದೇ ಒಂದು ಘಟನೆ 1988ರಲ್ಲಿ ನಡೆದಿತ್ತು. ಇರಾನ್ ಇರಾಕಿನ ಜೊತೆ ಯುದ್ಧ ನಿಲುಗಡೆಗೆ ಒಪ್ಪಿಗೆ ಸೂಚಿಸಿದ ಬಳಿಕ, ಇರಾನ್ ಸರ್ಕಾರ ಸಾವಿರಾರು ರಾಜಕೀಯ ಖೈದಿಗಳನ್ನು ಹತ್ಯೆಗೈದಿತ್ತು. ಅವರಲ್ಲಿ ಬಹುತೇಕ ಜನರನ್ನು ಸಾಮೂಹಿಕ ಸಮಾಧಿ ಮಾಡಲಾಗಿತ್ತು.

ಬಹಳಷ್ಟು ಜನರಿಗೆ ಇರಾನ್ ಸರ್ಕಾರದ ಕ್ರಮಗಳು ಅದು ಹಿಂದೆ ಕೈಗೊಂಡ ಯಾತನಾದಾಯಕ ಕ್ರಮಗಳನ್ನು ನೆನಪಿಸುತ್ತಿವೆ.

ಯುದ್ಧ ಇನ್ನೂ ಮುಂದುವರಿದಿದ್ದು, ಸರ್ಕಾರದ ಸಮರ್ಥಕರು ಇರಾನ್ 1988ರಲ್ಲಿ ಮಾಡಿದಂತೆ, ಈಗಲೂ ಬೃಹತ್ ಸಂಖ್ಯೆಯಲ್ಲಿ ರಾಜಕೀಯ ಖೈದಿಗಳ ಹತ್ಯೆ ನಡೆಸಬೇಕು ಎಂದು ಆಗ್ರಹಿಸುತ್ತಿದ್ದಾರೆ. ಈ ಬಾರಿ ಕದನ ವಿರಾಮ ಜಾರಿಗೊಂಡ ಬಳಿಕ, ಇನ್ನೂ ದೊಡ್ಡ ಸಂಖ್ಯೆಯಲ್ಲಿ ಹತ್ಯೆಗಳಾಗಬೇಕು ಎಂದು ಸರ್ಕಾರದ ಬೆಂಬಲಿಗರು ಪ್ರತಿಪಾದಿಸುತ್ತಿದ್ದಾರೆ.

ಇರಾನಿನ ನಾಗರಿಕರು ಈಗಾಗಲೇ ಬೆಲೆ ಏರಿಕೆ ಮತ್ತು ಹಣಕಾಸಿನ ತೊಂದರೆಗಳಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ, ಈ ಬಾರಿಯಂತೂ ಪರಿಸ್ಥಿತಿ ಇನ್ನಷ್ಟು ಕಠಿಣವಾಗಿದೆ. ಯುದ್ಧ ನಿಲುಗಡೆಯಾಗಿ, ಬಾಂಬ್ ದಾಳಿಗಳು ನಿಂತಿರಬಹುದು. ಆದರೆ, ಸಾರ್ವಜನಿಕರಲ್ಲಿ ಭೀತಿ ಇನ್ನೂ ಹೆಚ್ಚುತ್ತಿದೆ. ಬಹಳಷ್ಟು ಇರಾನಿಯನ್ನರು ಬಾಹ್ಯ ಯುದ್ಧ ಮತ್ತು ಸರ್ಕಾರದ ಆಂತರಿಕ ದಮನಕಾರಿ ನೀತಿಯ ನಡುವೆ ಸಿಲುಕಿದಂತೆ ಭಾವಿಸುತ್ತಿದ್ದಾರೆ.

ಇರಾನ್ ಈಗಾಗಲೇ ಬಡತನ, ಬೆಲೆ ಏರಿಕೆ, ವಿದ್ಯುತ್ ಕಡಿತ, ಮತ್ತು ಪರಿಸರ ನಾಶದಂತಹ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದೆ. ಇಂತಹ ಸಮಸ್ಯೆಗಳು ಇರಾನಿಯನ್ನರು ಸರ್ಕಾರದ ಮೇಲೆ ನಂಬಿಕೆ ಕಳೆದುಕೊಳ್ಳುವಂತೆ ಮಾಡಿವೆ. ಈಗ, ಸರ್ಕಾರ ಮತ್ತೆ ನಾಗರಿಕರನ್ನು ಗುರಿಯಾಗಿಸಿ ಆಕ್ರಮಣ ನಡೆಸುತ್ತಿದ್ದು, ಆಡಳಿತಗಾರರು ಮತ್ತು ನಾಗರಿಕರ ನಡುವಿನ ಅಂತರ ಇನ್ನಷ್ಟು ಹೆಚ್ಚುತ್ತಾ ಹೋಗಬಹುದು.

ಕ್ರೂರ ತಿರುವು: ಬಾಂಬಿಗಿಂತಲೂ ಕದನ ವಿರಾಮಕ್ಕೆ ಹೆದರುತ್ತಿರುವ ಇರಾನಿಯನ್ನರು! (ಜಾಗತಿಕ ಜಗಲಿ)
ಟೆಹ್ರಾನ್‌ನಿಂದ ಟೆಲ್ ಅವೀವ್ ತನಕ: ಭಾರತದ ಆರ್ಥಿಕತೆಗೆ ಹೊಡೆತ ನೀಡುವುದೇ ಇರಾನ್-ಇಸ್ರೇಲ್ ಯುದ್ಧ (ಜಾಗತಿಕ ಜಗಲಿ)

ಇಷ್ಟೆಲ್ಲದರ ನಡುವೆ, ಇರಾನ್ ಸರ್ಕಾರ ತಾನು ಯುದ್ಧದಲ್ಲಿ ಗೆಲುವು ಸಾಧಿಸಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದು, ಇಸ್ರೇಲ್ ಮತ್ತು ಅಮೆರಿಕಾಗಳಿಗೆ ಬೆದರಿಕೆ ಒಡ್ಡುತ್ತಲೇ ಇದೆ.

ಜೂನ್ 27ರ ಶುಕ್ರವಾರದಂದು, ಇರಾನಿನ ಬಸಿಜ್ ಫೋರ್ಸ್ (ಐಆರ್‌ಜಿಸಿಗೆ ಸಂಪರ್ಕಿತ ಗುಂಪು) ಮುಖ್ಯಸ್ಥ ಘೊಲಾಮ್ ರೆಜಾ಼ ಸೊಲೆಮಾನಿ ಹೇಳಿಕೆ ನೀಡಿದ್ದು, "ನಮ್ಮ ವಿಜ್ಞಾನಿಗಳು ಮತ್ತು ಕಮಾಂಡರ್‌ಗಳ ಹತ್ಯೆ ಮಾಡುವುದರಿಂದ ಇರಾನಿನ ಪ್ರಗತಿಯನ್ನು ತಡೆಯಬಹುದು ಎಂದು ನಮ್ಮ ಶತ್ರುಗಳು ತಪ್ಪಾಗಿ ತಿಳಿದುಕೊಂಡಿದ್ದಾರೆ. ಆದರೆ, ಪ್ಯಾಲೆಸ್ತೀನ್ ಸಂಪೂರ್ಣವಾಗಿ ಸ್ವತಂತ್ರವಾಗುವ ತನಕ ನಾವು ಮುಂದುವರಿಯಲಿದ್ದೇವೆ" ಎಂದಿದ್ದಾರೆ.

ಇರಾನಿನ ಅಧಿಕಾರಿಗಳು ಸರ್ಕಾರದ ಮಾಮೂಲಿ ಸಂದೇಶವನ್ನೇ ಪುನರುಚ್ಚರಿಸುತ್ತಿದ್ದಾರೆ. ಆದರೆ, ಅವರ ಮಾತುಗಳು ಒಂದು ಸ್ಪಷ್ಟ ಸಮಸ್ಯೆಯನ್ನು ತೋರಿಸುತ್ತಿವೆ. ಅದೇನೆಂದರೆ, ಇರಾನ್ ಗಂಭೀರವಾದ ಆಂತರಿಕ ಸಮಸ್ಯೆಯನ್ನು ಎದುರಿಸುತ್ತಿದೆ. ಭದ್ರತಾ ವೈಫಲ್ಯದಿಂದ, ಹೆಚ್ಚುತ್ತಿರುವ ಸಾರ್ವಜನಿಕ ಆಕ್ರೋಶದ ತನಕ ಇರಾನ್ ಸಮಸ್ಯೆಗೆ ತುತ್ತಾಗಿದೆ. ಆದರೂ ಅದು ತನ್ನ ಯೋಜನೆಗಳನ್ನೇನೂ ಬದಲಿಸುವಂತೆ ತೋರುತ್ತಿಲ್ಲ.

ಅದರ ಬದಲಿಗೆ, ಇರಾನ್ ಇಸ್ರೇಲ್ ವಿರುದ್ಧ ತನ್ನ ಹೋರಾಟವನ್ನು ಮುಂದುವರಿಸಲು ಹೆಚ್ಚು ಹೆಚ್ಚು ಹಠ ಹಿಡಿಯುವಂತಿದೆ. ಇಂತಹ ಬಲವಾದ ಇಸ್ರೇಲ್ ವಿರೋಧಿ ನಿಲುವು ಕದನ ವಿರಾಮದಿಂದ ಜಾರಿಗೆ ಬಂದಿರುವ ಸೂಕ್ಷ್ಮ ಶಾಂತಿಯನ್ನು ಯಾವಾಗ ಬೇಕಾದರೂ ಹಾಳುಗೆಡವಬಹುದು.

ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.

ಇಮೇಲ್: girishlinganna@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com