Inflation and birth rate (file photo)
ಹಣದುಬ್ಬರ-ಕುಸಿದ ಜನನ ಪ್ರಮಾಣ (ಸಂಗ್ರಹ ಚಿತ್ರ)online desk

ಒತ್ತಡ, ಹಣದುಬ್ಬರಕ್ಕೆ ಕುಸಿಯುತ್ತಿದೆ ಜನನ ಪ್ರಮಾಣ! (ಹಣಕ್ಲಾಸು)

ಇವತ್ತಿನ ದಿನದಲ್ಲಿ 800 ಕೋಟಿಗೂ ಹೆಚ್ಚು ಜನರಿದ್ದಾರೆ ಅದರಲ್ಲಿ 10 ಪ್ರತಿಶತ ಜನರಿಗೆ ಮಾತ್ರ ಜಗತ್ತಿನ ಆಗುಹೋಗುಗಳ ಅರಿವಿದೆ.
Published on

ಈ ಜಗತ್ತಿನಲ್ಲಿ ಎಲ್ಲಿ ನೋಡಿದರೂ ಜನ ತುಂಬಿ ತುಳುಕುತ್ತಿದ್ದಾರೆ ಎನ್ನಿಸುತ್ತದೆ. ಒಂದು ಕೆಲಸಕ್ಕೆ ನೂರಾರು ಅರ್ಜಿಗಳು ಬರುತ್ತವೆ. ಸ್ಪರ್ಧೆ ಬಹಳ ಹೆಚ್ಚು ಎನ್ನಿಸುತ್ತದೆ.ಬದುಕಿನ ಗುಣಮಟ್ಟ ಹೆಚ್ಚಿಸಿಕೊಳ್ಳುವ ಬದಲು ನಾವು ಬೇಕಿಲ್ಲದ ವಿಷಯಗಳ ಬಗ್ಗೆ ಮಾತ್ರ ಗಮನ ಹರಿಸುತ್ತಿದ್ದೇವೆ. 1950 ರ ಸುಮಾರಿಗೆ ಎರಡೂವರೆ ಬಿಲಿಯನ್ ಅಂದರೆ 250 ಕೋಟಿ ಇದ್ದ ಜಾಗತಿಕ ಜನಸಂಖ್ಯೆ ಇಂದು 8 ಬಿಲಿಯನ್ ಅಂದರೆ 800 ಕೋಟಿಗೂ ಮೀರಿದೆ. ಅದಕ್ಕೆ ತಕ್ಕ ಹಾಗೆ ತಂತ್ರಜ್ಞಾನ , ಕೈಗಾರಿಕೆ, ಕೃಷಿ ಎಲ್ಲಾ ಕ್ಷೇತ್ರದಲ್ಲೂ ಬಹಳಷ್ಟು ಅಭಿವೃದ್ಧಿಯಾಗಿದೆ. ಹೀಗಿದ್ದೂ ಜಗತ್ತಿನ ಎಲ್ಲಾ ಜನರಿಗೂ ಕೆಲಸ ಕೊಡುವುದು ಸಾಧ್ಯವಿಲ್ಲದ ಮಾತು. ಕೆಲಸ ಸೃಷ್ಟಿಯಾಗುತ್ತಿಲ್ಲ ಎನ್ನುವ ಕೂಗನ್ನು ಆರ್ಟಿಫಿಷಿಯಲ್ ಇಂಟೆಲಿಜೆನ್ಸಿ ಪೂರ್ಣವಾಗಿ ಇಲ್ಲವಾಗಿಸುತ್ತದೆ. ಯಾರೆಲ್ಲಾ ಜಗತ್ತಿನ ಬದಲಾವಣೆಗಳಿಗೆ ಹೊಂದಿಕೊಂಡು ವೇಗವಾಗಿ ಬದಲಾಗುತ್ತಾರೆ ಅವರಿಗೆ ಮಾತ್ರ ಕೆಲಸವಿರುತ್ತದೆ. ಉಳಿದವರ ಬದುಕು ಹೇಗಿರಬಹುದು ? ಮುಂದಿನ ಭವಿಷ್ಯ ಹೇಗಿರಬಹುದು ? ತಂತ್ರಜ್ಞಾನದ ಸಹಾಯದಿಂದ ಬಹುತೇಕ ಕೆಲಸಗಳಿಗೆ ಮನುಷ್ಯರ ಶ್ರಮ ಬೇಕಿಲ್ಲದೆ ಹೋಗುತ್ತದೆ. ಆಗ ಎಲ್ಲರ ಹೊಟ್ಟೆಗೂ ಆಹಾರವನ್ನು ಖಂಡಿತ ಶಕ್ತಿ ತಂತ್ರಜ್ಞಾನ ನೀಡುತ್ತದೆ. ಆದರೆ ಮನುಷ್ಯನ ಬದುಕಿಗೊಂದು ಉದ್ದೇಶವನ್ನು ನೀಡುವುದಿಲ್ಲ. ಆ ಉದ್ದೇಶವನ್ನು ನಾವೇ ಕಂಡುಕೊಳ್ಳಬೇಕು.

ಇವತ್ತಿನ ದಿನದಲ್ಲಿ 800 ಕೋಟಿಗೂ ಹೆಚ್ಚು ಜನರಿದ್ದಾರೆ ಅದರಲ್ಲಿ 10 ಪ್ರತಿಶತ ಜನರಿಗೆ ಮಾತ್ರ ಜಗತ್ತಿನ ಆಗುಹೋಗುಗಳ ಅರಿವಿದೆ. ಮಿಕ್ಕವರು ಲೆಕ್ಕದಲ್ಲಿ ಮಾತ್ರ ದಾಖಲಾಗುತ್ತಾರೆ. ಇವತ್ತಿನ ಕೆಲಸಗಾರರ ಬಗ್ಗೆ ಒಂದು ಜೋಕ್ ಪ್ರಸಿದ್ಧವಾಗಿದೆ. ಮೊದಲಿಗೆ ಕೆಲಸ ಮಾಡಲು ಜನರು ಸಿಗುತ್ತಿಲ್ಲ ಎನ್ನುವ ಕೂಗಿದೆ. ಎರಡನೆಯದಾಗಿ ಜನರಿಗೆ ಕೆಲಸವೇ ಸಿಗುತ್ತಿಲ್ಲ ಎಂದು ಎಲ್ಲಾ ದೇಶಗಳಲ್ಲೂ ಆ ದೇಶದ ಸರಕಾರವನ್ನು ದೂಷಿಸಲಾಗುತ್ತದೆ. ಮೂರನೆಯದಾಗಿ ಕೆಲಸಕ್ಕೆ ಇರುವ ಜನರಿಗೆ ತಾವು ಮಾಡುವ ಕೆಲಸದ ಬಗ್ಗೆ ಜ್ಞಾನವೇ ಇರುವುದಿಲ್ಲ. ಇದು ಜೋಕ್ ಎನ್ನಿಸುತ್ತದೆ. ಆದರೆ ಜಗತ್ತು ಇಂದು ಎದರಿಸುತ್ತಿರುವ ಮಹಾನ್ ಸಮಸ್ಯೆಯಿದು.

ಇದರ ಜೊತೆಗೆ ಇನ್ನೊಂದು ಮಹಾನ್ ಸಮಸ್ಯೆಯಲ್ಲಿ ಜಗತ್ತು ಸಿಕ್ಕಿ ಹಾಕಿಕೊಂಡಿದೆ. ಅದು ಮೇಲಿನ ಸಮಸ್ಯೆಗೆ ನೇರವಾಗಿ ಸಂಬಂದಿಸಿದ್ದು. ಜಗತ್ತಿನಲ್ಲಿ ಕೌಶಲ ಹೊಂದಿರುವ ಕೆಲಸಗಾರರ ಸಂಖ್ಯೆ ತೀವ್ರವಾಗಿ ಕಡಿಮೆಯಾಗಿದೆ. ಸ್ಕಿಲ್ ಇರುವ ಜನರು ಜಗತ್ತಿನ ಯಾವ ಭಾಗದಲ್ಲಿ ಬೇಕಾದರೂ ಕೆಲಸ ಮಾಡಬಹುದು ಎನ್ನುವ ಪರಿಕಲ್ಪನೆಯಿಂದ ಬಹಳಷ್ಟು ಜನ ತಮ್ಮ ದೇಶಗಳನ್ನು ಬಿಟ್ಟು ಬೇರೆ ದೇಶಗಳಲ್ಲಿ ಬದುಕನ್ನು ಕಟ್ಟಿಕೊಂಡರು. ಇದೀಗ ಹೀಗೆ ವಲಸೆ ಬಂದವರನ್ನು ಕೆಲಸ ಕದಿಯಲು ಬಂದವರು ಎನ್ನುವಂತೆ ನೋಡಲಾಗುತ್ತಿದೆ. ಪ್ರತಿ ದೇಶವೂ ನಮ್ಮ ದೇಶ ಮೊದಲು ಎನ್ನುವ ರಾಷ್ಟ್ರೀಯವಾದಕ್ಕೆ ಹೊರಳಿ ಕೊಳ್ಳುತ್ತಿವೆ. ಇದನ್ನು ತಪ್ಪು ಎಂದು ಹೇಳಲು ಹೋಗುತ್ತಿಲ್ಲ. ಯಾರೆಲ್ಲಾ ನಮ್ಮ ದೇಶ , ನಮ್ಮ ಐಡೆಂಟಿಟಿ ಎನ್ನುತ್ತಿದ್ದಾರೆ ಅವರ ಗುರುತು , ಅವರ ಸಂಸ್ಕೃತಿ ಹೆಚ್ಚು ವರ್ಷಗಳು ಉಳಿಯುವುದಿಲ್ಲ. ಜಗತ್ತು ಬದಲಾಗಿ ಹೋಗಲಿದೆ ಎನ್ನುವುದನ್ನು ತಿಳಿಸುವುದು ಈ ಲೇಖನದ ಉದ್ದೇಶ.

ಒಂದು ಸಮುದಾಯ ಅಥವಾ ದೇಶ ಅದೇ ದೇಶ ಅಥವಾ ಸಮುದಾಯವಾಗಿ ಉಳಿದುಕೊಳ್ಳಬೇಕು ಎಂದರೆ ಫರ್ಟಿಲಿಟಿ ಸಂಖ್ಯೆ 2.1 ಇರಬೇಕು. ಅಂದರೆ ಸ್ಪೇನ್ ದೇಶದಲ್ಲಿ ಸ್ಪ್ಯಾನಿಶರು ಉಳಿದುಕೊಳ್ಳಬೇಕು ಎಂದರೆ ಪ್ರತಿ ದಂಪತಿಗಳು ಎರಡು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಮಾಡಿಕೊಳ್ಳಬೇಕು. ಹೀಗೆ ಫೆರ್ಟಲಿಟಿ ರೇಟ್ ಎರಡಕ್ಕಿಂತ ಕಡಿಮೆಯಾದಾಗ ನಿಧಾನವಾಗಿ ಆ ದೇಶದಲ್ಲಿ ವಲಸಿಗರು ನೆಲೆ ನಿಲ್ಲಲು ಶುರು ಮಾಡುತ್ತಾರೆ. ಯಾವದು ನನ್ನದು ಎಂದು ಹೋರಾಡುತ್ತಿದ್ದಾರೆ ಅದು ಇನ್ನು 25 ವರ್ಷದಲ್ಲಿ ಅವರ ಕೈ ತಪ್ಪಿ ಹೋಗಲಿದೆ. ಡೆಮೊಗ್ರಾಫಿ ಹೇಗೆ ಬದಲಾಗುತ್ತದೆ ಎನ್ನುವುದನ್ನು ನೋಡೋಣ.

Inflation and birth rate (file photo)
ಭಾರತೀಯರ ಮೇಲೆ ಜಾಗತಿಕ ಮಟ್ಟದಲ್ಲಿ ಅಸಹನೆ ಶುರುವಾಗಿದೆ ಏಕೆ? (ಹಣಕ್ಲಾಸು)

ಮೊದಲಿಗೆ ಕರ್ನಾಟಕದಿಂದ ಶುರು ಮಾಡೋಣ. ಕರ್ನಾಟಕದಲ್ಲಿ ಫೆರ್ಟಲಿಟಿ ರೇಟ್ 1.5 ಇದೆ. ಅಂದರೆ ಕನ್ನಡಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕುಸಿತ ಕಾಣುತ್ತ ಹೋಗುತ್ತದೆ. ಕನ್ನಡಿಗರ ಅಸ್ಮಿತೆ , ಸಂಸ್ಕಾರ ಉಳಿದುಕೊಳ್ಳಬೇಕು ಎಂದರೆ ಕನಿಷ್ಠ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಕನ್ನಡಿಗ ದಂಪತಿಗಳು ಮಾಡಿಕೊಳ್ಳಬೇಕು. ಇದಾಗುತ್ತಿಲ್ಲ. ವರ್ಷದಿಂದ ವರ್ಷಕ್ಕೆ ನಮ್ಮ ಫರ್ಟಿಲಿಟಿ ರೇಟ್ ಅಂದರೆ ಕನ್ನಡ ಮಕ್ಕಳು ಹುಟ್ಟುವ ಸಂಖ್ಯೆ ತೀವ್ರವಾಗಿ ಕುಸಿಯುತ್ತಿದೆ.

ದಕ್ಷಿಣ ಭಾರತದ ಎಲ್ಲಾ ರಾಜ್ಯಗಳು ಕೂಡ ಅಸ್ಮಿತೆ ಕಾಪಾಡಿಕೊಳ್ಳಲು ಬೇಕಾಗುವ 2.1 ಫೆರ್ಟಲಿಟಿ ರೇಶ್ಯು ಗಿಂತ ಬಹಳ ಕಡಿಮೆಯಿದೆ. ಅದೇ ಸಮಯದಲ್ಲಿ ಬಿಹಾರ , ಉತ್ತರ ಪ್ರದೇಶ , ಮಧ್ಯಪ್ರದೇಶ ರಾಜ್ಯಗಳಲ್ಲಿ ಈ ಸಂಖ್ಯೆ 2.5 ಕ್ಕಿಂತ ಹೆಚ್ಚಿದೆ. ಇದರರ್ಥ ಮುಂದಿನ ಎರಡು ಅಥವಾ ಮೂರು ದಶಕದಲ್ಲಿ ಕನ್ನಡ ಐಡೆಂಟಿಟಿ ಉಳಿಸಿಕೊಳ್ಳುವುದು ಕಷ್ಟ. ಇಲ್ಲಿ ಅನ್ಯ ಭಾಷಿಕ ವಲಸಿಗರು ಬರುವುದು ಮತ್ತು ಈ ನೆಲ ಅವರದಾಗುವುದನ್ನು ತಪ್ಪಿಸಲು ಸಾಧ್ಯವಿಲ್ಲ. ಹಿಂದಿ ಮತ್ತು ಕನ್ನಡ , ಕನ್ನಡ ಮತ್ತು ತಮಿಳು ನಡುವಿನ ಕಚ್ಚಾಟ ಅದೆಷ್ಟು ಬಾಲಿಶ ಎನ್ನುವುದರ ಅರಿವಾಯ್ತು ಎಂದುಕೊಳ್ಳುವೆ. ಯಾವ ರಾಜ್ಯಗಳಲ್ಲಿ ಫೆರ್ಟಲಿಟಿ ರೇಟ್ ಎರಡಕ್ಕಿಂತ ಹೆಚ್ಚಿದೆ ಆ ರಾಜ್ಯಗಳು ತಮ್ಮ ಗುರುತನ್ನು ಉಳಿಸಿಕೊಳ್ಳುತ್ತವೆ. ಉಳಿದ ರಾಜ್ಯಗಳು ನಿಧಾನವಾಗಿ ತಮ್ಮ ಭಾಷೆ , ಐಡೆಂಟಿಟಿ ಕಳೆದುಕೊಳ್ಳುತ್ತವೆ. ಭಾರತದಲ್ಲಿ ಜನಸಂಖ್ಯೆ ಹೆಚ್ಚು ಎನ್ನುತ್ತೇವೆ ಅಲ್ಲವೇ ? ಭಾರತ ದೇಶವಾಗಿ ಒಟ್ಟಾರೆ ಫೆರ್ಟಲಿಟಿ ರೇಟ್ 1.9 ಎಂದರೆ ನಂಬುವಿರಾ ? ಹೌದು ಭಾರತೀಯರ ಸಂಖ್ಯೆ ಕೂಡ ತೀವ್ರವಾಗಿ ಕುಸಿಯುತ್ತಿದೆ. ಭಾರತೀಯತೆಯ ಗುರುತನ್ನು ಉಳಿಸಿಕೊಳ್ಳಲು ಬೇಕಿರುವ ಸಂಖ್ಯೆಗಿಂತ ನಮ್ಮ ಫೆರ್ಟಲಿಟಿ ರೇಟ್ ಕಡಿಮೆಯಿದೆ.

ಜಾಗತಿಕ ಮಟ್ಟದಲ್ಲಿ ಏನಾಗುತ್ತಿದೆ ನೋಡೋಣ

ಯೂರೋಪಿಯನ್ ಯೂನಿಯನ್ ಫೆರ್ಟಲಿಟಿ ರೇಟ್ 1.38 ಯೂರೋಪಿಯನ್ ಗುರುತನ್ನು , ಅಸ್ಮಿತೆಯನ್ನು ಉಳಿಸಿಕೊಳ್ಳಲು ಬೇಕಿರುವುದು ಕನಿಷ್ಠ 2.1 ಹೀಗಾಗಿ ಯೂರೋಪು ಇನ್ನೆರಡು ವರ್ಷದಲ್ಲಿ ವಲಸಿಗರಿಗೆ ಸೇರುತ್ತದೆ. ಜೆರ್ಮನಿ , ಸ್ಪೇನ್ , ಇಟಲಿ , ಫ್ರಾನ್ಸ್ ದೇಶಗಳ ಫೆರ್ಟಲಿಟಿ ರೇಟ್ 1.5ಕ್ಕಿಂತ ಬಹಳ ಕಡಿಮೆಯಿದೆ. ಫ್ರಾನ್ಸ್ , ಸ್ಪೇನ್ ದೇಶಗಳು 1.2 ಕ್ಕಿಂತ ಕಡಿಮೆ ಫೆರ್ಟಲಿಟಿ ರೇಟ್ ಹೊಂದಿವೆ. ಬಹುತೇಕ ಯೂರೋಪಿಯನ್ ದೇಶಗಳ ಕಥೆ ಇದು.

ಹಾಂಗ್ ಕಾಂಗ್ , ಮಕಾವು , ಸಿಂಗಾಪುರ , ಸೌತ್ ಕೊರಿಯಾ ಮತ್ತು ತೈವಾನ್ ದೇಶಗಳಲ್ಲಿ ಫೆರ್ಟಲಿಟಿ ರೇಟ್ ಒಂದಕ್ಕಿಂತ ಕಡಿಮೆಯಿದೆ. ಜಪಾನ್ ದೇಶದಲ್ಲಿ ಇದು 1.2 ಇದ್ದು ಜನಸಂಖ್ಯೆ ಕುಸಿತದೊಂದಿಗೆ ಅಲ್ಲಿ ಮುದುಕರ ಸಂಖ್ಯೆ ಕೂಡ ವೇಗವಾಗಿ ಹೆಚ್ಚುತ್ತಿದೆ. ಜಪಾನ್ ಮುಂದಿನ ಹತ್ತು ವರ್ಷದಲ್ಲಿ ಮೂಲ ಜಪಾನ್ ದೇಶವಾಗಿ ಉಳಿದುಕೊಳ್ಳುವುದಿಲ್ಲ. ಇವತ್ತಿಗೆ ಜಾಗತಿಕ ಮಟ್ಟದಲ್ಲಿ ಅಮೇರಿಕಾ ದೇಶಕ್ಕೆ ಸೆಡ್ಡು ಹೊಡೆದು ನಿಂತಿರುವ ಚೀನಾ ಕೂಡ ಮುಂದಿನ ಐವತ್ತು ವರ್ಷದಲ್ಲಿ ತನ್ನ ಜನಸಂಖ್ಯೆಯನ್ನು ಕಳೆದುಕೊಳ್ಳಲಿದೆ. ಚೀನಾ ದೇಶದ ಫೆರ್ಟಲಿಟಿ ರೇಟ್ 1 ಎನ್ನುವುದು ಆ ದೇಶಕ್ಕೆ ಆತಂಕವನ್ನು ಉಂಟು ಮಾಡುವುದರಲ್ಲಿ ಸಂಶಯವಿಲ್ಲ. ಚೀನಿಯರು ಅದಕ್ಕೆ ಕೂಡ ಈಗಾಗಲೇ ಪ್ಲಾನ್ ಸಿದ್ದ ಮಾಡಿರುತ್ತಾರೆ. ಈ ಎಲ್ಲಾ ದೇಶಗಳು ಇಂದಿಗೆ ಇಂದೇ ಪ್ಲಾನ್ ಮಾಡಿದರೂ ಕೂಡ ತಮ್ಮ ಗುರುತನ್ನು ಉಳಿಸಿಕೊಳ್ಳಲು ಹೆಣಗಬೇಕಾಗುತ್ತದೆ ಎನ್ನುವುದು ಸತ್ಯ.

ಈ ವಿಷಯದಲ್ಲಿ ಅಮೇರಿಕಾ ಚೀನಾಕ್ಕಿಂತ ಒಂದಷ್ಟು ವಾಸಿ ಎನ್ನಬಹುದು. ಅಮೇರಿಕಾದಲ್ಲಿ ಫೆರ್ಟಲಿಟಿ ರೇಟ್ ಇವತ್ತಿಗೆ 1.6 ಇದ್ದು , ಇದು ಕೂಡ ಉತ್ತಮ ಸಂಖ್ಯೆಯಲ್ಲ. ಭಾರತೀಯ ವಲಸಿಗರ ಮೇಲೆ ದ್ವೇಷ ಕಾರುತ್ತಿರುವ ಆಸ್ಟ್ರೇಲಿಯಾ 1.48 ಮತ್ತು ಇಂಗ್ಲೆಂಡ್ 1.41 ಜನನ ಪ್ರಮಾಣವನ್ನು ಹೊಂದಿವೆ. ಈ ಮೂಲಕ ಈ ದೇಶಗಳು ಕೂಡ ತಮ್ಮ ಅಸ್ಮಿತೆಯನ್ನು ಶೀಘ್ರದಲ್ಲಿ ಕಳೆದುಕೊಳ್ಳಲಿವೆ. ಸೌತ್ ಅಮೇರಿಕಾದಲ್ಲಿ ಇದು 1.7 ಪ್ರತಿಶತವಿದೆ.

Inflation and birth rate (file photo)
ಷೇರು ಮಾರುಕಟ್ಟೆ ಮಹಾಕುಸಿತ ಕಾಣುತ್ತಂತೆ ಹೌದಾ? (ಹಣಕ್ಲಾಸು)

ಆಫ್ರಿಕನ್ ದೇಶಗಳಲ್ಲಿ ಜನನ ಪ್ರಮಾಣ 4.1 ! ಹೌದು ಉಳಿವಿಗೆ ಬೇಕಾಗಿರುವುದು 2.1. ಮುಂಬರುವ ವರ್ಷಗಳು ಯಾರಿಗೆ ಸೇರಿದ್ದು ಎಂದು ಹೇಳಬೇಕಾಗಿಲ್ಲ ಎಂದುಕೊಳ್ಳುವೆ. ಹೀಗಾಗಿ ಇದನ್ನು ನಾವು ಖಂಡಗಳ ಲೆಕ್ಕಾಚಾರದಲ್ಲಿ ನೋಡುವುದಾದರೆ ಆಫ್ರಿಕಾ ಖಂಡ 4.1. ಒಷ್ಯಾನಿಯ ಎನ್ನುವ 14 ಸ್ವಂತಂತ್ರ ದೇಶಗಳಲ್ಲಿ , ಅಂದರೆ ಆಸ್ಟ್ರೇಲಿಯಾ , ನ್ಯೂಝಿಲ್ಯಾಂಡ್ , ಮಾರ್ಷಲ್ ಐಲ್ಯಾಂಡ್ ಇತ್ಯಾದಿಗಳಲ್ಲಿ ಇದು 2.3, ಏಷ್ಯಾ ಮತ್ತು ಸೌತ್ ಅಮೇರಿಕಾದಲ್ಲಿ 2, ನಾರ್ತ್ ಅಮೇರಿಕಾ 1.8 ಮತ್ತು ಯೂರೋಪು 1.6 ಇವತ್ತಿನ ದಿನದಲ್ಲಿ ದಾಖಲಾಗಿದೆ. ಇದರ ಪ್ರಕಾರ ಪ್ರಥಮವಾಗಿ ಯೂರೋಪು ತನ್ನ ಗುರುತನ್ನು ಕಳೆದುಕೊಳ್ಳಲಿದೆ. ಈಗಾಗಲೇ ಇಟಲಿ , ಸ್ಪೇನ್ , ಪೋರ್ಚುಗಲ್ ದೇಶಗಳಲ್ಲಿ ಹಳ್ಳಿ ಪ್ರದೇಶಗಳಲ್ಲಿ ಜನರಿಲ್ಲದೆ ಊರಿಗೆ ಊರೇ ಪಾಳು ಬಿದ್ದಿವೆ.

ಕೊನೆ ಮಾತು: ಈ ರೀತಿಯ ಜನನ ಪ್ರಮಾಣ ಕುಸಿಯಲು ಪ್ರಮುಖ ಕಾರಣವೇನು ಗೊತ್ತೇ ? ಅಭಿವೃದ್ಧಿ ಮತ್ತು ಹಣದುಬ್ಬರ. ಹೆಚ್ಚುತ್ತಿರುವ ಕಾಸ್ಟ್ ಆಫ್ ಲಿವಿಂಗ್ ಕಾರಣ ಜಗತ್ತಿನೆಲ್ಲೆಡೆ ಹೆಣ್ಣು ಗಂಡು ಇಬ್ಬರೂ ದುಡಿಯುವ ಅಗತ್ಯತೆ ಹೆಚ್ಚಾಯ್ತು. ಶಿಕ್ಷಣ , ವೈದ್ಯಕೀಯ ಖರ್ಚುಗಳು ಕೈಗೆಟುಕದ ಮಟ್ಟವನ್ನು ಮುಟ್ಟಿವೆ.ಸಮಾಜದಲ್ಲಿ ಹೆಚ್ಚಾಗಿರುವ ಒತ್ತಡ ಮಕ್ಕಳನ್ನು ಮಾಡಿಕೊಳ್ಳದಂತೆ , ಮಾಡಿಕೊಂಡರೂ ಒಂದು ಮಗುವಿಗೆ ಸಾಕು ಎನ್ನುವಂತೆ ಮಾಡಿವೆ. ಜಗತ್ತನ್ನು ಒಂದು ಎನ್ನುವಂತೆ ನೋಡಿದರೂ ಕೂಡ ನಮ್ಮ ಜನನ ಪ್ರಮಾಣ 2.4 ಎನ್ನುವುದು ನಾವೆಂದು ಕೊಂಡಂತೆ ಜಗತ್ತಿನ ಜನಸಂಖ್ಯೆ ಬೆಳೆಯುತ್ತಿಲ್ಲ. ಮುಂಬರುವ ದಿನಗಳಲ್ಲಿ ಅದು ಇನ್ನಷ್ಟು ಕುಸಿತವನ್ನು ಕಾಣಲಿದೆ. ಕನ್ನಡಿಗ , ಯೂರೋಪಿಯನ್ ಜಾಗದಲ್ಲಿ ಮತ್ತ್ಯಾರೋ ಬಂದು ಈ ಜಗತ್ತಿನಲ್ಲಿ ಕೂರುತ್ತಾರೆ. ಇವತ್ತಿಗೆ ನಾವು ಯಾವುದಕ್ಕೆ ಹೋರಾಡುತ್ತಿದ್ದೇವೆ ಅದರ ಮೂಲ ಸಮಸ್ಯೆಯನ್ನು ಪರಿಹರಿಸದೆ ಹೋರಾಡಿ ಯಾವುದೇ ಪ್ರಯೋಜನವಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com