ನೇಪಾಳದ Gen Zಗಳು ಭಾರತಕ್ಕೂ ಬೇಕೆಂಬ ಆಸೆಯಲ್ಲಿದ್ದವರಿಗೆ ಬಿಹಾರದಲ್ಲಿ ಸಿಕ್ಕಿದ್ದು ಮೈಥಿಲಿ! (ತೆರೆದ ಕಿಟಕಿ)

ನೇಪಾಳದಲ್ಲಿನ ಘಟನೆ ಇಲ್ಲಿನ ಕೆಲವು ಪ್ರತಿಪಕ್ಷಗಳಿಗೆ ಬೇರೆಯದೇ ಆಸೆ ಹುಟ್ಟಿಸಿಬಿಟ್ಟಿತು. ಜೆನ್ಜಿ ಪೀಳಿಗೆ ಬೀದಿಗಿಳಿದು ಮೋದಿ ಸರ್ಕಾರದ ಸಚಿವರುಗಳನ್ನು ಥಳಿಸಿದಂತೆ ಕಲ್ಪನೆಯ ಚಿತ್ರಣಗಳು ಓಡಾಡಿದ್ದಿರಬೇಕು.., ಆದರೆ ಬಿಹಾರದ ಚುನಾವಣೆ ಫಲಿತಾಂಶ ಬೇರೆಯದ್ದೇ ಕತೆ ಹೇಳುತ್ತಿದೆ.
Nepal gen Z protest and India's Gen Z MLA maithili thakur
ನೇಪಾಳದ ಜೆನ್ಜಿ ಪ್ರತಿಭಟನೆ; ಭಾರತದ ಜೆನ್ಜಿ ಶಾಸಕಿ ಮೈಥಿಲಿ ಠಾಕೂರ್ online desk
Updated on

ಜೆನ್ಜೀಗಳು ಗಲಭೆ ಏಳ್ಬೇಕು ನೋಡ್ರೀ…ಆಗ ರಾಜಕೀಯ ಎಲ್ಲ ಸರಿಯಾಗುತ್ತೆ ಎಂಬ ಹೇಳಿಕೆಯೊಂದು ಸಾಮಾಜಿಕ ಮಾಧ್ಯಮ ಮತ್ತು ಸಾಮಾನ್ಯ ಹರಟೆಗಳಲ್ಲಿ ಕೆಲವರಿಂದ ಆಗಾಗ ಕೇಳಿಬರುತ್ತಿರುತ್ತದೆ. ನರೇಂದ್ರ ಮೋದಿ ಪ್ರಣೀತ ಅಧಿಕಾರ ರಚನೆಯನ್ನು ಅಲ್ಲಾಡಿಸುವುದು ಹೇಗೆ ಎಂದು ಬಗೆಹರಿಯದೇ ಕುಳಿತಿರುವ ರಾಜಕೀಯ ಗುಂಪುಗಳಿಗೆ ಸೇರಿದವರೇ ಸಾಮಾನ್ಯವಾಗಿ ಇಂಥ ಅಭಿಪ್ರಾಯ ವ್ಯಕ್ತಪಡಿಸುವುದರಲ್ಲಿ ಮುಂಚೂಣಿಯಲ್ಲಿದ್ದಾರೆ.

ಕೆಲವು ತಿಂಗಳುಗಳ ಹಿಂದೆ ನೇಪಾಳದ ಬೀದಿಗಳಲ್ಲಿ ವ್ಯಗ್ರರಾದ ಅಲ್ಲಿನ ಯುವಸಮೂಹವು ಕೆಲವು ಅಧಿಕಾರಸ್ಥ ರಾಜಕಾರಣಿಗಳನ್ನು ಬೆತ್ತಲೆಗೊಳಿಸಿ ಥಳಿಸುವಷ್ಟರಮಟ್ಟಿಗಿನ ಆಕ್ರೋಶ ತೋರಿಸಿತು. ಅವುಗಳ ಸರಿ-ತಪ್ಪು ಬೇರೆಯದೇ ಚರ್ಚೆಯ ವಿಷಯವಾದರೂ, ಈ ಘಟನೆ ಇಲ್ಲಿನ ಕೆಲವು ಪ್ರತಿಪಕ್ಷಗಳಿಗೆ ಬೇರೆಯದೇ ಬಗೆಯ ಆಸೆ ಹಾಗೂ ಭ್ರಮೆಯನ್ನು ಹುಟ್ಟಿಸಿಬಿಟ್ಟಿತು. ಜೆನ್ಜಿ (Gen Z) ಪೀಳಿಗೆ ಭಾರತದಲ್ಲಿ ಬೀದಿಗಿಳಿದು ಮೋದಿ ಸರ್ಕಾರದ ಸಚಿವರುಗಳನ್ನು ಥಳಿಸಿದಂತೆಲ್ಲ ಇವರ ತಲೆಗಳಲ್ಲಿ ಕಲ್ಪನೆಯ ಚಿತ್ರಣಗಳು ಓಡಾಡಿದ್ದಿರಬೇಕು.

ಈ ಜೆನ್ಜಿ ಕೇಂದ್ರಿತ ವ್ಯಾಖ್ಯಾನ-ಅಭಿಪ್ರಾಯಗಳಿಗೆ ಹೊಸ ನೆಲೆಯೊಂದನ್ನು ತೋರಿಸಬಲ್ಲ ವಿದ್ಯಮಾನವೊಂದು ಇತ್ತೀಚಿನ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ನಡೆದಿದೆ. ಅದೆಂದರೆ 25 ವರ್ಷದ ಮೈಥಿಲಿ ಠಾಕೂರ್ ದೇಶದ ಕಿರಿಯ ಶಾಸಕಿಯಾಗಿ ಅಲಿನಗರ ವಿಧಾನಸಭೆ ಕ್ಷೇತ್ರದಿಂದ ಆಯ್ಕೆಯಾಗಿರುವುದು. ಕೇವಲ ವಯಸ್ಸಿನ ಕಾರಣಕ್ಕಲ್ಲ, ಆಕೆ ಪ್ರತಿನಿಧಿಸುವ ವಿಷಯಗಳ ಕಾರಣದಿಂದ ಇದು ಜೆನ್ಜಿ ಚರ್ಚೆಗೆ ಹೊಸ ಆಯಾಮ ಕೊಡುತ್ತದೆ.

ಏನಿದು ಜೆನ್ಜಿ ಪದಪುಂಜ?

ವಸ್ತು-ವಿಷಯಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವುದಕ್ಕೆ ವರ್ಗೀಕರಣಗಳು ಸಹಾಯ ಮಾಡುತ್ತವೆ. ಆ ಕಾರಣದಿಂದ ಮಿಲೆನಿಯಲ್, ಜೆನ್ಜಿ, ಅಲ್ಫಾ ಎಂದೆಲ್ಲ ವಿಭಾಗಿಸಿಕೊಳ್ಳಬಹುದಾದರೂ ಇವಕ್ಕೂ ಮಿತಿಗಳಿವೆ. ಇವತ್ತಿನ ಮಾಧ್ಯಮ ಚರ್ಚೆಗಳನ್ನು ನೋಡಿದರೆ ಇವರೆಲ್ಲರೂ ತೀರ ಪರಸ್ಪರ ಭಿನ್ನರೇನೋ, ವಿಶೇಷ ಪ್ರಬೇಧವೇ ಅವತರಿಸಿತೇನೋ ಎಂದೆಲ್ಲ ಭ್ರಮೆಯಾಗಿಬಿಡುತ್ತದೆ. ವಾಸ್ತವ ಏನೆಂದರೆ, ಪ್ರತಿ ಕಾಲಘಟ್ಟದ ಅನುಭವಗಳೂ ತುಸು ಬೇರೆಯದೆನಿಸುವ ಯೋಚನಾಧಾಟಿ ಹುಟ್ಟುಹಾಕುತ್ತವೆ. ಆದರೆ ಮಾನವನ ಭಾವನೆಗಳು ಮೂಲತಃ ಎಲ್ಲಿಂದ ಎಲ್ಲಿಗೆ ಹೋದರೂ ಅವವೇ ಆಗಿವೆ.

1997 ಮತ್ತು 2013ರ ಅವಧಿಯಲ್ಲಿ ಹುಟ್ಟಿದವರನ್ನು ಜೆನ್ಜಿ ಎಂದು ಕರೆಯುವ ವಾಡಿಕೆ. ಅದಕ್ಕೂ ಹಿಂದಿನ 1981-1996ರ ಕಾಲಾವಧಿಯೊಂದನ್ನು ಗುರುತು ಮಾಡಿಕೊಂಡು ಈ ಅವಧಿಯಲ್ಲಿ ಹುಟ್ಟಿದವರನ್ನು ಮಿಲೆನಿಯಲ್ ಎಂದು ಕರೆಯಲಾಯಿತು. ಇನ್ನು, 2013ರ ನಂತರ ಹುಟ್ಟಿದವರನ್ನು ಜೆನ್ ಅಲ್ಫಾ ಎನ್ನಲಾಯಿತು. ಹೀಗೆಲ್ಲ ಹೆಸರಿಟ್ಟಿರುವುದರ ಹಿಂದೆ ಅದೇನೋ ಘನಂದಾರಿ ತತ್ತ್ವವಿದೆಯೇನೋ ಎಂದು ತಡಕಾಡಿದರೆ ಅಂಥದ್ದೇನೂ ಸಿಕ್ಕುವುದಿಲ್ಲ.

1990ರಲ್ಲಿ ಸಮಾಜಶಾಸ್ತ್ರ ಅಧ್ಯಯನದಲ್ಲಿರುವವರು 1965-1980ರ ನಡುವೆ ಹುಟ್ಟಿದ ಜನಸಮೂಹವನ್ನು ಎಕ್ಸ್ ಎಂದು ಕರೆದರು. ಏಕೆಂದರೆ ಅವರನ್ನು ಇದಮಿತ್ಥಂ ಎಂದು ಒಂದು ವರ್ತನೆ ಇಲ್ಲವೇ ಒಂದು ಗುರುತಿನ ಮಾದರಿಯಲ್ಲಿ ವ್ಯಾಖ್ಯಾನಿಸುವುದು ಕಷ್ಟವಾಗಿತ್ತು. ಯಾವುದು ಇನ್ನೂ ವ್ಯಾಖ್ಯಾನಕ್ಕೆ ಒಳಗಾಗಿಲ್ಲವೋ, ಅಪರಿಚಿತವಾಗಿದೆಯೋ ಅದನ್ನು ಎಕ್ಸ್ ಎಂದು ಗುರುತಿಸುವ ಪರಿಪಾಠ ಮೊದಲಿನಿಂದಲೂ ಇತ್ತಾದ್ದರಿಂದ ಹಾಗೆನ್ನಲಾಯಿತಷ್ಟೆ. ಅದು ಪ್ರಸಿದ್ಧವಾಗಿಬಿಟ್ಟಿತು. ಹೀಗಾಗಿ ಅದರ ಮುಂದಿನ ಪೀಳಿಗೆಯೊಂದನ್ನು ಕೆಲವು ವರ್ಷಗಳ ಅವಧಿಯಲ್ಲಿರಿಸಿ ವ್ಯಾಖ್ಯಾನಿಸುವಾಗ ಎಕ್ಸ್ ನಂತರದ ಆಂಗ್ಲ ಅಕ್ಷರ ವೈ ಅನ್ನು ಹೇಳಲಾಯಿತು. ಆದರೆ ಕಾಲಕ್ರಮದಲ್ಲಿ ಇವರು ಮಿಲೆನಿಯಲ್ ಅಂತಲೇ ಹೆಚ್ಚು ಪ್ರಸಿದ್ಧವಾದರು. ಅದರ ನಂತರದ್ದನ್ನು ಗುರುತಿಸುವಾಗ ಅನುಕ್ರಮಣಿಕೆಯ ಕಾರಣಕ್ಕಾಗಿ ಝಡ್ ಆಯ್ದುಕೊಂಡು, ಜನರೇಷನ್ ಝಡ್ ಎನ್ನುವುದೇ, ಜೆನ್ಜೀ ಎಂಬ ಆಡುಮಾತಿಗೆ ಹೊರಳಿತೆಂಬುದನ್ನು ಬಿಟ್ಟರೆ ಈ ನಾಮಕರಣ ಪ್ರಕ್ರಿಯೆಯಲ್ಲಿ ಬೇರೇನೋ ಗಹನ ಅರ್ಥವೇನಿಲ್ಲ. ಶುರುಮಾಡಿದ್ದೇ ಎಕ್ಸ್ ನಿಂದ. ಹೀಗಾಗಿ ಮೂರು ಪೀಳಿಗೆ ಗುರುತಿಸುವಲ್ಲಿ ಝಡ್ ವರೆಗೆ ಬಂದುಬಿಟ್ಟಿತ್ತಾದ್ದರಿಂದ ಮುಂದೇನು ಹೇಳುವುದು? ಗ್ರೀಕ್ ವರ್ಣಮಾಲೆಯ ಮೊದಲಕ್ಷರ ಅಲ್ಫಾ. ಅದನ್ನೇ 2013ರ ನಂತರದ ಪೀಳಿಗೆಯನ್ನು ಸೂಚಿಸುವುದಕ್ಕೆ ಆಯ್ದುಕೊಳ್ಳಲಾಗಿದೆ. ಇದೇ ಟ್ರೆಂಡ್ ಮುಂದುವರಿದರೆ ಮುಂದಿನ ಪೀಳಿಗೆಗಳು ಬೀಟಾ, ಗಾಮಾ, ಡೆಲ್ಟಾ ಹೀಗೆ ನಾಮಕರಣವಾಗುತ್ತಹೋಗಬೇಕು.

Nepal gen Z protest and India's Gen Z MLA maithili thakur
ಎಲೆಕ್ಷನ್ ಗೆಲವಿನ ಕತೆ ಹಾಗಿರಲಿ, ಬಿಹಾರ ಗೆಲ್ಲುವುದು ಯಾವಾಗ ಎಂಬುದೇ ಪ್ರಶ್ನೆ (ತೆರೆದ ಕಿಟಕಿ)

ಜೆನ್ಜಿ ಪದದೊಂದಿಗಿನ ಗ್ರಹಿಕೆಗಳು

ವಿಷಯಜ್ಞಾನದ ಸಲುವಾಗಿ ಮಾಡುವ ವರ್ಗೀಕರಣಗಳಿಗೇನೂ ತಕರಾರಿಲ್ಲ. ಏನಾದರೂ ಹೆಸರಿಡಲಿ, ಅದೂ ಚರ್ಚಿಸಬೇಕಾದ ಸಂಗತಿ ಅಲ್ಲ. ಆದರೆ, ಜೆನ್ಜಿ ವಿಷಯಕ್ಕೆ ಬಂದರೆ ಅದನ್ನು ತುಂಬ ಅತಿಗಳ ನೆಲೆಯಲ್ಲಿ ವಿವರಿಸಲಾಗುತ್ತಿದೆ. ಈ ಕುರಿತಾಗಿಯಷ್ಟೇ ಎಚ್ಚರ ಇರಬೇಕಿರುವುದು.

ಜೆನ್ಜಿ ಎಂದರೆ ಬಂಡಾಯಗಾರರು ಎಂದು ಪ್ರತಿಪಕ್ಷಗಳಲ್ಲಿರುವ ರಾಜಕೀಯ ವರ್ಗವು ತನ್ನ ಹಿತಾಸಕ್ತಿಗನುಗುಣವಾಗಿ ವ್ಯಾಖ್ಯಾನಿಸುತ್ತಿದೆ. ಮೊದಲೇ ಉಲ್ಲೇಖಿಸಿದಂತೆ, ನೇಪಾಳದ ಯುವಕರ ಗಲಭೆ ಚಿತ್ರಗಳನ್ನು ತೋರಿಸಿ ಅದರಲ್ಲೇ ಜೆನ್ಜಿ ವ್ಯಾಖ್ಯಾನ ಕಟ್ಟಲಾಗುತ್ತಿದೆ. ಇನ್ನೊಂದು ಅತಿ ಏನೆಂದರೆ - “ಈ ಜೆನ್ಜಿಗಳಲ್ಲಿ ಯಾವುದರ ಕುರಿತೂ ಆಳ ಗಮನವಿಲ್ಲ. ಎಲ್ಲ ವಿಷಯಗಳ ಬಗ್ಗೆ ಮಾತನಾಡುತ್ತಾರೆ. ಯಾವುದಕ್ಕೂ ತಮ್ಮನ್ನು ಸಂಪೂರ್ಣ ತೆತ್ತುಕೊಳ್ಳುವುದಿಲ್ಲ” ಎನ್ನುವುದು. ಇದನ್ನು ಕೆಲವರು ದೋಷಾರೋಪಣೆ ಧ್ವನಿಯಲ್ಲಿ ಹೇಳಿದರೆ, ಮತ್ತೆ ಕೆಲವರು ಅದನ್ನು ಪ್ರಶಂಸೆಯಾಗಿ ಹೇಳುತ್ತ, ಹೀಗೆ ಯಾವ ಪರಂಪರೆ-ಸಂಪ್ರದಾಯಗಳ ಜತೆ ಸೇರದಿರುವುದೇ ದೊಡ್ಡಸ್ತಿಕೆ ಹಾಗೂ ಜೆನ್ಜಿಗಳು ಇಂಥದೊಂದು ದೊಡ್ಡಸ್ತಿಕೆ ಮೆರೆಯುತ್ತಿದ್ದಾರೆ ಎಂಬಂತೆ ವ್ಯಾಖ್ಯಾನಿಸುತ್ತಿದ್ದಾರೆ.

ಸಮಸ್ಯೆ ಇರುವುದು ಈ ಗ್ರಹಿಕೆಯಲ್ಲಿ. ಯುರೋಪಿನ ಯಾವುದೋ ಚಿಕ್ಕ ದೇಶದಲ್ಲೋ, ನೇಪಾಳದಂಥ ಚಿಕ್ಕ ಭೂವ್ಯಾಪ್ತಿ ದೇಶದಲ್ಲೋ 1997 ಹಾಗೂ 2013ರ ನಡುವೆ ಹುಟ್ಟಿದವರ ವ್ಯಕ್ತಿಗುಣ ಹಾಗೂ ವರ್ತನೆಗಳು ಸರಾಸರಿ ಹೀಗಿರುತ್ತವೆ ಎಂದು ಚೌಕಟ್ಟು ಹಾಕಿಬಿಡಬಹುದೇನೋ. ಆದರೆ, ಯೋಚಿಸಿ ನೋಡಿ. ಭಾರತದಂತಹ ವಿಶಾಲ ದೇಶದಲ್ಲಿ, ಹಲವು ಸಂಸ್ಕೃತಿಗಳ ಪ್ರಭಾವಳಿಗಳ ಮಿಳಿತದ ನಡುವೆ, ಬಿಹಾರದ ನಗರವೊಂದರಲ್ಲಿ ಹುಟ್ಟಿದ ವ್ಯಕ್ತಿಗೂ ಅದೇ ಅವಧಿಯಲ್ಲಿ ಬೆಂಗಳೂರಿನಲ್ಲಿ ಹುಟ್ಟಿದ ವ್ಯಕ್ತಿಗೂ ಹೆಚ್ಚಿನ ಸಂದರ್ಭಗಳಲ್ಲಿ ಭಿನ್ನ ಅನುಭವಗಳಲ್ಲೇ ಜೀವನ ರೂಪುಗೊಂಡು ಅವರವರ ವರ್ತನೆಗಳನ್ನು ರೂಪಿಸಿರುತ್ತದೆ. ಹೀಗಿರುವಾಗ ಜೆನ್ಜಿ ಎಂಬ ಸಮೂಹಕ್ಕೊಂದಿಷ್ಟು ವರ್ತನೆಗಳನ್ನು ಆರೋಪಿಸಿ ಅವರೆಲ್ಲ ಭಾರತದಾದ್ಯಂತ ದಂಗೆ ಏಳುತ್ತಾರೆಂದು ಹೇಳುವುದಾಗಲೀ, ಇಲ್ಲವೇ ಭಾರತದ ಪರಮ ವೈಭವ ಮರಳಿಸಿಬಿಡುತ್ತಾರೆಂದು ಹೇಳುವುದಾಗಲೀ ಸಾಧ್ಯವಿಲ್ಲ. ಬೆಂಗಳೂರಲ್ಲಿ ಹುಟ್ಟಿ ಬೆಳೆದ ಜೆನ್ಜಿಯ ವಿಚಾರಪಾಕಗಳ ನಮೂನೆಯೇ ಬೇರೆ, ರಾಯಚೂರಿನ ಜೆನ್ಜಿ ಮಾದರಿಯೇ ಬೇರೆ. ಜನನ ವರ್ಷದ ಕಾಲಾವಧಿಯೊಂದನ್ನಿರಿಸಿಕೊಂಡು ಆ ಅವಧಿಯ ಎಲ್ಲರ ವರ್ತನೆಗಳನ್ನು ಸಾಮಾನ್ಯೀಕರಿಸಿ ಭಾರತದಲ್ಲಿ ರಾಜಕೀಯ ಸಿದ್ಧಾಂತವನ್ನೋ, ಮಾರ್ಕೆಂಟಿಂಗ್ ಮಾದರಿಯನ್ನೋ ಕಟ್ಟುವುದಕ್ಕೆ ಹೊರಟರೆ ವೈಫಲ್ಯವೇ ಎದುರಾದೀತು.

ಬಿಹಾರದಲ್ಲಿ ಮಿನುಗಿರುವ ಜೆನ್ಜಿ

ನೇಪಾಳದೊಂದಿಗೆ ಗಡಿ ಹಂಚಿಕೊಂಡಿರುವ ಬಿಹಾರದಲ್ಲಿ ಸಹ ಜೆನ್ಜಿಗಳು ಆಡಳಿತದಲ್ಲಿರುವವರ ವಿರುದ್ಧ ಕ್ರುದ್ಧರಾಗಬೇಕು ಎಂಬುದು ರಾಜಕೀಯ ವರ್ಗವೊಂದರ ನಿರೀಕ್ಷೆ ಆಗಿತ್ತು. ಆದರೆ, ಜೆನ್ಜಿ ಸಮೂಹವನ್ನು ಪ್ರತಿನಿಧಿಸುವ ಮೈಥಿಲಿ ಠಾಕೂರ್ ಅಲ್ಲಿ ಅತಿ ಕಿರಿಯ ಶಾಸಕರಾಗಿ ಆಡಳಿತಾರೂಢ ಬಿಜೆಪಿಯಿಂದ ಆಯ್ಕೆಯಾಗಿ ಬಂದಿದ್ದಾರೆ.

ಮೈಥಿಲಿ ಠಾಕೂರ್ ವ್ಯಕ್ತಿತ್ವ ಏನನ್ನು ಪ್ರತಿನಿಧಿಸುತ್ತದೆ? ಆಕೆ ಇವತ್ತಿನ ರಾಜಕಾರಣದ ಭಾಷೆಯಾಗಿರುವ ಸೆಕ್ಯುಲರ್, ಸೋಷಿಯಲ್ ಎಂಜಿನಿಯರಿಂಗ್, ಆಧುನಿಕತೆ ಇಂಥೆಲ್ಲ ಪದಪುಂಜಗಳಲ್ಲಿ ವ್ಯಕ್ತಿತ್ವ ಕಟ್ಟಿಕೊಂಡವರಾ? ಚೆಗವೆರಾ ಟೀ ಶರ್ಟ್ ಹಾಕಿಕೊಂಡು ವ್ಯವಸ್ಥೆಯನ್ನು ಮುರಿದುಕಟ್ಟುತ್ತೇನೆ ಎಂದವರಾ? ಪಕ್ಷದ ಸಂಘಟನಾಶಕ್ತಿ, ಅದರ ನಾಯಕತ್ತ್ವಗಳೆಲ್ಲ ಇವರ ಗೆಲವಿಗೆ ಕಾರಣವೇ ಹೌದಾದರೂ, ಈಕೆಯ ವ್ಯಕ್ತಿತ್ತ್ವ ಎಂದು ನೋಡುವುದಾದರೆ ಅದು ಸನಾತನ ಪ್ರಜ್ಞೆಯ ಮುಂದುವರಿಕೆಯ ಪ್ರತೀಕ. ಆಕೆಯ ಬಾಯಲ್ಲಿರುವುದು ಬಂಡಾಯದ ಮಾತಲ್ಲ, ಭಜನೆ. ತನ್ನ ಗುರುತನ್ನು, ತನ್ನನ್ನು ರೂಪಿಸಿದ ಸಂಪ್ರದಾಯಗಳನ್ನು ಹೆಮ್ಮೆಯಿಂದ ಪ್ರದರ್ಶಿಸುತ್ತಲೇ ಅವುಗಳ ನಡುವೆಯೂ ಆಧುನಿಕರಾಗಿರಬಹುದೆಂಬುದರ ಉದಾಹರಣೆ ಮೈಥಿಲಿಯದ್ದು. ಬ್ರಜ ಭಾಷೆ, ಹಿಂದಿ, ತಮಿಳು ಹೀಗೆ ಯಾವ ಭಾಷೆಯಲ್ಲಿ ದೈವವನ್ನು ಹಾಡಿದರೂ ಅದರಲ್ಲಿರುವ ಭಾವವೇ ಭಾರತವನ್ನು ಬೆಸೆದಿರುವುದು ಎಂಬ ಅರಿವಿನ ಪ್ರತಿನಿಧಿ ಆಕೆ.

ಇವೆಲ್ಲದರ ಅರ್ಥ, ಭಾರತದಲ್ಲಿ ಜೆನ್ಜಿ ಎಂಬುದು ಮೈಥಿಲಿ ಠಾಕೂರ್ ಮಾದರಿಯದ್ದು ಎಂದು ನಿರ್ಧರಿಸಿಬಿಡಬೇಕಾ? ಹಾಗೆ ಮಾಡಿದರೆ ಮತ್ತೊಂದು ಅತಿಗೆ ಹೊರಳಿಕೊಂಡಂತಾಗುತ್ತದೆ. ಭಾರತದ ಜೆನ್ಜಿಗಳೆಲ್ಲ ಮೈಥಿಲಿ ಥರ ಯೋಚಿಸುತ್ತಿದ್ದಾರೆ ಎಂದೂ ಅಲ್ಲ ಮತ್ತು ಮೈಥಿಲಿಗೆ ಮತ ಹಾಕಿದವರೆಲ್ಲ ಜೆನ್ಜೀಗಳೇ ಏನಲ್ಲ. ಆದರೆ, ಈ ಉದಾಹರಣೆ ಏನನ್ನು ಹೇಳಲಿಕ್ಕೆ ಹೊರಟಿದೆ ಎಂದರೆ, ಭಾರತದ ಜೆನ್ಜಿ ಪೀಳಿಗೆ ಎಲ್ಲವಕ್ಕೂ ತೆರೆದುಕೊಂಡಿದೆ. ಈ ಹಂತದಲ್ಲಿ ಯಾವುದು ಅವರ ಮನಸ್ಸುಗಳನ್ನು ಪರಿಣಾಮಕಾರಿಯಾಗಿ ಆವರಿಸುತ್ತದೆಯೋ ಅದನ್ನವರು ಗಟ್ಟಿಯಾಗಿ ಹಿಡಿದುಕೊಳ್ಳಬಲ್ಲರು. ಹಾಗೆ ಅವರಲ್ಲಿ ಸನಾತನವಾದದ್ದನ್ನು ತಾರ್ಕಿಕವಾಗಿ ಹಾಗೂ ಆಕರ್ಷಕವಾಗಿ ತುಂಬುವ ಜವಾಬ್ದಾರಿ ಹಳೆಯ ಪೀಳಿಗೆಗಿದೆ ಅಷ್ಟೆ.

ಮೈಥಿಲಿಗೆ ತನ್ನ ಸಹೋದರರೊಂದಿಗೆ ಭಜನೆ- ದೈವನಾಮಾವಳಿ- ಜಾನಪದಗಳನ್ನು ಹಾಡುವುದು ‘ಓಲ್ಡ್ ಫ್ಯಾಷನ್’ ಎಂದೆನಿಸಲಿಲ್ಲ. ಹಾಗಂತ ಅದೇನೂ ಆಕೆಗೆ ಅನಿವಾರ್ಯದ ಮಾರ್ಗವೂ ಆಗಿರಲಿಲ್ಲ. ತನ್ನನ್ನು ತಾನು ಜಗತ್ತಿನೆದುರು ಪ್ರಸ್ತುತಪಡಿಸಿಕೊಳ್ಳುವ, ಈ ಕಾಲದ ವ್ಯಾವಹಾರಿಕ ಭಾಷೆಯಾಗಿರುವ ಆಂಗ್ಲದಲ್ಲಿ ಸ್ಫುಟವಾಗಿ ಮಾತನಾಡಬಲ್ಲ ಆಕೆಗೆ ಆಧುನಿಕರ ಕಣ್ಣಿಗೆ ‘ಕೂಲ್’ ಎನಿಸಿಕೊಳ್ಳುವ ಇನ್ಯಾವುದೇ ಕೆಲಸ-ಕೌಶಲದಲ್ಲಿ ತೊಡಗಿಸಿಕೊಳ್ಳಬಹುದಿತ್ತು. ಆದರೆ ಈ ಮಾರ್ಗವನ್ನಾಕೆ ಇಷ್ಟಪಟ್ಟೇ ತುಳಿದರು.

Nepal gen Z protest and India's Gen Z MLA maithili thakur
ಅಮೆರಿಕದ ಉಪಾಧ್ಯಕ್ಷ ತನ್ನ ಹೆಂಡತಿ ಕ್ರೈಸ್ತಳಾದರೆ ಚೆಂದ ಎಂದಿರುವುದು ಖಾಸಗಿ ವಿಷಯವಾ? (ತೆರೆದ ಕಿಟಕಿ)

ಭಾರತದ ಜೆನ್ಜೀ ಮನೋಭೂಮಿಕೆ

1997ರ ನಂತರದ ಪೀಳಿಗೆ ಭಾರತದ ಬೆಳವಣಿಗೆ ಗತಿಯನ್ನು ನೋಡಿಕೊಳ್ಳುತ್ತ ಬೆಳೆದಿರುವಂಥದ್ದು. ಸಂಪರ್ಕ ಸಾಧನಗಳ ಮೂಲಕ ಅನೇಕ ವಿಷಯಗಳನ್ನು ಸಹಜವೆಂಬಂತೆ ಸ್ವೀಕರಿಸುತ್ತ ಬಂದಿರುವಂಥದ್ದು. ಹೀಗಾಗಿ ಇನ್ಯಾರನ್ನೋ ನೋಡಿ ಅವರಂತಾಗುವ ಹಪಾಹಪಿ ಭಾರತದ ಮಿಲೆನಿಯಲ್ ಸಮೂಹಕ್ಕೆ ಇದ್ದರೀತಿಯಲ್ಲಿ ಅವರಿಗಿಲ್ಲ. ಉದಾಹರಣೆಗೆ, ಎಂಬತ್ತರ ದಶಕದಲ್ಲಿ ಬೆಳೆದ ಹೆಚ್ಚಿನವರಿಗೆ ವಿದೇಶದ ಆರ್ಥಿಕ ಹಾಗೂ ವೈಜ್ಞಾನಿಕ ಶಕ್ತಿಗಳ ಎದುರು ನಾವೇನೂ ಅಲ್ಲ ಎಂಬ ಭಾವನೆ ಬರುವಂತೆ ಅವತ್ತಿನ ದೇಶದ ಸ್ಥಿತಿ ಇತ್ತು. ಹೀಗಾಗಿ ಆಗಿನವರಿಗೆ ಆಧುನಿಕರಾಗುವುದು ಎಂದರೆ ನಮ್ಮದನ್ನು ನಿರಾಕರಿಸುವುದು ಎನ್ನುವಂತಾಯಿತು. ದೇವಾಲಯಕ್ಕೆ ಹೋಗುವುದೆಂದರೆ ಹಳೆ ಕಾಲದವರಾದಂತೆ, ದೈವ ನಂಬುವುದೆಂದರೆ ಮೂಢರಾದಂತೆ ಎಂಬೆಲ್ಲ ಹೆದರಿಕೆಗಳಿದ್ದವು. ಹಾಗೆಂದು ಅವನ್ನೆಲ್ಲ ಬಿಟ್ಟಿತು ಎಂದೇನಲ್ಲಾವಾದರೂ ಆ ಸಮೂಹಕ್ಕೆ ಅದನ್ನು ತನ್ನ ವೃತ್ತಿ ಜಾಗಗಳಲ್ಲಿ ಬಹುವಾಗಿ ತೋರಿಸಿಕೊಳ್ಳದಂತಿರುವ ಒತ್ತಡವೊಂದಿತ್ತು.

ಈಗಿನವರಿಗೆ ಬೆಳೆಯುವ ಹಂತದಲ್ಲೇ ಯೋಗ, ಇನ್ಯಾವುದೋ ಮೆಟಾಫಿಸಿಕಲ್ ಅನುಭವದ ಬಗೆಗಿನ ಮಾತು, ಭಜನೆಯಂಥ ಪ್ರಕ್ರಿಯೆಗಳು ಕೊಡುವ ಸಾಂಗತ್ಯದ ಭಾವ ಇವೆಲ್ಲವನ್ನೂ ‘ಅನುಭವ’ಪಟ್ಟು ನೋಡೋಣ ಬಿಡು ಎನ್ನುವ ಭಾವನೆ ಇದೆ. ಅವೆಲ್ಲ ಮುಖ್ಯವಾಹಿನಿ ವಿಷಯಗಳೇ ಆಗಿವೆ, ಮುಚ್ಚಿಟ್ಟುಕೊಳ್ಳಬಹುದಾಗಿದ್ದೇನಲ್ಲ. ವೆಸ್ಟರ್ನ್ ಆಗುವುದಾ, ಸಂಪ್ರದಾಯಬದ್ಧರಾಗಿರುವುದಾ ಎಂಬ ಗೊಂದಲ ಅವರಿಗೆ ಕಾಡಿಲ್ಲ. ಅದೂ ನೋಡೋಣ, ಇದೂ ನೋಡೋಣ, ಯಾವುದು ಖುಷಿ ಕೊಡುತ್ತದೋ ಅದನ್ನು ತೆಗೆದುಕೊಂಡರಾಯ್ತು ಎಂಬ ಭಾವವಿದೆ.

ಮತ್ತೆ, ಇವೆಲ್ಲವದರ ಅರ್ಥ ಭಾರತದ ಜೆನ್ಜಿಗಳೆಲ್ಲ ಒಂದು ಗೊಂದಲರಹಿತ, ಸ್ಪಷ್ಟ ಮಾದರಿ ಹೊಂದಿಬಿಟ್ಟಿದ್ದಾರೆ ಎಂಬ ಪ್ರತಿಪಾದನೆ ಖಂಡಿತ ಅಲ್ಲ. ಆದರೆ ಇವರು ರೆಬೆಲ್ ಗಳು, ಹಳೆಯದೆಲ್ಲ ಇವರಿಗೆ ಅಪ್ರಸ್ತುತ, ಕ್ರಾಂತಿಗಾಗಿ ಕಾದಿದ್ದಾರೆ ಎಂಬಂತಹ ಗ್ರಹಿಕೆಗಳಿಗೆ ಮಾತ್ರ ಯಾವ ಆಧಾರವೂ ಇಲ್ಲ. ಉಪನಿಷದ್, ವೇದ, ಭಕ್ತಿ, ಜಾನಪದ, ಪುರಾಣ, ಇತಿಹಾಸ ಹೀಗೆ ಎಲ್ಲ ನಾಗರಿಕತೆಯ ಆಯಾಮಗಳಿಗೂ ಅವರು ಹಿಂದಿನವರಿಗಿಂತ ಹೆಚ್ಚು ತೆರೆದುಕೊಂಡಿದ್ದಾರೆ. ಬುದ್ಧಿಜೀವಿ ಯಾರೋ ಹೇಳಿದ ಮಾತ್ರಕ್ಕೆ ಮಾರ್ಕ್ಸ್, ಚೆಗವೆರಾ ಟಿಶರ್ಟ್ ಹಾಕುವವರು ಇವರಲ್ಲ. ಇವರ ಕುತೂಹಲಕ್ಕೆ ತಕ್ಕ ವಿಷಯ ಹಾಗೂ ವೇದಿಕೆಗಳನ್ನು ಸೃಷ್ಟಿಸಿ ಅವರಿಗೆ ಆಯ್ಕೆಗಳನ್ನು ಕೊಡುವ ಕೆಲಸವಾಗಬೇಕಷ್ಟೆ.

- ಚೈತನ್ಯ ಹೆಗಡೆ

cchegde@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com