
ಅದು ಸ್ಟೆಫಿ ಗ್ರಾಫ್ ಎನ್ನುವ ಮಹಿಳೆ ವಿಶ್ವ ಪ್ರಸಿದ್ಧ ಟೆನಿಸ್ ಆಟಗಾರ್ತಿ ಆಗಿದ್ದ ದಿನಗಳು. ಆಕೆ ತನ್ನ ಉತ್ತುಂಗದ ದಿನಗಳಲ್ಲಿ ಒಂದು ಪಂದ್ಯ ಆಡುತ್ತಿದ್ದ ಸಮಯದಲ್ಲಿ ನೋಡುಗರ ಗುಂಪಿನಿಂದ ಒಂದು ಎತ್ತರದ ಧ್ವನಿಯಲ್ಲಿ ಅಜ್ಞಾತ ವ್ಯಕ್ತಿಯೊಬ್ಬ ' ಸ್ಟೆಫಿ ವಿಲ್ ಯು ಮ್ಯಾರಿ ಮಿ ?' ಎಂದು ಪ್ರಶ್ನಿಸುತ್ತಾನೆ. ಆಗ ಆಕೆ ಅದಕ್ಕೆ ಉತ್ತರಿಸಲು ಕ್ಷಣವೂ ತಡವರಿಸುವುದಿಲ್ಲ. ಆಕೆ ' ಹೌ ಮಚ್ ಮನಿ ಡು ಯು ಹ್ಯಾವ್ ?' ಎಂದು ಮರು ಪ್ರಶ್ನಿಸುತ್ತಾಳೆ. ಈ ಘಟನೆ ಇಂದಿಗೆ ಇತಿಹಾಸ. ಗಮನಿಸಿ ನೋಡಿ ಸ್ಟೆಫಿ ಗ್ರಾಫ್ ಅಂದಿಗೆ ಅತ್ಯಂತ ಯಶಸ್ವಿ ಮಹಿಳೆ. ಹೆಸರು, ಹಣ ಎಲ್ಲವೂ ಆಕೆಯ ಬಳಿ ಬೇಕಾದಷ್ಟಿತ್ತು. ಹೀಗಿದ್ದೂ ಆಕೆ ನಿನ್ನ ಬಳಿ ಎಷ್ಟು ಹಣವಿದೆ ಎಂದು ಕೇಳಿದ್ದರ ಹಿಂದಿನ ಅರ್ಥವೇನು ? ಒಂದಷ್ಟು ಜನ ಅದನ್ನು ತಮಾಷೆಯ ಮಾತುಗಳು ಎಂದರು. ಆದರೆ ಜಗತ್ತಿನ ಕಟು ಸತ್ಯ ಸ್ಟೆಫಿಗೆ ಗೊತ್ತಿತ್ತು. ಆಕೆ ಪ್ರಾಕ್ಟಿಕಲ್ ಆಗಿ ಪ್ರಶ್ನಿಸಿದ್ದಳು.
ಇನ್ನೊಂದು ಇದೆ ರೀತಿಯ ಘಟನೆ. ಸೈಫ್ ಅಲಿ ಖಾನ್ ಮತ್ತು ಆತನ ಮಗಳು ಸಾರ ಆಲಿ ಖಾನ್ ಒಂದು ಇಂಟೆರ್ವ್ಯೂ ನಲ್ಲಿ ಕುಳಿತು ಮಾತಾಡುತ್ತಿರುತ್ತಾರೆ. ಆಗ ಸಾರ ಒಬ್ಬ ವ್ಯಕ್ತಿಯ ಹೆಸರೇಳಿ ನಾನು ಅವನನ್ನು ಮದುವೆಯಾಗಲು ಇಚ್ಛೆ ಪಡುತ್ತೇನೆ ಎನ್ನುತ್ತಾರೆ, ಮುಂದುವರೆದು ಇನ್ನೊಂದು ಹೆಸರೇಳಿ ಆತನನ್ನು ಡೇಟ್ ಮಾಡುವುದಕ್ಕೆ ಇಷ್ಟ ಪಡುತ್ತೇನೆ ಎನ್ನುತ್ತಾರೆ. ಇದನ್ನು ಕೇಳಿದ ಸೈಫ್ ಒಹ್ , ಆತನ ಬಳಿ ಅಷ್ಟೊಂದು ಹಣವಿದೆಯೇ ? ಎಂದು ಪ್ರಶ್ನಿಸುತ್ತಾರೆ. ಈ ಘಟನೆಯಲ್ಲೂ ಗಮನಿಸಬೇಕಾದ್ದು ಅದೇ ವಿಷಯ. ಇವರ ಬಳಿ ಕೂಡ ಹಣಕ್ಕೇನೂ ಕೊರತೆಯಿಲ್ಲ. ಹೀಗಿದ್ದೂ ಕೂಡ ಅವರು ಹಣವಂತರನ್ನು ಬಯಸುತ್ತಾರೆ. ಹೀಗೇಕೆ?
ಅವರನ್ನು ಧನದಾಹಿಗಳು ಎನ್ನುವ ಮುನ್ನ ನಿಮ್ಮನ್ನು ನೀವು ಪ್ರಶ್ನಿಸಿಕೊಂಡು ನೋಡಿ. ನೀವು ಹಣವಿಲ್ಲದ ಒಬ್ಬ ವ್ಯಕ್ತಿಯೊಂದಿಗೆ ನಿಮ್ಮ ಮಗ ಅಥವಾ ಮಗಳ ಮದುವೆಯನ್ನು ಮಾಡುತ್ತೀರಾ ? ಎಲ್ಲರೂ ಅವರವರ ಯೋಗ್ಯತೆಗೆ ತಕ್ಕಂತೆ ಸಮಬಂಧವನ್ನು ಹುಡಕುತ್ತಾರೆ. ನನ್ನ ಸಂಬಂಧಿಕರು ನಾನು ಸದಾ ಹಣದ ಬಗ್ಗೆ ಬರೆಯುತ್ತೇನೆ ಎಂದು ಕೋಪಿಸಿಕೊಳ್ಳುತ್ತಾರೆ. ಜಗತ್ತಿನಲ್ಲಿ ಬೇರೇನೂ ಇಲ್ಲವೇ ಎನ್ನುವ ಮಾತುಗಳು ಕೂಡ ಅವರದು. ಜಗತ್ತಿನಲ್ಲಿ ಬಹಳಷ್ಟು ವಿಷಯಗಳಿವೆ. ಆದರೆ ಎಲ್ಲವೂ ಹಣದೊಂದಿಗೆ ನಿಕಟ ನಂಟು ಹೊಂದಿವೆ ಎಂದರೆ ಅದು ಅವರಿಗೆ ಅರ್ಥವಾಗುವುದಿಲ್ಲ. ನನ್ನ ಬಳಿ ವಿತಂಡವಾದಕ್ಕೆ ಸಮಯವಿಲ್ಲ.
ನೇಪಾಳ ಎನ್ನುವ ದೇಶ ಹತ್ತಿ ಉರಿಯುತ್ತಿದೆ. ಇದಕ್ಕೆ ನಾವು ನೂರಾರು ಕಾರಣಗಳನ್ನು ಕೊಡಬಹುದು. ಆ ದೇಶದಲ್ಲಿ ಭ್ರಷ್ಟಾಚಾರ , ಬಡತನ , ಹದಗೆಟ್ಟ ಆಡಳಿತ ಯಂತ್ರ , ಹೀಗೆ ಒಂದೇ ಎರಡೇ ಕಾರಣಗಳಿಗೆ ಕೊನೆಯಿಲ್ಲ. ನೇಪಾಳದಲ್ಲಿ ದಂಗೆಯಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಜೆನ್ ಝಿ , ಅಂದರೆ ಜನರೇಶನ್ ಝಿ. 1996 ರಿಂದ 2010 ರ ಮಧ್ಯದಲ್ಲಿ ಜನಿಸಿದವರನ್ನು ಜೆನ್ ಝಿ ಎಂದು ಕರೆಯಲಾಗುತ್ತಿದೆ. ಇದ್ದಕ್ಕಿದ್ದ ಹಾಗೆ ಇವರು ದೇಶದ ಆಡಳಿತ ಯಂತ್ರದ ವಿರುದ್ಧ ದಂಗೆ ಏಳಲು ಹೇಗೆ ಸಾಧ್ಯ? ಅವರು ತಮ್ಮ ಮೊಬೈಲ್ ಲೋಕದಲ್ಲಿ ಮಗ್ನರು. ಅವರು ನೈಜ ಜಗತ್ತಿನ ನೈಜ ಸಮಸ್ಯೆಗಳಿಗೆ ಸ್ಪಂದಿಸಲು ಹೇಗೆ ಸಾಧ್ಯ? ಎನ್ನುವುದರ ಹಿಂದಿನ ರಹಸ್ಯ ಅಲ್ಲಿನ ಬೆಳವಣಿಗೆಗಳು ಅವರ ಲೋಕದೊಂದಿಗೆ ನಂಟು ಹೊಂದಿರುವುದಾಗಿದೆ.
ನೇಪಾಳ ನವೆಂಬರ್ 2023 ರಲ್ಲಿ ಪಬ್ಲಿಕ್ ನೋಟೀಸ್ ಮೂಲಕ ಮತ್ತು ಮೆಟಾ ಮುಂತಾದ ಇಪ್ಪತೇಳು ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಗಳಿಗೆ ನೇರವಾಗಿ ಪತ್ರ ಬರೆದು ಎಲ್ಲಾ ಖಾತೆಗಳನ್ನು ನೋಂದಾವಣಿ ಮಾಡುವುದು ಅಂದರೆ ಅವುಗಳನ್ನು ವೆರಿಫೈ ಮಾಡುವಂತೆ ಕೇಳಿಕೊಂಡಿತು. ಸೋಶಿಯಲ್ ಮೀಡಿಯಾದಲ್ಲಿ ಮುಖವಿಲ್ಲದ ಫೇಕ್ ಆಕೌಂಟುಗಳಿಂದ ಆಗುವ ಅನಾಹುತವನ್ನು ತಪ್ಪಿಸಲು ಈ ಕ್ರಮವನ್ನು ಕೈಗೊಂಡಿತು. ಇವರ ಈ ಕ್ರಮವನ್ನು ಮೆಟಾ ಸಹಿತ ಯಾವ ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಗಳು ಕೂಡ ಗಣನೆಗೆ ತೆಗೆದುಕೊಳ್ಳಲಿಲ್ಲ.
ನೇಪಾಳದ ಸುಪ್ರೀಂ ಕೋರ್ಟ್ ಇದನ್ನು ಕಡ್ಡಾಯಗೊಳಿಸಿತು. ಇದನ್ನು ಕೂಡ ಸೋಶಿಯಲ್ ಮೀಡಿಯಾ ಕಂಪನಿಗಳು ಮತ್ತು ಜನ ಸಾಮಾನ್ಯರು ಪರಿಗಣಿಸಲಿಲ್ಲ. ಹೀಗಾಗಿ ನೇಪಾಳ ಸರಕಾರ ಆಗಸ್ಟ್ 28 ರಂದು ಫೇಸ್ಬುಕ್ , ಮೆಸೆಂಜರ್ ,ಇನ್ಸ್ಟಾಗ್ರಾಮ್ ,ಲಿಂಕ್ಡಿನ್ ,ರೆಡ್ಡಿಟ್ , ಥ್ರೆಡ್ಸ್ , ಯೂಟ್ಯೂಬ್, ಸ್ನ್ಯಾಪ್ ಚಾಟ್ , ಕ್ಲಬ್ ಹೌಸ್ ಸೇರಿದಂತೆ ಒಟ್ಟು 27 ಸೋಶಿಯಲ್ ಮೀಡಿಯಾ ಆಪ್ ಗಳನ್ನು ಬ್ಯಾನ್ ಮಾಡುವ ಆದೇಶವನ್ನು ಹೊರಡಿಸುತ್ತದೆ. ಇದು ಸೆಪ್ಟೆಂಬರ್ 4 ರಂದು ಜಾರಿಗೆ ಬಂದಿದೆ. ನೇಪಾಳದಲ್ಲಿ ಈ ಆಪ್ಗಳು ಕೆಲಸ ಮಾಡುವುದಿಲ್ಲ. ನಿಮಗೆಲ್ಲಾ ಗೊತ್ತಿರಲಿ ಕಳೆದ ಒಂದು ವರ್ಷದಿಂದ ಫೇಸ್ಬುಕ್ ಮಾನಿಟೈಸಷನ್ ಅಂದರೆ ಬಳಕೆದಾರರು ತಾವು ಹಾಕುವ ರೀಲ್ಸ್ , ಪೋಸ್ಟ್ಸ್ ಇತ್ಯಾದಿಗಳ ಮೂಲಕ ಹಣವನ್ನು ಗಳಿಸಿಕೊಳ್ಳಬಹುದು ಎನ್ನುವ ಒಂದು ಅವಕಾಶವನ್ನು ಸೃಷ್ಟಿಸಿದೆ. ಅಂದರೆ ಬಳಕೆದಾರರು ಒಳ್ಳೊಳ್ಳೆ ಕಂಟೆಂಟ್ ಸೃಷ್ಟಿಸಿ ಅವುಗಳನ್ನು ತಮ್ಮ ಖಾತೆಯಲ್ಲಿ ಹಾಕಿದರೆ ಅದು ಹೆಚ್ಚು ವೀಕ್ಷಣೆ , ಜನ ಮನ್ನಣೆ ಪಡೆದುಕೊಂಡರೆ ಅದಕ್ಕೆ ತಕ್ಕಂತೆ ಪ್ರತಿ ಪೋಸ್ಟ್ , ಪ್ರತಿ ರೀಲ್ ಗೆ ಇಷ್ಟು ಎಂದು ಹಣವನ್ನು ಸಂದಾಯ ಮಾಡುತ್ತದೆ. ಇನ್ನು ಯೂಟ್ಯೂಬ್ ಬಗ್ಗೆ ಹೇಳುವ ಅವಶ್ಯಕತೆಯಿಲ್ಲ. ಇಲ್ಲಿ ಕೂಡ ಯಾರು ಬೇಕಾದರೂ ತಮ್ಮ ಚಾನಲ್ ತೆಗೆಯುವ ಅವಕಾಶವಿದೆ. ಕಂಟೆಂಟ್ ಕ್ರಿಯೇಟ್ ಮಾಡಿ ಅವುಗಳ ಮೂಲಕ ಬಹಳಷ್ಟು ಹಣವನ್ನು ಇಲ್ಲಿಂದ ಗಳಿಸಿಕೊಳ್ಳಬಹುದು.
ಯಾವಾಗ ಇಂತಹ ಸೋಶಿಯಲ್ ಮೀಡಿಯಾಗಳ ಮೇಲೆ ಸರಕಾರ ಕಡಿವಾಣ ಹಾಕಿತು ಅದು ಈ ನವ ಜನಾಂಗವನ್ನು ಕೆಣಕಿಬಿಟ್ಟಿತು. ದಂಗೆ ಎದ್ದವರೆಲ್ಲರೂ ಇಲ್ಲಿಂದ ಹಣವನ್ನು ಸಂಪಾದಿಸುತ್ತಿದ್ದರು ಎಂದಲ್ಲ. ದಂಗೆ ಎದ್ದವರಲ್ಲಿ ಬೆರಳೆಣಿಕೆಯಷ್ಟು ಜನ ಇದರಿಂದ ಆದಾಯ ಸೃಷ್ಟಿಸಿಕೊಂಡಿರಬಹುದು. ಆದರೆ ಹೆಚ್ಚಿನ ಜನರಿಗೆ ಇದು ತಮ್ಮ ಸ್ವಾತಂತ್ರ್ಯಕ್ಕೆ ಧಕ್ಕೆ ಎಂದು ಭಾವಿಸಿಬಿಟ್ಟರು. ನೇಪಾಳ ಸರಕಾರ ಎಡವಿದ್ದು ಅಲ್ಲಿ. ಇಂದಿನ ಯುವ ಜನತೆ ಊಟ ತಿಂಡಿ ಇಲ್ಲದೆ ಕೂಡ ಒಂದೆರೆಡು ದಿನ ಬದುಕುತ್ತಾರೆ. ಮೊಬೈಲ್ ಮತ್ತು ಸೋಶಿಯಲ್ ಮೀಡಿಯಾ ಇಲ್ಲದೆ ಅವರು ಬದುಕಲು ಸಾಧ್ಯವಿಲ್ಲ ಎನ್ನುವ ಮಟ್ಟಕ್ಕೆ ತಲುಪಿದ್ದಾರೆ. ಅದರ ದಾಸರಾಗಿದ್ದಾರೆ. ಅಲ್ಲದೆ ಲಕ್ಷಾಂತರ ಜನಕ್ಕೆ ಇದು ಆದಾಯದ ಮೂಲ ಕೂಡ ಆಗಿದೆ. ಅವರ ಬುಡಕ್ಕೆ ನೇಪಾಳ ಸರಕಾರ ಕೈ ಇಟ್ಟ ಕಾರಣ ದಂಗೆ ಎದ್ದಿದ್ದಾರೆ. ಯಾವುದು ಈ ಇಂಟರ್ನೆಟ್ ಯುಗದಲ್ಲಿ ಸಾಧ್ಯವಿಲ್ಲ ಎಂದುಕೊಂಡಿದ್ದೇವೋ ಅದು ಇಂಟರ್ನೆಟ್ ಕಾರಣಕ್ಕೆ ಘಟಿಸಿರುವುದು ವಿಪರ್ಯಾಸ.
ನೇಪಾಳದಲ್ಲಿ ಈ ರೀತಿಯ ಅಸ್ಥಿರತೆ ಬರಲು ಇನ್ನೊಂದು ಕಾರಣ ಕೂಡ ಹಣಕ್ಕೆ ಸಂಬಂದಿಸಿದ್ದು. ಆ ದೇಶ ಅತ್ಯಂತ ಬಡತನವನ್ನು ಹೊಂದಿದೆ. ನಾನು ಇಲ್ಲಿಯವರೆಗೆ ನೇಪಾಳಕ್ಕೆ ಹೋಗದೆ ಇರಲು ಪ್ರಮುಖ ಕಾರಣ ಅಲ್ಲಿನ ಜನರ ಬವಣೆ, ಸರಕಾರ ಅವರನ್ನು ನಡೆಸಿಕೊಳ್ಳುವ ರೀತಿ. ಎರಡು ಸಾವಿರದ ಇಸವಿಯಲ್ಲಿ ನಾನಿನ್ನೂ ದುಬೈನಲ್ಲಿದ್ದೆ , ಅಲ್ಲಿ ಅತ್ಯಂತ ಕಡಿಮೆ ಹಣಕ್ಕೆ ದುಡಿಯುವ ಕೆಲಸಗಾರರು ಎಂದರೆ ನೇಪಾಳಿಗಳು ಎನ್ನುವುದು ಎಲ್ಲರಿಗೂ ಗೊತ್ತಿತ್ತು. ನೇಪಾಳಿ ಹೆಣ್ಣುಮಕ್ಕಳ ಕಳ್ಳ ಸಾಕಾಣಿಕೆ , ದಾಸ್ಯ ಇವುಗಳ ಬಗ್ಗೆ ಹೆಚ್ಚು ಬರೆಯಲು ಹೋಗುವುದಿಲ್ಲ. ಇಂದಿಗೂ ಬೆಂಗಳೂರು ಸಹಿತ ಭಾರತದ ಎಲ್ಲಾ ಪ್ರಮುಖ ನಗರಗಳಲ್ಲಿ ಸರ್ವಿಸ್ ಇಂಡಸ್ಟ್ರಿ ತುಂಬಾ ಅತಿ ಅಗ್ಗಕ್ಕೆ ದುಡಿಯುತ್ತಿರುವವರು ಇದೆ ಜನಾಂಗ. ಇವರ ಮೇಲೆ ಆಗುವ ಬೇರೆ ರೀತಿಯ ಅತ್ಯಾಚಾರಗಳ ಬಗ್ಗೆ ಇಲ್ಲಿ ಹೇಳಲು ಹೋಗುವುದಿಲ್ಲ. ಜನ ದಡ್ಡರಲ್ಲ. ನೆನಪಿರಲಿ ಅವರು ನೆಡದಾಡುವ ಟೈಮ್ ಬಾಂಬ್ ಇದ್ದಂತೆ , ಅವರ ಸಹನೆಗೂ ಒಂದು ಮಿತಿಯಿದೆ. ಮಿತಿ ಮೀರಿದ ಭ್ರಷ್ಟಾಚಾರ, ಬಡತನ ಅವರನ್ನು ಹೈರಾಣು ಮಾಡಿತ್ತು. ಅವರು ಒಂದು ಅವಕಾಶಕ್ಕೆ ಕಾಯುತ್ತಿದ್ದರು. ಸಿಕ್ಕ ಅವಕಾಶ ಬಳಸಿಕೊಂಡು ಸ್ಪೋಟವಾಗಿದೆ.
ಇನ್ನೊಂದು ಕಾರಣ ಕೂಡ ಹಣಕ್ಕೆ ಸಂಬಂದಿಸಿದ್ದು , ಜಾಗತಿಕವಾಗಿ ಹಿಡಿತವನ್ನು ಬಿಗಿ ಗೊಳಿಸಿಕೊಳ್ಳಲು , ನಾವೇನು ಮಾಡಬಲ್ಲೆವು , ನಮ್ಮ ಶಕ್ತಿಯೆಷ್ಟು ಎನ್ನುವುದರ ಪ್ರದರ್ಶನ ಮಾಡುವುದು. ಹೀಗೆ ದೇಶಗಳ ಮೇಲೆ ತಮ್ಮ ಹಿಡಿತವನ್ನು ಸಾಧಿಸುವುದಕ್ಕೆ ಡೀಪ್ ಸ್ಟೇಟ್ ಎನ್ನಲಾಗುತ್ತದೆ. ವಾರದ ಹಿಂದೆ ಅಮೇರಿಕಾ ಅಧ್ಯಕ್ಷ ಟ್ರಂಪ್ ಅವರ ಬಿಸಿನೆಸ್ ಸಲಹೆಗಾರ ಪೀಟರ್ ನವಾರೋ ರಷ್ಯಾದಿಂದ ತೈಲ ತರಿಸಿಕೊಂಡು ಭಾರತದ ಬ್ರಾಹ್ಮಣರು ಸಾಹುಕಾರರಾಗುತ್ತಿದ್ದರೆ, ಅವರಿಗೆ ಜನ ಸಾಮಾನ್ಯರ ಹಿತವನ್ನು ಕಾಪಾಡುವುದು ಮುಖ್ಯವಲ್ಲ ಎನ್ನುವ ಮಾತನ್ನು ಆಡಿದ್ದರು. ಅದು ಬಾಯಿ ತಪ್ಪಿ ಆಡಿದ ಮಾತಲ್ಲ. ಅದು ಅವರ ರಣನೀತಿ. ಭಾರತವನ್ನು ಛಿದ್ರ ಮಾಡಲು ಅವರು ಬಳಸಿಕೊಳ್ಳಲು ಬಯಸಿರುವ ಆಯುಧ. ಅದನ್ನು ಅವರು ಜಗತ್ತಿನ ಏಕೈಕ ಹಿಂದೂ ರಾಷ್ಟ್ರ ಎನ್ನುವ ಹೆಗ್ಗಳಿಕೆ ಪಡೆದಿರುವ ನೇಪಾಳಾದ ಮೇಲೆ ಪ್ರಯೋಗ ಮಾಡಿ ನೋಡಿದ್ದಾರೆ. ಅದರಲ್ಲಿ ಗೆದ್ದಿದ್ದಾರೆ. ನೇಪಾಳದ ಅಧಿಕಾರ ಚುಕ್ಕಾಣಿ ಹಿಡಿದವರಲ್ಲಿ ಬಹುತೇಕರು ಬ್ರಾಹ್ಮಣರು. 2021 ರ ಜನಗಣತಿ ಪ್ರಕಾರ ನೇಪಾಳದ ಜನಸಂಖ್ಯೆಯ 12 ಪ್ರತಿಶತ ಜನ ಬ್ರಾಹ್ಮಣರು. ಚಾರಿತ್ರಿಕವಾಗಿ ಕೂಡ ನೇಪಾಳದ ಅಧಿಕಾರ ಇವರ ಕೈಲಿತ್ತು. ಇಂದಿಗೂ ನೇಪಾಳದ ಅಡಿಮಿನಿಸ್ಟ್ರೇಷನ್ ಸರ್ವಿಸಸ್ ಅಂದರೆ ನಮ್ಮ ಐಎಎಸ್ ಮತ್ತಿತರ ಸರಕಾರಿ ಆಯಾಕಟ್ಟಿನ ಹುದ್ದೆಗಳಲ್ಲಿ 39 ಪ್ರತಿಶತ ಅಧಿಕಾರಿಗಳು ಬ್ರಾಹ್ಮಣರು ಎನ್ನುವುದು ಅಂಕಿಅಂಶದಿಂದ ತಿಳಿದು ಬರುತ್ತದೆ. ಈ ಮಾಹಿತಿಯನ್ನು ಬಳಸಿಕೊಂಡು ಡೀಪ್ ಸ್ಟೇಟ್ ಕೆಲಸ ಮಾಡಿದೆ. ನೇಪಾಳ ಹತ್ತಿ ಉರಿದಿದೆ.
ಕೊನೆಮಾತು: ಭಾರತವನ್ನು ಕೂಡ ಇದೆ ರೀತಿಯ ಖೆಡ್ಡಾಗೆ ಕೆಡವಲು ಹುನ್ನಾರ ನಡೆಯುತ್ತಿದೆ. ಆರ್ಯ- ದ್ರಾವಿಡ ಸಿದ್ದಾಂತ ಮತ್ತು ನಿರೀಶ್ವರವಾದವನ್ನು ಮುಂಚೂಣಿಗೆ ತರುವ ಕೆಲಸಗಳನ್ನು ಮುಂದಿನ ದಿನದಲ್ಲಿ ನಾವು ಕಾಣಬಹುದು. ನೆನಪಿರಲಿ ಈ ರೀತಿಯ ಕಲಹಗಳನ್ನು ಸೃಷ್ಟಿಸುವರಿಗೆ ಯಾವ ಪಂಥದವರ ಉನ್ನತಿಯ ಬಗ್ಗೆಯೂ ವಿಶೇಷ ಪ್ರೀತಿ ಇರುವುದಿಲ್ಲ. ಅವರಿಗೇನಿದ್ದರೂ ತಮ್ಮ ಬೇಳೆ ಬೇಯಿಸಿಕೊಳ್ಳುವುದು ಮುಖ್ಯವಾಗುತ್ತದೆ. ಜಗತ್ತಿನ ಮೇಲೆ ನಿಯಂತ್ರಣ ಹೊಂದುವುದು ಅವರ ಗುರಿ. ನಾವು ಅವರು ಸೃಷ್ಟಿಸಿದ ಕಥೆಗಳಿಗೆ ಬಲಿಯಾಗುವುದು ಬೇಡ. ಭಾರತೀಯರು ನಾವೊಂದು ಎನ್ನುವ ಸಿದ್ದಾಂತಕ್ಕೆ ಬದ್ಧರಾಗಿರೋಣ. ಹೀಗಿದ್ದಾಗ ಮುಂದಿನ ಎರಡು ದಶಕದಲ್ಲಿ ಇಂತಹ ಯಾವ ಸಿದ್ಧಾಂತವು ನಮ್ಮನ್ನು ಛಿದ್ರಗಳೊಸಿಲಾಗದ ಭದ್ರ ಪರಿಸ್ಥಿತಿಯಲ್ಲಿ ನಾವಿರುತ್ತೇವೆ.
Advertisement