
ಅರುಣ್ ಇನ್ನು 21 ರ ಹುಡುಗ. ಆದರೆ ಅವನ ಮಾತುಗಳಲ್ಲಿ ಸ್ಪಷ್ಟತೆಯಿದೆ. ಚಿಂತನೆಯಲ್ಲಿ ನಿಖರತೆಯಿದೆ. ಮನಸಿನಲ್ಲಿ ಯಾವುದೇ ದ್ವಂದ್ವವಿಲ್ಲದೆ ಆತ ಹೇಳುತ್ತಾನೆ. ' ಸಾರ್ ನೀವೇ ಹೇಳಿ ಹಣದುಬ್ಬರವನ್ನು ಕೂಡ ಸರಿಗಟ್ಟಲಾಗದ ಉಳಿಕೆಯನ್ನು ಏಕೆ ಮಾಡಬೇಕು? ಉಳಿಕೆ ಎನ್ನುವುದೇ ಹಳೆ ಕಾನ್ಸೆಪ್ಟ್, ಇವತ್ತಿನ ದಿನದಲ್ಲಿ ಉಳಿಕೆಯಿಂದ ನಮ್ಮ ಹಣ ಪ್ರತಿ ದಿನವೂ ಮೌಲ್ಯವನ್ನು ಕಳೆದು ಕೊಳ್ಳುತ್ತಾ ಹೋಗುತ್ತದೆ. ನಷ್ಟವಾಗುವ ಕಡೆ ಹಣವನ್ನು ನಾವೇಕೆ ಉಳಿಸಬೇಕು?'
ನಾನು ತಿಂಗಳಿಗೆ ಐದು ಸಾವಿರ ರೂಪಾಯಿ ಹಣವನ್ನು ಮ್ಯೂಚುಯಲ್ ಫಂಡ್ ನಲ್ಲಿ ಹೂಡಿಕೆ ಮಾಡುತ್ತಾ ಬರುತ್ತಿದ್ದೇನೆ. ಇದೆ ಹಣವನ್ನು ನಾನು ಬ್ಯಾಂಕು ಅಥವಾ ಪೋಸ್ಟ್ ಆಫೀಸ್ನ ರೆಕರಿಂಗ್ ಡೆಪಾಸಿಟ್ ಸ್ಕೀಮ್ ನಲ್ಲಿ ಹಾಕಿದ್ದರೆ ಏನಾಗುತ್ತಿತ್ತು ಎನ್ನುವುದು ನಿಮಗೆ ಗೊತ್ತು ಅಲ್ವಾ? ಎನ್ನುವ ಪ್ರಶ್ನೆಯನ್ನು ಕೂಡ ಹಾಕಿದ.
ಉಳಿಕೆಗೂ, ಹೂಡಿಕೆಗೂ ಇರುವ ವ್ಯತಾಸವದು. ಮ್ಯೂಚುಯಲ್ ಫಂಡ್ ಹೂಡಿಕೆ ಕನಿಷ್ಠ 18 ರಿಂದ20 ಪ್ರತಿಶತ ರಿಟರ್ನ್ಸ್ ನೀಡುತ್ತಿತ್ತು. ಇದು 30 ಆಗುವ ಸಂಭಾವ್ಯತೆಯನ್ನು ತಳ್ಳಿಹಾಕುವಂತಿಲ್ಲ. ಹಾಗೆ ಮಾರುಕಟ್ಟೆ ಕುಸಿತದ ಸಮಯದಲ್ಲೂ 10/12 ಪ್ರತಿಶತ ರಿಟರ್ನ್ಸ್ ಇದು ನೀಡಿದೆ. ಅದೇ ಪೋಸ್ಟ್ ಆಫೀಸ್ ಅಥವಾ ಬ್ಯಾಂಕಿನ ರೆಕರಿಂಗ್ ಡೆಪಾಸಿಟ್ ಮೇಲಿನ ರಿಟರ್ನ್ಸ್ 6.5 ಪ್ರತಿಶತ ನೀಡುತ್ತದೆ. ಹೆಚ್ಚಿನ ಅಪಾಯವಿಲ್ಲದ ಹೂಡಿಕೆಯನ್ನು ಇಂದಿಗೆ ನಾವು ಉಳಿಕೆ ಎಂದು ಹೇಳಬಹುದು.
ಹಿಂದೆ ಸಾಸಿವೆ ಡಬ್ಬಿಯಲ್ಲೋ, ಮೆಣಸಿನಕಾಯಿ ಡಬ್ಬಿಯಲ್ಲೋ ಹಣವನ್ನು ಕಷ್ಟದ ಕಾಲಕ್ಕೆ ಎಂದು ಸಂರಕ್ಷಿಸಿ ಇಡುತ್ತಿದ್ದರು. ಅದು ಉಳಿಕೆ ಎನ್ನುವ ಹೆಸರನ್ನು ಪಡೆದುಕೊಂಡಿತ್ತು. ಅಂದಿನ ದಿನದಲ್ಲಿ ಹಣದುಬ್ಬರ ಇಂದಿನಷ್ಟು ಇರದ ಕಾರಣ ಹಣ ತನ್ನ ಮೌಲ್ಯವನ್ನು ಉಳಿಸಿ ಕೊಂಡಿರುತ್ತಿತ್ತು. ಬದಲಾದ ಕಾಲಘಟ್ಟದಲ್ಲಿ ಉಳಿಸಿದ ಹಣ ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಾ ಹೋಗುತ್ತದೆ. ಇದು ಇಂದಿನ ತಲೆಮಾರಿನ ಹುಡುಗರಿಗೆ ಚೆನ್ನಾಗಿ ಗೊತ್ತಾಗಿದೆ. ಈ ಕಾರಣದಿಂದ ಅವರು ಉಳಿಕೆ ಎಂದರೆ ಮಾರುದೂರ ಹೋಗುತ್ತಾರೆ. ಆದರೆ ಇಂತಹ ಅಪ್ಡೇಟ್ ಆಗಿರುವ, ಹಣಕಾಸು ಸಾಕ್ಷರತೆ ಇರುವ ಜನರ ಸಂಖ್ಯೆ ಬಹಳ ಕಡಿಮೆ. ಈ ಕಾರಣದಿಂದ ಭಾರತದ ಬ್ಯಾಂಕಿಂಗ್ , ಪೋಸ್ಟಲ್ ವ್ಯವಸ್ಥೆ ಇನ್ನೂ ಚಾಲ್ತಿಯಲ್ಲಿವೆ.
ಮೇಲೆ ಹೇಳಿದಂತೆ ಹಣಕಾಸು ಸಾಕ್ಷರತೆ ಇರುವ ಜನರ ಸಂಖ್ಯೆ ಬಹಳ ಕಡಿಮೆ. ಇವರೆಲ್ಲರೂ ಉಳಿಕೆಯ ಸ್ಕೀಮ್ಗಳಿಂದ ದೂರವಾಗಿ ದಶಕಗಳು ಕಳೆದಿವೆ. ಅಂದರೆ ಇನ್ನೂ ಉಳಿಕೆಯಲ್ಲಿ ನಂಬಿಕೆಯಿಟ್ಟ ಜನರಲ್ಲಿ ಕೂಡ ಉಳಿಕೆಯ ಮೇಲಿನ ಆಸಕ್ತಿ ಕಡಿಮೆಯಾಗಿದೆ ಎಂದಾಯ್ತು. ಅದಕ್ಕೆ ಕಾರಣಗಳೇನು? ಎನ್ನುವಾಗ ಕೆಳಗಿನ ಕಾರಣಗಳು ಮುಖ್ಯವಾಗಿ ಮುನ್ನೆಲೆಗೆ ಬಂದವು.
ಆದಾಯದಲ್ಲಿ ಕುಸಿತವಾಗಿದೆ:
ಗಳಿಸುವ ಹಣದಲ್ಲಿ ಕುಸಿತವಾಗಿರುವುದು ಉಳಿಕೆಯಲ್ಲಿ ಕಡಿಮೆಯಾಗಲು ಕಾರಣ ಎನ್ನುವುದು ಪ್ರಮುಖ ಕಾರಣವಾಗಿದೆ. ಕೋವಿಡ್ ನಂತರ ಬದುಕಿನಲ್ಲಿ ಬಹಳ ವ್ಯತ್ಯಾಸ ಉಂಟಾಗಿದೆ. ಕೋವಿಡ್ ನಂತರ 3 ರಿಂದ 4 ವರ್ಷವಾದರೂ ಬಹಳಷ್ಟು ಕುಟುಂಬಗಳು ಅಂದಿನ ಹಣಕಾಸು ಪೆಟ್ಟನ್ನು ಸಂಭಾಳಿಸಲು ಆಗಿಲ್ಲ ಎನ್ನುವುದು ಇದರಿಂದ ವೇದ್ಯವಾಗುತ್ತದೆ. ನಮ್ಮ ಮಟ್ಟಿಗೆ ಬದುಕು ಮುಂದಕ್ಕೆ ಹೋಗಿರುವ ಕಾರಣ ಎಲ್ಲರ ಬದುಕು ಕೂಡ ಮೂವ್ ಆನ್ ಆಗಿದೆ ಎಂದುಕೊಳ್ಳುತ್ತೇವೆ. ಆದರೆ ವಸ್ತು ಸ್ಥಿತಿ ಬೇರೆಯಿದೆ. ಗಳಿಕೆಯಲ್ಲಿ ಕುಸಿತವಾಗಿರುವುದು ಉಳಿಕೆಯ ಸಂಖ್ಯೆಯ ಮೇಲೆ ಬಹಳ ಪರಿಣಾಮ ಬೀರಿದೆ.
ಬೆಲೆಯೇರಿಕೆ ಎನ್ನುವ ಪೆಡಂಭೂತ:
ಜಾಗತಿಕ ಹಣದುಬ್ಬರದಲ್ಲಿ ಏರುಪೇರಾಗಿದೆ. ಜಾಗತಿಕ ಹಣಕಾಸು ವ್ಯವಸ್ಥೆ ಕೂಡ ಸಾಕಷ್ಟು ಬದಲಾವಣೆಗಳಿಗೆ ತುತ್ತಾಗಿದೆ. ಜಗತ್ತು ಮಾದರಿ ಹಣದುಬ್ಬರ ವ್ಯವಸ್ಥೆಯನ್ನ ಹಣೆದುಕೊಂಡಿತ್ತು. ಪಾಂಡೆಮಿಕ್ ನಾವು ಕಟ್ಟಿಕೊಂಡಿದ್ದ ವ್ಯವಸ್ಥೆಯನ್ನ ಛಿದ್ರಗೊಳಿಸಿದೆ. ಜಾಗತಿಕ ಮಟ್ಟದಲ್ಲಿ ಸರಕುಗಳ ದರ ಏಪ್ರಿಲ್ ೨೦೨೦ ರಿಂದ ಇಲ್ಲಿಯವರೆಗೆ 80 ಪ್ರತಿಶತ ಏರಿಕೆಯನ್ನ ಕಂಡಿವೆ. ಇದರ ಪರಿಣಾಮ ಭಾರತದ ಮೇಲೂ ಆಗಿದೆ. ಜಗತ್ತಿನ ಬೇರೆ ದೇಶಗಳಿಗೆ ಹೋಲಿಸಿದರೆ ಒಂದಷ್ಟು ಕಡಿಮೆ ಎನ್ನುವುದನ್ನು ಬಿಟ್ಟರೆ. ಬೆಲೆಯೇರಿಕೆ ಎನ್ನುವುದು ಇಂದು ಎಲ್ಲರಿಗೂ ಅನುಭವಕ್ಕೆ ಬಂದಿದೆ.
ಹತ್ತು ರುಪಾಯಿಗೆ ಸಿಗುತ್ತಿದ್ದ ಕಾಫಿ ಎನ್ನುವ ದಿನಕ್ಕೆ ಐದು ಬಾರಿ ಕುಡಿಯುವ ದ್ರಾವಣ ಕೂಡ 15/20 ರೂಪಾಯಿಯಾಗಿದೆ. ದಿನದಲ್ಲಿ ಐದ್ದರು ಬಾರಿ ಬಳಸುವ ಪದಾರ್ಥದ ವಿಷಯ ಹೀಗೆ ಎಂದ ಮೇಲೆ ಉಳಿದ ವಸ್ತುಗಳ ವಿಷಯವನ್ನು ಚರ್ಚೆ ಮಾಡುವ ಅಗತ್ಯವೇ ಇಲ್ಲ. ಅವುಗಳು ಖಂಡಿತ ಇದಕ್ಕಿಂತ ಹೆಚ್ಚಿನ ಏರಿಕೆಯನ್ನು ಕಂಡಿರುತ್ತದೆ. ಇದರರ್ಥ ಖರ್ಚು ಹೆಚ್ಚಾಯ್ತು. ಗಳಿಕೆಯಲ್ಲಿ ಕುಸಿತವಾಗಿಲ್ಲ ಎನ್ನುವ ಕುಟುಂಬಗಳಲ್ಲಿ ಕೂಡ ಉಳಿಕೆ ಕಡಿಮೆಯಾಗಲು ಹೆಚ್ಚಿದ ಖರ್ಚು ದೇಣಿಗೆ ನೀಡಿದೆ.
ಒಂದೇ ಸಮನೆ ಏರುತ್ತಿರುವ ಶಿಕ್ಷಣ ವೆಚ್ಚ ಕೂಡ ಉಳಿಯೆಯಲ್ಲಿ ಇಳಿಕೆಯಾಗಲು ಕಾರಣವಾಗಿದೆ.
ಕಡಿಮೆಯಾಗದ ತೈಲ ಬೆಲೆ ಚೈನ್ ರಿಯಾಕ್ಷನ್ ಗೆ ದಾರಿ ಮಾಡಿಕೊಡುತ್ತದೆ. ಉಳಿದೆಲ್ಲಾ ಖರ್ಚುಗಳ ಹೆಚ್ಚಳಕ್ಕೆ ಟ್ರಾನ್ಸ್ಪೋರ್ಟ್ ಮೇಲಿನ ಹೆಚ್ಚಿದ ಖರ್ಚು ಕಾರಣವಾಗುತ್ತದೆ.
ಹೆಚ್ಚುತ್ತಿರುವ ಮೆಡಿಕಲ್ ಖರ್ಚು:
ಇವತ್ತಿನ ದಿನದಲ್ಲಿ ಹೆಚ್ಚಾಗಿರುವ ಒತ್ತಡದ ಕಾರಣ ಬಿಪಿ ಮತ್ತು ಶುಗರ್ ಇಲ್ಲದ್ದವರೇ ಇಲ್ಲ ಎನ್ನುವಂತಹ ಸ್ಥಿತಿಗೆ ಬಂದಿದ್ದೇವೆ. ತಿಂಗಳಿಗೆ 3 ಸಾವಿರ ರೂಪಾಯಿ ವ್ಯಕ್ತಿ ಸಾಧಾರಣವಾಗಿ ಮೆಡಿಕಲ್ ಖರ್ಚು ಎಂದು ತೆಗೆದಿಡುವ ಸಮಯದಲ್ಲಿ ನಾವು ವಾಸಿಸುತ್ತಿದ್ದೇವೆ.
ಲೇ ಆಫ್ ಪರ್ವ:
ಕೆಲಸದಿಂದ ತೆಗೆದು ಹಾಕುವುದು ಇಂದು ಅತ್ಯಂತ ಸಾಮಾನ್ಯ ಎನ್ನುವಂತಾಗಿದೆ. ಕಾರ್ಪೊರೇಟ್ ಸಂಸ್ಥೆಗಳು ತಮ್ಮ ಆದಾಯದಲ್ಲಿ ಒಂದಷ್ಟು ಕುಸಿತವಾದರೆ ಅದನ್ನು ಸಹಿಸಿಕೊಳ್ಳುವುದಿಲ್ಲ. ತಕ್ಷಣವೇ ಖರ್ಚು ಕಡಿಮೆ ಮಾಡುವ ಲೆಕ್ಕಾಚಾರಕ್ಕೆ ಅವು ಬೀಳುತ್ತವೆ. ಕೆಲಸದಿಂದ ತೆಗೆಯುವುದು ಬಹಳ ಸುಲಭ ಮಾರ್ಗ ಹೀಗಾಗಿ ಕೆಲಸಗಾರರನ್ನು ಕಡಿತಗೊಳಿಸಿ , ಇರುವ ಕೆಲಸಗಾರರಿಂದ ಹೆಚ್ಚಿನ ಕೆಲಸವನ್ನು ತೆಗೆಯುತ್ತವೆ. ಖರ್ಚು ಕಡಿಮೆಯಾಗಬೇಕು. ಲಾಭದಲ್ಲಿ ಕಡಿಮೆಯಾಗಬಾರದು ಎನ್ನುವ ಕಾರ್ಪೊರೇಟ್ ಮೆಂಟಾಲಿಟಿ ಕೂಡ ಉಳಿಕೆಯ ಕುಸಿತಕ್ಕೆ ಕಾರಣವಾಗಿದೆ.
ಅಸ್ಥಿರ ಸಮಯದಲ್ಲಿ ಉಳಿಕೆಯ ಮೇಲಿನ ನಿಯಮಾವಳಿಗಳನ್ನು ಸಡಿಲಗೊಳಿಸದೆ ಇರುವುದು ಕೂಡ ಒಂದು ಕಾರಣ. ಮೊದಲೇ ಉಳಿಕೆಯ ಮೇಲಿನ ರಿಟರ್ನ್ಸ್ ತುಂಬಾ ಕಡಿಮೆ. ಹಾಗೊಮ್ಮೆ ನಮಗೆ ಹಣದ ಅವಶ್ಯಕತೆ ಬಿದ್ದರೆ ಆಗಾ ಉಳಿಕೆಯ ಹಣವನ್ನು ತೆಗೆಯಲು ಹೋದರೆ ಅದಕ್ಕೂ ಪೆನಾಲ್ಟಿ ಹಾಕುತ್ತಾರೆ. ಇದು ಕೂಡ ಉಳಿಕೆ ಕಡಿಮೆಯಾಗಲು ಒಂದು ಕಾರಣವಾಗಿದೆ.
ಉಳಿಕೆ ಮತ್ತು ಹೂಡಿಕೆ ಎರಡರಲ್ಲೂ ಸಮಾನತೆ ಕಾಯ್ದು ಕೊಳ್ಳುವುದು ಬಹಳ ಮುಖ್ಯ
ಒಂದೇ ಸಮನೆ ಉಳಿಕೆಯಲ್ಲಿ ಕುಸಿತವಾಗುತ್ತಿವುದು ಸಮಾಜದ ಸ್ವಾಸ್ಥ್ಯವನ್ನು ಕದಡುತ್ತದೆ. ಬ್ಯಾಂಕುಗಳಲ್ಲಿ ಲಿಕ್ವಿಡಿಟಿ ಕೊರತೆ ಹೆಚ್ಚಾಗುತ್ತದೆ. ಇದರಿಂದ ಬ್ಯಾಂಕು, ಪೋಸ್ಟ್ ಆಫೀಸ್ ಗಳಲ್ಲಿ ತೊಡಗಿಸಿಕೊಳ್ಳುವ ಜನರ ಸಂಖ್ಯೆ ಕಡಿಮೆಯಾಗುತ್ತಾ ಹೋಗುತ್ತದೆ. ನಿಧಾನವಾಗಿ ಬ್ಯಾಂಕು, ಪೋಸ್ಟ್ ಆಫೀಸಗಳು ಮುಚ್ಚಿ ಹೋಗುತ್ತವೆ. ಬ್ಯಾಂಕು ಇಲ್ಲದೆ ಹೋದರೂ ಬ್ಯಾಂಕಿಂಗ್ ಸೇವೆಗಳು ನಿಲ್ಲುವುದಿಲ್ಲ ಅದನ್ನು ಈಗಾಗಲೇ ಫಿನ್ ಟೆಕ್ ಕಂಪನಿಗಳು ಮಾಡುತ್ತಿವೆ. ಆದರೆ ಬ್ಯಾಂಕಿಂಗ್ ಮತ್ತು ಪೋಸ್ಟ್ ಆಫೀಸ್ ವಲಯದಲ್ಲಿ ಕೆಲಸ ಮಾಡುವ ಬಹಳಷ್ಟು ಜನರ ಬದುಕು ಬದಲಾಗುತ್ತದೆ. ಸಮಾಜದಲ್ಲಿ ಈಕ್ವಿಲಿಬ್ರಿಯಂ ಏರುಪೇರಾಗುತ್ತದೆ. ಅತಿಯಾದರೆ ಅಮೃತವೂ ವಿಷ ಎನ್ನುವಂತೆ ಯಾವುದೂ ಅತಿಯಾಗಬಾರದು.
ಉಳಿಕೆ ಕೇವಲ ಸಮಾಜದ ಉಳಿವಿಗಾಗಿ ಮಾಡಬೇಕು ಎನ್ನುವುದು ಈ ಸಾಲುಗಳ ಅರ್ಥವಲ್ಲ. ನಮ್ಮ ಉಳಿವಿಗೂ ಅದು ಬೇಕು. ಹೂಡಿಕೆ ಎನ್ನುವುದು ನಿಖರವಾದ ರಿಟರ್ನ್ಸ್ ನೀಡುವುದಿಲ್ಲ. ನಾವು ಅಂದುಕೊಂಡದಕ್ಕಿಂತ ಅತಿ ಹೆಚ್ಚು ಅಥವಾ ಅತಿ ಕಡಿಮೆ ಕೊಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಹೀಗಾಗಿ ಉಳಿಕೆ ಮತ್ತು ಹೂಡಿಕೆಯಲ್ಲಿ ಒಂದು ಬ್ಯಾಲೆನ್ಸ್ ಕಂಡುಕೊಳ್ಳುವುದು ಉತ್ತಮ. ಇದರಿಂದ ಸಮಾಜಕ್ಕೂ ವೈಯಕ್ತಿಕವಾಗಿ ನಮಗೂ ಒಳ್ಳೆಯದು.
ಇದರರ್ಥ ಕಾಣದ ನಾಳೆಗೆ ನಾವು ಒಂದಷ್ಟು ಉಳಿಸಬೇಕು ಎನ್ನುವುದಾಗಿದೆ. ಕಾಣದ ನಾಳೆಗಾಗಿ ನಮ್ಮ ಇಂದಿನ ದಿನವನ್ನು ಬಲಿ ಕೊಟ್ಟು ಉಳಿಸಬೇಕು ಎಂದು ಯಾರೂ ಸಲಹೆ ನೀಡುವುದುದಿಲ್ಲ. ಬದಲಿಗೆ ಇಂದು ನಾವು ಖುಷಿಯಾಗಿದ್ದರೆ ನಮ್ಮ ನಾಳೆ ಕೂಡ ಚೆನ್ನಾಗಿರುತ್ತದೆ ಎನ್ನುವುದು ಎಲ್ಲರೂ ಒಪ್ಪುವ ಸಿದ್ದಾಂತ
ಕೊನೆ ಮಾತು:
ಉಳಿಕೆ ಎನ್ನುವುದು ಬದುಕಿಗೆ ಭದ್ರತೆಯನ್ನು ಒದಗಿಸುತ್ತದೆ. ಎಲ್ಲಾ ಹಣವನ್ನೂ ನಾವು ಹೂಡಿಕೆ ಮಾಡುವುದು ಸಾಧುವಲ್ಲ. ನಮ್ಮ ಆದಾಯದ 30 ಪ್ರತಿಶತ ಹಣವನ್ನು ಉಳಿಸಬೇಕು, ಅದರಲ್ಲಿ 30 ಪ್ರತಿಶತ ಹಣವನ್ನು ಮೂಲಭೂತ ಉಳಿಕೆಯ ಸ್ಕೀಮ್ ಗಳಲ್ಲಿ ತೊಡಗಿಸಬೇಕು. ಉಳಿದ 70 ಪ್ರತಿಶತ ಹಣವನ್ನು ಹೂಡಿಕೆ ಮಾಡಬಹುದು. ನಮ್ಮ ಆದಾಯದ ಎಷ್ಟು ಪ್ರತಿಶತ ಹಣವನ್ನು ಉಳಿಸಬೇಕು ಎನ್ನುವುದರ ಬಗ್ಗೆ ತಜ್ಞರಲ್ಲಿ ಭಿನ್ನಾಭಿಪ್ರಾಯಗಳಿವೆ. ಕೆಲವರು 20 ಎಂದರೆ ಕೆಲವರು ೩೦ ಪ್ರತಿಶತ ಎನ್ನುತ್ತಾರೆ. ನನ್ನ 30 ವರ್ಷದ ಹಣಕಾಸು ಬದುಕಿನಲ್ಲಿ ನಾನು ಕಂಡುಕೊಂಡ ಸರಳ ಅಂಶವನ್ನು ನಿಮಗೆ ಹೇಳುತ್ತೇನೆ. ನೀವು 20 ಅಥವಾ 30 ಎನ್ನುವ ಸಂಖ್ಯೆಗೆ ಎಂದಿಗೂ ಗಂಟು ಬೀಳಬೇಡಿ. ನಿಮ್ಮಿಂದ ಎಷ್ಟು ಹೆಚ್ಚು ಸಾಧ್ಯವೋ ಅಷ್ಟು ಉಳಿಸಿ. ಈ ತಿಂಗಳು ೮೦ ಪ್ರತಿಶತ ಉಳಿಕೆ ಸಾಧ್ಯ ಎನ್ನಿಸಿದರೆ ೮೦ ಪ್ರತಿಶತ ಉಳಿಸಿ. 40 ಆದರೆ ಅಷ್ಟು ಸಾಕು 20 ಆದರೆ ಅದು ಕೂಡ ಸರಿ. ಒಟ್ಟಾರೆ ಉಳಿಸಬೇಕು ಎನ್ನುವ ಮನಸ್ಥಿತಿ ಬಹಳ ಮುಖ್ಯ. ಬ್ಯಾಚುಲರ್ ಜೀವನದಲ್ಲಿ ನಿಮಗೆ 90 ಪ್ರತಿಶತ ಉಳಿಸಲು ಸಾಧ್ಯವಾದರೆ ಅತ್ಯುತ್ತಮ. ಇವೆಲ್ಲವೂ ನಾಳೆ ನಿಮ್ಮ ಬದುಕನ್ನು ಅಚ್ಚುಕಟ್ಟಾಗಿ ಪ್ಲಾನ್ ಮಾಡಲು ಸಹಾಯ ಮಾಡುತ್ತವೆ.
Advertisement