ಹೊಸ AI ಜಗತ್ತನ್ನು ರಿಲಯನ್ಸ್ ಭಾರತಕ್ಕೆ ನೀಡಲಿದೆ, ನಾವು ಸಿದ್ಧವಾಗಬೇಕಿದೆ! (ಹಣಕ್ಲಾಸು)

ಮುಂಬರುವ ವರ್ಷಗಳಲ್ಲಿ ಕೈಯಲ್ಲಿ ಫೋನ್ ಇರುವ ಎಲ್ಲಾ ಭಾರತೀಯರೂ ಇದನ್ನು ಉಪಯೋಗಿಸದೆ ಬೇರೆ ದಾರಿಯಿಲ್ಲ ಎನ್ನುವಷ್ಟರ ಮಟ್ಟಿಗೆ ಇದು ಅವರಿಸಿಕೊಳ್ಳಲಿದೆ. ಬದುಕುವ ರೀತಿ ಬದಲಾಗಲಿದೆ.
Reliance Intelligence
ರಿಲಯನ್ಸ್ ಇಂಟಲಿಜೆನ್ಸ್ (ಸಂಗ್ರಹ ಚಿತ್ರ)online desk
Updated on

ಭಾರತ ಹೊಸ ಡಿಜಿಟಲ್ ಕ್ರಾಂತಿಗೆ ಸಜ್ಜಾಗುತ್ತಿದೆ. ಇವತ್ತಿನ ಜಾಗತಿಕ ಆರ್ಟಿಫಿಷಿಯಲ್ ಇಂಟೆಲಿಜೆನ್ಸಿ ಕ್ಷೇತ್ರ ಸ್ಪರ್ಧೆಯಲ್ಲಿ ಉಳಿದುಕೊಳ್ಳುವುದು ಮಾತ್ರವಲ್ಲ ಗ್ಲೋಬಲ್ ಲೀಡರ್ ಆಗಲು ಏನು ಬೇಕು ಅದನ್ನು ಮಾಡುವತ್ತ ಹೆಜ್ಜೆ ಇಡುತ್ತಿದೆ. ಇವತ್ತಿನ ದಿನದಲ್ಲಿ ಇಂತಹ ದೊಡ್ಡ ಕ್ರಾಂತಿ ಆಗಬೇಕೆಂದರೆ ಅದಕ್ಕೆ ಮುಖೇಶ್ ಅಂಬಾನಿ ಎನ್ನುವ ಉದ್ಯಮಿಯ ನಾಯಕತ್ವ ಇರಲೇಬೇಕು. ಆಗಸ್ಟ್ 29 ರಂದು ತನ್ನ ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಜನರಲ್ ಬಾಡಿ ಮೀಟಿಂಗಿನಲ್ಲಿ ಇನ್ನೊಂದು ಸಬ್ಸಿಡರಿ ಸಂಸ್ಥೆಯ ಘೋಷಣೆಯನ್ನು ಮಾಡಿದ್ದಾರೆ. ಅದೇ ರಿಲಯನ್ಸ್ ಇಂಟೆಲಿಜೆನ್ಸ್! ಜಾಗತಿಕ ದೈತ್ಯ ಗೂಗೆಲ್ ಮತ್ತು ಮೆಟಾ ಸಂಸ್ಥೆಗಳೊಂದಿಗೆ ಇದು ಒಪ್ಪಂದವನ್ನು ಕೂಡ ಮಾಡಿಕೊಂಡಿದೆ. ಇದು ಮುಂಬರುವ ವರ್ಷಗಳಲ್ಲಿ ಭಾರತೀಯರ ಮತ್ತು ಜಗತ್ತಿನ ಇತರೆ ಜನರು ಬದುಕುವ ರೀತಿಯನ್ನು ಬದಲಿಸಲಿದೆ.

ಮುಕ್ಕಾಲು ಪಾಲು ಎಲ್ಲಾ ಭಾರತೀಯ ಭಾಷೆಗಳಲ್ಲಿ ಸಹ ಇದನ್ನು ನಾವು ಉಪಯೋಗಿಸಬಹುದಾಗಿದೆ. ಮುಂಬರುವ ವರ್ಷಗಳಲ್ಲಿ ಕೈಯಲ್ಲಿ ಫೋನ್ ಇರುವ ಎಲ್ಲಾ ಭಾರತೀಯರೂ ಇದನ್ನು ಉಪಯೋಗಿಸದೆ ಬೇರೆ ದಾರಿಯಿಲ್ಲ ಎನ್ನುವಷ್ಟರ ಮಟ್ಟಿಗೆ ಇದು ಅವರಿಸಿಕೊಳ್ಳಲಿದೆ. ಬದುಕುವ ರೀತಿ ಬದಲಾಗಲಿದೆ.

ರಿಲಯನ್ಸ್ ಇಂಟೆಲಿಜೆನ್ಸ್ ಒಂದಲ್ಲ ಎರಡಲ್ಲ ಹದಿನಾಲ್ಕು ಎಐ ಅಪ್ಡೇಟ್ ಗಳನ್ನು ಜಗತ್ತಿನ ಮುಂದೆ ತೆರೆದಿಟ್ಟಿದೆ. ಅವುಗಳ ಬಗ್ಗೆ ಒಂದಷ್ಟು ತಿಳಿದುಕೊಳ್ಳುವ ಪ್ರಯತ್ನ ಮಾಡೋಣ.

  • ಜಿಯೋ ಫೋನ್ ಕಾಲ್ಸ್: ಇದು ಯಾವುದೇ ಫೋನಿನಲ್ಲೂ ಕೆಲಸ ಮಾಡುತ್ತೆ. ಸ್ಮಾರ್ಟ್ ಫೋನ್ ಇರಬೇಕು ಎನ್ನುವ ಅವಶ್ಯಕತೆಯಿಲ್ಲ. ಭಾರತದ ಎಲ್ಲಾ ಭಾಷೆಗಳಲ್ಲೂ ಇದು ಇರಲಿದೆ. ಎಲ್ಲಕ್ಕಿಂತ ಮುಖ್ಯವಾಗಿ ಇದಕ್ಕೆ ಯಾವುದೇ ಆಪ್ ಡೌನ್ಲೋಡ್ ಮಾಡಿಕೊಳ್ಳಬೇಕಾದ ಅವಶ್ಯಕತೆ ಇರುವುದಿಲ್ಲ. ರೆಕಾರ್ಡಿಂಗ್ ಮಾಡುವುದು, ಸಾರಾಂಶವನ್ನು ಪಟ್ಟಿ ಮಾಡುವುದು ಮತ್ತು ಅನುವಾದ ಮಾಡುವುದು ಕೂಡ ಮಾಡುತ್ತದೆ. ಅದು ಕೇವಲ ಒಂದು, ಎರಡು, ಮೂರು ಎನ್ನುವ ಸಂಖ್ಯೆಗಳನ್ನು ಒತ್ತುವುದರ ಮೂಲಕ! ಎಲ್ಲಾ ರೀತಿಯ ಗ್ರಾಹಕರೂ ಸುಲಭವಾಗಿ ಬಳಸಬಹುದು.

  • ಜಿಯೋ ಎಐ ಕ್ಲೌಡ್: ಎಲ್ಲಾ ಜಿಯೋ ಬಳಕೆದಾರರಿಗೆ ೧೦೦ ಜಿಬಿ ಸ್ಟೋರೇಜ್ ಪುಕ್ಕಟೆ ಸಿಗಲಿದೆ. ಆಪಲ್, ಗೂಗೆಲ್ ನೀಡುವುದಕ್ಕಿಂತ ಇದು ಬಹಳ ಅಧಿಕವಾಗಿದೆ. ಇದರ ಜೊತೆಗೆ ಡಾಕ್ಯುಮೆಂಟ್ ಸ್ಕ್ಯಾನರ್, ಫೋಟೋ ಸರ್ಚ್, AI ಮೆಮೆಮೊರಿಸ್ ಇತ್ಯಾದಿಗಳು ಕೂಡ ಸಿಗಲಿದೆ.

  • ಜಿಯೋ ಫ್ರೇಮ್ಸ್: ಇದೊಂದು ಕನ್ನಡಕ. ಇದರಲ್ಲಿ ಹೆಚ್ಡಿ ಕ್ಯಾಮೆರಾ ಇರಲಿದ್ದು, ಇದನ್ನು ಧರಿಸಿಕೊಂಡು ನಾವು ಏನನ್ನು ನೋಡುತ್ತಿರುತ್ತೇವೆ ಅದನ್ನು ಲೈವ್ ತೋರಿಸಬಹುದು, ರೆಕಾರ್ಡ್ ಮಾಡಬಹುದು ಮತ್ತು ಇವೆಲ್ಲವನ್ನೂ ಕ್ಲೌಡ್ನಲ್ಲಿ ಶೇಖರಿಸಿಡಬಹುದು.

  • ಜಿಯೋ ಸ್ಟಾರ್: ಯಾರು ಯಾವ ಭಾಷೆಯಲ್ಲಿ ಮಾತನಾಡಿದರು ನಾವು ಅದನ್ನು ನಮಿಗಿಷ್ಟವಾದ ಭಾಷೆಯಲ್ಲಿ ನೋಡಬಹುದು. ಲಿಪ್ ಸಿಂಕಿಂಗ್ ಎಷ್ಟರಮಟ್ಟಿಗೆ ಸರಿಯಾಗಿರುತ್ತದೆ ಎಂದರೆ ಮೆಸ್ಸಿ ಅತಃವ ಅಮಿತಾಬ್ ಕನ್ನಡದಲ್ಲಿ ಮಾತನಾಡುತ್ತಿದ್ದಾರೆ ಎನ್ನುವಷ್ಟು ! ಜಾಹಿರಾತು, ಚಲನಚಿತ್ರ ಮತ್ತು ಕ್ರೀಡೆಗಳ ಕಾಮೆಂಟರಿ ಎಲ್ಲಕ್ಕೂ ಇದನ್ನು ಬಳಸಬಹುದು.

  • ರಿಯಾ: ಇದರಲ್ಲಿ ನಾವು ವಾಯ್ಸ್ ಕಮಾಂಡ್ ಕೊಡಬಹುದು. ನಮಗಿಷ್ಟವಾದ ಏನನ್ನು ಬೇಕಾದರೂ ಹೇಳಿದರೆ ಅದನ್ನು ಕಣ್ಮುಂದೆ ತರುತ್ತದೆ. ಹುಡುಕುವ , ಸ್ಕ್ರೋಲ್ ಮಾಡುವ ಅವಶ್ಯಕೆತೆ ಇರುವುದಿಲ್ಲ. ಉದಾಹರಣೆಗೆ ಶುಭ್ನಮ್ ಗಿಲ್ ಸಿಕ್ಸಸ್ ಎಂದು ಹೇಳಿದರೆ ಸಾಕು ಆತ ಹೊಡೆದಿರುವ ಅಷ್ಟೂ ಸಿಕ್ಸ್ ಗಳನ್ನೂ ಅದು ನಮ್ಮ ಮುಂದೆ ತೆರೆದಿಡುತ್ತದೆ.

  • ಜಿಯೋ ಲೆನ್ಜ್ ಸ್ಪೋರ್ಟ್ಸ್: ಪಂದ್ಯದ ಹೈ ಲೈಟ್ ನಮ್ಮ ಅಭಿರುಚಿಗೆ ತಕ್ಕಂತೆ ಪಡೆದುಕೊಳ್ಳಬಹುದು. ಉದಾಹರಣೆಗೆ ವಿಕೆಟ್ ಪತನ ಮತ್ತು ವಿನ್ನಿಂಗ್ ರನ್ ಎಂದು ಹೇಳಿದರೆ ಎಲ್ಲಾ ವಿಕೆಟ್ ಪತನದ ಚಿತ್ರಣದ ಜೊತೆಗೆ ಗೆಲುವಿನ ರನ್ ಹೊಡೆದದ್ದು ನೋಡಬಹುದು, ಮ್ಯಾಚ್ ಮಧ್ಯದಲ್ಲಿ ಕಾಮೆಂಟರಿ ಬದಲಿಸಬಹುದು. ಇತ್ಯಾದಿ

Reliance Intelligence
ಉಳಿಕೆ ಮತ್ತು ಹೂಡಿಕೆ ನಡುವೆ ಸಮತೋಲನವಿರಲಿ! (ಹಣಕ್ಲಾಸು)
  • AI ಕ್ರಿಯೇಟ್ ಹಬ್: ಸಣ್ಣ ಉದ್ದಿಮೆಗಳವರು ಕೇವಲ ಒಂದು ಫೋಟೋ ಅಪ್ಲೋಡ್ ಮಾಡಿ ಉದ್ಯಮಕ್ಕೆ ಬೇಕಾದ ಪೂರ್ಣ ಪ್ರಮೋಷನ್ ವಿಡಿಯೋ ಪಡೆದುಕೊಳ್ಳಬಹುದು.

  • ಭಾರತ್ ಜಿಪಿಟಿ: ಇದನ್ನು ಐಐಟಿ ಬಾಂಬೆ ಸಹಾಯದಿಂದ ನಿರ್ಮಿಸಲಾಗಿದೆ. ಇದನ್ನು ಹನುಮಾನ್ ಎಂದು ಕರೆಯಲಾಗಿದೆ. ಎಲ್ಲಾ ಭಾರತೀಯ ಭಾಷೆಗಳಲ್ಲಿ ಇದು ಉತ್ತರಿಸಲಿದೆ.

  • ಜಾಮನಗರ್ AI ಡೇಟಾ ಸೆಂಟರ್: ಜಗತ್ತಿನ ಅತಿ ದೊಡ್ಡ ಡೇಟಾ ಸೆಂಟರ್ ಎನ್ನಿಸಿಕೊಳ್ಳಲಿದೆ. ಎರಡೂವರೆ ಲಕ್ಷ ಕೋಟಿ ರೂಪಾಯಿ ಹೂಡಿಕೆಯಾಗಲಿದೆ. ಇದು ಪೂರ್ಣ ಗ್ರೀನ್ ಪವರ್ ನಿಂದ ಕಾರ್ಯ ನಿರ್ವಹಿಸಲಿದೆ. ಭಾರತದ ಎಐ ಸಾಮರ್ಥ್ಯವನ್ನು ಇದು ತ್ರಿಗುಣಗೊಳಿಸಲಿದೆ.

  • ಗೂಗೆಲ್ ಮತ್ತು ಮೆಟಾ ಜೊತೆಗಿನ ಒಪ್ಪಂದಗಳು: ಗೂಗಲ್ ಮತ್ತು ಮೆಟಾ ಭಾರತೀಯ ಉದ್ದಿಮೆದಾರರಿಗೆ ಬೇಕಾದ ಎಐ ಪರಿಕರಗಳನ್ನು ಸೃಷ್ಟಿಸುವಲ್ಲಿ ಕೆಲಸ ಮಾಡುತ್ತಿವೆ.

  • ಓಪನ್ AI ಚಾಟ್ ಜಿಪಿಟಿ: ಚಾಟ್ ಜಿಪಿಟಿ ಯನ್ನು ಇಂದಿನ ದರಕ್ಕಿಂತ ೮೫ ಪ್ರತಿಶತ ಕಡಿಮೆ ಬೆಲೆಗೆ ಎಲ್ಲರಿಗೂ ಎಟುಕುವಂತೆ ಮಾಡುವುದು ಮತ್ತು ಇದನ್ನು ಪೂರ್ಣ ಪ್ರಮಾಣವಾಗಿ ಭಾರತದಲ್ಲೇ ಹೋಸ್ಟ್ ಮಾಡುವ ಉದ್ದೇಶವನ್ನು ಹೊಂದಿದೆ.

  • ಜಿಯೋ ಪಿಸಿ ಪಾಕೆಟ್: ಇದು ಪ್ಯಾಕೆಟ್ ಕ್ಲೌಡ್ ಕಂಪ್ಯೂಟರ್ ಆಗಿರಲಿದೆ. ಇದರ ಸಹಾಯದಿಂದ ಯಾವುದೇ ಸ್ಕ್ರೀನ್ ಕೂಡ ಪೂರ್ಣ ಪ್ರಮಾಣದ ಕಂಪ್ಯೂಟರ್ ಆಗಿ ಬದಲಿಸುತ್ತದೆ. ಯಾವುದೇ ಹಾರ್ಡವೆರ್ ಕಾಸ್ಟ್ ಇರುವುದಿಲ್ಲ, ಮತ್ತು ನಾವು ಬಳಸಿದ ಸಮಯಕ್ಕೆ ಹಣ ಕೊಟ್ಟರೆ ಅಷ್ಟು ಸಾಕು. ಇದು ಹೊಸ ಕ್ರಾಂತಿ ಮಾಡುವುದು ಶತಸಿದ್ಧ. ಇನ್ನು ಮುಂದೆ ಲ್ಯಾಪ್ ಟಾಪ್ ತೆಗೆದುಕೊಂಡು ಹೋಗಬೇಕು ಎನ್ನುವ ಧಾವಂತ ಇರುವುದಿಲ್ಲ.

  • ಜಿಯೋ ಬ್ರೈನ್: ಇದು ಕೂಡ ಉದ್ದಿಮೆಗಳಿಗೆ ಸಹಾಯವನ್ನು ಮಾಡಲಿದೆ. ೫೦೦ ಕ್ಕೂ ಹೆಚ್ಚು ಪರಿಕರಗಳನ್ನು ಹೊಂದಿದೆ. ಟೆಕ್ಸ್ಟ್ ನ್ನು ಇಮೇಜ್ ಆಗಿ ಬದಲಿಸುವುದು, ಮ್ಯೂಸಿಕ್, ವಿಡಿಯೋ, ಫ್ರಾಡ್ ಡಿಟೆಕ್ಷನ್, ಫೋರ್ಕ್ಯಾಸ್ಟಿಂಗ್, ಕೋಡಿಂಗ್ ಟೂಲ್ ಗಳು ಎಲ್ಲವೂ ಇದರಲ್ಲಿ ಲಭ್ಯವಾಗಲಿವೆ.

  • ರೊಬೊಟಿಕ್ಸ್ ಮತ್ತು ಫುಡ್ ಪಾರ್ಕುಗಳು: ಕೃಷಿ ಕೆಲಸಕ್ಕೆ, ಆಸ್ಪತ್ರೆಗಳಲ್ಲಿ ಮತ್ತು ದೊಡ್ಡ ಫ್ಯಾಕ್ಟಾರಿಗಳಲ್ಲಿ ಕೆಲಸ ಮಾಡಲು ರೋಬೋಟ್ಗಳನ್ನು ಸೃಷ್ಟಿಸುವುದು ಮತ್ತು ೪೦ ಸಾವಿರ ಕೋಟಿ ರೂಪಾಯಿ ಬಂಡವಾಳದಲ್ಲಿ AI ಸಹಾಯದಿಂದ ಫುಡ್ ಬಾಕ್ಸ್, ಫುಡ್ ಪಾರ್ಕ್ ಸೃಷ್ಟಿಸುವ ಉದ್ದೇಶವನ್ನು ಸಹ ಹೊಂದಿದೆ.

ಮುಖೇಶ್ ಅಂಬಾನಿ ಭಾರತದ AI ಮೂಲಭೂತ ಸೌಕರ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ದೈತ್ಯ ಹೆಜ್ಜೆಯನ್ನು ಇಟ್ಟಿದ್ದಾರೆ. ಗೂಗೆಲ್, ಮೆಟಾ ಇರಬಹುದು ಮತ್ತಿತರ ಗ್ಲೋಬಲ್ ದೈತ್ಯ ಸಂಸ್ಥೆಗಳು ಟ್ರಂಪ್ ಅವರ ಹೇಳಿಕೆಯನ್ನು ಕೂಡ ಗಣನೆಗೆ ತೆಗೆದುಕೊಳ್ಳದೆ ಭಾರತದಲ್ಲಿ ತಮ್ಮ ನೆಲೆಯನ್ನು ಭದ್ರ ಮಾಡಿಕೊಳ್ಳಲು ಉತ್ಸುಕರಾಗಿರುವುದು ಭಾರತದ ಮಾರುಕಟ್ಟೆಯ ಶಕ್ತಿಯನ್ನು ತೋರಿಸುತ್ತಿದೆ. ಸಣ್ಣ ಪುಟ್ಟ ಉದ್ದಿಮೆದಾರರಿಂದ ಹಿಡಿದು ದೊಡ್ಡ ಉದ್ದಿಮೆದಾರರವರೆಗೆ ವ್ಯಾಪಾರ ಮಾಡುವ ರೀತಿಯನ್ನು ಆರ್ಟಿಫಿಷಿಯಲ್ ಇಂಟೆಲಿಜೆನ್ಸಿ ಬದಲಿಸಲಿದೆ. ದೊಡ್ಡ ಉತ್ಪಾದಕ ಘಟಕಗಳಲ್ಲಿ ಕೆಲಸಕ್ಕೆ ಜನ ಸಿಗುತ್ತಿಲ್ಲ ಎನ್ನುವ ಸಮಸ್ಯೆನನ್ನು ಸಹ ಇದು ತೊಡೆದು ಹಾಕಲಿದೆ. ಇನ್ನು ಭಾರತದ ಕೃಷಿ ಕ್ಷೇತ್ರ ಪೂರ್ಣ ಪ್ರಮಾಣದ ಬದಲಾವಣೆಗೆ ಸಾಕ್ಷಿಯಾಗಲಿದೆ. ಕೃಷಿಯಲ್ಲಿ ಸಹ ರೋಬೋಟ್ ಬಳಕೆ ಮಾಡಲಾಗುತ್ತದೆ. ಇದರ ಜೊತೆಗೆ ಮುಖೇಶ್ ಅಂಬಾನಿಯವರು ಮೈಕ್ರೋಸಾಫ್ಟ್ ಸಂಸ್ಥೆಯ ಜೊತೆಗೂ ಕೃಷಿ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ತರಲು ಯೋಜನೆಯನ್ನು ಮಾಡಿಕೊಂಡಿದ್ದಾರೆ.

ಮುಂಬರುವ ದಿನಗಳಲ್ಲಿ ಜಗತ್ತು ಬದುಕುವ ರೀತಿ, ಚಿಂತಿಸುವ ರೀತಿ ಪೂರ್ಣವಾಗಿ ಬದಲಾಗಲಿದೆ. AI ಜಗತ್ತು ಬದುಕುವ ರೀತಿ ಬದಲಿಸುತ್ತದೆ ಎನ್ನುವುದು ಸತ್ಯ. ಆದರೆ ಇದು ನಮ್ಮ ಶತ್ರು ಎನ್ನುವಂತೆ ನೋಡಿದರೆ ಅದು ಖಂಡಿತ ಶತ್ರುವಾಗಿ ಪರಿಣಮಿಸಲಿದೆ. ಈ ಪರಿಕರಗಳನ್ನು ನಾವು ಸ್ನೇಹಿತರನ್ನಾಗಿ ಬಳಸಿಕೊಂಡರೆ ಇದರಿಂದ ಬಹುದೊಡ್ಡ ಸಾಮ್ರಾಜ್ಯವನ್ನು ಕೂಡ ಕಟ್ಟಬಹುದು. ಈ ಹಿಂದೆ ಉದ್ದಿಮೆ ಕಟ್ಟುವುದು ಎಂದರೆ ಅದಕ್ಕೆ ಒಂದು ಜಾಗ ಬೇಕಾಗಿತ್ತು. ಅದಕ್ಕೆ ಬಾಡಿಗೆ, ವಿದ್ಯುತ್, ನೀರು, ಕಂಪ್ಯೂಟರ್ , ಕೆಲಸಗಾರರು ಹೀಗೆ ಖರ್ಚುಗಳ ಮೇಲೆ ಖರ್ಚು ಇರುತ್ತಿತ್ತು. ಇಷ್ಟೆಲ್ಲಾ ಆದ ಮೇಲೂ ಉದ್ದಿಮೆ ಗೆಲ್ಲುವ ಸಾಧ್ಯತೆ ಕಡಿಮೆಯಿತ್ತು. AI ಸಹಾಯದಿಂದ ನಾವು ಈ ಎಲ್ಲಾ ಖರ್ಚುಗಳನ್ನು ಕಡಿಮೆ ಮಾಡಿಕೊಳ್ಳಬಹುದು ಅಥವಾ ಪೂರ್ಣವಾಗಿ ಇಲ್ಲವಾಗಿಸಿ ಕೊಳ್ಳಬಹುದು. ನಮ್ಮ ಗ್ರಾಹಕರನ್ನು ನೇರವಾಗಿ ತಲುಪಬಹುದು. ಈ ಕಾರಣದಿಂದ ಉದ್ದಿಮೆ ಸೋಲುವ ಸಾಧ್ಯತೆ ಕಡಿಮೆಯಾಗುತ್ತದೆ. ಆಗೊಮ್ಮೆ ಸೋತರು ನಷ್ಟದ ಪ್ರಮಾಣ ಬಹಳಷ್ಟು ಕಡಿಮೆಯಂತೂ ಆಗಿರುತ್ತದೆ.

Reliance Intelligence
GST ತೆರಿಗೆಯಲ್ಲಿ ಸುಧಾರಣೆ; ಗ್ರಾಹಕನಿಗೆ ಜೇಬಿಗೆ ಮನ್ನಣೆ! (ಹಣಕ್ಲಾಸು)

ಕೊನೆಮಾತು: ಜಗತ್ತು ಇನ್ನೈದು ವರ್ಷದಲ್ಲಿ ಪೂರ್ಣವಾಗಿ ಬದಲಾಗಿ ಹೋಗಲಿದೆ. ಇವತ್ತಿನ ಜಗತ್ತು ಚರಿತ್ರೆಯಾಗಿ ಉಳಿದುಕೊಳ್ಳಲಿದೆ. ಜಗತ್ತು ಬದಲಾಗುತ್ತಿರುವ ವೇಗಕ್ಕೆ ನಾವು ಹೊಂದಿಕೊಳ್ಳುವ ಅವಶ್ಯಕತೆ ಹೆಚ್ಚಾಗಿದೆ. ನೆನಪಿರಲಿ ಇಂದಿನ ವೇಗದ ಯುಗದಲ್ಲಿ ಯಾರು ಬೇಗ ಹೊಂದುಕೊಂಡು ಅದನ್ನು ಅಳವಡಿಸಿಕೊಂಡು ನಡೆಯುತ್ತಾರೆ ಅವರು ಗೆಲ್ಲುತ್ತಾರೆ. AI ಬಗ್ಗೆ ಗೊಣಗಾಟ ಮಾಡಿಕೊಂಡು ಕುಳಿತರೆ ಹಿಂದುಳಿಯದೆ ಬೇರೆ ದಾರಿಯಿರುವುದಿಲ್ಲ. ಹೊಸ ಜಗತ್ತನ್ನು ಅಪ್ಪಿಕೊಳ್ಳಲು ಮುಂಚೂಣಿ ಸಂಸ್ಥೆಗಳು ಆಗಲೇ ಹೆಜ್ಜೆ ಇಟ್ಟಿವೆ. ಇನ್ನೇನಿದ್ದರೂ ನಮ್ಮ ಸರದಿ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com