ಸೌದಿ - ಪಾಕಿಸ್ತಾನ ಒಪ್ಪಂದದ ಹಿನ್ನೋಟ: ಭಯ, ಆರ್ಥಿಕತೆ ಮತ್ತು ಮಹತ್ವಾಕಾಂಕ್ಷೆಗಳ ಆಟ (ಜಾಗತಿಕ ಜಗಲಿ)

ಸೌದಿ ಮತ್ತು ಪಾಕಿಸ್ತಾನಗಳ ನಡುವಿನ ಭದ್ರತಾ ಸಂಬಂಧಗಳು ಬಹಳ ಹಳೆಯವಾಗಿವೆ. 1947ರಲ್ಲಿ ಪಾಕಿಸ್ತಾನವನ್ನು ನೂತನ ದೇಶವೆಂದು ಅಧಿಕೃತವಾಗಿ ಗುರುತಿಸಿದ ಆರಂಭಿಕ ದೇಶಗಳಲ್ಲಿ ಸೌದಿ ಅರೇಬಿಯಾವೂ ಒಂದಾಗಿತ್ತು.
Saudi-Pakistan deal (file pic)
ಸೌದಿ- ಪಾಕಿಸ್ತಾನ ಒಪ್ಪಂದ (ಸಾಂಕೇತಿಕ ಚಿತ್ರ)online desk
Updated on

ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಸೌದಿ ಅರೇಬಿಯಾಗೆ ಭೇಟಿ ನೀಡಿರುವ ಸಂದರ್ಭದಲ್ಲಿ, ಪಾಕಿಸ್ತಾನ ಮತ್ತು ಸೌದಿ ಅರೇಬಿಯಾಗಳು ಪರಸ್ಪರ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿವೆ. ಉಭಯ ದೇಶಗಳ ಪೈಕಿ ಯಾವ ದೇಶದ ಮೇಲೆ ದಾಳಿ ನಡೆದರೂ, ಅದನ್ನು ಎರಡೂ ದೇಶಗಳ ಮೇಲಿನ ದಾಳಿ ಎಂದು ಪರಿಗಣಿಸಲಾಗುತ್ತದೆ ಎಂದು ನೂತನ ಒಪ್ಪಂದ ಘೋಷಿಸಿದೆ. ಈ ಕುರಿತು ವರದಿ ಮಾಡಿರುವ ಮಾಧ್ಯಮಗಳು ಪ್ರಸ್ತುತ ಒಪ್ಪಂದ ಜಂಟಿ ರಕ್ಷಣೆಯನ್ನು ಬಲಪಡಿಸಿ, ಉಭಯ ದೇಶಗಳ ನಡುವಿನ ಸುದೀರ್ಘ ಮಿಲಿಟರಿ ಸಹಕಾರವನ್ನು ಔಪಚಾರಿಕಗೊಳಿಸಲಿದೆ ಎಂದಿವೆ.

ಸೌದಿ ಮತ್ತು ಪಾಕಿಸ್ತಾನಗಳ ನಡುವಿನ ಭದ್ರತಾ ಸಂಬಂಧಗಳು ಬಹಳ ಹಳೆಯವಾಗಿವೆ. 1947ರಲ್ಲಿ ಪಾಕಿಸ್ತಾನವನ್ನು ನೂತನ ದೇಶವೆಂದು ಅಧಿಕೃತವಾಗಿ ಗುರುತಿಸಿದ ಆರಂಭಿಕ ದೇಶಗಳಲ್ಲಿ ಸೌದಿ ಅರೇಬಿಯಾವೂ ಒಂದಾಗಿತ್ತು. 1951ರಲ್ಲಿ ಏರ್ಪಟ್ಟ ಸ್ನೇಹ ಒಪ್ಪಂದ ಉಭಯ ದೇಶಗಳನ್ನು ಇನ್ನಷ್ಟು ಹತ್ತಿರ ತಂದಿತು. 1960ರ ದಶಕದ ಬಳಿಕ, ಪಾಕಿಸ್ತಾನ ಸೌದಿ ಅರೇಬಿಯಾಗೆ ತನ್ನ ಸೇನಾ ಪಡೆಗಳನ್ನು ರವಾನಿಸಿ, ಅವರಿಂದ ಸಾವಿರಾರು ಸೌದಿ ಸೇನೆಯ ಅಧಿಕಾರಿಗಳಿಗೆ ತರಬೇತಿ ಒದಗಿಸಿತು.

ರಿಯಾದ್ ಆಗಾಗ್ಗೆ ಇಸ್ಲಾಮಾಬಾದ್‌ಗೆ ತಮ್ಮ ಸಂಬಂಧದ ಭಾಗವಾಗಿ ಸಾಲಗಳು ಮತ್ತು ತೈಲ ಸಾಲವನ್ನು ನೀಡಿ ಆರ್ಥಿಕ ನೆರವನ್ನೂ ನೀಡುತ್ತಾ ಬಂದಿದೆ.

ಆದರೆ, ಪ್ರಾದೇಶಿಕ ಪರಿಸ್ಥಿತಿ ಬಹಳಷ್ಟು ಉದ್ವಿಗ್ನವಾಗಿರುವ ವೇಳೆ ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ ನಡುವೆ ನೂತನ ಒಪ್ಪಂದ ಜಾರಿಗೆ ಬಂದಿದೆ. ಇತ್ತೀಚಿನ ಹಲವಾರು ಗಡಿಯಾಚೆಗಿನ ಕದನಗಳು ಮತ್ತು ಕಡಿಮೆಯಾಗುತ್ತಿರುವ ಅಮೆರಿಕಾದ ಪಾತ್ರಗಳ ಕಾರಣದಿಂದ ಕೊಲ್ಲಿ ರಾಷ್ಟ್ರಗಳು ಸಾಕಷ್ಟು ಆತಂಕಕ್ಕೆ ಒಳಗಾಗಿವೆ.

ಇತ್ತೀಚಿನ ವರ್ಷಗಳಲ್ಲಿ, ಗಾಜಾದಲ್ಲಿನ ಇಸ್ರೇಲ್ ಯುದ್ಧ ಮತ್ತು ಸೆಪ್ಟೆಂಬರ್ 9, 2025ರಂದು ದೋಹಾ ಮೇಲೆ ಇಸ್ರೇಲ್ ನಡೆಸಿರುವ ವಾಯು ದಾಳಿ ಸೇರಿದಂತೆ, ಸ್ಥಳೀಯ ದೇಶಗಳ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಗಳು ಅರಬ್ ದೇಶಗಳನ್ನು ಚಿಂತೆಗೆ ದೂಡಿವೆ.

ಅಮೆರಿಕಾ ಬಲವಾಗಿ ಇಸ್ರೇಲ್ ಬೆಂಬಲಕ್ಕೆ ನಿಲ್ಲುವುದರಿಂದ, ಕೊಲ್ಲಿ ದೇಶಗಳ ನಾಯಕರು ಈಗ ಕೇವಲ ಅಮೆರಿಕಾವನ್ನು ಅವಲಂಬಿಸಿರಲು ಸಿದ್ಧವಿಲ್ಲ.

ಈ ವರ್ಷಾರಂಭದಲ್ಲಿ, ಆಪರೇಷನ್ ಸಿಂದೂರವೆಂಬ ಸಣ್ಣ ಅವಧಿಯ ಕಾರ್ಯಾಚರಣೆಯಲ್ಲಿ ಭಾರತ ಪಾಕಿಸ್ತಾನಿ ಮಿಲಿಟರಿ ನೆಲೆಗಳ ಮೇಲೆ ದಾಳಿ ನಡೆಸಿತು. ಇದರ ಪರಿಣಾಮವಾಗಿ ಪಾಕಿಸ್ತಾನ ಮರಳಿ ಆರ್ಥಿಕ ಬಿಕ್ಕಟ್ಟಿಗೆ ಸಿಲುಕುವ ಅಪಾಯವೂ ತಲೆದೋರಿತ್ತು. ವಿಶ್ಲೇಷಕರ ಪ್ರಕಾರ, ಸೌದಿ - ಪಾಕಿಸ್ತಾನ ಒಪ್ಪಂದ ಈ ಒತ್ತಡಗಳ ಮೇಲೂ ಬೆಳಕು ಚೆಲ್ಲುತ್ತಿದೆ. ಅಂದರೆ, ಪ್ರಸ್ತುತ ಒಪ್ಪಂದ ಕೇವಲ ರಕ್ಷಣೆಗೆ ಸೀಮಿತವಾಗಿಲ್ಲ. ಬದಲಿಗೆ, ಪಾಕಿಸ್ತಾನ ತನ್ನ ಸಂಕಷ್ಟದ ಸಮಯದಲ್ಲಿ ಸೌದಿಯ ಸಹಾಯ ಯಾಚಿಸುತ್ತಿದ್ದು, ಸೌದಿ ಅರೇಬಿಯಾ ಹೆಚ್ಚುತ್ತಿರುವ ಚಕಮಕಿ ಮತ್ತು ಅನಿಶ್ಚಿತತೆಯ ಭೂ ಪ್ರದೇಶದಲ್ಲಿ ತನ್ನ ಸಹಭಾಗಿತ್ವಗಳನ್ನು ಬಲಪಡಿಸಲು ಪ್ರಯತ್ನಿಸುತ್ತಿದೆ.

Saudi-Pakistan deal (file pic)
ಡೊನಾಲ್ಡ್ ಟ್ರಂಪ್ 100% ಸುಂಕಾಘಾತ: ಎದುರಿಸಲು ಶಕ್ತವಾಗಿದೆಯೇ ಭಾರತ? (ಜಾಗತಿಕ ಜಗಲಿ)

ಈ ಹಿನ್ನೆಲೆಯಲ್ಲಿ, ಸೌದಿ - ಪಾಕಿಸ್ತಾನ ಒಪ್ಪಂದದ ಕುರಿತ ಪ್ರಮುಖ ಪ್ರಶ್ನೆಗಳು ಮತ್ತು ಅವುಗಳ ಉತ್ತರವನ್ನು ನಾವು ಗಮನಿಸೋಣ.

1. ಭಾರತ ಈ ಬೆಳವಣಿಗೆಯನ್ನು ನಿರೀಕ್ಷಿಸಿತ್ತೇ? ಭಾರತದ ಪ್ರತಿಕ್ರಿಯೆ ಹೇಗಿತ್ತು?

ಭಾರತೀಯ ಅಧಿಕಾರಿಗಳು ಪ್ರಸ್ತುತ ಒಪ್ಪಂದದ ಕುರಿತು ಸಮತೋಲನದ ಪ್ರತಿಕ್ರಿಯೆ ನೀಡಿದ್ದಾರೆ. ವಿದೇಶಾಂಗ ಸಚಿವಾಲಯ ಈ ಕುರಿತು ಹೇಳಿಕೆ ನೀಡಿದ್ದು, ಸರ್ಕಾರಕ್ಕೆ ಈ ಒಪ್ಪಂದದ ಮಾತುಕತೆ ನಡೆಯುತ್ತಿರುವ ಕುರಿತು ಮೊದಲೇ ತಿಳಿದಿತ್ತು. ಸರ್ಕಾರ ಭಾರತದ ರಾಷ್ಟ್ರೀಯ ಭದ್ರತೆಯ ಮೇಲೆ ಒಪ್ಪಂದ ಬೀರಬಹುದಾದ ಪರಿಣಾಮಗಳ ಕುರಿತು ಅಧ್ಯಯನ ನಡೆಸಲಿದೆ ಎಂದು ಹೇಳಿಕೆ ನೀಡಿದೆ.

ಭಾರತೀಯ ಮಾಧ್ಯಮಗಳು ಸೌದಿ ಅರೇಬಿಯಾ ಒಪ್ಪಂದದ ಮಾತುಕತೆಗಳ ಕುರಿತು ಭಾರತಕ್ಕೆ ಮಾಹಿತಿ ಒದಗಿಸುತ್ತಿತ್ತು ಎಂದಿದ್ದು, ಪಾಕಿಸ್ತಾನ - ಸೌದಿ ಒಪ್ಪಂದ ಭಾರತಕ್ಕೆ ಆಶ್ಚರ್ಯದ ಬೆಳವಣಿಗೆ ಆಗಿರಲಿಲ್ಲ ಎಂದಿವೆ.

ಪ್ರಸ್ತುತ ಒಪ್ಪಂದ ಮಧ್ಯ ಪೂರ್ವದಿಂದ ಅಮೆರಿಕಾ ಹಿಂದೆ ಸರಿಯುತ್ತಿರುವ ಕಾರಣದಿಂದ ಮತ್ತು ಪ್ರಾದೇಶಿಕ ಉದ್ವಿಗ್ನತೆಗಳ ಕಾರಣದಿಂದ ಏರ್ಪಟ್ಟಿದೆಯೇ ಹೊರತು, ಭಾರತಕ್ಕೆ ಅಪಾಯಕಾರಿಯಾಗಿಲ್ಲ ಎಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ. ಪ್ರಾದೇಶಿಕ ಸ್ಥಿರತೆಯ ಮೇಲೆ ಒಪ್ಪಂದದ ಪರಿಣಾಮ ಅಥವಾ ಫಲಿತಾಂಶದ ಕುರಿತು ಇನ್ನಷ್ಟು ಅಧ್ಯಯನಗಳಾಗಬೇಕಿದೆ.

2. ಈ ಒಪ್ಪಂದ ಭದ್ರತಾ ಭರವಸೆಗಳನ್ನು ಒಳಗೊಂಡಿದೆಯೇ?

ಹೌದು ಮತ್ತು ಅಲ್ಲ! ನೂತನ ಒಪ್ಪಂದದ ಮುಖ್ಯ ಅಂಶ ಒಂದು ದೇಶದ ಮೇಲಾದ ದಾಳಿಯನ್ನು ಎರಡೂ ದೇಶಗಳ ಮೇಲಿನ ದಾಳಿ ಎಂದು ಪರಿಗಣಿಸಲಾಗುತ್ತದೆ ಎಂದಿದೆ. ಅಂದರೆ, ಸೌದಿ ಮತ್ತು ಪಾಕಿಸ್ತಾನಗಳ ಪೈಕಿ ಯಾವುದಾದರೂ ಒಂದು ದೇಶದ ಮೇಲೆ ದಾಳಿಯಾದರೆ, ಇನ್ನೊಂದು ದೇಶವೂ ಅದನ್ನು ತನ್ನ ಹೋರಾಟವೂ ಹೌದು ಎಂದು ಪರಿಗಣಿಸಲಿದೆ. ಈ ನಿಟ್ಟಿನಲ್ಲಿ ಇದೊಂದು ಭದ್ರತಾ ಭರವಸೆಯಂತೆ ಕಾರ್ಯಾಚರಿಸುತ್ತದೆ. ಯಾಕೆಂದರೆ, ಉಭಯ ದೇಶಗಳೂ ಶತ್ರುಗಳನ್ನು ತಡೆಯುವ ಅಥವಾ ಹಿಂಜರಿಸುವ ಪ್ರಯತ್ನ ನಡೆಸುವ ಭರವಸೆ ನೀಡಿದ್ದು, ಒಂದು ವೇಳೆ ಆಕ್ರಮಣ ನಡೆದರೆ ಜೊತೆಯಾಗಿ ಪ್ರತಿಕ್ರಿಯೆ ನೀಡುವುದಾಗಿ ಹೇಳಿವೆ.

ತಜ್ಞರು ಈ ಒಪ್ಪಂದ ಬಹುತೇಕ ಸಾಂಕೇತಿಕ ಮತ್ತು ರಾಜಕೀಯ ಮಟ್ಟದ ಒಪ್ಪಂದ ಎಂದು ಅಭಿಪ್ರಾಯ ಪಡುತ್ತಾರೆ. ಒಪ್ಪಂದದಲ್ಲಿನ ಹೇಳಿಕೆಗಳು ಜೊತೆಯಾಗಿ ಕಾರ್ಯಾಚರಿಸುವುದರತ್ತ ಮತ್ತು ಪರಸ್ಪರ ಸಮಾಲೋಚಿಸುವತ್ತ ಬೆಳಕು ಚೆಲ್ಲಿದ್ದು, ಯಾವುದಾದರೂ ಒಂದು ದೇಶದ ಮೇಲೆ ಆಕ್ರಮಣ ನಡೆದರೆ, ಸೌದಿ ಅರೇಬಿಯಾ ಅಥವಾ ಪಾಕಿಸ್ತಾನ ತನ್ನ ಸೇನಾಪಡೆಗಳನ್ನು ಕಳುಹಿಸಬೇಕು ಎಂದು ಸ್ಪಷ್ಟವಾಗಿ ಉಲ್ಲೇಖಿಸಿಲ್ಲ.

ವಿಶ್ಲೇಷಕರ ಪ್ರಕಾರ, ಈ ಒಪ್ಪಂದವೂ ಒಂದು ರೀತಿಯಲ್ಲಿ ನ್ಯಾಟೋದ 5ನೇ ವಿಧಿಯಂತಿದ್ದು, ದಾಳಿ ಉಂಟಾದಾಗ ಸಹಯೋಗಿಗಳು ಪರಸ್ಪರರಿಗೆ ಬೆಂಬಲ ನೀಡುತ್ತಾರೆ. ಆದರೆ, ಯಾವ ರೀತಿಯ ಮಿಲಿಟರಿ ನೆರವು ನೀಡಲಾಗುತ್ತದೆ ಎನ್ನುವುದನ್ನು ಬಳಿಕ ತೀರ್ಮಾನಿಸಲಾಗುತ್ತದೆ. ಇದೇ ರೀತಿ, ಅಮೆರಿಕಾದ ಜೊತೆಗಿನ ಪಾಕಿಸ್ತಾನದ ಹಳೆಯ ರಕ್ಷಣಾ ಒಪ್ಪಂದವೂ ಪ್ರತಿಬಾರಿಯೂ ಸ್ವಯಂಚಾಲಿತವಾಗಿ ಮಿಲಿಟರಿ ನೆರವು ನೀಡುವುದು ಎಂಬ ಅರ್ಥ ಹೊಂದಿರಲಿಲ್ಲ.

ಸರಳವಾಗಿ ಹೇಳುವುದಾದರೆ, ಈ ಒಪ್ಪಂದ ಒಂದು ರೀತಿಯಲ್ಲಿ ಪರಸ್ಪರ ರಕ್ಷಣೆಯ ಔಪಚಾರಿಕ ಭರವಸೆಯಂತಿದ್ದು, ಪ್ರತಿಯೊಂದು ಸಂದರ್ಭದಲ್ಲೂ ತಕ್ಷಣವೇ ಮಿಲಿಟರಿ ನೆರವು ನೀಡುವ ಖಚಿತ ವಾಗ್ದಾನ ನೀಡುವುದಿಲ್ಲ.

3. ಈ ಒಪ್ಪಂದದ ಪ್ರಕಾರ ಪಾಕಿಸ್ತಾನ ಸೌದಿ ಅರೇಬಿಯಾಗೆ ಪರಮಾಣು ರಕ್ಷಣೆ ನೀಡಲಿದೆಯೇ?

ಇಲ್ಲ. ಪ್ರಸ್ತುತ ಒಪ್ಪಂದ ಎಲ್ಲೂ ಅಣ್ವಸ್ತ್ರಗಳ ಕುರಿತು ಉಲ್ಲೇಖಿಸಿಲ್ಲ. ಪಾಕಿಸ್ತಾನ ಸೌದಿ ಅರೇಬಿಯಾಗೆ ಅಣ್ವಸ್ತ್ರದ ನೆರಳು ನೀಡುವ ಮಾತುಗಳು ಹಲವಾರು ದಶಕಗಳಿಂದಲೂ ಇವೆ. ಯಾಕೆಂದರೆ ಸೌದಿ ಅರೇಬಿಯಾ ಇರಾನ್ ಕುರಿತು ಭಯ ಹೊಂದಿದೆ. ಆದರೆ, ಈ ಒಪ್ಪಂದದಲ್ಲಿ ಪರಮಾಣು ರಕ್ಷಣೆಯ ಯಾವ ಅಂಶಗಳೂ ಉಲ್ಲೇಖಗೊಂಡಿಲ್ಲ.

ಸೌದಿ ಅರೇಬಿಯಾ ತಾನು ಪರಮಾಣು ಶಸ್ತ್ರಾಸ್ತ್ರಗಳನ್ನು ಬಯಸುವುದಿಲ್ಲ ಎಂದು ಹಲವಾರು ಬಾರಿ ಸ್ಪಷ್ಟವಾಗಿ ಹೇಳಿದ್ದು, ಪಾಕಿಸ್ತಾನವೂ ತನ್ನ ಅಣ್ವಸ್ತ್ರಗಳು ಭಾರತ ತನ್ನ ಮೇಲೆ ದಾಳಿ ನಡೆಸದಂತೆ ತಡೆಯುವ ಸಲುವಾಗಿ ಇವೆ ಎಂದಿದೆ.

ಹಿರಿಯ ಸೌದಿ ಅಧಿಕಾರಿಯೊಬ್ಬರ ಪ್ರಕಾರ, ನೂತನ ಒಪ್ಪಂದ ಎಲ್ಲ ರೀತಿಯ ಮಿಲಿಟರಿ ಆಯ್ಕೆಗಳನ್ನು ಒಳಗೊಂಡಿದೆ ಎಂದಿದ್ದರೂ, ಅದನ್ನು ಸ್ಪಷ್ಟವಾಗಿ ವಿವರಿಸಿಲ್ಲ. ಕೆಲವರು ಈ ಅಸ್ಪಷ್ಟತೆಯನ್ನು ಪರಮಾಣು ರಕ್ಷಣೆಯ ಸುಳಿವು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಆದರೆ, ಬಹುತೇಕ ತಜ್ಞರು ಪಾಕಿಸ್ತಾನ ಸೌದಿ ಅರೇಬಿಯಾಗೆ ನೇರ ಪರಮಾಣು ಭದ್ರತೆ ಒದಗಿಸಲು ನೆರವಾಗುವಂತೆ ತನ್ನ ಪರಮಾಣು ನೀತಿಗಳನ್ನು ಬದಲಾಯಿಸಿಲ್ಲ ಎಂದಿದ್ದಾರೆ.

ಪಾಕಿಸ್ತಾನದ ಬಳಿ ದೀರ್ಘ ವ್ಯಾಪ್ತಿಯ ಕ್ಷಿಪಣಿಗಳಿದ್ದು, ಅವುಗಳು ಬಹಳಷ್ಟು ದೇಶಗಳ ಮೇಲೆ ದಾಳಿ ನಡೆಸಬಲ್ಲವು. ಆದರೆ, ಒಂದು ವೇಳೆ ಪಾಕಿಸ್ತಾನ ಸೌದಿ ಅರೇಬಿಯಾವನ್ನು ರಕ್ಷಿಸುವ ಸಲುವಾಗಿ ಈ ಕ್ಷಿಪಣಿಗಳನ್ನು ಕ್ಷಿಪಣಿಗಳನ್ನು ಬಳಸಿದರೆ, ಅವೇ ಕ್ಷಿಪಣಿಗಳು ಮತ್ತು ಅವುಗಳನ್ನು ಇಟ್ಟಿರುವ ಸ್ಥಳಗಳು ಶತ್ರುಗಳ ದಾಳಿಗೆ ತುತ್ತಾಗುವ ಸಾಧ್ಯತೆಗಳಿವೆ. ಅಂದರೆ, ಪಾಕಿಸ್ತಾನದ ಮೇಲೂ ನೇರ ದಾಳಿ ನಡೆಯುವ ಅಪಾಯ ಹೆಚ್ಚಾಗಲಿದೆ.

ರಾವಲ್ಪಿಂಡಿ ಹಲವು ಸಂದರ್ಭಗಳಲ್ಲಿ ತನ್ನ ಪರಮಾಣು ಸಾಮರ್ಥ್ಯವನ್ನು ವಿಶಾಲ ಮುಸ್ಲಿಂ 'ಉಮ್ಮಾ'ದ (ಸಮುದಾಯ) ರಕ್ಷಣೆಗೆ ಬಳಸುವ ಮಾತುಗಳನ್ನು ಆಡಿದೆ. ಆದರೆ, ಅದು ಕೇವಲ ಮಾತಿಗೆ ಮಾತ್ರ ಸೀಮಿತವಾಗಿತ್ತೇ ಹೊರತು, ಎಂದಿಗೂ ಅಧಿಕೃತ ಹೇಳಿಕೆಯ ರೂಪದಲ್ಲಿ ಬಂದಿರಲಿಲ್ಲ.

4. ನೂತನ ಒಪ್ಪಂದದ ಪ್ರಮುಖ ಅಂಶಗಳೇನು? ಇದು ಸ್ವಯಂಚಾಲಿತ ಮಿಲಿಟರಿ ಕ್ರಮಕ್ಕೆ ಚಾಲನೆ ನೀಡುತ್ತದೆಯೇ?

ನೂತನ ಒಪ್ಪಂದದ ಪದಗಳು ಅತ್ಯಂತ ಸಾಮಾನ್ಯವಾಗಿವೆ. ಪಾಕಿಸ್ತಾನಿ ವಿದೇಶಾಂಗ ಸಚಿವಾಲಯದ ಪ್ರಕಾರ, ಈ ಒಪ್ಪಂದ ರಕ್ಷಣಾ ಸಹಕಾರವನ್ನು ವೃದ್ಧಿಸುವ ಮತ್ತು ಉಭಯ ದೇಶಗಳನ್ನು ಯಾವುದೇ ದಾಳಿಯ ವಿರುದ್ಧ ಒಂದಾಗಿಸುವ ಉದ್ದೇಶ ಹೊಂದಿದೆ. ಎರಡು ದೇಶಗಳ ಪೈಕಿ ಯಾವುದರ ಮೇಲೆ ದಾಳಿಯಾದರೂ, ಅದನ್ನು ಎರಡೂ ದೇಶಗಳ ಮೇಲಿನ ದಾಳಿ ಎಂದು ಪರಿಗಣಿಸಬೇಕು ಎಂದು ಒಪ್ಪಂದ ಹೇಳಿದೆ.

ಹಾಗೆಂದು ಒಪ್ಪಂದ ಯಾವುದೇ ಸ್ಪಷ್ಟವಾದ ಮಿಲಿಟರಿ ಕ್ರಮಗಳನ್ನು ಉಲ್ಲೇಖಿಸಿಲ್ಲ. ಇದು ಯಾವುದಾದರೂ ಒಂದು ದೇಶದ ಮೇಲೆ ದಾಳಿಯಾದರೆ, ಎರಡು ದೇಶಗಳೂ ಮಾತುಕತೆ ನಡೆಸಿ, ಜೊತೆಯಾಗಿ ಏನು ಮಾಡಬಹುದು ಎಂದು ನಿರ್ಧರಿಸಬೇಕು ಎಂದಿದೆ. ಒಂದರ ಮೇಲೆ ಆಕ್ರಮಣವಾದರೆ, ಇನ್ನೊಂದು ದೇಶ ತಕ್ಷಣವೇ ತನ್ನ ಸೇನಾಪಡೆಗಳನ್ನು ಕಳುಹಿಸಬೇಕು ಎಂದು ಈ ಒಪ್ಪಂದ ಎಲ್ಲೂ ನಿರ್ದೇಶಿಸಿಲ್ಲ.

ರಕ್ಷಣಾ ತಜ್ಞರ ಪ್ರಕಾರ, ಶೀತಲ ಸಮರದ ಸಂದರ್ಭದಲ್ಲಿ ಪಾಕಿಸ್ತಾನ ರಕ್ಷಣಾ ಒಪ್ಪಂದಗಳನ್ನು ಹೊಂದಿದ್ದರೂ, ಅದರ ಮಿತ್ರ ದೇಶಗಳು ಯಾವಾಗಲೂ ಅದಕ್ಕೆ ತಕ್ಷಣದ ಸಹಾಯ ಒದಗಿಸಿರಲಿಲ್ಲ. ಪಾಕಿಸ್ತಾನಕ್ಕೆ ನೆರವಾಗುವ ಮುನ್ನ, ಮಿತ್ರ ರಾಷ್ಟ್ರಗಳು ಮೊದಲು ಪರಿಸ್ಥಿತಿಯನ್ನು ಸರಿಯಾಗಿ ಅವಲೋಕಿಸುತ್ತಿದ್ದವು.

ಇದೇ ರೀತಿ, ನೂತನ ಒಪ್ಪಂದವೂ ಉಭಯ ದೇಶಗಳು ಭದ್ರತೆಗಾಗಿ ಜೊತೆಯಾಗಿರಬೇಕು ಎಂದಿದ್ದರೂ, ಒಂದು ವೇಳೆ ಯುದ್ಧ ನಡೆದರೆ ಸೈನಿಕರನ್ನು ಕಳುಹಿಸಬೇಕೇ ಬೇಡವೇ ಎನ್ನುವುದು ಉಭಯ ದೇಶಗಳೂ ಏನು ನಿರ್ಧರಿಸುತ್ತವೆ ಎನ್ನುವುದರ ಮೇಲೆ ಅವಲಂಬಿತವಾಗಿದೆ.

ತಜ್ಞರ ಪ್ರಕಾರ, ಇಂತಹ ಪರಿಸ್ಥಿತಿ ಎದುರಾದರೆ ಪಾಕಿಸ್ತಾನಕ್ಕೋಸ್ಕರ ಭಾರತದ ವಿರುದ್ಧ ಯುದ್ಧ ಮಾಡುವುದನ್ನು ಸೌದಿ ಅರೇಬಿಯಾ ತಪ್ಪಿಸಲು ಪ್ರಯತ್ನ ನಡೆಸಲಿದೆ. ಯಾಕೆಂದರೆ, ಭಾರತದ ಮೇಲೆ ಯುದ್ಧಕ್ಕಿಳಿದರೆ ಸೌದಿ ಅರೇಬಿಯಾ ನೇರವಾಗಿ ಭಾರತದ ದಾಳಿಗೆ ತುತ್ತಾಗುವ ಅಪಾಯವಿದೆ.

Saudi-Pakistan deal (file pic)
ರಾಜವಂಶದ ಕರಾಳ ಇತಿಹಾಸ, ಜನರ ಆಕ್ರೋಶ: ನೇಪಾಳದ ರಾಜಕಾರಣವನ್ನು ಇಂದಿಗೂ ಕಾಡುತ್ತಿರುವ ರಾಜಪ್ರಭುತ್ವದ ದುರಂತ (ಜಾಗತಿಕ ಜಗಲಿ)

5. ಸೌದಿ ಅರೇಬಿಯಾ ಪಾಕಿಸ್ತಾನಕ್ಕೋಸ್ಕರ ಭಾರತದೊಡನೆ ಯುದ್ಧ ಮಾಡದಿದ್ದರೆ, ಪಾಕಿಸ್ತಾನ ಏಕೆ ಒಪ್ಪಂದಕ್ಕೆ ಸಹಿ ಹಾಕಲು ಒಪ್ಪಿತು?

ಇದಕ್ಕೆ ಎರಡು ಪ್ರಮುಖ ಕಾರಣಗಳಿವೆ. ಮೊದಲನೆಯದಾಗಿ, ಪಾಕಿಸ್ತಾನ ಹಣಕ್ಕಾಗಿ ಸೌದಿ ಅರೇಬಿಯಾದ ಮೇಲೆ ಅಪಾರ ಅವಲಂಬನೆ ಹೊಂದಿದೆ. ರಿಯಾದ್ ಪಾಕಿಸ್ತಾನಕ್ಕೆ ಸಾಕಷ್ಟು ಸಾಲ ನೀಡಿದೆ, ಸಾಲದಲ್ಲಿ ತೈಲ ಒದಗಿಸಿದೆ, ಮತ್ತು ಪಾಕಿಸ್ತಾನದ ದುರ್ಬಲ ಆರ್ಥಿಕತೆಯನ್ನು ರಕ್ಷಿಸಲು ಸಾಕಷ್ಟು ಹೂಡಿಕೆ ಮಾಡಿದೆ. ಈಗ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಪಾಕಿಸ್ತಾನ ತಾನು ನಿಷ್ಠಾವಂತ ಸಹಯೋಗಿ ಎಂದು ಸಾಬೀತುಪಡಿಸಿದ್ದು, ಸೌದಿ ಅರೇಬಿಯಾದ ಮನ ಗೆದ್ದು, ಇನ್ನಷ್ಟು ಹಣಕಾಸಿನ ನೆರವು ಸಂಪಾದಿಸುವ ಉದ್ದೇಶ ಹೊಂದಿದೆ.

ಎರಡನೆಯದಾಗಿ, ಪಾಕಿಸ್ತಾನದ ಮಿಲಿಟರಿ (ರಾವಲ್ಪಿಂಡಿ) ಸುದೀರ್ಘ ಸಮಯದಿಂದಲೂ ಇಸ್ಲಾಮಿಕ್ ನ್ಯಾಟೋ ರೀತಿಯಲ್ಲಿ ಇಸ್ಲಾಮಿಕ್ ಜಗತ್ತಿನ ನೇತೃತ್ವ ವಹಿಸಬೇಕೆಂದು ಕನಸು ಕಾಣುತ್ತಿದೆ. ಪಾಕಿಸ್ತಾನ ತನ್ನ ಪರಮಾಣು ಶಸ್ತ್ರಾಸ್ತ್ರಗಳನ್ನು ತನ್ನ ಪ್ರಮುಖ ಶಕ್ತಿಯಾಗಿ ಪರಿಗಣಿಸಿದೆ. ಸೌದಿಯ ಜೊತೆಗಿನ ಒಪ್ಪಂದ ಪಾಕಿಸ್ತಾನಕ್ಕೆ ಈ ಕನಸನ್ನು ಕನಿಷ್ಠ ಕಾಗದದಲ್ಲಾದರೂ ಜೀವಂತವಾಗಿ ಇಡಲು ನೆರವಾಗುತ್ತದೆ. ಆದರೆ, ಅರಬ್ ರಾಷ್ಟ್ರಗಳು ಪಾಕಿಸ್ತಾನದ ಕನಸಿಗೆ ನಿಜಕ್ಕೂ ಬೆಂಬಲ ನೀಡುವುದಿಲ್ಲ. ವಾಸ್ತವವಾಗಿ, ಈ ಒಪ್ಪಂದ ಪಾಕಿಸ್ತಾನಕ್ಕೆ ಬರಹದಲ್ಲಿ ಒಂದಷ್ಟು ಗೌರವ ನೀಡುತ್ತದಾದರೂ, ಇದರಿಂದ ಪ್ರಾಯೋಗಿಕವಾಗಿ ಹೇಳಿಕೊಳ್ಳುವ ಬದಲಾವಣೆಗಳು ಕಂಡುಬರುವುದಿಲ್ಲ.

6. ಈ ಸಮಯದಲ್ಲೇ ಏಕೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ? ಇದು ಕತಾರ್ ಮೇಲಿನ ಇಸ್ರೇಲ್ ದಾಳಿಗೆ ಪ್ರತಿಕ್ರಿಯೆಯೇ?

ಅಧಿಕಾರಿಗಳ ಪ್ರಕಾರ, ಈ ಒಪ್ಪಂದ ಏನೂ ತಕ್ಷಣದ ಪ್ರತಿಕ್ರಿಯೆಯಲ್ಲ. ಈ ಒಪ್ಪಂದದ ಕುರಿತು ಹಲವಾರು ವರ್ಷಗಳಿಂದ ಯೋಚಿಸುತ್ತಾ, ಸಮಾಲೋಚನೆ ನಡೆಸಲಾಗಿತ್ತು. ಇದನ್ನು ಇಸ್ರೇಲ್ ಅಥವಾ ಇತ್ತೀಚಿನ ಬೆಳವಣಿಗೆಗಳ ಕಾರಣದಿಂದಾಗಿ ರೂಪಿಸಲಾಗಿಲ್ಲ. ಆದರೆ, ಒಪ್ಪಂದಕ್ಕೆ ಈಗ ಸಹಿ ಹಾಕಿರುವುದು ಇದು ಇತ್ತೀಚಿನ ಉದ್ವಿಗ್ನತೆಗಳಿಗೆ ಸಂಬಂಧಿಸಿದೆ ಎನ್ನುವುದನ್ನು ಸ್ಪಷ್ಟಪಡಿಸಿದೆ.

ಇಸ್ರೇಲ್ ಸೆಪ್ಟೆಂಬರ್ 9ರಂದು ದೋಹಾ ಮೇಲೆ ದಾಳಿ ನಡೆಸಿ, ಹಮಾಸ್ ಮುಖಂಡರನ್ನು ಕೊಂದು, ಅರಬ್ ಜಗತ್ತಿಗೆ ಆಘಾತ ನೀಡಿದ ಕೆಲವೇ ದಿನಗಳಲ್ಲಿ ನೂತನ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಗಾಜಾ ಮತ್ತು ಇತರ ಪ್ರದೇಶಗಳಲ್ಲಿ ಯುದ್ಧ ನಡೆಸುವುದರ ಜೊತೆಗೆ, ಅಮೆರಿಕಾದ ಬೆಂಬಲ ಇಲ್ಲದೆಯೂ ತಮ್ಮ ಭದ್ರತೆಯನ್ನು ಬಲಪಡಿಸುವತ್ತ ಕೊಲ್ಲಿ ರಾಷ್ಟ್ರಗಳು ಗಮನ ಹರಿಸುವಂತಾಗಿದೆ. ಕೆಲವು ತಜ್ಞರ ಪ್ರಕಾರ, ಕತಾರ್ ಮೇಲಿನ ದಾಳಿ ಒಪ್ಪಂದ ಇನ್ನಷ್ಟು ತುರ್ತಾಗಿ ಜಾರಿಗೆ ಬರುವಂತೆ ಮಾಡಿದೆ.

ತಜ್ಞರ ಪ್ರಕಾರ, ಇಂತಹ ಒಪ್ಪಂದಗಳನ್ನು ರೂಪಿಸಲು ಹಲವು ತಿಂಗಳುಗಳ ಕಾಲಾವಧಿ ಬೇಕಾಗುತ್ತದೆ. ಆದರೆ, ಇತ್ತೀಚೆಗೆ ತಲೆದೋರಿರುವ ಬಿಕ್ಕಟ್ಟುಗಳು ಸೌದಿ ಅರೇಬಿಯಾ ಕ್ಷಿಪ್ರವಾಗಿ ಕ್ರಮ ಕೈಗೊಳ್ಳುವಂತೆ ಮಾಡಿರುವ ಸಾಧ್ಯತೆಗಳಿವೆ. ಸರಳವಾಗಿ ಹೇಳುವುದಾದರೆ, ರಿಯಾದ್ ತಾನು ಯಾವುದೇ ದೇಶವನ್ನು ಗುರಿಯಾಗಿಸುತ್ತಿಲ್ಲ ಎಂದು ಹೇಳಿಕೆ ನೀಡಿದ್ದರೂ, ಬಹಳಷ್ಟು ತಜ್ಞರು ಕತಾರ್ ಮೇಲಿನ ದಾಳಿ ಮತ್ತು ಅಮೆರಿಕಾದ ದುರ್ಬಲ ಪ್ರತಿಕ್ರಿಯೆ ಉಭಯ ದೇಶಗಳು ಬೇಗನೆ ಒಪ್ಪಂದವನ್ನು ಅಂತಿಮಗೊಳಿಸುವಂತೆ ಮಾಡಿರಬಹುದು.

7. ಈ ಒಪ್ಪಂದ ಭಾರತದ ಜೊತೆಗಿನ ಸಂಬಂಧದ ಮೇಲೆ ಎಂತಹ ಪರಿಣಾಮ ಬೀರಬಹುದು? ಅದರಲ್ಲೂ ಮೇ 2025ರ ಚಕಮಕಿಯ ನಂತರದ ಪರಿಣಾಮಗಳೇನು?

ಭಾರತದ ಜೊತೆಗೆ ಸೌದಿ ಸಂಬಂಧಗಳು ದೃಢವಾಗಿ ಮುಂದುವರಿಯಲಿವೆ ಎಂದು ಸೌದಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ನವದೆಹಲಿಯ ಜೊತೆಗಿನ ಬಾಂಧವ್ಯ ಈಗ ಹಿಂದೆಂದಿಗಿಂತಲೂ ಹೆಚ್ಚು ಘನಿಷ್ಠವಾಗಿದ್ದು, ಸಹಕಾರಗಳು ಹೀಗೆಯೇ ಮುಂದುವರಿಯಲಿವೆ ಎಂದು ಹಿರಿಯ ಸೌದಿ ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.

ಇದೆಲ್ಲದರ ನಡುವೆಯೂ ಈ ಒಪ್ಪಂದ ಒಂದು ಹೊಸ ಅಂಶವನ್ನು ನಿರ್ಮಿಸಿದೆ. ಮೇ 2025ರಲ್ಲಿ, ಭಾರತ ಮತ್ತು ಪಾಕಿಸ್ತಾನಗಳು ಬಹುತೇಕ ಒಂದು ದೊಡ್ಡ ಯುದ್ಧಕ್ಕೆ ಇಳಿದಿದ್ದವು. ಇದು ಉದ್ವಿಗ್ನತೆಗಳು ಎಷ್ಟು ಶೀಘ್ರವಾಗಿ ತೀವ್ರಗೊಳ್ಳಬಹುದು ಎನ್ನುವುದಕ್ಕೆ ಸಾಕ್ಷಿಯಾಗಿತ್ತು. ಈಗ ಪಾಕಿಸ್ತಾನಕ್ಕೆ ಸೌದಿಯ ಬೆಂಬಲವೂ ಇರುವುದರಿಂದ ಭಾರತದ ಕಾರ್ಯತಂತ್ರ ಇನ್ನಷ್ಟು ಸಂಕೀರ್ಣವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಭಾರತ ಎಲ್ಲ ಗಲ್ಫ್ ರಾಷ್ಟ್ರಗಳ ಜೊತೆಗೆ ಉತ್ತಮ ಬಾಂಧವ್ಯ ಹೊಂದಲು ಪ್ರಯತ್ನ ನಡೆಸಿತ್ತು. ಕುತೂಹಲಕಾರಿ ವಿಚಾರವೆಂದರೆ, ಪ್ರಧಾನಿ ನರೇಂದ್ರ ಮೋದಿಯವರು ಎಪ್ರಿಲ್ 2025ರಲ್ಲಿ ರಿಯಾದ್‌ನಲ್ಲಿ ಇದ್ದಾಗಲೇ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕ ಪಡೆಗಳು ಪಹಲ್ಗಾಮ್‌ನಲ್ಲಿ ದಾಳಿ ನಡೆಸಿದ್ದವು.

ಭಾರತ ರಿಯಾದ್ ಜೊತೆಗೆ ಬಲವಾದ ಆರ್ಥಿಕ ಮತ್ತು ರಕ್ಷಣಾ ಸಂಬಂಧವನ್ನು ನಿರ್ಮಿಸುತ್ತಾ ಬಂದಿದೆ. ವಿಶ್ಲೇಷಕರು ವಿಶ್ಲೇಷಕರ ಪ್ರಕಾರ, ಸೌದಿ ಅರೇಬಿಯಾ ಭಾರತ - ಪಾಕಿಸ್ತಾನ ಎರಡರ ಜೊತೆಗೂ ತನ್ನ ಸಂಬಂಧವನ್ನು ಸಮತೋಲನಗೊಳಿಸಲು ಪ್ರಯತ್ನ ನಡೆಸಬಹುದಾದರೂ, ಭಾರತಕ್ಕೆ ಇತರ ಗಲ್ಫ್ ದೇಶಗಳೊಡನೆ ಸಹಭಾಗಿತ್ವವನ್ನು ಬಲಪಡಿಸುವ ಒತ್ತಡ ಸೃಷ್ಟಿಯಾಗಬಹುದು. ಉದಾಹರಣೆಗೆ, ಭಾರತ ಈಗಾಗಲೇ ಯುಎಇ ಜೊತೆಗೆ ಬಲವಾದ ಸಹಯೋಗ ಹೊಂದಿದ್ದು, ಕಾಂಪ್ರಹೆನ್ಸಿವ್ ಸ್ಟ್ರಾಟಜಿಕ್ ಪಾರ್ಟ್‌ನರ್‌ಶಿಪ್ ಎಂಬ ಒಪ್ಪಂದ ಹೊಂದಿದೆ. ಇದು ನೂತನ ರಕ್ಷಣಾ ಒಪ್ಪಂದಗಳನ್ನೂ ಒಳಗೊಂಡಿದೆ. ಸೌದಿ - ಪಾಕಿಸ್ತಾನ ಒಪ್ಪಂದದ ಪರಿಣಾಮವಾಗಿ, ಪಾಕಿಸ್ತಾನಕ್ಕೆ ಸೌದಿಯ ಬೆಂಬಲವನ್ನು ಸಮತೋಲನಗೊಳಿಸಲು ಭಾರತ ಯುಎಇ ಜೊತೆಗಿನ ಸಹಕಾರವನ್ನು ಇನ್ನಷ್ಟು ಹೆಚ್ಚಿಸುವ ಸಾಧ್ಯತೆಗಳಿವೆ.

ವಾಸ್ತವವಾಗಿ, ಭಾರತ ಯಾವುದೇ ಕ್ಷಿಪ್ರ ಕ್ರಮಕ್ಕೆ ಮುಂದಾಗುವ ಬದಲು, ಒಪ್ಪಂದವನ್ನು ಜಾಗರೂಕವಾಗಿ ಅಧ್ಯಯನ ಮಾಡಲಿದೆ. ಭಾರತ ಯುಎಇ, ಒಮಾನ್ ನಂತಹ ಕೊಲ್ಲಿಯ ಮಿತ್ರ ರಾಷ್ಟ್ರಗಳೊಡನೆ ತನ್ನ ಬಾಂಧವ್ಯವನ್ನು ಇನ್ನಷ್ಟು ಬಲಪಡಿಸಲು ಮುಂದಾಗುವ ಸಾಧ್ಯತೆಗಳಿದ್ದು, ಭಾರತ ತನ್ನ ಸ್ವಂತ ರಕ್ಷಣಾ ನೀತಿಯನ್ನು ಅನುಸರಿಸುವುದಾಗಿ ಸ್ಪಷ್ಟಪಡಿಸಲಿದೆ.

8. ಸೌದಿ - ಪಾಕ್ ಒಪ್ಪಂದ ಪಾಕಿಸ್ತಾನ ಕೇಂದ್ರಿತವಾದ ಪಾನ್ ಇಸ್ಲಾಮಿಕ್ ಅಥವಾ ಜಿಸಿಸಿ (ಗಲ್ಫ್ ಕೋಆಪರೇಶನ್ ಕೌನ್ಸಿಲ್) ಸಹಯೋಗಕ್ಕೆ ಕಾರಣವಾದೀತೇ?

ಇಲ್ಲ. ಒಂದು ಬೃಹತ್ ಇಸ್ಲಾಮಿಕ್ ರಕ್ಷಣಾ ಸಹಯೋಗಕ್ಕೆ ಪಾಕಿಸ್ತಾನ ನೇತೃತ್ವ ವಹಿಸುವ ಕಲ್ಪನೆಯೇ ಅವಾಸ್ತವಿಕ. ಹಲವಾರು ವರ್ಷಗಳ ಕಾಲ ಪಾಕಿಸ್ತಾನಿ ಸೇನೆ (ರಾವಲ್ಪಿಂಡಿ) 'ಇಸ್ಲಾಮಿಕ್ ನ್ಯಾಟೋ' ನಿರ್ಮಿಸುವ ಕನಸು ಕಾಣುತ್ತಾ ಬಂದಿದ್ದರೂ, ಗಲ್ಫ್ ರಾಷ್ಟ್ರಗಳು ಈ ಕುರಿತು ನಿರಾಸಕ್ತಿ ತೋರಿಸಿವೆ.

ಸೌದಿ ಅರೇಬಿಯಾ ಮತ್ತು ಯುಎಇಗಳು ಪಾಕಿಸ್ತಾನದಿಂದ ಸೇನೆ ಮತ್ತು ತರಬೇತಿ ಪಡೆಯುತ್ತವೆ. ಆದರೆ, ದೊಡ್ಡ ಮಟ್ಟದ ಭದ್ರತಾ ನಿರ್ಧಾರಗಳಿಗೆ ಅವುಗಳು ವಾಷಿಂಗ್ಟನ್, ಲಂಡನ್, ಮತ್ತು ಈಗ ನವದೆಹಲಿಯ ಮೇಲೆ ಅವಲಂಬಿತವಾಗಿದೆಯೇ ಹೊರತು, ಇಸ್ಲಾಮಾಬಾದ್ ಮೇಲಲ್ಲ.

ಭಾರತದ ಜೊತೆಗಿನ ಪಾಕಿಸ್ತಾನದ ವಿವಾದಗಳಿಗೆ ತಮ್ಮನ್ನು ಎಳೆಯುವುದು ಗಲ್ಫ್ ರಾಷ್ಟ್ರಗಳಿಗೆ ಬೇಕಾಗಿಲ್ಲ. ಹಾಗೇನಾದರೂ ಆದರೆ, ಅದರಿಂದ ನವದೆಹಲಿಯ ಜೊತೆಗಿನ ತಮ್ಮ ಬೆಳೆಯುತ್ತಿರುವ ಆರ್ಥಿಕ ಸಂಬಂಧಕ್ಕೂ ಧಕ್ಕೆ ಉಂಟಾಗುವ ಆತಂಕ ಅವುಗಳಿಗಿದೆ.

ಅರಬ್ ರಾಷ್ಟ್ರಗಳು ಪಾಕಿಸ್ತಾನದ ನೇತೃತ್ವವನ್ನು ಒಪ್ಪದಿರಲು ಇರಾನ್ ಮತ್ತು ಇಸ್ರೇಲ್‌ಗಳು ಹೆಚ್ಚುವರಿ ಕಾರಣವಾಗಿವೆ. ಅವುಗಳಿಗೆ ಇರಾನ್ ಜೊತೆಗೆ ಚಕಮಕಿಗೆ ಇಳಿಯುವುದಾಗಲಿ, ಇಸ್ರೇಲ್ ವಿರುದ್ಧ ಪಾಕಿಸ್ತಾನದ ಕಠಿಣ ನಿಲುವಿನೊಡನೆ ಗುರುತಿಸಿಕೊಳ್ಳುವುದಾಗಲಿ ಗಲ್ಫ್ ದೇಶಗಳಿಗೆ ಇಷ್ಟವಿಲ್ಲ.

ವಾಸ್ತವದಲ್ಲಿ, ಪಾಕಿಸ್ತಾನ ಸಣ್ಣ ಪ್ರಮಾಣದ ಸೇನಾ ತರಬೇತಿ ಯೋಜನೆಗಳು ಮತ್ತು ಸಾಲಗಳನ್ನು ಮಾತ್ರವೇ ಸೌದಿ ಅರೇಬಿಯಾದಿಂದ ನಿರೀಕ್ಷಿಸಬಹುದು. ದೊಡ್ಡದಾದ ಇಸ್ಲಾಮಿಕ್ ಮೈತ್ರಿಕೂಟದ ನೇತೃತ್ವ ವಹಿಸುವುದು ಪಾಕಿಸ್ತಾನದ ಕನಸೇ ಹೊರತು ಅದು ವಾಸ್ತವದಲ್ಲಿ ನನಸಾಗಲು ಸಾಧ್ಯವಿಲ್ಲ.

9. ಈ ಒಪ್ಪಂದಕ್ಕೆ ಅಮೆರಿಕಾ ಹೇಗೆ ಪ್ರತಿಕ್ರಿಯಿಸಲಿದೆ? ಇದರಿಂದ ಸೌದಿ - ಅಮೆರಿಕಾ ಸಂಬಂಧದಲ್ಲಿ ಉದ್ವಿಗ್ನತೆ ಉಂಟಾಗಬಹುದೇ?

ಇಲ್ಲಿಯ ತನಕ ಅಮೆರಿಕಾ ಸೌದಿ - ಪಾಕ್ ಒಪ್ಪಂದದ ಕುರಿತಂತೆ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಆದರೆ, ತಜ್ಞರ ಪ್ರಕಾರ ಅಮೆರಿಕಾ ಈ ಒಪ್ಪಂದವನ್ನು ಸಾಕಷ್ಟು ಸೂಕ್ಷ್ಮವಾಗಿ ಗಮನಿಸಲಿದೆ. ಯಾಕೆಂದರೆ, ಪಾಕಿಸ್ತಾನ ಸ್ವತಃ ಪರಮಾಣು ರಾಷ್ಟ್ರವಾಗಿದ್ದು, ಅಮೆರಿಕಾ ಪಾಕಿಸ್ತಾನದ ಕ್ಷಿಪಣಿ ಕಾರ್ಯಕ್ರಮಗಳ ಕುರಿತು ಮೊದಲಿನಿಂದಲೂ ಆತಂಕ ಹೊಂದಿತ್ತು.

ಸೌದಿ ಅರೇಬಿಯಾ ಅಮೆರಿಕಾದ ಪೂರ್ಣ ಭದ್ರತೆಯಿಂದ ದೂರ ಸರಿಯುತ್ತಿರುವುದರ ಕುರಿತು ವಾಷಿಂಗ್ಟನ್‌ ಈ ಒಪ್ಪಂದದ ಬಗ್ಗೆ ಕಳವಳ ಹೊಂದಬಹುದು ಎಂದು ಭದ್ರತಾ ತಜ್ಞರು ಅಭಿಪ್ರಾಯ ಪಡುತ್ತಾರೆ. ಈ ಒಪ್ಪಂದ ಜಾರಿಗೆ ಬರಲು ಅಮೆರಿಕಾ - ಇಸ್ರೇಲ್ ಸಹಯೋಗದ ಕುರಿತು ಸೌದಿ ಹೊಂದಿರುವ ಆತಂಕವೂ ಕಾರಣವಾಗಿದೆ.

ಅಮೆರಿಕಾ ಇಂದಿಗೂ ಗಲ್ಫ್ ರಾಷ್ಟ್ರಗಳ ಪ್ರಮುಖ ಆಯುಧ ಪೂರೈಕೆದಾರ ಮತ್ತು ಮಿಲಿಟರಿ ಸಹಯೋಗಿಯಾಗಿದೆ. ಆದರೆ, ಈ ಒಪ್ಪಂದ ಅವುಗಳ ನಡುವೆ ಸ್ವಲ್ಪ ಘರ್ಷಣೆಗೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಅಮೆರಿಕಾ ಸೌದಿ ಅರೇಬಿಯಾಗೆ ಜಾಗರೂಕತೆ ವಹಿಸುವಂತೆ ಮೌನವಾಗಿಯೇ ಎಚ್ಚರಿಕೆ ನೀಡಬಹುದಾದರೂ, ಅವುಗಳ ಸಂಬಂಧದಲ್ಲಿ ಧಕ್ಕೆ ಉಂಟಾಗುವ ಸಾಧ್ಯತೆಗಳಿಲ್ಲ. ಸೌದಿ ಅರೇಬಿಯಾ ಇಂದಿಗೂ ಅಮೆರಿಕಾದ ಮಿಲಿಟರಿ ಬೆಂಬಲದ ಮೇಲೆ ಅವಲಂಬಿತವಾಗಿದ್ದು, ಪಾಕಿಸ್ತಾನದ ಜೊತೆಗಿನ ಒಪ್ಪಂದ ಅಮೆರಿಕಾದ ಬೆಂಬಲದ ಜೊತೆಗೆ ಹೆಚ್ಚುವರಿಯಾಗಿ ಇರಲಿದೆಯೇ ಹೊರತು ಅಮೆರಿಕಾದ ಬೆಂಬಲಕ್ಕೆ ಪರ್ಯಾಯವಲ್ಲ ಎಂದಿದೆ.

(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com