

ಶತ್ರು ದೇಶದ ತೀರಾ ಒಳ ಭಾಗದಲ್ಲೆಲ್ಲೋ ನೀವು ಸಿಲುಕಿರುವುದನ್ನು ಒಮ್ಮೆ ಊಹಿಸಿಕೊಳ್ಳಿ. ನಿಮ್ಮ ಸುತ್ತಲೂ ಪರ್ವತಗಳಿವೆ. ಶತ್ರು ಸೇನಾ ಪಡೆಗಳು ನಿಮಗಾಗಿ ಹುಡುಕಾಟ ನಡೆಸುತ್ತಿವೆ. ನಿಮ್ಮ ಮುಂದೆ ಯಾವುದೇ ರಸ್ತೆಯಿಲ್ಲ, ಯಾರದೂ ಸಹಾಯವಿಲ್ಲ, ಹತ್ತಿರದಲ್ಲೆಲ್ಲೂ ಮಿತ್ರ ಪಡೆಗಳೂ ಇಲ್ಲ. ಕೇವಲ ನೀವು, ನಿಮಗೆ ನೀಡಲಾದ ತರಬೇತಿ ಮತ್ತು ಬದುಕುಳಿಯಬೇಕು ಎನ್ನುವ ನಿಮ್ಮ ಸಂಕಲ್ಪ ಮಾತ್ರವೇ ಇದೆ. ಆಪರೇಷನ್ ಎಪಿಕ್ ಫ್ಯೂರಿಯ ಸಂದರ್ಭದಲ್ಲಿ ಇಂತಹದ್ದೇ ಘಟನೆ ನಡೆದಿದ್ದು, ಆ ಬಳಿಕ ಏನಾಯಿತು ಎನ್ನುವುದು ನಿಮ್ಮನ್ನು ನಿಬ್ಬೆರಗಾಗಿಸಬಹುದು.
ನೈಋತ್ಯ ಇರಾನಿನ ಕಲ್ಲು ಬಂಡೆಗಳಿಂದ ಆವೃತ್ತವಾಗಿರುವ ಜ಼ಗ್ರೋಸ್ ಪರ್ವತ ಪ್ರದೇಶದ ಬಳಿ ಅಮೆರಿಕದ ಶಕ್ತಿಶಾಲಿ ಅವಳಿ ಇಂಜಿನ್ ಯುದ್ಧ ವಿಮಾನವಾದ ಎಫ್-15ಇ ಸ್ಟ್ರೈಕ್ ಈಗಲ್ ಅನ್ನು ಇರಾನಿನ ಆಧುನಿಕ ಬವಾರ್-373 ವಾಯು ರಕ್ಷಣಾ ವ್ಯವಸ್ಥೆ ಹೊಡೆದುರುಳಿಸಿತು. ಇರಾನಿನ ಈ ರಕ್ಷಣಾ ವ್ಯವಸ್ಥೆಯನ್ನು ಆಗಸದಲ್ಲಿರುವ ಕಣ್ಣಿಗೆ ಕಾಣದ ಒಂದು ಬಲೆ ಎಂದುಕೊಳ್ಳಿ. ಇದು ಬಹುತೇಕ 300 ಕಿಲೋಮೀಟರ್‌ಗಳಷ್ಟು ದೂರದಲ್ಲಿ ಹಾರಾಟ ನಡೆಸುತ್ತಿರುವ ಶತ್ರು ವಿಮಾನಗಳನ್ನೂ ಸಹ ಪತ್ತೆಹಚ್ಚಿ, ಹೊಡೆದುರುಳಿಸಬಲ್ಲದು. ಇರಾನಿನ ಹೊಡೆತಕ್ಕೆ ಯುದ್ಧ ವಿಮಾನ ಸಂಪೂರ್ಣ ಹಾನಿಗೊಳಗಾಗಿತ್ತು.
ಇಬ್ಬರು ಪೈಲಟ್‌ಗಳು ತಕ್ಷಣವೇ ಶೂನ್ಯ ಎತ್ತರ ಮತ್ತು ಶೂನ್ಯ ವೇಗದಲ್ಲೂ ಕಾರ್ಯಾಚರಿಸುವ ವಿಶೇಷ ಆಸನಗಳನ್ನು ಬಳಸಿಕೊಂಡು ತಕ್ಷಣವೇ ವಿಮಾನದಿಂದ ಹೊರ ಜಿಗಿದಿದ್ದರು. ವಿಮಾನ ಗಾಳಿಯಲ್ಲಿ ಸುತ್ತಿ, ಸನಿಹದ ಪರ್ವತಕ್ಕೆ ಅಪ್ಪಳಿಸಿತು. ಅದಾದ ಕೆಲ ನಿಮಿಷಗಳಲ್ಲೇ ಇರಾನಿನ ಸರ್ಕಾರಿ ಮಾಧ್ಯಮ ಸಂಭ್ರಮಾಚರಣೆಯಲ್ಲಿ ತೊಡಗಿತ್ತು. ಆದರೆ, ನೈಜ ಕಥೆ ಆಗಿನ್ನೂ ಆರಂಭಗೊಳ್ಳುತ್ತಿತ್ತು.
ಪೈಲಟ್‌ಗಳು ವಿಮಾನದಿಂದ ಜಿಗಿದ ತಕ್ಷಣವೇ, ಅವರ ಸರ್ವೈವಲ್ ರೇಡಿಯೋ ವ್ಯವಸ್ಥೆಗಳು ಸ್ವಯಂಚಾಲಿತವಾಗಿ ಆರಂಭಗೊಂಡು, ಭೂಮಿಯ ಮೇಲೆ ಬಹಳ ಎತ್ತರದಲ್ಲಿ ಹಾರಾಡುತ್ತಿರುವ ರಕ್ಷಣಾ ಉಪಗ್ರಹಗಳಿಗೆ ಅಪಾಯದಲ್ಲಿ ಸಿಲುಕಿರುವ ಸಂಕೇತಗಳನ್ನು ರವಾನಿಸತೊಡಗಿದವು. ಅದಾದ ಹದಿನೈದು ನಿಮಿಷಗಳ ಒಳಗಾಗಿ, ಹೌದು, ಕೇವಲ ಕಾಲು ಗಂಟೆಯ ಒಳಗೆ, ಒಂದು ರಕ್ಷಣಾ ತಂಡ ಕಾರ್ಯಾಚರಣೆಗೆ ಸನ್ನದ್ಧಗೊಂಡಿತ್ತು. ಇದು ನಿಜಕ್ಕೂ ಒಂದು ಯುದ್ಧ ಸಿದ್ಧತೆ ಹೇಗಿರಬೇಕು ಎನ್ನುವುದನ್ನು ತೋರಿಸಿತ್ತು. ತರಬೇತಿ ಸಾಮಾನ್ಯವಾಗಿ ಯೋಧರನ್ನು ಈ ರೀತಿಯಲ್ಲಿ ಸಿದ್ಧಪಡಿಸುತ್ತದೆ. ಇದು ಆತಂಕವನ್ನು ನಿವಾರಿಸಿ, ತಕ್ಷಣ ಕೈಗೊಳ್ಳಬೇಕಾದ ಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳಲು ನೆರವಾಗುತ್ತದೆ.
ಮೊದಲ ಪೈಲಟ್ ಅನ್ನು ಕೆಲವು ಗಂಟೆಗಳ ಒಳಗಾಗಿ ಪತ್ತೆಹಚ್ಚಿ, ಆತನನ್ನು ರಕ್ಷಿಸಲಾಯಿತು. ಆತ ಸುರಕ್ಷಿತವಾಗಿ, ಭದ್ರವಾಗಿ ಮನೆಗೆ ತೆರಳುವಂತಾಯಿತು. ಆದರೆ, ವೆಪನ್ ಸಿಸ್ಟಮ್ ಆಫೀಸರ್ ಆಗಿದ್ದ, ಹಿರಿಯ ಕರ್ನಲ್ ಆಗಿದ್ದ ಎರಡನೇ ಸಿಬ್ಬಂದಿ ಮಾತ್ರ ಪ್ರತ್ಯೇಕಗೊಂಡು, ಕೆಲವು ಕಿಲೋಮೀಟರ್‌ಗಳಷ್ಟು ದೂರದಲ್ಲಿದ್ದ ನಿರ್ಜನ ಪರ್ವತ ಪ್ರದೇಶದಲ್ಲಿ ಇಳಿದಿದ್ದ. ಆತ ಬಹುತೇಕ 7,000 ಅಡಿಗಳಷ್ಟು ಎತ್ತರದಲ್ಲಿ ಸಂಪೂರ್ಣವಾಗಿ ಏಕಾಂಗಿಯಾಗಿದ್ದ. ಆತನ ಸುತ್ತಲೂ ಕಲ್ಲು ಬಂಡೆಗಳಿಂದ ತುಂಬಿದ ಪರ್ವತವೇ ಇತ್ತು. ಇನ್ನು ಶತ್ರು ಪಡೆಗಳಂತೂ ಎಲ್ಲ ಕಡೆಗಳಿಂದಲೂ ಆತನನ್ನು ಸುತ್ತುವರಿಯುತ್ತಿದ್ದವು.
ಅಂತಹ ಸಂದರ್ಭದಲ್ಲಿ ಆತ ಮಾಡಿದ್ದೇನು? ಆತ ಆತಂಕಕ್ಕೆ ಒಳಗಾಗಲಿಲ್ಲ. ಹಾಗೆಂದು ಬದುಕುವ ಇಚ್ಛೆಯನ್ನೂ ಕೈ ಬಿಡಲಿಲ್ಲ. ತರಬೇತಿಯ ಸಂದರ್ಭದಲ್ಲಿ ತನಗೆ ಕಲಿಸಿದ್ದೆಲ್ಲವನ್ನೂ ಆತ ಬಳಸಿಕೊಂಡಿದ್ದ. ಆತ ಕೇವಲ ರಾತ್ರಿಗಳಲ್ಲಿ ಮಾತ್ರವೇ ಚಲಿಸುತ್ತಾ, ಕಣಿವೆಗಳು ಮತ್ತು ಬಂಡೆಗಳನ್ನು ಬಳಸಿಕೊಂಡು ಬಚ್ಚಿಟ್ಟುಕೊಳ್ಳುತ್ತಾ ಸಾಗಿದ್ದ. ಆತ ತೊರೆಗಳನ್ನು ದಾಟಿ ಹೋಗಿ, ಭದ್ರತಾ ಪಡೆಗಳ ನಾಯಿಗಳಿಗೆ ತನ್ನ ವಾಸನೆ ಸಿಗದಂತೆ ನೋಡಿಕೊಂಡಿದ್ದ. ಇನ್ನು ತನ್ನನ್ನು ಅಟ್ಟಿಕೊಂಡು ಬರುತ್ತಿದ್ದ ಶತ್ರು ಪಡೆಗಳನ್ನು ಗೊಂದಲಗೊಳಿಸಲು ಸುಳ್ಳು ಸುಳಿವುಗಳನ್ನು ನೀಡುತ್ತಾ ಸಾಗಿದ್ದ. ಆತ ಸಣ್ಣದಾದ, ಕ್ಷಿಪ್ರವಾದ ರೇಡಿಯೋ ಸಂಕೇತಗಳನ್ನು ಕಳುಹಿಸಿ, ಅದರ ಮೂಲಕ ಶತ್ರುಗಳಿಗೆ ತನ್ನನ್ನು ಗುರುತಿಸಲು ಸಾಧ್ಯವಾಗದಂತೆ ಮಾಡಿದ್ದ. ಆದರೆ, ಅಮೆರಿಕನ್ ಪಡೆಗಳಿಗೆ ಆತನನ್ನು ಗುರುತಿಸಲು ಸಾಕಾಗುವಷ್ಟು ಮಾಹಿತಿಗಳನ್ನು ಆತ ಒದಗಿಸಿದ್ದ.
ಇದೇ ಸಮಯದಲ್ಲಿ, ಅಮೆರಿಕನ್ ಪಡೆಗಳು ಆಗಸದಿಂದ ಎಲ್ಲವನ್ನೂ ವೀಕ್ಷಿಸುತ್ತಿದ್ದವು. ಶಕ್ತಿಶಾಲಿ ಕ್ಯಾಮರಾಗಳನ್ನು ಹೊಂದಿದ್ದ ಡ್ರೋನ್‌ಗಳು ಆ ದುರ್ಗಮ ಪರ್ವತ ಮಾರ್ಗದಲ್ಲಿ ಸಾಗುತ್ತಿದ್ದ ಎಲ್ಲ ಶತ್ರು ವಾಹನಗಳನ್ನು ಗಮನಿಸುತ್ತಿದ್ದವು. ಇರಾನಿಯನ್ ಪಡೆಗಳು ಪೈಲಟ್ ಇದ್ದ ಸ್ಥಳಕ್ಕೆ 3 ಕಿಲೋಮೀಟರ್ ಸನಿಹಕ್ಕೆ ಬಂದಾಗ, ಅವರನ್ನು ತಡೆಯುವ ಸಲುವಾಗಿ ನಿಖರ ದಾಳಿಯ ಕ್ಷಿಪಣಿಗಳನ್ನು ಪ್ರಯೋಗಿಸಲಾಯಿತು. ಇನ್ನು ಯುದ್ಧ ವಿಮಾನಗಳು ಆಗಸದಲ್ಲಿ ಸುತ್ತಾಡುತ್ತಿದ್ದವು. ಇದೇ ವೇಳೆ, ಇಲೆಕ್ಟ್ರಾನಿಕ್ ಯುದ್ಧದ ಪಡೆಗಳು ಇರಾನಿನೊಳಗೆ ಸುಳ್ಳು ಸುದ್ದಿಯನ್ನು ಹರಿಯಬಿಟ್ಟವು. ಅಮೆರಿಕ ಈಗಾಗಲೇ ಪೈಲಟ್ ಅನ್ನು ರಕ್ಷಿಸಿದೆ ಎನ್ನುವ ಸುದ್ದಿಯನ್ನು ಹಬ್ಬಿಸಿ, ಜನರು ಅದನ್ನು ನಂಬುವಂತೆ ಮಾಡಿದವು. ಇದರಿಂದ ಉಂಟಾದ ಗೊಂದಲದಿಂದಾಗಿ ಸಂಪೂರ್ಣ ಇರಾನಿನ ಶೋಧ ಕಾರ್ಯಾಚರಣೆಯೇ ನಿಧಾನಗೊಂಡಿತು.
48 ಗಂಟೆಗಳ ಕಾಲ, ಅಮೆರಿಕನ್ ಪೈಲಟ್ ಶತ್ರು ಪರ್ವತಗಳಲ್ಲಿ ಒಬ್ಬನೇ ಬದುಕುಳಿದಿದ್ದ. ಆತ ಸುಸ್ತಾಗಿದ್ದ, ವಿಮಾನದಿಂದ ಜಿಗಿಯುವ ಸಂದರ್ಭದಲ್ಲಿ ಬಹುಶಃ ಗಾಯಗೊಂಡಿದ್ದ. ಆದರೆ, ಆತ ಜೀವಂತವಾಗಿದ್ದ, ಜಾಗರೂಕನಾಗಿದ್ದ, ಮತ್ತು ಉಳಿವಿಗಾಗಿ ಹೋರಾಡುತ್ತಿದ್ದ.
ಬಳಿಕ, ಸಂಪೂರ್ಣವಾಗಿ ಕತ್ತಲಾವರಿಸಿದ ನಂತರ ರಕ್ಷಣಾ ತಂಡಗಳು ಆಗಮಿಸಿದವು. ವಿಶೇಷ ಪಡೆಗಳು ಹಗ್ಗಗಳನ್ನು ಇಳಿಸಿ ಕ್ಷಿಪ್ರವಾಗಿ ಹೆಲಿಕಾಪ್ಟರ್‌ನಿಂದ ಇಳಿದವು. ಯೋಧರು ಪೈಲಟ್ ಬಳಿ ತೆರಳಿ, ಪ್ರದೇಶವನ್ನು ಸುರಕ್ಷಿತಗೊಳಿಸಿ, ಆತನನ್ನು ಅಲ್ಲಿಂದ ಹೊರಗೊಯ್ದರು. ಇನ್ನು ರಕ್ಷಣಾ ಏರ್‌ಕ್ರಾಫ್ಟ್ ಅಂತೂ ಇರಾನಿನ ಒಳಗೆ ಆ ದೊರಗಾದ, ಏರುತಗ್ಗಿನ ಪರ್ವತ ಪ್ರದೇಶದಲ್ಲೇ ಇಳಿಯಬೇಕಾಗಿತ್ತು. ಎರಡು ಏರ್‌ಕ್ರಾಫ್ಟ್‌ಗಳು ಅಲ್ಲಿ ಇಳಿದ ಬಳಿಕ ಮರಳಿ ಉಪಯೋಗಕ್ಕೆ ಲಭಿಸದಂತಾದವು. ಆದ್ದರಿಂದ ಅವುಗಳನ್ನು ಅಲ್ಲೇ ಬಿಟ್ಟು, ಇರಾನಿಯರು ಅದರ ಅಧ್ಯಯನ ಮಾಡದಂತೆ ತಡೆಯಲು ಉದ್ದೇಶಪೂರ್ವಕವಾಗಿ ಅವೆರಡು ಏರ್‌ಕ್ರಾಫ್ಟ್‌ಗಳನ್ನು ನಾಶಪಡಿಸಲಾಯಿತು. ಯುದ್ಧದ ನಿಯಮವೇ ಹಾಗೆ, ಪ್ರತಿಯೊಂದು ರಹಸ್ಯವನ್ನೂ ರಕ್ಷಿಸಬೇಕು, ಪ್ರತಿಯೊಬ್ಬ ಯೋಧನೂ ಮನೆಗೆ ಮರಳಬೇಕು.
ಶತ್ರು ಪ್ರದೇಶದ ಒಳ ಭಾಗದಲ್ಲಿ ಇಳಿದಿದ್ದ ಅಮೆರಿಕದ ಮೂವರು ಪೈಲಟ್‌ಗಳೂ ಪಾರಾಗಿದ್ದು, ಒಂದೇ ಒಂದು ಸಾವು, ಬಂಧನ ನಡೆದಿಲ್ಲ. ಪ್ರಬಲ ಶತ್ರುವಿನ ಎದುರು ನಡೆದಿರುವ ಈ ಕಾರ್ಯಾಚರಣೆ ಸಿನೆಮಾದ ಕಥೆಯಲ್ಲ, ಬದಲಿಗೆ ಕಣ್ಣ ಮುಂದೆಯೇ ನಡೆದಿರುವ ವಾಸ್ತವ.
ಮೊದಲನೆಯದಾಗಿ, ಸಿದ್ಧತೆ ಎನ್ನುವುದು ಎಂದಿಗೂ ಸಮಯ ವ್ಯರ್ಥವಲ್ಲ. ಪ್ರತಿಯೊಂದು ಸಮರಾಭ್ಯಾಸ, ಪ್ರತಿಯೊಂದು ಗಂಟೆಯ ತರಬೇತಿಯೂ ಆ ಪರ್ವತದಲ್ಲಿ ತನ್ನ ಮಹತ್ವವನ್ನು ಸಾಬೀತುಪಡಿಸಿತ್ತು. ನಮ್ಮ ಜೀವನದಲ್ಲೂ ಅಷ್ಟೇ, ನಾವು ಓದುವುದಕ್ಕೆ, ಹೊಸ ಕೌಶಲವನ್ನು ಕಲಿಯುವುದಕ್ಕೆ, ಅಥವಾ ಆರೋಗ್ಯವನ್ನು ಉತ್ತಮಪಡಿಸುವುದಕ್ಕೆ ನಡೆಸುವ ಪ್ರತಿಯೊಂದು ಗಂಟೆಯ ಸಿದ್ಧತೆಯೂ ಜೀವನ ಕಷ್ಟಕರವಾದಾಗ ನಮ್ಮ ರಕ್ಷಣೆಗೆ ಬರುತ್ತದೆ.
ಎರಡನೆಯದಾಗಿ, ಆತಂಕಕ್ಕೆ ಒಳಗಾಗುವುದು ತೊಂದರೆಯನ್ನು ಹೆಚ್ಚಿಸುತ್ತದೆ. ಅದೇ ಶಾಂತವಾಗಿ ಆಲೋಚಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ. ತಣ್ಣಗಿನ ಪರ್ವತದಲ್ಲಿ ಏಕಾಂಗಿಯಾಗಿ ಸಿಲುಕಿದ್ದ ಆ ಅಧಿಕಾರಿ ಭಯದಲ್ಲಿ ನಡುಗಲಿಲ್ಲ. ಬದಲಿಗೆ ಆತ ಆಲೋಚಿಸಿದ, ಸರಿಯಾದ ದಾರಿಯಲ್ಲಿ ಮುಂದೆ ಸಾಗಿದ. ಪ್ರತಿಯೊಂದು ಹೆಜ್ಜೆಗೂ ಸರಿಯಾದ ಕ್ರಮವನ್ನೇ ಕೈಗೊಂಡ. ನಿಮ್ಮ ಪರೀಕ್ಷಾ ಫಲಿತಾಂಶಗಳು ನಿಮಗೆ ನಿರಾಶೆ ಉಂಟುಮಾಡಿದಾಗ, ನಿಮ್ಮ ಉದ್ಯೋಗದಲ್ಲಿ ತೊಂದರೆ ಎದುರಾದಾಗ, ಅಥವಾ ಪರಿಸ್ಥಿತಿ ನಿಮಗೆ ಆಲೋಚಿಸಲೂ ಸಾಧ್ಯವಿಲ್ಲದಂತೆ ಮಾಡಿದಾಗ, ಆಗ ಆಲೋಚಿಸಿ ಹೆಜ್ಜೆ ಇಡಬೇಕು. ಒಂದು ಬಾರಿಗೆ ಒಂದು ಹೆಜ್ಜೆಯಂತೆ ಮುಂದೆ ಸಾಗಬೇಕು.
ಮೂರನೆಯದಾಗಿ, ಯಾರೂ ಏಕಾಂಗಿಯಾಗಿ ಯಶಸ್ವಿಯಾಗಲು ಸಾಧ್ಯವಿಲ್ಲ. ಉಪಗ್ರಹಗಳು, ಡ್ರೋನ್‌ಗಳು, ಯುದ್ಧ ವಿಮಾನಗಳು, ವಿಶೇಷ ಪಡೆಗಳು, ಇಲೆಕ್ಟ್ರಾನಿಕ್ ಯುದ್ಧ ತಂಡಗಳು, ಹೀಗೆ ನೂರಾರು ಜನರು ಜೊತೆಯಾಗಿ ಕಾರ್ಯಾಚರಿಸಿ ಮೂವರು ಅಮೆರಿಕನ್ ಯೋಧರನ್ನು ಮರಳಿ ಮನೆಗೆ ಕರೆತಂದಿದ್ದಾರೆ. ನಿಮ್ಮ ಕುಟುಂಬ, ನಿಮ್ಮ ಗುರುಗಳು, ನಿಮ್ಮ ಸ್ನೇಹಿತರು, ಇವರೆಲ್ಲರೂ ನಿಮಗಿರುವ ಬೆಂಬಲ ವ್ಯವಸ್ಥೆ. ಅವರನ್ನು ನಂಬಿ, ಅವರ ಸಹಾಯ ಪಡೆದುಕೊಳ್ಳಿ.
ನಾಲ್ಕನೆಯ ಮತ್ತು ಅತ್ಯಂತ ಮುಖ್ಯವಾದ ಅಂಶವೆಂದರೆ, ನಿಮ್ಮನ್ನೇ ನಂಬಿರುವ, ನಿಮಗಾಗಿ ಕಾದಿರುವ ಯಾರನ್ನೋ ಮಧ್ಯದಲ್ಲಿ ಕೈ ಬಿಡಬೇಡಿ. ಅಮೆರಿಕ ಈ ಕಾರ್ಯಾಚರಣೆಯಲ್ಲಿ ಡ್ರೋನ್‌ಗಳನ್ನು ಕಳೆದುಕೊಂಡಿತು, ಕೋಟ್ಯಂತರ ರೂಪಾಯಿ ಬೆಲೆಬಾಳುವ ಏರ್‌ಕ್ರಾಫ್ಟ್‌ಗಳನ್ನು ಕಳೆದುಕೊಂಡಿತು, ಜೀವಗಳನ್ನು ಪಣಕ್ಕಿಟ್ಟು, ಶತ್ರುವಿನ ಆಗಸದಲ್ಲಿ 48 ಗಂಟೆಗಳನ್ನು ಕಳೆಯಿತು. ಯಾಕೆ? ಯಾಕೆಂದರೆ ತನ್ನ ಯೋಧರಿಗೆ ಅಮೆರಿಕ ನಾವು ನಿಮ್ಮನ್ನು ರಕ್ಷಿಸದೆ ಶತ್ರು ನೆಲದಲ್ಲಿ ಹಾಗೇ ಬಿಡುವುದಿಲ್ಲ ಎನ್ನುವ ಮಾತು ಕೊಟ್ಟಿತ್ತು.
ನಿಮಗೂ ಹಾಗೇ ನಿಮ್ಮನ್ನು ನಂಬಿರುವ ಜನರಿದ್ದಾರೆ. ನಿಮ್ಮ ಕುಟುಂಬ ನಿಮ್ಮ ಮೇಲೆ ನಿರೀಕ್ಷೆ ಇರಿಸಿದೆ. ನಿಮ್ಮ ಭವಿಷ್ಯ ನಿಮಗಾಗಿ ಕಾಯುತ್ತಿದೆ. ಅವರನ್ನೆಲ್ಲ ತ್ಯಜಿಸಬೇಡಿ. ಜ಼ಗ್ರೋಸ್ ಪರ್ವತಕ್ಕೂ ಯೋಧನನ್ನು ರಕ್ಷಿಸುವುದನ್ನು ತಡೆಯಲು ಸಾಧ್ಯವಾಗಲಿಲ್ಲ. ಅದೇ ರೀತಿ, ನಿಮ್ಮನ್ನು ತಡೆಯುವ ಪರ್ವತಗಳಿಗೂ ನಿಮ್ಮನ್ನು ಮಣಿಸಲು ಸಾಧ್ಯವಿಲ್ಲ. ಅದಕ್ಕಾಗಿ ನೀವು ಮೇಲೆದ್ದು, ಮುಂದಕ್ಕೆ ಹೆಜ್ಜೆ ಇಡಬೇಕು!
(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)
Advertisement