

ಬ್ರೇನ್ ಅನ್ಯುರಿಸಮ್ ಎನ್ನುವುದು ಮೆದುಳಿನ ರಕ್ತನಾಳದ ಒಂದು ನಿರ್ದಿಷ್ಟ ಭಾಗದಲ್ಲಿ ಉಂಟಾಗುವ ಅಸಹಜ ಉಬ್ಬು ಅಥವಾ ಗುಳ್ಳೆ. ರಕ್ತನಾಳದ ಗೋಡೆಯು ದುರ್ಬಲಗೊಂಡಾಗ ಇದು ರಕ್ತದ ಒತ್ತಡಕ್ಕೆ ಸಿಲುಕಿ ಹೊರಬರುತ್ತದೆ. ಈ ಸಮಸ್ಯೆಯು ಸಾಮಾನ್ಯವಾಗಿ ರಕ್ತನಾಳದ ಗೋಡೆಗಳಲ್ಲಿ ಪದರಗಳು ತೆಳುವಾಗುವುದರಿಂದ ಸಂಭವಿಸುತ್ತದೆ ಮತ್ತು ನೋಡಲು ರಕ್ತನಾಳದ ಮೇಲೆ ಅಂಟಿಕೊಂಡಿರುವ ಸಣ್ಣ ಹಣ್ಣಿನಂತೆ ಅಥವಾ ಬಲೂನಿನಂತೆ ಕಾಣಿಸುತ್ತದೆ.
ಹೆಚ್ಚಿನ ಸಂದರ್ಭಗಳಲ್ಲಿ ಅನ್ಯುರಿಸಮ್ಮುಗಳು ತುಂಬಾ ಚಿಕ್ಕದಾಗಿರುತ್ತವೆ ಮತ್ತು ಯಾವುದೇ ಲಕ್ಷಣಗಳನ್ನು ತೋರಿಸದೇ ಇರುತ್ತವೆ. ಆದರೆ ಒಂದು ವೇಳೆ ಈ ಗುಳ್ಳೆಯು ಒಡೆದರೆ ಮೆದುಳಿನ ಸುತ್ತಲಿನ ಜಾಗದಲ್ಲಿ ರಕ್ತಸ್ರಾವವಾಗಿ ಪಾರ್ಶ್ವವಾಯು ಅಥವಾ ಪ್ರಾಣಾಪಾಯ ಉಂಟಾಗುವ ಸಾಧ್ಯತೆ ಇರುತ್ತದೆ.
ರಕ್ತನಾಳದ ಗೋಡೆಯು ದುರ್ಬಲಗೊಳ್ಳಲು ಅಧಿಕ ರಕ್ತದೊತ್ತಡವು ಪ್ರಮುಖ ಕಾರಣ. ನಿರಂತರವಾದ ಒತ್ತಡವು ರಕ್ತನಾಳಗಳನ್ನು ಕಾಲಕ್ರಮೇಣ ಹೈರಾಣಾಗಿಸುತ್ತದೆ. ಇದರ ಜೊತೆಗೆ ಧೂಮಪಾನದ ಅಭ್ಯಾಸವು ರಕ್ತನಾಳಗಳ ಸ್ಥಿತಿಸ್ಥಾಪಕತ್ವವನ್ನು ಹಾಳುಮಾಡುವುದಲ್ಲದೆ ಅನ್ಯುರಿಸಮ್ ಒಡೆಯುವ ಅಪಾಯವನ್ನು ಹೆಚ್ಚಿಸುತ್ತದೆ.
ಕೆಲವೊಮ್ಮೆ ಅನ್ಯುರಿಸಮ್ ಸಮಸ್ಯೆ ಹುಟ್ಟಿನಿಂದಲೇ ಬಂದಿರುವ ದೋಷವಾಗಿರಬಹುದು ಅಥವಾ ಕುಟುಂಬದ ಇತಿಹಾಸದಲ್ಲಿ ಯಾರಿಗಾದರೂ ಈ ಸಮಸ್ಯೆ ಇದ್ದರೆ ಅದು ಮುಂದಿನ ಪೀಳಿಗೆಗೂ ಹರಡುವ ಸಂಭವವಿರುತ್ತದೆ. ವಯಸ್ಸಾದಂತೆ ರಕ್ತನಾಳಗಳು ನೈಸರ್ಗಿಕವಾಗಿಯೇ ತಮ್ಮ ಬಲವನ್ನು ಕಳೆದುಕೊಳ್ಳುವುದರಿಂದ ಮೂವತ್ತರಿಂದ ಅರವತ್ತು ವರ್ಷದವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ.
ಬಹಳಷ್ಟು ಬಾರಿ ಅನ್ಯುರಿಸಮ್ ಇದ್ದರೂ ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ. ಅದು ದೊಡ್ಡದಾದಾಗ ಮಾತ್ರ ಕೆಲವು ಲಕ್ಷಣಗಳು ಕಾಣಬಹುದು. ಆರಂಭಿಕ ಹಂತದಲ್ಲಿ ಯಾವುದೇ ನೋವನ್ನು ನೀಡದಿದ್ದರೂ ಅನ್ಯುರಿಸಮ್ ಗಾತ್ರದಲ್ಲಿ ದೊಡ್ಡದಾದಾಗ ಮೆದುಳಿನ ಇತರ ನರಗಳ ಮೇಲೆ ಒತ್ತಡ ಹೇರಲು ಪ್ರಾರಂಭಿಸುತ್ತದೆ. ಅಂತಹ ಸಮಯದಲ್ಲಿ ಕಣ್ಣಿನ ಹಿಂಭಾಗದಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುವುದು, ದೃಷ್ಟಿ ಮಸುಕಾಗುವುದು ಅಥವಾ ಒಂದು ವಸ್ತು ಎರಡು ಎರಡಾಗಿ ಕಾಣಿಸುವಂತಹ ಸಮಸ್ಯೆಗಳು ಎದುರಾಗುತ್ತವೆ. ಆದರೆ ಈ ಅನ್ಯುರಿಸಮ್ ಒಡೆದಾಗ ಉಂಟಾಗುವ ತಲೆನೋವು ಬಹಳ ಯಾತನೆ ನೀಡುತ್ತದೆ. ಇದರ ಜೊತೆಗೆ ವಾಂತಿ, ಕುತ್ತಿಗೆ ಬಿಗಿಯಾದಂತಾಗುವುದು, ಬೆಳಕನ್ನು ನೋಡಲು ಕಷ್ಟವಾಗುವುದು ಮತ್ತು ಪ್ರಜ್ಞೆ ತಪ್ಪುವಂತಹ ಗಂಭೀರ ಲಕ್ಷಣಗಳು ತಕ್ಷಣವೇ ಗೋಚರಿಸುತ್ತವೆ.
ವೈದ್ಯರು ಈ ಸಮಸ್ಯೆಯನ್ನು ಪತ್ತೆಹಚ್ಚಲು ಸಿಟಿ ಸ್ಕ್ಯಾನ್ ಅಥವಾ ಎಂ ಆರ್ ಐ ಸ್ಕ್ಯಾನಿಂಗ್ ಮೊರೆ ಹೋಗುತ್ತಾರೆ. ಚಿಕಿತ್ಸೆಯು ಅನ್ಯುರಿಸಮ್ಮಿನ ಗಾತ್ರ ಹಾಗೂ ಅದರ ತೀವ್ರತೆಯನ್ನು ಅವಲಂಬಿಸಿರುತ್ತದೆ. ಒಂದು ವೇಳೆ ಅನ್ಯುರಿಸಮ್ ಒಡೆಯುವ ಅಪಾಯವಿದ್ದರೆ ವೈದ್ಯರು ಸರ್ಜಿಕಲ್ ಕ್ಲಿಪ್ಪಿಂಗ್ ಎಂಬ ವಿಧಾನದ ಮೂಲಕ ರಕ್ತನಾಳಕ್ಕೆ ಸಣ್ಣ ಕ್ಲಿಪ್ ಹಾಕಿ ರಕ್ತ ಹರಿವನ್ನು ತಡೆಯುತ್ತಾರೆ ಅಥವಾ ಎಂಡೋವಾಸ್ಕುಲರ್ ಕೋಯಿಲಿಂಗ್ ಎಂಬ ಆಧುನಿಕ ಚಿಕಿತ್ಸೆಯ ಮೂಲಕ ರಕ್ತನಾಳದ ಒಳಗಿನಿಂದಲೇ ಅದನ್ನು ಸರಿಪಡಿಸುತ್ತಾರೆ.
ಈ ಸಮಸ್ಯೆಯನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಿಲ್ಲ. ಆದರೂ ಸಹ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ಅಪಾಯವನ್ನು ಇದರ ಗಣನೀಯವಾಗಿ ಕಡಿಮೆ ಮಾಡಬಹುದು. ರಕ್ತದ ಒತ್ತಡವನ್ನು ನಿಯಮಿತವಾಗಿ ಪರೀಕ್ಷಿಸಿಕೊಂಡು ಅದನ್ನು ಹತೋಟಿಯಲ್ಲಿಡುವುದು ಬಹಳ ಮುಖ್ಯ ಮತ್ತು ಅಗತ್ಯ ಪೌಷ್ಟಿಕಾಂಶಯುಕ್ತ ಆಹಾರವನ್ನಿ ದಿನನಿತ್ಯ ಸೇವಿಸುವುದು ರಕ್ತನಾಳಗಳ ಆರೋಗ್ಯಕ್ಕೆ ಪೂರಕವಾಗಿದೆ.
ಧೂಮಪಾನ ಮತ್ತು ಮದ್ಯಪಾನ ಬಿಡುವುದು ಒಳ್ಳೆಯದು. ಏಕೆಂದರೆ ಇವು ರಕ್ತನಾಳಗಳನ್ನು ದುರ್ಬಲಗೊಳಿಸುತ್ತವೆ. ಪ್ರತಿದಿನ ಸ್ವಲ್ಪ ವ್ಯಾಯಾಮ ಮಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು, ಉದಾಹರಣೆಗೆ ನಡೆಯುವುದು.
ಋತುಕಾಲಿಕ ತಾಜಾ ಹಣ್ಣುಗಳು, ಒಣಹಣ್ಣುಗಳು, ತರಕಾರಿಗಳು, ಪೋಷಕಾಂಶಭರಿತ ಹಸಿರು ಸೊಪ್ಪುಗಳು, ಉಪ್ಪು, ಸಿಹಿ, ಖಾರ ಮಿತವಾಗಿರುವ ಮತ್ತು ಎಣ್ಣೆ ಕಡಿಮೆ ಇರುವ ಆರೋಗ್ಯಕರ ಆಹಾರ ತೆಗೆದುಕೊಳ್ಳಬೇಕು. ಸಮಯಕ್ಕೆ ಊಟ ಮಾಡುವುದೂ ಆರೋಗ್ಯಕ್ಕೆ ಸಹಕಾರಿ.
ಇತ್ತೀಚೆಗೆ ಸಾಮಾನ್ಯವಾಗಿ ಸಿಗುವ ಜಂಕ್ ಫುಡ್ ಮತ್ತು ಅತಿಯಾಗಿ ತಂಪು ಪಾನೀಯಗಳನ್ನು ಸೇವಿಸುವುದನ್ನು ಬಿಟ್ಟರೆ ಒಳ್ಳೆಯದು. ಪ್ರತಿದಿನ ಕನಿಷ್ಠ ಏಳು ಅಥವಾ ಎಂಟು ಗಂಟೆಗಳ ಕಾಲ ನಿದ್ರೆ ಮಾಡಬೇಕು. ಇದು ಬಹಳ ಮುಖ್ಯ.
ಆಯುರ್ವೇದ ಶಾಸ್ತ್ರವು ಸಹ ದೇಹದಲ್ಲಿನ ವಾತ ದೋಷದ ಅಸಮತೋಲನವು ರಕ್ತನಾಳಗಳ ದೌರ್ಬಲ್ಯಕ್ಕೆ ಕಾರಣವಾಗುತ್ತದೆ ಎಂದು ತಿಳಿಸುತ್ತದೆ ಮತ್ತು ಮನಸ್ಸನ್ನು ಶಾಂತವಾಗಿರಿಸಿಕೊಳ್ಳುವುದು ಹಾಗೂ ಯೋಗಾಭ್ಯಾಸ ಮಾಡುವುದು ಒಟ್ಟಾರೆ ಆರೋಗ್ಯಕ್ಕೆ ಒಳ್ಳೆಯದು ಎಂದು ಪ್ರತಿಪಾದಿಸುತ್ತದೆ.
ದೇಹದಲ್ಲಿ ಏನಾದರೂ ಅಸಹಜ ಲಕ್ಷಣಗಳು ಕಂಡುಬಂದರೆ ನಿರ್ಲಕ್ಷ್ಯ ಮಾಡದೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಸಮಯಕ್ಕೆ ಸರಿಯಾದ ಪರೀಕ್ಷೆಗಳು ಮತ್ತು ಜಾಗ್ರತೆ ಜೀವವನ್ನು ಉಳಿಸಬಹುದು. ಆರೋಗ್ಯದ ಬಗ್ಗೆ ಸದಾ ಜಾಗರೂಕರಾಗಿರುವುದು ಅತ್ಯಂತ ಮುಖ್ಯ.
ಒಟ್ಟಾರೆಯಾಗಿ ಹೇಳುವುದಾದರೆ ಬ್ರೇನ್ ಅನ್ಯುರಿಸಮ್ ಎನ್ನುವುದು ಒಂದು ಸೂಕ್ಷ್ಮವಾದ ಆರೋಗ್ಯ ಸಮಸ್ಯೆಯಾಗಿದ್ದು ಸರಿಯಾದ ಸಮಯದಲ್ಲಿ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳುವುದು ಪ್ರಾಣ ಉಳಿಸಲು ಅತ್ಯಗತ್ಯವಾಗಿದೆ.
Advertisement