

ಕೇಡರ್ ಆಧರಿತ ಪಕ್ಷದಲ್ಲೂ ಬಹುಶಃ ಅಂತಹ ಮಾತನ್ನು ಯಾವ ಅಧ್ಯಕ್ಷರೂ ಬಹಿರಂಗವಾಗಿ ಆಡಿರಲಿಲ್ಲ. ಯಾವ ಆಡಳಿತಾರೂಢ ಪಕ್ಷದ ಅಧ್ಯಕ್ಷರೂ ತಮ್ಮ ಪಕ್ಷದ ವಿಚಾರದಲ್ಲಿ ಆಡದ ಮಾತು ಅದಾಗಿತ್ತು. ಅವರು ಹೇಳಿದ್ದು- “ಅಧಿಕಾರ, ಸ್ಥಾನಮಾನ ಬೇಕಿದ್ದರೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಿಂದೆ ಹೋಗಿ.
ಕಾಂಗ್ರೆಸ್ ಪಕ್ಷವನ್ನು ಸದೃಢವಾಗಿ ಬೆಳೆಸಬೇಕು ಅಂದರೆ ನನ್ನ ಜೊತೆ ಬನ್ನಿ’’. ಅದು ಕೆಪಿಸಿಸಿ ಅಧ್ಯಕ್ಷರಾಗಿ ತಾವು ನೇಮಕವಾದ ಮರುದಿನವೇ ಕಾರ್ಯಕರ್ತರಿಗೆ ಅವರು ನೀಡಿದ ಖಡಕ್ ಸೂಚನೆ. ಪಕ್ಷ ಹಾಗೂ ಸರಕಾರದ ನಡುವೆ ಎಳೆದ ಸ್ಪಷ್ಟ ಗೆರೆ. ಅವರ ನಿಷ್ಠುರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ. ಅವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಂಟ್ವಾಳ ಕೆಂಪಯ್ಯ ಹರಿಪ್ರಸಾದ್. ಅರ್ಥಾತ್ ಬಿ.ಕೆ. ಹರಿಪ್ರಸಾದ್.ನೇರ ನೋಟ
ಹರಿಪ್ರಸಾದ್ ಇರುವುದೇ ಹಾಗೇ. ಓದು, ಅಧ್ಯಯನ, ಚರ್ಚೆಗಳಿಂದ ಅವರು ನಂಬಿರುವ ವಿಚಾರಗಳಲ್ಲಿ ಸ್ಪಷ್ಟತೆ. ನೇರ ನುಡಿ. ತಾನಾಡುವ ಮಾತು ಬೀರುವ ಪರಿಣಾಮ ಕುರಿತು ಚಿಂತಿಸದ ಗುಣ. ತಮ್ಮ ವಾದ ಮಂಡಿಸುತ್ತಲೇ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುವ ಜಾಯಮಾನ. ರಾಜಕೀಯ ಎದುರಾಳಿಗಳನ್ನು ಟೀಕಿಸುವಾಗ ಕೆಲವು ಬಾರಿ ತೂಕ ತಪ್ಪುವ ಮಾತು. ಅದಕ್ಕಾಗಿ ಎದುರಾಳಿಗಳಿಂದ ವಾಗ್ದಾಳಿಗೂ ಅವರು ರೆಡಿ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಹರಿಪ್ರಸಾದ್ ನೇಮಕವಾದಾಗ ಅನೇಕರಿಗೆ ನೆನಪಾಗಿದ್ದು ಇಂದಿರಾ ಗಾಂಧಿ ಅವರು ಹೇರಿದ ತುರ್ತು ಪರಿಸ್ಥಿತಿ. ಆಪತ್ಕಾಲದಲ್ಲಿ ಮೆರೆದ ಇಂದಿರಾ ಗಾಂಧಿ ಪುತ್ರ ಸಂಜಯ್ ಗಾಂಧಿ. ಏಕೆಂದರೆ, ಆ ಕಾಲದಲ್ಲಿ ಸಂಜಯ್ ಗಾಂಧಿ ಅವರೊಂದಿಗೆ ಗಟ್ಟಿಯಾಗಿ ನಿಂತ ಕರ್ನಾಟಕದ ಕೆಲವೇ ಕಾಂಗ್ರೆಸ್ ನಾಯಕರಲ್ಲಿ ಹರಿಪ್ರಸಾದ್ ಒಬ್ಬರು. ಸುಪ್ರೀಂಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಜೆ.ಸಿ. ಶಾ ಆಯೋಗದ ಮುಂದೆ ವಿಚಾರಣೆಗೆ ಸಂಜಯ್ ಗಾಂಧಿ ಹಾಜರಾದಾಗ ಅವರ ಬೆಂಬಲಕ್ಕಿದ್ದ ಅನೇಕರಲ್ಲಿ ಹರಿಪ್ರಸಾದ್ ಅವರೂ ಒಬ್ಬರು. ಯುವ ಕಾಂಗ್ರೆಸ್ಸಿನ ಮುಂದಾಳು. ರಾಜಕಾರಣದ ಅಂಗಳದಲ್ಲಿ ಆ ಕಾಲದ ಸ್ಟ್ರೀಟ್ ಫೈಟರ್. ಮುಖ್ಯಮಂತ್ರಿಯಾಗಿದ್ದ ಆರ್.ಗುಂಡೂರಾವ್ ಅವರ ಅನುಯಾಯಿ. ಅನೇಕರಿಗೆ ಈಗಲೂ ಮಾಸದ ನೆನಪು.
ಭಾರತ ಸೇವಾ ದಳದಿಂದ ಹರಿಪ್ರಸಾದರ ಕಾಂಗ್ರೆಸ್ ಪಯಣ ಆರಂಭ. ಬ್ಲಾಕ್ ಮಟ್ಟದಿಂದ ರಾಷ್ಟ್ರೀಯ ಮಟ್ಟದವರೆಗೂ ದುಡಿಮೆ. ಲೋಕಸಭಾ ಚುನಾವಣೆಗಳಲ್ಲಿ ಕಣಕ್ಕಿಳಿದರೂ ಗೆಲುವು ಮರೀಚಿಕೆ. ನಾಲ್ಕು ಬಾರಿ ರಾಜ್ಯಸಭಾ ಸದಸ್ಯರು. ಅಖಿಲ ಭಾರತ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಸುಮಾರು 20 ರಾಜ್ಯಗಳಲ್ಲಿ ವಿಭಿನ್ನ ಸಮಯದಲ್ಲಿ ಉಸ್ತುವಾರಿ ಹೊಣೆ ಹೊತ್ತವರು. ಕೇಂದ್ರ ಅಥವಾ ರಾಜ್ಯದಲ್ಲಿ ಯಾವತ್ತೂ ಮಂತ್ರಿ ಆಗಲಿಲ್ಲ. ಅದಕ್ಕಾಗಿ ಲಾಬಿಯೂ ಮಾಡಲಿಲ್ಲ. ಪಕ್ಷದ ಸರಕಾರ ಕೇಂದ್ರದಲ್ಲಿ ಅಸ್ತಿತ್ವದಲ್ಲಿದ್ದಾಗಲೂ ಪಕ್ಷದ ಹೊಣೆಗಾರಿಕೆಯೇ ಅವರಿಗೆ ಪ್ರಿಯವಾದ ಕಾಯಕ. ಇಂದಿರಾ ಗಾಂಧಿ ಕುಟುಂಬಕ್ಕೆ ಅಚಲ ನಿಷ್ಠೆ. ಕಾಂಗ್ರೆಸ್ ತತ್ತ್ವ, ಸಿದ್ದಾಂತಗಳಿಗೆ ಕಟಿಬದ್ಧ.
ಸಿದ್ದರಾಮಯ್ಯ 2023ರಲ್ಲಿ ಮುಖ್ಯಮಂತ್ರಿಯಾದಾಗ ಹರಿಪ್ರಸಾದ್ ಮಂತ್ರಿ ಸ್ಥಾನ ನಿರೀಕ್ಷಿಸಿದ್ದು ಸಹಜ. ಆದರೆ, ದಕ್ಕಲಿಲ್ಲ. ಆಗ ಸಿದ್ದರಾಮಯ್ಯ ಬಗ್ಗೆ ಮುನಿಸಿಕೊಂಡು ದೂರ ಉಳಿದಿದ್ದರು. ಬಹಿರಂಗವಾಗಿಯೂ ಟೀಕಿಸಿದ್ದರು. ಅನಂತರ ಮೌನಕ್ಕೆ ಜಾರಿದ್ದರು. ಇಷ್ಟು ವರ್ಷ ಪಕ್ಷದ ಕೆಲಸ ಮಾಡಿದ್ದೇನೆ. ಇನ್ನೊಬ್ಬರ ಮುಂದೆ ನಗೆಪಾಟಲಿಗೆ ಗುರಿ ಆಗಬಾರದು. ಗೌರವಯುತ ಸ್ಥಾನಮಾನ ಕೊಡಿ ಎಂದಷ್ಟೇ ಕೇಳಿದ್ದರು. ನಂತರ ಸಿದ್ದರಾಮಯ್ಯ ಹಾಗೂ ಹರಿಪ್ರಸಾದ್ ಬಾಂಧವ್ಯ ಸುಧಾರಿಸಿತ್ತು. ಸಿದ್ದರಾಮಯ್ಯ ಅವರೇ ಹರಿಪ್ರಸಾದರ ಮನೆಗೆ ತೆರಳಿ ಕೈಕುಲುಕಿದ್ದರು. ಕೆಪಿಸಿಸಿ ಅಧ್ಯಕ್ಷರಾಗಿ ಹರಿಪ್ರಸಾದರ ನೇಮಕದ ಹಿಂದೆ ಸಿದ್ದರಾಮಯ್ಯ ಅವರ ‘ಕೈಚಳಕ’ವೂ ಇದೆ.
ಹರಿಪ್ರಸಾದ್ ಹಿಂದುಳಿದ ಈಡಿಗ (ಬಿಲ್ಲವ) ಸಮಾಜದವರು. ರಾಜ್ಯದಲ್ಲಿ 2020ರಲ್ಲಿ ವಿಧಾನಪರಿಷತ್ ಸದಸ್ಯರಾಗಿ ನಂತರ ಪ್ರತಿಪಕ್ಷದ ನಾಯಕರಾದವರು. ಆಗಲೇ ಅವರು ರಾಜ್ಯದಲ್ಲಿ ಹೆಚ್ಚು ಸಕ್ರಿಯರು. ಇದಕ್ಕೂ ಮುನ್ನ ಅವರದು ರಾಷ್ಟ್ರ ರಾಜಕಾರಣ. ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಈಗ ಅವರಿಗೆ ರಾಜ್ಯದಲ್ಲಿ ಪ್ರವಾಸ ಮಾಡಿ ಪಕ್ಷವನ್ನು ಬಲಪಡಿಸಬೇಕಾದ ಅನಿವಾರ್ಯತೆ. ಪಕ್ಷದಲ್ಲಿ ಗ್ರಾಮೀಣ ಭಾಗದ ಕಾರ್ಯಕರ್ತರ ಸಂಪರ್ಕ ಅಷ್ಟಾಗಿ ಇಲ್ಲ. ಅದರಲ್ಲೂ ಉತ್ತರ ಕರ್ನಾಟಕದ ಭಾಗದವರಿಗೆ ಹರಿಪ್ರಸಾದ್ ಅವರ ಪರಿಚಯ ಕಡಿಮೆ.
ಹರಿಪ್ರಸಾದ್ ಪಕ್ಷದ ಸಂಘಟನೆಯಲ್ಲಿ ಈಗ ತಮ್ಮ ಛಾಪು ಮೂಡಿಸುತ್ತಿದ್ದಾರೆ. ರಾಜ್ಯದ ಕೆಲವು ಭಾಗಗಳಲ್ಲಿ ಪ್ರವಾಸ ಮಾಡಿ ಕಾರ್ಯಕರ್ತರ ಸಭೆ ನಡೆಸಿದ್ದಾರೆ. ಕಾರ್ಯಕರ್ತರನ್ನು ಸೈದಾಂತಿಕವಾಗಿ ಗಟ್ಟಿಗೊಳಿಸುವ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಅದಕ್ಕಾಗಿ ತರಬೇತಿ ಶಿಬಿರಗಳನ್ನು ಆಯೋಜಿಸಲು ಮುಂದಾಗಿದ್ದಾರೆ. ಸರಕಾರದ ನಿಗಮ-ಮಂಡಳಿಗಳಲ್ಲಿ ಅಧ್ಯಕ್ಷ, ಸದಸ್ಯರಾಗಿ ಎರಡು ವರ್ಷ ಪೂರ್ಣಗೊಳಿಸಿರುವವರು ರಾಜೀನಾಮೆ ನೀಡಿ ಹೊಸಬರಿಗೆ ಅವಕಾಶ ನೀಡಬೇಕೆಂದು ತಾಕೀತು ಮಾಡಿದ್ದಾರೆ. ಇದನ್ನು ಜಾರಿಗೊಳಿಸಬೇಕಾದ ಜವಾಬ್ದಾರಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮೇಲಿದೆ. ಪಕ್ಷ ಹಾಗೂ ಸರಕಾರದ ಮಧ್ಯೆ ಸಮನ್ವಯತೆ ಹರಿಪ್ರಸಾದರ ಈಗಿನ ಪ್ರಮುಖ ಸವಾಲು. ಮುಖ್ಯಮಂತ್ರಿ ಸ್ಥಾನದಲ್ಲಿರುವ ಶಿವಕುಮಾರ್ ಕೂಡ ಕಾಂಗ್ರೆಸ್ಸಿನ ಕಟ್ಟಾಳು.
ಶಿವಕುಮಾರ್ ತಮ್ಮ ಸಚಿವ ಸಂಪುಟವನ್ನು ಇನ್ನೂ ವಿಸ್ತರಿಸಿಲ್ಲ. ಯಾವುದೇ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್ರಚನೆ ಒಳಬೇಗುದಿಯನ್ನು ಸೃಷ್ಟಿಸಿರುತ್ತದೆ. ಸಚಿವ ಸ್ಥಾನ ಸಿಗದವರು ಅತೃಪ್ತರಾಗುವುದು ಸಹಜ. ಅಸಮಾಧಾನ ಬಹಿರಂಗವಾದರೆ ಅಂತಹ ಸಮಯದಲ್ಲಿ ಪಕ್ಷದ ಶಿಸ್ತು ಕಾಪಾಡಬೇಕಾದ ಹೊಣೆಗಾರಿಕೆ ಅಧ್ಯಕ್ಷರ ಮೇಲೆ. ಅದು ಸವಾಲು ಕೂಡ. ಸಚಿವರಾದವರ ಕಾರ್ಯಕ್ಷಮತೆ ಮೇಲೆಯೂ ಕೆಪಿಸಿಸಿ ಅಧ್ಯಕ್ಷರಾಗಿ ಹರಿಪ್ರಸಾದ್ ನಿಗಾ ವಹಿಸಬೇಕಾಗುತ್ತದೆ. ಆಗೆಲ್ಲಾ ಪಕ್ಷ ಹಾಗೂ ಸರಕಾರದ ಮಧ್ಯೆ ಸಮನ್ವಯತೆಯ ಸವಾಲು ಎದುರಾಗುತ್ತದೆ. ಹರಿಪ್ರಸಾದ್ ಅದನ್ನು ನಿಭಾಯಿಸಬೇಕಾಗುತ್ತದೆ. ಆ ಹಿರಿತನ ಹಾಗೂ ಅನುಭವ ಅವರಿಗಿದೆ.
ಜಿಲ್ಲಾ ಕಾಂಗ್ರೆಸ್ ಸಮಿತಿಗಳ ಪುನಾರಚನೆ ಹರಿಪ್ರಸಾದ್ ಅವರ ಮುಂದಿರುವ ಮತ್ತೊಂದು ಸವಾಲು. ಕೆಲವರು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಹತ್ತು ವರ್ಷಗಳೇ ಕಳೆದಿವೆ. ಜಿಲ್ಲಾ ಸಮಿತಿಗಳ ಪುನರ್ ರಚನೆ ಆಗಬೇಕಿದೆ. ಜಿಲ್ಲಾ ಮಟ್ಟದಲ್ಲಿ ಪಕ್ಷದಲ್ಲಿರುವ ಬಣಗಳನ್ನು ವಿಶ್ವಾಸಕ್ಕೆ ಪಡೆದು ಈ ಕರಸತ್ತು ನಡೆಸಬೇಕಾಗುತ್ತದೆ. ಹರಿಪ್ರಸಾದ್ ಅವರ ಹಿರಿತನ ಅವರಿಗೆ ಇಲ್ಲಿ ನೆರವಾಗಬಹುದು.
ಸರಕಾರ ಮತ್ತು ಪಕ್ಷದ ನಡುವೆ ಸಮನ್ವಯ ಸಾಧಿಸಲು ರಾಜಕೀಯ ಸಮಿತಿ ಹಾಗೂ ಅನುಷ್ಠಾನ ಸಮಿತಿ ರಚಿಸುತ್ತೇವೆ. ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಜಾತಿ ವಿಚಾರ ಮುಂದಕ್ಕೆ ಬರಬಾರದು ಎಂದಿದ್ದಾರೆ ಹರಿಪ್ರಸಾದ್. ಈ ವಿಚಾರದಲ್ಲಿ ಹರಿಪ್ರಸಾದ್ ನಿಲುವಿಗೆ ಶಾಸಕಾಂಗ ಪಕ್ಷ ಹಾಗೂ ಸರಕಾರದಲ್ಲಿ ಎಷ್ಟರಮಟ್ಟಿಗೆ ಮನ್ನಣೆ, ಸಹಕಾರ ಸಿಗುತ್ತದೆ ಎಂಬುದು ಗೊತ್ತಿಲ್ಲ.
ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಜಾತಿಯ ಸೋಂಕು ಇಂದು, ನಿನ್ನೆಯದಲ್ಲ. ಅದಕ್ಕೆ ಇತಿಹಾಸವೇ ಇದೆ. ಇದನ್ನು ಅಷ್ಟು ಸುಲಭವಾಗಿ ತೊಡೆದು ಹಾಕಲು ಸಾಧ್ಯವಿಲ್ಲ. ಅದಕ್ಕೆ ರಾಜಕೀಯ ಇಚ್ಛಾಶಕ್ತಿ ಬೇಕು. ಅಧಿಕಾರಿಗಳಿಗೆ ಸೂಕ್ತ ಹುದ್ದೆ, ವರ್ಗಾವಣೆಯಲ್ಲಿ ಜಾತಿಯ ಸೋಂಕು ಕೆಲವೊಮ್ಮೆ ಚುನಾವಣೆಗಳಲ್ಲಿ ಜಾತಿ ಲೆಕ್ಕಾಚಾರದಲ್ಲಿ ಪರಿಣಾಮ ಬೀರಿರುವುದು ಉಂಟು.
ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ನಂತರ ಅಹಿಂದ ಮತದಾರರು ಕಾಂಗ್ರೆಸ್‌ನಿಂದ ಚದುರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಅಹಿಂದ ಮತದಾರರನ್ನು ಹಿಡಿದಿಟ್ಟುಕೊಳ್ಳುವ ಹೊಣೆಗಾರಿಕೆ ಹರಿಪ್ರಸಾದರ ಮೇಲಿದೆ. ಇದೇ ವೇಳೆ ಅಹಿಂದ ನಾಯಕರಾಗಿ ಹೊರಹೊಮ್ಮವ ಅವಕಾಶವೂ ಅವರಿಗೆ ಲಭ್ಯವಾಗಿದೆ. ಒಕ್ಕಲಿಗ ಸಮಾಜದ ಶಿವಕುಮಾರ್ ಮುಖ್ಯಮಂತ್ರಿ ಸ್ಥಾನದಲ್ಲಿರುವಾಗ ಇದು ಅಷ್ಟು ಸುಲಭದ ಮಾತಲ್ಲ.
ಆಗ ಅಧಿಕಾರ ಹಸ್ತಾಂತರದ ವಿಚಾರದಲ್ಲಿ ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಬಣಗಳ ನಡುವೆ ಸಂಘರ್ಷ ನಡೆದಿತ್ತು. ಆ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಅವರು, ಸತೀಶ್ ಜಾರಕಿಹೊಳಿ ಅಹಿಂದ ನಾಯಕತ್ವದ ಉತ್ತರಾಧಿಕಾರಿ ಅಂದಿದ್ದರು. ಆಗ ಅವರೇನೂ ಹರಿಪ್ರಸಾದ್ ಹೆಸರು ಹೇಳಿರಲಿಲ್ಲ. ಆದರೆ ಈಗ ಸಿದ್ದರಾಮಯ್ಯ ಹಾಗೂ ಹರಿಪ್ರಸಾದ್ ನಡುವೆ ಸುಧಾರಿಸಿರುವ ಬಾಂಧವ್ಯ ಪಕ್ಷ ಕಟ್ಟುವ ಕಾರ್ಯದಲ್ಲಿ ಹರಿಪ್ರಸಾದರಿಗೆ ಅನುಕೂಲಕರ.
ಕಾಂಗ್ರೆಸ್‌ನಲ್ಲಿ ಆರ್‌ಎಸ್‌ಎಸ್ ಪರವಾಗಿ ಯಾರಾದರೂ ಗುರುತಿಸಿಕೊಂಡರೆ ಅವರಿಗೆ ಪಕ್ಷದಲ್ಲಿ ಯಾವುದೇ ಸ್ಥಾನಮಾನವಿಲ್ಲ ಎಂಬುದು ಹರಿಪ್ರಸಾದ್ ಅವರ ಎಚ್ಚರಿಕೆ. ಆರ್‌ಎಸ್‌ಎಸ್ ಅನ್ನು ವಿರೋಧಿಸುವುದು ಕಾಂಗ್ರೆಸ್ಸಿನ ಸೈದ್ಧಾಂತಿಕ ನಿಲುವು ಎಂಬುದು ಅವರ ಪ್ರತಿಪಾದನೆ. ಕಾಂಗ್ರೆಸ್ಸಿನ ಕೆಲವು ಶಾಸಕರು ಈಗಾಗಲೇ ಸಂಘ ಪರಿವಾರದ ಜೊತೆ ಗುರುತಿಸಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಹರಿಪ್ರಸಾದ್ ಅವರ ಮುಂದಿನ ನಡೆ ಕುತೂಹಲಕಾರಿ.
ಮುಖ್ಯಮಂತ್ರಿ ಶಿವಕುಮಾರ ಅವರಂತೆ ಹರಿಪ್ರಸಾದರಿಗೂ 2028ರ ವಿಧಾನಸಭಾ ಚುನಾವಣೆ ಮೇಲೆಯೇ ಚಿತ್ತ. ಆ ನಿಟ್ಟಿನಲ್ಲಿಯೇ ಪಕ್ಷ ಸಜ್ಜುಗೊಳಿಸುವ ಕಾರ್ಯ. ಅದಕ್ಕೆ ಹೆಚ್ಚು ಸಮಯವೂ ಇಲ್ಲ. ಹರಿಪ್ರಸಾದರ ಮುಂದೆ ಸಾಲುಸಾಲು ಸವಾಲುಗಳು.
- ಕೂಡ್ಲಿ ಗುರುರಾಜ, ಹಿರಿಯ ಪತ್ರಕರ್ತರು
kudliguru@gmail.com