

ಇವತ್ತಿನ ವಿತ್ತೀಯ ಬದುಕಿನಲ್ಲಿ ಸಿಬಿಲ್ ಸ್ಕೋರ್ (CIBIL Score) ಎಂಬುದು ಅತ್ಯಂತ ಪ್ರಮುಖವಾಗಿದೆ. ನಮ್ಮ ಬಳಿ ಏನಿಲ್ಲದಿದ್ದರೂ ಒಳ್ಳೆ ಸಿಬಿಲ್ ಸ್ಕೋರ್ ಇರಬೇಕು ಎನ್ನುವ ಮಟ್ಟಕ್ಕೆ ಬದುಕು ನಿಂತಿದೆ. ಶಾಲೆ , ಕಾಲೇಜಿನಲ್ಲಿ ತೆಗೆದ ಅಂಕಕ್ಕಿಂತ ಇಲ್ಲಿ ಗಳಿಸುವ ಅಂಕ ಮುಖ್ಯವಾಗಿ ಹೋಗಿದೆ. ಇದಕ್ಕೆ ಯಾಕಿಷ್ಟು ಇಂಪಾರ್ಟನ್ಸ್ ಎಂದರೆ , ನೀವು ಮನೆ ಸಾಲ, ವಾಹನ ಸಾಲ, ಶಿಕ್ಷಣ ಸಾಲ, ವೈಯಕ್ತಿಕ ಸಾಲ ಅಥವಾ ಕ್ರೆಡಿಟ್ ಕಾರ್ಡ್ ಪಡೆಯಲು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯನ್ನು ಸಂಪರ್ಕಿಸಿದಾಗ ಅವರು ಮೊದಲಿಗೆ ಪರಿಶೀಲಿಸುವ ಅಂಶಗಳಲ್ಲಿ ಪ್ರಮುಖವಾದದ್ದು ನಿಮ್ಮ ಸಿಬಿಲ್ ಸ್ಕೋರ್.
ಉತ್ತಮ ಸಿಬಿಲ್ ಸ್ಕೋರ್ ಹೊಂದಿರುವವರಿಗೆ ಸಾಲ ಪಡೆಯುವುದು ಸುಲಭವಾಗುವುದಲ್ಲದೆ, ಕಡಿಮೆ ಬಡ್ಡಿದರದಲ್ಲಿ ಸಾಲ ಸಿಗುವ ಸಾಧ್ಯತೆಯೂ ಹೆಚ್ಚಿರುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಸಿಬಿಲ್ ಸ್ಕೋರ್ ಬಗ್ಗೆ ತಿಳಿದುಕೊಳ್ಳುವುದು ಮತ್ತು ಅದನ್ನು ಉತ್ತಮ ಮಟ್ಟದಲ್ಲಿ ಕಾಯ್ದುಕೊಳ್ಳುವುದು ಅಗತ್ಯವಾಗಿದೆ.
ಸಿಬಿಲ್ ಸ್ಕೋರ್ ಎಂದರೆ ವ್ಯಕ್ತಿಯ ಸಾಲ ಮರುಪಾವತಿ ಇತಿಹಾಸ ಮತ್ತು ಸಾಲ ನಿರ್ವಹಣೆಯ ಆಧಾರದ ಮೇಲೆ ಲೆಕ್ಕ ಹಾಕುವ ಮೂರು ಅಂಕಿಯ ಸಂಖ್ಯೆಯಾಗಿದೆ. ಸಾಮಾನ್ಯವಾಗಿ ಈ ಅಂಕೆಯು 300 ರಿಂದ 900 ರವರೆಗೆ ಇರುತ್ತದೆ. ಅಂಕೆ ಹೆಚ್ಚಿದಷ್ಟೂ ವ್ಯಕ್ತಿಯ ಸಾಲ ಮರುಪಾವತಿ ಸಾಮರ್ಥ್ಯ ಉತ್ತಮವಾಗಿದೆ ಎಂದು ಪರಿಗಣಿಸಲಾಗುತ್ತದೆ. ಸಾಮಾನ್ಯವಾಗಿ 750 ಅಥವಾ ಅದಕ್ಕಿಂತ ಹೆಚ್ಚಿನ ಸಿಬಿಲ್ ಸ್ಕೋರ್ ಅತ್ಯುತ್ತಮ ಎಂದು ಬ್ಯಾಂಕುಗಳು ಪರಿಗಣಿಸುತ್ತವೆ. 700 ರಿಂದ 749 ನಡುವಿನ ಸ್ಕೋರ್ ಉತ್ತಮ, 650 ರಿಂದ 699 ಸರಾಸರಿ ಹಾಗೂ 650 ಕ್ಕಿಂತ ಕಡಿಮೆ ಇದ್ದರೆ ಸಾಲ ಪಡೆಯುವುದು ಕಷ್ಟವಾಗಬಹುದು ಅಥವಾ ಹೆಚ್ಚಿನ ಬಡ್ಡಿದರ ವಿಧಿಸುವ ಸಾಧ್ಯತೆ ಇರುತ್ತದೆ.
ಸಿಬಿಲ್ ಸ್ಕೋರ್ ಲೆಕ್ಕಾಚಾರದಲ್ಲಿ ಹಲವಾರು ಅಂಶಗಳು ಪ್ರಭಾವ ಬೀರುತ್ತವೆ. ಮುಖ್ಯವಾಗಿ ನೀವು ಹಿಂದಿನ ಸಾಲಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಿದ್ದೀರಾ ಎಂಬುದು ಪ್ರಮುಖ ಅಂಶವಾಗಿದೆ. EMI ಅಥವಾ ಕ್ರೆಡಿಟ್ ಕಾರ್ಡ್ ಬಾಕಿಯನ್ನು ವಿಳಂಬವಾಗಿ ಪಾವತಿಸುವುದು ಸ್ಕೋರ್ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಕ್ರೆಡಿಟ್ ಕಾರ್ಡ್ ಮಿತಿಯ ಬಹುಪಾಲನ್ನು ನಿರಂತರವಾಗಿ ಬಳಸುವುದೂ ಸ್ಕೋರ್ ಕಡಿಮೆಯಾಗಲು ಕಾರಣವಾಗಬಹುದು. ಅನೇಕ ಸಾಲಗಳಿಗೆ ಅಥವಾ ಕ್ರೆಡಿಟ್ ಕಾರ್ಡ್‌ಗಳಿಗೆ ಒಂದೇ ಸಮಯದಲ್ಲಿ ಅರ್ಜಿ ಸಲ್ಲಿಸಿದರೆ, ನಿಮ್ಮ ಹಣಕಾಸಿನ ಮೇಲಿನ ಒತ್ತಡ ಹೆಚ್ಚಾಗಿದೆ ಎಂದು ಸಾಲ ನೀಡುವವರು ಭಾವಿಸುವ ಸಾಧ್ಯತೆ ಇದೆ. ಜೊತೆಗೆ ದೀರ್ಘಕಾಲದ ಉತ್ತಮ ಕ್ರೆಡಿಟ್ ಇತಿಹಾಸವು ಉತ್ತಮ ಸಿಬಿಲ್ ಸ್ಕೋರ್ ನಿರ್ಮಾಣಕ್ಕೆ ಸಹಾಯ ಮಾಡುತ್ತದೆ.
ಉತ್ತಮ ಸಿಬಿಲ್ ಸ್ಕೋರ್ ಹೊಂದಿರುವವರಿಗೆ ಹಲವಾರು ಪ್ರಯೋಜನಗಳಿವೆ. ಮೊದಲನೆಯದಾಗಿ, ಸಾಲದ ಅರ್ಜಿ ಬೇಗನೆ ಅನುಮೋದನೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಎರಡನೆಯದಾಗಿ, ಕಡಿಮೆ ಬಡ್ಡಿದರದಲ್ಲಿ ಸಾಲ ಸಿಗುತ್ತದೆ. ಮೂರನೆಯದಾಗಿ, ಹೆಚ್ಚಿನ ಸಾಲದ ಮೊತ್ತ ಪಡೆಯುವ ಅವಕಾಶ ದೊರೆಯಬಹುದು. ನಾಲ್ಕನೆಯದಾಗಿ, ಹೆಚ್ಚಿನ ಕ್ರೆಡಿಟ್ ಕಾರ್ಡ್ ಮಿತಿ ಹಾಗೂ ವಿಶೇಷ ಆಫರ್‌ಗಳನ್ನು ಬ್ಯಾಂಕುಗಳು ನೀಡುವ ಸಾಧ್ಯತೆ ಇರುತ್ತದೆ.
ಕೆಲವು ಸಂದರ್ಭಗಳಲ್ಲಿ ಬಾಡಿಗೆ ಮನೆ ಪಡೆಯುವಾಗ ಅಥವಾ ಕೆಲವು ಉದ್ಯೋಗಗಳಲ್ಲಿ ಹಣಕಾಸಿನ ಹಿನ್ನೆಲೆ ಪರಿಶೀಲನೆಯ ಭಾಗವಾಗಿ ಕ್ರೆಡಿಟ್ ಇತಿಹಾಸವನ್ನು ಕೊಡ ಇವತ್ತಿನ ದಿನದಲ್ಲಿ ಗಮನಿಸಲಾಗುತ್ತದೆ. ಹಿಂದೆಲ್ಲಾ ಮದುವೆ ಸಮಯದಲ್ಲಿ ಜಾತಕವನ್ನು ನೋಡುತ್ತಿದ್ದರು. ಇವತ್ತಿಗೆ ಹುಡುಗ/ಹುಡುಗಿಯ ಕ್ರೆಡಿಟ್ ಸ್ಕೋರ್ ಎಷ್ಟು ಎಂದು ಕೇಳುವ ಮಟ್ಟಕ್ಕೆ ಬದುಕು ಬದಲಾಗಿದೆ. ಇದನ್ನು ತಮಾಷೆಗೆ ಬರೆದಿಲ್ಲ. ತೀರಾ ಇತ್ತೀಚಿಗೆ ಹುಡುಗನ ಕ್ರೆಡಿಟ್ ಸ್ಕೋರ್ ಸರಿಯಿಲ್ಲ ಎನ್ನುವ ಕಾರಣಕ್ಕೆ ಮದುವೆ ಮುರಿದುಬಿದ್ದ ಸುದ್ದಿಗೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ.
ಉದಾಹರಣೆಗೆ, ರಮೇಶ್ ಮತ್ತು ಸುರೇಶ್ ಎಂಬ ಇಬ್ಬರು ವ್ಯಕ್ತಿಗಳು ₹20 ಲಕ್ಷ ಮನೆ ಸಾಲಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದುಕೊಳ್ಳಿ. ರಮೇಶ್ ಅವರ ಸಿಬಿಲ್ ಸ್ಕೋರ್ 810 ಎಂದುಕೊಳ್ಳೋಣ, ಮತ್ತು ಸುರೇಶ್ ಅವರ ಸಿಬಿಲ್ ಸ್ಕೋರ್ 620 ಇದ್ದರೆ, ಬ್ಯಾಂಕ್ ರಮೇಶ್ ಅವರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಮಂಜೂರು ಮಾಡುವ ಸಾಧ್ಯತೆ ಹೆಚ್ಚು. ಸುರೇಶ್ ಅವರಿಗೆ ಸಾಲ ಸಿಗುವುದೇ ಕಷ್ಟವಾಗಬಹುದು ಅಥವಾ ಹೆಚ್ಚಿನ ಬಡ್ಡಿದರ ಹಾಗೂ ಹೆಚ್ಚುವರಿ ದಾಖಲೆಗಳನ್ನು ಕೇಳಬಹುದು. ಈ ಉದಾಹರಣೆ ಸಿಬಿಲ್ ಸ್ಕೋರ್‌ನ ಮಹತ್ವವನ್ನು ಸ್ಪಷ್ಟಪಡಿಸುತ್ತದೆ.
ಅಂದಹಾಗೆ ಇನ್ನೊಂದು ವಿಷಯ ಭಾರತದಲ್ಲಿ ನಾವು ಸಿಬಿಲ್ ಸ್ಕೋರ್ ಎನ್ನುತ್ತೇವೆ. ಇದನ್ನು ಸಾಮಾನ್ಯ ಎನ್ನುವಂತೆ ಎಲ್ಲರೂ ಬಳಸುತ್ತೇವೆ. ಇದು ನಿಜವಾಗಿ ಕ್ರೆಡಿಟ್ ಸ್ಕೋರ್ ಎಂದಾಗಬೇಕು. ಅದಷ್ಟೇ ನಮ್ಮಲ್ಲಿ ಕ್ರೆಡಿಟ್ ಸ್ಕೋರ್ ನೀಡುವ TransUnion CIBIL ಸಂಸ್ಥೆ ಮಾಡುತ್ತದೆ. ಬಹುತೇಕ ಬ್ಯಾಂಕುಗಳು ಇವರ ಕ್ರೆಡಿಟ್ ರೇಟಿಂಗ್ ಗೆ ಮಾನ್ಯತೆಯನ್ನು ನೀಡುತ್ತಾರೆ. ಹೀಗಾಗಿ ಇದು ಸಿಬಿಲ್ ಸ್ಕೋರ್ ಎನ್ನುವ ಮಟ್ಟಿಗೆ ಪ್ರಸಿದ್ಧವಾಗಿದೆ. ಜೆರಾಕ್ಸ್ ಮಾಡಿಸಿಕೊಂಡು ಬನ್ನಿ ಎನ್ನುವ ಹಾಗೆ , ಸಿಬಿಲ್ ಸ್ಕೋರ್ ಎಷ್ಟು ಎಂದು ಕೇಳುವ ಮಟ್ಟಿಗೆ ಸಿಬಿಲ್ ಸಂಸ್ಥೆ ಪ್ರಸಿದ್ಧ. ಇರಲಿ.
ಕೆಲವರು ಸಿಬಿಲ್ ಸ್ಕೋರ್ ಇಲ್ಲದಿದ್ದರೆ ಸಾಲ ಸಿಗುವುದಿಲ್ಲ ಎಂದು ಭಾವಿಸುತ್ತಾರೆ. ಇದು ಸಂಪೂರ್ಣ ಸತ್ಯವಲ್ಲ. ಮೊದಲ ಬಾರಿಗೆ ಸಾಲ ಪಡೆಯುವವರಿಗೆ ಅಥವಾ ಕ್ರೆಡಿಟ್ ಕಾರ್ಡ್ ಬಳಸದವರಿಗೆ ಕ್ರೆಡಿಟ್ ಇತಿಹಾಸ ಇಲ್ಲದ ಕಾರಣ “No Credit History” ಅಥವಾ “-1” ಎಂದು ಕಾಣಿಸಬಹುದು. ಇಂತಹ ಸಂದರ್ಭಗಳಲ್ಲಿ ಬ್ಯಾಂಕುಗಳು ಆದಾಯ, ಉದ್ಯೋಗ, ಬ್ಯಾಂಕ್ ವ್ಯವಹಾರಗಳು ಹಾಗೂ ಇತರ ಹಣಕಾಸಿನ ದಾಖಲೆಗಳನ್ನು ಪರಿಶೀಲಿಸಿ ಸಾಲ ನೀಡುತ್ತವೆ. ಆದರೆ ಒಮ್ಮೆ ಸಾಲ ಅಥವಾ ಕ್ರೆಡಿಟ್ ಕಾರ್ಡ್ ಬಳಕೆ ಆರಂಭವಾದ ನಂತರ ನಿಯಮಿತ ಪಾವತಿಗಳ ಮೂಲಕ ಉತ್ತಮ ಸಿಬಿಲ್ ಸ್ಕೋರ್ ನಿರ್ಮಿಸಿಕೊಳ್ಳಬಹುದು.
ಸಿಬಿಲ್ ಸ್ಕೋರ್ ಕಡಿಮೆಯಾಗಲು ಪ್ರಮುಖ ಕಾರಣಗಳಲ್ಲಿ EMI ಅಥವಾ ಕ್ರೆಡಿಟ್ ಕಾರ್ಡ್ ಪಾವತಿಯನ್ನು ತಪ್ಪಿಸುವುದು, ನಿರಂತರ ವಿಳಂಬ ಪಾವತಿ, ಅತಿಯಾದ ಸಾಲದ ಹೊರೆ, ಕ್ರೆಡಿಟ್ ಕಾರ್ಡ್ ಮಿತಿಯನ್ನು ಸಂಪೂರ್ಣ ಬಳಸುವುದು, ಪದೇ ಪದೇ ಹೊಸ ಸಾಲಗಳಿಗೆ ಅರ್ಜಿ ಸಲ್ಲಿಸುವುದು ಹಾಗೂ ಸಾಲವನ್ನು ಡಿಫಾಲ್ಟ್ ಮಾಡುವುದು ಸೇರಿವೆ. ಇಂತಹ ತಪ್ಪುಗಳನ್ನು ಮಾಡದಿದ್ದರೆ ಸಿಬಿಲ್ ಸ್ಕೋರ್ ಉತ್ತಮವಾಗಿರುತ್ತದೆ.
ಸಿಬಿಲ್ ಸ್ಕೋರ್ ಸುಧಾರಿಸಲು ಕೆಲವು ಸರಳ ಕ್ರಮಗಳನ್ನು ಅನುಸರಿಸಬಹುದು. ಪ್ರತಿಯೊಂದು EMI ಮತ್ತು ಕ್ರೆಡಿಟ್ ಕಾರ್ಡ್ ಬಾಕಿಯನ್ನು ನಿಗದಿತ ದಿನಾಂಕದೊಳಗೆ ಪಾವತಿಸಬೇಕು. ಕ್ರೆಡಿಟ್ ಕಾರ್ಡ್ ಮಿತಿಯ 30% ರಿಂದ 40% ಒಳಗೆ ಮಾತ್ರ ಬಳಸುವುದು ಉತ್ತಮ. ಅಗತ್ಯವಿಲ್ಲದ ಸಾಲಗಳಿಗೆ ಅರ್ಜಿ ಸಲ್ಲಿಸಬಾರದು. ಹಳೆಯ ಕ್ರೆಡಿಟ್ ಕಾರ್ಡ್ ಖಾತೆಗಳನ್ನು ಅನಗತ್ಯವಾಗಿ ಮುಚ್ಚದಿರುವುದು ಉತ್ತಮ, ಏಕೆಂದರೆ ದೀರ್ಘಾವಧಿಯ ಕ್ರೆಡಿಟ್ ಇತಿಹಾಸವು ಸ್ಕೋರ್‌ಗೆ ಸಹಕಾರಿಯಾಗಿದೆ. ನಿಮ್ಮ ಕ್ರೆಡಿಟ್ ವರದಿಯನ್ನು ಕಾಲಕಾಲಕ್ಕೆ ಪರಿಶೀಲಿಸಿ ಯಾವುದೇ ತಪ್ಪು ಮಾಹಿತಿ ಇದ್ದರೆ ಅದನ್ನು ಸರಿಪಡಿಸಿಕೊಳ್ಳಬೇಕು.
ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಸಾಲಗಳು, “Buy Now Pay Later” ಸೇವೆಗಳು ಮತ್ತು ಸಣ್ಣ ಅವಧಿಯ ಸಾಲಗಳ ಬಳಕೆ ಹೆಚ್ಚುತ್ತಿದೆ. ಇವುಗಳ ಪಾವತಿಯನ್ನು ಕೂಡ ಸಮಯಕ್ಕೆ ಸರಿಯಾಗಿ ಮಾಡದಿದ್ದರೆ ಸಿಬಿಲ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಯಾವುದೇ ಸಾಲವನ್ನು ತೆಗೆದುಕೊಳ್ಳುವ ಮೊದಲು ಅದನ್ನು ಮರುಪಾವತಿಸುವ ಸಾಮರ್ಥ್ಯವಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.
ಸಾಲ ಪಡೆಯುವಾಗ ಬ್ಯಾಂಕುಗಳು ಕೇವಲ ಸಿಬಿಲ್ ಸ್ಕೋರ್ ಮಾತ್ರವಲ್ಲದೆ ನಿಮ್ಮ ಆದಾಯ, ಉದ್ಯೋಗದ ಸ್ಥಿರತೆ, ಸಾಲ-ಆದಾಯ ಅನುಪಾತ, ಬ್ಯಾಂಕ್ ಖಾತೆಯ ವ್ಯವಹಾರಗಳು ಮತ್ತು ಇತರ ದಾಖಲೆಗಳನ್ನು ಸಹ ಪರಿಶೀಲಿಸುತ್ತವೆ. ಆದಾಗ್ಯೂ, ಉತ್ತಮ ಸಿಬಿಲ್ ಸ್ಕೋರ್ ಇದ್ದರೆ ಸಾಲದ ಅನುಮೋದನೆ ಸುಲಭವಾಗುತ್ತದೆ ಮತ್ತು ಬ್ಯಾಂಕಿನ ವಿಶ್ವಾಸವೂ ಹೆಚ್ಚುತ್ತದೆ.
ಸಿಬಿಲ್ ಸ್ಕೋರ್ ಯಾರು ನೀಡುತ್ತಾರೆ?
ಭಾರತದಲ್ಲಿ ಸಿಬಿಲ್ ಸ್ಕೋರ್ ಅನ್ನು TransUnion CIBIL ನೀಡುತ್ತದೆ. ಇದು ಭಾರತದ ಮೊದಲ ಹಾಗೂ ಅತ್ಯಂತ ಪ್ರಸಿದ್ಧ ಕ್ರೆಡಿಟ್ ಮಾಹಿತಿ ಸಂಸ್ಥೆಯಾಗಿದೆ. ಈ ಸಂಸ್ಥೆಯು ಬ್ಯಾಂಕುಗಳು, ಎನ್‌ಬಿಎಫ್‌ಸಿಗಳು (NBFCs), ಕ್ರೆಡಿಟ್ ಕಾರ್ಡ್ ಕಂಪನಿಗಳು ಮತ್ತು ಇತರ ಹಣಕಾಸು ಸಂಸ್ಥೆಗಳಿಂದ ಸಾಲಗಾರರ ಹಣಕಾಸಿನ ಮಾಹಿತಿಯನ್ನು ಸಂಗ್ರಹಿಸಿ, ಅವರ ಕ್ರೆಡಿಟ್ ವರದಿ ಮತ್ತು ಸಿಬಿಲ್ ಸ್ಕೋರ್ ಅನ್ನು ಸಿದ್ಧಪಡಿಸುತ್ತದೆ.
ಆದರೆ, ಭಾರತದಲ್ಲಿ ಸಿಬಿಲ್ ಮಾತ್ರವಲ್ಲದೆ, ಭಾರತೀಯ ರಿಸರ್ವ್ ಬ್ಯಾಂಕ್ (RBI) ಅನುಮೋದಿಸಿರುವ ಇನ್ನೂ ಕೆಲವು ಕ್ರೆಡಿಟ್ ಮಾಹಿತಿ ಸಂಸ್ಥೆಗಳೂ ಕಾರ್ಯನಿರ್ವಹಿಸುತ್ತಿವೆ. ಅವುಗಳೆಂದರೆ:
ಭಾರತದಲ್ಲಿ CRISIL, ICRA, CARE, ONICRA, FITCH & SMERA ಇವು ಪ್ರಮುಖ ಸಂಸ್ಥೆಗಳು. ಕ್ರೆಡಿಟ್ ರೇಟಿಂಗ್ ಸಾಲ ಪಡೆಯುವನ ಕ್ರೆಡಿಬಿಲಿಟಿ ಹೇಳುವ ಒಂದು ವಿಧಾನ . ಕ್ರೆಡಿಟ್ ರೇಟಿಂಗ್ ಕೇವಲ ಸಾಲ ಮಾರುಕಟ್ಟೆಯಿಂದ ಎತ್ತಲು ಹವಣಿಸುವ ಕಂಪನಿಗಳಿಗೂ ಅನ್ವಯಿಸುತ್ತೆ . ಅಂದರೆ ಹೂಡಿಕೆದಾರರಿಗೆ ಡೆಟ್ ಬಾಂಡ್ ವಿತರಿಸುವ ಕಂಪನಿಯ ಬಗ್ಗೆ ಅವರ ಕ್ರೆಡಿಬಿಲಿಟಿ ಬಗ್ಗೆ ಹೇಳುವ ಒಂದು ಸರಳ ವಿಧಾನ . ನೀವು ಮಾರುಕಟ್ಟೆಯಲ್ಲಿ ನೋಡಿರಬಹದು AA + ರೇಟಿಂಗ್ AAA ರೇಟಿಂಗ್ ಅಥವಾ BB ರೇಟಿಂಗ್ ಹೀಗೆ ಸಾಗುತ್ತದೆ . ಮೂರು ಎ ಅತ್ಯಂತ ಸುರಕ್ಷಿತ ಎನ್ನುವ ಸಂದೇಶ ನೀಡುತ್ತದೆ . AA + ಆಲ್ಪ ರಿಸ್ಕ್ ಎನ್ನುವುದನ್ನ ಹೇಳುತ್ತದೆ ಹೀಗೆ ನಂತರದ ರೇಟಿಂಗ್ ರಿಸ್ಕ್ ಹೆಚ್ಚು ಎನ್ನುವುದನ್ನ ಹೇಳುತ್ತದೆ . ಈ ಸಂಸ್ಥೆಗಳು ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಿಂದ ಪಡೆದ ಮಾಹಿತಿಯ ಆಧಾರದ ಮೇಲೆ ಕ್ರೆಡಿಟ್ ವರದಿಯನ್ನು ಸಿದ್ಧಪಡಿಸುತ್ತವೆ. ಈ ಸಂಸ್ಥೆಗಳು ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಿಂದ ಪಡೆದ ಮಾಹಿತಿಯ ಆಧಾರದ ಮೇಲೆ ಕ್ರೆಡಿಟ್ ವರದಿಯನ್ನು ಸಿದ್ಧಪಡಿಸುತ್ತವೆ. ಪ್ರತಿ ಸಂಸ್ಥೆಯ ಸ್ಕೋರ್ ಲೆಕ್ಕಾಚಾರದ ವಿಧಾನದಲ್ಲಿ ಸ್ವಲ್ಪ ವ್ಯತ್ಯಾಸ ಇದ್ದೆ ಇರುತ್ತದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ರೀತಿಯ ಕ್ರೆಡಿಟ್ ರೇಟಿಂಗ್ ನೀಡುವ ಸಂಸ್ಥೆಗಳಾವುವು?
ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೂರು ಸಂಸ್ಥೆಗಳು ಮಾರುಕಟ್ಟೆಯ ತೊಂಬತ್ತೈದು ಭಾಗ ಆಕ್ರಮಿಸಿವೆ . Moody's Investors Service ಮತ್ತು Standard & Poor's (S&P) ಜೊತೆಯಲ್ಲಿ ಎಂಬತ್ತು ಭಾಗ ಮಾರುಕಟ್ಟೆಯ ಪಾರುಪತ್ಯ ಹೊಂದಿವೆ . ಉಳಿದಂತೆ Fitch Ratings ಸಂಸ್ಥೆ ಹದಿನೈದು ಭಾಗ ತನ್ನ ತೆಕ್ಕೆಗೆ ತೆಗೆದುಕೊಂಡಿದೆ .
ಡೆಟ್ ಅಥವಾ ಕ್ರೆಡಿಟ್ ರೇಟಿಂಗ್ ಅವಶ್ಯಕತೆ ಏನು?
ಮಾರುಕಟ್ಟೆಯಲ್ಲಿ ಪಡೆದ ಸಾಲ ಮರುಪಾವತಿಸದೆ ಹೋದವರ ಸಂಖ್ಯೆ ಹೆಚ್ಚಾಗಿ ಸಾಲ ಕೊಟ್ಟವರು ಸಂಕಷ್ಟಕ್ಕೆ ಸಿಲುಕಿದ ಉದಾಹರಣೆಗಳು ಹೆಚ್ಚಾಗಿ ಇಂತಹ ಸಂಸ್ಥೆಗಳು ಹುಟ್ಟಿಕೊಂಡವು . ಇಂತಹ ಸಂಸ್ಥೆಗಳಿಂದ ಉತ್ತಮ ರೇಟಿಂಗ್ ಪಡೆದ ಸಾಲಗಾರರು ಸುಸ್ತಿದಾರರಾಗುವ (ಡಿಫಾಲ್ಟ್ ರ್ಸ್ ) ಸಾಧ್ಯತೆ ಬಹಳ ಕಡಿಮೆ . ಹೀಗಾಗಿ ಇಂತಹ ರೇಟಿಂಗ್ ಇಲ್ಲದಿದ್ದರೆ ಸಾಲವೇ ಹುಟ್ಟುವುದಿಲ್ಲ ಎನ್ನುವ ಮಟ್ಟಕ್ಕೆ ಇಂದು ಮಾರುಕಟ್ಟೆ ಬಂದು ನಿಂತಿದೆ.ಮೂಡಿಸ್ ೧೯೦೯ ರಲ್ಲಿ ಈ ರೀತಿಯ ಕ್ರೆಡಿಟ್ ರೇಟಿಂಗ್ ನೀಡಲು ಶುರು ಮಾಡಿದ ಮೊದಲ ಸಂಸ್ಥೆ . ಬೇರೆ ಇಂತಹುದೆ ಏಜೆನ್ಸಿಗಳು ಮಾರುಕಟ್ಟೆಗೆ ಬರಲು ದಶಕ ಬೇಕಾಯಿತು
ಕೊನೆ ಮಾತು : ಉತ್ತಮ ಸಿಬಿಲ್ ಸ್ಕೋರ್ ಹೊಂದುವುದು ಉತ್ತಮ ವಿದ್ಯಾಭ್ಯಾಸದ ಸಮಯದಲ್ಲಿ ಉತ್ತಮ ಅಂಕಗಳನ್ನು ತೆಗೆದಷ್ಟೇ ಪ್ರಾಮುಖ್ಯತೆಯನ್ನು ಪಡೆದಿದೆ. ಬೇಕೋ ಬೇಡವೋ ನಾವು ಈ ವ್ಯವಸ್ಥೆಯಲ್ಲಿ ಭಾಗಿಗಳು. ಹೀಗಾಗಿ ೭೫೦ ರ ಆಸುಪಾಸಿನಲ್ಲಿ ಈ ಸಂಖ್ಯೆ ಇಟ್ಟುಕೊಳ್ಳುವುದು ಹಣಕಾಸಿನ ಆರೋಗ್ಯಕ್ಕೆ ಒಳ್ಳೆಯದು.