ಪ್ರೋಬಯೋಟಿಕ್ಸ್: ಉತ್ತಮ ಆರೋಗ್ಯಕ್ಕೆ ಸ್ನೇಹಿ ಬ್ಯಾಕ್ಟೀರಿಯಾಗಳು (ಕುಶಲವೇ ಕ್ಷೇಮವೇ)

ಜೀರ್ಣಾಂಗ ವ್ಯವಸ್ಥೆ ನಮ್ಮ ದೇಹದ ಒಟ್ಟಾರೆ ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಸಮರ್ಪಕ ಆಹಾರ ಪದ್ಧತಿ, ಒತ್ತಡ, ಅನಾರೋಗ್ಯ ಅಥವಾ ಆಂಟಿಬಯೋಟಿಕ್ ಔಷಧಿಗಳ ಹೆಚ್ಚಾದ ಬಳಕೆಯಿಂದ ದೇಹದಲ್ಲಿ ಬ್ಯಾಕ್ಟೀರಿಯಾಗಳ ಸಮತೋಲನ ಕೆಡಬಹುದು.
Probiotic-Rich Foods (file photo)
ಪ್ರೋಬಯೋಟಿಕ್ಸ್ ಆಹಾರಗಳು (ಸಂಗ್ರಹ ಚಿತ್ರ)online desk
Updated on

ಇತ್ತೀಚೆಗೆ ಆರೋಗ್ಯ ಮತ್ತು ಪೋಷಣೆಯ ಕುರಿತು ನಡೆಯುವ ಚರ್ಚೆಗಳಲ್ಲಿ ಪ್ರೋಬಯೋಟಿಕ್ಸ್ ಎಂಬ ಪದವನ್ನು ನಾವು ಬಹಳ ಸಲ ಕೇಳುತ್ತಿದ್ದೇವೆ. ಪ್ರೋಬಯೋಟಿಕ್ಸನ್ನು ಸಾಮಾನ್ಯವಾಗಿ “ಉತ್ತಮ ಬ್ಯಾಕ್ಟೀರಿಯಾಗಳು” ಎಂದು ಕರೆಯಲಾಗುತ್ತದೆ, ಏಕೆಂದರೆ ಅವು ನಮ್ಮ ಜೀರ್ಣಾಂಗ ವ್ಯವಸ್ಥೆಯಲ್ಲಿ ಇರುವ ಸೂಕ್ಷ್ಮಜೀವಿಗಳ ಸಮತೋಲನವನ್ನು ಕಾಪಾಡಲು ಸಹಾಯ ಮಾಡುತ್ತವೆ.

ಮಾನವನ ದೇಹದಲ್ಲಿ ಅನೇಕಾನೇಕ ಬ್ಯಾಕ್ಟೀರಿಯಾಗಳು (ಸೂಕ್ಷ್ಮಾಣುಜೀವಿಗಳು) ಸಹಜವಾಗಿ ವಾಸಿಸುತ್ತವೆ. ಅವುಗಳಲ್ಲಿ ಕೆಲವು ನಮ್ಮ ಆರೋಗ್ಯಕ್ಕೆ ಹಾನಿಕಾರಿ. ಆದರೆ ಅನೇಕ ಸೂಕ್ಷ್ಮಾಣುಜೀವಿಗಳು ದೇಹದ ಆರೋಗ್ಯಕ್ಕೆ ಸಹಾಯಕವಾಗುತ್ತವೆ. ಈ ಉಪಯುಕ್ತ ಬ್ಯಾಕ್ಟೀರಿಯಾಗಳನ್ನೇ ಪ್ರೋಬಯೋಟಿಕ್ಸ್ ಎಂದು ಕರೆಯುತ್ತಾರೆ.

ಪ್ರೋಬಯೋಟಿಕ್ ಆಹಾರಗಳು

ಜೀರ್ಣಾಂಗ ವ್ಯವಸ್ಥೆ ನಮ್ಮ ದೇಹದ ಒಟ್ಟಾರೆ ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಸಮರ್ಪಕ ಆಹಾರ ಪದ್ಧತಿ, ಒತ್ತಡ, ಅನಾರೋಗ್ಯ ಅಥವಾ ಆಂಟಿಬಯೋಟಿಕ್ ಔಷಧಿಗಳ ಹೆಚ್ಚಾದ ಬಳಕೆಯಿಂದ ದೇಹದಲ್ಲಿ ಬ್ಯಾಕ್ಟೀರಿಯಾಗಳ ಸಮತೋಲನ ಕೆಡಬಹುದು. ಇದರ ಪರಿಣಾಮವಾಗಿ ಜೀರ್ಣಕ್ರಿಯೆ ಸಮಸ್ಯೆಗಳು, ಉಬ್ಬರ, ಮಲಬದ್ಧತೆ ಹಾಗೂ ರೋಗನಿರೋಧಕ ಶಕ್ತಿ ಕಡಿಮೆಯಾಗುವುದು ಮುಂತಾದ ತೊಂದರೆಗಳು ಉಂಟಾಗಬಹುದು. ಇಂತಹ ಸಂದರ್ಭಗಳಲ್ಲಿ ಪ್ರೋಬಯೋಟಿಕ್ ಆಹಾರಗಳು ನಮ್ಮ ಆರೋಗ್ಯ ಸುಸ್ಥಿರವಾಗಿರಲು ಸಹಾಯ ಮಾಡುತ್ತವೆ.

ಪ್ರೋಬಯೋಟಿಕ್ಸ್ ನ ಸಾಮಾನ್ಯ ಮೂಲ ಮೊಸರು

ಪ್ರೋಬಯೋಟಿಕ್ಸ್ನ ಅತ್ಯಂತ ಸಾಮಾನ್ಯ ಮೂಲವೆಂದರೆ ಮೊಸರು. ಹಾಲನ್ನು ಹೆಪ್ಪು ಹಾಕಿದಾಗ ಬ್ಯಾಕ್ಟೀರಿಯಾಗಳ ಸಹಾಯದಿಂದ ಮೊಸರು ತಯಾರಾಗುತ್ತದೆ. ಊಟದಲ್ಲಿ ಮೊಸರು ಸೇವಿಸುವುದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ವಿಶೇಷವಾಗಿ ಬೇಸಿಗೆ ಸಮಯದಲ್ಲಿ ದೇಹಕ್ಕೆ ತಂಪು ನೀಡುತ್ತದೆ. ಮೊಸರಿನಿಂದ ತಯಾರಿಸಲಾದ ಮಜ್ಜಿಗೆ ಕೂಡ ಆರೋಗ್ಯಕರ ಪಾನೀಯವಾಗಿದೆ. ಮಜ್ಜಿಗೆಗೆ ಜೀರಿಗೆ, ಶುಂಠಿ ಅಥವಾ ಉಪ್ಪು ಸೇರಿಸಿದರೆ ಅದು ರುಚಿಕರವಾಗುವುದರ ಜೊತೆಗೆ ಜೀರ್ಣಕ್ರಿಯೆಗೆ ಸಹಕಾರಿಯಾಗುತ್ತದೆ.

ಮೊಸರಿನಲ್ಲಿ ಕಂಡುಬರುವ ಆರೋಗ್ಯಸ್ನೇಹಿ ಜೀವಂತ ಬ್ಯಾಕ್ಟೀರಿಯಾಗಳು ಅಥವಾ ಪ್ರೋಬಯಾಟಿಕ್ಸ್ ಗಳು ಕರುಳಿನಲ್ಲಿ ಆರೋಗ್ಯಕರ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಉತ್ತೇಜಿಸುತ್ತವೆ, ಇದು ಜೀರ್ಣಕ್ರಿಯೆ ಸುಲಭವಾಗಲು ಸಹಾಯ ಮಾಡುತ್ತದೆ ಮತ್ತು ಹೊಟ್ಟೆಯುಬ್ಬರಿಕೆ, ಮಲಬದ್ಧತೆ ಮತ್ತು ಅತಿಸಾರದಂತಹ ಜೀರ್ಣಾಂಗಗಳಿಗೆ ಸಂಬಂಧಿಸಿದ ಕಾಯಿಲೆಗಳು ಎದುರಾಗದಂತೆ ತಡೆಯಲು ನೆರವಾಗುತ್ತದೆ.

ಹುದುಗಿಸಿದ (ಫರ್ಮೆಂಟೆಡ್) ಆಹಾರಗಳು

ಹುದುಗಿಸಿದ (ಫರ್ಮೆಂಟೆಡ್) ಆಹಾರಗಳು ಸಹ ಪ್ರೋಬಯೋಟಿಕ್ಸ್ ನ ಉತ್ತಮ ಮೂಲಗಳಾಗಿವೆ. ಇಡ್ಲಿ ಮತ್ತು ದೋಸೆ ಹಿಟ್ಟನ್ನು ಹುದುಗಿಸುವ ಪ್ರಕ್ರಿಯೆ ಇದಕ್ಕೆ ಉದಾಹರಣೆ. ಈ ಪ್ರಕ್ರಿಯೆಯಿಂದ ಧಾನ್ಯಗಳು ಮತ್ತು ಬೇಳೆಗಳು ಜೀರ್ಣವಾಗುವ ಸಾಮರ್ಥ್ಯ ಹೆಚ್ಚುತ್ತದೆ. ಈ ಆಹಾರದೊಂದಿಗೆ ದೇಹಕ್ಕೆ ಹೆಚ್ಚಿನ ಪೋಷಕಾಂಶಗಳು ದೊರಕುತ್ತವೆ.

Probiotic-Rich Foods (file photo)
ಹುಣಸೆ: ಪೌಷ್ಕಿಕಾಂಶ ಮತ್ತು ಔಷಧೀಯ ಗುಣಗಳ ಭಂಡಾರ (ಕುಶಲವೇ ಕ್ಷೇಮವೇ)

ಉಪ್ಪಿನಕಾಯಿ

ಇದರ ಜೊತೆಗೆ ನಮ್ಮ ದೈನಂದಿನ ಆಹಾರದಲ್ಲಿ ಇನ್ನೂ ಹಲವಾರು ಪ್ರೋಬಯೋಟಿಕ್ಸ್ ಸಮೃದ್ಧ ಆಹಾರಗಳನ್ನು ಉಪಯೋಗಿಸಬಹುದು. ಉದಾಹರಣೆಗೆ ಉಪ್ಪಿನಕಾಯಿಯನ್ನು ಸಾಂಪ್ರದಾಯಿಕವಾಗಿ ಹುದುಗಿಸುವ ವಿಧಾನದಲ್ಲಿ ತಯಾರಿಸಿದರೆ ಅವುಗಳಲ್ಲಿ ಸಹ ಉಪಯುಕ್ತ ಬ್ಯಾಕ್ಟೀರಿಯಾಗಳು ಕಂಡುಬರುತ್ತವೆ. ವಿಶೇಷವಾಗಿ ಉಪ್ಪು ಮತ್ತು ಮಸಾಲೆಗಳಿಂದ ತಯಾರಿಸಲಾದ ನೈಸರ್ಗಿಕ ಹುದುಗಿದ ಉಪ್ಪಿನಕಾಯಿಗಳು ಜೀರ್ಣಾಂಗ ಆರೋಗ್ಯಕ್ಕೆ ಸಹಕಾರಿ. ಆದ್ದರಿಂದ ನಿಂಬೆಕಾಯಿ, ಮಾವಿನಕಾಯಿ, ಮಿಡಿ, ಹೆರಳೇಕಾಯಿ ಮತ್ತು ಇತ್ತೀಚೆಗೆ ಬಗೆಬಗೆಯ ತರಕಾರಿಗಳಿಂದ ತಯಾರಿಸಿದ ಉಪ್ಪಿನಕಾಯಿಯ ನಿಯಮಿತ ಸೇವನೆ ಒಳ್ಳೆಯದು.

ಅಕ್ಕಿ ಗಂಜಿ

ಅಕ್ಕಿ ಗಂಜಿಯನ್ನು ಕೆಲವರು ರಾತ್ರಿ ಇಟ್ಟು ಬೆಳಿಗ್ಗೆ ಸೇವಿಸುವ ಪದ್ಧತಿಯೂ ಇದೆ. ಈ ಪದ್ಧತಿಯಲ್ಲಿ ಸಹ ಹುದುಗುವಿಕೆಯಿಂದ ಕೆಲವು ಉಪಯುಕ್ತ ಸೂಕ್ಷ್ಮಾಣುಜೀವಿಗಳು ಉತ್ಪತ್ತಿಯಾಗುತ್ತವೆ ಎಂದು ತಿಳಿದುಬಂದಿದೆ. ನಮ್ಮ ದೇಶದ ಕೆಲವು ಪ್ರದೇಶಗಳಲ್ಲಿ ಕಾಂಜಿ ಎಂಬ ಹುದುಗಿದ ಅಕ್ಕಿ ಪಾನೀಯವನ್ನು ತಯಾರಿಸಲಾಗುತ್ತದೆ. ಇದು ದೇಹಕ್ಕೆ ಶಕ್ತಿ ನೀಡುವುದರ ಜೊತೆಗೆ ಜೀರ್ಣಕ್ರಿಯೆಗೆ ಸಹ ಸಹಾಯ ಮಾಡುತ್ತದೆ.

ಲಸ್ಸಿ ಮತ್ತು ಮಸಾಲಾ ಛಾಸ್ (ಮಜ್ಜಿಗೆ)

ಉತ್ತರ ಭಾರತದಲ್ಲಿ ಮೊಸರು ಮತ್ತು ಸಕ್ಕರೆ ಸೇರಿಸಿ ತಯಾರಿಸುವ ಲಸ್ಸಿ ಮತ್ತು ಮಸಾಲಾ ಛಾಸ್ (ಮಜ್ಜಿಗೆ) ಕೂಡ ಪ್ರೋಬಯೋಟಿಕ್ ಪಾನೀಯಗಳಾಗಿ ಪ್ರಸಿದ್ಧವಾಗಿವೆ. ಇವುಗಳಲ್ಲಿರುವ ಜೀವಂತ ಬ್ಯಾಕ್ಟೀರಿಯಾಗಳು ಕರುಳಿನ ಆರೋಗ್ಯವನ್ನು ಉತ್ತಮವಾಗಿಡಲು ನೆರವಾಗುತ್ತವೆ.

ಇತ್ತೀಚಿಗೆ ಮಾರುಕಟ್ಟೆಯಲ್ಲಿ ವಿವಿಧ ಪ್ರೋಬಯೋಟಿಕ್ ಪಾನೀಯಗಳು ಮತ್ತು ಯೋಗರ್ಟ್ ಉತ್ಪನ್ನಗಳು ಸಹ ದೊರೆಯುತ್ತಿವೆ. ಇವುಗಳ ಬಗ್ಗೆ ವಿವಿಧ ಮಾಧ್ಯಮಗಳಲ್ಲಿ ಅದರಲ್ಲಿಯು ಇನ್ಸ್ಟಾಗ್ರಾಮಿನಂತಹ ಸಾಮಾಜಿಕ ಮಾಧ್ಯಮಗಳಲ್ಲಿ ಹೇರಳವಾಗಿ ರೀಲ್ಸುಗಳು ಬರುತ್ತಿವೆ. ಆದರೆ ಸಾಧ್ಯವಾದಷ್ಟು ನೈಸರ್ಗಿಕವಾಗಿ ತಯಾರಿಸಲಾದ ಸಾಂಪ್ರದಾಯಿಕ ಆಹಾರಗಳನ್ನು ಸೇವಿಸುವುದೇ ಆರೋಗ್ಯಕರವಾಗಿದೆ. ಮನೆಯಲ್ಲಿ ಶುಚಿರುಚಿಯಾಗಿ ತಯಾರಿಸಿದ ಆಹಾರಕ್ಕಿಂತ ಉತ್ತಮ ಆಹಾರವಿಲ್ಲ ಎಂಬುದನ್ನು ನಾವು ನೆನಪಿಡಬೇಕು.

ತರಕಾರಿಗಳು

ಇವುಗಳ ಹೊರತಾಗಿ ಕೆಲವು ತರಕಾರಿಗಳನ್ನು ಸಹ ಹುದುಗಿಸುವ ಮೂಲಕ ಪ್ರೋಬಯೋಟಿಕ್ಸ್ ಯುಕ್ತ ಆಹಾರವಾಗಿ ಇಂದು ಬಳಸಲಾಗುತ್ತದೆ. ಉದಾಹರಣೆಗೆ ಎಲೆಕೋಸು, ಸೌತೆಕಾಯಿ, ಕ್ಯಾರೆಟ್, ಬೀಟ್ರೂಟ್ ಮತ್ತಿತರ ತರಕಾರಿಗಳನ್ನು ಹೆಚ್ಚಿ ಉಪ್ಪುನೀರಿನಲ್ಲಿಟ್ಟು ಹುದುಗಿಸಲಾಗುತ್ತದೆ. ಇವುಗಳೂ ಸಹ ಪ್ರೋಬಯೋಟಿಕ್ಸ್ನ ಉತ್ತಮ ಮೂಲಗಳಾಗಿವೆ. ಇಂತಹ ಹುದುಗಿದ ಆಹಾರಗಳನ್ನು ಮಿತವಾಗಿ ಮತ್ತು ನಿಯಮಿತವಾಗಿ ಸೇವಿಸುವುದರಿಂದ ಕರುಳಿನ ಆರೋಗ್ಯ ಉತ್ತಮವಾಗಲು ಸಹಾಯವಾಗುತ್ತದೆ.

ಕೊನೆಮಾತು: ಒಟ್ಟಾರೆ ಹೇಳುವುದಾದರೆ ಸರಿಯಾದ ಆಹಾರ ಪದ್ಧತಿ, ಹುದುಗಿದ ಆಹಾರಗಳ ನಿಯಮಿತ ಸೇವನೆ ಹಾಗೂ ಸಮತೋಲನ ಆಹಾರದಿಂದ ನಮ್ಮ ಜೀರ್ಣಾಂಗ ವ್ಯವಸ್ಥೆಯ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬಹುದು.


Dr Vasundhara Bhupathi

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com