ಅಮೇರಿಕಾದಲ್ಲಿ ರಿಲಯನ್ಸ್ ಹೂಡಿಕೆಯೆಷ್ಟು ಸರಿ? (ಹಣಕ್ಲಾಸು)

ಗಮನಿಸಿ ನೋಡಿ ರಿಲಯನ್ಸ್ ಕೇವಲ ತೈಲ ಮತ್ತು ಅನಿಲ ಸಂಸ್ಥೆಯಾಗಿ ಉಳಿದುಕೊಂಡರೆ ಅದು ಇನ್ನೊಂದು ದಶಕದಲ್ಲಿ ಮುಳುಗಿ ಹೋಗುತ್ತದೆ.
Donald Trump- Mukhesh Ambani
ಡೊನಾಲ್ಡ್ ಟ್ರಂಪ್-ಅಂಬಾನಿonline desk
Updated on

ಭಾರತದಂತಹ ಅತಿ ದೊಡ್ಡ ದೇಶದಲ್ಲಿ ಏನೇ ಮಾಡಿದರೂ ಅದರಲ್ಲಿ ತಪ್ಪು ಹುಡುಕವರಿಗೆ ಕೊರತೆಯಿಲ್ಲ. ಪ್ರತಿಯೊಂದನ್ನು ಕೂಡ ಇಲ್ಲಿ ತತ್ವ ಸಿದ್ದಾಂತಗಳ ಕನ್ನಡಕದಲ್ಲಿ ನೋಡಲಾಗುತ್ತದೆ. ಅದರಲ್ಲಿ ರಾಜಕೀಯವೂ ಬೆರೆತು ಬಿಟ್ಟಾಗ ಅದರ ಬಗ್ಗೆ ಹೇಳುವುದೇ ಬೇಡ. ಭಾರತದ ಪ್ರಮುಖ ಉದ್ಯಮಿ ಮುಕೇಶ್ ಅಂಬಾನಿ ಅವರ ರಿಲಯನ್ಸ್ ಇಂಡಸ್ಟ್ರೀಸ್ ಅಮೇರಿಕಾದಲ್ಲಿ ಐತಿಹಾಸಿಕ 300 ಬಿಲಿಯನ್ ಡಾಲರ್ ಹೂಡಿಕೆ ಮಾಡುತ್ತಿರುವ ವಿಷಯವನ್ನು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ ಮಾಡಿದ ತಕ್ಷಣ ಇಲ್ಲಿನ ಒಂದು ವಲಯ ಬಂಡವಾಳವನ್ನು ಅಮೆರಿಕಕ್ಕೆ ತೆಗೆದುಕೊಂಡು ಹೋಗುವ , ಅಲ್ಲಿ ಹೂಡಿಕೆ ಮಾಡುವ ಅವಶ್ಯಕತೆಯೇನು? ಎನ್ನುವ ಪ್ರಶ್ನೆಯನ್ನು ಎತ್ತಿದ್ದಾರೆ. ಮೇಲ್ನೋಟಕ್ಕೆ ಈ ಪ್ರಶ್ನೆ ಸಹಜವಾಗಿದೆ. ಆದರೆ ಒಂದು ದೈತ್ಯ ಸಂಸ್ಥೆ , ಅದರಲ್ಲೂ ರಿಲಯನ್ಸ್ ನಂತಹದ ಅತಿ ದೊಡ್ಡ ಸಂಸ್ಥೆಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಸದಾ ಹೊಸದನ್ನು ಅಪ್ಪಿಕೊಳ್ಳಲೇ ಬೇಕಾಗುತ್ತದೆ.

ಗಮನಿಸಿ ನೋಡಿ ರಿಲಯನ್ಸ್ ಕೇವಲ ತೈಲ ಮತ್ತು ಅನಿಲ ಸಂಸ್ಥೆಯಾಗಿ ಉಳಿದುಕೊಂಡರೆ ಅದು ಇನ್ನೊಂದು ದಶಕದಲ್ಲಿ ಮುಳುಗಿ ಹೋಗುತ್ತದೆ. ಹೊಸ ತಂತ್ರಜ್ಞಾನವನ್ನು ಅಪ್ಪಿಕೊಳ್ಳದೆ ವಿಧಿಯಿಲ್ಲ. ಅಂಬಾನಿಯ ಹೂಡಿಕೆಗಳನ್ನು ಗಮನಿಸಿದರೆ, ಅವು ಕೇವಲ ವ್ಯವಹಾರ ವಿಸ್ತರಣೆಯ ಭಾಗ ಮಾತ್ರವಲ್ಲ ಅದು ತಂತ್ರಜ್ಞಾನ ಸಂಸ್ಥೆಯಾಗಿ ಬೆಳೆಯಲು ಬೇಕಾಗಿರುವ ದಾರಿಯನ್ನು ಸೃಷ್ಟಿಸಿ ಕೊಳ್ಳಲು ಅವಶ್ಯಕವಾಗಿ ಮಾಡಬೇಕಿರುವ ಕೆಲಸ ಎನ್ನಿಸುತ್ತದೆ.

ರಿಲಯನ್ಸ್ ಸಂಸ್ಥೆ ಅಮೇರಿಕಾ ದೇಶದಲ್ಲಿ ಹೂಡಿಕೆ ಮಾಡುತ್ತಿರುವುದು ಇದೆ ಮೊದಲೇನಲ್ಲ. ೧೯೯೫ ರಿಂದಲೂ ಅವರು ಅಲ್ಲಿ ಹೂಡಿಕೆ ಮಾಡುತ್ತಾ ಬಂದಿದ್ದಾರೆ. ಅಲ್ಲಿನ ಸಂಸ್ಥೆಗಳು ಭಾರತದಲ್ಲಿ , ಮತ್ತು ಇಲ್ಲಿನ ಸಂಸ್ಥೆಗಳು ಅಲ್ಲಿ ಹೂಡಿಕೆ ಮಾಡುವುದು ಸಾಮಾನ್ಯ ಸಂಗತಿ. ಇದು ಎಲ್ಲಾ ಸಮಯದಲ್ಲೂ ಆಗುತ್ತದೆ. ಇಂತಹ ಹೂಡಿಕೆಯಲ್ಲಿ ಲಾಭ ಮತ್ತು ನಷ್ಟಗಳು ಕೂಡ ಸಹಜ. 2010 ರ ಸಮಯದಲ್ಲಿ ಅಮೇರಿಕಾದಲ್ಲಿ “ಶೇಲ್ ಗ್ಯಾಸ್ ಕ್ರಾಂತಿ” ಜೋರಾಗಿತ್ತು. ಅಲ್ಲಿ ಭೂಗರ್ಭದಲ್ಲಿ ಸಿಲುಕಿಕೊಂಡಿರುವ ಅನಿಲವನ್ನು ಆಧುನಿಕ ತಂತ್ರಜ್ಞಾನ ಬಳಸಿ ಹೊರತೆಗೆಯುವ ವಿಧಾನಗಳು ವಿಶ್ವದ ಗಮನ ಸೆಳೆದವು. ಇದೇ ಸಮಯದಲ್ಲಿ ಅಂದರೆ 2010 ರಿಂದ 2014 ರ ತನಕ ರಿಲಯನ್ಸ್ ಇಂಡಸ್ಟ್ರೀಸ್ ಅಮೇರಿಕಾದ ಶೇಲ್ ಗ್ಯಾಸ್ ಕ್ಷೇತ್ರದಲ್ಲಿ ಬೃಹತ್ ಹೂಡಿಕೆ ಮಾಡಿತು.ಅವರು ಚೇವರೋನ್ ಸೇರಿದಂತೆ ಪ್ರಮುಖ ಎನರ್ಜಿ ಸಂಸ್ಥೆಗಳೊಂದಿಗೆ ಸಹಭಾಗಿತ್ವದಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಹೂಡಿಕೆ ಮಾಡಿದರು. ಇದರ ಮೂಲಕ ರಿಲಯನ್ಸ್ ಗೆ ಎರಡು ಪ್ರಮುಖ ಲಾಭಗಳಾಗಿದ್ದವು. ಒಂದು, ಆಧುನಿಕ ತಂತ್ರಜ್ಞಾನ ಪ್ರವೇಶ ಮತ್ತು ಎರಡನೆಯದು, ಜಾಗತಿಕ ಎನರ್ಜಿ ಮಾರುಕಟ್ಟೆಯ ನೇರ ಅನುಭವ.ಆದರೆ, ಕೆಲವು ವರ್ಷಗಳ ನಂತರ ಗ್ಯಾಸ್ ಬೆಲೆಗಳು ಕುಸಿದವು.ಹೀಗಾಗಿ ಆ ಹೂಡಿಕೆ ನಿರೀಕ್ಷಿತ ಲಾಭವನ್ನು ತಂದುಕೊಡದ ಕಾರಣ 2021 ರಲ್ಲಿ ರಿಲಯನ್ಸ್ ಪೂರ್ಣವಾಗಿ ಅಲ್ಲಿಂದ ತನ್ನ ಬಂಡವಾಳವನ್ನು ಹೊರ ತೆಗೆದುಕೊಂಡು ಬಂದಿತು.

ರಿಲಯನ್ಸ್ ಮತ್ತು ಮುಕೇಶ್ ಅಲ್ಲಿ ಹಣವನ್ನು ಕಳೆದುಕೊಂಡರು ಎನ್ನುವುದು ನಿಜ. ಆದರೆ ಈ ಅನುಭವದಿಂದ ಅಂಬಾನಿ ಒಂದು ಪ್ರಮುಖ ನಿರ್ಣಯಕ್ಕೆ ಬರಲು ಸಹಾಯ ಮಾಡಿತು. ಭವಿಷ್ಯ ಕೇವಲ ತೈಲ ಮತ್ತು ಅನಿಲದಲ್ಲಿ ಇಲ್ಲ. ವಿಶ್ವವು ನಿಧಾನವಾಗಿ ಶುದ್ಧ ಶಕ್ತಿ (Clean Energy) ಕಡೆಗೆ ಸಾಗುತ್ತಿದೆ. ಹವಾಮಾನ ಬದಲಾವಣೆ, ಪರಿಸರ ಸಂರಕ್ಷಣೆ ಮತ್ತು ಶಾಶ್ವತ ಅಭಿವೃದ್ಧಿ ಇವುಗಳೆಲ್ಲವೂ ಇಂಧನ ಕ್ಷೇತ್ರವನ್ನು ಹೊಸ ದಿಕ್ಕಿನಲ್ಲಿ ನಡೆಸುತ್ತವೆ ಎನ್ನುವುದು ಮತ್ತು ಆ ನಿಟ್ಟಿನಲ್ಲಿ ನಾವು ಹೆಜ್ಜೆ ಹಾಕಬೇಕು ಎನ್ನುವುದು ಆ ನಿರ್ಣಯ.

ಈ ನಿರ್ಣಯದ ಕಾರಣ ರಿಲಯನ್ಸ್ ತನ್ನ ವ್ಯವಹಾರ ತಂತ್ರವನ್ನು ಬದಲಿಸಿ ಕೊಂಡಿತು. ಅದು ತೈಲ ಮತ್ತು ಅನಿಲ ಕಂಪನಿಯಿಂದ ಶಕ್ತಿ ಮತ್ತು ತಂತ್ರಜ್ಞಾನ( ಎನರ್ಜಿ ಮತ್ತು ಟೆಕ್ನಾಲಜಿ ) ಕಂಪನಿಯಾಗಿ ಪರಿವರ್ತನೆಗೊಳ್ಳಲು ಆರಂಭಿಸಿತು. ಅಮೇರಿಕಾದಲ್ಲಿ ಹೊಸ ಹೂಡಿಕೆ ಮಾಡಿರುವುದು ಈ ಪರಿವರ್ತನೆಯ ಒಂದು ಭಾಗ ಎನ್ನುವುದನ್ನು ಕೂಡ ನಾವು ಗಮನಿಸಬೇಕು. ಹೀಗೆ ಬದಲಾವಣೆ ಮಾಡಿಕೊಳ್ಳದೆ ನಿಂತು ಬಿಟ್ಟರೆ ಅದೆಷ್ಟೇ ದೊಡ್ಡ ಸಾಮ್ರಾಜ್ಯವಾಗಿದ್ದರೂ ಅದು ಕುಸಿತವನ್ನು ಕಾಣುತ್ತದೆ.

ರಿಲಯನ್ಸ್ ಈಗ ಅಮೇರಿಕಾದಲ್ಲಿ ಶುದ್ಧ ಶಕ್ತಿ ಮತ್ತು ನವೀನ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುತ್ತಿದೆ. ಅದರಲ್ಲಿಯೇ ಪ್ರಮುಖವಾದುದು ಬ್ಯಾಟರಿ ಮತ್ತು ಶಕ್ತಿ ಸಂಗ್ರಹ ತಂತ್ರಜ್ಞಾನ.ಇದನ್ನು ನಾವು ಕೇವಲ ಆಯಿಲ್ ರಿಫೈನರಿ ಎನ್ನುವ ದೃಷ್ಟಿಯಲ್ಲಿ ಮಾತ್ರ ನೋಡಬಾರದು. ಇದು ಎನರ್ಜಿ ಸೆಕ್ಟರ್ ನಲ್ಲಿ ಮಾಡುತ್ತಿರುವ ಹೂಡಿಕೆ. ಜಾಗತಿಕವಾಗಿ ಭಾರತ ಎನರ್ಜಿ ಸೆಕ್ಟರ್ ನಲ್ಲಿ ಅದೆಷ್ಟು ಪ್ರಬಲ ಹೂಡಿಕೆದಾರನಾಗಿ ಹೊರಹೊಮ್ಮುತ್ತಿದೆ ಎನ್ನುವುದನ್ನು ಇದು ಹೇಳುತ್ತಿದೆ.

ರಿಲಯನ್ಸ್ ಮತ್ತೊಂದು ಪ್ರಮುಖ ಕ್ಷೇತ್ರವಾಗಿ ಸೌರ ಶಕ್ತಿಯನ್ನು ಆಯ್ಕೆ ಮಾಡಿಕೊಂಡಿದೆ. REC Solar Holdings ಮೂಲಕ ಉನ್ನತ ಮಟ್ಟದ ಸೌರ ತಂತ್ರಜ್ಞಾನವನ್ನು ಪಡೆದುಕೊಂಡಿದೆ. ಈ ತಂತ್ರಜ್ಞಾನವನ್ನು ಬಳಸಿಕೊಂಡು ಭಾರತದಲ್ಲಿ ದೊಡ್ಡ ಪ್ರಮಾಣದ ಸೌರ ಉತ್ಪಾದನಾ ಘಟಕಗಳನ್ನು ಸ್ಥಾಪಿಸುವ ಯೋಜನೆ ಹೊಂದಿದೆ.

Donald Trump- Mukhesh Ambani
Death folder: ಅನಿವಾಸಿ ಭಾರತೀಯರು ಗಮನ ಹರಿಸಬೇಕಾದ ಅಂಶಗಳಿವು... (ಹಣಕ್ಲಾಸು)

ಇದು ಮೇಕ್ ಇನ್ ಇಂಡಿಯಾ ಉದ್ದೇಶಕ್ಕೂ ಹೊಂದಿಕೊಂಡಿದೆ. ಅಂದರೆ, ಜಾಗತಿಕ ತಂತ್ರಜ್ಞಾನವನ್ನು ಭಾರತಕ್ಕೆ ತರಿಸಿ, ಕಡಿಮೆ ವೆಚ್ಚದಲ್ಲಿ ಉತ್ಪಾದನೆ ಮಾಡಿ, ಜಾಗತಿಕ ಮಾರುಕಟ್ಟೆಗೆ ಪೂರೈಕೆ ಮಾಡುವುದು ಉದ್ದೇಶ. ಗಮನಿಸಿ ನೋಡಿ , ಭಾರತ ಇದು ಈ ಮಟ್ಟಿಗೆ ಬೆಳೆಯಲು ಕಾರಣ ನಮ್ಮ ಸಮಾಜದಲ್ಲಿ ಹೊಸದನ್ನು ಸ್ವಾಗತಿಸುವ ಗುಣದಿಂದ. ಪ್ರತಿಯೊಂದು ಹೊಸ ತಂತ್ರಜ್ಞಾನವನ್ನು ಕೂಡ ನಾವು ಬಹುಬೇಗ ಒಪ್ಪಿಕೊಳ್ಳುತ್ತೇವೆ. ಅದನ್ನು ಬಳಸಲು ಶುರು ಮಾಡುತ್ತೇವೆ. ಈ ಕಾರಣದಿಂದ ಭಾರತವನ್ನು ಟೆಸ್ಟಿಂಗ್ ಗ್ರೌಂಡ್ ಎಂದು ಕೂಡ ಕರೆಯಲಾಗುತ್ತದೆ. ಇವತ್ತಿನ AI ತಂತ್ರಜ್ಞಾನವನ್ನು ಕೂಡ ಅತಿ ಹೆಚ್ಚು ಬಳಸುತ್ತಿರುವವರು ಭಾರತೀಯರು ಎನ್ನುವುದನ್ನು ಮರೆಯಬಾರದು.

ರಿಲಯನ್ಸ್ ಈಗ ಗ್ರೀನ್ ಹೈಡ್ರೋಜನ್ ಕ್ಷೇತ್ರದಲ್ಲಿಯೂ ದೊಡ್ಡ ಮಟ್ಟದಲ್ಲಿ ಹೂಡಿಕೆ ಮಾಡುತ್ತಿದೆ. ಇದು ಭವಿಷ್ಯದ ಶಕ್ತಿಯ ಪ್ರಮುಖ ಮೂಲವೆಂದು ತಜ್ಞರು ಹೇಳುತ್ತಿದ್ದಾರೆ. ಗ್ರೀನ್ ಹೈಡ್ರೋಜನ್ ಉತ್ಪಾದನೆಗೆ ಸೌರ ಮತ್ತು ಗಾಳಿ ಶಕ್ತಿಯ ಬಳಕೆ ಅಗತ್ಯ. ಈ ಹಿನ್ನೆಲೆಯಲ್ಲಿ ನೋಡಿದಾಗ ರಿಲಯನ್ಸ್ ತನ್ನ ಸಂಪೂರ್ಣ ಬಿಸಿನೆಸ್ ಫಾರ್ಮ್ಯಾಟ್ ಬದಲಿಸುವ ಅಥವಾ ನವೀಕರಿಸಲು ಮುಂದಾಗಿದೆ ಎನ್ನುವುದನ್ನು ಕೂಡ ನಾವು ಕಾಣಬಹುದು. ಗಮನಿಸಿ ಈ ಕ್ಷೇತ್ರದಲ್ಲಿ ಅಮೇರಿಕಾದ ತಂತ್ರಜ್ಞಾನ ಮತ್ತು ಸಂಶೋಧನಾ ಪರಿಸರವು ಮಹತ್ವದ ಪಾತ್ರವಹಿಸುತ್ತದೆ. ಆದ್ದರಿಂದ ಅಂಬಾನಿಯವರ ಅಮೇರಿಕಾ ಹೂಡಿಕೆಗಳು ಅಮೆರಿಕಕ್ಕೆ ಮಾತ್ರ ಲಾಭವನ್ನು ನೀಡುವುದಿಲ್ಲ ಅದು ನೇರವಾಗಿ ಭಾರತದ ಭವಿಷ್ಯದ ಎನರ್ಜಿ ವಲಯದಲ್ಲಿನ ಯೋಜನೆಗಳಿಗೆ ಸಹಕಾರಿ ಕೂಡ ಆಗುತ್ತದೆ.

ಭಾರತೀಯ ಉದ್ಯಮಿಗಳು , ಜಾಗತಿಕ ಉದ್ದಿಮೆ ಕ್ಷೇತ್ರದಲ್ಲಿ ಸಾಕಷ್ಟು ಒಳ್ಳೆಯ ಹೆಸರನ್ನು ಗಳಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಕಾಣದ ಲಾಭಗಳನ್ನು ಕೂಡ ಅವರು ಪಡೆದುಕೊಳ್ಳುತ್ತಾರೆ. ಚೀನಿಯರು ಹೇಗೆ ಎಲ್ಲವನ್ನೂ ನೋಡಿ ಕಲಿತರು , ಥೇಟ್ ಹಾಗೆ ಭಾರತೀಯ ಉದ್ಯಮಿಗಳು ಕೂಡ ಮಾಡುವ ಹಂತದಲ್ಲಿದ್ದರೆ. ರಿಲಯನ್ಸ್ ಹೂಡಿಕೆ ಕೇವಲ ಲಾಭ ಮಾತ್ರವಲ್ಲ ಇದರ ಜೊತೆಗೆ ಕಲಿಕೆಯನ್ನು ಅಂದರೆ ಅಮೇರಿಕಾದಂತಹ ಅಭಿವೃದ್ಧಿ ಹೊಂದಿದ ದೇಶಗಳಿಂದ ತಂತ್ರಜ್ಞಾನ ಮತ್ತು ಅನುಭವವನ್ನು ಪಡೆದುಕೊಳ್ಳುವುದು. ಇದರ ಜೊತೆಗೆ ವ್ಯಾಪಾರವನ್ನು ಇನ್ನಷ್ಟು ವಿಸ್ತರಣೆ ಮಾಡುವುದು ಅಂದರೆ ತಂತ್ರಜ್ಞಾನದ ಸಹಾಯದಿಂದ ಅದನ್ನು ಭಾರತದಲ್ಲಿ ಕಡಿಮೆ ವೆಚ್ಚದಲ್ಲಿ ಜಾರಿಗೆ ತಂದು ದೊಡ್ಡ ಮಟ್ಟದಲ್ಲಿ ಉತ್ಪಾದನೆ ಮಾಡುವುದು.ಇವೆರೆಡರ ಸಹಾಯದಿಂದ ಜಾಗತಿಕ ಮಾರುಕಟ್ಟೆಯಲ್ಲಿ ಪ್ರಮುಖ ಸ್ಥಾನ ಪಡೆಯುವುದು. ಈಗಾಗಲೇ ಭಾರತ ಜಾಗತಿಕ ಎನರ್ಜಿ ಆಟದಲ್ಲಿ ಪ್ರಮುಖ ಆಟಗಾರನಾಗಿ ಹೊರಹೊಮ್ಮುತ್ತಿದೆ.

ಆರ್ಥಿಕ ಪರಿಣಾಮಗಳು ಮತ್ತು ಹೂಡಿಕೆ ಅವಕಾಶಗಳು

ಈ ಬದಲಾವಣೆಗಳು ಭಾರತದ ಆರ್ಥಿಕತೆಯ ಮೇಲೆ ಮಹತ್ವದ ಪರಿಣಾಮ ಬೀರುತ್ತವೆ. ಶುದ್ಧ ಶಕ್ತಿ (ಕ್ಲೀನ್ ಎನರ್ಜಿ ) ಕ್ಷೇತ್ರದಲ್ಲಿ ಹೂಡಿಕೆ ಹೆಚ್ಚಾದಂತೆ, ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ. ಸೌರ, ಬ್ಯಾಟರಿ ಮತ್ತು ಹೈಡ್ರೋಜನ್ ಕ್ಷೇತ್ರಗಳು ವೇಗವಾಗಿ ಬೆಳೆಯುತ್ತವೆ. ಇದರ ಜೊತೆಗೆ, ಸೌರ ಪ್ಯಾನೆಲ್‌ಗಳಲ್ಲಿ ಬಳಸುವ ಬೆಳ್ಳಿ (Silver) ಯ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ. ಇದರಿಂದ ಬೆಳ್ಳಿ ಮಾರುಕಟ್ಟೆಯ ಮೇಲೂ ಪರಿಣಾಮ ಬೀರುತ್ತದೆ. ಹೂಡಿಕೆದಾರರಿಗೆ ಇದು ಹೊಸ ಅವಕಾಶಗಳನ್ನು ಒದಗಿಸುತ್ತದೆ.

ಕೊನೆಮಾತು : ಪ್ರತಿಯೊಂದು ದೊಡ್ಡ ಹೂಡಿಕೆಯೂ ಒಂದಷ್ಟು ಅವಕಾಶವನ್ನು ಮತ್ತು ಒಂದಷ್ಟು ಅಪಾಯವನ್ನು ಹೊತ್ತು ತರುತ್ತದೆ. ಹೂಡಿಕೆದಾರರು ಈ ಸಮಯದಲ್ಲಿ ಅಪಾಯವನ್ನು ಕೂಡ ಗಣನೆಗೆ ತೆಗೆದುಕೊಳ್ಳಬೇಕು. ಕೇವಲ ಅಪಾಯವನ್ನು ಗಮನಿಸಿ ಅವಕಾಶವನ್ನು ಕೂಡ ಕಳೆದುಕೊಳ್ಳಬಾರದು.ಭಾರತದ ಯಶೋಗಾಥೆಯಲ್ಲಿ ನಮ್ಮ ಹೆಸರನ್ನು ಕೂಡ ಬರೆದುಕೊಳ್ಳುವುದು ಅಥವಾ ಅವಕಾಶ ಕೈಚಲ್ಲುವುದು ಎರಡರ ಆಯ್ಕೆ ನಮ್ಮ ಕೈಲಿದೆ. ಮುಂದಿನ ಒಂದು ದಶಕ ಎನರ್ಜಿ ವಲಯದಲ್ಲಿ ಹೂಡಿಕೆಗೆ ಉತ್ತಮ ಅವಕಾಶಗಳು ಇರುತ್ತವೆ ಎನ್ನುವುದು ಮಾತ್ರ ನಿಚ್ಚಳವಾಗಿ ಕಾಣಿಸುತ್ತಿದೆ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com