Death folder: ಅನಿವಾಸಿ ಭಾರತೀಯರು ಗಮನ ಹರಿಸಬೇಕಾದ ಅಂಶಗಳಿವು... (ಹಣಕ್ಲಾಸು)

ಡೆತ್ ಫೋಲ್ಡರ್ ತಯಾರಿಸುವಾಗ ಅನಿವಾಸಿ ಭಾರತೀಯರು ಗಮನ ಹರಿಸಬೇಕಾದ ಅಂಶಗಳ ಬಗ್ಗೆ ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ
documents (image used for representational purpose only)
ದಾಖಲೆಗಳು (ಸಾಂಕೇತಿಕ ಚಿತ್ರ)online desk
Updated on

ನಾವು ಕಷ್ಟ ಪಟ್ಟು ಸಂಪಾದಿಸಿದ ಹಣವಿರುಬಹುದು ಅಥವಾ ಆಸ್ತಿ, ಅವುಗಳ ಬಗ್ಗೆ ಸರಿಯಾಗಿ ಮಾಹಿತಿಯನ್ನು ಡಿಜಿಟಲ್ ರೂಪದಲ್ಲಿ ಇಡುವುದಕ್ಕೆ ಹಾಗೂ ಮುಂದಿನ ವಾರಸುದಾರರ ಬದುಕು ಸರಾಗಗೊಳ್ಳುವುದಕ್ಕಾಗಿ ಡೆತ್ ಫೋಲ್ಡರ್ ತಯಾರಿಸುವುದು ಎಷ್ಟು ಮುಖ್ಯ ಎಂಬುದನ್ನು ಈ ಹಣಕ್ಲಾಸು ಅಂಕಣದ ಈ ಹಿಂದಿನ ಡೆತ್ ಫೋಲ್ಡರ್ ಅಂದರೇನು? ಅದನ್ನು ಏಕೆ ತಯಾರಿಸಬೇಕು? ಎಂಬ ಸಂಚಿಕೆಯಲ್ಲಿ ಓದಿದ್ದೀರಿ. ಡೆತ್ ಫೋಲ್ಡರ್ ತಯಾರಿಸುವಾಗ ಅನಿವಾಸಿ ಭಾರತೀಯರು ಗಮನ ಹರಿಸಬೇಕಾದ ಅಂಶಗಳ ಬಗ್ಗೆ ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ

ನಾವು ಹುಟ್ಟಿದ ನೆಲದಲ್ಲಿ , ನಮ್ಮೂರಿನಲ್ಲಿ ಯಶಸ್ಸು ಸಿಕ್ಕರೆ ಅದಕ್ಕಿಂತ ದೊಡ್ಡ ವಿಷಯ ಬೇರಿಲ್ಲ. ಆದರೆ ಎಲ್ಲರಿಗೂ ತಮ್ಮ ನೆಲದಲ್ಲಿ ಬಯಸಿದ ಯಶಸ್ಸು ಸಿಕ್ಕುವುದಿಲ್ಲ. ಇಂತಹ ಸಮಯದಲ್ಲಿ ವಲಸೆ ಹೋಗುವುದು ಅನಿವಾರ್ಯ. ವಲಸೆ ಹೋಗುವಾಗ ನಮ್ಮ ಮಾರ್ಕ್ಸ್ ಕಾರ್ಡ್ ಇತ್ಯಾದಿ ಸರ್ಟಿಫಿಕೇಟ್ ಗಳನ್ನು ಮಿನಿಸ್ಟ್ರಿ ಆಫ್ ಎಕ್ಸ್ಟರ್ನಲ್ ಅಫ್ಫೇರ್ಸ್ ವತಿಯಿಂದ ಅಪೋಸ್ಟಿಲ್ ಮಾಡಿಸುವುದು ಕಡ್ಡಾಯವಾಗಿರುತ್ತದೆ. ಇದರ ಜೊತೆಗೆ ಇಂಗ್ಲಿಷ್ ಭಾಷೆ ಮಾತಾಡದ ದೇಶಗಳಿಗೆ ಎಲ್ಲಾ ಸರ್ಟಿಫಿಕೇಟ್ ಇತ್ಯಾದಿ ದಾಖಲಾತಿ ಪತ್ರಗಳನ್ನು ಅನುವಾದ ಮಾಡಿಸುವುದು ಕೂಡ ಕಡ್ಡಾಯವಾಗಿರುತ್ತದೆ. ಆಯಾ ದೇಶದ ರಾಯಭಾರ ಕಚೇರಿಯಿಂದ ಅಧಿಕೃತವಾಗಿ ಒಪ್ಪಿಗೆಯನ್ನು ಪಡೆಯಲ್ಪಟ್ಟ ಅನುವಾದಕರಿಂದ ಇದನ್ನು ಅನುವಾದಿಸಬೇಕಾಗುತ್ತದೆ. ಹೀಗೆ ಅನುವಾದಿಸಲ್ಪಟ್ಟ ಡಾಕ್ಯುಮೆಂಟ್ಸ್ ಕೂಡ ಅಪೋಸ್ಟಿಲ್ ಆಗಬೇಕು ಇದು ಕಡ್ಡಾಯ. ಹೀಗೆ ಅಲ್ಲಿಗೆ ಹೋಗುವಾಗ ಒಂದಷ್ಟು ನಿಯಮಗಳು ಲಾಗೂ ಆಗುತ್ತದೆ. ಅಲ್ಲಿಗೆ ಹೋದ ಮೇಲೆ ಭಾರತದಲ್ಲಿನ ಕೆಲಸಗಳು ಸುಲಭವಾಗಿ ಆಗುವುದಿಲ್ಲ. ಹೀಗಾಗಿ ಅವುಗಳ ಬಗ್ಗೆ ಕೂಡ ಗಮನಿವಿರಬೇಕು. ಇಲ್ಲಿನ ಸಾಮಾನ್ಯ ಬ್ಯಾಂಕ್ ಖಾತೆಯನ್ನು NRO ಖಾತೆಯನ್ನಾಗಿ ಬದಲಿಸಬೇಕು. ಈ ಖಾತೆಯಲ್ಲಿ ಭಾರತೀಯ ರೂಪಾಯಿ ಡೆಪಾಸಿಟ್ ಮಾಡಬಹುದು ಮತ್ತು ತೆಗೆಯಬಹುದು.

ಭಾರತದಲ್ಲಿ ಸಿದ್ಧವಿಟ್ಟಿರಬೇಕಾದ ಕಾಗದ ಪತ್ರಗಳು

ಇಲ್ಲಿನ ಪ್ರಜೆಗಳು ಸಿದ್ದ ಪಡಿಸಬೇಕಾದ ಎಲ್ಲಾ ಮಾಹಿತಿಯನ್ನು ಇವರು ಕೂಡ ಇಟ್ಟಿರಬೇಕಾಗುತ್ತದೆ. ಅನಿವಾಸಿ ಎಂದ ತಕ್ಷಣ ಆತ ವಿದೇಶಿ ಪ್ರಜೆಯಾಗುವುದಿಲ್ಲ. ಆದರೆ ಬಹಳಷ್ಟು ಜನ ಅನಿವಾಸಿಗಳು ಬೇರೆ ದೇಶದ ಪೌರತ್ವವನ್ನು ಪಡೆದುಕೊಳ್ಳುತ್ತಾರೆ. ಬಹುತೇಕ ದೇಶಗಳಲ್ಲಿ , ಅದರಲ್ಲೂ ಯೂರೋಪಿಯನ್ ದೇಶಗಳಲ್ಲಿ ಬರ್ತ್ ಸರ್ಟಿಫಿಕೇಟ್ ಪೌರತ್ವವನ್ನು ನೀಡುವ ಸಮಯದಲ್ಲಿ ಪಡೆದುಕೊಂಡು ಬಿಡುತ್ತಾರೆ. ಹೀಗಾಗಿ ಒರಿಜಿನಲ್ ಇರುವುದಿಲ್ಲ. ಇದನ್ನು ಮುಂಜಾಗ್ರತೆಯಿಂದ ಅರಿತುಕೊಂಡು ಅದರ ಒಂದು ಕಾಪಿಯನ್ನು ನೋಟರಿ ಮಾಡಿಸಿ ಇಡುವುದು ಒಳ್ಳೆಯದು. ವಿದೇಶದಲ್ಲಿ ನೋಟರಿ ಎಂದರೆ ಅದಕ್ಕೆ ತುಂಬಾ ಬೆಲೆಯಿದೆ. ಅದನ್ನು ಒರಿಜಿನಲ್ ಕಾಪಿ ಎನ್ನುವ ಮಟ್ಟಕ್ಕೆ ನೋಡಲಾಗುತ್ತದೆ. ಹೀಗಾಗಿ ನೋಟರಿ ಮಾಡಿಸಿತ್ತುಕೊಳ್ಳುವುದು ಉತ್ತಮ . ಇದರ ಜೊತೆಗೆ ಗಂಡ ಅಥವಾ ಹೆಂಡತಿ ಇನ್ನೊಬ್ಬರ ಜೊತೆಯಲ್ಲಿ ವೀಸಾಗೆ ಅಪ್ಪ್ಲೈ ಮಾಡುವಾಗ ಮದುವೆ ಸರ್ಟಿಫಿಕೇಟ್ ಬೇಕಾಗುತ್ತದೆ. ಹಲವಾರು ಕಡೆ ಇದನ್ನು ಕೇಳುತ್ತಾರೆ. ಹೀಗಾಗಿ ಮದುವೆಯ ಸಮಯದಲ್ಲಿ ಒಂದೆರೆಡು ಹೆಚ್ಚುವರಿ ಕಾಪಿ ತೆಗೆದಿಟ್ಟುಕೊಳ್ಳುವುದು ಉತ್ತಮ.

ವೈಯಕ್ತಿಕ ದಾಖಲೆಗಳು

ವ್ಯಕ್ತಿಯ ಗುರುತು, ನಾಗರಿಕತೆ ಮತ್ತು ಕಾನೂನಿನ ಪ್ರಕಾರ ಅಸ್ತಿತ್ವವನ್ನು ಸಾಬೀತುಪಡಿಸುವ ದಾಖಲೆಗಳು.

  1. ಪ್ರತಿ ದೇಶವೂ ವಿಭಿನ್ನ ದಾಖಲೆಗಳನ್ನು ಬೇಡುತ್ತದೆ. ಭಾರತೀಯ ವ್ಯಕ್ತಿ ವಿದೇಶ ಪೌರತ್ವ ಪಡೆದುಕೊಳ್ಳುವಾಗ ಹೆಸರು ಬದಲಾವಣೆ ಆಗುವ ಸಾಧ್ಯತೆ ಬಹಳ ಹೆಚ್ಚು. ಹೀಗಾಗಿ ಹಳೆಯ ಹೆಸರು ಮತ್ತು ಹೊಸ ಹೆಸರು ಎರಡನ್ನೂ ಬೆಸೆಯುವ ಕೊಂಡಿಯನ್ನು ಸದಾ ಕಾಪ್ದಿಟ್ಟುಕೊಳ್ಳಬೇಕು.

  2. ರಾಯಭಾರಿ ಕಚೇರಿ, ಬ್ಯಾಂಕ್, ಕೋರ್ಟು ಮೂಲ ದಾಖಲೆ ಕೇಳುತ್ತದೆ. ಹೀಗಾಗಿ ಭಾರತೀಯ ಮೂಲದ ಡಾಕ್ಯುಮೆಂಟ್ಸ್ ಉಳಿಸಿಕೊಳ್ಳಬೇಕು. ಉದಾಹರಣೆಗೆ ಭಾರತದ ಆಧಾರ್ ಕಾರ್ಡ್ ಹೊಂದುವುದು , ಅನಿವಾಸಿಯರಿಗೂ ಕಡ್ಡಾಯ. ಇದಿಲ್ಲದೆ ಬೇರಾವ ಕೆಲಸವೂ ಆಗುವುದಿಲ್ಲ.

  3. ಮೂಲ ದಾಖಲೆಗಳು , ನೋಟರೈಸ್ ಪ್ರತಿಗಳ ಜೊತೆಗೆ ಡಿಜಿಟಲ್ ಸ್ಕ್ಯಾನ್ ಕಾಪಿ ಇಟ್ಟು ಕೊಳ್ಳುವುದು ಕೂಡ ಒಳ್ಳೆಯದು.

ಹಣಕಾಸು ದಾಖಲೆಗಳು

ಈ ದಾಖಲೆಗಳು ಅಪಾಯದ ಸಮಯದಲ್ಲಿ ಹಣ ಲಭ್ಯವಾಗುವಂತೆ ಮಾಡುತ್ತದೆ.ಹೀಗಾಗಿ ಇದರ ಬಗ್ಗೆ ಗಮನವಿರಲಿ

  • ಮರಣದ ನಂತರ ಖಾತೆಗಳು ಫ್ರೀಜ್ ಆಗುತ್ತವೆ. ಹೀಗಾಗಿ ಭಾರತೀಯ ಖಾತೆಗಳ ವಿವರವಿರಲಿ

  • ವಿದೇಶಿ ಖಾತೆಗಳ ಬಗ್ಗೆ ಕುಟುಂಬಕ್ಕೆ ತಿಳಿದಿರದು ಒಳ್ಳೆಯದು.

  • ಪಿನ್ , ಬ್ಯಾಂಕ್ ಲಾಕರ್ ಇತ್ಯಾದಿಗಳ ಬಗ್ಗೆ ಕೂಡ ವಿವರಗಳಿರಲಿ.

ಹೂಡಿಕೆಗಳು ಮತ್ತು ಆಸ್ತಿಗಳು

ಇಲ್ಲಿ ನಾವು ಎರಡು ರೀತಿಯ ಅಪಾಯವನ್ನು ಎದುರಿಸುತ್ತೇವೆ. ವಿದೇಶದಲ್ಲಿರುವ ಅನಿವಾಸಿ ಸರಿಯಾದ ಮಾಹಿತಿ ಬಿಟ್ಟು ಹೋಗದೆ ಇದ್ದಾಗ

  • ವಿದೇಶದಲ್ಲಿನ ಖಾತೆಯಲ್ಲಿನ ಹಣ , ಅಲ್ಲಿನ ಮ್ಯೂಚುಯಲ್ ಫಂಡ್ , ಸ್ಟಾಕ್ ಮಾರ್ಕೆಟ್ ಹಣವನ್ನು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು

  • ಭಾರತದಲ್ಲಿ ಕೂಡ ಮರೆತ ಮ್ಯೂಚುಯಲ್ ಫಂಡ್‌ಗಳು, ಸ್ಟಾಕ್ ಮೇಲಿನ ಹೂಡಿಕೆ ನಷ್ಟ ಉಂಟು ಮಾಡುತ್ತದೆ.

  • ವಿದೇಶಿ ಪಿಂಚಣಿ ಖಾತೆಗಳು ವಿವರವಿಲ್ಲದೆ ಹೋದರೆ ಪಿಂಚಣಿ ಪಡೆಯಲು ಆಗುವುದಿಲ್ಲ .

  • ಕ್ರಿಪ್ಟೋ ಆಸ್ತಿಗಳು ಕೀಲಿಯಿಲ್ಲದೆ ಶಾಶ್ವತವಾಗಿ ನಷ್ಟವಾಗುವ ಸಂಭಾವ್ಯತೆ ಇರುತ್ತದೆ.

documents (image used for representational purpose only)
ಡೆತ್ ಫೋಲ್ಡರ್ ಅಂದರೇನು? ಅದನ್ನು ಏಕೆ ತಯಾರಿಸಬೇಕು? (ಹಣಕ್ಲಾಸು)

ಸಾಲಗಳು ಮತ್ತು ಬಾಧ್ಯತೆಗಳು

ಸಾಲ ಮರಣದೊಂದಿಗೆ ಮುಗಿಯುವುದಿಲ್ಲ.ಅದು ಆ ನಂತರವೂ ಹಿಂಬಾಲಿಸುತ್ತದೆ. ಹೀಗಾಗಿ ಸಾಲದ ಲೆಕ್ಕಾಚಾರ, ಉಳಿದಿರುವ ಭಾದ್ಯತೆಗಳ ಲೆಕ್ಕ ಎಲ್ಲವನ್ನೂ ಒಂದೆಡೆ ಬರೆದಿಡುವುದು ಒಳ್ಳೆಯದು.

ವಿಮೆ

ಮರಣದ ನಂತರದ ಮೊದಲ ಹಣಕಾಸಿನ ಸಹಾಯ ಒದಗಿಬರುವುದು ವಿಮೆಯ ಮೂಲಕ. ಹೀಗಾಗಿ ಇವುಗಳನ್ನು ಉಲ್ಲೇಖಿಸುವುದು ಮುಖ್ಯ

  • ವಿದೇಶಿ ಕ್ಲೇಮ್ ಪ್ರಕ್ರಿಯೆ

  • ನಾಮಿನಿ vs ವಾರಸುದಾರ ಗೊಂದಲ ಪರಿಹರಿಸುವುದು

  • ರಾಯಭಾರಿ ದೃಢೀಕರಣ ಅಗತ್ಯ.

ಇದರ ಜೊತೆಗೆ ಕ್ಲೇಮ್ ಮಾಡುವ ಹಂತಗಳನ್ನು ಬರೆದಿಡುವುದು ಕೂಡ ಅವಶ್ಯಕ .

ಕಾನೂನು ದಾಖಲೆಗಳು

ಇದು ಉತ್ತರಾಧಿಕಾರದ ಮೂಲಸ್ತಂಭ.ಏಕೆಂದರೆ ,

  • ಒಂದೇ ವಿಲ್ ಎಲ್ಲ ದೇಶಕ್ಕೂ ಅನ್ವಯಿಸುವುದಿಲ್ಲ

  • ಪ್ರೊಬೇಟ್ ನಿಯಮಗಳು ವಿಭಿನ್ನ

  • ಆಸ್ತಿ ವರ್ಷಗಳ ಕಾಲ ಕುಟುಂಬದವರಿಗೆ ಸಿಗದೇ ಹೋಗಬಹುದು.

ಹೀಗಾಗಿ ಭಾರತ ಮತ್ತು ವಿದೇಶಕ್ಕೆ ಪ್ರತ್ಯೇಕ ವಿಲ್ ಮಾಡುವುದು ಉತ್ತಮ.

ತೆರಿಗೆ (ಭಾರತ + ವಿದೇಶ)

ಮರಣದ ನಂತರವೂ ತೆರಿಗೆ ವಿಷಯಗಳು ಬಾಕಿ ಇರುತ್ತವೆ.ಹೀಗಾಗಿ ಇವುಗಳನ್ನು ಸರಿಯಾಗಿ ಇಡದೆ ಹೋದರೆ

  • ಪೆಂಡಿಂಗ್ ರಿಟರ್ನ್ ಆಸ್ತಿ ವರ್ಗಾವಣೆಗೆ ಅಡ್ಡಿಯಾಗುತ್ತದೆ.

  • DTAA ತಪ್ಪಿದರೆ ಡಬಲ್ ತೆರಿಗೆ ಕಟ್ಟಬೇಕಾಗುತ್ತದೆ

  • ನಿವಾಸ ಸ್ಥಿತಿ ವಾರಸುದಾರ ತೆರಿಗೆಯನ್ನು ನಿಗದಿ ಮಾಡುತ್ತದೆ.

ಹೀಗಾಗಿ ಇವುಗಳ ಬಗ್ಗೆ ನಿಖರ ಮಾಹಿತಿ ಇಡುವುದು ಅನುಕೂಲಕರ.

ವೈದ್ಯಕೀಯ ಮತ್ತು ಆರೋಗ್ಯ

ಅಂತಿಮ ಹಂತದಲ್ಲಿ ಗೌರವ ಸಿಗುವುದಕ್ಕೆ ಸ್ಪಷ್ಟತೆ ಇರಬೇಕಾಗುತ್ತದೆ. ಹೀಗಾಗಿ ವೈದ್ಯಕೀಯ ವಿವರಣೆಗಳನ್ನು ಹೊಂದಿರುವ ಫೋಲ್ಡರ್ ಮೇಲಿನ ಅಧ್ಯಾಯದಲ್ಲಿ ಹೇಳಿದಂತೆ ತಯಾರಿಸುವುದು ಒಳ್ಳೆಯದು.

ಉದ್ಯೋಗ ಮತ್ತು ನಿವೃತ್ತಿ , ಎನ್ನುವುದು ಬಹುಮಂದಿ ಮರೆತಿರುವ ವಿಭಾಗ. ಇದನ್ನು ಸರಿಯಾಗಿ ಇಡುವುದರಿಂದ ಕೆಳಗಿನವುಗಳನ್ನು ಸುಲಭವಾಗಿ ಪಡೆದುಕೊಳ್ಳಬಹುದು

  • ವಿದೇಶಿ ಪಿಂಚಣಿ

  • ಉದ್ಯೋಗದಾತರಿಂದ ಡೆತ್ ಬೆನೆಫಿಟ್ಸ್

  • ಗ್ರ್ಯಾಚ್ಯುಟಿ / ಅನ್ಯುಯಿಟಿ

ಇದೆ ರೀತಿ , ಡಿಜಿಟಲ್ ಡಾಕ್ಯುಮೆಂಟ್ಸ್ , ಇನ್ನಿತರೇ ಡಾಕ್ಯುಮೆಂಟ್ಸ್ ವಿಷಯದಲ್ಲಿ ಕೂಡ ಪ್ರತ್ಯೇಕ ಫೋಲ್ಡೆರ್ಗಳನ್ನು ಆಯಾ ಅಧ್ಯಾಯದಲ್ಲಿ ಹೇಳಿದಂತೆ ಸೃಷ್ಟಿಸುವುದು ಎಲ್ಲಾ ಅನಿವಾಸಿಯಾರು ಕೂಡ ಮಾಡಬೇಕಾದ ಅವಶ್ಯಕ ಕೆಲಸ.

ಎಲ್ಲಿ ಕ್ರೀಮಷನ್ ಮಾಡಬೇಕು ಎನ್ನುವ ನಿರ್ಧಾರ

ಅನಿವಾಸಿ ಭಾರತೀಯ ತಾನು ನೆಲೆಸಿರುವ ದೇಶದಲ್ಲಿ ಮರಣ ಹೊಂದಿದರೆ ಆಗ ಕುಟುಂಬದ ಮುಂದೆ ಬಂದು ನಿಲ್ಲುವ ದೊಡ್ಡ ಪ್ರಶ್ನೆ ಎಲ್ಲಿ ಕ್ರಿಮೇಶನ್ ಮಾಡಬೇಕು ಎನ್ನುವುದು. ಹೀಗಾಗಿ ಡೆತ್ ಫೋಲ್ಡರ್ ತಯಾರಿಸಿ ಇಡುವುದು ಬಹಳ ಮುಖ್ಯವಾಗುತ್ತದೆ. ಸತ್ತ ನಂತರ ದೇಹವನ್ನು ಮರಳಿ ಭಾರತಕ್ಕೆ ತೆಗೆದುಕೊಂಡು ಹೋಗಬೇಕು ಅಲ್ಲೇ ಕೊನೆಯ ಕಾರ್ಯಗಳನ್ನು ಮುಗಿಸಬೇಕು ಎನ್ನುವ ಹಂಬಲ ಕೆಲವರಿಗೆ ಇರುತ್ತದೆ. ಹೀಗಾಗಿ ಇಂತಹ ವಿಚಾರವನ್ನು ಸ್ಪಷ್ಟವಾಗಿ ಬರೆದಿಡುವುದು ಬಹಳ ಉತ್ತಮ. ಇನ್ನೂ ಕೆಲವರು ಇದರಲ್ಲಿ ಎದುರಾಗುವ ಕಾನೂನು ಅನುಮತಿಗಳನ್ನು ನೆನೆದು , ಎಲ್ಲಾ ಕಾರ್ಯಗಳನ್ನು ಇದ್ದ ಜಾಗದಲ್ಲಿ ಮುಗಿಸಿ ಅಸ್ಥಿಯನ್ನು ಭಾರತದಲ್ಲಿ ವಿಸರ್ಜನೆ ಮಾಡುವಂತೆ ಹೇಳುತ್ತಾರೆ.

ಇವತ್ತಿನ ದಿನದಲ್ಲಿ ವಿದೇಶದಲ್ಲಿ ಬೇರೆ ರೀತಿಯ ವಿಚಾರಗಳು ಕೂಡ ಬೆಳಕಿಗೆ ಬರುತ್ತಿವೆ. ಕೆಲವರು ತಮ್ಮ ದೇಹವನ್ನು ಡಿ ಕಂಪೋಸ್ ಮಾಡಿ ನಂತರ ಅದನ್ನು ಗಿಡಗಳಿಗೆ ಗೊಬ್ಬರವನ್ನಾಗಿ ಹಾಕುವಂತೆ ಹೇಳುತ್ತಾರೆ. ದೇಹ ದಾನ , ಅಂಗಾಂಗ ದಾನ ಎನ್ನುವುದು ಕೂಡ ಇದ್ದೇ ಇದೆ. ಹೀಗಾಗಿ ಸತ್ತ ನಂತರದ ಕ್ರಿಯೆಗಳು ಹೇಗೆ ನಡೆಯಬೇಕು ಎನ್ನುವ ಪರಿಕಲ್ಪನೆಯನ್ನು ಬರೆದಿಟ್ಟು ಹೋಗುವುದು ಎಲ್ಲಾ ರೀತಿಯಲ್ಲೂ ಒಳ್ಳೆಯದು. ಇದು ಕುಟುಂಬದವರು ನೋವಿನಲ್ಲಿ ಬೇಗ ತೆಗೆದುಕೊಳ್ಳಬೇಕಾದ ನಿರ್ಧಾರಕ್ಕೆ ಕಟ್ಟು ಬೀಳುವುದು ತಪ್ಪಿಸುತ್ತದೆ. ನಿರ್ಧಾರ ಯಾವುದೇ ಇರಲಿ. ಅದು ಲಿಖಿತ ರೂಪದಲ್ಲಿರಲಿ.

ಮರಣದ ಸಮಯದಲ್ಲಿ ಕ್ರಾಸ್ ಬಾರ್ಡರ್ ಅನುಮತಿ ಪತ್ರಗಳು

ಮರಣವಾದ ತಕ್ಷಣ ಮಾಡಬೇಕಾದದ್ದು ತಾತ್ಕಾಲಿಕ ಮರಣ ಪತ್ರವನ್ನು ಪಡೆದುಕೊಳ್ಳುವುದು. ಇದನ್ನು ಆಸ್ಪತ್ರೆಯವರೇ ನೀಡುತ್ತಾರೆ. ಸಾವಿನ ಕಾರಣ ಇತ್ಯಾದಿಗಳನ್ನು ಬರೆದು ಕೊಡುತ್ತಾರೆ. ಇದಿಲ್ಲದೆ ಎಲ್ಲಿಯೂ ಕ್ರಿಮೇಶನ್ ಸಾಧ್ಯವಾಗುವುದಿಲ್ಲ. ಆ ನಂತರ ಡೆತ್ ಸರ್ಟಿಫಿಕೇಟ್ ಪಡೆದುಕೊಳ್ಳಬೇಕು. ಅನಿವಾಸಿ ಭಾರತೀಯರು ದೇಹವನ್ನು ಭಾರತಕ್ಕೆ ತರಲು ಇಚ್ಛಿಸಿದಲ್ಲಿ ಅನೇಕ ನಿಯಮಾವಳಿಗಳನ್ನು ಪಾಲಿಸಬೇಕಾಗುತ್ತದೆ. ಅವುಗಳನ್ನು ನೋಡೋಣ ;

ಮರಣ ಪ್ರಮಾಣಪತ್ರ (Death Certificate)

  • ಮರಣ ಸಂಭವಿಸಿದ ದೇಶದ ಆಸ್ಪತ್ರೆ ಅಥವಾ ಸರ್ಕಾರಿ ಅಧಿಕಾರಿಗಳಿಂದ ಪಡೆಯಬೇಕು

  • ಮರಣದ ಕಾರಣ ಸ್ಪಷ್ಟವಾಗಿ ಉಲ್ಲೇಖವಾಗಿರಬೇಕು

  • ಅಸಹಜ / ಅಪಘಾತ ಮರಣವಾದಲ್ಲಿ ಪೋಸ್ಟ್‌ಮಾರ್ಟಮ್ ವರದಿ ಅಗತ್ಯ

ಪೊಲೀಸ್ ಅನುಮತಿ (Police Clearance)

  • ಹೆಚ್ಚಿನ ದೇಶಗಳಲ್ಲಿ ಕಡ್ಡಾಯ

  • ಯಾವುದೇ ಕಾನೂನು ಅಡಚಣೆ ಇಲ್ಲ ಎಂಬುದನ್ನು ದೃಢೀಕರಿಸುತ್ತದೆ

  • ಅಪಘಾತ, ಆತ್ಮಹತ್ಯೆ, ಅನುಮಾನಾಸ್ಪದ ಮರಣಗಳಲ್ಲಿ ಹೆಚ್ಚಿನ ಸಮಯ ಹಿಡಿಯುತ್ತದೆ.

ಎಂಬಾಲ್ಮಿಂಗ್ ಮತ್ತು ಶವಪೆಟ್ಟಿಗೆ ನಿಯಮಗಳು

  • ವಿದೇಶದಿಂದ ಸಾಗಣೆಗಾಗಿ ಕಡ್ಡಾಯ.

  • ಮೃತದೇಹಕ್ಕೆ ಎಂಬಾಲ್ಮಿಂಗ್ ಮಾಡಬೇಕು

  • ಗಾಳಿಯು ಒಳ ಹೋಗದಂತೆ ಮುಚ್ಚಿದ ಶವಪೆಟ್ಟಿಗೆ

  • ಸಾಮಾನ್ಯವಾಗಿ ಜಿಂಕ್ ಲೈನಿಂಗ್ ಇರುವ ಲೋಹದ ಪೆಟ್ಟಿಗೆ

  • ಹೊರಭಾಗದಲ್ಲಿ ಮರದ ಪೆಟ್ಟಿಗೆ ಇರಬೇಕು

ನೆನಪಿರಲಿ ಎಂಬಾಲ್ಮಿಂಗ್ ಪ್ರಮಾಣಪತ್ರ ಅಗತ್ಯವಿರುತ್ತದೆ.

documents (image used for representational purpose only)
ಮೂರನೇ ವಿಶ್ವಯುದ್ಧ ಆಗುವ ಸಾಧ್ಯತೆ ಎಷ್ಟು? (ಹಣಕ್ಲಾಸು)

ಕಾನ್ಸುಲರ್ ಮೋರ್ಟ್ಯುವರಿ ಪ್ರಮಾಣಪತ್ರ (CMC)

  • ಮೃತರ ಮೂಲ ದೇಶದ ರಾಯಭಾರಿ ಕಚೇರಿ / ಕಾನ್ಸುಲೇಟ್ ನೀಡುತ್ತದೆ

  • ಮೃತರ ಗುರುತು ಮತ್ತು ನಾಗರಿಕತೆ ಪರಿಶೀಲನೆ ಮಾಡಲಾಗುತ್ತದೆ

  • ಈ ಪ್ರಮಾಣಪತ್ರವಿಲ್ಲದೆ ವಿಮಾನ ಸಂಸ್ಥೆಗಳು ಮೃತದೇಹವನ್ನು ಸ್ವೀಕರಿಸುವುದಿಲ್ಲ

ನೋ ಅಬ್ಜೆಕ್ಷನ್ ಸರ್ಟಿಫಿಕೇಟ್ (NOC)

  • ರಾಯಭಾರಿ ಕಚೇರಿ ಅಥವಾ ಆರೋಗ್ಯ ಇಲಾಖೆ ನೀಡುತ್ತದೆ

  • ಮೃತದೇಹ ಸಾಗಣೆಗೆ ಯಾವುದೇ ವಿರೋಧ ಇಲ್ಲ ಎಂಬ ದೃಢೀಕರಣ

ವಿಮಾನ ಮತ್ತು ಕಾರ್ಗೋ ನಿಯಮಗಳು

  • ಮೃತದೇಹವನ್ನು ವಿಶೇಷ ಕಾರ್ಗೋ ಆಗಿ ಸಾಗಿಸಲಾಗುತ್ತದೆ

  • ಎಲ್ಲಾ ದಾಖಲೆಗಳನ್ನು ಮುಂಚಿತವಾಗಿ ಸಲ್ಲಿಸಬೇಕು

  • ಸಾಮಾನ್ಯವಾಗಿ 24–72 ಗಂಟೆಗಳ ಮುಂಚಿತ ಬುಕ್ಕಿಂಗ್ ಅಗತ್ಯ

 ಸಾಮಾನ್ಯ ಸಮಯಾವಧಿ

 3 ರಿಂದ 7 ದಿನಗಳು . ಮರಣದ ಕಾರಣ, ದೇಶದ ನಿಯಮಗಳು, ವಿಮಾನ ಲಭ್ಯತೆ ಅವಲಂಬಿಸಿ , ಸಮಯದಲ್ಲಿ ಹೆಚ್ಚು ಅಥವಾ ಕಡಿಮೆ ಆಗುತ್ತದೆ. ಯಾವ ದೇಶ ಎನ್ನುವುದರ ಮೇಲೆ 5 ಸಾವಿರದಿಂದ 20 ಸಾವಿರ ಡಾಲರ್ ಅಂದರೆ ಐದು ಲಕ್ಷ ರೂಪಾಯಿಯಿಂದ 20 ಲಕ್ಷ ರೂಪಾಯಿ ತನಕ ಖರ್ಚಾಗುತ್ತದೆ.

ವಿಶೇಷ ಸಂದರ್ಭಗಳು

  • ಸಂಕ್ರಾಮಕ ರೋಗದ ಸಮಯದಲ್ಲಿ  ಹೆಚ್ಚುವರಿ ಆರೋಗ್ಯ ಅನುಮತಿಗಳು ಬೇಕಾಗುತ್ತದೆ.

  • ಅಪಾಯ ಪ್ರದೇಶಗಳು ಅಂದರೆ ಯುದ್ಧ ಪ್ರದೇಶಗಳು ಇತ್ಯಾದಿ ,  ಸರ್ಕಾರದಿಂದ ಸರ್ಕಾರಕ್ಕೆ ಸಂಯೋಜನೆ ಮೂಲಕ ಮಾತ್ರ ಸಾಧ್ಯ.

  • ಭಸ್ಮ (Ashes) ಮಾತ್ರ ತರಿಸುವುದು ಬಹಳ ಸರಳ ಪ್ರಕ್ರಿಯೆ.

ಹಣ ಮತ್ತು ಆಸ್ತಿ ವರ್ಗಾವಣೆ ಅಂಶಗಳು

ಮರಣಾನಂತರ ಮೃತ ವ್ಯಕ್ತಿಯ ಹಣ ಮತ್ತು ಆಸ್ತಿ ವರ್ಗಾವಣೆ ಪ್ರಕ್ರಿಯೆ ಸುಲಭವಾಗಿ ಆಗಬೇಕು ಎಂದರೆ ಆಗ ವಿಲ್ ಬಹಳ ಅಗತ್ಯವಾಗುತ್ತದೆ. ಇದರ ಜೊತೆಗೆ ಇವುಗಳು FEMA  ಅಂದರೆ ಫಾರಿನ್ ಎಕ್ಸ್ಚೇಂಜ್ ಮ್ಯಾನೇಜ್ಮೆಂಟ್ ಆಕ್ಟ್ ಅಡಿಯಲ್ಲಿ ಬರುತ್ತದೆ. ಆ ಪ್ರಕಾರ ಇದನ್ನು ನಿರ್ವಹಿಸಬೇಕಾಗುತ್ತದೆ. ಸೆಟಲ್ಮೆಂಟ್ ಡೀಡ್ , ಆರ್ ಬಿ ಐ ಅನುಮತಿ ಹೀಗೆ ಹತ್ತಾರು ಅಂಶಗಳನ್ನು ಇದು ಒಳಗೊಂಡಿದೆ. ಹೀಗಾಗಿ ಈ ವಿಚಾರದಲ್ಲಿ ವೃತ್ತಿಪರರ ಸಹಾಯ ಪಡೆಯುವುದು ಒಳ್ಳೆಯದು.

ನೆನಪಿರಲಿ :ಈ ಸಂದರ್ಭದಲ್ಲಿ ಸರ್ಕಾರ ಮತ್ತು ರಾಯಭಾರಿ ಕಚೇರಿಗಳು ಕುಟುಂಬಕ್ಕೆ ಸಂಪೂರ್ಣ ಸಹಾಯ ಒದಗಿಸುತ್ತವೆ.ಆದರೂ ವೈಯಕ್ತಿಕ ನಿಖರತೆ ಅತಿ ಮುಖ್ಯ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com