India-Nepal ಸಂಬಂಧ ಬಲವರ್ಧನೆಗೆ ಮಹತ್ವದ ಹೆಜ್ಜೆ; ಪ್ರಧಾನಿ ಮೋದಿ ಜೊತೆ ಬಾಲೆನ್ ಶಾ ದ್ವಿಪಕ್ಷೀಯ ಮಾತುಕತೆ; ಪ್ರವಾಹ ಪರಿಹಾರ ಪ್ಯಾಕೇಜ್, ರೈಲು ಸಂಪರ್ಕ ವಿಸ್ತರಣೆಗೆ ಒತ್ತು..!

ಪರಸ್ಪರ ಹಿತಾಸಕ್ತಿಯ ಪ್ರಮುಖ ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ವಿಚಾರಗಳ ಬಗ್ಗೆಯೂ ಉಭಯ ನಾಯಕರು ಚರ್ಚಿಸುತ್ತಿದ್ದಾರೆ. ವ್ಯಾಪಾರ, ಜಲವಿದ್ಯುತ್, ಗಡಿಯಾಚೆಗಿನ ಸಾರಿಗೆ ವ್ಯವಸ್ಥೆ, ರೈಲು ಮತ್ತು ವಿಮಾನ ಸಂಪರ್ಕ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಪ್ರಮುಖ ಕಾರ್ಯಸೂಚಿಯಲ್ಲಿವೆ.
Prime Minister Narendra Modi and his Nepalese counterpart, Balendra Shah, shake hands ahead of their bilateral talks at Hyderabad House, in New Delhi on Monday.
ಸೋಮವಾರ ನವದೆಹಲಿಯ ಹೈದರಾಬಾದ್ ಹೌಸ್‌ನಲ್ಲಿ ದ್ವಿಪಕ್ಷೀಯ ಮಾತುಕತೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಮತ್ತು ನೇಪಾಳದ ಪ್ರಧಾನಿ ಬಲೇಂದ್ರ ಶಾ ಹಸ್ತಲಾಘವ ಮಾಡಿದರು.
Updated on: 

ನವದೆಹಲಿ: ಭಾರತ ಮತ್ತು ನೇಪಾಳ ನಡುವಿನ ದ್ವಿಪಕ್ಷೀಯ ಸಂಬಂಧಗಳಿಗೆ ಹೊಸ ವೇಗ ನೀಡುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ನೇಪಾಳದ ಪ್ರಧಾನಿ ಬಾಲೇಂದ್ರ (ಬಾಲೇನ್) ಶಾ ಅವರು ಸೋಮವಾರ ನವದೆಹಲಿಯ ಹೈದರಾಬಾದ್ ಹೌಸ್‌ನಲ್ಲಿ ಮಹತ್ವದ ಮಾತುಕತೆ ನಡೆಸಿದರು.

ಉಭಯ ದೇಶಗಳ ನಡುವಿನ ಆರ್ಥಿಕ ಸಂಬಂಧ ಬಲಪಡಿಸುವುದು, ಸಂಪರ್ಕ ವ್ಯವಸ್ಥೆ ವಿಸ್ತರಿಸುವುದು ಹಾಗೂ ಇಂಧನ, ಮೂಲಸೌಕರ್ಯ ಮತ್ತು ಹೂಡಿಕೆ ಕ್ಷೇತ್ರಗಳಲ್ಲಿ ಸಹಕಾರ ಹೆಚ್ಚಿಸುವುದು ಮಾತುಕತೆಯ ಪ್ರಮುಖ ವಿಷಯಗಳಾಗಿದ್ದವು.

ಪರಸ್ಪರ ಹಿತಾಸಕ್ತಿಯ ಪ್ರಮುಖ ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ವಿಚಾರಗಳ ಬಗ್ಗೆಯೂ ಉಭಯ ನಾಯಕರು ಚರ್ಚಿಸುತ್ತಿದ್ದಾರೆ. ವ್ಯಾಪಾರ, ಜಲವಿದ್ಯುತ್, ಗಡಿಯಾಚೆಗಿನ ಸಾರಿಗೆ ವ್ಯವಸ್ಥೆ, ರೈಲು ಮತ್ತು ವಿಮಾನ ಸಂಪರ್ಕ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಪ್ರಮುಖ ಕಾರ್ಯಸೂಚಿಯಲ್ಲಿವೆ.

ಶಿಕ್ಷಣ, ಆರೋಗ್ಯ, ಕೃಷಿ, ಕ್ರೀಡೆ, ವಿಪತ್ತು ನಿರ್ವಹಣೆ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಸೇರಿದಂತೆ ಹಲವು ಕ್ಷೇತ್ರಗಳಿಗೆ ಸಂಬಂಧಿಸಿದ ಒಪ್ಪಂದಗಳು ಮತ್ತು ಸಹಮತಗಳನ್ನು ಉಭಯ ದೇಶಗಳು ವಿನಿಮಯ ಮಾಡಿಕೊಳ್ಳುವ ನಿರೀಕ್ಷೆಯಿದೆ. ದೀರ್ಘಕಾಲೀನ ಸಹಕಾರಕ್ಕಾಗಿ ಆದ್ಯತೆಯ ಕ್ಷೇತ್ರಗಳನ್ನು ಗುರುತಿಸುವ ವಿಶಾಲ ಆರ್ಥಿಕ ದೃಷ್ಟಿಕೋನದ ದಾಖಲೆಯೂ ಚರ್ಚೆಯಲ್ಲಿದೆ.

ಈ ಭೇಟಿಯ ಪ್ರಮುಖ ಆಕರ್ಷಣೆಯಾಗಿ ಉತ್ತರ ಪ್ರದೇಶದ ಅಯೋಧ್ಯಾ ಕಂಟೋನ್ಮೆಂಟ್‌ನಿಂದ ನೇಪಾಳದ ಜನಕಪುರ ಧಾಮದವರೆಗೆ ಸಂಪರ್ಕ ಕಲ್ಪಿಸುವ ಹೊಸ ಪ್ರಯಾಣಿಕ ರೈಲು ಸೇವೆಯಾದ 'ಸರಯೂ-ಕಮಲಾ ಎಕ್ಸ್‌ಪ್ರೆಸ್‌'ಗೆ ವರ್ಚುವಲ್ ಮೂಲಕ ಚಾಲನೆ ನೀಡುವ ಕಾರ್ಯಕ್ರಮ ನಿರೀಕ್ಷಿಸಲಾಗಿದೆ.

ಉತ್ತರಾಖಂಡದ ಬನಬಸಾದಲ್ಲಿ ಸಮಗ್ರ ತಪಾಸಣಾ ಕೇಂದ್ರವನ್ನು ಉದ್ಘಾಟಿಸುವುದರ ಜೊತೆಗೆ, ಹೊಸ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸುವ ಸಾಧ್ಯತೆಯೂ ಇದೆ.

ಪ್ರವಾಹದ ಬಳಿಕ ನೇಪಾಳದಲ್ಲಿ ಪುನರ್‌ನಿರ್ಮಾಣ ಕಾರ್ಯಗಳಿಗೆ ಆರ್ಥಿಕ ನೆರವು ನೀಡುವುದು ಕೂಡ ಮಾತುಕತೆಯ ಪ್ರಮುಖ ಅಂಶವಾಗಿದೆ. ಕಳೆದ ಆಗಸ್ಟ್‌ನಲ್ಲಿ ಸಂಭವಿಸಿದ ಭೀಕರ ಪ್ರವಾಹದಿಂದ ನೇಪಾಳದಲ್ಲಿ ಮೂಲಸೌಕರ್ಯಗಳಿಗೆ ಭಾರಿ ಹಾನಿಯಾಗಿದ್ದು, ಹಲವು ಜೀವಗಳು ಬಲಿಯಾಗಿದ್ದವು. ಈ ಹಿನ್ನೆಲೆಯಲ್ಲಿ ಪುನರ್‌ನಿರ್ಮಾಣ ಕಾರ್ಯಗಳಿಗೆ ನೆರವಾಗಲು 2 ಶತಕೋಟಿ ಡಾಲರ್‌ವರೆಗಿನ ಅಭಿವೃದ್ಧಿ ನೆರವು ಪ್ಯಾಕೇಜ್ ನೀಡುವ ಕುರಿತು ಭಾರತ ಚರ್ಚಿಸುತ್ತಿದೆ.

Prime Minister Narendra Modi and his Nepalese counterpart, Balendra Shah, shake hands ahead of their bilateral talks at Hyderabad House, in New Delhi on Monday.
PM ಮೋದಿ-ನೇಪಾಳ ಪ್ರಧಾನಿ ಬಲೇಂದ್ರ ಶಾ ನಾಳೆ ದೆಹಲಿಯಲ್ಲಿ ಮಾತುಕತೆ; ಅಜೆಂಡಾ ಏನು?

ಜಲವಿದ್ಯುತ್ ಉತ್ಪಾದನೆ ಮತ್ತು ಗಡಿಯಾಚೆಗಿನ ಇಂಧನ ವ್ಯಾಪಾರ ಕ್ಷೇತ್ರಗಳಲ್ಲಿ ಸಹಕಾರ ವಿಸ್ತರಿಸುವ ಬಗ್ಗೆಯೂ ಉಭಯ ದೇಶಗಳು ಚಿಂತನೆ ನಡೆಸಿವೆ.

ಹೂಡಿಕೆಗೆ ಉತ್ತೇಜನ ನೀಡುವುದು ಮತ್ತು ವಾಣಿಜ್ಯ ಸಂಬಂಧಗಳನ್ನು ಬಲಪಡಿಸುವ ಉದ್ದೇಶದಿಂದ ನೇಪಾಳ-ಭಾರತ ಉದ್ಯಮ ವೇದಿಕೆಯನ್ನೂ ಆಯೋಜಿಸಲಾಗುತ್ತಿದೆ. ನೇಪಾಳದ ಹಣಕಾಸು ಸಚಿವ ಸ್ವರ್ಣಿಮ್ ವಾಗ್ಲೆ, ವಿದೇಶಾಂಗ ಸಚಿವ ಶಿಶಿರ್ ಖನಾಲ್ ಮತ್ತು ಮುಖ್ಯ ಸಲಹೆಗಾರ ಕುಮಾರ್ ಬಿಯಾಂಜಂಕರ್ ಸೇರಿದಂತೆ ಹಲವು ಗಣ್ಯರು ಪ್ರಧಾನಿ ಶಾ ಅವರ ನಿಯೋಗದಲ್ಲಿದ್ದಾರೆ. ಉದ್ಯಮಿಗಳ ನಿಯೋಗವೂ ಅವರೊಂದಿಗೆ ಭಾರತಕ್ಕೆ ಆಗಮಿಸಿದೆ.

ಸೋಮವಾರ ಬೆಳಗ್ಗೆ ಬಲೇಂದ್ರ ಶಾ ಅವರು ರಾಜ್‌ಘಾಟ್‌ಗೆ ಭೇಟಿ ನೀಡಿ ಮಹಾತ್ಮ ಗಾಂಧಿ ಅವರ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದರು. ಅಲ್ಲದೆ, ಸಂದರ್ಶಕರ ಪುಸ್ತಕದಲ್ಲಿ ತಮ್ಮ ಅಭಿಪ್ರಾಯ ದಾಖಲಿಸಿದರು. ಭಾನುವಾರ ಭಾರತಕ್ಕೆ ಆಗಮಿಸಿದ ಅವರಿಗೆ ರಾಷ್ಟ್ರಪತಿ ಭವನದಲ್ಲಿ ಸಾಂಪ್ರದಾಯಿಕ ಸ್ವಾಗತ ನೀಡಲಾಗಿತ್ತು. ಬಳಿಕ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರನ್ನು ಭೇಟಿಯಾಗಿದ್ದರು.

ಕಳೆದ ಮಾರ್ಚ್‌ನಲ್ಲಿ ನೇಪಾಳದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಬಾಲೇನ್ ಶಾ ಅವರು ಕೈಗೊಂಡಿರುವ ಮೊದಲ ಅಧಿಕೃತ ವಿದೇಶಿ ಭೇಟಿ ಇದಾಗಿದೆ.

ಉಭಯ ನೆರೆಯ ರಾಷ್ಟ್ರಗಳು ಆರ್ಥಿಕ ಮತ್ತು ಕಾರ್ಯತಂತ್ರದ ಸಹಕಾರವನ್ನು ವಿಸ್ತರಿಸಲು ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ ಈ ಭೇಟಿ ಮಹತ್ವ ಪಡೆದುಕೊಂಡಿದೆ.

ಇಂಧನ, ಮೂಲಸೌಕರ್ಯ, ವ್ಯಾಪಾರ ಮತ್ತು ಗಡಿಯಾಚೆಗಿನ ಸಂಪರ್ಕ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಭಾರತ ಮತ್ತು ನೇಪಾಳ ಸಹಕರಿಸುತ್ತಿವೆ. ನೇಪಾಳದ ಅತಿದೊಡ್ಡ ವ್ಯಾಪಾರ ಮತ್ತು ಹೂಡಿಕೆ ಪಾಲುದಾರ ರಾಷ್ಟ್ರವಾಗಿ ಭಾರತ ಮುಂದುವರಿದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X